ಶಿವಾಚಾರದ ಪಥವ ತೋರಿಸಯ್ಯಾ

ಶಿವಾಚಾರದ ಪಥವ ತೋರಿಸಯ್ಯಾ

ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು.
ನಿಂದಕರ ನುಡಿಯ ಏಡಿಸಲ್ಕೆ ಶಿವಭಕ್ತಿಯ ಪ್ರಭೆಯಾಯಿತು.
ಅಹುದೆಂದಡೆ ಅಲ್ಲವೆಂದತಿಗಳೆವರು.
ಕುತರ್ಕ ಶಾಸ್ತ್ರದಿಂದ ಯಮಗತಿಗರ ಕೂಡೆ ನಾನಾ ಜನ್ಮಕ್ಕೇರದೆ, ಶಿವಾಚಾರದ ಪಥವ ತೋರಿಸಯ್ಯಾ ಕಲಿದೇವರದೇವ.
                                -ಶರಣ ಮಡಿವಾಳ ಮಾಚಿದೇವರು

ಹನ್ನೆರಡನೆಯ ಶತಮಾನದ ಶ್ರೇಷ್ಠ ವಚನಕಾರ ಬಸವಾದಿ ಶರಣರ ವಚನಗಳನ್ನು ರಕ್ಷಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ದಿಟ್ಟ ಗಣಾಚಾರಿ .

ಈ ವಚನದಲ್ಲಿ ಜ್ಞಾನ ಮರ್ಗವ ಹುಡುಕುವ ಹಾದಿಯಲ್ಲಿ ಸಾಗಿದ ಜನರ ಕುರಿತಾಗಿ ಹೇಳಿದ ಸುಂದರ ಅನುಭವ ಇದಾಗಿದೆ.

ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು
ಕತ್ತಲೆ ಇದ್ದರೆ ಮಾತ್ರ ಬೆಳಕಿಗೆ ಬೆಲೆ ಬರುತ್ತದೆ..ಹಾಗೆ ಅಂಧಕಾರದ ದೆಸೆಯಿಂದ ಚಂದ್ರ ಸುಂದರವಾಗಿ ಕಾಣುತ್ತಾನೆ . ತಮಸೋಮ ಜ್ಯೋತಿರ್ಗಮಯ ಎಂದು ಹೇಳುವ ಹಾಗೆ ಜ್ಞಾನದಾ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂಬ ಬಸವಣ್ಣನವರ ವಚನದಂತೆ ಜ್ಞಾನ ಮಾರ್ಗ ಹುಡುಕುವಲ್ಲಿ ಅಜ್ಞಾನವೆಂಬ ಕತ್ತಲಲ್ಲಿ ಚಂದ್ರ ಒಂದು ಜ್ಞಾನ ಪ್ರಭೆಯಾಗಿತ್ತು ಎಂದೆನ್ನುತ್ತಾರೆ ಮಡಿವಾಳ ಮಾಚಿದೇವರು. ಅಂಧಕಾರದ ಕೇಡು ಬೆಳಕಿನಿಂದ ದೂರ

ನಿಂದಕರ ನುಡಿಯ ಏಡಿಸಲ್ಕೆ ಶಿವಭಕ್ತಿಯ ಪ್ರಭೆಯಾಯಿತು

ಅನಾಚಾರಿಗಳ ನಿಂದಕರ ಬಿರು ನುಡಿಗಳ ಎದುರಾಳಿಯಾಗಿ ಶಿವ ಭಕ್ತಿಯ ಹಿತ ನುಡಿ ವಚನಗಳು ಅನುಭವದ ಮೆರಗು ಪ್ರಭೆಯಾಗಿ ನಿಲ್ಲುತ್ತವೆ. ಅಜ್ಞಾನಿಗಳ ಮೌಢ್ಯ ಕಂದಾಚಾರಗಳನ್ನು ಅವರ ನಿಂದನೆ ಬೈಗುಳಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ವಚನಗಳಿಗೆ ಮಾತ್ರ ಸಾಧ್ಯ . ನಿಂದಕರ ಮಾತು ಹೆಚ್ಚಿದಾಗಲೆ ಶರಣರ ವಚನಗಳು ಜ್ಞಾನದ ದಾರಿಯಾಗಿ ನಿಲ್ಲುತ್ತವೆ.

