ಅಪ್ಪ ಎಂದರೆ ಆಕಾಶ
ನನ್ನ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಜೊತೆಗೆ ಇದ್ದು ಕೈ ಹಿಡಿದು ನಡೆಸಿದ ತಂದೆ ಮತ್ತು ತಂದೆ ಸ್ಥಾನದಲ್ಲಿರುವ ಚಿಕ್ಕಪ್ಪ, ದೊಡ್ಡಪದಪ, ಸೋದರ ಮಾವ, ಅಪ್ಪನ ಸ್ನೇಹಿತರು ಎಲ್ಲ ತಂದೆಯ ಸ್ಥಾನದಲ್ಲಿರುವ ಹಿರಿಯರಿಗೆ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು
ಅಪ್ಪ ಎಂದರೆ ಆಕಾಶ ಆಲಯದ ಮರ ಎಲ್ಲವೂ ಕಾವ್ಯಾತ್ಮಕ ಮಾತುಗಳು. ಅಪ್ಪ ಎಂದರೆ ಶಕ್ತಿ, ಅಪ್ಪ ಎಂದರೆ ಧೈರ್ಯ, ಅಪ್ಪ ಎಂದರೆ ರಕ್ಷಣೆ ಇದು ಅನಿಸಿಕೆ. ಅಪ್ಪ ಎಲ್ಲ ಮಕ್ಕಳಿಗೆ ಮೊದಲ ಹಿರೋ, ಅದರಲ್ಲೂ ಹೆಣ್ಣು ಮಕ್ಕಳಿಗೆ ಅಂತೂ ಪ್ರಪಂಚ. ಅಪ್ಪಂದಿರಿಗೂ ಅಷ್ಟೇ ಹೆಣ್ಣು ಮಕ್ಕಳ ಮೇಲೆ ಮೋಹ ಪ್ರೀತಿ ಹೆಚ್ಚೆ.
ನಮ್ಮಪ್ಪ ನೋಡಲು ಚಂದ ಬಹಳ ಎತ್ತರವೂ ಅಲ್ಲ ಕುಳ್ಳಗೂ ಇಲ್ಲ 5ಅಡಿ 10 ಅಂಗುಲ. ಕೆಂಪು ಎಲ್ಲದಿದ್ದರೂ ಕಪ್ಪೂ ಅಲ್ಲ. ನನಗೆ ನನ್ನಪ್ಪಪನಿಂದ ಬಳುವಳಿ ಎತ್ತರ ಮತ್ತು ಅಪ್ಪನ ಹಲ್ಲುಗಳು. ನಾನು ನಕ್ಕರೆ ಅಪ್ಪ ನಕ್ಕಂತೆ ಕಾಣುತ್ತದೆ. ನೋಡಲು ಸಂಪೂರ್ಣ ಅಮ್ಮನ ಹಾಗೆ ಇದ್ದರೂ ನನ್ನ ನಗು ನಮ್ಮಪ್ಪನ ಕೊಡುಗೆ
ಅಪ್ಪನಿಂದ ನನಗೆ ಬಂದಿರುವ ಬಳುವಳಿ ಬಹಳವೇ ಇವೆ. ಸಿಟ್ಟು , ನಾನು ಹೇಳದ್ದೇ ಆಗಬೇಕು ಎನ್ನುವ ಹಠ. ಧಾರ್ಮಿಕ ಶ್ರದ್ಧೆ, ಸಾಹಿತ್ಯ, ಸಂಗೀತ ಮತ್ತು ಬರೆಯುವುದು ಓದುವುದರ ಆಸಕ್ತಿ. ದೈವ ಭಕ್ತಿ ಇನ್ನು ಎಷ್ಟೋ….. ನನ್ನಪ್ಪ ಕವಿ, ಇಂಜಿನಿಯರ್, ಬಹಳ ಪ್ರೀತಿ ಮಾಡುವ ಗಂಡ, ಮಗಳನ್ನು ಸದಾ ಪ್ರೋಕೆಕ್ಟಿವ್ ಆಗಿ ಕಾಪಾಡುವ ತಂದೆ, ಮೊಮ್ಮಕ್ಕಳ ಗೆಳೆಯನಾಗಿ ಅವರೊಡನೆ ಸಂತಸ ಪಡುವ ಪ್ರೀತಿ ಅಜ್ಜ.
