ಕರಿಘನ ಅಂಕುಶ ಕಿರಿದೆನ್ನಬಹುದೆ…..?

ಕರಿಘನ ಅಂಕುಶ ಕಿರಿದೆ’ನ್ನಬಹುದೆ? ಬಾರದಯ್ಯಾ.
ಗಿರಿಘನ ವಜ್ರ ಕಿರಿದೆ’ನ್ನಬಹುದೆ? ಬಾರದಯ್ಯಾ.
ತಮ್ಮಂಥ ಘನ ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯ.
ಮರಹು ಘನ ನಿಮ್ಮ ನೆನೆವ ಮನ ಕಿರಿದೆ’ನ್ನಬಹುದೆ? ಬಾರದಯ್ಯಾ ಕೂಡಲಸಂಗಮದೇವಾ.

ಈ ಭೂಮಿಯ ಮೇಲೆ ಪ್ರತಿಯೊಂದು ವಸ್ತು, ಜೀವಿ, ತನ್ನದೇ ಆದ ಮಹತ್ವವನ್ನು ಪಡೆದಿದೆ. ವಸ್ತು ಅಥವಾ ಜೀವಿಯು ಹೊಂದಿದ ಬಾಹ್ಯ ಆಕಾರದಿಂದ ಅದಕ್ಕೆ ಹಿರಿಯದೆಂದು, ಗಾತ್ರದಲ್ಲಿ ಚಿಕ್ಕದಾಗಿದ್ದರೆ ಕಿರಿದು ಕ್ಷುಲ್ಲಕವೆಂದು ಭಾವಿಸಬಾರದು ಎನ್ನುವುದನ್ನು ತುಂಬಾ ಸೊಗಸಾಗಿ  ಈ ವಚನದಲ್ಲಿ ಬಸವಣ್ಣನವರು ತಿಳಿಸಿದ್ದಾರೆ.

ಕರಿಘನ ಅಂಕುಶ ಕಿರಿದೆ’ನ್ನಬಹುದೆ? ಬಾರದಯ್ಯಾ.
ಕರಿ ಎಂದರೆ ಆನೆ.ಆನೆ ಜಗತ್ತಿನಲ್ಲಿ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತಿ ದೊಡ್ಡದು. ಅಲ್ಲದೆ ನೆಲದ ಮೇಲಿನ ಪ್ರಾಣಿಗಳಲ್ಲಿ ಆನೆಯ ಗರ್ಭಾವಸ್ಥೆಯ ಕಾಲ (೨೨ ತಿಂಗಳುಗಳು) ಎಲ್ಲಕ್ಕಿಂತ ದೀರ್ಘ. ಹುಟ್ಟಿದಾಗ ಆನೆಯ ಮರಿಯು ೧೨೦ ಕಿ.ಗ್ರಾಂ.ವರೆಗೆ ತೂಗುವುದಿದೆ. ಸುಮಾರು ೭೦ ವರ್ಷಗಳ ಕಾಲ ಆನೆಯು ಜೀವಿಸಬಲ್ಲುದು.
ಈ ಕಾರಣಗಳಿಂದ ಆನೆಯನ್ನು ನಾವು ಘನವೆಂದು ಭಾವಿಸದರೆ.
ಆನೆಯನ್ನು ನಿಯಂತ್ರಿಸಲು ಬಳಸುವ ಅಂಕುಶ ಚಿಕ್ಕದು.
ಅಂಕುಶ ಆನೆಗಳ ನಿರ್ವಹಣೆ ಮತ್ತು ಪಳಗಿಸುವಿಕೆಯಲ್ಲಿ ಬಳಸಲಾಗುವ ಒಂದು ಉಪಕರಣ. ಅದು ೬೦-೯೦ ಸೆ.ಮಿ. ಉದ್ದದ ಹಿಡಿಗೆ ಜೋಡಣೆಯಾದ ಒಂದು ಕೊಕ್ಕೆಯನ್ನು (ಸಾಮಾನ್ಯವಾಗಿ ಕಂಚು ಅಥವಾ ಉಕ್ಕಿನದು) ಹೊಂದಿರುತ್ತದೆ ಮತ್ತು ಮೊನಚಾದ ಕೊನೆಯಲ್ಲಿ ಅಂತ್ಯಗೊಳ್ಳುತ್ತದೆ.
ಅಂಥಹ ಸಣ್ಣ ಸಲಕರಣೆ ಅಂದಮಾತ್ರಕ್ಕೆ ಅಂಕುಶ ಮಹತ್ವದ್ದಲ್ಲ ಎಂದು ಭಾವಿಸಲಾಗದು.ಅಂಥ ಆನೆಯನ್ನು ನಿಯಂತ್ರಿಸಲು ಅಂಕುಶದ ಪಾತ್ರ ಮಹತ್ತರವಾದುದು ಎಂದು ಹೇಳಿದ್ದಾರೆ.

