ಲಿಂಗವಿದ್ದಲ್ಲಿ ಚಿಂತೆಯಿಲ್ಲ.

ಲಿಂಗವಿದ್ದಲ್ಲಿ ಚಿಂತೆಯಿಲ್ಲ.

ಅಮೃತ ಸಾಗರದೊಳಗಿರ್ದು ಆಕಳ ಚಿಂತೆ ಏಕೆ?
ಮೇರು ಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ?
ಗುರುವಿನೊಳಗಿರ್ದು ಮುಕ್ತಿಯ ಚಿಂತೆ ಏಕೆ?
ಕರಸ್ಥಳದೊಳಗೆ ಲಿಂಗವಿರ್ದ ಬಳಿಕ
ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ.

ಯಾವುದನ್ನು ಕುಡಿದರೆ, ಮತ್ತೆಂದೂ ಹಸಿವೆಯೇ ಆಗುವುದಿಲ್ಲವೋ, ಅದು ಅಮೃತ. ಅಂಥ ಅಮೃತ ಸಾಗರದೊಳಗಿದ್ದವರು ನಮ್ಮಲ್ಲಿ ಆಕಳಿಲ್ಲವಲ್ಲ ಎಂದೂ ಹೊನ್ನಪರ್ವತದಲ್ಲಿಯೇ ವಾಸವಾಗಿದ್ದವರು, ಅಕ್ಕಸಾಲಿಗನ ಮನೆಯಲ್ಲಿಯ ಬಂಗಾರದ ಕಣಗಳು ಬಿದ್ದ ಅರಗನ್ನು ತೊಳೆದು, ಸೋಸಿ, ಆ ಕಣಗಳನ್ನು ಪಡೆಯಬೇಕೆಂದು, ಚಿಂತೆ ಮಾಡುವುದು ಹಾಸ್ಯಸ್ಪದ ಅಲ್ಲವೇ? ಸಂಸಾರದಲ್ಲಿ ಬಳಲುತ್ತಿರುವ ಜೀವಿಗೆ ಗುರುವೇ ಉಪಾಯವಾಗಿದ್ದಾನೆ. ಗುರು ಸಿಗುವವರೆಗೆ ಮಾತ್ರ ಭವಬಂಧನದ ಚಿಂತೆ ಇರುತ್ತದೆ. ಬಂಧನ ಬಿಡಿಸುವ ಗುರುದೇವ ದೊರೆತ ಬಳಿಕ ಮುಕ್ತಿ ಎಂದಾಗುವುದೋ ಎಂದು ಚಿಂತೆ ಮಾಡುವುದು ಮೂರ್ಖತನ.
ಅದೇ ರೀತಿಯಾಗಿ ಇಷ್ಟಾರ್ಥ ಪೂರೈಸುವ ಕಾಮಧೇನು, ಕಲ್ಪತರುವಿಗಿಂತ ಮಿಗಿಲಾದ, ಜಗದೊಡೆಯ ಜಗದೀಶ ಪರಮಾತ್ಮ ಸ್ವರೂಪವಾದ ಲಿಂಗವು ಕೈಯಲ್ಲಿದ್ದಾಗ ಇನ್ನಾವ ಚಿಂತೆ ಇರುತ್ತದೆ? ಒಂದು ವೇಳೆ ಲಿಂಗಧರಿಸಿಯೂ, ಲಿಂಗ ಪೂಜಿಸಿಯೂ,ಚಿಂತೆ ಬಿಟ್ಟಿಲ್ಲವೆಂದರೆ,ಆ ಲಿಂಗದಲ್ಲಿ ವಿಶ್ವಾಸವಿಲ್ಲವೆಂದೇ ಅರ್ಥ.

ಮಾರ್ಟಿನ್ ಲೂಥರ್ ಒಬ್ಬ ಸಮಾಜ ಸುಧಾರಕ. ಚರ್ಚ್ ಗಳಲ್ಲಿ ನಡೆಯುತ್ತಿರುವ ಅನ್ಯಾಯ ಬಲ್ಲವರು, ಬಡವರ ಮೇಲೆ ಮಾಡುತ್ತಿರುವ ದೌರ್ಜನ್ಯ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮೋಸ ಕಂಡು ಬೇಸತ್ತು ಮುಖ ಬಾಡಿಸಿಕೊಂಡು, ಚಿಂತಾಕ್ರಾಂತನಾಗಿ ಕುಳಿತಿದ್ದ. ಹೆಂಡತಿ, ಏಕೆ ಚಿಂತಿತರಾಗಿದ್ದೀರಿ? ಎಂದಾಗ, ಸಮಾಜದ ಸ್ಥಿತಿ -ಗತಿ ತಿಳಿಸಿ, ಇನ್ನೇನು ಇದು ಸುಧಾರಿಸುವುದೇ ಇಲ್ಲ. ಇನ್ನಷ್ಟು ಹದಗೆಡುತ್ತಿದೆ. ಏನು ಮಾಡಬೇಕು? ಎಂದು ಗೋಳಿಟ್ಟ. ಇದನ್ನು ಕೇಳಿದ ಹೆಂಡತಿ ಒಳಗೆ ಹೋದವಳೇ ಕರಿಬಟ್ಟೆಯನ್ನು ಮುಖದ ಮೇಲೆ ಹಾಕಿಕೊಂಡು, ಬಂದು ನಿಂತಳು. ಆ ದೇಶದಲ್ಲಿ ಆತ್ಮೀಯರ ಸಾವಿನ ಸುದ್ದಿ ಬಂದರೆ, ಆ ರೀತಿ ಮುಖದ ಮೇಲೆ ಕರಿ ಬಟ್ಟೆ ಹಾಕಿಕೊಳ್ಳುತ್ತಾರೆ. ಅವಳನ್ನು ಕಂಡ ಲೂಥರ್, ಏಕೆ? ಏನಾಯಿತು? ಎಂದ ಗಾಬರಿಯಿಂದ. ಅದಕ್ಕವಳು ಅವನು ಸತ್ತನಲ್ಲ? ಎಂದಳು., ಯಾರು? ಎಂದಾಗ ಅವನೇ ದೇವರು. ಹಾಗೇಕೆ ನುಡಿಯತ್ತಿರುವೆ? ಎಂದ ಲೂಥರನಿಗೆ ದೇವರು ಸತ್ತರೆ ಮಾತ್ರ ಭಕ್ತರಿಗೆ ಚಿಂತೆಯಾಗಬೇಕಲ್ಲವೇ ನಿಮಗೆ ಚಿಂತೆಯಾಗಿದೆ ಎಂದರೆ ಏನರ್ಥ? ಎಂದಳು. ಸ್ವಲ್ಪ ಹೊತ್ತು ಕವಿದ ನಿರಾಶೆಯ ನೆರಳು ಇದರಿಂದ ದೂರಾಯಿತು. ಮತ್ತೆ ಉಲ್ಲಸಿತನಾದ ಲೂಥರ್.

ಅದಕ್ಕಾಗಿಯೇ ಗುರು ಬಸವಣ್ಣನವರು ನಿಶ್ಚಿಂತ, ನಿರ್ಭಯ ನಿಮ್ಮ ಶರಣರಿಗಲ್ಲ ಎನ್ನುತ್ತಾರೆ. ನಿಶ್ಚಿಂತತೆಯೇ ಭಕ್ತನ ಲಕ್ಷಣ ಎನ್ನುತ್ತಾರೆ.

 


ಶ್ರೀಮತಿ ರೇಖಾ ಶಿ ವಡಕಣ್ಣವರ್
ಲಕ್ಷ್ಮೇಶ್ವರ

 

Don`t copy text!