ಮರಳಿ ಬಾರಯ್ಯಾ
ಕಾಡು ಬಿಟ್ಟು ನಾಡಿಗೆ ಬಂದು
ತಿಂಗಳಾಗುತ್ತ ಬಂತು
ಶಹರ ಜನರ ನಿದ್ದೆಗೆಡಿಸಿದ್ದಾಯಿತು
ಯಾವಾಗ ಬರತಿಯೋ ಶರವೇಗದ ಸರದಾರ…?
ಬೆಳಗಾವಿ ಹಾದಿ ಬೀದಿ ತಿರುಗುತ
ಭಯಬೀತಿ ಹರಡುತ ಅಡವಿದಾರಿ
ಮರೆತರ ಮರಳಿ ಕಳುವವರು
ಯಾರು ನಿನ್ನ ಮಾರಾಯಾ?
ಉಂಡಿಯೋ ತಿಂದಿಯೋ
ಹಸಿಗೊಂಡ ಕುಂತಿಯೋ
ಬ್ಯಾಟಿ ಆಡಾಕ ಮರತಿಯೋ
ಕಳವಳಗೊಂಡತಿ ಜೀವ ನನರಾಯ
ಗೊತ್ತಿಲ್ಲ ನಿನಗ ಬಿತ್ತರವಾಗುವ ಸುದ್ದಿ
ಹೌಹಾರೆದ ಜೀವ ಉಳಿಸಿಕೊಂಡು
ಬಂದರೆ ಸಾಕು ನೀ ಕಾದು ಕುಂತೇನಿ
ಕಣ್ಣೀರ ಒರೆಸುತ್ತ ದುಃಖ ಮರೆಸುತ್ತ
ಒಳ್ಳೆಯವರಲ್ಲ ಮನುಜರು
ನಮಗಿಂತ ಬಾಳ ಕ್ರೂರರವರು
ಗೊಂಡಿಟ್ಟು ಕೊಂದಾರು
ದಿಕ್ಕೆಟ್ಟ ಓಡಬ್ಯಾಡ ದಿಕ್ಕೆ ತಪ್ಪಿಸಿಕೊಬ್ಯಾಡ
ನಾಡಿನ ಗೊಡವಿ ನಮಗ್ಯಾಕೊ
ಕಾಡಿಗೆ ಅರಸಾಗಿ ಬಾಳುದಕ
ಅವರಿಗೆ ನೀ ಹೆದರಿ ನಿನಗ ಅರ‍್ಹೆದರಿ
ಕುತ್ತು ತಂದಾರೊ ನಿನ್ನ ಪ್ರಾಣಕ್ಕ
ಹಿಡಿಯ್ಯಾಕ ನಿನ್ನ ತಂಡ ರಚಿಸ್ಯಾರಂತ
ತಜ್ಞರ ಕರಿಸ್ಯಾರ ನಾಡಿನ ತುಂಬ
ನಿನ್ನ ಹೆಸರ ಕೆಡಿಸ್ಯಾರ
ಸಿಕ್ಕಾಕೊಳ್ಳದೆ ಬಾರಯ್ಯ ಮರಳಿ ಕಾಡಿಗೆ
ಆನಿ ಬಂದಾವಂತ ಶ್ವಾನ ಬಂದಾವಂತ
ಕೋವಿ ಹಿಡಿದು ಸುತ್ತ ನಿಂತಾರಂತ
ನಿನ್ನ ಹಿಡಿಯ್ಯಾಕ ಬೋನ ಇಟ್ಟಾರಂತ
ಸರ್ಕಾರ ರೊಕ್ಕ ಖರ್ಚು ಮಾಡಾಕತದಂತ
ಹಂಬಲಸಕತ್ತದ ಮಕ್ಕಳ ಮರಿಜೀವ
ಕಣ್ತಪ್ಪಿಸಿ ಕೈಗೆ ಸಿಗದಂಗ ಶರವೇಗದೊಳು ಬಾರ
ಭಯವಿಲ್ಲದೆ ಬದುಕೋಣ ಕಾಡೊಳಗ
ವನದೇವಿ ಉಡಿಯೊಳಗ…
–ಡಾ. ನಿರ್ಮಲಾ ಬಟ್ಟಲ
ಬೆಳಗಾವಿ