ಶ್ರೀ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು ಎಂಬ ನೂತನ ಅಭಿದಾನದೊಂದಿಗೆ ಪೀಠಾರೋಹಣ

ಅಥಣಿ ಗಚ್ಚಿನಮಠಕ್ಕೆ ಶಿವಬಸವ ಸ್ವಾಮೀಜಿಯವರ ಪಟ್ಟಾಧಿಕಾರ


ಶ್ರೀ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು ಎಂಬ ನೂತನ ಅಭಿದಾನದೊಂದಿಗೆ ಪೀಠಾರೋಹಣ
ಅಥಣಿ ಇದು ಪುಣ್ಯತಾಣ. ಘನವೈರಾಗಿ, ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳು ನೆಲಸಿದ ಪಾವನ ತಾಣ. ಶಿವಯೋಗ ಸಾಧಕರಾಗಿದ್ದ ಶಿವಯೋಗಿಗಳು ಹಣವನ್ನು ಚೇಳು ಎಂದು ಬಗೆದು, ಅಧಿಕಾರದ ಸೊಂಕನ್ನು ತಾಗಿಸಿಕೊಳ್ಳದೇ ಬಸವತತ್ವ ಅಪ್ಪಿಕೊಂಡು ಶರಣತ್ವ ಜೀವನ ಬಾಳಿದವರು. ಅಂಥಹ ಮಹಾನ್ ಸಾಧಕರು, ಪುಣ್ಯ ಪುರುಷರು ಬಾಳಿಬದುಕಿದ ಪುಣ್ಯಕ್ಷೇತ್ರದ ಗಚ್ಚಿನಮಠಕ್ಕೆ ನೂತನ ಪೀಠಾಧಿಕಾರಿಗಳಾಗಿ ಶ್ರೀ ಶಿವಬಸವ ಮಹಾಸ್ವಾಮಿಗಳು ಇದೇ ಮಂಗಳವಾರ ದಿ.೨೪ ಮೇ ರಂದು ಪೀಠಾರೋಹಣ ಮಾಡುತ್ತಿರುವುದು ಅಥಣಿಯ ಭಾಗ್ಯ.
“ಸಮಾಜ ಸೇವೆಗಿಂತ ಅಧಿಕ ತಪವಿಲ್ಲ ಸಮಾಜ ಸೇವೆಗಿಂತ ಅಧಿಕ ಯೋಗವಿಲ್ಲ ಸಮಾಜ ಸೇವೆಗಿಂತ ಅಧಿಕ ಪೂಜೆಯಿಲ್ಲ ಸಮಾಜ ಸೇವೆಗಿಂತ ಅಧಿಕ ಆನಂದವಿಲ್ಲ ಇದು ಕಾರಣ ಜನಸೇವೆಯೋ, ಜಗದೀಶನ ಸೇವೆ ಕಾಣಾ’’ ಎಂಬ ಮುರುಘಾ ಶರಣರ ವಚನೋಕ್ತಿಯಂತೆ ಸದಾ ಸಮಾಜದ ಏಳ್ಗೆಯ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಅಥಣಿ ಗಚ್ಚಿನಮಠದ ಪೂಜ್ಯ ಶಿವಬಸವ ಸ್ವಾಮೀಜಿಯವರು ಅಥಣಿ ಶ್ರೀಮಠಕ್ಕೆ ಆಗಮಿಸಿ ಒಂದು ದಶಕ ಸಂದಿದೆ. ಈ ಒಂದು ಹತ್ತು ವರುಷದಲ್ಲಿ ಶ್ರೀಮಠದ ಚಿತ್ರಣವನ್ನೇ ಬದಲಿಸಿದ್ದಾರೆ. ತಮ್ಮ ಗುರುಗಳಾದ ಚಿತ್ರದುರ್ಗದ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರ ಅಣತಿಯಂತೆ ಅಥಣಿಯಲ್ಲಿ ತಮ್ಮ ಕರ್ತೃತ್ವ ಶಕ್ತಿಯಿಂದ ಕಾಯಕ ಸಲ್ಲಿಸುತ್ತ ನಡೆದುಕೊಂಡು ಬಂದವರು. ಶ್ರೀಮಠದ ನವೀಕರಣಕ್ಕೆ ಮುಂದಾಗಿ ಶ್ರೀಮಠವನ್ನು ಸುಸಜ್ಜಿತ, ಸುಂದರ ಮಠವನ್ನಾಗಿ ನಿರ್ಮಾಣಗೊಳ್ಳುವಲ್ಲಿ ಅಪೂರ್ವ ಸೇವೆಸಲ್ಲಿಸಿದ್ದಾರೆ. ತತ್ಪರಿಣಾಮ ಇಂದು ನಾಡಿನ, ಹೊರನಾಡಿನ ಭಕ್ತಾಧಿಗಳು ತೃಪ್ತ ಮನದಿಂದ ಶ್ರೀಮಠಕ್ಕೆ ಆಗಮಿಸಿ ಆನಂದಿಸುತ್ತಿದ್ದಾರೆ.