ಗಿರಿಘನ ವಜ್ರ ಕಿರಿದೆ’ನ್ನಬಹುದೆ?*ಬಾರದಯ್ಯಾ.
ಜೋರಾಗಿ ಬೀಸುವ ಗಾಳಿಗೆ ಸೆಡ್ಡು ಹೊಡೆದು ನಿಂತು, ಮೋಡಗಳ ಚಲಿಸುವ ದಿಕ್ಕುಗಳನ್ನೆ ಬದಲಿಸುವ ಶಕ್ತಿಯನ್ನು ಹೊಂದಿದ್ದು, ಸೂರ್ಯ, ಚಂದ್ರ ನಕ್ಷತ್ರಗಳನ್ನು ಸ್ಪರ್ಷಿಸುತ್ತಿರುವಂತೆ ಭಾಸ ಮೂಡಿಸುವ ಎತ್ತರದ ಗಿರಿ ಶಿಖರಗಳು ನಮ್ಮ ಕಣ್ಣಿಗೆ ಹಿರಿದಾಗಿ ಕಾಣುತ್ತವೆ.ಗಿರಿಗೆ ಹೋಲಿಸಿದರೆ ಗಾತ್ರದಲ್ಲಿ ವಜ್ರ ಅತ್ಯಂತ ಚಿಕ್ಕದು.ವಜ್ರವು ಇಂಗಾಲದ ಒಂದು ರೂಪ. ಇದು ಪ್ರಕೃತಿಯಲ್ಲಿರುವ ವಸ್ತುಗಳಲ್ಲಿ ಅತ್ಯಂತ ಕಠಿಣವಾದುದು. ಅಲ್ಲದೆ ಇದುವರೆಗೆ ತಯಾರಾಗಿರುವ ವಸ್ತುಗಳಲ್ಲಿ ಮೂರನೆಯ ಅತಿ ಕಠಿಣ ವಸ್ತು. ವಜ್ರವು ತನ್ನ ಕಾಠಿಣ್ಯ ಮತ್ತು ಬೆಳಕನ್ನು ಚದುರಿಸುವ ಗುಣಗಳಿಂದಾಗಿ ಆಭರಣಗಳಲ್ಲಿ  ಇದನ್ನು ಬಳಸುತ್ತಾರೆ.
ವಜ್ರವು ತನ್ನ ಕೆಲವು ಅತಿ ವಿಶಿಷ್ಟ ಭೌತಿಕ ಗುಣಗಳಿಗೆ ಹೆಸರಾಗಿದೆ.
ಅತ್ಯಂತ ನಿಖರವಾದ ಸನ್ನಿವೇಶದಲ್ಲಿ ಮಾತ್ರ ನೈಸರ್ಗಿಕ ವಜ್ರದ ಹರಳಿನ ರಚನೆಯಾಗುವುದ
ಆದರೆ ಬೆಟ್ಟವನ್ನು ಕೊರೆಯಲು ವಜ್ರದ ಸಹಾಯ ಬೇಕು. ಚಿಕ್ಕದಾದ ವಜ್ರದ ಕಾಠಿಣ್ಯ ಬೆಟ್ಟವನ್ನು ಕೊರೆಯ ಬಲ್ಲುದು ಹಾಗಾಗಿ ವಜ್ರವನ್ನು ಮಹತ್ವದ ವಸ್ತುವಲ್ಲವೆಂದು ಪರಿಗಣಿಸಲಾಗದು.ಎಂದು ಹೇಳಿದ್ದಾರೆ.

