ನಾ ಓದಿದ ಪುಸ್ತಕ
“ಮಾಕೋನ ಏಕಾಂತ”
( ಕಥಾ ಸಂಕಲನ)
(ಛಂದ ಪುಸ್ತಕ ಬಹುಮಾನ ಪಡೆದ ಕೃತಿ)
ಕೃತಿ ಕರ್ತೃ: ಕಾವ್ಯಾ ಕಡಮೆ
ಛಂದ ಪುಸ್ತಕ ಬಹುಮಾನ ಪಡೆದ ಕಥಾ ಸಂಕಲನ “ಮಾಕೋನ ಏಕಾಂತ”, ಕಾವ್ಯ ಕಡಮೆಯವರ ವಿಶೇಷವಾದ ಕೃತಿ. ಇಲ್ಲಿಯ ಬಹುತೇಕ ಕಥೆಗಳು ಭಾರತೀಯರ ವಿದೇಶಿ ಜೀವನದ ಬಗ್ಗೆ ಇದ್ದು; ಬಹಳ ಆಪ್ತವೆನಿಸುತ್ತವೆ. ಕಾವ್ಯಾ ಕಡಮೆ ಅವರ ಸಾಹಿತ್ಯ ಮತ್ತು ಭಾಷಾ ಪ್ರೌಢಿಮೆ ಪ್ರತಿ ಹಂತದಲ್ಲೂ ಓದುಗನಿಗೆ ಕಾಣಸಿಗುತ್ತದೆ. ಒಟ್ಟು ಎಂಟು ಕಥೆಗಳನ್ನೊಳಗೊಂಡ ಕಥಾ ಸಂಕಲನ ವಿಭಿನ್ನ ಕಥಾವಸ್ತುಗಳಿಂದ ಕೂಡಿದ್ದು, ಲೇಖಕಿಯವರ ವಿವಿಧ ಆಯಾಮದ ಚಿಂತನೆಯ ಕೂಸು ಇದಾಗಿದೆ.
ಬದುಕಿನ ಸಾರ, ಜೀವನ ಶೈಲಿ, ಅತಿಯಾದ ಸ್ವಾತಂತ್ರ್ಯದ ದುರುಪಯೋಗ, ಅಹಂಕಾರ, ಮುನಿಸು, ಪ್ರೇಮ, ಶಿಕ್ಷೆ, ಹಾಸ್ಯ, ಸ್ವೇಚ್ಛೆ ಎಲ್ಲವನ್ನೂ ಒಳಗೊಂಡ ಕಥನಗಳ ಕನ್ನಡಿಯೇ ಈ “ಮಾಕೋನ ಏಕಾಂತ”. ಈ ಉತ್ತಮ ಕಥಾ ಸಂಕಲನದ ಎಂಟೂ ಕಥೆಗಳ ಕುರಿತಾದ ಒಂದಷ್ಟು ಅವಲೋಕನ ತಮ್ಮ ಓದಿಗೆ ಹಂಚಿಕೊಳ್ಳುತ್ತಿದ್ದೇನೆ.
(ಲೇಖಕಿ-ಕಾವ್ಯ ಕಡಮೆ)
“ಮಾಕೋನ ಏಕಾಂತ”, ಮಾಕೋ ಅಲಿಯಾಸ್ ಮಲ್ಲಿಕಾರ್ಜುನ. ಸ್ಟೈಲಿಶ್ ಆಗಿ ತಾತನ, ತಾತನ ಕಾಲದ ಹೆಸರನ್ನು ಕೇಳಲು, ಹೇಳಲು ಇಚ್ಚಿಸದೆ ಮಲ್ಲಿಕಾರ್ಜುನ ಮಾಕೋ ಆಗಿ ಬದಲಾಗಿದ್ದ.
ಟೋರಿ, ಪರದೆಯ ಹಿಂದೆ ಮುದ್ದಾಟದ ತನಕ ಮುಂದುವರೆದ ಗಂಡನಲ್ಲದ ಸ್ನೇಹಿತ. ಕಥಾ ನಾಯಕಿಯ ಮನೆಗೆ ಬಂದಿಲ್ಲವಾದರೂ ಮೈಗೆ, ಮನಕ್ಕೆ ಹತ್ತಿರವಾದವ. “ಕನ್ನಡ ಭಾಷೆ ಸಂಗೀತದ ಹಾಗಿರುತ್ತದೆ” ಎಂಬ ಟೋರಿಯ ನುಡಿ ಕಥಾ ನಾಯಕಿಗೆ ಎಷ್ಟು ಹಿತವೆನಿಸುತ್ತದೆಯೋ ಅಷ್ಟೇ ಖಷಿಯ ಹದ ಓದುಗನಿಗೆ ಆ ಸಾಲಿನ ಓದಿನಲ್ಲಿ ಆಗುತ್ತದೆ.
ಬಾಧ್ಯತೆ ಇಲ್ಲದ ಇವರ ಸಂಬಂಧ ಆ ಕ್ಷಣದ ಚರ್ಮದ ಸುಖಕ್ಕೆ ಸೀಮಿತವಾಗಿರುತ್ತದೆ. ಚರ್ಮದೊಳಗೆ ಹರಿಯುವ ಭಾವನೆಗೆ ಸ್ಪಂದನೆ ಕೊಟ್ಟರೂ ಆದೀತು, ಕೊಡದಿದ್ದರೂ ಪ್ರಶ್ನಿಸುವಂತಿಲ್ಲ.
ಇನ್ನೂ ಸುಹಾಸ(ಮಾಕೋನ ತಂದೆ), ತಿಂಗಳ ಮುಕ್ಕಾಲು ದಿನಗಳು ಟ್ರಕ್ಕಲ್ಲಿ ವಾಸ ಮಾಡುವವ. ಕಥೆಯ ಅಂತ್ಯದವರೆಗೂ ಅವನು ದೈಹಿಕ ಪಾತ್ರವಾಗಿ ಪ್ರವೇಶಿಸುವುದಿಲ್ಲ.