ಅಪ್ಪಟ ಬಸವಾಭಿಮಾನಿ, ಬಸವತತ್ವ ಅನುಯಾಯಿ, ಬಸವತತ್ವ ಪ್ರಸಾರಕರು, ಶರಣತತ್ವ ನಿಷ್ಠರು ಆದ ಚಿತ್ರದುರ್ಗದ ಶ್ರೀ ಮುರುಘಾಶರಣರ ಗರಡಿಯಲ್ಲಿ ಪಳಗಿದವರು ಶ್ರೀ ಶಿವಬಸವ ಸ್ವಾಮೀಜಿಯವರು. ಕಳೆದ ಇಪ್ಪತ್ತೊöದು ವರುಷಗಳಿಂದ ಅವರ ಸಾಮಿಪ್ಯದ ಒಡನಾಡಿಗಳು. ಅವರ ಅಂತಃಕರಣದ ಸೇವಾನಿಷ್ಠರು. ಅಂತೆಯೇ ಇಷ್ಟೊಂದು ದೊಡ್ಡ ಪೀಠದ ಅಧಿಪತಿಗಳಾಗಿ ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡು ಕಾಯಕಗೈಯಲು ಪೂಜ್ಯರು ಅನುಗ್ರಹಿಸಿದ್ದಾರೆ. ಇದು ಅಥಣಿ ಸೌಭಾಗ್ಯ.


ಇದೀಗ ತುಂಬ ಅರ್ಥಪೂರ್ಣ, ಐತಿಹಾಸಿಕ ದಾಖಲೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಸಂದರ್ಭದಲ್ಲಿ ಪೂಜ್ಯ ಶಿವಬಸವ ಸ್ವಾಮೀಜಿಯವರು ಪೀಠಾರೋಹಣ ಮಾಡುತ್ತಿರುವ ಗಳಿಗೆ. ಅಥಣಿ ಗಚ್ಚಿನಮಠದ ಪೂಜ್ಯ ಶ್ರೀ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾಗಿ ನೂರು ವರುಷಗಳು ಗತಿಸಿದವು. ಸಧ್ಯ ಶ್ರೀ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವವನ್ನು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಆಚರಿಸುವ ಸಮಯ. ಚಿತ್ರದುರ್ಗದ ಶರಣರು ಹಾಗೂ ಶಿವಬಸವ ಸ್ವಾಮೀಜಿಯವರು ಅರ್ಥಪೂರ್ಣವಾಗಿ ಕಾಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಒಂದು ತಿಂಗಳಪರ್ಯAತ ಬಸವ ಪುರಾಣ ನಡೆದುಕೊಂಡು ಬಂದಿದೆ. ಯುವಜನೋತ್ಸವ, ಮಹಿಳಾ ಸಮಾವೇಶ, ನೂರೊಂದು ಸ್ವಾಮೀಜಿಯವರ ಮಂಟಪ ಪೂಜೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ರಾಷ್ಟçಮಟ್ಟದ ಚಿಂತಕರು, ಕಲಾವಿದರು, ಪೂಜ್ಯರುಗಳನ್ನು ಆಹ್ವಾನಿಸಿ ಜ್ಞಾನದಾಸೋಹ, ಅನ್ನದಾಸೋಹ ಏರ್ಪಡಿಸಿದ್ದಾರೆ.
