ಗುರು ಪೂರ್ಣಿಮಾ
ಗುರು ಎಂಬ ಪದದ ಅರ್ಥ ಬಹಳ ವ್ಯಾಪಕವಾಗಿದೆ. ಗುರು ಎಂದರೆ ದೊಡ್ಡದು, ಭಾರವಾದದ್ದು, ಹೆಚ್ಚು, ತೂಕವುಳ್ಳದ್ದು , ಕಠಿಣವಾದುದು ಪಿತ, ಹಿರಿಯ, ಪುರೋಹಿತ, ಪೂಜ್ಯ, ಉಪಾಧ್ಯಾಯ,ದೀಕ್ಷೆ ಕೊಡುವವನು , ಅಧ್ಯಾಪಕ ಎಂಬೆಲ್ಲಾ ಅರರ್ಥಗಳೂ ಇವೆ.
ಇಂದಿನ ವಾತಾವರಣದಲ್ಲಿ ನಮಗೆ ಯಾವುದೇ ವಿದ್ಯೆಯನ್ನು ಕಲಿಸಿದವರು ಗುರುಗಳು ಎಂಬ ಅಭ್ಯಾಸವನ್ನು ಮಾಡಿ ಕೊಂಡು ಬಂದಿದ್ದೇವೆ. ಆದರೆ ಪುರಾತನ ಕಾಲದಲ್ಲಿ ಗುರುಕುಲ ನಡೆಸಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುವವರನ್ನು ಗುರುಗಳು ಎಂದು ಬೋಧಿಸಲಾಗುತ್ತಿತ್ತು. ಶಾಸ್ತ್ರದ ಪ್ರಕಾರ ಐದು ಜನರಿಗೆ ಗುರುವಿನ ಸ್ಥಾನವನ್ನು ನೀಡುತ್ತಾರೆ ಮೊದಲನೆಯದು ತಾಯಿಗೆ ಮನೆಯೇ ಮೊದಲ ಪಾಠ ಶಾಲೆ ತಾಯಿ ತಾನೇ ಮೊದಲಗುರು, ಇನ್ನು ಎರಡನೆಯವರು ತಂದೆ ನಮ್ಮ ಜೀವನದ ಪ್ರತಿ ಹೆಜ್ಜೆಯನ್ನು ಕೈ ಹಿಡಿದು ನಡೆಸುವ ಗುರು ತಂದೆ, ಇನ್ನು ಮೂರನೆಯದು ಸೋದರಮಾವ ಅವರು ಕೂಡ ತಾಯಿಯಷ್ಟೇ ವಿಶ್ವಾಸ ಮಾಡಿ ಮಕ್ಕಳನ್ನು ಸನ್ನಡತೆಗೆ ಪ್ರೇರೇಪಿಸುತ್ತಾರೆ. ಇನ್ನು ನಾಲ್ಕನೆಯವರು ಪತಿ/ಪತ್ನಿಯ ತಂದೆ ಮಾವ, ಐದನೆಯವರು ಪಾಠ ಕಲಿಸಿದ ಆಚಾರ್ಯರು ಈವರು ಐವರನ್ನು ಗುರುಗಳು ಎನ್ನುತ್ತಾರೆ.
ಗುರುವಿಗೆ ಏಕೆ ಇಂತಹ ಮಹತ್ವದ ಸ್ಥಾನ ನೀಡಿದ್ದರು ಎಂದರೆ ಪುರಾಣ ಕಾಲದಿಂದಲೂ ಗುರುಕುಲವನ್ನು ಸ್ಥಾಪಿಸಿ ಎಲ್ಲರಿಗೂ ಜೀವನದಲ್ಲಿ ಬದುಕಿರುವ ಜೀವನದ ನಂತರಕ್ಕೆ ಉಪಯೋಗಕ್ಕೆ ಬರುವ ಆಧ್ಯಾತ್ಮ ವಿದ್ಯೆಯನ್ನೂ ಕಲಿಸುವ ಗುರುಗಳು ಇರುತ್ತಿದ್ದ ಕಾರಣ ಅವರನ್ನೇ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಎಂದರು.
