ಬೆವರ ಹನಿಯ ಪಯಣ ಲೋಕಾರ್ಪಣೆ
ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಸದಾ ಬೆಲೆಯಿದೆ- ಮಾಜಿ ಶಾಸಕ ಜಿ.ಎಸ್.ಪಾಟೀಲ
e-ಸುದ್ದಿ ಗದಗ
ಪರಿಶ್ರಮ ಮತ್ತು ಪ್ರಮಾಣಿಕತೆಗೆ ಬೆಲೆ ಕಟ್ಟಲಾಗದು, ಸದು ವಿನಯದ ವ್ಯಕ್ತಿತ್ವದ ಡಾ.ಐ.ಬಿ.ಕೊಟ್ಟೂರಶೆಟ್ಟಿ ಇಂದಿನ ಯುವಕರಿಗೆ ಆದರ್ಶಪ್ರಾಯ ಎಂದು ರೋಣದ ರಾಜೀವಗಾಂಧಿ ಶಿಕ್ಷಣ ಸಮಿತಿಯ ಅಧ್ಯಕ್ಷರು, ಮಾಜಿ ಶಾಸಕರಾದ ಜಿ.ಎಸ್.ಪಾಟೀಲ ನುಡಿದರು.
ಅವರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಆಯೋಜಿಸಿದ್ದ, ಖ್ಯಾತ ಆಯುರ್ವೇದ ವೈದ್ಯ, ರೋಣ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಐ.ಬಿ.ಕೊಟ್ಟೂರಶೆಟ್ಟಿ ಅವರ ಕುರಿತು ಯಲ್ಲಪ್ಪ ಹಂಚಿನಾಳ ಅವರು ಬರೆದ ಜೀವನಚರಿತ್ರೆ ‘ಬೆವರ ಹನಿಯ ಪಯಣ’ ಬಿಡುಗಡೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾಗಿ, ವೈದ್ಯರಾಗಿ ಹಗಲಿರುಳು ಪರಿಶ್ರಮದಿಂದ ಬೇಸರವಿಲ್ಲದೆ ದುಡಿಯುತ್ತಾರೆ. ಹೊಸ ಯೋಜನೆಗಳನ್ನು ಸಂಸ್ಥೆಯ ಅಭಿವೃದ್ಧಿಗೆ ಹುಟ್ಟು ಹಾಕುತ್ತಾರೆ. ಅವರನ್ನು ಪ್ರಾಚಾರ್ಯರಾಗಿ ನೇಮಿಸಿದ ನಮ್ಮ ನಿರ್ಣಯ ಅತ್ಯಂತ ಸಮಯೋಚಿತ ಎಂಬ ಭಾವನೆ ಮೂಡಿದೆ, ಯಲ್ಲಪ್ಪ ಹಂಚಿನಾಳ ಅನೇಕ ಮಹತ್ವದ ಸಂಗತಿಗಳನ್ನು ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ ಎಂದರು.
ನನ್ನ ಕಣ್ಣ ಮುಂದೆ ಬೆಳೆದ ಯುವಕ ಡಾ.ಕೊಟ್ಟೂರಶೆಟ್ಟಿ ಅವರ ಬದುಕಿನ ಪಯಣ ತುಂಬಾ ಸಾರ್ಥಕವಾಗಿದೆ, ಉತ್ತಮ ಆಡಳಿತಗಾರನಾಗುವುದರ ಜೊತೆಗೆ ವಿನಯ,ವಿವೇಕ ಮತ್ತು ವಿವೇಚನೆಯ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿದ್ದರಿಂದ ಯಶಸ್ಸು ಸಾಧ್ಯವಾಗಿದೆ ಎಂದು ವಿಧಾನಪರಿಷತ್ತಿನ ಸದಸ್ಯ ಪ್ರೊ.ಎಸ್.ವಿ.ಸಂಕನೂರ ಅಭಿಪ್ರಾಯಪಟ್ಟರು. ಆಡಳಿತ ಮಂಡಳಿ ನೀಡಿದ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಂಡು ಸಂಸ್ಥೆಯನ್ನು ಬೆಳೆಸಿದ್ದಾರೆ ಎಂದರು.
ನಮ್ಮ ಡಿ.ಜಿ.ಎಂ. ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ ಪ್ರಾಚಾರ್ಯರಾಗಿ ಆದರಣೀಯ ಕಾರ್ಯ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಇರುವ ಕಾಲೇಜು ಇಡೀ ದೇಶದ ಗಮನ ಸೆಳೆಯಲು ಪ್ರಾಚಾರ್ಯರ ಪರಿಶ್ರಮ ಮತ್ತು ಆಡಳಿತ ಮಂಡಳಿಯ ಔದಾರ್ಯವೇ ಕಾರಣ ಎಂದ ವಿಶ್ರಾಂತ ಪ್ರಾಚಾರ್ಯ ಡಾ.ಜಿ.ಬಿ.ಪಾಟೀಲ, ಶಿಷ್ಯರ ಸಾಧನೆಯಲ್ಲಿ ನಮ್ಮ ಸಾರ್ಥಕತೆ ಇದೆ ಎಂಬುದಕ್ಕೆ ಡಾ.ಕೊಟ್ಟೂರಶೆಟ್ಟಿ ಅವರೇ ನಿದರ್ಶನ ಎಂದರು.
