ಬಸವಣ್ಣ ಸ್ವಯಂ ಲಿಂಗವಾದ ಕಾರಣ
ಕವಿಸಾಧಕರೆಲ್ಲರು ಕಳವಳಸಿ ಕೆಟ್ಟರು.
ವಿದ್ಯಾಸಾಧಕರೆಲ್ಲರು ಬುದ್ದಿ ಹೀನರಾದರು.
ಪವನ ಸಾಧಕರೆಲ್ಲರು ಹದ್ದು ಕಾಗೆಗಳಾದರು.
ಜಲಸಾಧಕರೆಲ್ಲರು ಕಪ್ಪೆ ಮೀನಗಳಾದರು.
ಅನ್ನ ಸಾಧಕರೆಲ್ಲರು ಭೂತಪ್ರಾಣಿಗಳಾದರು.
ಬಸವಣ್ಣ, ಸದ್ಗುರುಸಾಧಕನಾಗಿ
ಸ್ವಯಂಲಿಂಗವಾದ ಕಾಣಾ ಗುಹೇಶ್ವರಾ.
-ಅಲ್ಲಮ ಪ್ರಭುದೇವರ ವಚನ
ಸವಸಂ : 2, ವಚನ-1070 ಪುಟ-319
ಅಲ್ಲಮ ಪ್ರಭುಗಳು ಸಮತೆಯ ಶಿಲ್ಪಿ ಪ್ರಜಾಸತ್ತೆಯ ಜನಕ ಕ್ರಾಂತಿಕಾರಿ ಬಸವಣ್ಣನವರ ಆಧ್ಯಾತ್ಮಿಕ ಧಾರ್ಮಿಕ ಆರ್ಥಿಕ ರಾಜಕೀಯ ಸಾಮಾಜಿಕ ಕ್ರಾಂತಿಗಳ ಯುಗಪ್ರವರ್ತಕನೆಂದು ಕರೆದು ಮಹಾಮಣಿಹ ಸಂಗನಬಸವಣ್ಣಾ ತಮಗೂ ಗುರು ಜಗಕೆಲ್ಲ ಗುರು ಎಂದು ಹೇಳಿದ್ದಾರೆ.ಜಗತ್ತಿನ ಧಾರ್ಮಿಕ ಕ್ಷೇತ್ರದಲ್ಲಿ ವಿಭಿನ್ನ ದಾರಿ ತೋರಿದ ಬಸವಣ್ಣನವರ ಸಾಧನೆ ಅವಿರಳ ಅದ್ಭುತ .
ಜೈವಿಕ ಜೀವಜಾಲದೊಂದಿಗೆ ತನ್ನ ಕಾಯಗುಣದೊಳಗೆ ಸದ್ಭಕ್ತಿ ಸುವಿಚಾರ ನಡೆ ನುಡಿಗಳ ಸಮನ್ವಯತೆ ದಯೆ ಕರುಣೆ ಅನುಕಂಪ ವಿಶ್ವ ಪ್ರೇಮ ತೋರಿದ ಶರಣ ಜೀವನ ಪದ್ಧತಿಯನ್ನೇ ಧರ್ಮವೆಂದು ಕರೆದರು ಕಲ್ಯಾಣ ಶರಣರು. ಇಂತಹ ಅಪೂರ್ವ ಸಾಧನೆ ಶ್ರೇಷ್ಠ ಮತ್ತು ಅನುಕರಣೀಯವಾದದ್ದು..
