ಅರಳು ಮಲ್ಲಿಗೆಯವರ ವ್ಯಕ್ತಿತ್ವ ಅನಾವರಣಗೊಳಿಸುವ ಕೃತಿ
ಅರಳುಮಲ್ಲಿಗೆ ಪಾರ್ಥಸಾರಥಿ
ಯವರು ಈ ನಾಡು ಕಂಡ ಮಹತ್ವದ ದಾಸಸಾಹಿತ್ಯದ ವಿದ್ವಾಂಸರು. ಓದಿದ್ದು ವಾಣಿಜ್ಯ ಶಾಸ್ತ್ರವಾದರೂ ಅಪ್ಪಿಕೊಂಡಿದ್ದು ದಾಸಸಾಹಿತ್ಯವನ್ನು. 1948 ಮಾರ್ಚ 22ರಂದು ಜನಿಸಿದ ಅರಳುಮಲ್ಲಿಗೆ ಪಾರ್ಥಸಾರಥಿಯವರು ಪ್ರಾಥಮಿಕ ಶಿಕ್ಷಣವನ್ನು ಸ್ವಂತ ಗ್ರಾಮದಲ್ಲಿ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ದೊಡ್ಡಬಳ್ಳಾಪೂರದಲ್ಲಿ,ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದವರು. ಬಿಕಾಂ. ಎಂಕಾಂ ಪದವಿ ಮುಗಿಸಿದ ಮೇಲೆ ಬ್ಯಾಂಕಿನ ಉದ್ಯೋಗಕ್ಕೆ ಮನಸ್ಸು ಮಾಡದೆ ಎಂ.ಇ.ಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ 1971 ರಿಂದ 1997 ರವರೆಗೆ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯನ್ನು ಪಡೆದು ಹರಿದಾಸಸಾಹಿತ್ಯದ ಅಧ್ಯಯನ ಪ್ರಸರಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1971ರಲ್ಲಿ ನವ್ಯದ ಪ್ರಭಾವಕ್ಕೊಳಗಾಗಿ ‘ಹೂವು ಹಾವು ತೀರ್ಥ’ ಎನ್ನುವ ಕಾದಂಬರಿ ಬರೆದರಾದರೂ ಹರಿದಾಸ ಸಾಹಿತ್ಯದ ಒಲವು ಅವರನ್ನು ‘ಹರಿದಾಸ ಸಾಹಿತ್ಯ ಅಕಾಡೆಮಿ’ ಹುಟ್ಟು ಹಾಕಲು ಪ್ರೇರಣೆ ನೀಡಿತು. ಪ್ರವಚನವನ್ನೇ ಗಂಭೀರವಾಗಿ ತೆಗೆದುಕೊಂಡು ದಾಸ ಸಾಹಿತ್ಯದ ಸುಗಂಧವನ್ನು ನಾಡಿನ ಒಳಗಡೆ, ಹೊರಗಡೆ ಅಲ್ಲದೆ ನಲವತ್ತಕ್ಕೂ ಹೆಚ್ಚು ದೇಶಗಳಲ್ಲಿ ಪಸರಿಸಿದರು. ಅರಳು ಹುರಿದಷ್ಟೆ ಅಸ್ಖಲಿತವಾಗಿ, ನಿರರ್ಗಳವಾಗಿ ಮಾತನಾಡುವ ಪಾರ್ಥಸಾರಥಿಯವರ ಪ್ರವಚನದ ಮೋಡಿಗೆ ಒಳಗಾಗದವರೇ ಇಲ್ಲ.
4500ಕ್ಕೂ ಹೆಚ್ಚು ಪ್ರವಚನಗಳನ್ನು ದೇಶ ವಿದೇಶಗಳಲ್ಲಿ ನೀಡಿರುವ ಪಾರ್ಥ ಸಾರಥಿಯವರು 60ಕ್ಕೂ ಹೆಚ್ಚಿನ ಗ್ರಂಥಗಳನ್ನು ರಚಿಸಿದ್ದಾರೆ. ‘ಪಾರ್ಥಸಾರಥಿ ವಿಠಲದಾಸರು’ಅಂಕಿತದಿಂದ ದಾಸರಾದಿಗಳಂತೆ ಕೀರ್ತನೆ,ಸುಳಾದಿ,ಉಗಾಭೋಗಗಳನ್ನು ಕೂಡಾ ರಚಿಸಿದ್ದಾರೆ. ವಾದಿರಾಜ ಸಂಪುಟ, ಶ್ರೀವ್ಯಾಸರಾಜ ಸಂಪುಟ, ಪುರಂದರ ಸಂಪುಟ ಮೊದಲಾದ ಮಹತ್ವದ ಕೃತಿಗಳನ್ನು ಕೊಟ್ಟಿದ್ದಾರೆ. ಅವರು ಸಂಪಾದಿತ ‘ಹರಿದಾಸರ 10,000 ಹಾಡುಗಳು “ಶತಮಾನದ ಗ್ರಂಥ”ವೆಂದು ಹರಿದಾಸಸಾಹಿತ್ಯ ವಲಯದಲ್ಲಿ ಚರ್ಚಿತವಾಗುತ್ತಿದೆ. ಇವುಗಳಲ್ಲದೆ ತಮ್ಮ ಸುಮಧುರ ಕಂಠದಿಂದ ಹಲವಾರು ಧ್ವನಿಸುರಳಿಗಳನ್ನು ನೀಡಿದ್ದಾರೆ.
ಬನ್ನಂಜೆಯವರ ನಂತರ ‘ವಿದ್ಯಾವಾಚಸ್ಪತಿ’ ಗೌರವಕ್ಕೆ ಪಾತ್ರರಾದವರು. ದಾಸಸಾಹಿತ್ಯ ಪ್ರದ್ಯುಮ್ನ ಮೊದಲಾದ ಗೌರವಗಳ ಜೊತೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಅಮೆರಿಕಾದ ‘ಹ್ಯೂಮನ ಸ್ಪ್ಯೂರಿಚುವಲ್ ವ್ಯಾಲ್ಯೂಸ್’ ಗೌರವ, ಅಮೆರಿಕಾದ ‘ವಿಜನರಿ ಹೆರಿಟೇಜ್’ ಗೌರವ ಮೊದಲಾದ ಹತ್ತು ಹಲವಾರು ಗೌರವಗಳಿಗ ಪಾತ್ರರಾಗಿದ್ದಾರೆ
ಇಂತಹ ಮಹನೀಯರ ಬದುಕಿನ ಸಾಧನೆಯ ಚಿತ್ರಗಳನ್ನು ತೋರಿಸುವ ಏಳು ಅಭಿನಂದಾನಾ ಗ್ರಂಥಗಳು ಬಂದಿರುವುದು ಅವರ ಹಿರಿದಾದ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
ಆತ್ಮೀಯ ಮಿತ್ರರಾದ ವೆಂಕಟೇಶ ನವಲಿಯವರು ಪಾರ್ಥಸಾರಥಿಯವರ ಜೀವನ,ಸಾಧನೆ,ಹಾಗೂ ವಿಷ್ಣುಸಹಸ್ರನಾಮ ಕ್ಷೇತ್ರಗಳಿಗೆ ಅವರ ಕೊಡುಗೆ ಕುರಿತು ಮಾಡಿದ ಸಂಶೋಧನಾ ಗ್ರಂಥವೊಂದು ಕೃತಿಯಾಗಿ ಬಿಡುಗಡೆಗೊಳ್ಳುತ್ತಿರುವುದು ಹೆಮ್ಮೆಯ,ಸಂತಸದ ಸಂಗತಿಯಾಗಿದೆ,