ಶಿವಬಸವ ಸ್ವಾಮೀಜಿಯವರ ಪರಿಚಯ: ಚಿತ್ರದುರ್ಗದ ಗುರುಕುಲ ಒಂದು ಪ್ರಯೋಗಶಾಲೆ, ಮುರುಘಾ ಶರಣರುÀ ಪ್ರಾತ್ಯಕ್ಷಿಯ ನೇತೃತ್ವವಹಿಸಿ ತಮ್ಮ ವೈಚಾರಿಕ, ವೈಜ್ಞಾನಿಕ ಯೋಚನೆಗಳಿಂದ ಅನೇಕ ಅಭಿವೃದ್ಧಿ ಪರ ಯೋಜನೆಗಳನ್ನು ಪ್ರಯೋಗಿಸಿ ಯಶಸ್ವಗೊಳಿಸುವ ಗರಡಿ ಕೇಂದ್ರವದು. ಅನೇಕ ಸಾಧಕರನ್ನು ಇಲ್ಲಿ ತರಬೇತಿಗೊಳಿಸಿ ನಾಡಿನ ಮೂಲೆಮೂಲೆಯಲ್ಲಿಯ ತಮ್ಮ ಶಾಖಾಮಠಗಳಿಗೆ ನೇಮಿಸಿ ಸಮಾಜಸೇವೆಗೆ ಅಣಿಗೊಳಿಸುತ್ತಿದ್ದಾರೆ. ಈ ಗುರುಕುಲದ ಸಾಧಕರಲ್ಲಿ ಒಬ್ಬರು ಶಿವಬಸವ ಮಹಾಸ್ವಾಮಿಗಳು. ಪೂರ್ವಾಶ್ರಮದ ಹೆಸರು ಚೆನ್ನಯ್ಯದೇವರು. ತದನಂತರದಲ್ಲಿ ಶ್ರೀ ಶಿವಬಸವ ಸ್ವಾಮಿಗಳಾಗಿ ಗುರುಕುಲದಲ್ಲಿ ಬಸವತತ್ವಾಭಿಮಾನಿಗಳಾಗಿ ಬಸವತತ್ವವನ್ನು ಅಳವಡಿಸಿಕೊಂಡು, ಮುರುಘಾಶರಣರ ಪ್ರೀತಿಯ ಶಿಷ್ಯರಲ್ಲಿ ಒಬ್ಬರಾಗಿ, ಗುರುಗಳ ಎಲ್ಲ ಸೇವೆಯಲ್ಲಿ ಭಾಗಿಗಳಾಗಿ, ಅವರು ವಹಿಸಿಕೊಟ್ಟ ಬೃಹತ್ ಕಾರ್ಯಕ್ರಮಗಳನ್ನು ತಮ್ಮ ಚಾಕಚಕ್ಯತೆಯಿಂದ ನಿರ್ವಹಿಸಿ ಯಶಸ್ವಿಗೆ ಕಾರಣಿಭೂತರಾಗಿ ಪ್ರೀತಿ ಗಳಿಸಿಕೊಂಡವರು.
ಶ್ರೀ ಶಿವಬಸವ ಸ್ವಾಮೀಜಿಯವರು ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಚಿಕ್ಕ ಅಣಜಿ ಗ್ರಾಮದ ಶರಣ ಸಂಸ್ಕೃತಿಯ ಹಿರೇಮಠ ಮನೆತನದ ಶರಣ ದಂಪತಿಗಳಾದ ಬಸವಣ್ಣಯ್ಯ ಮತ್ತು ಸುನಂದಮ್ಮ ಅವರ ಉದರದಲ್ಲಿ ೧೯೮೨ ರ ಜೂನ್ ೧ ರಂದು ಜನಿಸಿದರು. ತಮ್ಮ ಬಾಲ್ಯವನ್ನು ಹುಟ್ಟೂರಲ್ಲಿ ಕಳೆಯುತ್ತ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿಕೊಂಡವರು. ಪ್ರೌಢಶಿಕ್ಷಣವನ್ನು ಚಿತ್ರದುರ್ಗದಲ್ಲಿ, ಪದವಿ ಶಿಕ್ಷಣವನ್ನು ಶಿಕ್ಷಣ ಕಾಶಿ ಧಾರವಾಡದ ಮಹಾಂತ ವಿದ್ಯಾಲಯದಲ್ಲಿ ಹಾಗೂ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡಿದ್ದಾರೆ.
