ಬಯಲ ರೂಪ ಮಾಡಿ ಬಯಲಾದ ಬಸವಣ್ಣ 

ಬಯಲ ರೂಪ ಮಾಡಿ ಬಯಲಾದ ಬಸವಣ್ಣ 

ಮಹಾತ್ಮಾ ಬುದ್ಧನ ನಂತರ ಸುಮಾರು 1700 ವರ್ಷದ ನಂತರ ಭಾರತ ನೆಲದಲ್ಲಿ ಮತ್ತೊಂದು ಕ್ರಾಂತಿಯ ಕಿಡಿ ಹತ್ತಿತು . ಅದುವೇ ಮುಂದೆ ಕಲ್ಯಾಣ ಸಮಗ್ರ ಕ್ರಾಂತಿಗೆ ಮುನ್ನುಡಿಯಾಯಿತು . ವರ್ಗ ವರ್ಣ ಆಶ್ರಮ ಲಿಂಗ ಭೇದಗಳನ್ನು ಕಿತ್ತೆಸೆದು ಸಾರ್ವಕಾಲಿಕ ಸಮಾನತೆಯ ಸುಂದರ ಮುಕ್ತ ಸಮಾಜವನ್ನು ಕಟ್ಟಿದನು ಬಸವಣ್ಣ. ಪುರಾಣ ಪುಣ್ಯ ಕಥೆಗಳು ಏನೆ ಹೇಳಲಿ ಭಾರತದಲ್ಲಿಯೇ ಬಸವಣ್ಣ ಮೊಟ್ಟ ಮೊದಲ ಸ್ವತಂತ್ರ ವಿಚಾರವಾದಿ ಎಂದು ಇಂಗ್ಲೆಂಡಿನ ಸರ್ ಆರ್ಥರ್ ಮೈಲ್ಸ್ 1933 ರಲ್ಲಿ The land of Lingam ಎಂಬ ಪುಸ್ತಕದಲ್ಲಿ ಹೇಳಿದ್ದಾರೆ .

ಬಸವಣ್ಣನವರ ಕಾಲ ಜೀವನ ಜನ್ಮ ಐಕ್ಯದ ಬಗ್ಗೆ ಹಲವು ಬಗೆಯ ಭಿನ್ನ ಭಿನ್ನ ವಿಚಾರಗಳು ಪ್ರಸ್ತುತಗೊಂಡಿವೆ. ಬಸವಣ್ಣನವರು ಬದುಕಿದ್ದು 63 ವರ್ಷವೆಂತಲೂ 65 ವರ್ಷವೆಂತಲೂ ಇನ್ನು ಅನೇಕರು ಬಸವಣ್ಣನವರು ಬದುಕಿದ್ದು ಕೇವಲ ಮೂವತ್ತಾರು ವರ್ಷವೆಂತಲೂ ಹೇಳುತ್ತಾರೆ . ಹಾಗಿದ್ದರೆ ಅವರ ಜನ್ಮ ಹುಟ್ಟು ಐಕ್ಯದ ಬಗ್ಗೆ
ತಾರ್ಕಿಕವಾಗಿ ಚರ್ಚಿಸೋಣಾ .
ಬಸವಣ್ಣನವರು ಹುಟ್ಟಿದ್ದು 1131 ಡಾ ಆರ್ ಸಿ ಹಿರೇಮಠರು ಡಾ ಸಿದ್ದಯ್ಯ ಪುರಾಣಿಕರು ಮುಂತಾದ ಅನೇಕರು ಬಸವಣ್ಣನವರ ಜನ್ಮ ದಾಖಲೆಯನ್ನು ಸಂಶೋಧಿಸಿ ದಾಖಲಿಸಿದ್ದಾರೆ. ಕಲ್ಯಾಣ ರಕ್ತ ಸಿಕ್ತ ಹೋರಾಟವು ಕ್ರಾಂತಿಯು 1167 ರಲ್ಲಿ ನಡೆದಿದೆ . ಅದೇ ವರ್ಷ ಬಿಜ್ಜಳನ ಕೊಲೆಯಾಗಿದೆ ಮತ್ತು ಬಸವಣ್ಣನವರು ಅದೇ ವರ್ಷ ಐಕ್ಯವಾಗಿದ್ದಾರೆ .ಇದಕ್ಕೆ ಅನೇಕ ಐತಿಹಾಸಿಕ ಪುರಾವೆಗಳಿವೆ . ಕಲ್ಯಾಣ ಕಳಚೂರ್ಯರ ವಂಶಾಡಳಿತವು ಬಿಜ್ಜಳನ ಮೊಮ್ಮಕ್ಕಳಾದ ಸಿಂಘಣ ಪಟ್ಟವು 1183 ಕ್ಕೆ ಕೊನೆಗೊಳ್ಳುತ್ತದೆ ,ಅಂದ ಮೇಲೆ ಬಸವಣ್ಣನವರು 1183 ರ ನಂತರ ಬದುಕಿದ್ದು ಹೇಗೆ ಸಾಧ್ಯ?
1167 ರಲ್ಲಿ ಬಿಜ್ಜಳನ ಕೊಲೆ ಐತಿಹಾಸಿಕ ದಾಖಲೆಗಳು ಸಿಗುತ್ತವೆ .

ಒಂದು ಕಾಲಜ್ಞಾನದ ವಚನದಲ್ಲಿಬಸವಣ್ಣನವರು

ಭಕ್ತಿಗೆ ಬೀಡಾಗಿತ್ತು ಕಲ್ಯಾಣವು ಮೂವತ್ತಾರು ವರುಷ
ಶಿವ ಸದನಕ್ಕೆ ನಿಂತಿತ್ತು ಇಪ್ಪತ್ತೇಳು ವರುಷ
ಅನುಭವ ಮಂಟಪಕೆ ಹನ್ನೆರಡು ವರುಷ
ಎಂಬ ಅಂಶಗಳನ್ನು ಕಾಣುತ್ತೇವೆ.