ಮಾಕೋನ ಜನನಕ್ಕೆ ಕಾರಣವಾದವನಷ್ಟೇ ಎಂಬ ಮಾತು ನಾಯಕಿಯ ಮೌನದ ಮಾತಲ್ಲಿ ಗ್ರಹಿಕೆಯಾಗುತ್ತದೆ. ಉತ್ತಮ ಚಾಲಕನೆಂಬ ಬಿರುದು ಪಡೆದ ಸುಹಾಸನ ಸಂಬಳ ನ್ಯೂಜರ್ಸಿಯಲ್ಲಿನ ವಾಸಕ್ಕೆ ಅನಿವಾರ್ಯವಂತೆ. ಹಿಂಗಾಗಿ ತಿಂಗಳಿಗೆ ಇಪ್ಪತ್ತೈದು ದಿನ ಹೊರಸಂಚಾರ.
ಮುದ್ದು ಗಂಡ ಮುದ್ದು ಮಾಡಿ ವರ್ಷಗಳೇ ಕಳೆದಿವೆ ಎಂಬ ನಾಯಕಿಯ ಮನೋವೇದನೆಗೆ ಮದ್ದಿಲ್ಲ. ಈ ನಡುವೆ ಟೋರಿಯ ಸಾಂಗತ್ಯ ನಾಯಕಿಗೆ ಸಿಹಿ ಚುಚ್ಚುಮದ್ದು. ಬದುಕು ಹೀಗೆ ಸಾಗುತ್ತಿರುವಾಗ ಮನೆಯಲ್ಲಿ ಪ್ರತಿ ರಾತ್ರಿ ಹೆಜ್ಜೆಗಳ ಸದ್ದು ಎರಡು, ಎರಡರಿಂದ ನಾಲ್ಕು, ನಾಲ್ಕು ದಾಟಿ ಹತ್ತಾರು ಆದದ್ದು ಅದರಲ್ಲಿ ಗೆಜ್ಜೆ ಇಲ್ಲದಿದ್ದರೂ ಗೆಜ್ಜೆ ಕಟ್ಟುವ ಕಾಲುಗಳು ಎಂದು ನಾಯಕಿಯ ಸೂಕ್ಷ್ಮ ಪ್ರಜ್ಞೆ ನಿದ್ರಾವಸ್ಥೆಯಲ್ಲೂ ತಿಳಿಸುತ್ತದೆ. ತಡೆದು ತಡೆದು ಇದನ್ನು ಪ್ರಶ್ನಿಸಿದಾಗಲೇ ನೋಡಿ ಮಗ ಮಾಕೋನ ಏಕಾಂತಕ್ಕೆ ಧಕ್ಕೆ ಆದದ್ದು, ಆವನ ಮ್ಯಾಜಿಕಲ್ ಶಕ್ತಿಯಿಂದ ನಾಯಕಿಯ ಕಳ್ಳ ಗಂಡ ಟೋರಿ ಮತ್ತೆಂದೂ ಬರುವುದಿಲ್ಲ ಎಂಬ ಸತ್ಯ ನಾಯಕಿಗೆ ಮಗನಿಂದ ಸಿಕ್ಕದ್ದು. ಇದು ಮಗನ ಮುಂದೆ ಅವಮಾನವೂ ಹೌದು. ಈ ಕಾರಣಕ್ಕೆ ಗಂಡ ಸುಹಾಸನೂ ದೂರದೂರ ಸಾಗುತ್ತಲೇ ಇರುವುದೂ ಹೌದು. ಮಾಕೋನ ಹೆಜ್ಜೆ ಸದ್ದಿಗಿಂತ ತನ್ನ ಬದುಕಿನ ಹೆಜ್ಜೆಗಳು ಅನೈತಿಕವಾದವು ಎಂಬಲ್ಲಿ ಕಥೆ ಮುಕ್ತಾಯವಾಗುತ್ತದೆ.
ಇಲ್ಲಿ ಏಕಾಂತದ ನಿಗೂಢತೆಯನ್ನು ಬೇಧಿಸುವ ಶಕ್ತಿ ಮ್ಯಾಜಿಕಲ್ ಆಗಿದೆ. ಬೆಕ್ಕು ಕಣ್ಣು ಮುಚ್ಚಿ ಕುಡಿದಾಕ್ಷಣ… ? ಎಂದು ಓದುಗನಿಗೆ ಅನಿಸಿ ತನ್ನನ್ನು ಅವಲೋಕಿಸಿಕೊಳ್ಳುವಂತೆ ಮಾಡುತ್ತದೆ. ನಮ್ಮ ಏಕಾಂತಗಳು ಹೀಗೆ ಮ್ಯಾಜಿಕಲ್ ಆಗಿ ಜಗತ್ತಿಗೆ ಪ್ರಸವ ಆಗದಿರಲಿ ಎಂದು ಮತ್ತೆ ಓದುಗ ಕಣ್ಣು ಮುಚ್ಚಿಕೊಳ್ಳುವಂತೆ ಕಥೆ ಆವರಿಸುತ್ತದೆ.
ಗಂಡನೊಂದಿಗಿನ ಸರಸ ಸಲ್ಲಾಪ, ಪರಪುರುಷನೊಂದಿಗೆ ಇಲ್ಲದಿದ್ದರೂ ಗಂಡನಷ್ಟೇ ಸಾಮಿಪ್ಯ ಪರಪುರುಷನೊಂದಿಗೆ, ತೀರಾ ಖಾಸಗೀ ವಿಷಯಗಳನ್ನೂ ಪರಪುರುಷನೊಟ್ಟಿಗೆ ಹಂಚಿಕೊಳ್ಳುವ ಹೆಣ್ಣಿನ ಮನಸ್ಥಿತಿ, ಗಂಡನಾದವನ ಅಸಹನೆ. ಅದನ್ನು ಕಕ್ಕಿಕೊಳ್ಳುವ ತವಕ, ಉದ್ವೇಗ, ಮನೋವೇದನೆಯ ವ್ಯಥೆ ಈ ಕಥೆ. ಅದನ್ನು ಹೊರಗೆಡವಿದರೆ ಸಂಬಂಧ ನಶಿಸುತ್ತದೆ. ಸಂಬಂಧ ಹಳಸದಂತೆ ತಡೆಯಲು ಮತ್ತೆ ಸೋಲುವ ಗಂಡ ಈ ಕಥೆಗೆ ನಾಯಕ.”ಅಪರಿಚತರನ್ನು ಎದುರಿಸಬಹುದು ಪರಿಚಿತರದ್ದೆ ಕಷ್ಟ” ಎನ್ನುವ ಎಸ್ ಎನ್ ಸೇತುರಾಮ್ ಅವರ “ಗತಿ” ನಾಟಕದ ಮಾತು ಇಲ್ಲಿ ಪ್ರಸ್ತುತ.
