ನಿಮ್ಮನೆನ್ನ ಕರಸ್ಥಲದಲ್ಲಿ ಧರಿಸಿದಡೆ
ಅಯ್ಯಾ, ನಿಮ್ಮನೆನ್ನ ಕರಸ್ಥಲದಲ್ಲಿ ಧರಿಸಿದಡೆ ನೀವೆನ್ನ ಮನಸ್ಥಲವನೆಡೆಗೊಂಡುದ ನಾನೇನೆಂಬೆನಯ್ಯಾ? ಅಯ್ಯಾ, ನಿಮ್ಮನೆನ್ನ ಪಂಚಮುಖದಲ್ಲಿ ಧರಿಸಿದಡೆ ನೀವೆನ್ನ ಸರ್ವಾಂಗವನವಗ್ರಹಿಸಿಕೊಂಡುದ ನಾನೇನೆಂಬೆನಯ್ಯಾ? ಅಯ್ಯಾ, ನಿಮ್ಮನೆನ್ನ ಅರಿವಿನಲ್ಲಿ ಬೈಚಿಟ್ಟಡೆ ನೀವೆನ್ನ ನಿರ್ಭಾವದಲ್ಲಿ ನೆಲೆಗೊಂಡುದ ನಾನೇಂಬೆನಯ್ಯಾ? ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಮುಟ್ಟಿ ಹಮ್ಮುಗೆಟ್ಟುದ ನಾನೇನೆಂಬೆನಯ್ಯಾ?
–ಆದಯ್ಯ
ಆದಯ್ಯ ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಒಬ್ಬ ಅತ್ಯಂತ ವೈಚಾರಿಕ ಧರ್ಮ ಸೂಕ್ಷ್ಮತೆಯ ಆಧ್ಯಾತ್ಮಿಕ ಸಾಧನೆಯ ಮೇರು ಪರ್ವತ . ಮೂಲತಃ ಗುಜರಾತಿನ ಸೌರಾಷ್ಟ್ರದ ಆದಯ್ಯ ಇಂದಿನ ಲಕ್ಷ್ಮೇಶ್ವರದಲ್ಲಿ ನೆಲೆಸಿ ಅಲ್ಲಿನ ಪವಾಡಶೆಟ್ಟಿ ಎಂಬ ಜೈನ ಕುಟುಂಬ ಅವರ ಮಗಳಾದ ಪದ್ಮಾವತಿಯನ್ನು ಮದುವೆಯಾಗಿ ಜೈನರಿಗೆ ಸವಾಲಾಗಿ ಅಲ್ಲಿನ ಜೈನ ಬಸದಿಯನ್ನೆ ಸೌರಾಷ್ಟ್ರ ಸೋಮೇಶ್ವರ ದೇವಾಲಯ ಮಾಡಿ ಸಂಪ್ರದಾಯ ಜೈನರಿಗೆ ಪಾಠ ಕಲಿಸಿದ ದಿಟ್ಟ ಗಣಾಚಾರಿ ಇವರು.
ನಾಲ್ಕು ನೂರಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾರೆ. .ಇವರ ವಚನಗಳಲ್ಲಿ ವೈದಿಕತೆಯ ವಿರೋಧ ಲಿಂಗ ತತ್ವ ನಿಷ್ಠ ಅಧ್ಯಾತ್ಮ ಮತ್ತು ಶರಣರ ಉದ್ಧಾತ್ತಿಕರಣ ಎದ್ದು ಕಾಣುತ್ತದೆ. ಇಂತಹ ಒಂದು ಲಿಂಗ ತತ್ವದ ಗಟ್ಟಿತನ ಮೇಲಿನ ವಚನದಲ್ಲಿ ಕಾಣಬಹುದು.
ಅಯ್ಯಾ, ನಿಮ್ಮನೆನ್ನ ಕರಸ್ಥಲದಲ್ಲಿ ಧರಿಸಿದಡೆ ನೀವೆನ್ನ ಮನಸ್ಥಲವನೆಡೆಗೊಂಡುದ ನಾನೇನೆಂಬೆನಯ್ಯಾ?
ಅರುಹಿನ ಕುರುಹಾದ ಇಷ್ಟಲಿಂಗವು ತನ್ನ ಕರ ಸ್ಥಲದಲ್ಲಿ ಧರಿಸಿದೊಡೆ ನೀವೆನ್ನ ಮನದ ಸ್ಥಲಕ್ಕೆ ಎಡೆಗೊಂಡುದು ನಾನು ನಂಬುವನಯ್ಯ.
ಇದರ ಅರ್ಥ ಕೇವಲ ಭೌತಿಕ ಇಷ್ಟಲಿಂಗ ಕೈಯಲ್ಲಿ ಹಿಡಿದು ಧ್ಯಾನಿಸಿ ಪೂಜಿಸಿದೊಡೆ ಸಾಲದು ಅದು ಮನದ ಸ್ಥಲದಲ್ಲಿ ಇಂಬಿಟ್ಟು ಕೊಂಡರೆ ಮಾತ್ರ ಲಿಂಗದ ನಿಜ ಸಾರ್ಥಕತೆ ಪಡೆಯುವುದು ಎಂದು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಅಯ್ಯಾ, ನಿಮ್ಮನೆನ್ನ ಪಂಚಮುಖದಲ್ಲಿ ಧರಿಸಿದಡೆ ನೀವೆನ್ನ ಸರ್ವಾಂಗವನವಗ್ರಹಿಸಿಕೊಂಡುದ ನಾನೇನೆಂಬೆನಯ್ಯಾ?