ನಮ್ಮಪ್ಪ ದೊಡ್ಡ ಮಗನಾಗಿ ಹುಟ್ಟಿ ಹಳ್ಳಿಯಿಂದ ಬೆಂಗಳೂರಿಗೆ ಬಂದು ಶ್ರಮ ವಹಿಸಿ ಕೆಲಸ ಮಾಡಿದವರು. ತಮ್ಮಂದಿರನ್ನು ಬೆಂಗಳೂರಿಗೆ ಕರೆಸಿಕೊಂಡು ಓದಿಸಿ, ಕೆಲಸ ಸೇರುವವರೆಗೂ ಅವರ ಆಧಾರವಾಗಿ ನಿಂತವರು. ತಂದೆ-ತಾಯಿಯ ವಿಧೇಯ ಮಗನಾದವರು. ತಂದೆ-ತಾಯಿ ಮಾತಿಗೆ ಬೆಲೆ ಕೊಟ್ಟು ಬದುಕಲು ನಮ್ಮ ಕಾಲದವರಿಗೆ ಆಗುವುದೇ ಇಲ್ಲವೇನೋ. ನಾನು 9ನೇ ತರಗತಿ ಇದ್ದಾಗ ನಮ್ಮ ತಾತ ತೀರಿಕೊಂಡಿದ್ದು ಅಲ್ಲಿಯವರೆಗೂ ನಾನು ಎಂದೂ ಅಪ್ಪ ತಾತನ ಎದುರು ಮಾತನಾಡಿದ್ದು ನೋಡಿಯೇ ಇಲ್ಲ. ನಾನು ಸಣ್ಣವಳಿದ್ದಾಗ ನನ್ನಪ್ಪ ಈಗಿನಂತೆ ಇರಲಿಲ್ಲ ಅಪ್ಪನ ಹಳೆಯ ಫೋಟೋ ನೋಡಿದರೆ ದಪ್ಪ ಮೀಸೆ ಬುಟ್ಟಿಯಂತಹ ಕೂದಲು ವೀರಪ್ಪನ್ ಎನ್ನುವ ಹಾಗಿದ್ದ ನಮ್ಮಪ್ಪ ಇಂದು ಆಚಾರ್ ಎಂದು ಕರೆಸಿಕೊಳ್ಳುವ ರೀತಿ ಬದಲಾಗಿದ್ದಾರೆ.
ನಾನು ಎಲ್ಲರಂತೆ ಅಪ್ಪನ ಮುದ್ದಿನ ಮಗಳು ಅಪ್ಪನ್ನು ಬಿಟ್ಟು ಇರುತ್ತಿದ್ದೇ ಇಲ್ಲ ಅಪ್ಪನೂ ಕೂಡ ಒಮ್ಮೆ ಸಣ್ಣವಳಿದ್ದಾಗ ಸೋದರರ ಮಾವನ ಜೊತೆ ರಜೆಗೆ ಅಜ್ಜಿಯ ಮನೆಗೆ ಹೊದಾಗ ಅಪ್ಪ ನಾನು ಹೋದ ಒಂದು ಗಂಟೆಯಲ್ಲಿಯೇ ಪುನಃ ಕರೆತರಲು ತಯಾರಿದ್ದರು. ಇನ್ನೊಮ್ಮೆ ಅಪ್ಪ ನನ್ನನ್ನು ಬಿಟ್ಟು ಊರಿಗೆ ಹೋದಾಗ ನನಗೆ ಜ್ವರ ಬಂದಿತ್ತು. ಹೀಗೆ ನನ್ನ ಮತ್ತು ನನ್ನಪ್ಪನ ಪ್ರೀತಿ. ಈಗೀಗ ನಾನು ನನ್ನ ಮಕ್ಕಳಿಗೆ ಬಯ್ಯುವಂತೆ ಒಮ್ಮೆ ಅಪ್ಪನನ್ನು ಬಯ್ಯಬೇಕಾದಾಗ ಪಾಪ ನಮ್ಮಪ್ಪ ನನ್ನ ಒಮ್ಮೆಯೂ ಬಯ್ಯುತ್ತಿರಲಿಲ್ಲ ನಾನು ಹೀಗೆ ಬಯ್ಯ ಬೇಕಾಗುತ್ತದೆ ಎಂದು ಬೇಸರವಾಗುತ್ತದೆ.