ತಮ್ಮಂಥ ಘನ ಜ್ಯೋತಿ
ಕಿರಿದೆನ್ನಬಹುದೆ? ಬಾರದಯ್ಯ.
ತಮಂತ ಎಂದರೆ ಕತ್ತಲು ಸೂರ್ಯ ಮುಳುಗಿದ ತಕ್ಷಣ ಈ ಭೂಮಿಯನ್ನು ಆವರಿಸಿರುವ ಕತ್ತಲು ಹಿರಿದು ಎಂದು ಭಾವಿಸಿದರೆ ,ಅಂಥ ಗಾಢಾಂಧಕಾರವನ್ನು ಓಡಿಸುವ
ಜ್ಯೋತಿ ಚಿಕ್ಕದು.ಆ ಚಿಕ್ಕ ದೀಪ ಪ್ರಕಾಶಮಾನವಾದ ತನ್ನ ಬೆಳಕಿನಿಂದ ಕತ್ತಲೆಯನ್ನು ಓಡಿಸುವ ಶಕ್ತಿ ಹೊಂದಿದೆ. ಜ್ಯೋತಿಯನ್ನು ಚಿಕ್ಕದೆನ್ನಲಾಗುವುದಿಲ್ಲ.
ಜ್ಯೋತಿಯ ಬಲದಿಂದ ತಮಂದದ ಕೇಡು ನೋಡಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ
ಅಜ್ಞಾನದ ಅಂಧಕಾರವನ್ನು ಜ್ಞಾನ ಜ್ಯೋತಿಯ ಅಳಿಸುತ್ತದೆ. ಕತ್ತಲೆಯ ಎದಿರು ಜ್ಯೋತಿ ಚಿಕ್ಕದಾದರೂ ಅದನ್ನು ಚಿಕ್ಕದೆಂದು ಭಾವಿಸಲಾಗದು ಎಂದು ಹೇಳಿದ್ದಾರೆ.

