ವಾಸ್ತವದ ಒಡಲು

ಅಮೃತ ಮಹೋತ್ಸವದ ಅಮೃತ ಘಳಿಗೆ

‘ಆಜಾದಿ ಕಾ ಅಮೃತ ಮಹೋತ್ಸವ’, ‘ಘರ್ ಘರ್ ತಿರಂಗ’, ಹೀಗೆ ಎದ್ದ ಅಲೆಯ ಗುಂಯ್‌ಗುಟ್ಟುವಿಗೆ, ನಾವು ಭಾರತೀಯರಲ್ಲಿ ಇನ್ನೂ ಮಾಸಿಯೇ ಇಲ್ಲ. ಒಂದು ರೀತಿಯ ಗುಂಗು ಹಿಡಿದ ನಶೆ, ಇಂದಿಗೂ ಮನದಲ್ಲಿ ಆವರಿಸಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಆಚರಣೆಗೆ ಅತಿಥಿಯಾಗಿ ಪಾಲ್ಗೊಳ್ಳುವಂತೆ, ಬೀದರಿನ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಸವರಾಜ ಮೂಲಗೆಯವರು ಕಾಲ್ ಮಾಡಿ ಕೇಳಿದರು. ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಒಡನಾಡಿಯೂ ಹೌದು, ಹಾಗೆಯೇ ಅಣ್ಣನಂತಿರುವ ಅವರಿಗೆ ಕೂಡಲೆ ಒಪ್ಪಿಗೆ ಸೂಚಿಸಿದೆ.

ಅಂದು ಹದಿನೈದು ಆಗಸ್ಟ್! ಬೆಳಗಿನ ಸೂರ್ಯೋದಯ ಕಾಣದ, ಮೋಡ ಕವಿದ ವಾತಾವರಣ. ಸರಿಯಾಗಿ ಎಂಟು ಗಂಟೆಗೆ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಬಸವರಾಜ ಮೂಲಗೆ ಎದುರಾದರು. ನಂತರ ಬಾಲ್ಯದ ಸಹಪಾಠಿ ದೀಪಕ್ ಸ್ಯಾಮ್ಯುಯೆಲ್ ಬಂದರು. ಸಂಸ್ಥೆಯ ಮುಖ್ಯಸ್ಥರಾದ ಫಾದರ್ ವಿಲ್‌ಸನ್ ಫರ್ನಾನ್‌ಡಿಸ್ ತುಂಬು ನಗೆಯೊಂದಿಗೆ ಸ್ವಾಗತಿಸಿದರು.

ಕಾರ್ಯಕ್ರಮದ ಆರಂಭ ಮಕ್ಕಳ ಬ್ಯಾಂಡ್‌ನೊಂದಿಗೆ ಅತಿಥಿಗಳ ಸ್ವಾಗತ. ಪೂಜ್ಯ ಶ್ರೀ ಡಾ.ಶಿವಾಚಾರ್ಯ ಸ್ವಾಮಿಗಳು, ಸಿಸ್ಟರ್ ಮರಿಯಾ ರಿತಿಕಾ, ಪ್ರವೀಣ ಪೌಲ್, ಮೌಲಾನಾ ಚಿಸ್ತಿ, ಜಯರಾಜ ಖಂಡ್ರೆ ಮುಂತಾದ ಅತಿಥಿಗಳೊಂದಿಗೆ ನಿಂತೆವು. ಅದು ಸರ್ವ ಧರ್ಮಗಳ ಸಮನ್ವಯದಂತೆ ಕಂಡಿತು.

ಆಗ ಶಾಲಾ ಮಕ್ಕಳು ಬ್ಯಾಂಡ್‌ನೊಂದಿಗೆ ಸ್ವಾಗತಿಸಲು ಸಿದ್ಧರಾದರು. ನಮ್ಮನ್ನೆಲ್ಲಾ ಸ್ವಾಗತಿಸುತ್ತ, ವೇದಿಕೆಗೆ ಕರೆದುಕೊಂಡು ಹೊರಟರು. ವಿವಿಧ ಸ್ವಾತಂತ್ರ್ಯ ಹೋರಟಗಾರರ ವೇಷಧಾರಿ ವಿದ್ಯಾರ್ಥಿಗಳು ಎರಡೂ ಬದಿಯಲ್ಲಿ ಸಾಲಾಗಿ ಹೊರಟರು. ಆ ಭವ್ಯ ಸ್ವಾಗತ ಕಣ್ಮನ ಸೆಳೆಯುವಂತಿತ್ತು. ಶಾಲಾ ಮಕ್ಕಳೇ ಬ್ಯಾಂಡಿನ ಕಲಾವಿದರು. ಅವರ ಪ್ರತಿಭೆ ಕಂಡು ಆಶ್ಚರ್ಯವಾಯಿತು. ಅವರಿಗೆ ಕಲಿಸಿದ ಕಲಾ ಗುರುಗಳಿಗೆ ಮನದಲ್ಲೇ ವಂದಿಸಿದೆ.

