ಯುಕ್ತಿಶೂನ್ಯರ ಮಾತ ಕೇಳಲಾಗದು.

ಯುಕ್ತಿಶೂನ್ಯರ ಮಾತ ಕೇಳಲಾಗದು.

ದೇವರ ನೆನೆದು ಮುಕ್ತರಾದೆವೆಂಬ
ಯುಕ್ತಿಶೂನ್ಯರ ಮಾತ ಕೇಳಲಾಗದು
ಅದೇನು ಕಾರಣವೆಂದಡೆ:
ದೇವರ ನೆನೆವಂಗೆ ದೇವರುಂಟೆ?
ದೂರ ದೂರದಲ್ಲಿದ್ದವರ ನೆನೆವರಲ್ಲದೆ
ಸಮೀಪದಲ್ಲಿದ್ದವರ ನೆನೆವವರಿಲ್ಲ.
ಇದನರಿದು ನೀನೆನ್ನೊಳಗಡಗಿ
ನಾ ನಿನ್ನ ನೆನೆಯಲಿಲ್ಲ;
ನೀನೆನಗೆ ಮುಕ್ತಿಯನೀಯಲಿಲ್ಲ.ನೀನಾನೆಂದೆನಲಿಲ್ಲ ಮ ಹಾಲಿಂಗ ಗಜೇಶ್ವರಾ.

                       -ಗಜೇಶ ಮಸಣಯ್ಯ

ಗಜೇಶ ಮಸಣಯ್ಯ : – ೧೨ನೇ ಶತಮಾನದ ವಚನಕಾರ, ಅಕಲಕೋಟೆ ತಾಲ್ಲೋಕಿನ ಕರಜಗಿ ಗ್ರಾಮದ ನಿವಾಸಿ. ಬಸವಾದಿ ಶರಣರ ಸಮಕಾಲೀನ. ಈತನ ಪತ್ನಿಯ ಹೆಸರು ಏನೆಂದು ತಿಳಿಯುವುದಿಲ್ಲವಾದರೂ ಆಕೆಯೂ ವಚನಕಾರ್ತಿಯಾಗಿರುವುದನ್ನು ಗಮನಿಸಬಹುದಾಗಿದೆ. ಇಂತಹ ಒಂದೆರಡು ಪ್ರಸಂಗಗಳು ವಚನ ಸಾಹಿತ್ಯಯುಗದಲ್ಲಿ ದಾಖಲಾಗಿವೆ. ಅವೆಲ್ಲವೂ ಷಟ್ಸ್ಥಲಸಿದ್ದಾಂತದ ವಿವರಗಳನ್ನು, ಆತ್ಮಜ್ಞಾನದ ತಿಳುವಳಿಕೆಯನ್ನು ಒಳಗೊಂಡಿವೆ. ಇವರ ವಚನಗಳ ಅಂಕಿತ “ಮಹಾಲಿಂಗ ಗಜೇಶ್ವರ”.

ಗಜೇಶ ಮಸಣಯ್ಯ

ಅಂಕಿತನಾಮ ಮಹಾಲಿಂಗ ಗಜೇಶ್ವರ
ಸಂಗಾತಿ(ಗಳು) ಪುಣ್ಯಸ್ತ್ರೀ
ದೇವರ ನೆನೆದು ಮುಕ್ತರಾದೆವೆಂಬ ಯುಕ್ತಿಶೂನ್ಯರ ಮಾತ ಕೇಳಲಾಗದು.