ಶಿಕ್ಷಣದ ನಂತರ ಗುರುಗಳ ಹಾಗೂ ಸೇವೆಗೆ ಅಣಿಗೊಂಡು ಗುರುಗಳ ಆಜ್ಞೆಯಂತೆ ಬಸವತತ್ವ ಮತ್ತು ಬಸವಧರ್ಮ ಅಧ್ಯಯನವನ್ನು ಚಿತ್ರದುರ್ಗದ ಬಸವತತ್ವ ಮಹಾವಿದ್ಯಾಲಯದಲ್ಲಿ ಪಡೆದು ಸಾಧಕ, ಬೋಧಕ, ಸುಧಾರಣ ಎಂಬ ತ್ರಿವಿಧ ಪದವಿ ಪಡೆದು ಶರಣತತ್ವದ ಸಾರ ಅರಿತುಕೊಂಡರು. ಕಾವಿ ತೊಟ್ಟು ಸ್ವಾಮೀಜಿಗಳಾಗಿ ಸಮಾಜ ಸೇವೆಮಾಡಿ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಸಂಕಲ್ಪ ತೊಟ್ಟರು. ಇದರಿಂದಾಗಿ ಚಿತ್ರದುರ್ಗದ ಶ್ರೀಮಠವನ್ನೇ ಆಶ್ರಯಿಸಿ, ಶ್ರೀಮಠದ ಹಾಗೂ ಪೂಜ್ಯರುಗಳ ಸೇವೆ ಮಾಡುತ್ತ ಇರತೊಡಗಿದರು. ಇವರ ಸರಳಸಜ್ಜನಿಕೆ, ನಿಸ್ವಾರ್ಥಪರ ಸೇವೆ, ಪ್ರಾಮಾಣಿಕತೆ, ನಿಷ್ಠೆ, ಶೃದ್ಧಾ ಸೇವೆಗಳನ್ನು ನೋಡಿದ ಶ್ರೀ ಮುರುಘಾಶರಣರು ಕಾವಿದಿಕ್ಷೆಯನ್ನು ನೀಡಿ, ಶಿವಬಸವ ಸ್ವಾಮೀಜಿಯವರನ್ನು ಹಾವೇರಿಯ ಹೊಸಮಠಕ್ಕೆ ನೇಮಕಗೊಳಿಸಿದರು. ೨೦೦೫ ರಿಂದ ೨೦೦೯ರವರೆಗೆ ಹಾವೇರಿ ಹೊಸಮಠದಲ್ಲಿ, ತದನಂತರ ಹೊಸದುರ್ಗದ ಶೀ ಒಪ್ಪತ್ತಿನಸ್ವಾಮಿ ವಿರಕ್ತಮಠದಲ್ಲಿ ೨೦೦೯ ರಿಂದ ೨೦೧೩ರವರೆಗೆ ಮಠಾಧಿಕಾರಿಗಳಾಗಿ ಸೇವೆ ಕೈಗೊಂಡರು. ಗುರುಗಳ ಅಣತಿಯಂತೆ ೨೦೧೩ ರಲ್ಲಿ ಗುರುಗಳ ಆದೇಶದಂತೆ ಅಥಣಿ ಶ್ರೀ ಗಚ್ಚಿನಮಠಕ್ಕೆ ಆಗಮಿಸಿ ಶ್ರೀ ಶಿವಯೋಗಿಗಳ, ಭಕ್ತಾಧಿಗಳ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಈ ಎಲ್ಲ ಅವಧಿಯಲ್ಲಿ ಅವರು ಹೋದಲೆಲ್ಲ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಆಯೋಜಿಸಿ ಈ ಕ್ಷೇತ್ರಗಳ ಏಳ್ಗೆ ಮಾಡಿದ್ದಾರೆ.