ಇದರ ನಡುವೆ ತನ್ಮಯಿಯ(ಕಥಾ ನಾಯಕಿ) ಬಸಿರು ಇನ್ನೇನು ಹುಟ್ಟಬೇಕುನ್ನುವಷ್ಟರಲ್ಲಿ ಗರ್ಭಪಾತ. ಹೊಟ್ಟೆಯಲ್ಲೇ ಇಹಲೋಕ ದರ್ಶಿಸದೆ ಅಸುನೀಗಿದ ಗಂಡು ಶಿಶು ಸುಮನ್ವಯ. ಇದರ ತಂದೆ ಸುಮೇದ. ಇಬ್ಬರ ಹೆಸರನ್ನು ಮಿಲನಿಸಿ ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸಿದಂತೆ, ಶಿಶು ಹುಟ್ಟುವ ಮುನ್ನವೇ ಅದಕ್ಕೆ ಶೀರ್ಷಿಕೆ ಕೊಟ್ಟ ದಂಪತಿಗಳಿಗಾಗುವ ನಿರಾಸೆಯೇ ಈ ಕಥೆಯ ಮುಖ್ಯಾಂಶ . ಹೆರಿಗೆಯಾದರೂ ಹಾಲುಣಿಸುವ ಭಾಗ್ಯವಂಚಿತ ತಾಯಿ ತನ್ಮಯಿ, ಹಾಲನ್ನು ಬ್ರೆಸ್ಟ್ ಪಂಪ್ ಮೂಲಕ ಶೇಖರಿಸಿ ತಾಯಹಾಲ ವಂಚಿತ ಕಂದಮ್ಮಗಳಿಗೆ ದಾನ ಮಾಡುವುದು ವಿಶೇಷ ಎನಿಸುತ್ತದೆ. ಹಾಲು ಕರೆಯುವ ಯಂತ್ರ ಕಾರ್ಯನಿರ್ವಹಿಸುವಾಗ ಗಂಡನಿಗೂ ಪ್ರವೇಶ ನಿಶಿದ್ಧವಾಗಿರುತ್ತದೆ.
ಈ ಕಥೆಯ ನಾಯಕನ ವ್ಯಥೆಗೆ ಕಾರಣನಾದ ಬಾಬಾ(ಬಾಬ್)ನ ಪಾತ್ರವೂ ಬಹುಮುಖ್ಯವಾಗಿದೆ. ಬಾಬಾನೊಂದಿಗಿನ ಹೆಂಡತಿಯ ತೀರಾ ಸಲುಗೆಯ ನಡೆ. ಗಂಡನ ಅನುಮಾನಕ್ಕೆ ಕಾರಣ. ಗಂಡನಿಗೂ ನಿಶಿದ್ಧ ಇದ್ದ ಸ್ಥಳಕ್ಕೆ ಬಾಬ್ ಅನಾಯಾಸವಾಗಿ ಒಮ್ಮೊಮ್ಮೆ ಪ್ರವೇಶಿಸಿಬಿಡುತ್ತಿದ್ದ. ‘ತನೂ’… ಎಂದು ತನ್ನಂತೆ ತನ್ನ ಹೆಂಡತಿಯನ್ನು ಸಂಬೋಧಿಸುತ್ತಿದ್ದ ಬಾಬ್ ನನ್ನು ಕಂಡರೆ ಎದೆಯೊಳಗೆ ಕೆಂಡಾ ಮಂಡಲವಾಗುತ್ತಿದ್ದ ಸುಮೇದ. ತನ್ಮಯಿ ಅಷ್ಟು ಸ್ವಾತಂತ್ರ್ಯ ಕೊಟ್ಟದ್ದು ತಂದೆಯ ವಯಸ್ಸನ್ನೂ ಮೀರಿದ ಬಾಬ್ ಗೆ. ಯಾರೋ ಏಕೆ ಇಷ್ಟು ಆಪ್ತವಾಗಬೇಕು, ಅವರು ಕೆಲಸಕ್ಕಷ್ಟೇ (ದಂಪತಿ ನಡೆಸುತ್ತಿದ್ದ ರೆಸ್ಟೋರೆಂಟ್ನ ಅಡುಗೆಯ ಉಸ್ತುವಾರಿ ಕೆಲಸದವ ಬಾಬ್) ಸೀಮಿತ ಇರಬೇಕೆಂಬುದು ಸುಮೇದನ ಮನಸ್ಥಿತಿ. ಇದು ಸಹಜವೂ ಹೌದು. ಯಾವ ಗಂಡ ತಾನೆ ತನ್ನ ಹೆಂಡತಿ ಪರಪುರುಷನೊಂದಿಗೆ ತೀರಾ ಆಪ್ತವಾಗಿರುವುದನ್ನು ಒಪ್ಪುತ್ತಾನೆ. ಅಲ್ಲದೆ ತನ್ಮಯಿ ಮತ್ತು ಬಾಬಾ ಏಕಾಂತದಲ್ಲಿ ಹರಟುವುದು, ಸುಮೇದ ಬಂದಕೂಡಲೆ ಮಾತು ಬದಲಿಸಿ, ಅಗಲುವುದು ಇವೆಲ್ಲ ಹೇಳಿಕೊಳ್ಳಲಾಗದ ಸುಡುವಾಗ್ನಿ ಸುಮೇದನಿಗೆ. ಹೀಗೆ ಸಾಗುತ್ತಲೇ ಕಥೆ ಅಂತ್ಯಕ್ಕೆ ಬರುತ್ತದೆ.