ಕೃತಿ ಪರಿಚಯ ಮಾಡಿದ ಕಲಬುರಗಿಯ ಸಾಹಿತಿ ಸಿಕಾ (ಕಾವ್ಯಶ್ರೀ ಮಹಗಾಂವಕರ) ಮಾತನಾಡಿ, ಇಬ್ಬರು ಆದರ್ಶ ವ್ಯಕ್ತಿಗಳ ವ್ಯಕ್ತಿತ್ವ ನಮ್ಮ ಎದುರು ಅನಾವರಣಗೊಂಡಿದೆ, ಒಬ್ಬರು ಬೆವರ ಹನಿ ಸುರಿಸುವ ಕಾಯಕ ಜೀವಿ ಡಾ.ವೀರೇಶ ಕೊಟ್ಟೂರಶೆಟ್ಟಿ, ಇನ್ನೊಬ್ಬರು ಯೋಧ ಮತ್ತು ಯುವ ಬರಹಗಾರ ಯಲ್ಲಪ್ಪ ಹಂಚಿನಾಳ. ಒಂದೇ ಪ್ರದೇಶದ ಇಬ್ಬರೂ ಶ್ರಮ ಸಂಸ್ಕೃತಿಯ ಪ್ರತೀಕ. ಕಾರ್ಯಕ್ರಮದ ಅಚ್ಚುಕಟ್ಟುತನ ಅನುಕರಣೀಯ, ಪುಸ್ತಕ ಬಿಡುಗಡೆಯ ಅದ್ಧೂರಿತನ ಪುಸ್ತಕ ಸಂಸ್ಕೃತಿಗೆ ಇರುವ ಐತಿಹಾಸಿಕ ಮಹತ್ವವನ್ನು ಸಾರುತ್ತದೆ ಎಂದರು.
ಸಾಂಗತ್ಯ ಪ್ರಕಾಶನ ಮತ್ತು ಸಂಘಟಿಕರ ಪರವಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಪ್ರೊ.ಸಿದ್ದು ಯಾಪಲಪರವಿ ಈ ಕೃತಿಯ ನಿಜವಾದ ನಾಯಕಿಯೆಂದರೆ ಕೊಟ್ಟೂರಶೆಟ್ಟಿ ಅವರ ತಾಯಿ ನೀಲಮ್ಮ ಅವರು, ಅವರು ಸಮಯೋಚಿತವಾಗಿ ತೆಗೆದುಕೊಂಡ ನಿರ್ಣಯಗಳಿಂದ ಎಲ್ಲಾ ಮಕ್ಕಳು ಪ್ರತಿಭಾ ಸಂಪನ್ನರಾಗಲು ಸಾಧ್ಯವಾಗಿದೆ, ಡಾ.ಕೊಟ್ಟೂರಶೆಟ್ಟಿ ಅವರ ಹಿತೈಷಿ ಬಳಗದ ಸಡಗರದಲ್ಲಿ ಅವರ ವ್ಯಕ್ತಿತ್ವ ಅಡಗಿದೆ ಎಂದರು.
ಕರೋನ ಸಂದರ್ಭದಲ್ಲಿ ಎಂಬ ವೈದ್ಯರಾಗಿ ಡಾ. ಕೊಟ್ಟೂರಶೆಟ್ಟಿ ಅವರು ಹಗಲಿರುಳು ದುಡಿದು ಸಾವಿರಾರು ಜನರ ಪ್ರಾಣ ಉಳಿಸಿದ್ದಾರೆ ಎಂದು ರಾಜೀವಗಾಂಧಿ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ ಡಾ.ಕೆ.ಬಿ.ಧನ್ನೂರ ನುಡಿದರು. ಸಮಯ ಪ್ರಜ್ಞೆ ಇವರ ವ್ಯಕ್ತಿತ್ವದ ಮಹತ್ವ ಹೆಚ್ಚಿಸಿದೆ ಎಂದರು.
ಸಾನಿಧ್ಯವಹಿಸಿದ್ದ ರೋಣದ ಗುಲಗಂಜಿ ಮಠದ ಪರಮಪೂಜ್ಯ ಗುರುಪಾದ ಸ್ವಾಮಿಗಳು ಡಾ. ಕೊಟ್ಟೂರಶೆಟ್ಟಿ ಅವರ ಸರಳತೆ ಮತ್ತು ಪರಿಶ್ರಮವನ್ನು ಅನೇಕ ಘಟನೆಗಳ ಮೂಲಕ ವಿವರಿಸಿ, ಅವರ ಬದುಕು ಬಂಗಾರವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಐ.ಬಿ.ಕೊಟ್ಟೂರಶೆಟ್ಟಿ ಅವರು ತಮ್ಮ ಬದುಕನ್ನು ಸಾರ್ಥಕಗೊಳಿಸಿದ ಮಹನೀಯರನ್ನು ಸ್ಮರಿಸಿಕೊಂಡರು.
ಸಗಣಿ ಬಳಿದದ್ದು, ಹೊಲದಲ್ಲಿ ದುಡಿದದ್ದು, ಹಾಲು ಮಾರಿದ್ದು ತಮಗೆ ಪರಿಶ್ರಮ ಅನಿಸದೇ ಖುಷಿ ನೀಡಿವೆ, ಆ ಎಲ್ಲ ಘಟನೆಗಳು ಇಂದಿನ ತಲೆಮಾರಿನ ಯುವಕರಿಗೆ ಪ್ರೇರಣೆಯಾದರೆ ಸಾಕು, ಗ್ರಾಮೀಣ ಭಾಗದಲ್ಲಿ ನಾಡು ಮೆಚ್ಚುವ ಸಂಸ್ಥೆ ಕಟ್ಟಿ, ತಮಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿದ ಸಮಿತಿಯ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು, ತಮ್ಮನ್ನು ವೈದ್ಯರನ್ನಾಗಿ ರೂಪಿಸಿದ ಹುಯಿಲಗೋಳ ನಾಗರಿಕರನ್ನು ಕೊಂಡಾಡಿದರು.
ಯೋಧ ಮತ್ತು ಲೇಖಕ ಯಲ್ಲಪ್ಪ ಹಂಚಿನಾಳ ಮಾತನಾಡಿ, ಗ್ರಾಮೀಣ ಭಾಗದ ತಾಯಂದಿರು ಕೃತಿಯನ್ನು ಓದಿ, ತಮ್ಮ ಮಕ್ಕಳಿಗೆ ಓದಿಸಿದರೆ ತಮ್ಮ ಶ್ರಮ ಸಾರ್ಥಕವಾಗುತ್ತದೆ, ಕೃತಿಯನ್ನು ಅಚ್ಚುಕಟ್ಟಾಗಿ ಪ್ರಕಟಿಸಿದ ಸಾಂಗತ್ಯ ಪ್ರಕಾಶನದ ರೇಖಾ ಯಾಪಲಪರವಿ, ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ ಸಮಿತಿಯ ಪದಾಧಿಕಾರಿಗಳು ಮತ್ತು ಹುಯಿಲಗೋಳ ಗ್ರಾಮದ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಡಾ.ಶ್ರೀನಿವಾಸ ಬನ್ನಿಗೋಳ, ಹುಯಿಲಗೋಳದ ಹಿರಿಯರಾದ ಶಿವರುದ್ರಪ್ಪ ಬಳಿಗಾರ, ನೀಲಮ್ಮ ಕೊಟ್ಟೂರಶೆಟ್ಟಿ, ಅನಸೂಯಮ್ಮ ಜಿನಗಾ, ಡಾ.ವೀಣಾ ಕೊಟ್ಟೂರಶೆಟ್ಟಿ, ಸಿದ್ರಾಮಪ್ಪ, ಶಾರಮ್ಮ ಕೋರಿ, ಅಭಿನಂದನಾ ಸಮಿತಿಯ ತೋಟಪ್ಪ ಆಡೂರ, ಡಾ.ಸುರೇಶ ನಾರಾಯಣಪುರ, ಡಾ.ಮೃತ್ಯುಂಜಯ ಹಿರೇಮಠ, ಸಂಗಮೇಶ ಪಟ್ಟಣಶೆಟ್ಟಿ, ಬಸವರಾಜ ನಡಗಡ್ಡಿ, ಡಾ.ಕಲ್ಲೇಶ ಮೂರುಶಿಳ್ಳಿನ, ಡಾ.ಉಮೇಶ ಹಾದಿ, ಹುಯಿಲಗೋಳ, ಗದಗ ಹಾಗೂ ರೋಣದ ಅಭಿಮಾನಿಗಳು, ಬಂಧುಗಳು ಹಾಗೂ ಹಿತೈಷಿಗಳು ಉಪಸ್ಥಿತರಿರುತ್ತಿದ್ದರು.
ಸುಧಾ ಹುಚ್ಚಣ್ಣವರ ಹಾಗೂ ಚೇತನಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.