ಜಗತ್ತಿಗೇ ಗುರುವಾಗಿ ಪ್ರಪಂಚದ ದೊಡ್ಡ ಗುರುಗಳು ವೇದವ್ಯಾಸರು. ಅವರ ಸ್ಮರಣೆ ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುವುದೇ ಗುರು ಪೂಜೆ ಅಥವಾ ಗುರು ಪೌರ್ಣಮಿ. ವೇದವ್ಯಾಸರು ಪ್ರತೀ ಯುಗದಲ್ಲಿಯೂ ಬೇರೆ ಬೇರೆ ತಿಂಗಳಿನಲ್ಲಿ ಅವತಾರ ಮಾಡಿದ್ದಾರೆ. 3ನೇ ದ್ವಾಪರಯುಗದಲ್ಲಿ ವೈಶಾಖ ಶುದ್ಧ ತ್ರಯೋದಶಿಯಂದು, 7ನೇ ದ್ವಾಪರ ಯುಗದಲ್ಲಿ ವೈಶಾಖ ಪೌರ್ಣಮೆಯಂದು, ಆಷಾಢ ಪೌರ್ಣಮೆಯಂದು 16ನೇ ದ್ವಾಪರಯುಗದಲ್ಲಿ, ಕಾರ್ತೀಕ ಪೌರ್ಣಮೆಯಂದು 21ನೇ ದ್ವಾಪರಯುಗದಲ್ಲಿ, ಮಾಘ ಮಾಸದ ಪೌರ್ಣಮೆಯಂದು ಮಾಡಲಾಗುತ್ತದೆ. ಸಾಮಾನ್ಯವಾಗಿ 5ರಲ್ಲಿ ಎರಡು ಬಾರಿ ಬಹಳ ವಿಜೃಂಭಣೆಯಿಂದ ಗುರು ಪೌರ್ಣಿಮಾ ಪೂಜೆಯನ್ನು ಮಾಡುವುದು.
28ನೇ ದ್ವಾಪರಯುಗದ ಮಾಘ ಪೌರ್ಣಮೆ ಮತ್ತು ಆಷಾಢದ ಪೌರ್ಣಮೆಯಂದು ಮಾಡಲಾಗುತ್ತದೆ. ವೇದವ್ಯಾಸರು ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಋಗ್, ಯಜುರ್, ಅಥರ್ವಣ, ಮತ್ತು ಸಾಮವೇದವೆಂದು ವಿಂಗಡಿಸಿದರು, 18 ಪುರಾಣಗಳನ್ನು ಬರೆದು, ಭಾಗವತ ಮತ್ತು ಬ್ರಹ್ಮ ಸೂತ್ರ ಭಾಷ್ಯಗಳನ್ನು ಬರೆದರು ಇವೆಲ್ಲವನ್ನೂ ಪ್ರಪಂಚಕ್ಕೆ ನೀಡಿ ಮನುಷ್ಯನನ್ನು ಹೇಗಿರಬೇಕು ಏನೆಲ್ಲಾ ಮಾಡಬೇಕು ಎಂದು ಮಾರ್ಗದರ್ಶನ ನೀಡಿದ್ದರಿಂದ, ಎಲ್ಲ ಋಷಿಮುನಿಗಳು ಅವರ ಈ ಗ್ರಂಥಗಳನ್ನು ತಮ್ಮ ಶಿಷ್ಯರಿಗೆ ಕಲಿಸಿ ಆಧ್ಯಾತ್ಮ ಮತ್ತು ಜೀವನದ ವಿದ್ಯೆಗಳನ್ನು ಕಲಿಸುವುದರಿಂದ ಅವರನ್ನು ಪ್ಪಂಚಕ್ಕೆಲ್ಲಾ ಗುರುಗಳು ಎನ್ನಲಾಗುತ್ತದೆ.
ವೇದವ್ಯಾಸರೊಂದಿಗೆ ನಮ್ಮ ಮಠ ಪರಂಪರೆಯ ಗುರುಗಳೊಂದಿಗೆ ಮುಖ್ಯವಾಗಿ ಮಧ್ವಾಚಾರ್ಯರನ್ನೂ ಪೂಜಿಸುತ್ತೇವೆ. ಸಮಾಜದಲ್ಲಿ ಆದ ಬದಲಾವಣೆಯಿಂದ ಶಾಲೆಯಲ್ಲಿ ಕಲಿಸುವ ಅಧ್ಯಾಪಕರು ಗುರುಗಳೇ, ಭಾಗವತದ ಹನ್ನೊಂದನೇ ಅಧ್ಯಾಯವನ್ನು ಕೇಳಿದಾಗ ನಮಗೆ ಅನಿಸವುದು ಪ್ರಪಂಚದ ಎಲ್ಲ ವಸ್ತುಗಳು ಮತ್ತು ವ್ಯಕ್ತಿಗಳೂ ಗುರುಗಳೇ ಎಂದು. ಏಕೆಂದರೆ ದೊಡ್ಡವರಿರಲಿ ಸಣ್ಣವರಿರಲಿ ಎಲ್ಲರಿಂದ ಕಲಿಯುವುದು ಇದ್ದೇ ಇರುತ್ತದೆ. ಗುರುಪೌರ್ಣಮೆಯ ವಿಶೇಷ ಪರ್ವದಲ್ಲಿ ನಾವು ಗುರುಗಳಿಗೆ ದಕ್ಷಿಣೆ ಅಥವಾ ಉಪಹಾರವನ್ನು ಕೊಡುವುದರ ಜೊತೆಗೆ ಅವರ ಮಾತುಗಳಂತೆ ನಡೆದು ತೋರಿಸುವುದು ಸರಿಯಾದ ಗುರು ದಕ್ಷಿಣೆ.
–ಮಾಧುರಿ ದೇಶಪಾಂಡೆ, ಬೆಂಗಳೂರು