ಅಕ್ಕಂದಿರು
ತೋರಿದಿರಿ ನಡೆಯಲು ನೇರ ದಾರಿ
ತಡೆದಿರಿ ತುಳಿಯದಂತೆ ಅಡ್ಡದಾರಿ
ಆಡಿದಿರಿ ಭಾಷೆಯದ ಅರಿವಂತೆ ಜನರು
ವಚನಗಳ ಬಿತ್ತಿದ ಬೇಸಾಯಗಾರರು
ಪರದ್ರವ್ಯ ಮುಟ್ಟಿದರೆ ನರಕದಲಿ ಅದ್ದೆಂದೆ
ಶರಣೆ ಸತ್ಯಕ್ಕ ನೀ ಸತ್ಯವನೆ ಮಿಂದೆದ್ದೆ
ಬಹಿರಂಗ ಪೂಜೆ ಯಾಕೆ ಬೇಕೆಂದೆ
ಅಂತರಂಗದ ಕೊಳೆಯ ತೆಗೆದು ಬಿಸುಡೆಂದೆ
ಸಿಹಿ ತಿನಿಸು ಮಾಡಿದೆ ಆಯ್ದು ತಂದಕ್ಕಿಯಲಿ
ನೀಡಿದೆ ಅನ್ನವನು ಹಸಿದು ಬಂದವರಿಗೆ
ಅರಿಗಳನು ಒಣಗಿಸಿ ಹೊರೆಗಳನು ಕಟ್ಟಿ
ಶರಣೆ ಲಕ್ಕಮ್ಮ ನೀ ಅಕ್ಕಲಾಯ್ದೆ
ಬದುಕ ಬಂಡಾಯವಾಗಿಸಿದ ಸಮಾಜ ಮುಖಿಯೆ
ನಿರಾಕರಿಸಿ ಅಧೀನತೆಯ ದಿಟ್ಟ ಸ್ತ್ರೀಯೆ
ಕಾಳವ್ವೆ, ಸಂಕವ್ವೆ, ರೆಮ್ಮವ್ವೆ, ಗೋಗವ್ವೆ
ಪ್ರತಿ ವನಿತೆಯರ ಪ್ರತಿರೂಪ ನೀ ಅಕ್ಕನಲ್ಲವೆ ?..
–ಶ್ರೀಮತಿ ಉಮಾದೇವಿ ಬಾಗಲಕೋಟ.