ಕಳುವಾಗಿದೆ ನಮ್ಮ ಕೃಷ್ಣನ
ಕೊಳಲದು ಅರಸಿರೆ
ಬೇಗ ಗೋಪಿಯರು|
ಮೌನವು ಕವಿದಿದೆ
ಗೋಕುಲದಲಿ ಈಗ
ಮನದಲಿ ಓಡಿವೆ
ಕರಿಮೋಡಗಳು||
ಜೊಲ್ಲನು ಸುರಿಸುತ
ಕೆರುಗಳು ಬಂದರು
ಹಾಲನು ಕರಿಯದೆ
ಗೋವುಗಳು,
ಗೊಲ್ಲನ ವೇಣು ನಾದವ ಕೇಳದೆ
ಕಲ್ಲಿನಂತಾಗಿವೆ ಮೃಗ
ಪಕ್ಷಿಗಳು||
ಕರವದು ಕಾದಿದೆ
ಸ್ವರಗಳ ನುಡಿಸಲು
ಅರಸಿರೆ ಮುರಳಿಯ
ಬಾಲೆಯರು,
ರಾಧೆಯ ಪ್ರೀತಿಯ
ಮಾಧವನೂದಲಿ
ಮುದಗೊಳ್ಳಲಿ ಮೈ
ಮನಸುಗಳು||
–ವಸುಧಾ ಬೆಂಗಳೂರು