ಕಾಯಕ್ಕಾಗಿ ಕೈಲಾಸ ಬೇಡವೆಂದ ಕುಂಬಾರ ಗುಂಡಯ್ಯ
*ಶರಣ ಶ್ರೀ ಕುಂಬಾರ ಗುಂಡಯ್ಯ* ನವರ ಸ್ಮರಣೋತ್ಸವ..
ತಂದೆ : ಸತ್ಯಣ್ಣ
ತಾಯಿ : ಸಂಗಮ್ಮ
ಸತಿ : ಕೇತಲ ದೇವಿ
ಸ್ಥಳ : ಬಾಲ್ಕಿ, ಬೀದರ್ ಜಿಲ್ಲೆ.
ಕಾಯಕ : ಕುಂಬಾರಿಕೆ (ಮಣ್ಣು ಹದ ಮಾಡುವುದು).
ಜಯಂತಿ : ಮಣ್ಣೆತ್ತಿನ ಅಮಾವಾಸ್ಯೆಯಂದು.
ಲಭ್ಯ ವಚನಗಳ ಸಂಖ್ಯೆ : ೦
ಕಾಯಕವೇ ಕೈಲಾಸ ಎನ್ನುವುದು ಶರಣಪರಂಪರೆಯ ಧ್ಯೇಯ. ಕುಂಬಾರ ಗುಂಡಯ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಾಯಕಕ್ಕೆ ಕೈಲಾಸಕ್ಕಿಂತಲೂ ಹೆಚ್ಚು ಮನ್ನಣೆ ನೀಡುತ್ತಾನೆ ಬೇಡೆನಗೆ ಕೈಲಾಸ, ಬಾಡುವುದು ಕಾಯಕವು ನೀಡೆನಗೆ ಕಾಯಕವ – ಕುಣಿದಾಡಿ ನಾಡ ಹಂದರಕೆ ಹಬ್ಬಿಸುವೆ! ~ ಹೀಗೆಂದು ಶಿವ ಶರಣ ಕುಂಬಾರ ಗುಂಡಯ್ಯ ಕೈಲಾಸವನ್ನೂ ನಿರಾಕರಿಸಿ ನನಗೆ ಕಾಯಕವೇ ಇರಲಿ ಎಂದು ಬೇಡುತ್ತಾನೆ.
ಶರಣೆ ನೀಲಲೋಚನೆ ಎಂಬ ಸಹೋದರಿ ಇವರಿಗಿದ್ದು, ಅವರನ್ನು ಶರಣ ಬ್ರಹ್ಮಯ್ಯನವರಿಗೆ ಕೊಟ್ಟು ಮದುವೆ ಮಾಡಿದರು ನಂತರ ಬ್ರಹ್ಮಯ್ಯನವರ ತಂಗಿಯಾದ ಶರಣೆ ಕೇತಲ ದೇವಿಯವರನ್ನು ಇವರು ವಿವಾಹವಾದರು ಎಂದು ತಿಳಿದುಬಂದಿದೆ.
ಇವರ ಕುರಿತು ಮರಡೀಪುರ ಶಾಸನದಲ್ಲಿ ಉಲ್ಲೇಖವಿದೆ. ಅಬಲೂರಿನ ಸೋಮೇಶ್ವರ ದೇವಸ್ಥಾನದಲ್ಲಿ ಇವರು ಕಾಯಕನಿರತ ಚಿತ್ರ ಮತ್ತು ಇವರ ಕುರಿತು ಬರಹವೊಂದು ಹೀಗಿದೆ – “ಗುಂಡಯ್ಯನ ಮುಂದೆ ಬಂದಾಡಿದ ನಮ್ಮ ಶಿವನು” ಎಂದು.
ಇವರ ಯಾವುದೇ ವಚನಗಳು ಲಭ್ಯವಾಗಿಲ್ಲ, ಆದರೆ ಇವರ ಕುರಿತು ಸಿದ್ದರಾಮೇಶ್ವರರ ಈ ವಚನವೊಂದೆ ಸಾಕು, ಅವರ ಘನತೆಯನ್ನು ತಿಳಿಯಲು:
ಕುಂಬಾರರೆಲ್ಲರು ಗುಂಡಯ್ಯನಾಗಬಲ್ಲರೆ.?
ಮಡಿವಾಳರೆಲ್ಲರು ಮಾಚಯ್ಯನಾಗಬಲ್ಲರೆ.?
ಜೀಡರೆಲ್ಲರು ದಾಸಿಮಯ್ಯನಾಗಬಲ್ಲರೆ.?
ಎನ್ನ ಗುರು ಕಪಿಲಸಿದ್ಧಮಲ್ಲೇಶ್ವರಯ್ಯಾ,
ಪ್ರಾಣಿಗಳ ಕೊಂದು ಪರಿಹರಿಸಬಲ್ಲಡೆ ತೆಲುಗ ಜೊಮ್ಮಯ್ಯನಾಗಬಲ್ಲರೆ.?
ಕುಂಬಾರ ಗುಂಡಯ್ಯನ ಪುಣ್ಯಸ್ತ್ರೀ *ಶರಣೆ ಕೇತಲದೇವಿ* ಯವರು..
ಅಂಕಿತ : ಕುಂಭೇಶ್ವರ / ಕುಂಭೇಶ್ವರ ಲಿಂಗ..
ಲಭ್ಯ ವಚನಗಳ ಸಂಖ್ಯೆ : ೨
ನಿತ್ಯವೂ ಲಿಂಗಕ್ಕೆ ಪಾವುಡವನ್ನು ಹಾಕುವ ವ್ರತ. ಒಮ್ಮೆ ಪಾವುಡವು ದೊರೆಯದಿರಲು, ತನ್ನ ಎದೆಯ ಮೇಲಿನ ಚರ್ಮವನ್ನೇ ತೆಗೆದು ಲಿಂಗಕ್ಕೆ ಅರ್ಪಿಸಿದ ವ್ರತಾಚಾರ ನಿಷ್ಠೆ.. ವ್ರತಾಚಾರ ನಿಷ್ಠೆಯ ವಚನಗಳು ಮೂಡಿಬಂದಿದೆ..
ಇವರ ವಚನಗಳು:
೧. ಹದ ಮಣ್ಣಲ್ಲದೆ ಮಡಕೆಯಾಗಲಾರದು..
ವ್ರತಹೀನನ ಬೆರೆಯಲಾಗದು..
ಬೆರೆದಡೆ ನರಕ ತಪ್ಪದುನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ..
೨. ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು..
ಅದೆಂತೆಂದಡೆ:
‘ಭಿಕ್ಷಲಿಂಗಾರ್ಪಿತಂ ಗತ್ವಾ |ಭಕ್ತಸ್ಯ ಮಂದಿರಂ ತಥಾ |
ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸ್ಯ ವಿವರ್ಜಿತಃ ||
ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ..
ಕಾಣದುದನು ಒಂದೆಸಮವೆಂದು ಅರಿಯಬಲ್ಲರೆ ಕುಂಭೇಶ್ವರಲಿಂಗವೆಂಬೆನು..
–ಡಾ ಶಶಿಕಾಂತ ಪಟ್ಟಣ ರಾಮದುರ್ಗ