ಇನ್ನು ಅಪ್ಪನಂತೆ ಚಿಕ್ಕಪ್ಪಂದಿರು ಕೂಡ ವಿಶೇಷ ಪ್ರೀತಿಯೇ ನನಗೇ ಇಬ್ಬರು ಚಿಕ್ಕಪ್ಪಂದಿರು ಇಬ್ಬರಿಗೂ ನಾನು ಅಚ್ಚುಮೆಚ್ಚು ಸುಮಾರು 10-15ವರ್ಷಗಳ ಮೇಲೆ ಮನೆಗೆ ಬಂದ ಪುಟ್ಟ ಮಗು ಎಂ ಸಂಭ್ರಮ ನನ್ನ ಚಿಕ್ಕಪ್ಪಂದಿರಿಗೆ ಇಬ್ಬರೂ ನನಗೆ ದಿನವೂ ಊಟ ಮಾಡುವಾಗ ಮೊದಲ ತುತ್ತುಗಳನ್ನು ಉಣಿಸಿ ತಾವು ಉಣ್ಣುತ್ತಿದ್ದರು ಎಂದು ನನ್ನಮ್ಮ ಹೇಳುತ್ತಿದ್ದಳು. ನನಗೆ ನೆನಪು ಇರುವ ಹಾಗೆ ಇಬ್ಬರೂ ಎಲ್ಲೇ ಹೋಗಲಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು.
ನಮ್ಮ ದೊಡ್ಡ ಚಿಕ್ಕಪ್ಪ ದಿನವೂ ನನ್ನನ್ನು ಆಟೋದಲ್ಲಿ ಒಂದು ರೌಂಡ್ ಕರೆದುಕೊಂಡು ಹೋಗುತ್ತಿದ್ದರು, ನಾನು ಮೊದಲು ಕಲಿತ ಪದವೇ ಆಟೋ, ಈಗಲೂ ನಾನು ಆಟೋರಾಣಿ. ನನ್ನ ದೊಡ್ಡ ಚಿಕ್ಕಪನಿಗೆ ಎಷ್ಟು ಮುದ್ದು ಎಂದರೆ ನನಗೆ 8 ವರ್ಷ ಆಗಿ ಕಾಲು ನೆಲಕ್ಕೆ ಹತ್ತುತ್ತಿದ್ದರೂ ಎತ್ತಿಕೊಂಡು ತಿರುಗುತ್ತಿದ್ದರು.
ಎರಡನೇ ಚಿಕ್ಕಪ್ಪನೂ ಕೂಡ ಸಮಯ ಇದ್ದಾಗ ತಿರುಗಿಸುತ್ತಿದ್ದರು. ನಮ್ಮ ಸುರೇಶ ಕಾಕಾನಿಂದ ನನಗೆ ಬಳುವಳಿ ಬರವಣಿಗೆ , ಸಣ್ಣವಳಿದ್ದಾಗಲೇ ಕಾಕಾ ಕಥೆ ಬರೆದರೆ ನಾನು ಮಕ್ಕಳ ಕಥೆ ಬರೆಯುತ್ತೇನೆ ಎಂದು ಅನ್ನುತ್ತಿದ್ದೆನಂತೆ. ಶೈಲಿ ಬರವಣಿಗೆಯ ವಿಷಯಗಳು ಬೇರೆ ಆದರೂ ನನ್ನ ಅಭಿರುಚಿಗೆ ತಕ್ಕಂತೆ ಬರೆಯುತ್ತಿದ್ದರೂ ನಮ್ಮ ಚಿಕ್ಕಪ್ಪನವರ ಮಾರ್ಗದರ್ಶನ ಇದ್ದೇ ಇದೆ. (ಡಾ ||ಸುರೇಶ ಪಾಟೀಲ್, ಅವರು, ನಿವೃತ್ತ ಪ್ರಾಧ್ಯಾಪಕರು, ಖ್ಯಾತ ಕಾದಂಬರಿಕಾರರು, 12 ಕಾದಂಬರಿ, ಕಥಾ ಸಂಕಲನ, ಪ್ರವಾಸ ಕಥನ ಮೊದಲಾದ ಪುಸ್ತಕಗಳನ್ನು ಬರೆದಿದ್ದಾರೆ. 10-15 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪಡೆಯಲು ಮಾರ್ಗದರ್ಶನ ಮಾಡಿದ್ದಾರೆ )
ಹೀಗೆ ಮಕ್ಕಳ ಎಲ್ಲ ಕಾಲದಲ್ಲೂ ಜೊತೆಗೆ ಇರುವ ಅಪ್ಪಂದಿರು ಮತ್ತು ತಂದೆಯ ಸ್ಥಾನದಲ್ಲಿರುವ ಎಲ್ಲರಿಗೂ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು
-ಮಾಧುರಿ