ಗಜ಼ಲ್
ವಿಷವೂಡುವ ಜನರ ನಡುವಲಿ ಬದುಕಬೇಕಾಗಿದೆ
ವಂಚಿಸುವ ಕುತಂತ್ರರ ಜಾಲದಲಿ ನರಳಬೇಕಾಗಿದೆ
ಮುಖವಾಡವ ಹಾಕಿದವರ ಜೊತೆಯಲಿ ನಡೆಯಬೇಕಾಗಿದೆ
ಜಾತಿಬೇಲಿಯ ಕಟ್ಟಿದವರ ನೆರಳಲಿ ನಲುಗಬೇಕಾಗಿದೆ
ಅಂಧಶ್ರದ್ಧೆಯ ಹರಡಿದವರ ಕತ್ತಲಲಿ ತೆವಳಬೇಕಾಗಿದೆ
ಬಂಧುರವ ಮುರಿದವರ ಹಂಗಿನಲಿ ಮರುಗಬೇಕಾಗಿದೆ
ಎಂಜಲೆಲೆಯ ನೆಕ್ಕುವವರ ತಟ್ಟೆಯಲಿ ಹಳಸಬೇಕಾಗಿದೆ
ಅನಾಚಾರವ ಮೆರೆವವರ ಅಬ್ಬರದಲಿ ಕೊರಗಬೇಕಾಗಿದೆ
ನೆತ್ತರವ ಸುರಿವವರ ಧಾರೆಯಲಿ ನೆನೆಯಬೇಕಾಗಿದೆ
ಬೇಗಂ ಮನವ ರಮಿಸುವವರ ಒಲವಿನಲಿ ಬೆರೆಯಬೇಕಾಗಿದೆ.
ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