ಇಲ್ಲಿ ಕಲ್ಯಾಣವೆಂದರೆ ಬಿಜ್ಜಳನ ರಾಜ್ಯಧಾನಿ ಎಂದು ಪರಿಗಣಿಸದೆ ಕಲ್ಯಾಣವೆಂಬುದು ಪ್ರಣತಿ,ಕಲ್ಯಾಣವು ಪೃಥ್ವಿ ಭೂಮಿ ಧರೆ ಮರ್ತ್ಯಲೋಕವೆಂದು ತಿಳಿಯಬೇಕು .
ತಾನು ಕಲ್ಯಾಣದಲ್ಲಿ ಅನುಭವಮಂಟಪಕ್ಕೆ ನಿಂತಿದ್ದು ಹನ್ನೆರಡು ವರುಷ, ಅಂದಾಗ ,ಎಂಟು ವರುಷದ ಬಾಲಕ ಬಸವಣ್ಣ ಕೂಡಲಸಂಗಮದಲ್ಲಿ ಹನ್ನೆರಡು ವರುಷ
ಅಧ್ಯಯನ ಮಾಡಿ ಮುಂದೆ ಸೋದರ ಮಾವ ಬಲದೇವನ ಸಹಾಯದೊಂದಿಗೆ ಬಿಜ್ಜಳನ ಆಸ್ಥಾನದಲ್ಲಿನ ಮಂಗಳವೇಡೆಗೆ ಕಾರಣಿಕ ಹುದ್ದೆಯನ್ನು ಪಡೆಯುತ್ತಾನೆ ಬಸವಣ್ಣ,ಮುಂದೆ ಎರಡು ವರುಷದೊಳಗೆ ಬಸವಣ್ಣನವರ ಅಗಾಧವಾದ ಜ್ಞಾನ ಚತುರತೆಯನ್ನು ಮನಗಂಡ ಬಿಜ್ಜಳನು ಬಸವಣ್ಣನವರಿಗೆ ಕಲ್ಯಾಣದಲ್ಲಿ ಅರ್ಥ ಸಚಿವನನ್ನಾಗಿ ಮಾಡುತ್ತಾರೆ .ಬಸವಣ್ಣನವರು ತಮ್ಮ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಅನುಭವ ಮಂಟಪ ಸ್ಥಾಪಿಸಿದರು. ತಮ್ಮ ಮೂವತ್ತಾರು ವರ್ಷದ ವಯಸ್ಸಿನಲ್ಲಿ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು.

ಬಸವಣ್ಣನವರು ಮೂವತ್ತಾರು ವರುಷ ಬದುಕಿದರು ಎನ್ನುವದಕ್ಕೆ ಇನ್ನು ಹಲವು ತರ್ಕ ಸಂಭಾವ್ಯತೆಗಳನ್ನು ಚರ್ಚಿಸೋಣ .

ಬಸವಣ್ಣನವರಿಗೆ ಒಬ್ಬ ಹಿರಿಯ ಅಣ್ಣ ಹಾಗು ಅಕ್ಕನಿದ್ದರೂ ಎಂದು ಅರ್ಜುನವಾಡಿ ಶಾಸನ ಮೂಲಕ ತಿಳಿದು ಬರುತ್ತದೆ.ಹಿರಿಯ ಅಕ್ಕ ಅಕ್ಕ ನಾಗಮ್ಮ ನಂತರ ಅಣ್ಣ ದೇವರಾಜ ನಂತರ ಬಸವಣ್ಣ ,ಬಸವಣ್ಣನವರಿಗಿಂತ ಅಕ್ಕ ನಾಗಮ್ಮ ಹನ್ನೆರಡು ವರುಷ ಹಿರಿಯಳು. ಸೋದರಮಾವ ಬಸವಣ್ಣನವರಿಗಿಂತ ಚೆನ್ನಬಸವಣ್ಣ ಹತ್ತರಿಂದ ಹನ್ನೆರಡು ವರುಷ ಚಿಕ್ಕವರು.. ಅಂದರೆ ಬಸವಣ್ಣ 1131 -1134 ರಲ್ಲಿ ಜನಿಸಿದರು ಚೆನ್ನಬಸವಣ್ಣನವರು 1144 ರಲ್ಲಿ ಜನಿಸಿದ್ದಾರೆ, ಕಾರಣ ಕಲ್ಯಾಣದ ರಕ್ತಿಸಿಕ್ತ ಕ್ರಾಂತಿಯ ಸಮಯದಲ್ಲಿ ಚೆನ್ನಬಸವಣ್ಣನರು 23 ವರುಷದವರಾಗಿದ್ದರು ಎಂದು ತಿಳಿದು ಬರುತ್ತದೆ.ಬಸವಣ್ಣನವರ ಅಕ್ಕ ಬಸವಣ್ಣನವರಿಗಿಂತ ಹನ್ನೆರಡು ವರುಷದೊಡ್ಡವಳಾಗಿದ್ದಳು .ಒಂದು ವೇಳೆ ಬಸವಣ್ಣನವರು ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಮತ್ತು ಐಕ್ಯವಾಗುವ ಸಮಯದಲ್ಲಿ 63 ವರುಷದವರಾಗಿದ್ದರೆ ಅವರಕ್ಕ ನಾಗಮ್ಮ 75 ವರುಷದವರಾಗಿರುತ್ತಿದ್ದರು ತಮ್ಮ ಇಳಿಯ ವಯಸ್ಸಿನಲ್ಲಿ ಅಕ್ಕ ನಾಗಮ್ಮ ಸೋವಿದೇವನ ಸೈನಿಕರೊಂದಿಗೆ ಕಾದಾಡಿ ವಚನಗಳ ರಕ್ಷಣೆಗೆ ಸುಮಾರು ಸಾವಿರು ಮೈಲಿ ನಡೆಯಲು ಹೇಗೆ ಸಾಧ್ಯ? ತಮ್ಮ ಐವತ್ತೆರಡನೇಯ ವಯಸ್ಸಿನಲ್ಲಿ ಚೆನ್ನ ಬಸವಣ್ಣನವರಿಗೆ ಜನ್ಮ ನೀಡಲು ಹೇಗೆ ಸಾಧ್ಯ? ಹಾಗು ಚೆನ್ನ ಬಸವಣ್ಣ ಮತ್ತು ಬಸವಣ್ಣವರ ವಯಸ್ಸಿನ ಅಂತರ ನಲವತ್ತಾಗುತ್ತದೆ. ಇದು ಖಂಡಿತ ಒಪ್ಪದ ಮಾತು .ಹೀಗೆ ಬಸವಣ್ಣನವರ ಆಯುಷದ ಬಗ್ಗೆ ಇನ್ನು ನಿಷ್ಕರ್ಷವಾಗದೆ ಪ್ರತಿಯೊಬ್ಬ ಲೇಖಕ ಸಂಶೋಧಕರು ತಮಗೆ ತಿಳಿದಂತೆ ದಾಖಲಿಸುವುದು ಹಲವು ಗೊಂದಲಕ್ಕೆ ಕಾರಣವಾಗುತ್ತದೆ.