ಕವಿಸಾಧಕರೆಲ್ಲರು ಕಳವಳಸಿ ಕೆಟ್ಟರು
ಕಾವ್ಯ ಶೃಂಗಾರ ಅಲಂಕಾರ ಜಗತ್ತಿನ ಅತ್ಯಂತ ಹಳೆಯ ಸಾಧನವಾಗಿದೆ .ಶಬ್ದ ಪ್ರೌಢಿಮೆ ಪ್ರತಿಮೆ ಭಾವ ಭಾಷೆ ಕವಿತ್ವ ಸಾಧನೆಗೆ ಕವಿಯ ತಳಮಳ ,ಹೊಸ ಹೊಸ ಕಾವ್ಯ ಪ್ರಯೋಗದಲ್ಲಿ ಮಗ್ನನಾದ ಕವಿಯು ಕಳವಳಿಸಿ ಹೋಗುತ್ತಾನೆ . ಮನದ ಕುಲುಮೆಯಲ್ಲಿ ಭಾವದ ಅರ್ಥೈಸಲು ಭಾಷೆಯ ಪದಗಳ ನಿರಂತರ ಹುಡುಕಾಟದಲ್ಲಿದ್ದಾನೆ ಹೀಗಾಗಿ ಆತ ಕಳವಳಿಸಿ ಹೋಗುತ್ತಾನೆ .ಕಾವ್ಯಸಾಧನೆ
ಜಗತ್ತಿನ ದೊಡ್ಡ ಸಾಧನೆಯೆಂದು ಅದರಲ್ಲಿಯೇ ಮುಳುಗಿ ಹೋಗುವ ಕವಿಗಳು ಭಾವ ಪ್ರಪಂಚದಲ್ಲಿ ಮುಳುಗಿ ಹೋಗುತ್ತಾರೆ ವಾಸ್ತವಿಕ ಜಗತ್ತಿನ ಪ್ರಜ್ಞೆ ಅನುಭವದ ಕೊರತೆಯನ್ನು ಕಾಣುತ್ತೇವೆ.
ಇಂತಹುದೇ ಪ್ರತಿಮೆಯನ್ನು ಚೆನ್ನಬಸವಣ್ಣನವರೂ ಕೊಟ್ಟಿದ್ದಾರೆ
ವಿದ್ಯಾಸಾಧಕರೆಲ್ಲರು ಬುದ್ದಿ ಹೀನರಾದರು
ಅಕ್ಷರ ವಿದ್ಯೆ ,ಬಿಲ್ಲು ವಿದ್ಯೆ ಯುದ್ಧ ಕಲೆ ಹೀಗೆ ಹಲವಾರು ವಿದ್ಯೆಗಳ ಬೆನ್ನು ಹತ್ತಿದವರು ಬುದ್ಧಿ ಹೀನರಾದರು .ವಿದ್ಯೆ ಸಾಧಿಸಲು ಹೋಗಿ ಭ್ರಮಿತರಾಗಿ ವಾಸ್ತವಿಕ ಜಗತ್ತಿನ ಪರಿವಿಲ್ಲದೆ ಸಾಮಾನ್ಯ ಬುದ್ದಿಯನ್ನು ಕಳೆದುಕೊಳ್ಳುವವರು ಅನೇಕರು . ಇಂತಹುದೇ ಪ್ರತಿಮೆಯನ್ನು ಚೆನ್ನಬಸವಣ್ಣನವರೂ ತಮ್ಮ ವಚನದಲ್ಲಿ ಕೊಟ್ಟಿದ್ದಾರೆ . ಕೇವಲ ವಿದ್ಯೆ ಸಾಧಿಸಿದರೆ ಸಾಲದು ಅದು ಜನಪರ ಕಾಳಜಿ ಅಭಿವೃದ್ಧಿ ಜಂಗಮ ಮುಖೇನವಾಗಬೇಕು .ಇಂತಹ ಜನಪರ ಕಾಳಜಿಗೆ ವಿದ್ಯೆಯ ಸಾರ್ಥಕ .ಇಲ್ಲದಿದ್ದರೆ ಅದು ಬುದ್ಧಿ ಹೀನ ಕಾರ್ಯವೆಂದಿದ್ದಾರೆ ಅಲ್ಲಮರು.