ದೇವರು ಮನುಷ್ಯನನ್ನು ಬಿಟ್ಟು ಬೇರೆ ಭೌತಿಕ ಪ್ರಪಂಚದಲ್ಲಿ ಇದ್ದಾನೆ ಆತನನ್ನು ನೆನೆದು ಕಷ್ಟ ನಿವಾರಣೆ ಮಾಡಿಕೊಳ್ಳುವ ಭಜನೆ ಪೂಜೆ ಪ್ರಾರ್ಥನೆ ಉಪಾಸನೆ ಮಾಡುವ ಭಕ್ತ ಯುಕ್ತಿ ಶುಣ್ಯನಗುತ್ತಾನೆ . ಬುದ್ಧಿ ಆಶೆ ಆಮಿಷ ಹೊರತುಪಡಿಸಿ ಸದ್ಗುಣ ಸಂಪನ್ನ ದಾರಿಯನ್ನು ಹಿಡಿಯುವ ಪ್ರಾಮಾಣಿಕ ದಿಟ್ಟ ಕ್ರಮ ಕೈಗೊಳ್ಳದೇ ಮೂಢ ನಂಬಿಕೆಗಳನ್ನು ಬೆನ್ನು ಹತ್ತಿ ಕಲ್ಲು ಮಣ್ಣು ಲೋಹದಿಂದ ಮಾಡಿದ ಕಲ್ಪನೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಮೂರ್ಖತನ .ಇಂತಹ ಯುಕ್ತಿ ಶೂನ್ಯರ ಮಾತು ನಂಬಲಿಕ್ಕೇ ಯೋಗ್ಯವಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಅದೇನು ಕಾರಣವೆಂದಡೆ:ದೇವರ ನೆನೆವಂಗೆ ದೇವರುಂಟೆ?
ಅದು ಏನೆಂದರೆ ದೇವರನ್ನು ನೆನೆವಂಗೆ ದೇವರು ಹೇಗೆ ಇರುತ್ತಾನೆ. ದೇವರು ಒಂದು ಆಧ್ಯಾತ್ಮಿಕ ಬೆಳಗು ಪ್ರಜ್ಞೆ ಅಂತಹ ಉನ್ನತ ಭಾವವನ್ನು ಕಲ್ಲು ಮಣ್ಣು ಲೋಹದಲ್ಲಿ ಸ್ಥಾವರಿಕರಣ ಮಾಡಿ ಅಂತಹ ದೇವರನ್ನು ಪೂಜಿಸಿದರೆ ಪ್ರಾರ್ಥನೆ ಮಾಡಿದರೆ ಅಂತಹ ಜನರಿಗೆ ದೇವರುಂಟೆ ಎಂದು ಪ್ರಶ್ನಿಸಿದ್ದಾರೆ.

ದೂರ ದೂರದಲ್ಲಿದ್ದವರ ನೆನೆವರಲ್ಲದೆ
ಸಮೀಪದಲ್ಲಿದ್ದವರ ನೆನೆವವರಿಲ್ಲ.

ಕಾಣದ ದೇವರಿಗೆ ಎಡೆ ಒಯ್ದು ಕಾಣುವ ಬಡ ಭಕ್ತರನ್ನು ಕಡೆಗಣಿಸುವ ಜನರು ನಿರಾಕಾರ ನಿರ್ಗುಣ ಪರಬ್ರಹ್ಮ ಸ್ವರೂಪ ಕಾಣದಷ್ಟು ಕಾಣದಂತೆ ಇರುತ್ತಾನೆ . ಅಂತಹ ದೇವರನ್ನು ನೆನೆಯುತ್ತಾ ಸುತ್ತಲಿನ ಜಗತ್ತನ್ನು ಜೀವ ಜಾಲದ ಸದಸ್ಯರನ್ನು ಮರೆಯುವ ಮೌಢ್ಯ ಭಕ್ತಿ ದೇವರನ್ನು ದೈವತ್ವವನ್ನು ಹೇಗೆ ಅರಿಯಲು ಸಾಧ್ಯ ಎಂದು ಹೇಳಿ ತನ್ನ ಬಿಟ್ಟು ಬೇರೆ ದೇವರಿಲ್ಲ ಮತ್ತು ಮಣ್ಣು ಬಿಟ್ಟು ಬೇರೆ ಮಡಿಕೆ ಇಲ್ಲ ಎಂದು ಹೇಳಿ ಅದ್ವೈತ ಭಾವದಲ್ಲಿ ತನ್ನ ಅನುಭಾವ ಹಂಚಿಕೊಂಡಿದ್ದಾರೆ ಗಜೇಶ ಮಸಣಯ್ಯನವರು.