ಬಸವಣ್ಣ ನಿರಾಕಾರದ ಬಯಲನ್ನೇ ಸಾಕಾರಗೊಳಿಸಿ ಆ ಸಾಕಾರ ಲಿಂಗದಲ್ಲಿ ತಾನು ನಿರಾಕರವಾದನು.ಇಷ್ಟಲಿಂಗವೆಂಬ ಅರುಹಿನ ಕುರುಹು ಕಂಡು ಹಿಡಿದು ದೇವಾಲಯ ಸಂಸ್ಕೃತಿಗೆ ಶೋಷಣೆಗೆ ಅಲ್ಲಿ ನಡೆಯುವ ಅಸ್ಪ್ರಶ್ಯತೆಗೆ ಕೊನೆ ಹೇಳಿದನು ಬಸವಣ್ಣ. ಇಷ್ಟಲಿಂಗವು ಅರುಹಿನ ಕುರುಹು. ಭವಿ ಭಕ್ತನನ್ನಾಗಿ ಮಾಡುವ ಸಾಧನ. ಇಷ್ಟಲಿಂಗವು ಅರುವಿನೊಂದಿಗೆ ನಿರಂತರವಾಗಿ ನಡೆಸುವ ಅನುಸಂಧಾನದ ಗಟ್ಟಿಮುಟ್ಟಾದ ಸಾಧನ ಸಂಕೇತ.

ಬಯಲ ರೂಪ ಮಾಡಬಲ್ಲಾತನೆ ಶರಣನು .
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯ್ದಿದ್ದಡೆ ಎಂತು ಶರಣನೆಂಬೆ ?
ಆ ರೂಪ ಬಯಲು ಮಾಡಲರಿಯ್ದಿದ್ದಡೆ ಎಂತು ಲಿಂಗಾನುಭಾವಿಯೆಂಬೆ ?
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೇ
ಕೂಡಲಸಂಗಮದೇವ.
*ಬಸವಣ್ಣನವರು.* ಸಮಗ್ರ ವಚನ ಸಂಪುಟ ಸಂಖ್ಯೆ 923 ಪುಟ 243

ಬಸವಣ್ಣನವರ ಐಕ್ಯನ ಜ್ಞಾನಿಸ್ಥಲ ವಚನ . ಬಯಲ ಅಂದರೆ ಸೃಷ್ಟಿ ಸಮಷ್ಟಿ ಬ್ರಹ್ಮಾಂಡ .ಇಂತಹ ಬಯಲನ್ನು ಒಂದು ರೂಪ ಮಾಡಬಲ್ಲಾತನೆ ಶರಣನು.
ಕರಸ್ಥಲಕ್ಕೆ ಅರಿವಿನ ಕುರುಹಾಗಿ ಪಡೆದು ಅಂಗ ಲಿಂಗ ಸಂಧಾನ ನಡೆಸುವ ಅರಿವಿನದ್ಯೋತಕವಾದ ಶಿವಾನುಭ ಕ್ರಿಯೆ. ಸಮಷ್ಟಿಯ ಭಾವವನ್ನು ಅಂಗೈಯಲ್ಲಿ ಅರಿವಿನ ಕುರುಹಾಗಿ ಮಾಡಬಲ್ಲವನೆ ಶರಣನು. ಶರಣ ಪರಿಪೂರ್ಣತೆಯ ಸಂಕೇತ ಪ್ರತಿನಿಧಿ. ಅನ್ಯ ಧರ್ಮದಲ್ಲಿ ಇದಕ್ಕೆ ಪರ್ಯಾಯ ಪದಗಳಿಲ್ಲ.ಭಿಕ್ಷು ಮಾಂಕ್ ಫಕೀರ ಮುನಿ ಇವು ಶರಣ ಪದಕ್ಕೆ ಸಮಬಾರವು.
ಕರಸ್ಥಲದ ರೂಪವನ್ನು ಮತ್ತೆ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ . ಬಯಲ ರೂಪಗೊಂಡ ಕರಸ್ಥಲದ ಲಿಂಗವು ಬ್ರಹ್ಮಾಂಡವೆಂದು ತಿಳಿದು ನಡೆಯುವವನೇ ಲಿಂಗಾನುಭಾವಿ. ಅಂದರೆ ವಸ್ತಿ ಸಮಷ್ಟಿಯ ಮಧ್ಯದ ನೇರ ಕೊಂಡಿ ಭಕ್ತ. ಅಂತರಂಗ ಬಹಿರಂಗಗಳ ಸಮಾಗಮಕ್ಕೆ ಕೇಂದ್ರ ಬಿಂದುವೇ ಇಷ್ಟಲಿಂಗ ಅರಿವಿನ ಕುರುಹು. ಆದರೆ ಅರಿವನ್ನು ಕೇವಲ ಕುರುಹು ರೂಪದಲ್ಲಿ ಬಂದಿಸಲ್ಪಟ್ಟರೆ ಆಡು ಆಚರಣೆ ಸಂಪ್ರದಾಯ ಪೂಜೆಯಾಗುತ್ತದೆ.ಕಾರಣ ಲಿಂಗವೆಂಬ ರೂಪವನ್ನು ಸಮಷ್ಟಿಯೆಂದು ತಿಳಿದು ಅದರ ರೂಪವನ್ನು ಬಯಲು ಮಾಡಬಲ್ಲಾತ ಲಿಂಗಾನುಭಾವಿ.ಲಿಂಗವೆಂಬ ರೂಪದ ರಹಸ್ಯವನ್ನು ಹೊರ ಹಾಕುವವನು ತಿಳಿಯುವವನು ಬಯಲು ಮಾಡುವವನು ಲಿಂಗಾನುಭಾವಿಯಾಗುತ್ತಾನೆ.

ಬಯಲ ರೂಪ ಮಾಡಲರಿಯ್ದಿದ್ದಡೆ ಎಂತು ಶರಣನೆಂಬೆ ?-ಬಯಲ ಸಮಷ್ಠಿ ಸೃಷ್ಟಿಯನ್ನು ರೂಪಮಾಡಲರಿಯದವನು ಅದನ್ನು ಸಂಕೇತವಾಗಿ ಕಾಣದವನು
ಹೇಗೆ ಶರಣನಾಗಬಲ್ಲ ಇದು ಬಸವಣ್ಣನವರ ಪ್ರಶ್ನೆಯಾಗಿದೆ, ಸೃಷ್ಟಿಯೊಳಗಿನ ಚರಾಚರ ಜೀವಿಗಳು ಕಾಡು ಗುಡ್ಡ ಬೆಟ್ಟ ನದಿ ಸರೋವರಸಮುದ್ರ ಮುಗಿಲು ಮೋಡ ಕಣವಿ ಹೀಗೆ ಬೇರೆ ಬೇರೆ ಚಿತ್ರಣಗಳಿದ್ದರೂ ನಮ್ಮ ಅರಿವಿಗೆ ಸರಳವಾಗಿ ಗೋಚರಿಸಲೆಂದೇ ಅಪ್ಪ ಬಸವಣ್ಣನವರು ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣ ಕುರುಹಾಗಿ ರೂಪವಾಗಿ ಕರಸ್ಥಲಕೆ ಲಿಂಗವಾಗಿ ಕೊಟ್ಟರು.ಲಿಂಗವೆಂಬ ರೂಪದಲ್ಲಿ ಬಯಲ ಕಾಣುವವನೆ ಶರಣನು.