ಕೃತಿಯ ಕತೃ, ಆತ್ಮೀಯ ಗೆಳೆಯರಾದ ವೆಂಕಟೇಶ ನವಲಿಯವರದು ಹೆಮ್ಮೆ ಪಡುವಂತಹ ವ್ಯಕ್ತಿತ್ವ.ಸದಾ ಪಾದರಸದಂತೆ ಎಲ್ಲಾ ಕಡೆಯಲ್ಲೂ ಓಡಾಡುವ,ಲವಲವಿಕೆಯಿಂದ, ಜೀವನೋತ್ಸಾಹದಿಂದ ಎಲ್ಲರೊಂದಿಗೂ ಒಂದಾಗುವ ಹಲವರ ಅಭಿಮಾನ ಗಳಿಸಿಕೊಂಡಿರುವ ಸಹೃದಯಿ. ನಮ್ಮ ಲಿಂಗಸೂಗೂರು ತಾಲೂಕಿನ ನವಲಿ ಮೂಲದವರು ಎನ್ನುವುದು ವೈಯಕ್ತಿಕ ಹೆಮ್ಮೆ ಕೂಡಾ. ವೃತ್ತಿಯಿಂದ ಪ್ರೌಢಶಾಲಾ ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ನವಲಿಯವರು ಒಳ್ಳೆಯ ಹಾಡುಗಾರ, ಅತ್ಯುತ್ತಮ ನಿರೂಪಕ ಮೇಲಾಗಿ ಒಳ್ಳೆಯ ಸಂಘಟಕ. ಬಹುದಿನಗಳಿಂದ ತಮ್ಮೊಳಗೊಬ್ಬ ಬರಹಗಾರನನ್ನು ತಮ್ಮಲ್ಲೆ ಅಡಗಿಸಿಕೊಂಡಿದ್ದ ನವಲಿಯವರು ಕಳೆದ ದಶಕದಿಂದ ಸಾಹಿತ್ಯಿಕವಾಗಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕವಿತೆ,ಮಕ್ಕಳ ಕವಿತೆ,ಹೈಕುಗಳ ಮೂಲಕ ಗಮನ ಸೆಳೆದಿದ್ದಾರೆ.ಈಗಾಲೇ ‘ವಚನ ಪ್ರಸೂನ ಮಾಲಾ’ ಎಂಬ ಶ್ರೀ ಜೋಡು ವೀರಾಂಜನೇಯ ದೇವಸ್ಥಾನದ ಸ್ಮರಣ ಸಂಚಿಕೆಯನ್ನು ಹೊರತಂದು ತಮ್ಮ ಸಾಮರ್ಥ್ಯ ತೋರಿರುವ ನವಲಿಯವರು ‘ಕೆಂದಾವರೆ’ ಹೈಕು ಸಂಕಲನದ ಮೂಲಕ ಒಳ್ಳೆಯ ಹೈಕು ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಮಧ್ಯೆ ಡಾ.ಲಕ್ಷ್ಮೀಕಾಂತ ಮೋಹರೀರ ರವರ ಮಾರ್ಗದರ್ಶನದಲ್ಲಿ ’ಡಾ.ಅರಳು ಮಲ್ಲಿಗೆ ಪಾರ್ಥಸಾರಥಿಯಬರ ಜೀವನ,ಸಾಧನೆ,ಹಾಗೂ ವಿಷ್ಣುಸಹಸ್ರನಾಮ ಕ್ಷೇತ್ರಗಳಿಗೆ ಅವರ ಕೊಡುಗೆ’ ಕುರಿತು ಪ್ರಬಂಧ ಮಂಡಿಸಿ ಪಿ.ಹೆಚ್.