ನಾನು
ಮೊಬೈಲ್ ಬಂದ ಮೇಲಿಂದ
ಹಾಕಿದ ಮೊಗವಾಡಗಳು
ಒಂದೇ ಎರಡೇ ದೇವರೂ ಕೂಡಿ ಎಣಿಸಲಾಗದಷ್ಟು
ಹಾಗಾಗಿ ಹಲವು ಮುಖದ
ಗ್ರೂಪ್ ಗಳಲ್ಲಿ ನಾನೂ
ಸೇರಿಕೊಂಡಿದ್ದೇನೆ ನನ್ನನ್ನೂ ಸೇರಿಸಿಕೊಂಡಿದ್ದಾರೆ
ಕಾಲೇಜಿನ ಗ್ರೂಪಿನಲಿ
ತೀರಾ ಸಭ್ಯನಾಗಿರುವೆ
ಅವರ ಹಾಗೆ ಎನ್ನುವುದಕ್ಕಿಂತಲೂ
ಅವರಿಗಿಂತಲೂ ಮಿತಿ ಮೀರಿದ
ಶ್ರೀಮಂತ ಸಭ್ಯನಾಗಿದ್ದೇನೆ
‘ಆಯ್ತೆಂಬ ‘ ಗೋಣು ಹಾಕುವ
ಪದ ಬಿಟ್ಟು ಬೇರೆ ಪದವೇ
ಗೊತ್ತಿಲ್ಲವೆಂಬಷ್ಟು…ಆದರೂ
ಅಸಮಾಧಾನ ಸಿಟ್ಟು
ಅಲ್ಲಲ್ಲಿ ಬುಸುಗುಡುತ್ತಿರುತ್ತದೆ
ಜಾತಿಯ ಗ್ರೂಪಿನಲಿ
ಕೇಳುವುದೇ ಬೇಡ
ಸ್ವವಾವಲೋಕನಕಿಂತ
ಪರಾವಲೋಕನವೆ ಅಧಿಕ
ನಮ್ಮ ಜಾತಿಯವನು ಎಂಬ
ಹೆಮ್ಮೆ ಚರ್ಮದೊಳಗೆ
ರಕುತದಂತೆ ಪ್ರೀತಿ
ಶುಭಾಶಯಗಳಲಿ
ಹರಿದಾಡುತ್ತಿರುತ್ತದೆ
ಅದರಲ್ಲೂ
ಒಳ ಜಾತಿಯ ಮುಖಗಳ
ಲೆಕ್ಕ ಮಾತ್ರ… ಬೇರೆಯದೇ.
ವಿದ್ಯಾರ್ಥಿಗಳ ಗ್ರೂಪಿನಲಿ
ಎಲ್ಲವನ್ನೂ ಬಿಟ್ಟವನಂತೆ
ಹುಡುಕಿದರೂ ಎಳೆ ಸಿಗದ
ನಂಬಿಕೆ ದ್ರೋಹದ ಸಾಧುತ್ವ
ಯಾರಿಗೂ ಹೊಳೆಯದ
ಸತ್ಯ ನನಗೆ ಮಾತ್ರ ಎಂಬ
ಉಪದೇಶಗಳ ರವಾನಿಸುತ್ತೇನೆ
ಇನ್ನು ಸ್ನೇಹಿತರ ಗ್ರೂಪಿನಲಿ
ಮಾತಿನ ದೇಹಗಳಿಗೆ
ಬಟ್ಟೆ ಬರೆಯೇ ಇರುವುದಿಲ್ಲ
ಆಡುವ ಮಾತು
ಕಳಿಸುವ ಚಿತ್ರ
ಎಲ್ಲವೂ ಬೆತ್ತಲೆ
ಒಬ್ಬನೇ ಇದ್ದಾಗ
ಇನ್ನೂ ಬೆತ್ತಲೆ ನನಗೆ
ನಾಚಿಕೆ ಬರುವಷ್ಟು
ಇನ್ನೂ ಕೆಲವು ಗ್ರೂಪಿನಲಿ
ಮಾರ್ಗದರ್ಶಕ, ಜಾತ್ಯಾತೀತ,
ಸಾಹಿತಿ , ಕಲಾವಿದ , ಸಂಗೀತಗಾರ….
ಹೀಗೆ ಏನೆಲ್ಲವೂ
ಆಗಿದ್ದೇನೆ…ಆಗುತ್ತಿರುತ್ತೇನೆ
ಕನ್ನಡಿಯಲ್ಲಿ ದಿನವೂ
ಎದುರು ಬದುರಾದರೂ
ಅನುಮಾನಪಡುವಷ್ಟು
ಮೊಗವಾಡದಲಿ
ಕಳೆದುಹೋಗಿದ್ದೇನೆ.
-ಡಾ.ಕುಪ್ಪೇರಾವ್ ಸಿ ಬಪ್ಪೂರು.