ಮರಹು ಘನ ನಿಮ್ಮ ನೆನೆವ ಮನ ಕಿರಿದೆ’ನ್ನಬಹುದೆ? ಬಾರದಯ್ಯಾ
ಮರಹು ಎನ್ನುವ ಮನಸಿನ ಸ್ಥಿತಿ
ದೊಡ್ಡದು.ದಿನ ನಿತ್ಯ ನಡೆಯುವ ಎಷ್ಟೋ ಪ್ರಾಪಂಚಿಕ ವಿಷಯಗಳು ಮನಸ್ಸಿನಲ್ಲಿ ಉಳಿಯದೆ ಮಾಯವಾಗುತ್ತವೆ.ಎಲ್ಲವನ್ನು ನೆನಪಿನಲ್ಲಿ ಇಟ್ಟುಕೊಳ್ಳಲಾಗುವುದಿಲ್ಲ.ಯಾವುದೆ ಒಂದು ಶಬ್ದವು ೭ಸೆಕೆಂಡಗಳ ವರೆಗೆ ಮಾತ್ರ ನೆನಪಿನಲ್ಲಿರುತ್ತದೆ.ಯಾವುದೆ ಒಂದು ಸಂಗತಿಯ ಹಲವಾರು ವಿಷಯಗಳು ಮರೆತು ಪ್ರಮುಖ ವಿಷಯ ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ಮರೆವು ಇದೊಂದು ಮಾನಸಿಕ ಸಹಜ ಸ್ಥಿತಿ.
ಮರೆತುಹೋಗುವಂತ ಹಲವಾರು ವಿಷಯಗಳ ಮಧ್ಯೆ
ತನಗೆ ಪ್ರೀಯವಾದುದನ್ನು, ಸಂತೋಷ ಕೋಡುವುದನ್ನು
ಮನಸ್ಸು ಪುನಸ್ಮರಣೆ ಮಾಡುತ್ತದೆ.
ಆ ವಿಷಯವನ್ನು ಮರೆಯಲು ಮನಸ್ಸು ಬಿಡುವುದಿಲ್ಲ. ನೆನಪು ಮಾಡಿಕೊಳ್ಳುವ ಕ್ರೀಯೆಯು ಕೂಡಾ ಜಟಿಲವಾದದ್ದು. ನೆನಹು ಎಂದರೆ ಜ್ಞಾಪಕ ಶಕ್ತಿ ಜ್ಞಾಪಕ ಶಕ್ತಿ ಎಂಬುದು ಎಲ್ಲರಲ್ಲೂ ಸಮಾನವಾಗಿ ಅಡಕವಾಗಿರುತ್ತದೆ. ಎಲ್ಲ ಮನುಷ್ಯರ ಮೆದುಳುಗಳು ಬಹುತೇಕ ಸಮಾನ ಸಾಮರ್ಥ್ಯವನ್ನು ಹೊಂದಿರುತ್ತವೆ. ಮೆದುಳು ಪೋಷಿಸಿದಷ್ಟು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ.
ಜ್ಞಾಪಕ ಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ:
ನೋಂದಣಿ : ಕಣ್ಣು ಕಿವಿ ಮೂಗು ನಾಲಿಗೆ ಮತ್ತು ಚರ್ಮಗಳ (ಪಂಚೇಂದ್ರಿಯಗಳು) ಮೂಲಕ ಹೊಸ ಮಾಹಿತಿಯು ಮಿದುಳಿನೊಳಗೆ ಸೇರುತ್ತದೆ. ಅಲ್ಲಿ ನರಕೋಶಗಳಲ್ಲಿ ನೋಂದಾಯಿಸಲ್ಪಡುತ್ತದೆ. ಈ ನೋಂದಣಿಯ ಸಮಯದಲ್ಲಿ ನರಕೋಶಗಳಲ್ಲಿ ಕೇವಲ ವಿದ್ಯುತ್ಚಟುವಟಿಕೆ ಕಾಣಿಸಿಕೊಳ್ಳುತ್ತವೆ. ಮಾಹಿತಿ ಏನು ಎಂದು ನಮಗೆ ಅರ್ಥವಾಗುತ್ತದೆ.
ಮುದ್ರಣ :ಮಾಹಿತಿ ನಮಗೆ ಮುಖ್ಯ ಎಂದೆನಿಸಿದರೆ ಆಗ ಅದು ನರಕೋಶಗಳಲ್ಲಿ ದಾಖಲೆ (ಮುದ್ರಣ) ಗೊಳ್ಳುತ್ತದೆ. ಮುದ್ರಣಕ್ಕೆ ಅಸಿಟೈಲ್ಕೋಲಿನ್ ಎಂಬ ನರವಾಹಕ ವಸ್ತು ಅಗತ್ಯ. ಈ ವಸ್ತು ನರಕೋಶಗಳ ತುದಿಯಲ್ಲಿ ಶೇಖರವಾಗಿರುತ್ತದೆ. 30 ರಿಂದ 60 ನಿಮಿಷಗಳ ಕಾಲ ಮುದ್ರಣವಾಗಲು ಬೇಕಾದಷ್ಟು ಅಸಿಟೈಲ್ಕೋಲಿನ್ ಸಂಗ್ರಹವಿರುತ್ತದೆ. ಆಮೇಲೆ ಸಂಗ್ರಹ ಮುಗಿದು ಮುದ್ರಣ ಕಷ್ಟವಾಗುತ್ತದೆ.
ಸ್ಮರಣೆ: ಹೀಗೆ ಮಿದುಳಿನಲ್ಲಿ ದಾಖಲುಗೊಂಡ ಮಾಹಿತಿಯು ನೆನಪಿನ ಉಗ್ರಾಣದಲ್ಲಿ ಶೇಖರವಾಗುತ್ತದೆ. ಅಗತ್ಯವಿದ್ದಾಗ ಮಾಹಿತಿಯನ್ನು ಹೊರತೆಗೆದು ಉಪಯೋಗಿಸಿಕೊಳ್ಳುವುದೇ ಸ್ಮರಣೆ.
ಮನಸ್ಸು ಎಂದರೆ ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ, ಮತ್ತು ನೆನಪು ಸೇರಿದಂತೆ ಗ್ರಹಣ ಶಕ್ತಿಗಳ ಸಮೂಹ. ಇದನ್ನು ಸಾಮಾನ್ಯವಾಗಿ ಒಂದು ಜೀವಿಯ ಯೋಚನೆಗಳು ಮತ್ತು ಪ್ರಜ್ಞೆಯ ಸಾಮರ್ಥ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದು ಕಲ್ಪನೆ, ಗುರುತಿಸುವಿಕೆ, ಹಾಗೂ ಮೆಚ್ಚುಗೆಯ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಮನೋಭಾವಗಳು ಹಾಗೂ ಕ್ರಿಯೆಗಳಾಗಿ ಪರಿಣಮಿಸುವ ಅನಿಸಿಕೆಗಳು ಹಾಗೂ ಭಾವನೆಗಳನ್ನು ಸಂಸ್ಕರಿಸುವುದಕ್ಕೆ ಜವಾಬ್ದಾರಿಯಾಗಿರುತ್ತದೆ
ಮನಸ್ಸು ಮರೆವನ್ನು ಮೀರಿ ಹಿರಿದಾಗುತ್ತದೆ. ಕೂಡಲ ಸಂಗಮ ದೇವನನ್ನು ಸ್ಮರಣೆ ಮಾಡುತ್ತದೆ. ಆದ್ದರಿಂದ ಮನಸನ್ನು ಕಿರಿದೆನ್ನಲಾಗುವುದಿಲ್ಲ. ಎಂದು ಈ ವಚನದಲ್ಲಿ ಬಸವಣ್ಣನವರು ಹೇಳಿದ್ದಾರೆ