ಆ ರೂಪ ಬಯಲು ಮಾಡಲರಿಯ್ದಿದ್ದಡೆ ಎಂತು ಲಿಂಗಾನುಭಾವಿಯೆಂಬೆ ?
ಕರಸ್ಥಲಕ್ಕೆ ಚುಳುಕಾದ ಇಷ್ಟಲಿಂಗವನ್ನು ಧ್ಯಾನಕ್ಕೆ ಅಧ್ಯಾತ್ಮಕ್ಕೆ ಪ್ರಾರ್ಥನೆ ಪೂಜೆಗೆ ಮಾತ್ರ ಸೀಮಿತಗೊಳಿಸಿದರೆ ಅದು ಅಪರಾಧವಾಗುತ್ತದೆ.
ಲಿಂಗವು ಸಮಷ್ಟಿಯ ಪ್ರತೀಕವಾದ ಕಾರಣ ಭಕ್ತನಿಗೆ ಸಮಷ್ಟಿಯನ್ನು ಕಾಪಾಡುವ ರಕ್ಷಿಸುವ ಹೊಣೆಗಾರಿಕೆಯಿರುತ್ತದೆ. ಕೈಯೊಳಗಿನ ಲಿಂಗವೆಂಬ ರೂಪವು ಸಮಷ್ಟಿಯೆಂದು ಅದರ ರಹಸ್ಯವನ್ನು ಬಿಚ್ಚುಡುವವನು ಬಯಲು ಮಾಡುವವನೇ ನಿಜವಾದ ಲಿಂಗಾನುಭಾವಿ. ಲಿಂಗ ನಿರುಪಾಧಿತ ಯೋಗ ಮಾರ್ಗದ ಗಟ್ಟಿ ಮುಟ್ಟಾದ ಸಂಕೇತ . ಆ ಕುರುಹಿನ ಉದ್ದೇಶವನ್ನು ಬಯಲು ಮಾಡುವುದೆ ಲಿಂಗಾನುಭಾವಿಯ ಶಿವಯೋಗದ ನಿರಂತರ ಪ್ರಯತ್ನವಾಗಿರುತ್ತದೆ.

*ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೇ ಕೂಡಲಸಂಗಮದೇವ.*
—————————————————————————
ಬಯಲ ಮತ್ತು ರೂಪ, ಬ್ರಹ್ಮಾಂಡ ಮತ್ತು ಪಿಂಡಾಂಡ .ವ್ಯಕ್ತಿ ಮತ್ತು ಸಮಷ್ಟಿ ಇವು ಅಂಗ ಲಿಂಗದ ಪ್ರತೀಕಗಳು. ಅಂಗ ಲಿಂಗ ಒಂದಾಗಿ ಜಂಗಮ ಸಮಾಜಕ್ಕೆ
ದುಡಿಯ ಬಲ್ಲವನೇ ಭಕ್ತನು .ಇಂತಹ ಉಭಯ ಭಾವ ದ್ವಂದ್ವಗಳನ್ನು ಕಳೆದು ನಿಜ ಪರಮಸುಖ ಪಡೆಯುವುದೇ ಶಿವಯೋಗವಾಗಿದೆ.
ಅಲ್ಲಿ ಶಬ್ದ ಸ್ಪರ್ಶ ರೂಪ ರಸ ಗಂಧ ಗೌಣವಾಗುತ್ತವೆ. ಅಂತಃಚಕ್ಷುವಿನ ಮೂಲಕ ನಮ್ಮ ಒಳಗಣ ಪಯಣಕ್ಕೆ ಹೋದಾಗ ಮಾತ್ರ ಇಂತಹ ಅನುಭವ ಬರುತ್ತದೆ.
ಉಭಯ ಭಾವ ಒಂದೇ ಎಂದು ತಿಳಿದರೆ ಸೃಷ್ಟಿಕರ್ತನಲ್ಲಿ ಮತ್ತೆ ಬೇರೆ ತೆರಹು ಸ್ಥಾನವುಂಟೆ ಎಂದು ಬಸವಣ್ಣನವರು ತನ್ನೊಳಗಿನ ಪಾರಮಾತ್ಮನನ್ನು ಕೇಳಿಕೊಳ್ಳುತ್ತಾರೆ.ಇದನ್ನು ಪ್ರತಿಯೊಬ್ಬ ಭಕ್ತ ಅನುಭವಿಸಬೇಕು ಆಗ ಮಾತ್ರ ಲಿಂಗಾನುಭಾವದ ಸಾರ್ಥಕತೆ ಅರಿವಾಗುವುದು.

