ಗಜಲ್
(ಮಾತ್ರೆ೨೬)
ಅವನ ಮೋಹದ ಚಿತ್ರ ಆವರಿಸಿದೆ ಹೃದಯದ ತುಂಬೆಲ್ಲಾ
ಪ್ರೀತಿಯ ಲಜ್ಜೆಯ ಕೆಂಪು ಲೇಪಿಸಿದೆ ಅಧರದ ತುಂಬೆಲ್ಲಾ
ರಾತ್ರಿ ಏಕಾಂಗಿ ಕಣ್ಣಲಿ ನಿರಾಶೆಯ ಮಂಕು ಕವಿದಿತ್ತು
ಬೆಳ್ಳಿ ಚುಕ್ಕಿಯ ಹೊಳಪು ಹರಡಿಸಿದೆ ನಯನದ ತುಂಬೆಲ್ಲಾ
ರಣ ರಣ ಬಿಸಿಲು ಮರಳುಗಾಡಿನ ಪಯಣ ಬಾಡಿತು ಮಂದಾರ
ಬಾಳಲಿ ಮಾಸದ ನಗುವನು ತರಿಸಿದೆ ವದನದ ತುಂಬೆಲ್ಲಾ
ಶರತ್ ಕಾಲ ಬನವೆಲ್ಲ ಎಲೆ ಉದುರಿಸಿ ನಿಂತಿದೆ ಬೋಳಾಗಿ
ಎದೆಯಲಿ ವಸಂತ ಋತು ನಿಮಿ೯ಸಿದೆ ಜೀವನದ ತುಂಬೆಲ್ಲಾ
ಕೀಟ ಹಿಡಿಯಲು ಜೇಡಮತ್ತೆ ಮತ್ತೆ ಮೋಹದ ಬಲೆ ಹೆಣೆದಿದೆ
ನೀ ಪ್ರೇಮ ಜಾಲವನು ಹೆಣೆದೆ ಹಿತವಿದೆ ಮನದ ತುಂಬೆಲ್ಲಾ
ರವಿ ಕಿರಣ ಹೊಡೆತಕೆ ಜೀವವು ಬಳಲಿ ಬೆಂಡಾಗಿದೆ ಬದುಕಲಿ
ಬಿರಿದ ಹೊಲಕೆ ಒಲವ ಧಾರೆ ಸುರಿಸಿದೆ ಲೋಕದ ತುಂಬೆಲ್ಲಾ
ಅವನಿಯ ತುಂಬಾ ಅಶಾಂತಿ ತಾಂಡವಾಡುತಿದೆ ಜೀವಿಗಳಲಿ
ಕರುಣೆ ನೆಮ್ಮದಿಯ ” ಪ್ರಭೆ” ಚೆಲ್ಲಿದೆ ಮಂದಿರದ ತುಂಬೆಲ್ಲಾ
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