ಸಮಾಜದಲ್ಲಿಯ ಪ್ರತಿಯೊಬ್ಬ ಜೀವಿಯೂ ಏನಾದರೂ ಒಂದು ವೈಶಿಷ್ಟ್ಯವನ್ನು ಹೊಂದಿರುತ್ತಾನೆ.ಜಾತಿಯಿಂದ ಅವನು ಮಾಡುವ ಕಸುಬಿನಿಂದ ಅವನ್ನು ಹಿರಿದು, ಕಿರಿದು ಎಂದು ಭಾವಿಸಬಾರದು. ಸಮಾಜದ ಏಳಿಗೆಗೆ ಪ್ರತಿಯೊಂದು ಕಾಯಕ ಮಾಡುವ ವ್ಯಕ್ತಿಗಳ ಅವಶ್ಯಕತೆ ಇದೆ.
ಒಬ್ಬರ ವೃತ್ತಿ ಕೌಶಲ್ಯ ಇನ್ನೊಬ್ಬರ ವೃತ್ತಿಗೆ ಪೂರಕವಾಗಿದೆ ಎಂದು ವೃತ್ತಿ ಮತ್ತು ವ್ಯಕ್ತಿಯ ಮಹತ್ವನ್ನು ಈ ವಚನದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.


ಡಾ.ನಿರ್ಮಲ ಬಟ್ಟಲ
೨೫.೬.೨೦೨೨

Don`t copy text!