ಅಹುದೆಂದಡೆ ಅಲ್ಲವೆಂದತಿಗಳೆವರು.

ಭವಿಗಳು ವಿಷಯಾದಿ ಆಕರ್ಷಣೆಗೆ ಬಲಿಯಾಗುವ ಮೂಲಕ ತಮ್ಮ ಅಭಿಪ್ರಾಯ ನೂರಕ್ಕೆ ನೂರು ಸತ್ಯ ಉಳಿದವರ ವಿಚಾರ ಹೇಳಿದ್ದು ಸುಳ್ಳು ಎಂದು ಸಾಧಿಸಿ ಅನುಭವಿಗಳು ಜ್ಞಾನ ಮಾರ್ಗ ತೋರಿಸುವ ಪ್ರಯತ್ನವನ್ನು ಪ್ರತಿಪಾದಿಸುವ ಸತ್ಯವನ್ನು ಅಜ್ಞಾನಿ ಭವಿಗಳು ಅಲ್ಲಗಳೆದು ತಮ್ಮ ಗೊಡ್ಡು ಸಂಪ್ರದಾಯಗಳ ವಿಚಾರವನ್ನು ಹೇಳಿ ಇತರರ ಮೇಲೆ ಹೇರಿಕೆ ಮಾಡುತ್ತಾರೆ. ಇಂತವರ ವಿರುದ್ಧ ಚರ್ಚೆಗೆ ಇಳಿಯದೆ ಸತ್ಯದ ಅರಿವನ್ನು ತೋರುವ ದಾರಿಗೆ ಹೋಗುವ ಮೌನವಾಗಿ ನಿರಂತರ ಹೆಜ್ಜೆ ಹೆಜ್ಜೆಗೆ ಅನುಸಂಧಾನ ಮಾಡುವ ವಚನ ಚಿಂತಕರ ಹಾದಿಗೆ ಭಕ್ತರು ಹೋಗಬೇಕೆನ್ನುವುದು ಮಡಿವಾಳ ಮಾಚಿದೇವರ ಆಶಯ

ಕೃತಕ ಶಾಸ್ತ್ರದಿಂದ ಯಮಗತಿಗರ ಕೂಡೆ ನಾನಾ ಜನ್ಮಕ್ಕೇರದೆ, ಶಿವಾಚಾರದ ಪಥವ ತೋರಿಸಯ್ಯಾ ಕಲಿದೇವರದೇವ.

ಅರ್ಥವಿರದ ತರ್ಕವಿರದ ಶಾಸ್ತ್ರ ಪುರಾಣ ಬೆನ್ನು ಹತ್ತಿದ ಯಮಗತಿಗಳು ಭವಿಗಳು ಜೊತೆಗೆ ಕರ್ಮ ಸಿದ್ಧಾಂತ ಮತ್ತು ಪುನರ್ಜನ್ಮ ಪರಿಕಲ್ಪನೆಯಲ್ಲಿ ಹಲವು ಜನ್ಮಗಳ ಹುಚ್ಚುತನದ ಮೋಹಕ್ಕೆ ಬಿದ್ದು ಜ್ಞಾನ ಮಾರ್ಗ ತೋರಿಸುವ ಪ್ರಯತ್ನ ವ್ಯರ್ಥಗೊಳಿಸುವ ಜನರ ಸಹವಾಸ ಬಿಟ್ಟು ಶಿವಾಚಾರದ ಸತ್ಯ ಜ್ಞಾನದ ಅರಿವಿನ ಆಂದೋಲನದ ಮಹಾ ಮಾರ್ಗವನ್ನು ತೋರಿಸಯ್ಯ ಎಂಬ ಅರ್ಥವನ್ನು ವಚನ ಹೊಂದಿದೆ. ಬಸವಣ್ಣವರು ಹೇಳಿದಂತೆ ಗುರು ಪಥ ಇದು ದೇವನೋಲಿಸುವ ಸುಜ್ಞಾನವನ್ನು ಸಂಪಾದಿಸುವ ಮಾರ್ಗ ಎಂದಿದ್ದಾರೆ ಮಡಿವಾಳ ಮಾಚಿದೇವರು .
ಪಂಚಾಚಾರ ಲಿಂಗಾಯತ ಧರ್ಮದ ಪ್ರಾಣ ಆಚರಣೆ ಕ್ರಿಯೆಗೆ ಮಾರ್ಗ ಸೂಚಿ.


ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!