ನಮ್ಮಪ್ಪನೇ ಹಿರೋ
೧೯೭೦ ಕಾಲ ಮಾಂಸದ ಮುದ್ದೆಯಾಗಿದ್ದ ನಮ್ಮ ತಾಯಿಯ ಉಡಿಯಲ್ಲಿನ ಕಂದ ನಾನು,ಕಾಲ ಸಾಗಿ ಮಾಗಿ ನಾನು ಶೈಶವದಿಂದ ಬಾಲ್ಯಕ್ಕೆ ಕಾಲಿಟ್ಟಾಗ ಬೆರಗುಗಣ್ಣಿನಿಂದ ನಮ್ಮ ತಂದೆಯನ್ನು ನೋಡುತ್ತಾ ಅವರ ಹಾವ ಭಾವ ಉಡುಗೆ ತೊಡುಗೆಗಳನ್ನು ಅನುಕರಿಸುತ್ತಿದ್ದೆ ಏಕೆಂದರೆ ನನಗೆ ಮೊದಲ ಸ್ನೇಹಿತ ನಮ್ಮಪ್ಪನೇ ಆಗಿದ್ದನು.
ಊರಿನ ಜಾತ್ರೆ,ಹಬ್ಬ,ಪುರಾಣ ಆಧ್ಯಾತ್ಮಿಕ ಕಾರ್ಯಕ್ರಮಗಳು ಅಪ್ಪನಿಲ್ಲದೇ ಸಾಗುತ್ತಿರಲಿಲ್ಲ,ಅಂತಹ ಸಮಾರಂಭಗಳಿಗೆ ನಾನು ಹಾಜರಾಗಿ ಭಜನೆ ಮಾಡುತ್ತಿದ್ದೆ,ಸೇವೆ ಸಲ್ಲಿಸುತ್ತಿದ್ದೆ.ಬೆಳೆದು ದೊಡ್ಡವನಾಗಿ ಬಾಲಕನಾಗಿ ಶಾಲೆಗೆ ಸೇರಿ ಮುಂಚೂಣಿ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ನಮ್ಮಪ್ಪ ತನ್ನ ಮಗನ ಬಗ್ಗೆ ಊರಿನ ತಮ್ಮ ಗೆಳೆಯರು ಮಾತನಾಡಿದಾಗ ಹೆಮ್ಮೆ ಪಡುತ್ತಿದ್ದನು.
ಹತ್ತನೇ ತರಗತಿಯಲ್ಲಿ ಊರಿನ ಹೈಸ್ಕೂಲ್ಗೆ ಪ್ರಥಮನಾಗಿ ನಾನು ಉತ್ತೀರ್ಣನಾದಾಗ ಬಹಳ ಆನಂದದಿಂದ ನಮ್ಮ ಕುಟುಂಬ ಊರ ಜನಕ್ಕೆ ತಕ್ಕ ರೀತಿ ಪ್ರಸಾದ ನೀಡಿತ್ತು ಅದಕ್ಕೆ ಕಾರಣ ಅಪ್ಪನೆಂಬ ಆಲದ ಮರ.
ಕಾಲೇಜಿನಲ್ಲಿ ವಿಶ್ವವಿದ್ಯಾಲಯಕ್ಕೆ ರ್ಯಾಂಕ್ ಗಳಿಸಿದಾಗಲೂ ಊರಿಗೆ ಊಟ ಹಾಕಿಸಿದ್ದರು ನಮ್ಮ ತಂದೆ ನಾನು ಸರಕಾರಿ ನೌಕರಿ ಸೇರುವುದರೊಳಗೆ ೧೯೯೩ ರ ಏಪ್ರಿಲ್ ತಿಂಗಳಲ್ಲಿ ಟಿ ಬಿ ಖಾಯಿಲೆಗೆ ತುತ್ತಾದ ತಂದೆ ನಾನು ರಕ್ತದಾನ ಮಾಡಿದರೂ ಜವರಾಯನ ಸೆಳೆತಕ್ಕೆ ಬಲಿಯಾಗಿ ನಮ್ಮನ್ನು ಅಗಲಿದರು.
ನಮ್ಮಪ್ಪ ಈಗ ಇಲ್ಲವಾದರೂ ಅವರ ಆದರ್ಶಗಳು ನಮ್ಮನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಮಿನುಗುವಂತೆ ಮಾಡುತ್ತಿವೆ.
ಅಪ್ಪಾ ನೀವೀಗ ನಮ್ಮ ಜೊತೆಯಲ್ಲಿ ಇರಬೇಕಿತ್ತು ತುಂಬಾ ತುಂಬಾ ನಿಮ್ಮ ನೆನಪು ಕಾಡುತ್ತಿದೆ,ಅಮ್ಮ ನಿಮ್ಮ ಬಗ್ಗೆ ತುಂಬಾ ನೋವು ಪಡುತ್ತಿದ್ದಾಳೆ ಕನಸಿನಲ್ಲಾದರೂ ದರ್ಶನ ಕೊಡಿ.
–ಪ್ರೀತಿಯಿಂದ ನಿಮ್ಮ ಮಗ ಶಂಕರಪ್ಪ.ಗು.ಮಾಳೆಕೊಪ್ಪ.