ಧರ್ಮ ಪ್ರಣೀತ
ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾ ಸ್ವಾಮಿಜಿಗಳಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್
ನಿಜ ವೈರಾಗ್ಯ ಮೂರ್ತಿ ಶ್ರೀ ಬಾಲ ಲೀಲಾ ಮಹಾಂತ ಶಿವಯೋಗಿಗಳ ಶ್ರೀ ಮಠದ ಮಹಾ ಸ್ವಾಮೀಜಿಗಳಾದ ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾ ಸ್ವಾಮಿಜಿಗಳಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ತನ್ನ ಘನತೆಯನ್ನು ಹೆಚ್ಚಿಸಿ ಕೊಂಡಿದೆ.
ಮುಳಗುಂದ, ಧಾರವಾಡದ ಶ್ರೀ ಮುರುಘಾಮಠ, ಕೆರೂರ ಶ್ರೀ ಮಠ, ಪಶುಪತಿಹಾಳದ ಶ್ರೀ ಮಠಗಳ ಆಡಳಿತವನ್ನು ಅತೀ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರವಚನಾ ರತ್ನ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಉಪಮಿಸಬಾರದ ಉಪಮಾತೀತರು ಎಂದರೆ ಅತಿಶಯೋಕ್ತಿಯಲ್ಲ.ಅವರು ಮಾತೃ ಹೃದಯಿಗಳು, ಸಾಹಿತ್ಯ ಕೃಷಿಕರು, ಉದಾತ್ತ ಆಧ್ಯಾತ್ಮಿಕ ಚಿಂತಕರು, ಸಾಮಾಜಿಕ ಚಿಂತಕರು, ಶೈಕ್ಷಣಿಕ ಕ್ರಾಂತಿಕಾರಿ ಶರಣರು, ನಿತ್ಯ ದಾಸೋಹಿಗಳು, ಸಾಂಸ್ಕೃತಿಕ ರಾಯಭಾರಿಗಳು,ಪ್ರತಿಭಾನ್ವೇಷಕರು,ಯುವ ಜನಾಂಗಕ್ಕೆ ಪ್ರೋತ್ಸಾಹಿಸಿವ ವಿಶಾಲ ಹೃದಯಿ,ಜಾತ್ಯಾತೀತ ಲಿಂಗಾಯತ ಧರ್ಮದ ಪ್ರಣೀತರು ಗದುಗಿನ ಲಿಂಗೈಕ್ಯ ಡಾ:ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಕನ್ನಡ ಜಗದ್ಗುರುಗಳು ಎಂಬ ಬಿರುದಾವಳಿಗೆ ಸಮಾನವಾಗಿ ಇವರನ್ನು ಜ್ಞಾನ ಯೋಗಿ ಜ್ಞಾನ ದಾಸೋಹಿ ಎಂದು ಕರೆದರೆ ತಪ್ಪಾಗಲಾರದು.
ಸ್ವತ: ಶ್ರೀ ಗಳೆ ಸಾಹಿತಿಗಳಾಗಿದ್ದು ಹಲವಾರು ಮನಮೆಚ್ಚಿ ಮನಃಪರಿವರ್ತನೆ ಮಾಡಬಲ್ಲ ಕೃತಿಗಳನ್ನು ಲೋಕಾರ್ಪಣೆ ಮಾಡಿದ ಕೃತಿಕಾರರಾಗಿದ್ದಾರೆ.ಹಿರಿಯರು — ಕಿರಿಯರೆಂಬ ಬೇಧ-ಭಾವವಿಲ್ಲ.
ಜ್ಯೋತಿಯ ಮುಟ್ಟಿದ ಬತ್ತಿ ಎಲ್ಲ ಜ್ಯೋತಿಯಪ್ಪವಯ್ಯಾ, ಸಾಗರವ ಮುಟ್ಟಿದ ನದಿಗಳೆಲ್ಲ ಸಾಗರವಪ್ಪವಯಯ್ಯಾ.ಪ್ರಸಾದವ ಮುಟ್ಟಿದ ಪದಾರ್ಥವೆಲ್ಲ ಪ್ರಸಾದವಪ್ಪವಯ್ಯಾ. ಲಿಂಗವ ಮುಟ್ಟಿದಂಗವೆಲ್ಲ ಲಿಂಗವಪ್ಪವಯ್ಯಾ. ಸಕಳೇಶ್ವರದೇವಾ, ನಿಮ್ಮ ಮುಟ್ಟಿದವರೆಲ್ಲ ನಿಮ್ಮಂತಪ್ಪರಯ್ಯಾ.
ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷ, ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕ ಸೌರಾಷ್ಟ್ರ ಸೋಮೇಶ್ವರಲಿಂಗವು ಬೇರಿಲ್ಲ ಕಾಣಿರೋ
ಪ್ರಸ್ತುತ ಈ ಮೇಲಿನ ವಚನಗಳೆರಡು ಶ್ರೀ ಗಳಿಗೆ ಅತ್ಯಂತ ಹೋಲಿಕೆಯಾಗಬಲ್ಲವುಗಳಾಗಿವೆ. ಸದ್ಭಕ್ತರ ಪಾಲಿಗೆ ಪರುಷ ಮಣಿಯಂತಾಗಿದ್ದಾರೆ.ಹೊಗಳಿಕೆ–ತೆಗಳಿಕೆಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಹೊಂದಿದವರು. ಇಲ್ಲಿ ನಾನು ತೆಗಳಿಕೆ ಎಂಬ ಪದ ಬಳಿಸಿರುವ ಉದ್ದೇಶ ಕೂಡಾ ಇದೆ. ಅದೇನೆಂದರೆ, ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟದ ಮುಂಚೂಣಿಯಲ್ಲಿದ್ದಾಗ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ಒತ್ತಡಕ್ಕೆ ಒಳಗಾದರೂ ಹಿಂದೆ ಸರಿಯಲಿಲ್ಲ.ಅವರ ಈ ದಿಟ್ಟ ನಿಲುವು ಶ್ಲಾಘನೀಯ.
ಮುಳಗುಂದದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಮಠದ ಅಧಿಕಾರವನ್ನು ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾ ಸ್ವಾಮಿಗಳು 1974 ರಲ್ಲಿ ವಹಿಸಿಕೊಂಡರು.ಅಂದಿನಿಂದ ಅವರು ನಾಡಿನ ಶರಣ ಸಾಹಿತ್ಯದ ಪುಸ್ತಕಗಳನ್ನು ಪ್ರಕಟಿಸಲಾರಂಭಿಸಿ, ಬೆಂಗಳೂರಿನ ಸರ್ಪಭೂಷಣ ಮಠದಿಂದ ಹಾಗೂ ಧಾರವಾಡದ ಶ್ರೀ ಮುರುಘಾಮಠದಿಂದ,ಪಶುಪತಿಹಾಳ ಎಂಬ ಅತೀ ಚಿಕ್ಕ ಗ್ರಾಮದಿಂದಲೂ ನೂರಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಆವ ಸ್ಥಳವ ಸಾಧಿಸಿ ಬಂದು ನಿಂದಡೂ ಭಾವ ಶುದ್ಧಾತ್ಮ ನಾಗಿ ವೇಧಿಸುವದೊಂದೇ ವಸ್ತು. ಅದು ಭಕ್ತಿಯ ಬೇರು,ಅದು ಶ್ರದ್ಧೆಯ ಶಾಖೆ, ವಿಶ್ವಾಸದ ಫಲ, ಸ್ವಯದ ಸ್ವಾದು. ಅದು ಸಂಗನಬಸವಣ್ಣ ನಿಂದ ಬಂದ ಬೆಳೆ ಬ್ರಹ್ಮೇಶ್ವರ ಲಿಂಗದಲ್ಲಿ ಐಕ್ಯವಾಯಿತ್ತು
ಈ ವಚನದ ತಾತ್ಪರ್ಯದಂತೆ ಶ್ರೀಗಳು ತಮ್ಮ ಜೀವನದ ಆದರ್ಶಗಳನ್ನು ಹೊಂದಿದವರಾಗಿದ್ದಾರೆ.
–ರವೀಂದ್ರ. ಆರ್. ಪಟ್ಟಣ.
ಮುಳಗುಂದ—ರಾಮದುರ್ಗ