ಇದನರಿದು ನೀನೆನ್ನೊಳಗಡಗಿ
ನಾ ನಿನ್ನ ನೆನೆಯಲಿಲ್ಲ

ಇಂತಹ ಅದ್ವೈತ ಭಾವದಲ್ಲಿ ಕಂಡ ದೇವರು ಭಕ್ತನ ಆಶಯದಂತೆ ತನ್ನ ಚೈತನ್ಯದ ಪ್ರತಿರೂಪ ಅರುಹಿನ ಕುರುಹು ಇಷ್ಟಲಿಂಗ . ಬಸವಣ್ಣ ಪ್ರತಿಪಾದಿಸಿದ ಪರಿಸರ ರಕ್ಷಣೆ ಮತ್ತು ಸಮ ಸಮಾಜದ ಚಿಂತನೆಗೆ
ಆದ್ಯತೆ ನೋಡಿದವನು.. ತನ್ನೊಳಗೆ ದೇವರು ಇರುವ ಕಾರಣ ನೀನು ನನ್ನೊಳಗೆ ಇರುವ ಕಾರಣದಿಂದ ನಾನು ನಿಮ್ಮ ನೆನೆಯಲಿಲ್ಲ ನೋಡಿ ಇಂತಹ ಅಧ್ಭುತ ಗಟ್ಟಿತನ ತತ್ವ ನಿಷ್ಠ ಅಧ್ಯಾತ್ಮ ಸಾಧನೆ ನಾವು ಇಲ್ಲಿ ಕಾಣಾ ಬಹುದು. ನಿನ್ನ ನೆನೆಯುವ ಮನ ಗುಲಾಮಗಿರಿ ಹಂಗಿನ ಬಂಧನ ಎಂಬ ಅತ್ಯಂತ ದಿಟ್ಟ ನಿಲುವು ಅವರದ್ದು.

ನೀನೆನಗೆ ಮುಕ್ತಿಯನೀಯಲಿಲ್ಲ.ನೀನಾನೆಂದೆನಲಿಲ್ಲಾ ಮಹಾಲಿಂಗ ಗಜೇಶ್ವರಾ

ದೂರದ ಬೆಟ್ಟ ಅಲ್ಲಿನ ದೇವರು ಕಷ್ಟ ಪಟ್ಟು ಪ್ರಯಾಸದಿಂದ ಮುಕ್ತಿ ಮೋಕ್ಷಕ್ಕೆ ಹಂಬಲಿಸಿ ವೃತ ನೇಮ ನಿಷ್ಠೆ ಪೂಜೆ ಮಾಡಿದರೂ ದೊರಕದ ಮುಕ್ತಿಗೆ ಟೀಕಿಸುವ ಗಜೇಶ ಶರಣರು ನೀನು ನಿಜಕ್ಕೂ ದೇವರಿದ್ದ್ರ ಶಕ್ತಿ ಹೊಂದಿದ್ದರೆ ನನಗೆ ಮುಕ್ತಿಯನ್ನು ನೀಡಬೇಕಿತ್ತು ಆದರೆ ನೀಡಲಿಲ್ಲ ಮೇಲಾಗಿ ನೀನು ನನ್ನೊಳಗೆ ಇರುವೆ ಎಂದು ಧೈರ್ಯ ತುಂಬುವ ಮಾತನ್ನು ಹೇಳಲಿಲ್ಲ ನನ್ನಲ್ಲಿ ದೇವರಿದ್ದಾನೆ ನಾನೇ ದೇವರು ಎಂಬ ಅತ್ಯಂತ ದಿಟ್ಟ ನಿಲುವು ತೋರದೆ ಇರುವ ನೀನು ಹೇಗೆ ದೇವರಾಗ ಬಲ್ಲೆ ,? ಇಂತಹ ಭೌತಿಕ ಅಸ್ತಿತ್ವಕ್ಕೆ ದೇವರು ಎಂಬ ಹೆಸರು ಕೊಟ್ಟ ಜಂಗಮ ಚಲನಶೀಲತೆ ಮರೆ ಮಾಚಿ ದೈವತ್ವದ ನಿಲುವು ಗಟ್ಟಿಗೊಳಿಸಿದ ಶರಣರ ವೈಚಾರಿಕತೆ ಅನುಪಮ ಮತ್ತು ಅನುಕರಣೀಯ

 

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!