ಡಿ ಪೂರೈಸಿ ವಿಶೇಷ ಗಮನ ಸೆಳೆದಿದ್ದಾರೆ. ಸಂಶೋಧನೆಗೈದ ಪರಿಷ್ಕೃತ ಭಾಗ ಇಂದು ಬಿಡುಗಡೆಗೊಳ್ಳುತ್ತಿರುವ ‘ದಾಸಸಾಹಿತ್ಯ ಸಾಧಕ ಪಾರ್ಥಸಾರಥಿ ವಿಠ್ಠಲದಾಸರು’ ಗ್ರಂಥ. 278 ಪುಟಗಳ ಈ ಗ್ರಂಥದಲ್ಲಿ ಪಾರ್ಥಸಾರಥಿಯವರ ಬದುಕಿನ, ಸಾಧನೆಯ ಸಮಗ್ರ ಸಾರ ತಿಳಿಸುವ ಹತ್ತು ಅಧ್ಯಾಯಗಳಲ್ಲಿ ಬಾಲ್ಯ, ಕಲೆ ಸಾಹಿತ್ಯದ ಒಲವು, ಹರಿದಾಸ ಸಾಹಿತ್ಯದತ್ತ ಸಾರ್ಥಕ ಸಾಂಗತ್ಯ , ಗುರುಹಿರಿಯರೊಡನೆ, ದೇಶ ವಿದೇಶದ ಅನುಭವಗಳು, ವಿಷ್ಣುಸಹಸ್ರನಾಮದ ಆಂದೋಲನ, ಅವರ ಸಾಹಿತ್ಯ ಕೃತಿಗಳು, ಅವರ ಸಾಹಿತ್ಯದ ಬಗೆಗೆ ಹಲವಾರು ವಿದ್ವಾಂಸರ ಅಭಿಪ್ರಾಯಗಳು ಹೀಗೆ ಮೊದಲಾದ ವಿವಿಧ ಆಯಾಮಗಳ ಚಿತ್ರಣವಿದೆ. ಆರು ಪರಿಶಿಷ್ಟಗಳಲ್ಲಿ ಗಣ್ಯರ ಅಭಿಪ್ರಾಯ, ಪ್ರಶಸ್ತಿ, ಅವರ ಬಗ್ಗೆ ಬರೆದ ಹಾಡುಗಳು,ಭಾವಚಿತ್ರಗಳ ಸಂಗ್ರಹವಿದೆ. ಡಾ.ವೆಂಕಟೇಶ ನವಲಿಯವರ ಅಧ್ಯಯನ ಶೀಲತೆಯಿಂದ ಇಂತಹ ಉತ್ತಮ ಕೃತಿ ಸಾಧ್ಯವಾಗಿದೆ.
ವಿಶ್ವಮಾನ್ಯರು, ವಿಶ್ವವಂದ್ಯರು, ವಿಶ್ವವಿಜೇತರು ಎಂದು ವಿಶ್ವದೆಲ್ಲೆಡೆ ಗುರುತಿಸಲ್ಪಡುವ ಅರಳುಮಲ್ಲಿಗೆಯವರ ವ್ಯಕ್ತಿತ್ವ ಹಾಗೂ ಸಾಧನೆಯ ಹೆಜ್ಜೆಗಳನ್ನು ತೋರಿಸುವ ನವಲಿಯವರ ಈ ಕೃತಿ ಖಂಡಿತವಾಗಿ ಪಾರ್ಥಸಾಥಿಯವರನ್ನು ಓದಲು, ಅಧ್ಯಯನ ಮಾಡಲು ಪ್ರಯತ್ನಿಸುವವರಿಗೆ ಉತ್ತಮ ಆಕರ ಗ್ರಂಥವಾಗಿದೆ. ಮಾತೃಸ್ವರೂಪರಾದ ಡಾ.ಜಯಲಕ್ಷ್ಮೀ ಮಂಗಳಮೂರ್ತಿಯವರ ಮುನ್ನುಡಿ. ಆತ್ಮೀಯರಾದ ಮೋಹರೀರವರ ಆಶಯನುಡಿ ಹೊತ್ತಿರುವ, ಬೆಂಗಳೂರಿನ ಅರಳು ಮಲ್ಲಿಗೆ ಪ್ರತಿಷ್ಠಾನ ಪ್ರಕಟಿಸಿರುವ ಸದರಿ ಕೃತಿಯನ್ನು ಅಕ್ಷರ ಲೋಕ ಖಂಡಿತ ಸ್ವಾಗತಿಸುತ್ತದೆ. ಡಾ. ವೆಂಕಟೇಶ ನವಲಿಯವರ ಲೇಖನಿಯಿಂದ ಇಂತಹ,ದಾಸಸಾಹಿತ್ಯದ, ಸೃಜನಶೀಲ ಹಲವಾರು ಕೃತಿಗಳು ಬರಲಿ ಎನ್ನುವುದು ನಮ್ಮೆಲ್ಲರ ಆಶಯ.
–ಗುಂಡುರಾವ್ ದೇಸಾಯಿ,ಮಸ್ಕಿ