*ಬಸವಣ್ಣನವರ ಐಕ್ಯದ ಕುರಿತು ಹಲವು ಊಹಾಪೋಹಗಳು* .
———————————————-
ಶರಣರ ಬಾಳು ಮರಣದಲ್ಲಿ ಕಾಣು ಎಂಬ ಗಾದೆಯಂತೆ .ಶರಣರು ಹುಟ್ಟು ಸಾವನ್ನು ಅತ್ಯಂತ ಸಹಜವಾಗಿ ಕಂಡಿದ್ದರು.ಶರಣರಿಗೆ ಸಾವಿಲ್ಲ ಶರಣರು ಸಾವನ್ನು ಅರಿಯರು. ಕಲ್ಯಾಣ ಕ್ರಾಂತಿಯ ನಂತರ ಶರಣರು ಬೇರೆ ಬೇರೆ ಪ್ರದೇಶಗಳಿಗೆ ಚದುರಿದರು. ಅವರ ಭೌತಿಕ ದೇಹದ ಮುಕ್ತಿಗಾಗಿ ಹಲವಾರು ಹಲವು ಬಗೆಯ ಸಮಾಧಿಯನ್ನು ಬಯಸಿದ್ದರು. ಕೆಲವರು ಭೂ ಸಮಾಧಿ ಕೆಲವರು ಜಲ ಸಮಾಧಿ ಇನ್ನು ಕೆಲವರು ಬಯಲು ಸಮಾಧಿಯನ್ನು ಅರಸಿದ್ದರು.ಇದರಲ್ಲಿ ಕೊನೆಗಳಿಗೆಯ ಹಠಾತ್ ಯುದ್ಧ ಹಿಂಸೆ ವಿಪ್ಲವದಿಂದ ಶರಣರು ಕಂಗೆಟ್ಟಿದ್ದರು. ಬಸವಣ್ಣ ನೀಲಾಂಬಿಕೆ ಹಡಪದ ಅಪ್ಪಣ್ಣ ,ಗಂಗಾಂಬಿಕೆ ಇವರು ಜಲಸಮಾಧಿಯನ್ನು ಅರಸಿದರು. ಅಕ್ಕನಾಗಮ್ಮ ಚೆನ್ನಬಸವಣ್ಣ ಮಾಚಿದೇವ ಕಲ್ಯಾಣಮ್ಮ ಕಕ್ಕಯ್ಯ ನುಲಿಯ ಚೆಂದಯ್ಯ ಮುಂತಾದ ಶರಣರು ಭೂ ಸಮಾಧಿಯನ್ನು ಬಯಸಿದ್ದರು .ಅಲ್ಲಮ ಅಕ್ಕ ಮಹಾದೇವಿ ಮುಂತಾದ ಕೆಲವೇ ಕೆಲ ಶರಣರು ಬಯಲು ಸಮಾಧಿಯನ್ನು ಹೊಂದಿದರು. ಜಲ ಸಮಾಧಿಯೆಂದಾಕ್ಷಣ ಅದು ಬಸವಣ್ಣನವರ ಆತ್ಮ ಹತ್ಯೆಯೇ ? ಇನ್ನು ಕೆಲ ಸಾಹಿತಿಗಳು ಬಸವಣ್ಣನವರ ಕೊಲೆ ಎಂದು ನಿರೂಪಿಸಲು ಯತ್ನಿಸಿದ್ದಾರೆ.ಅವು ಸತ್ಯಕ್ಕೆ ದೂರವಾದ ಸಂಗತಿಗಳು. ಐಕ್ಯವೆಂಬುದು ಮುಕ್ತಿ ಬಸವಣ್ಣನವರು ಯಾವುದಕ್ಕೂ ವಿಚಲಿತರಾಗದ ಸಹಜ ಶಿವಯೋಗ ಬದುಕನ್ನು ಕಂಡವರು. ಬದುಕಿನ ಒಳ ಹಾಗು ಹೊರ ಪಯಣದಲ್ಲಿ ತೃಪ್ತ ಭಾವವ ಕಂಡವರು.
ಆದರೆ ಸಮತೆಯ ಸಾಮ್ರಾಜ್ಯವನ್ನೇ ಕಟ್ಟಿ ಸದಾ ಮನುಕುಲದ ಏಳ್ಗೆ ಯನ್ನು ಬಯಸಿದ್ದ ಬಸವಣ್ಣನವರ ಕನಸು ನುಚ್ಚು ನೂರಾಗಿದ್ದು ಜಾತಿಕರ್ಮಠರ ಕುತಂತ್ರದಿಂದ
ಬಿಜ್ಜಳನ ಪಲ್ಲಟಗೊಳಿಸುವ ತಂತ್ರಗಾರಿಕೆಯಿಂದ ಬಸವಣ್ಣನವರು ಕೈಕೊಂಡ ಹರಳಯ್ಯನವರ ಮಗ ಹಾಗು ಮಧುವರಸ ಲಾವಣ್ಯಳ ಕಲ್ಯಾಣ ಮಹೋತ್ಸವವನ್ನು ಏರ್ಪಡಿಸಿದ್ದನ್ನೇ ನೆಪ ಮಾಡಿ ದುರುಳ ಬಿಜ್ಜಳನಿಗೆ ಚಾಡಿ ಹೇಳಿ ಶರಣರನ್ನು ಹತ್ಯೆ ಗೈಯಲು ಸಂಚು ರೂಪಿಸಿದರು.ಕ್ಲ್ಯಾಣವು ಕಟುಕರ ಕೇರಿಯಾಗಿದ್ದನ್ನು ಕೇಳಿ ಮುಮ್ಮಲ ಮರಗಿದರು. ಶರಣರ ಅನುಭಾವದ ಸುಗ್ಗಿಯನ್ನು ಬಸವಣ್ಣ ತಮ್ಮ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ

ಬಿತ್ತು ಬೆಳೆಯಿತ್ತು ,ಕೆಯ ಕೊಯಿತ್ತು
ಮುರಿಯಿತ್ತು ಕುತ್ತುರಿಯೊಟ್ಟಿತ್ತು ,ಅಳೆಯಿತ್ತು ತುಂಬಿತ್ತು
ಕೂಡಲ ಸಂಗಮದೇವಯ್ಯಾ ಮೇಟಿ ಕಿತ್ತಿತ್ತು (ಕಣಜ ) ಹಾಳಾಯಿತ್ತಯ್ಯಾ .

ಬಿತ್ತಿದ್ದನ್ನು ಬೆಳೆದೆವು ಬೆಳೆದ ಫಲ ತೆನೆ ಕೊಯ್ದೆವು ,ಮುರಿದ ತೆನೆ ಕೂಡಿ ಹಾಕಿದೆವು ,ಇಲ್ಲಿ ವಚನಗಳ ರಾಶಿಯ ಬಗ್ಗೆ ಸಾಂಕೇತಿಕವಾಗಿ ಹೇಳುತ್ತಾರೆ ಬಸವಣ್ಣ .ಕೂಡಿಟ್ಟ ಕಾಳುಗಳನ್ನು ಅಳೆದೆನು ಬಳ್ಳದಿಂದ ತುಂಬಿದೆವು ಗೋಣಿಯ ಚೀಲವ ,ಆದರೆ ಕೂಡಲ ಸಂಗಮದೇವಯ್ಯ ಕಣದಲ್ಲಿ ಹೂಡಿದ್ದ ಮೇಟಿ ಮುರಿಯಿತ್ತು ಕಣಜ ಹಾಳಾಯಿತ್ತು ಎಂದು ತಮ್ಮ ನೋವನ್ನು ಮಾತ್ರ ತೋಡಿಕೊಂಡರು.ಶರಣರ ವೈಚಾರಿಕ ಕ್ರಾಂತಿಯ ಫಲವಾಗಿ ಬಹು ದೊಡ್ಡ ಸಂಖ್ಯೆಯಲ್ಲಿ ವಚನಗಳ ರಚನೆ ಮಾಡಿ ಅವುಗಳನ್ನು ಮುಂದಿನ ಜನಾಂಗಕ್ಕೆ ನೀಡಬೇಕೆನ್ನುವ ಅವರ ಕನಸು ಛಿದ್ರಗೊಳ್ಳ ಹತ್ತಿತು .ಹಡಪದ ಅಪ್ಪಣ್ಣನವರ ಮುಂದೆ ವಚನಗಳ ರಕ್ಷಣೆಗೆ ಸೂಚನೆ ನೀಡಿ ವಿಚಾರ ಪತ್ನಿಯಾದ ನೀಲಾಂಬಿಕೆಯವರನ್ನು ಕರೆದು ತರಲು ಹೇಳಿದರು. ನೀಲಮ್ಮ ಹಡಪದ ಅಪ್ಪಣ್ಣ ಕೂಡಲ ಸಂಗಮಕ್ಕೆ ಬರುವ ಮುನ್ನವೇ ಬಸವಣ್ಣನವರು ಐಕ್ಯವಾದರು .