ಅಯ್ಯಾ ನಿಮ್ಮನ್ನು ಪಂಚೇಂದ್ರಿಯಗಳ ಮೂಲಕ ಧರಿಸಿದೋಡೆ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಇವುಗಳನ್ನು ಕೇವಲ ಭೌತಿಕ ಲಾಂಛನವಾಗಿ ಧರಿಸದೆ ಅವುಗಳ ಪಂಚ ಮಹಾಭೂತಗಳ ತತ್ವಗಳಾಗಿ ಸರ್ವಾಂಗ ಅನುಗ್ರಹಿಸಿಕೊಂಡು ಅಂಗ ಲಿಂಗ ಒಂದೇ ಎಂಬ ಭಾವವೆಂದು ನಾನು ನಂಬಿರುವೆ . ಇದು ಪರೋಕ್ಷವಾಗಿ ಅಷ್ಟಾವರಣ ಇವು ಭೌತಿಕ ವಸ್ತುಗಳಲ್ಲ ಅವು ನೀತಿ ತತ್ವಗಳು ಅಂತಪ್ಪ ತತ್ವಗಳ ಅಂಗಗುಣ ಮಾಡಿ ಕಾಯ ಶುದ್ಧಿ ವಿಚಾರ ಶುದ್ಧಿ ಆಚಾರ ಶುದ್ಧೀಕರಣಕ್ಕೆ ಕಾರಣ ಆಗಬೇಕು ಎಂಬುದು ಅದಯ್ಯನವರ ಆಶಯ
ಅಯ್ಯಾ, ನಿಮ್ಮನೆನ್ನ ಅರಿವಿನಲ್ಲಿ ಬೈಚಿಟ್ಟಡೆ ನೀವೆನ್ನ ನಿರ್ಭಾವದಲ್ಲಿ ನೆಲೆಗೊಂಡುದ ನಾನೇಂಬೆನಯ್ಯಾ?
ಅಯ್ಯಾ ನಿಮ್ಮನ್ನು ನನ್ನ ಅರಿವಿನಲ್ಲಿ ಬೈಚಿಟ್ಟಡೆ ನೀವು ನನ್ನ ನಿರ್ಭಾವದಲ್ಲಿ ನೆಲೆಗೊಂಡ ರೀತಿ ಅಮೋಘ ನಾನು ನಿಮ್ಮನ್ನು ಅರಿಯುವ ಪ್ರಾಮಾಣಿಕ ಭಾವಗಳ ಪಥವೆ ನೀವು ನೆಲೆಗೊಂಡುದು ನಾನು ನಂಬಿದ್ದೇನೆ . ತಮ್ಮನ್ನು ಲಿಂಗ ತತ್ವದ ನಿರಂತರತೆ ಮತ್ತು ಚಿಂತನೆಗೆ ಹಚ್ಚುವ ಶ್ರೇಷ್ಠ ವಿಚಾರವನ್ನು ಆದಯ್ಯ ಇಲ್ಲಿ ಹೇಳಿದ್ದಾರೆ.
ದೈವತ್ವವನ್ನು ಅರಿಯುವ ಭಾವವೇ ನಿರ್ಭಾವತೆಯನ್ನು ಹೊಂದಿದಾಗ ಅದುವೇ ದೈವತ್ವದ ನಿಜ ಸ್ವರೂಪ .ದೇವರನ್ನು ಹೊರಗೆ ಕಾಣದೆ ಒಳ ಮನಸ್ಸಿನಲ್ಲಿ ತುಂಬಿಕೊಳ್ಳಬೇಕು ಇಂತಹ ಸೂಕ್ಷ್ಮ ವಿಚಾರವನ್ನು ಆದಯ್ಯ ಶರಣರು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ.
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಮುಟ್ಟಿ ಹಮ್ಮುಗೆಟ್ಟುದ ನಾನೇನೆಂಬೆನಯ್ಯಾ?
ಸೌರಾಷ್ಟ್ರ ಸೋಮೇಶ್ವರನೆಂಬ ಸ್ಥಾವರ ಲಿಂಗವ ಮುಟ್ಟಿ ಹಮ್ಮುಗೆಟ್ಟೇನು . ಇಷ್ಟಲಿಂಗ ಕೈಯಲ್ಲಿ ಹಿಡಿದು ಅದನ್ನೇ ತದೇಕ ಚಿತ್ತದಿಂದ ನೋಡುತ್ತಾ ಕಾಯಕ ದಾಸೋಹ ತತ್ವಗಳನ್ನು ಮರೆತಿರುವ ಭಕ್ತನನ್ನು ತಿವಿಯುವ ಕಾರ್ಯ ವಚನಕಾರ ಮಾಡಿದ್ದಾರೆ .
ಇಲ್ಲಿ ಒಟ್ಟಾರೆ ಸ್ಥಾವರವನ್ನು ವಿರೋಧಿಸುವ ಜೊತೆ ಜೊತೆಗೆ ಇಷ್ಟ ಲಿಂಗವನ್ನು ಸ್ಥಾವರಿಕರಿಸುವ ಭಕ್ತರನ್ನು ಎಚ್ಚರಿಸಿ ಲಿಂಗ ತತ್ವ ತನು ಮನ ಘನ ಅಂಗ ಲಿಂಗದ ಪ್ರಜ್ಞೆ ಸಾಕ್ಷಿ ಎಂಬುದನ್ನು ಹೇಳಿದ್ದಾರೆ .ಸ್ಥಾವರ ಪೂಜೆ ಸಲ್ಲದು ಜೊತೆಗೆ ಇಷ್ಟ ಲಿಂಗವನ್ನು ಸಮಷ್ಟಿ ಪ್ರಜ್ಞೆ ಎಂದು ತಿಳಿಯಬೇಕು
–ಡಾ ಶಶಿಕಾಂತ ಪಟ್ಟಣ ರಾಮದುರ್ಗ