ಪವನ ಸಾಧಕರೆಲ್ಲರು ಹದ್ದು ಕಾಗೆಗಳಾದರು
ಯೋಗಜ್ಞಾನದಿಂದ ವಾಯುವನ್ನು ಗಟ್ಟಿಯಾಗಿ ಹಿಡಿದು ಶರೀರವನ್ನು ನಿಯಂತ್ರಿಸುವ ದೇಹ ದಂಡನೆ ಮಾಡುವ ಸಾಧಕರು ಪಾವನ ಅಂದರೆ ಗಾಳಿಯನ್ನು ಸ್ವೀಕರಿಸುವ ಮತ್ತು ಬಿಡುವ ಸಾಧನೆ ಮಾಡುತ್ತಾರೆ . ಹವೆಯಲ್ಲಿ ಹಾರಲು ಇಚ್ಛಿಸುವ ಯೋಗ ಸಾಧಕರು ಅಂದು ಇದ್ದರು .ಪ್ರಾಣಾಯಾಮ ಮಾಡುವ ದೇಹದ ಆಯುಷ್ಯನ್ನು ಹೆಚ್ಚಿಸುವ ಸಾಧಕರು ಗಾಳಿಯಲ್ಲಿ ಹದ್ದು ಕಾಗೆಯಂತೆ ಹಾರಬಲ್ಲರೇ ಹೊರತು ಅನುಭಾವದ ಸಾಧನೆ ಮಾಡಲಾರರು ಎಂದು ಟೀಕಿಸಿದ್ದಾರೆ ಅಲ್ಲಮರು .
ಜಲಸಾಧಕರೆಲ್ಲರು ಕಪ್ಪೆ ಮೀನಗಳಾದರು.
ಜಲದಲ್ಲಿ ಯೋಗ ಮಾಡುವ ಸಾಧಕರು ನೀರಿನಲ್ಲಿ ಹಲವು ತಿಂಗಳು ವರುಷಗಳವರೆಗೆ ಈಜುವ ಮನುಷ್ಯರು ಜಲಕ್ರೀಡೆಯ ಸಾಧನೆಯ ದಾಖಲೆಯನ್ನು ನಿರ್ಮಿಸುವ ಜನರು ನೀರಿನಲ್ಲಿರುವ ಕಪ್ಪೆ ಮೀನಿನಂತಾಗುತ್ತಾರೆ ಹೊರತು ಅನುಭಾವ ಅನುಭೂತಿಯ ನೆಲೆಸೆಲೆಗೆ ಸಿಲುಕದೆ ಕಪ್ಪೆ ಮೀನಿನಂತೆ ಬದುಕುತ್ತಾರೆ . ಜಲಯೋಗ ಒಂದು ಅಪೂರ್ವ ಯೋಗ ಸಾಧನವೆಂದು ತಿಳಿಯುವ
ಸಾಧಕರು ಬದುಕಿನ ನಿಜವಾದ ಅನುಭವವನ್ನು ಪಡೆಯದೇ ಹೋಗುತ್ತಾರೆ.ಇಂತಹ ಸುಂದರ ವಿವರಣೆಯನ್ನು ಅಲ್ಲಮರು ಮಾಡಿದ್ದಾರೆ .