ತನುವ ನೋಯಿಸಿ ಮನ ಬಳಲಿಸಿ
ನಿಮ್ಮ ಪದವಿಡಿದವರೊಳರೆ ? ಈ ನುಡಿ ಸುಡುಹಿಡುದೇ?
ಕೂಡಲ ಸಂಗಮದೇವಾ
ಶಿವ ಭಕ್ತರ ನೋವೇ ಅದು ಲಿಂಗದ ನೋವು.

ಎಂದು ಲಿಂಗಪ್ರೇಮಿ ಜಂಗಮ ಸಾಧಕ ಬಸವಣ್ಣ ತಾನು ಮರ್ತ್ಯಲೋಕದಲ್ಲಿ ಮಾಡಿದ ಕಾರ್ಯವು ಮುಗಿಯಿತು “ಬೆಟ್ಟಕ್ಕೆಬೆಳ್ಳ ಬೊಗಳಿದರೇನು ಕರೆದು ಕೋ ಸಂಗಮನಾಥ ಕರೆದುಕೊ “ಎಂದು ನಿಶ್ಚಲ ಮನಸ್ಸಿನಿಂದ ಯೋಗ ಮರಣವನ್ನು ಸ್ವೀಕರಿಸಿ ಕೂಡಲ ಸಂಗಮದಲ್ಲಿ ಬಯಲೊಳಗೆ ಬಯಲಾದರು ಬಸವಣ್ಣನವರು. ಬಸವಣ್ಣ ಕಲ್ಯಾಣದ ಕೇಂದ್ರ ಬಿಂದು ಬಸವಾಕ್ಷರ ಮಾತ್ರವಾಯಿತು ಬಸವ ಶಕ್ತಿ ಪರುಷವಾಯಿತು ನಿತ್ಯ ನೆನುವಿನ ಅರಿವಾದನು ಬಸವಣ್ಣ .

ಇದನ್ನು ಮಡಿವಾಳ ಮಾಚಿದೇವರು ಹೀಗೆ ಹೇಳಿದ್ದಾರೆ.

ಬಸವಣ್ಣನ ನೆನೆದೆನ್ನ ತನು ಬಯಲಾಯಿತ್ತು.
ಬಸವಣ್ಣನ ನೆನೆದೆನ್ನ ಮನ ಬಯಲಾಯಿತ್ತು.
ಬಸವಣ್ಣನ ನೆನೆದೆನ್ನ ಭಾವ ಬಯಲಾಯಿತ್ತು.
ಕಲಿದೇವಯ್ಯ ನಿಮ್ಮ ಶರಣ, ಮಹಾಮಹಿಮ ಸಂಗನಬಸವಣ್ಣನ ನೆನೆನೆನೆದು,
ಎನ್ನ ಸರ್ವಾಂಗ ಲಿಂಗವಾಯಿತ್ತೆಂದರಿದೆನಯ್ಯಾ.

ಅಲ್ಲಮರು” ಮಹಾ ಮಣಿಹ ಸಂಗನ ಬಸವ ಎನಗೆಯು ಗುರು ನಿನಗೂ ಗುರು ಜಗಕ್ಕೆಲ್ಲ ಗುರು ಕಾಣ ಗುಹೇಶ್ವರ ” ಎಂದಿದ್ದಾರೆ .
ಅಕ್ಕ ಮಹಾದೇವಿ “ದೇವಲೋಕಕ್ಕೂ ಬಸವಣ್ಣನೇ ದೇವರು ಮರ್ತ್ಯಲೋಕಕ್ಕೂ ಬಸವಣ್ಣನೇ ದೇವರು ,ಪಾತಾಳಲೋಕಕ್ಕೂ ಬಸವಣ್ಣನೇ ದೇವರು ನಿನಗೂ ಎನಗೂ ನಮ್ಮ ಬಸವಣ್ಣನೇ ದೇವರು ಚೆನ್ನ ಮಲ್ಲಿಕಾರ್ಜುನ “ಎಂದಿದ್ದಾಳೆ.
ಬಸವಣ್ಣ ಮೊದಲಾದ ಮಹಾಭಕ್ತರೆಲ್ಲರೂ ಕಂಡರಯ್ಯಾ.
ಮಹಾ ಕೈಲಾಸವೆಂಬ ಬೆಳ್ಳಿಯ ಬೆಟ್ಟವನೇರಿ,
ಒಳ್ಳೆಯ ಪದದಲ್ಲಿ ತಲ್ಲೀಯರಾದಿಹೆವೆಂದು, ಬಲ್ಲತನವ ಮಚ್ಚಿ ಇರಲಾಗಿ,
ಆ ಬೆಳ್ಳಿಯ ಬೆಟ್ಟ ಕಲ್ಲೋಲವಾಗಲಾಗಿ,
ಅಲ್ಲಿರ್ದವರನೆಲ್ಲಿಯೂ ಕಾಣೆ. ಇವರಿಗಿನ್ನೆಲ್ಲಿಯ ಮುಕ್ತಿ ?
ಜಲ್ಲೆಯನಡರ್ದು ಎಲ್ಲೆಯ ಪಾಯಿಸುವನಂತೆ,
ಇವರೆಲ್ಲರೂ ಬಲ್ಲಹರೆ, ಬಲ್ಲಹ ಚೆನ್ನಬಸವಣ್ಣನಲ್ಲದೆ ?
ಇವರೆಲ್ಲರನೊಲ್ಲೆನೆಂದೆ,
ಬಲ್ಲರ ಬಲ್ಲಹನೆ ನಿಃಕಳಂಕ ಮಲ್ಲಿಕಾರ್ಜುನಾ.

ಕಲ್ಯಾಣವು ಅರುಹಿನ ಮಹಾಮನೆಯಾಯಿತು ಅಲ್ಲಿ ಅಸಂಖ್ಯಾತ ಶರಣರು ಅನುಭಾವಿಗಳು ಕೈಲಾಸವೆಂಬ ಬೆಳ್ಳಿಯ ಬೆಟ್ಟವನ್ನು ಕಂಡರು, ಅನುಭವದ ತುತ್ತ ತುದಿಯಲ್ಲಿ ತಮ್ಮ ಪಾರಮಾರ್ಥಿಕ ಸಂತಸವನ್ನು ಆನಂದವನ್ನುಅನುಭವಿಸುವಾಗ ಬೆಟ್ಟ ಅಲುಗಾಡಿತ್ತು ,ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು ,ಬಿಜ್ಜಳನ ಮಗ ಸೋವಿದೇವ ಅರಾಜಕತೆ ಉಂಟು ಮಾಡಿದನು .ಜನರು ಶರಣರು ಚದುರಿದರು ಕಲ್ಯಾಣದಲ್ಲಿ ಯಾರನ್ನು ಕಾಣಲಾಗಲಿಲ್ಲ ,ಕೊನೆಗೆ ಚೆನ್ನ ಬಸವಣ್ಣ ಸಾರಥ್ಯ ವಹಿಸಿ ಅನುಭವದ ಬೀಜಗಳನ್ನುವಚನಗಳನ್ನು ಕಾಯ್ದಿಟ್ಟು ಕೆಲವೇ ಕೆಲ ಶರಣರೊಂದಿಗೆ ದುರ್ಗಮ ಕಾಡಿನೊಳಗೆ ಪ್ರಯಾಣ ಬೆಳೆಸಿ ಬೇರೆ ಬೇರೆ ಕಡೆಗೆ ಅವುಗಳ ರಕ್ಷಣೆಗೈದರು ಶರಣರು ಎಂದು ಮೋಳಿಗೆ ಮಾರಯ್ಯನವರು ಕಲ್ಯಾಣದ ರಕ್ತ ಸಿಕ್ತ ನೋವನ್ನು ಹೊರ ಹಾಕಿದ್ದಾರೆ.