ಭವ್ಯವಾದ ವೇದಿಕೆಯ ಮೇಲೆ ಅತಿಥಿಗಳನ್ನು ಕೂರಿಸಿದರೆ, ಸ್ವತಂತ್ರ ಹೋರಾಟಗಾರರ ವೇಷಧಾರಿ ವಿದ್ಯಾರ್ಥಿಗಳು ಸುತ್ತಲೂ ನಿಂತರು. ಇದು ವೇದಿಕೆಯ ಸೌಂದರ್ಯ ಹೆಚ್ಚಿಸಿತು. ಸರ್ವ ಧರ್ಮ ಪ್ರಾರ್ಥನೆ ಕೇಳುವಾಗ ಮೈಯೆಲ್ಲಾ ಗದ್ಗದಿತ. ಸ್ವಾಗತ ನೃತ್ಯ ಜಿಟಿಜಿಟಿ ಮಳೆಯಲ್ಲಿ ಇನ್ನೂ ಸುಂದರವಾಗಿ ಕಂಗೊಳಿಸಿತು. ಮಕ್ಕಳು, ಪಾಲಕರು ಮತ್ತು ಶಿಕ್ಷಕ ವೃಂದದವರು ಸಣ್ಣಸಣ್ಣ ಮಳೆ ಹನಿಗಳಿಗೆ ಕದಲದೆ ಕುಳಿತಿದ್ದರು. ಅವರಲ್ಲಿರುವ ನಿಷ್ಠೆ ನೋಡಿ, ‘ಇದು ಇಂದಿನ ದೇಶ ಪ್ರೇಮ!!!’ ಎನಿಸಿ ಹೆಮ್ಮೆಯ ಭಾವನೆ ಮೂಡಿತು.

ಕಾರ್ಯಕ್ರಮ ಆರಂಭವಾದ ನಂತರ ಸೂರ್ಯಕಾಂತ ನಾಗಮಾರಪಳ್ಳಿಯವರು ಆಗಮಿಸಿದರು. ಬ್ಯಾಂಡಿನ ಸ್ವಾಗತ ಅವರಿಗೆ ತಪ್ಪಿತು ಎನಿಸುವಷ್ಟರಲ್ಲಿ, ಅವರ ಅಭಿಮಾನಿಗಳಾದ ಅಲ್ಲಿಯ ಪ್ರೇಕ್ಷಕರು ಚಪ್ಪಾಳೆಯ ಮೂಲಕ, ತಮ್ಮ ಹೃದಯದ ಬ್ಯಾಂಡ್‌ನಿಂದ ಸ್ವಾಗತಿಸಿದರು. ನಾಗಮಾರಪಳ್ಳಿಯವರ ಜನಾನುರಾಗದ ಝಲಕ್ ಅದಾಗಿತ್ತು.

ಅಂದು ಸೈಂಟ್ ಜೋಸೆಫ್‌ನ ನಾಲ್ಕೂ ಶಿಕ್ಷಣ ಸಂಸ್ಥೆಗಳನ್ನು ಒಂದುಗೂಡಿಸಿ ಆರುನೂರಕ್ಕೂ ಹೆಚ್ಚು ಮಕ್ಕಳಿದ್ದರೆಂದು ತಿಳಿದು ಬಂತು. ಅತಿ ಹೆಚ್ಚು ಸಂಖ್ಯೆಯಲ್ಲಿದ್ದರೂ, ಅಲ್ಲಿ ಶಿಸ್ತು, ಸಂಯಮ, ಬದ್ಧತೆ ಇತ್ತು. ರಾಜಕೀಯದ ವ್ಯಕ್ತಿಗಳು ತಮ್ಮ ಸೇವೆ ಮತ್ತು ಜನಪ್ರಿಯತೆಯಿಂದಾಗಿ ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿರುತ್ತಾರೆ. ಹಾಗೆಯೇ ನಾಗಮಾರಪಳ್ಳಿಯವರು ಅಲ್ಲಿ ನೆರೆದ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಸ್ವಾಮೀಜಿ, ಸೂರ್ಯಕಾಂತ ನಾಗಮಾರಪಳ್ಳಿ ಮತ್ತು ಫಾದರ್ ಧ್ವಜಾರೋಹಣ ಮಾಡಿದರು. ದೇಶಾಭಿಮಾನ, ತ್ರಿವರ್ಣ ಧ್ವಜದ ಹಾರಾಟ, ಸಾಮೂಹಿಕ ರಾಷ್ಟ್ರಗೀತೆ ಮತ್ತು ಪೆರೇಡ್‌ನಲ್ಲಿ ಕದಲದೇ ನಿಂತ ವಿವಿಧ ಸಮವಸ್ತ್ರದ ವಿದ್ಯಾರ್ಥಿಗಳ ಗುಂಪು, ಅದನ್ನು ನೋಡುತ್ತಿದ್ದ ಆ ಸಂದರ್ಭ, ಅಬ್ಬಾ! ಮೈ ರೋಮಾಂಚನ!!! ಅಷ್ಟೇ ಹೇಳಬಹುದು.