ಅನ್ನ ಸಾಧಕರೆಲ್ಲರು ಭೂತಪ್ರಾಣಿಗಳಾದರು
ಕೆಲವರು ಆಹಾರವನ್ನು ಅನ್ನವನ್ನು ನಿರಂತರವಾಗಿ ಸೇವಿಸುತ್ತಾ ಅದನ್ನೇ ಒಂದು ಸಾಧನೆ ಮಾಡುವ ಸಾಧನೆಯಲ್ಲಿರುತ್ತಾರೆ ,ಆಹಾರವನ್ನು ಸ್ಪರ್ಧೆಗೆ ಬಿದ್ದು ತಿನ್ನುವ ಖೂಳುಬಾಕರಿಗೆ ಬದುಕಿನ
ಮೌಲ್ಯಗಳನ್ನು ಅರಿಯುವ ವ್ಯವಧಾನವಿರುವದಿಲ್ಲ .ಇಂತಹ ಸಾಧನೆ ಮಾಡುವ ಅನ್ನಸಾಧಕರು ಸರಿಸೃಪಗಳಂತೆ ಭೂತ ಪ್ರಾಣಿಗಳಂತೆ ದೈತ್ಯಾಕಾರದ ಪ್ರಾಣಿಗಳಂತೆ ಬದುಕುತ್ತಾರೆ ಹೊರತು ಲಿಂಗಾನುಭವಿಗಳಾಗರು. ಅನ್ನ ಸೇವನೆಯೇ ಒಂದು ಸಾಧನೆಯಲ್ಲ. ನಾವು ತಿನ್ನುವುದು ಬದುಕುವದಕ್ಕಾಗಿ ಆದರೆ ಬದುಕುವುದು ತಿನ್ನುವುದಕ್ಕಾಗಿ ಅಲ್ಲ ಎಂಬ ಮಹಾತ್ಮಾ ಗಾಂಧಿಯವರ ಮಾತು ಎಷ್ಟು ಸತ್ಯ ನೋಡಿ .ಅದನ್ನು ಅಲ್ಲಮರು 900 ವರುಷಗಳ ಹಿಂದೆಯೇ ಹೇಳಿದ್ದಾರೆ .
ಬಸವಣ್ಣ, ಸದ್ಗುರುಸಾಧಕನಾಗಿ ಸ್ವಯಂಲಿಂಗವಾದ ಕಾಣಾ ಗುಹೇಶ್ವರಾ.
ಪಂಚೇಂದ್ರಿಗಳ ಚಪಲ ಅಥವಾ ನಿಗ್ರಹ ಎರಡು ತಪ್ಪು ಎಂದಿದ್ದಾರೆ ಬಸವಣ್ಣನವರು .ಇಂದ್ರಿಯ ನಿಗ್ರಹಿಸಿದರೆ ಹೊಂದುವವು ಗುಣ ದೋಷಂಗಳು .ಅನ್ನ ನೀರು ವಾಯು ಇವು ಮನುಷ್ಯನಿಗೆ ಅಗತ್ಯವಾದವುಗಳು ಆದರೆ ಅವುಗಳನ್ನು ಕಡಿಮೆ ಮಾಡಿ ಅಥವಾ ಅದರಲ್ಲಿಯೇ ಮುಳುಗಿ ಮನುಷ್ಯ ತನ್ನ ತನ್ನ ಜನ್ಮ ಸಾರ್ಥಕತೆಯನ್ನು ಮರೆತು ಬಿಡುತ್ತಾನೆ . ನಡೆ ನುಡಿ ಸಮನ್ವಯ ಮಾಡಿ ಮನಸ್ಸು ಶುದ್ಧ ಮಾಡಿಕೊಂಡು ಒಳ ಹೊರಗೆ ಶುಚಿತ್ವ ಕಾಪಾಡಿಕೊಂಡು ವಿಷಯಾದಿಗಳ ಸಂತೆಯಿಂದ ಹೊರ ಬಂದು ಭಕ್ತನು ತಾನೇ ದೇವನಾಗುವ ಹೊಸ ಪರಿ ಕಲಿಸಿಕೊಟ್ಟ ಬಸವಣ್ಣನು ಅರಿವೆಂಬ ಗುರುವನ್ನು ಕರುಣಿಸಿಕೊಂಡ ಸದ್ಗುರುಸಾಧಕನಾಗಿ ಸ್ವಯಂಲಿಂಗವಾದನು ಕಾಣಾ ಗುಹೇಶ್ವರ ಎಂದು ಬಸವಣ್ಣನವರ ವ್ಯಕ್ತಿತ್ವದ ಬಗ್ಗೆ ಗೌರವ ಹೆಮ್ಮೆ ಸೂಚಿಸುತ್ತಾರೆ ಅಲ್ಲಮರು
-ಡಾ.ಶಶಿಕಾಂತ.ಪಟ್ಟಣ ರಾಮದುರ್ಗ
*9552002338