ಬಸವಣ್ಣನವರ ಪತ್ನಿ ನೀಲಾಂಬಿಕೆಯಂತೂ ತನ್ನನ್ನು ಮಾಂಸ ಶರೀರದಿಂದ ಮಂತ್ರ ಶರೀರವನ್ನು ಮಾಡಿದರು ಬಸವಣ್ಣ ಎಂದಿದ್ದಾಳೆ.

ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು.
ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು.
ವ್ರತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು.
ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ.
ಸಂಗಯ್ಯ, ಎಮ್ಮಯ್ಯನವರ ಕರುಣದಿಂದ ಆನು ಪರಮಪ್ರಸಾದಿಯಾದೆನಯ್ಯ.
ನೀಲಮ್ಮಳು ಬದುಕಿನ ಸಾರ್ಥಕತೆಯು ಬಸವಣ್ಣನವರಿಂದ ಪೂರ್ಣಗೊಂಡಿತು ಎನ್ನುವ ತೃಪ್ತ ಭಾವ ಕಾಣುತ್ತೇವೆ.

ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಭಕ್ತಿಯ.
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಜ್ಞಾನವ.
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ವೈರಾಗ್ಯವ.
ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮಗೂ ಎನಗೂ ಬಸವಣ್ಣನೆ ಶಿವಪಥಿಕನಯ್ಯಾ.

ಸಿದ್ಧರಾಮ ಶರಣರು ಬಸವಣ್ಣನವರಿಂದ ಭಕ್ತಿಯ ಕಂಡೆನು ಜ್ಞಾನವನ್ನು ಅರಿದೆನು ವೈರಾಗ್ಯವ ಅನುಭವಿಸಿದೆನು ಅಷ್ಟೇ ಅಲ್ಲ ಕರುಣಿ ಕಪಿಲ ಸಿದ್ಧಮಲ್ಲಿನಾಥನನ್ನು ಬಸವಣ್ಣನಲ್ಲಿ ಕಂಡೆನು ,ಬಸವಣ್ಣ ತನಗೂ ಕಪಿಲ ಸಿದ್ಧ ಮಲ್ಲಿನಾಥನಿಗೂ ಶಿವ ಪಥಿಕನಯ್ಯಾ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಚೆನ್ನಬಸವಣ್ಣ ತಮ್ಮ ಗುರು ಬಸವಣ್ಣನವರ ಬಗ್ಗೆ ಅಭಿಮಾನದ ಮಾತಗಳನ್ನಾಡುತ್ತಾ ಜಂಗಮ ಸಾಧಕ ಬಸವಣ್ಣ ಸ್ವಯಮ ಲಿಂಗವಾದನು ಎಂದಿದ್ದಾರೆ.

ಬಸವಣ್ಣನ ಶೃಂಗದಲ್ಲಿ ತುಂಬುರ ನಾರದರು,
ಬಸವಣ್ಣನ ಲಲಾಟದಲ್ಲಿ ವೀರಗಣಂಗಳು,
ಬಸವಣ್ಣನ ನಯನದಲ್ಲಿ ಸೂರ್ಯಚಂದ್ರರು,
ಬಸವಣ್ಣನ ಕರ್ಣದಲ್ಲಿ ಗಂಗೆವಾಳುಕಸಮರುದ್ರರು,
ಬಸವಣ್ಣನ ನಾಸಿಕದಲ್ಲಿ ವಾಯು, ಬಸವಣ್ಣನ ದಂತದಲ್ಲಿ
ಭೃಂಗೀಶ್ವರದೇವರು,
ಬಸವಣ್ಣನ ಕೊರಳಲ್ಲಿ ಈರೇಳು ಭುವನಂಗಳು,
ಬಸವಣ್ಣನ ಅಂಡದಲ್ಲಿ ಅಷ್ಟಷಷ್ಟಿ ತೀರ್ಥಂಗಳು,
ಬಸವಣ್ಣನ ಬಲದೊಡೆಯಲ್ಲಿ ಅಜ, ಹರಿ, ಸರಸ್ವತಿ, ಪಂಚನದಿ, ಮಹಾಗಂಗೆ,
ಬಸವಣ್ಣನ ಮಣಿಪಾದದಲ್ಲಿ ದೇವಲೋಕದ ದೇವಗಣಂಗಳು,
ಬಸವಣ್ಣನ ಕಿರುಗೊಳಗಿನಲ್ಲಿ ಸಮಸ್ತಸಮುದ್ರಂಗಳು.
ಈ ಸಪ್ತಸಮುದ್ರಂಗಳೊಳಗಿಹ ಸಕಲಪ್ರಾಣಿಗಳಿಗೆ ಸಂಕೀರ್ಣತೆಯಾದೀತೆಂದು,
ಬಾಲದಂಡದಲೆತ್ತಿ ತಡಿಗೆ ಸೇರಿಸಿದನು ನಮ್ಮ ಬಸವಣ್ಣನು-ಇದು ಕಾರಣ,
ನಾಗಲೋಕದ ನಾಗಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.
ಮತ್ರ್ಯಲೋಕದ ಮಹಾಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.
ದೇವಲೋಕದ ದೇವಗಣಂಗಳ ಕೊಂಬುದು ಬಸವಣ್ಣನ ಪ್ರಸಾದ.
ರುದ್ರಲೋಕದ ರುದ್ರಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.-
ಇಂತು ನಮ್ಮ ಬಸವಣ್ಣನ ಪ್ರಸಾದವನುಂಡುಟ್ಟು ಕೊಂಡು ಕೊಟ್ಟು
ಅನ್ಯದೈವಂಗಳ ಹೊಗಳುವ ಕುನ್ನಿಗಳನೇನೆಂಬೆ
ಕೂಡಲಚೆನ್ನಸಂಗಮದೇವಾ.