ಮಕ್ಕಳ ಬ್ಯಾಂಡ್ ಮತ್ತು ಪಥ ಸಂಚಲನ ವೀಕ್ಷಿಸಿ ಬೆರಗಾದೆ. ‘ಬೀದರ ಹಿಂದುಳಿದಿಲ್ಲ’ ಎನ್ನುವ ಉದ್ಗಾರ ಮನದಲ್ಲಿ ಮಾರ್ನುಡಿಯಿತು. ಈ ಮಕ್ಕಳಲ್ಲಿ ಮತ್ತು ಕಲಿಸಿದ ಶಿಕ್ಷಕರಲ್ಲಿ ಅದೆಷ್ಟು determination, dedication and devotion ಇದೆ ಎನಿಸಿತು. ಅವರೆಲ್ಲರ ಪರಿಶ್ರಮ ‘ಆಜಾದಿ ಕಾ ಅಮೃತ ಮಹೋತ್ಸವ’ದ ಸಂಭ್ರಮಾಚರಣೆಯಲ್ಲಿ ಎದ್ದು ಕಾಣುತ್ತಿತ್ತು. ಮೈದಾನದ ತುಂಬೆಲ್ಲಾ ಅಚ್ಚುಕಟ್ಟಾಗಿ ಸೇರಿದ್ದ ಮಕ್ಕಳನ್ನು, ಮೇಲಿನಿಂದ ನೋಡಿದರೆ, 75 ಆಕಾರದಲ್ಲಿ ನಿಂತಿದ್ದರು. ಅಕ್ಷರಗಳಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಎನ್ನುವ ಇಂಗ್ಲಿಷ್ ಅಕ್ಷರಗಳ ಪ್ರಕಾರ ನಿಂತಿದ್ದರು. ಟಾಪ್ ವೀವ್ ನಿಂದ ಸುಂದರ ದೃಶ್ಯ!

ಕ್ರೈಸ್ತ ಮಿಷನರಿಗಳು, ಕ್ಯಾಥೊಲಿಕ್ ಸಂಸ್ಥೆಗಳು ಶಿಸ್ತು, ಸೌಜನ್ಯ, ಆತಿಥ್ಯಕ್ಕೆ ಹೆಸರುವಾಸಿ. ಈಗ ಬರಹಗಾರ್ತಿಯಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದಾಗಿನಿಂದ ಇಂತಹ ಸಂದರ್ಭ ಎದುರಾಗಿರಲಿಲ್ಲ. ಶಾಲಾ ಕಾಲೇಜುಗಳಿಗೆ ಅತಿಥಿಯಾಗಿ ಭಾಗಿಯಾಗುತ್ತಿದ್ದೆ. ಆದರೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಂದರ್ಭ ಒದಗಿ ಬಂದಿರಲಿಲ್ಲ. ಇಂದು ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಮಕ್ಕಳು ಹೊಸ ಅನುಭವ ನೀಡಿದರು. ದೆಹಲಿಯ ಕೆಂಪು ಕೋಟೆಯ ಮುಂದೆ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯ ಪುಟ್ಟ version ಇದು ಎಂದು ನನ್ನ ಮನ ಹೇಳಿತು.

ಹಿಂದೆ ನನ್ನ ಬಾಲ್ಯದಲ್ಲಿ ಮೈಸೂರು ನಿರ್ಮಲಾ ಕಾನ್ವೆಂಟ್ ಮತ್ತು ಬೀದರಿನ ನಾರ್ಮಾ ಫೆಂಡ್ರಿಕ್ ಹೈಸ್ಕೂಲ್‌ನಲ್ಲಿ ಓದಿದ ದಿನಗಳು ನೆನಪಾದವು. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗರ್ಲ್ ಗೈಡ್ ಆಗಿ ಮಾರ್ಚ್ ಪಾಸ್ಟ್‌ನಲ್ಲಿ ಭಾಗಿಯಾಗುತ್ತಿದ್ದೆ. ಹಳೆಯ ಸವಿ ನೆನಪನ್ನು ಮರುಕಳಿಸಿದ್ದು, ಈ ಕಾರ್ಯಕ್ರಮದ ಮೂಲಕ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಫಾರ್ದರ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು.

