ಡಾ ಎಂ ಎಂ ಕಲಬುರ್ಗಿ ಅವರ ಪ್ರತಿಷ್ಠಾನಕ್ಕೆ ಕೊಟ್ಟ ಅನುದಾನ ಏನಾಯಿತು ?
ಡಾ ಎಂ ಎಂ ಕಲಬುರ್ಗಿ ಗುರುಗಳು ಕರ್ನಾಟಕವು ಕಂಡ ಒಬ್ಬ ಶ್ರೇಷ್ಠ ಸಂಶೋಧಕ ಮತ್ತು ಅಪರೂಪದ ಮಾನವತಾವಾದಿ . ಇವರ ಹತ್ಯೆ ಆಗಿ ಆರು ವರುಷಗಳಾಗುತ್ತಾ ಬಂದಿವೆ . ಶ್ರೀ ಸಿದ್ಧರಾಮಯ್ಯನವರ ಸರಕಾರವು ಡಾ ಎಂ ಎಂ ಕಲಬುರ್ಗಿ ಅವರ ಪ್ರತಿಷ್ಠಾನಕ್ಕೆ ಎರಡು ಕೋಟಿ
ಬಿಡುಗಡೆ ಮಾಡುವದಾಗಿ ಭರವಸೆ ಮಾಡಿತ್ತು ಮತ್ತು ಅವರು ಧಾರವಾಡಕ್ಕೆ ಬಂದಾಗ ಮತ್ತೆ ಇದನ್ನು ಪುನರ್ ಉಚ್ಚರಿಸಿದ್ದರು .
ಕರ್ನಾಟಕದಲ್ಲಿ ಅತಿ ಹೆಚ್ಚಿನ ಶಿಷ್ಯರನ್ನು ಹೊಂದಿದ ಮತ್ತು ಮಾನವತಾವಾದಿ ಪ್ರಗತಿಪರ ಲೇಖಕರನ್ನು ಬೆಳೆಸಿದ ಹೆಗ್ಗಳಿಕೆ ಡಾ ಎಂ ಎಂ ಕಲಬುರ್ಗಿ ಅವರಿಗೆ ಸಲ್ಲಬೇಕು.ಅತ್ಯಂತ ನೋವಿನ ಸಂಗತಿ ಎಂದರೆ ಡಾ ದ ರಾ ಬೇಂದ್ರೆ ಪ್ರತಿಷ್ಠಾನ ಮತ್ತು ಶ್ರೀ ಬಸವರಾಜ ಕಟ್ಟಿಮನಿ ಸಾಹಿತ್ಯ ಪ್ರತಿಷ್ಠಾನವನ್ನು ಕಟ್ಟಿ ಬೆಳೆಸಿ ಪ್ರಾಮಾಣಿಕವಾಗಿ ದುಡಿದ ಡಾ ಎಂ ಎಂ ಕಲಬುರ್ಗಿ ಅವರ ಪ್ರತಿಷ್ಠಾನಕ್ಕೆ ಸರಕಾರವು ಕೊಡಮಾಡಿದ ಅನುದಾನ ಏನಾಯಿತು ಎಂಬುದು ನಿಗೂಢ ಪ್ರಶ್ನೆಯಾಗಿದೆ.
ಇದೆ ರೀತಿ ಚಿತ್ರದುರ್ಗ ಮುರುಘಾ ಶರಣರು ಡಾ ಎಂ ಎಂ ಕಲಬುರ್ಗಿ ಅವರಿಗೆ ಬಸವ ಶ್ರೀ ಪ್ರಶಸ್ತಿ ನೀಡಿ ಐದು ಲಕ್ಷ ರೂಪಾಯಿ ಹಣದ ಚೆಕ್ಕು ಅವರ ಫೋಟೋ ಮುಂದೆ ಇಟ್ಟು ಸುದ್ಧಿ ಮಾಡಿ ಆ ಚೆಕ್ಕನ್ನು ಮತ್ತೆ ತಮ್ಮ ಬಳಿ ಇಟ್ಟುಕೊಂಡರು .ಶಿವಮೊಗ್ಗ ಗದಗ ಬೆಳಗಾವಿ ಮುಂತಾದ ಅನೇಕ ಮಠಗಳನ್ನು ಅಕಾಡೆಮಿಕ್ ಸಂಶೋಧನಾ ಕೇಂದ್ರಗಳನ್ನಾಗಿ ಪರಿವರ್ತಿಸಿದ ಶ್ರಮ ಡಾ ಎಂ ಎಂ ಕಲಬುರ್ಗಿಯವರದ್ದು .
ಹಿಂದಿನ ಗದುಗಿನ ಡಾ ತೋಂಟದ ಸಿದ್ಧಲಿಂಗ ಶ್ರೀಗಳು
ಲಿಂಗಾಯತ ಸಂಶೋಧನಾ ಕೇಂದ್ರವನ್ನು ಡಾ ಎಂ ಎಂ ಕಲಬುರ್ಗಿ ಲಿಂಗಾಯತ ಸಂಶೋಧನಾ ಕೇಂದ್ರವನ್ನಾಗಿ ಮಾಡಿದ್ದಾರೆ.
ಈಗ ಅವರ ಅಣ್ಣನ ಮಗ ನ್ಯೂಜಿಲ್ಯಾಂಡ್ ನಿವಾಸಿ ಡಾ ಲಿಂಗಪ್ಪ ಕಲಬುರ್ಗಿ ಮತ್ತು ಕುಟುಂಬದವರು ವಿಜಯಪುರದಲ್ಲಿ ಡಾ ಎಂ ಎಂ ಕಲಬುರ್ಗಿ ಪ್ರತಿಷ್ಠಾನವನ್ನು ಆರಂಭಿಸಿದ್ದಾರೆ . ಕನ್ನಡ ಮತ್ತು ಬಸವಣ್ಣನವರ ಕಾರ್ಯವನ್ನು ಅತ್ಯಂತ ಶೃದ್ಧೆ ಮತ್ತು ನಿಷ್ಠೆಯಿಂದ ಮಾಡುತ್ತಿದ್ದ ಡಾ ಎಂ ಎಂ ಕಲಬುರ್ಗಿ ಗುರುಗಳ ಪ್ರತಿಷ್ಠಾನ ಅತ್ಯಂತ ಅಗತ್ಯ .
ಸರಕಾರವು ಈ ಕೂಡಲೇ ಎಚ್ಚತ್ತು ಇದನ್ನು ಪೂರೈಸಲು ಮನವಿ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