ಅಥಣಿಗೆ ಆಗಮಿಸಿ ಹತ್ತನೇ ವರುಷಕ್ಕೆ ಪಾದಾರ್ಪಣೆ. ಈ ಅವಧಿಯಲ್ಲಿ ಗುರುಗಳ ಅಪ್ಪಣೆ ಪಡೆಯುತ್ತ ಶ್ರೀಮಠದ ನವೀಕರಣಕ್ಕೆ ಅಣಿಯಾಗಿ ಶ್ರೀಮಠವನ್ನು ಇಂದು ಒಂದು ಸುಂದರ ಧಾರ್ಮಿಕ ಸ್ಥಳವನ್ನಾಗಿಸಿದ್ದಾರೆ. ಶರಣಸಂಸ್ಕೃತಿ, ಮಹಾಶಿವರಾತ್ರಿ, ಸಹಜ ಶಿವಯೋಗದಂತಹ ಕಾರ್ಯಕ್ರಮಗಳನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಿ ಜ್ಞಾನವನ್ನು ಉಣಬಡಿಸುವ ಪರಿ ಅನನ್ಯವಾಗಿದೆ. ಒತ್ತಡಮುಕ್ತ ನಿರಾಳ ಜೀವನ, ಮಾನವೀಯ ಮೌಲ್ಯಗಳ ಪುನರುತ್ತಾನಕ್ಕಾಗಿ ಧರ್ಮವನ್ನು ಪ್ರಸ್ತುತಪಡಿಸುವ ವಿಚಾರವನ್ನು ಪೂಜ್ಯ ಶಿವಬಸವ ಸ್ವಾಮಿಗಳು ಪ್ರತಿಪಾದಿಸುತ್ತಿದ್ದಾರೆ.
ಶ್ರೀಮಠದ ಕಟ್ಟಡನಿರ್ಮಾಣ, ಗ್ರಾಮ ಸಂಚಾರ, ಪ್ರವಚನಗಳು, ಶರಣ ಸಂಸ್ಕೃತಿ, ಬಸವತತ್ವ ಪ್ರಸಾರ ಚಟುವಟಿಕೆಗಳ ಮೂಲಕ ಜನಪರವಾಗಿಸಿದ್ದಾರೆ. ಇದೀಗ ಶ್ರೀ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವವನ್ನು ತುಂಬ ಅರ್ಥಪೂರ್ಣವಾಗಿ ಆಯೋಜಿಸಿ ಯಶಸ್ವಿಗೊಳಿಸಿದ್ದಾರೆ. ಇಂಥ ಒಂದು ಅಮೃತ ಘಳಿಗೆಯಲ್ಲಿ ಅವರ ಪಟ್ಟಾಧಿಕಾರ ನಡೆಯುತ್ತಿರುವುದು ತುಂಬ ವಿಶೇಷವಾಗಿದೆ. ಶಿವಯೋಗಿಗಳ ಕೃಪಾಶೀರ್ವಾದಿಂದ ಪೂಜ್ಯರು ಶೂನ್ಯ ಸಿಂಹಾಸನ ಪೀಠವೇರಿ, ಸಮಾಜಸೇವಾ ದೀಕ್ಷೆ ಪಡೆದು ಸಮಾಜಮುಖಿ ಕಾರ್ಯಚಟುವಟಿಕೆಗಳಿಂದ ಉತ್ತರೋತ್ತರ ಅಭಿವೃದ್ಧಿಗೊಳಿಸಲಿ, ಅವರಿಂದ ಸತ್ಕಾರ್ಯಗಳು ಸಲ್ಲಲಿ ಎಂದು ಆಶಿಸಿ ಶುಭಕೊರೋಣ.

ರೋಹಿಣಿ ಯಾದವಾಡ ಅಥಣಿ

Don`t copy text!