ಕಥೆಯ ಅಂತ್ಯ ಬಹಳ ಚೆನ್ನಾಗಿದೆ. ಬಾಬ್ ನ ನಿಜ ದರ್ಶನವಾಗುತ್ತದೆ. ಅವನು ನೋಡುವ ಅಶ್ಲೀಲ ಪುಸ್ತಕ ಸುಮೇದನ ಕೈಗೆ ಸಿಗುತ್ತದೆ. ಇದನ್ನು ತನ್ಮಯಿ ಹೇಗೆ ಸ್ವೀಕರಿಸುತ್ತಾಳೆ… ಮುಂದಿನ ನಿರ್ಧಾರ ಏನು ಎಂಬುದೇ ಕಥೆಯ ತಿರುವು. ಓದಿ “ತಂದೆ” ಕಥೆ. ದಂಪತಿಗಳು ಮಗುವನ್ನು ಕಳೆದುಕೊಂಡದ್ದು ಮಾತ್ರ ಓದುಗನನ್ನು ರೋಧಿಸುತ್ತದೆ.
* “ಮೀಲೋ” ಒಂದು ದೃಷ್ಯದ ರೂಪಕದಂತಿದೆ. ಊಹೆ, ಭ್ರಮೆಗಳ ಹೊರತಾಗಿ ಅವಳ ಕಣ್ಣಿಗೆ ಮಾತ್ರ ಕಂಡು, ವಿವಿಧ ರೂಪ ಪಡೆದು, ದೈಹಿಕವಾಗಿ ವ್ಯತ್ಯಾಸ ಹೊಂದಿ ಮಾಯವಾಗಿ, ತನ್ನ ಅನುಭವವದು ಕನಸೋ ನನಸೋ ಎಂಬ ಪೇಚೆಗೆ ಕಥಾ ನಿರೂಪಕಿಯನ್ನು
ಸಿಲುಕಿಸುತ್ತದೆ. ಮೀಲೋ ಮನೆಯಲ್ಲಿ ಮಗನ ಭಾವನಾತ್ಮಕ ನಂಟಾದ ಒಂದು ದಿಂಬು ಎಂದು ಪ್ರಾರಂಭದಲ್ಲಿ ಇದ್ದು, ಕೊನೆಯಲ್ಲಿ ಆ ಮಾಯಾ ಜೀವಿ, ಪಕ್ಷಿ, ಪ್ರಾಣಿ, ಇದು, ಅದು… ಈ ಎಲ್ಲ ಹೆಸರುಗಳಿಂದ ಮುಕ್ತಿ ಪಡೆದು ಮೀಲೋ ಹೆಸರಿನಿಂದ ಉಳಿಯುತ್ತದೆ. ಅವಳೊಬ್ಬಳಿಗೆ ಮಾತ್ರ ಕಾಣುವ ಮೀಲೋ ಪ್ರಾರಂಭದಲ್ಲಿ ಭಯ ತಂದರೂ, ವಿದಾಯದ ಸಮಯದಲ್ಲಿ ಒಮ್ಮೆ ಕಂಡರೆ ಕಣ್ತುಂಬಿಕೊಳ್ಳುವೆ ಎಂದು ಆತ್ಮೀಯವಾಗುತ್ತದೆ. ಇದೆಲ್ಲ ನಡೆದದ್ದು ಆಸ್ಟ್ರೇಲಿಯದಲ್ಲಿ. ೩ ದಿನ ಸಾಹಿತ್ಯದ ಶಿಬಿರಕ್ಕೆ ನಿರೂಪಕಿ ಹೋದ ಸಂದರ್ಭದಲ್ಲಿ. ನಿಗೂಢತೆಯಿಂದ, ಪ್ರಶ್ನಾತೀತವಾಗಿ ಪ್ರಾರಂಭವಾದ ಕಥೆ ಅದೇ ನಿಗೂಢತೆ, ಪ್ರಶ್ನೆಯಲ್ಲಿಯೇ ಅಂತ್ಯವಾಗುತ್ತದೆ. ಓದುಗನಿಗೆ ಮೀಲೋ ಯಾರು ಎಂದು ವರ್ತಮಾನಕ್ಕೆ ಅರ್ಥವಾಗದಿದ್ದರೂ ಭಾವನಾತ್ಮಕ ಸೂಕ್ಷ್ಮ ಮತಿಗೆ ಅರ್ಥವಾಗಿ ನಿರೂಪಕಿಯಂತೆ ಓದುಗನೂ ಮೀಲೋ ಎಂದು ಮನೆಯಲ್ಲಿ ಪದೇ ಪದೇ ಉದ್ಗರಿಸುತ್ತಾನೆಂಬುದು ಸುಳ್ಳಲ್ಲ.
* ಭಾರತೀಯರು ಅಮೇರಿಕದಲ್ಲಿ ಸೆಟಲ್ ಆಗಿ ಆಗೊಂದು ಈಗೊಂದು ಭಾರತೀಯ ಸಂಸ್ಕೃತಿಯ ಆಚರಣೆ ಮಾಡಿ, ಇಲ್ಲಿ ಇದ್ದುಕೊಂಡು ಇಷ್ಟು ಮಾಡುತ್ತಿರುವುದೇ ಹೆಚ್ಚು ಎಂದು ಬೀಗುವ ಸನ್ನಿವೇಶ ಓದುಗನನ್ನು ಸೆರೆಹಿಡೆಯುತ್ತವೆ. ಲಿಂಗ ಬೇಧವಿಲ್ಲದೆ ಮನೆಗೆ ಗುಂಪು ಸ್ಟಡಿಗಾಗಿ ಫ್ರಾನಿಯನ್ನು ಕರೆತರುವ ಆರುಷ್, ಕೋಣೆಯ ಬಾಗಿಲು ಮುಚ್ಚಿಕೊಂಡು ಅವಳೊಂದಿಗೆ ಸ್ಟಡಿ ಮಾಡುತ್ತಿರುತ್ತಾನೆ. ಈ ಹದಿನಾರರ ಯುವಕ ಯುವತಿಯ ಮೇಲೆ ಪಾಲಕರಿಗೆ ಭಯ ಅನ್ನುವುದಕ್ಕಿಂತ ಸಹಜವಾದ ಭಾರತೀಯ ಮನಸ್ಥಿತಿಯವರ ಸಂಶಯ ಎನ್ನಬಹುದು. ಇಬ್ಬರೂ ಬಾಗಿಲ್ಹಾಕಿಕೊಂಡು ಏನು ಸ್ಟಡಿ ಮಾಡುತ್ತಾರೆ ಎಂದು ಹದಿನೈದು ನಿಮಿಷಕ್ಕೊಮ್ಮೆ ತಾಯಿ ರೂಮಿನ ಡೋರು ತಟ್ಟುವುದು ಮಕ್ಕಳಿಗೆ ಮುಜುಗರ ನೀಡುತ್ತದೆ. ಈ ಸನ್ನಿವೇಶಗಳನ್ನು ಕಥೆಗಾರ್ತಿ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಮುಂದೆ ಆರುಷ್ ಮತ್ತು ಫ್ರಾನಿ ಸ್ವಂತವಾಗಿ ಹಣ ಮಾಡುವುದಕ್ಕಾಗಿ ಮಾಡುವ ಬಿಸಿನೆಸ್ ಪ್ಲ್ಯಾನ್, ಅಲ್ಲೊಬ್ಬ ವೃದ್ಧ ತನ್ನ ಸಾವಿನ ಹೊತ್ತಿಗೆ ೨೦೦ ಪದವಿಗಳ ಸರದಾರನಾಗಲು ಹೊರಟು, ಸಂಸ್ಕೃತದ ಪದವಿ ಪತ್ರಕ್ಕಾಗಿ ಕಾಯುತ್ತಿರುತ್ತಾನೆ. ಇತ್ತ ಭಾರತೀಯ ವೈಶ್ಯ ಜನಾಂಗದ ಆರುಷ್ ಗೆ ಉಪನಯನ ಸಂಭ್ರಮ ಮನೆಯಲ್ಲಿ. ಅವನಿಗೋ ಗೊಂದಲ. ಏನು ಮಾಡುತ್ತಿದ್ದಾರೆ ಇವರು. ಥ್ರೆಡ್ ಸೆರೆಮನಿ. ಕೇಶ ಮುಂಡನ ಆಗಲೇಬೇಕು. ಶಿಖ ಬಿಡಲೇಬೇಕು ಅಂದರೆ ಮಾತ್ರ ಬ್ರಹ್ಮೋಪದೇಶ ಎಂಬ ಆಜ್ಞೆಗೆ ಎದ್ನೋ ಬಿದ್ನೋ ಎಂದು ಓಡುವ ಆರುಷ್ ನ ಹಾಸ್ಯ ಪ್ರಸಂಗ ಓದುಗನನ್ನು ನಗೆಗಡಲಲ್ಲಿ ತೇಲಿಸುತ್ತದೆ. ಉಟ್ಟ ಪಂಚೆಯಲ್ಲಿ ಕೈಯಲ್ಲಿ ಇದ್ದ ಆಮಂತ್ರಣ ಪತ್ರಿಕೆಯ ಜೊತೆಗೆ ಹೊರ ಓಡುತ್ತಾನೆ. ಕಾಕತಾಳಿಯವೆಂಬಂತೆ ಸೀದ ಪದವಿ ಸರದಾರ ಸ್ಟೀವನ್ಸ್ ರ ಮನೆಹೊಕ್ಕುವನು. ಓಹ್ ಸಂಸ್ಕೃತ ಪದವಿ ಪ್ರಮಾಣ ಪತ್ರಕೊಡಲು ಯತಿಗಳ ಅವತಾರದಲ್ಲೇ ಬಂದಿದೀರಿ ಎಂದು ತಾಳೆಗರಿಯ ಸುರುಳಿ ಪಡೆದು ಗೋಡೆಯತ್ತ “ಪದವಿ ಪ್ರದಾನ”ವಾಯಿತು ಎಂದು ದಾಖಲಿಸಲು ಹೋಗುತ್ತಾರೆ. ಇದೆಲ್ಲದರ ಮಧ್ಯೆ ತಂದೆ, ತಾಯಿ, ಆರುಷ್ ನಡುವಿನ ಸಂಭಾಷಣೆ, ಫ್ರಾನಿ ಆರುಷ್ ನಡುವಿನ ಸ್ನೇಹ, ಭೇಟಿ, ಸ್ವಯಂ ಉದ್ಯೋಗ ಮುಂತಾದ ಎಲ್ಲ ಸನ್ನೀವೇಶಗಳು ಓದುಗನನ್ನು ಸೆರೆಹಿಡಿಯುತ್ತವೆ.
* ಏನೇ ಅನ್ನಿ, ಹೆಣ್ಣಾಗಲಿ ಗಂಡಾಗಲಿ ತನ್ನ ಪ್ರಿಯತಮನೋ ಪ್ರಯತಮೆಯೋ ಮೋಸ ಮಾಡಿದರೆಂದು ಕೊರಗಿ ಸೊರಗಿ ಹೋದರೆ ಪರವಾಗಿಲ್ಲ, ಕ್ರಮೇಣ ಮರೆವಿನ ಬಲದಿಂದ ಮತ್ತೆ ತಹಬಂದಿಗೆ ಬರ್ತಾರೆ. ಆದರೆ ಅದನ್ನು ಆಕ್ರೋಶಕ್ಕೆ ತಿರುಗಿಸಿಕೊಂಡು ಅವನ ಬದಲಾಗಿ ಮತ್ತೊಬ್ಬನನ್ನು ಅವಸರದಲ್ಲಿ ಒರಿಸುವುದು ಅಥವಾ ಅವಳ ಬದಲಾಗಿ ಮತ್ತೊಬ್ಬಳನ್ನು ಆತುರದಲ್ಲಿ ತೆಕ್ಕೆಗೆ ಹಾಕಿಕೊಳ್ಳುವುದು ಮಾಡಿದರೆ ಅದು ನಾವೇ ಬೇಲಿಯನ್ನು ಸುತ್ತಿಕೊಂಡು ಉರುಳಿದಂತಾಗುತ್ತದೆ. ಮುಂಗೋಪ ಇರಬೇಕು ಆದರೆ ಅದರ ಜೊತೆಗೆ ಮುಂದಾಲೋಚನೆಯೂ ಇರಬೇಕು. ಅದು ಇರದೆ, ಅವನು ಮಲಗಿರಲಿ ಅವಳ ಜೊತೆ ನಾನಿಲ್ಲಿ ಮತ್ತೊಬ್ಬನ ಜೊತೆಗೆ ಮಜಾ ಮಾಡುತ್ತೇನೆ ಎಂದು ಜಂಬದಿಂದ ಅಂದುಕೊಂಡ ಕಥಾ ನಾಯಕಿಗೆ ಮುಂದೆ ಆದದ್ದೆಲ್ಲ ದೈಹಿಕ ಹಿಂಸೆಯೇ. ಅದರ ನಂತರವೇ ನೋಡಿ ಅವಳು ಸಾಯಲು ನೈಫನ್ನು ನಾಡಿಗೆ ತಾಕಿಸಲು ಮುಂದಾಗಿದ್ದು. ಆಗಲೇ ಅಪರಿಚಿತ ಹೆಣ್ಧ್ವನಿ ಸಹಾಯಕ್ಕೆ ನಿಂತದ್ದು, ಅವಳೇ ಕ್ಲಾರಾ… ಕಥೆಯ ಉದ್ದಕ್ಕೂ ನಾಯಕಿಗೆ ಹುರಿದುಂಬಿಸುತ್ತಲೇ ಅವಳಿಂದ ಅತ್ಯಾಚಾರದ ಕೇಸ್ ಹಾಕಿಸುತ್ತಾಳಾದರೂ ಅದು ಗೆಲ್ಲುವುದಕ್ಕೆ ಸಾಕ್ಷಿ ಸಾಕಾಗದೆ ಸೆಟಲ್ ಮೆಂಟ್ ಗೆ ಬರುತ್ತಾರೆ. ಅಲ್ಲಿಯವರೆಗಿನ ಕೋರ್ಟಿನ ಅಲೆದಾಟ ಖರ್ಚಿಗೆ ಬೇಸತ್ತಿದ್ದ ನಾಯಕಿ ಸೆಟಲ್ ಮೆಂಟ್ ಗೆ ಒಪ್ಪುತ್ತಾಳೆ. ಆಕೆಗೆ ಅನ್ಯಾಯ ಆಗಿದೆ ಎಂದು ಹೇಳಲೂ ಆಗದ ಸ್ಥಿತಿ ಓದುಗನಿಗೆ. ಕಾರಣ ಬಾ ನನ್ನನ್ನು ಸುಖಿಸು ಎಂದು ತಾಂಬೂಲ ಕೊಟ್ಟಂತೆ ಮುತ್ತು ಕೊಟ್ಟು ಆಹ್ವಾನಿಸಿ ಪ್ರಿಯತಮನ ಮೇಲಿನ ಕೋಪಕ್ಕೆ ತಾನು ದಹನಗೊಂಡವಳ ಸ್ಥಿತಿ ಓದುಗನನ್ನು ತ್ರಿಶಂಕು ಸ್ಥಿತಿಗೆ “ಕ್ಲಾರಾ ನನ್ನ ಗೆಳತಿ” ಕಥೆ ನೂಕುತ್ತದೆ. ಕ್ಲಾರಾ ಏಕೆ ಈ ಅಪರಿಚಿತ ಕಥಾ ನಾಯಕಿಗೆ ಸಹಾಯಕ್ಕೆ ನಿಂತಳು ಎಂಬುದು ಕೂಡ ಈ ಕಥೆಯ ತಿರುಳಾಗಿದೆ.
* ಗೋ ಅಹೇಡ್. ದಾದಾಗೆ ಅಷ್ಟೇ ಸಾಕಿತ್ತು. ಕೊಲೆಯಾದರೂ ಅದು ಆಕಸ್ಮಿಕ, ನೈಜ ಸಾವು, ಅಪಘಾತವಷ್ಟೆ ಎಂಬಂತೆ ಪ್ರಾಣವನ್ನು ಹಾರಿಸಿಬಿಡುತ್ತಿದ್ದ. ಇಲ್ಲಿ ಸ್ವಂತ ತಂಗಿಯನ್ನೇ ಕೊಲ್ಲಿಸುವ ಪರಿಸ್ಥಿತಿ ಅಣ್ಣನಿಗೆ ಒದಗಿ ಬಂದದ್ದು ದುರ್ವಿಧಿ. ದುರ್ವಿಧಿ ಅನ್ನುವುದಕ್ಕಿಂತ ಅದು ಅನಿವಾರ್ಯವಾಗಿತ್ತು ಎಂದು ಓದುಗನಿಗೆ ಅನ್ನಿಸಿಯೇ ಅನಿಸುತ್ತದೆ. ಹೌದು ಸುನೇತ್ರ ಆ ಮಟ್ಟಕ್ಕೆ ದುರಹಂಕಾರದ ಹೆಣ್ಣಾಗಿ ಅತ್ತಿಗೆಯನ್ನು ಅಣ್ಣನ ವಿರುದ್ಧ, ಮಗಳನ್ನು ತಂದೆಯ ವಿರುದ್ಧ ಎತ್ತಿಕಟ್ಟಿ ಮನೆಯ ವಾತಾವರಣವನ್ನೇ ಹದಗೆಡೆಸುತ್ತಾಳೆ. ಊಟ ಬಡಿಸು ಎಂಬ ಗಂಡನ ಮಾತಿಗೆ ಜಗಳವಾಡಿ ನಾನೇಕೆ ಊಟ ಬಡಿಸಬೇಕು ಎಂಬ ದುರಹಂಕಾರದಿಂದ ಗಂಡನಿಂದ ವಿಚ್ಛೇದಿತಳಾಗಿ ತವರು ಸೇರಿ, ಪಬ್ಲಿಷಿಂಗ್ ಕಚೇರಿಯಲ್ಲೂ, ಮನೆಯಲ್ಲೂ ತನ್ನ ಕುನ್ನಡತೆಯಿಂದ ಬೇಸರ ಹುಟ್ಟಿಸುತ್ತಾಳೆ. ರೌಡಿ ದಾದಾನ ಜೀವನದ ಕುರಿತಾದ ಪುಸ್ತಕ ಪಬ್ಲಿಷಿಂಗ್ ವಿರೋಧಿಸುವಾಗ ಅವಳದೇ ಸರಿ ಎನ್ನಿಸಿದರೂ, ಅತಿರೇಕದ ಮಾತುಗಳು ಜಗಳಗಳು ಅಸಹನೀಯವಾಗುತ್ತವೆ. ಮನೆಯಲ್ಲಿ ಮಗಳಿಂದಲೂ, ಹೆಂಡತಿಯಿಂದಲೂ ಅಪಮಾನ, ಅವಮಾನಕ್ಕೀಡಾದ ಅಣ್ಣ ದಾದಾ ಗೆ “ಗೋ ಅಹೇಡ್” ಅನ್ನುತ್ತಾನೆ. ದಾದಾ ಸುನೇತ್ರಳನ್ನು ಮುಗಿಸುತ್ತಾನೆ. ಸ್ತ್ರೀ ಸ್ವಾತಂತ್ರ್ಯ, ಚಳುವಳಿ, ಹಕ್ಕು ಎಂದು ಅತಿಯಾಗಿ ಸ್ವೇಚ್ಛೆಯಿಂದ ವರ್ತಿಸಿದವಳು ಮಣ್ಣು ಮುಕ್ಕುತ್ತಾಳೆ. ತುಸು ಪಶ್ಚಾತ್ತಾಪ ಕಾಡಿದರೂ ಕಥಾ ನಿರೂಪಕ ಸರಿಯಾದ ನಿರ್ಧಾರ ಮಾಡಿದನೆನೋ ಅನ್ನಿಸಿ ಓದುಗನ ಮನಸು ನಿರಾಳವಾಗುತ್ತದೆ. ಕಾರಣ ಏನು ಎಂಬ ಸುದೀರ್ಘ ಚಿಂತನೆಗೆ “ಸುನೇತ್ರಾ ಪಬ್ಲಿಷರ್ಸ್” ಕಥೆಯ ಓದು ಉತ್ತರ ನೀಡುತ್ತದೆ. ಗೋ ಅಹೇಡ್ ಒಮ್ಮೆ ಓದಿ ನೋಡಿ. ಈ ಸ್ತ್ರೀ ಸ್ವಾತಂತ್ರ್ಯ ಎಂದು ಅತಿರೇಕಕ್ಕೆ ಹೋಗುವ ಹೆಣ್ಣುಮಕ್ಕಳು ತಮ್ಮ ಸಂಸಾರವನ್ನು ಬಲಿಕೊಡಬೇಕಾಗುತ್ತದೆ ಎಂಬುದಕ್ಕೆ ಉದಾಹರಣೆ ಈ “ಸುನೇತ್ರ ಪಬ್ಲಿಷರ್ಸ್”.
* ಯಾರಿಗೆ ಗೊತ್ತು, ನಾವು ಈ ಕ್ಷಣ ಮಾಡುವ ಊಟವೇ ನಮ್ಮ “ಕೊನೇ ಊಟ” ಆಗಬಹುದು. ಅದರ ಅರಿವು ಪರಿವು ನಮಗಿಲ್ಲ. ಮರುಕ್ಷಣದಲ್ಲಿ ಈ ನಾಡಿ ಬಡಿತ ನಿಲ್ಲಬಹುದು. ಈ ನಂತರದ ಘಳಿಗೆಯೇ ಪರರ ಮನದ ಮಿಡಿತಕ್ಕೆ ನಾವು ಊಟವಾಗಬಹುದು. ಇಷ್ಟೆಲ್ಲ ಯೋಚನೆ ಇದ್ದರೂ ಈ ಹೊತ್ತಿನ ಊಟಕ್ಕೆ ನಮಗೆ ಇಷ್ಟವಾದುದೇ ಆಗಬೇಕು. ಅದು ಮತ್ತೊಂದು ಪ್ರಾಣಿ ಜೀವಿಯಾದರೂ ಸರಿ, ಸಸ್ಯ ಜೀವಿಯಾದರೂ ಸರಿ. ಆದರೆ ಈ ಕೊನೆ ಊಟದ ಪರಿಕಲ್ಪನೆ ಎಂದಿಗೂ ನಮ್ಮ ತಲೆಯಲ್ಲಿ ಸುಳಿದಿರುವುದಿಲ್ಲ. ಕೊನೆಯ ಆಸೆ ಎಂದರೆ ನಮ್ಮ ನೆನಪಿನ ಬಾಗಿಲು ತೆರೆಯುತ್ತದೆ. ಮರಣ ದಂಡನೆ ಶಿಕ್ಷೆಗೆ ಗುರಿಯಾದವ, ಇನ್ನೇನು ಪ್ರಾಣ ಹೋಗುತ್ತೆ ಎನ್ನುವ ರೋಗಿ, ನಿವೃತ್ತಿ ದಿನದ ಭಾಷಣದಲ್ಲಿ ಈ ಕೊನೆ ಆಸೆ ಪದ ಬಳಕೆಯಾಗುತ್ತೆ. ಆದರೆ ಈ ಕೊನೆ ಆಸೆಯೇ ಕೊನೇ ಊಟ ಆಗಿದ್ದು ಈ ಕಥೆಯ ವಿಶೇಷ. ಒಬ್ಬ ಭಾರತೀಯ ಖೈದಿ ವಿದೇಶದ ಸೆರೆವಾಸದಲ್ಲಿದ್ದು ಮರಣ ದಂಡನೆ ಶಿಕ್ಷೆಗೆ ಗುರಿಯಾಗಿ ತನ್ನ ಕೊನೇ ಆಸೆ ಭಾರತೀಯ ಊಟವೇ ಆಗಬೇಕೆಂದಾಗಿನ ಸನ್ನಿವೇಶ ಕುತೂಹಲವಾಗಿದೆ. ಅದನ್ನು ತಯಾರಿಸುವ ಅಡುಗೆ ಭಟ್ಟ ಬೇಕಲ್ವಾ, ಅದಕ್ಕೂ ಒಬ್ಬ ಭಾರತೀಯ ಖೈದಿ ಅಲ್ಲಿ ಹಾಜರಿರುತ್ತಾನೆ. ಹೀಗೆ ಕಥೆಗೆ ಪೂರಕವಾಗಿ ಒಂದಷ್ಟು ಸನ್ನಿವೇಶಗಳು ಕಥೆಯಲ್ಲಿವೆ. ಓದುತ್ತಾ ಸಾಗಿದಂತೆ ನಾವೂ ಆ ಸೆರೆಮನೆಯಲ್ಲಿ ವಿಹರಿಸುತ್ತಿರುವ ಅನುಭವ ನೀಡುವ ಚಿತ್ರಣನ್ನು ಲೇಖಕಿ ಉತ್ತಮಾವಾಗಿ ಚಿತ್ರಿಸಿದ್ದಾರೆ.
