ಅಪ್ಪ ದಡ ಸೇರಿಸೋ ತೆಪ್ಪ
ವರ್ಷಪೂರ್ತಿ ಜೀವನದ ಜಂಜಾಟದಲ್ಲೇ ಸಿಕ್ಕು
ಅಪರೂಪಕ್ಕೊಮ್ಮೆ ಮನಸಿಗೆ ಖುಷಿಯಾದಾಗ ಯಾರಿಗೂ ಕಾಣದಂತೆ ಮೀಸೆಯಲ್ಲೇ ನಕ್ಕು .
ಮತ್ತೆ ಕೆಲಸಕ್ಕೆ ಹಾಜರಾಗುವ ಕುಟುಂಬವೆಂಬ ಕೈತೋಟದ ಮಾಲಿ.
ಅವನೇ ನಂಬಿದ ಮನಸುಗಳ ರಕ್ಷಣೆಯ ಬೇಲಿ.
ಆಗದವರೆಷ್ಟೇ ಮಾಡಿದರೂ ಗೇಲಿ
ಕೆಡಿಸಿಕೊಳ್ಳುವದಿಲ್ಲ ತಲಿ
ತಾ ಓದದಿದ್ದರೂ ಸಾಲಿ
ಮಕ್ಕಳ ಸಾಲಿ ಫೀಸಿಗಾಗಿ ಮೈಯ
ಬೆವರೆಲ್ಲ ಖಾಲಿ.
ಬಣ್ಣದ ಅಂಗಿ ಉಡಲಿಲ್ಲ,
ಕಣ್ತುಂಬ ನಿದ್ದಿ ಮಾಡುವದಿಲ್ಲ.
ಹೆಂಡತಿ ಮಕ್ಕಳ ಒಳಿತಿಗಾಗಿ ಹಗಲಿರುಳೆನ್ನದೆ ದುಡಿಯುವದಾ ಬಿಡುವದಿಲ್ಲ
ಅಪ್ಪನಂತೆ ಕಾಯುವದು ಆ ಗಡಿಯಲ್ಲಿನ ಸೈನಿಕನಿಗೂ ಸಾಧ್ಯವಿಲ್ಲ.
ಅಪ್ಪನೆಂದರೆ ಶಿವ, ಅಮ್ಮನೆಂದರೆ ಪಾರ್ವತಿ.
ಮಕ್ಕಳೆಲ್ಲ ಆ ದೇವರ ಸಂತತಿ.
ಅಪ್ಪನೆಂದರೆ ಎಲ್ಲರಿಗೂ ಪ್ರೀತಿ
ಸಲಿಗೆಯಿಂದ ಮಾತನಾಡಿಸಲು ಸ್ವಲ್ಪ ಭೀತಿ,
ಬಡತನವೆ ಬೇಸತ್ತು ಶರಣಾಗಬೇಕು ಅಪ್ಪನ ಚಲದಮುಂದೆ.
ಐರಾವತವೇ ಸೋತು ಸುಣ್ಣವಾಗಬೇಕು ಅಪ್ಪನೋರುವ ಕುಟುಂಬದ ಅಂಬಾರಿಯ ಕಂಡು.
ಅಪ್ಪನೆಂದರೆ ಬಿಸಿ ಬಿಳಿಜೋಳದ ರೊಟ್ಟಿ ಉಂಚೆಟ್ನಿ ಮೇಲಿನ ಹೆತ್ತುಪ್ಪ.
ಸಾಗರದ ಸುಳಿಗೆ ಸಿಲುಕಿದರೂ ದಡ ಸೇರಿಸೋ ತೆಪ್ಪ.
ಅಪ್ಪನ ನೋವುಂಡ ಒಡಲು ತೀರವೇ ಕಾಣದ ಕಡಲು.
ಕುಟುಂಬದ ಕೂಗಿಗೆ ನೆತ್ತರದ ಮಡುವಿನಲ್ಲಿದ್ದರೂ ಆಕಾಶದೆತ್ತರಕ್ಕೆ ಪುಟಿದು ನಿಲ್ಲುವ ಬರಸಿಡಿಲು.
ರಚನೆ:- ಸುರೇಶ ಬಳಗಾನೂರು