ಒಂದಿಷ್ಟು ಮಳೆ ಸಣ್ಣಗೆ ತೊಂದರೆ ಕೊಟ್ಟಿತು. ಆದರೂ ಮಕ್ಕಳು ಬಹಳ ಹೊತ್ತಿನವರೆಗೆ ಸಂಯಮ ಕಾಪಾಡಿಕೊಂಡೇ ಇದ್ದರು. ರಾಜಕೀಯ, ಸಿನಿಮಾ, ಕ್ರೀಡಾ ಕ್ಷೇತ್ರದ ವ್ಯಕ್ತಿಗಳು ಬಂದರೆ, ಅದೊಂದು ತರಹದ ಅಲೆ ಇದ್ದಂತೆ! ಎಲ್ಲವನ್ನೂ ಕದಡಿ ಬಿಡುತ್ತಾರೆ. ಹಾಗೆಯೇ ನಾಗಮಾರಪಳ್ಳಿ ಅವರಿಂದಾಗಿ ಅಭಿಮಾನಿಗಳ ನೂಕಾಟ ಮತ್ತು ಸೆಲ್ಫಿಯ ಆಟ ನಡೆಯಿತು. ನಾಗಮಾರಪಳ್ಳಿಯವರು ಹೋದ ನಂತರ, ಮಳೆ ಹನಿಯುತ್ತಿದ್ದರೂ, ನಿಂತ ಭಾವನೆ ಮೂಡಿತು.

ನಿನ್ನೆ ಕಾರ್ಯಕ್ರಮದ ಫೋಟೊ ನೋಡುವಾಗ ಗಮನಿಸಿದೆ. ವೇದಿಕೆಯ ಮೇಲೆ ನಿಂತು ಮಾತನಾಡುವಾಗ ನನ್ನ ಹಿಂದೆ ಶಿಕ್ಷಕರೊಬ್ಬರು ಕೊಡೆ(umbrella) ಹಿಡಿದು ನಿಂತಿದ್ದರು. ಮಳೆಯ ಸಣ್ಣ ಸಣ್ಣ ಹನಿಗಳು ತಾಕದಿರಲೆಂದು. ಅದನ್ನು ನೋಡಿ ಮುಜುಗರವಾಯಿತು. ನನಗೆ ತಿಳಿದಿದ್ದರೆ, ಹಾಗೆ ಮಾಡಲು ಬಿಡುತ್ತಿರಲಿಲ್ಲ. ನಾವೇನು ರಾಜ ಮಹಾರಾಜರಲ್ಲ, ಛತ್ರ ಚಾಮರ ಹಿಡಿಯಲು, ಎನಿಸಿ ನಗು ಬಂದಿತು.

ಪೂಜ್ಯ ಸ್ವಾಮಿಗಳು ಮತ್ತು ನಾನು ಸಾಂದರ್ಭಿಕ ಅರಿವಿನಿಂದಾಗಿ ಹೆಚ್ಚು ಎಳೆದಾಡದೆ, ಸಂಕ್ಷಿಪ್ತವಾಗಿ ಮಾತನಾಡಿದೆವು. ಫಾದರ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಒಂದಿಷ್ಟು ಮಾತುಕತೆ ಮತ್ತು ಸೆಲ್ಫಿ! ಬಾಲ್ಯದ ಒಡನಾಡಿ ವಿದವೀರ, ನನ್ನ ಕೃತಿ ಓದಿದ ಶಿವರಾಜ ಕೌಟಗೆ, ಇನ್ನಿತರರ ಭೇಟಿ, ಪರಿಚಯವಾಯಿತು.

ಸಂಸಾರ ಮತ್ತು ಸಾಹಿತ್ಯದಲ್ಲಿ ನಿತ್ಯ ಕಳೆದು ಹೋಗುವ ನನ್ನನ್ನು ಗುರುತಿಸಿ, ತಮ್ಮ ಶಿಕ್ಷಣ ಸಂಸ್ಥೆಗೆ ಬರಮಾಡಿಕೊಂಡು, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಕಳೆದ ಈ ಸಮಯ ಮನಸಿಗೆ ಮುದ ನೀಡಿತು. ಇದು ಅಮೃತ ಮಹೋತ್ಸವದ ಅಮೃತ ಘಳಿಗೆ! ಈ ಅನುಭವದ ಸುಂದರ ನೆನಪಿನೊಂದಿಗೆ ಅಲ್ಲಿಂದ ಬೀಳ್ಕೊಂಡೆ.

ಸಿಕಾ

Don`t copy text!