ಶಿಕ್ಷಕರು ಮತ್ತು ಗುರುಗಳು ಇಬ್ಬರು ಒಂದೇ ?

ಶಿಕ್ಷಕರು ಮತ್ತು ಗುರುಗಳು ಇಬ್ಬರು ಒಂದೇ ?

ಇಂದು ಮಾಜಿ ಉಪರಾಷ್ಟ್ರಪತಿ ಮತ್ತು ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನ ಪ್ರಯುಕ್ತ ಶಿಕ್ಷಕರ ದಿನಾಚರಣೆಯನ್ನು 1965 ನೇ ಇಸವಿಯಿಂದ ಆಚರಿಸುತ್ತಾ ಬಂದಿದ್ದೇವೆ. ಶಿಕ್ಷಕರು ಮತ್ತು ಗುರುಗಳಲ್ಲಿ ಏನು ವ್ಯತ್ಯಾಸ ಎಂಬುದು ಮೊದಲಿನಿಂದಲೂ ಒಂದು ಜಿಜ್ಞಾಸೆ ಮನದಲ್ಲಿ ಇತ್ತು. ಗುರು ಪೂರ್ಣಿಮಾ ಆಚರಿಸಿದ ಮೇಲೆ ಶಿಕ್ಷಕರ ದಿನಾಚರಣ ಏಕೆ ಎಂಬುದು ಒಂದು ಪ್ರಶ್ನೆ ಮನದಲ್ಲಿ ಕೊರೆಯುತ್ತಿದ್ದ ಕಾಲವಿತ್ತು. ಈಗ ನಾನು ತಿಳಿದು ಕೊಂಡಿರುವ ವಿಚಾರವೆಂದರೆ ಅಕ್ಷರಗಳನ್ನು ಕಲಿಸಿ ಲೌಕಿಕ ವಿದ್ಯೆಯನ್ನು ಹೇಳಿ ಕೊಟ್ಟು ಪ್ರಪಂಚವೆಂಬ ದೋಣಿಯಲ್ಲಿ ಸಾಗಲು ಕಲಿಸುವವರು ಶಿಕ್ಷಕರು, ಜೀವನವೆಂಬ ಭವಸಾಗರವನ್ನು ಪಾರು ಮಾಡುವವರು ಗುರುಗಳು. ಇಲ್ಲಿ ಎರಡೂ ಪದಗಳು ಸಮಾನಾರ್ಥಕವಲ್ಲವೇ ಎಂಬ ಅನುಮಾನ ಬಂದರೂ ಇಬ್ಬರೂ ಗುರುಗಳೂ ಆದರೂ ಅವರಲ್ಲಿ ಕಲಿಸುವ ವಿಷಯಗಳಲ್ಲಿ ವ್ಯತ್ಯಾಸವಷ್ಟೇ ಇದೆ. ನಮ್ಮ ಸಂಸ್ಕೃತಿಯಲ್ಲಿ ಅಕ್ಷರಂ ಕಲಿಸಿದಾತಂ ಗುರು ಎಂದಿದೆ. ಆಚಾರ್ಯ ದೇವೋ ಭವ ಎಂತಲೂ ಇದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ಪದವಿದ್ದರೆ, ಗುರುರ್‌ ಬ್ರಹ್ಮ ಗುರುರ್‌ ವಿಷ್ಣು ಗುರು ದೇವೋ ಮಹೇಶ್ವರಃ ಎಂದೂ ಹೇಳುತ್ತೇವೆ

ಬರೀ ಅಕ್ಷರಾಭ್ಯಾಸ ಮಾಡಿಸಿದವರು, ಆಧ್ಯಾತ್ಮಿಕ ಜ್ಞಾನವನ್ನು ನೀಡಿದವರಷ್ಟೇ ಗುರುಗಳಲ್ಲ. ನಮ್ಮ ಜೀವನದಲ್ಲಿ ಸಣ್ಣ ಪುಟ್ಟ ವಿಷಯಗಳನ್ನು ಕಲಿಸದವರೂ ಕೂಡ ಒಂದು ರೀತಿಯಲ್ಲಿ ಗುರುಗಳೇ. ತಂದೆ-ತಾಯಿ ಮೊದಲ ಗುರುಗಳು, ಶಾಲೆಯಲ್ಲಿ ನಮಗೆ ಕಲಿಸುವವರು, ಜೀವನದಲ್ಲಿ ಪ್ರತಿ ಹೆಜ್ಜೆಗೆ ಪಾಠ ಕಲಿಸುವ ಎಲ್ಲ ಜನರು ನಮ್ಮ ಗುರುಗಳೇ. ಜೀವವು ಇರುವವರೆಗೂ ನಾವು ವಿದ್ಯಾರ್ಥಿಗಳು ಪ್ರಪಂಚ ಒಂದು ವಿದ್ಯಾಲಯ. ಭಾಗವತ ಪುರಾಣದಲ್ಲಿ ಬರುತ್ತದೆ ಗಾಳಿ, ನೀರು ದುಂಬಿ ಎಲ್ಲ ಪ್ರಾಕೃತಿಕ ವಸ್ತುಗಳು ಜೀವನದಲ್ಲಿ ಬರುವ ವ್ಯಕ್ತಿಗಳಿಂದಲೂ ಕಲಿಯುವುದು ಇರುತ್ತದೆ ಅಂದರೆ ನಾವು ಆ ಜೀವ ಪರ್ಯಂತ ಅಧ್ಯಯನ ಶೀಲರಾಗಿರಬೇಕು ಎಂಬುದು ನಮ್ಮ ಧರ್ಮ ನಮ್ಮ ಸಂಸ್ಕೃತಿ ನಮಗೆ ಹೇಳಿಕೊಡುತ್ತದೆ. ಶಿಕ್ಷಕರ ವೃತಿಯು ಬಹಳ ಶ್ರೇಷ್ಠ ವೃತ್ತಿ ಒಂದು ವ್ಯಕ್ತಿಯ ಸಂಪೂರ್ಣ ಜೀವನವನ್ನು ರೂಪಿಸುವ ಜವಾಬ್ದಾರಿ ಇರುವ ವೃತ್ತಿ ಶಾಲೆಯಲ್ಲಿ ಪಾಠ ಮಾಡಿದ ಜೀವನದಲ್ಲಿ ಕಲಿಸಿದ ಇನ್ನು ಮುಂದೆ ಕಲಿಸುವ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಮಾಧುರಿ, ಬೆಂಗಳೂರು

Don`t copy text!