ಸಮಗ್ರ ಪರಿಪೂರ್ಣ ಧಾರ್ಮಿಕ ಮೌಲ್ಯಗಳನ್ನು ಸ್ಥಾಪಿಸಿದ ಬಸವಣ್ಣ ದೇವಲೋಕ ಮರ್ತ್ಯಲೋಕ ನಾಗಲೋಕ ಹೀಗೆ ಎಲ್ಲರಿಗು ಅರುಹಿನ ಪ್ರಸಾದವನ್ನಿತ್ತ ಶ್ರೇಷ್ಠ ಚಿಂತಕ .ಇಂತಹ ಮಹಾಜ್ಞಾನಿ ಬಸವಣ್ಣನವರು ಕೊಟ್ಟ ಅರುಹಿನ ಮಾರ್ಗ ಬಿಟ್ಟು ಮತ್ತೆ ಅನ್ಯ ದೈವಗಳನ್ನು ಆರಾಧಿಸುವ ಕುನ್ನಿಗಳನ್ನು ನಾನು ನಂಬುವದಿಲ್ಲ ಎಂದಿದ್ದಾರೆ ಚೆನ್ನಬಸವಣ್ಣ .
ಕಲ್ಯಾಣ ಕ್ರಾಂತಿಯು ಬಯಲು ಶೂನ್ಯ ನಿಷ್ಪತ್ತಿ ಎಂಬ ಪಾರಮಾರ್ಥಿಕ ಪದಗಳನ್ನು ಪ್ರಾಪಂಚಿಕ ಬದುಕಿನಲ್ಲಿ ಸಹಜದತ್ತವಾಗಿ ತೋರಿ ಆ ಬಯಲಿನಲ್ಲಿಯೇ ಬಯಲಾದರೂ ನಮ್ಮ ಕಲ್ಯಾಣ ನಾಡಿನ ಶರಣರು .ಇದನ್ನು ಅಲ್ಲಮ ಪ್ರಭುಗಳು ಹೀಗೆ ಹೇಳಿದ್ದಾರೆ.

ಬಯಲು ಬಯಲನೆ ಬಿತ್ತಿ ,ಬಯಲನೆ ಬೆಳೆದು ಬಯಲಾಗಿ ಬಯಲಾಯಿತ್ತಯ್ಯಾ
ಬಯಲ ಜೀವನ ಬಯಲ ಭಾವನೆ ,
ಬಯಲಾಗಿ ಬಯಲಾಯಿತ್ತಯ್ಯಾ ನಿಮ್ಮ ಪೂಜಿಸಿದವರು
ಮುನ್ನವೇ ಬಯಲಾದರು ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರ ಎಂದಿದ್ದಾರೆ.

ಶರಣ ಸಿದ್ಧರಾಮರು ತಮ್ಮೊಂದು ವಚನದಲ್ಲಿ ಬಸವಣ್ಣನ ಅರಿಹು ಜ್ಞಾನ ವೈರಾಗ್ಯ ದೈವತ್ವವನ್ನು ಶೋಧಿಸುತ್ತಾ ನಿಟ್ಟಿಸುರು ಬಿಟ್ಟಿದ್ದಾರೆ.

ಬಸವಣ್ಣ ಬಸವಣ್ಣ ಭಕ್ತಿ ಬೀಜ ನಷ್ಟ.
ಬಸವಣ್ಣ ಬಸವಣ್ಣ ಬಸವಣ್ಣ ಮುಕ್ತಿಬೀಜ ನಷ್ಟ.
ಬಸವಣ್ಣ ಮೋಕ್ಷವೆಂಬುದು ಮುನ್ನವೆ ಅಡಗಿತ್ತು.
ಬಸವಣ್ಣ ತೋರದೆ ಬೀರದೆ ಹೋದೆಹೆನೆಂಬೆ,
ಮಹಾಜ್ಞಾನಿ ಬಸವಣ್ಣಾ, ನೀನೆಲ್ಲಿಯಡಗಿದೆಯೊ
ಕಪಿಲಸಿದ್ಧಮಲ್ಲಿನಾಥ ಬಸವಾ?

ಕಲ್ಯಾಣ ಕ್ರಾಂತಿಯ ನಂತರ ಅನಾಥವಾಗಿದ್ದ ಶರಣರು ಬಸವ ಚೈತನ್ಯದಿಂದ ಅಳಿದುಳಿದ ವಚನಗಳನ್ನು ಮೂಟೆ ಕಟ್ಟಿ ಅಕ್ಕ ನಾಗಮ್ಮ ಕಕ್ಕಯ್ಯ ನುಲಿಯ ಚೆಂದಯ್ಯ ಮಡಿವಾಳ ಮಾಚಿದೇವ ಸಿದ್ಧರಾಮರು ಆಯ್ದಕ್ಕಿ ಲಕ್ಕಮ್ಮ ಮಾರಯ್ಯ ಕಿನ್ನರಿ ಬ್ರಮ್ಮಯ್ಯ ಸತ್ಯಕ್ಕಮುಂತಾದ ನೂರಾರು ಚೆನ್ನಬಸವಣ್ಣನವರಮಾರ್ಗ ದರ್ಶನದಲ್ಲಿ
ವಚನಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗಿ ಮಹಾಮನೆಯ ಪರಿಕಲ್ಪನೆಯನ್ನು ಮತ್ತೆ ಜೀವಂತವಾಗಿರಿಸಿ ತಮ್ಮ ಬದುಕನ್ನೇ ತ್ಯಾಗ ಬಲಿದಾನ ಮಾಡಿದ ಶರಣರೆಲ್ಲರೂ ಪೂಜ್ಯರು . ಬಸವಣ್ಣ ಇಂತಹ ದಿವ್ಯ ಚೈತನ್ಯವನ್ನು ಕಾಯದೊಳಗೆ ಹುಡುಕಿಕೊಟ್ಟ ಅಪ್ರತಿಮ ಸಾಮಾಜಿಕ ವಿಜ್ಞಾನಿ.
ಬಸವಣ್ಣ ಬದುಕು ಸಂಘರ್ಷವಾಯಿತ್ತು ಬಸವಣ್ಣ ಆಲೋಚನೆಗಳು ವೈಚಾರಿಕತೆಯನ್ನು ಮೆರೆದವು ಬಸವಣ್ಣನವರ ಬಾಳು ಜೀವನ ಒಂದು ಸಂದೇಶ ದರ್ಶನವಾಯಿತು ಬಸವಲಿಂಗವೆಂಬೆರಡು ಅಕ್ಷರಗಳು ಜಾನಪದಕ್ಕೆ ನಿತ್ಯವಾದವು.


ಡಾ.ಶಶಿಕಾಂತ.ಪಟ್ಟಣ ರಾಮದುರ್ಗ
9552002338

Don`t copy text!