* ಕೊನೆಯ ಮತ್ತು ಕೊನೆಯೇ ಇರದ ಸಂಸಾರದ ಸತಿಪತಿಗಳ ವೈಮನಸ್ಸು, ಹುಸಿ ಮುನಿಸು, ಪ್ರೀತಿ, ಆಸರೆ, ಬೆಂಬಲ, ಆಗಾಗ ಒಂಥರಾ ಎನಿಸುವ ವಿಚಿತ್ರ ಸಂಸಾರದ ಕಥಾ ಹಂದರ “ಆ ಒಂದು ಥರ”.
“ಏಕೆ ಒಂದು ಥರಾ ಇದೀಯಲ್ಲಾ” ಎಂಬ ಮಾತೇ ಕಾಠಿಣ್ಯ ಎಂದುಕೊಂಡ ಮನು(ಮನ್ವಿತಾ), ಆ ಸಂದರ್ಭವೇ ಸುಳಿಯಬಾರದೆಂದು ಎಷ್ಟೇ ನಿಗಾ ವಹಿಸಿದರೂ ಆ ಕಾರು ಚಾಲನೆ; ಅದರಲ್ಲೂ ನಿಧಾನ ಹೋದರೂ ಟ್ರಾಫಿಕ್ ಸ್ಲೋ ಮಾಡ್ತಿದೀವಿ ಅಂತ ಫೈನ್ ಹಾಕೋ ವಿದೇಶದಲ್ಲಿ ಮನು ಡ್ರೈವ್ ಮಾಡುವಾಗ ಆದ ಚಿಕ್ಕ ಗಂಡನ ಗಡಸು ಮಾತಿನಿಂದ ಮುನಿಸು ಶುರುವಾಗಿಬಿಡುತ್ತದೆ. ನಂತರ ಅವರ ಹಿಂದಿನ ಬದುಕು, ಬಾಲ್ಯದ ನಂಟು, ಮೂರು ಗಂಟಿನಿಂದ ಜೋಡಿಯಾದ ಸಂದರ್ಭ ಎಲ್ಲವೂ ಕಥೆಯಲ್ಲಿ ಉಂಟು. ಓದಲು ಪ್ರಾರಂಭಿಸಿದರೆ ನಿಲ್ಲಿಸದಂತೆ ಓದಿಸಿಕೊಳ್ಳುವ ನಿರೂಪಣೆ, ಇಷ್ಟವಾಗುತ್ತದೆ. ಕೊನೆಗೂ ಮನು ಒಂಟಿಯಾಗಿ ಸ್ವತಂತ್ರವಾಗಿ ಕಾರು ಚಲಾಯಿಸಿ ಹೆಮ್ಮೆ ಬೀಗಿ, ಗಂಡ ಸುಘೋಷನಿಗೆ ತಿಳಿಸಬೇಕು ಎನ್ನುವ ಹಂತಕ್ಕೆ ಕಥೆ ಅಂತ್ಯವಾಗುತ್ತದೆ. ಸಾಂಸಾರಿಕ ಕಥೆ ಓದುಗನಿಗೆ ನಮ್ಮ ಮನೆಯಲ್ಲೂ ಹೀಗೆ ಅಲ್ವಾ ಎಂದು ಅನಿಸಿಯೇ ಅನಿಸುತ್ತದೆ.
ನಮ್ಮ ಆಸೆಗಳಿಗೆ ಕೊನೆ ಇರುತ್ತದೆ, ಊಟಕ್ಕೆ ಕೊನೆ ಇರುತ್ತದೆ. ಜಗಳಗಳಿಗೆ ಕೊನೆ ಇರುತ್ತದೆ, ಆದರೆ ಈ ಓದುವ ಹಸಿವಿಗೆ ಕೊನೆ ಇರಬಾರದು ಅಲ್ವಾ, ಮತ್ತೆ ಮತ್ತೆ ಓದಿಸಿಕೊಳ್ಳುವ ಕಥೆಗಳು ಚೆನ್ನಾಗಿ ರೂಪುಗೊಂಡಿವೆ
ನಮ್ಮ ಓದುವ ಹಸಿವಿನ ಆಸೆಯನ್ನು ಈ ಕಥೆಗಳು ತೃಪ್ತಿಯಾಗಿ ಇಂಗಿಸುತ್ತವೆ.
ಒಟ್ಟಾರೆ “ಮಾಕೋನ ಏಕಾಂತ” ಸಂಕಲನದ ಅಷ್ಟೂ ಅಷ್ಟ ಕಥೆಗಳು ಇಷ್ಟವಾಗುತ್ತವೆ. ಕಥೆಗಳ ನಿರೂಪಣಾ ಶೈಲಿಯಿಂದ ಕಥೆಗಳ ಅಂತಸ್ಸತ್ವ ಸ್ಪಷ್ಟವಾಗಿ ಓದುಗರಿಗೆ ತಲುಪುತ್ತದೆ. ಬಹುತೇಕ ಕಥೆಗಳ ಅಂತ್ಯ ಅಂತ್ಯವಲ್ಲ ಪ್ರಾರಂಭವೆಂತಲೂ, ಪಾತ್ರಗಳ ಭವಿಷ್ಯದ ಚಿಂತನೆಗೆ ನಮ್ಮನ್ನು ತೊಡಗಿಸಿದ್ದಾರೆಂತಲೂ ಅನ್ನಿಸಿದರೆ ಆಶ್ಚರ್ಯವಿಲ್ಲ. ಕಾವ್ಯಾ ಕಡಮೆ ಅವರ ಈ ವಿಭಿನ್ನ ಪ್ರಯತ್ನದ ಕಥಾ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ ದಕ್ಕಿದ್ದು ಇದರ ಜೊತೆಗೆ ಮತ್ತಷ್ಟು ಪ್ರಶಸ್ತಿ ಗರಿಗಳು ಸಿಗಲಿ ಏಂಬ ಆಶಯದೊಂದಿಗೆ ನನ್ನ ಅನಿಸಿಕೆಗೆ ವಿರಾಮ ನಿಡುತ್ತೇನೆ.
– ವರದೇಂದ್ರ ಕೆ ಮಸ್ಕಿ
9945253030