ನಾನು–ಗುರು

ನಾನು–ಗುರು

ವರ್ಣಿಸಲು ಸಾಧ್ಯವಾಗದ ಪದವೆಂದರೆ ಆದುವೇ *ಗುರು* ನಾವು ಜೀವನದಲ್ಲಿ ತಂದೆ-ತಾಯಿಯ ಋಣವನ್ನು ಅವರ ಮುಪ್ಪಿನ ಕಾಲದಲ್ಲಿ ಮಕ್ಕಳಂತೆ ಪ್ರೀತಿಸಿ ಅವರನ್ನು ಚೆನ್ನಾಗಿ ನೋಡಿಕೊಂಡರೆ ಅವರ ಋಣವನ್ನು ತಕ್ಕಮಟ್ಟಿಗೆ ತೀರಿಸಬಹುದು. ಇನ್ನು ಎರಡನೆಯದಾಗಿ ಸಮಾಜಕ್ಕೆ ಅವಶ್ಯವಿರುವುದನ್ನು ಕಾಣಿಕೆ ರೂಪದಲ್ಲಿ ನೀಡಿ ಅದರ ಋಣವನ್ನು ತೀರಿಸಬಹುದು.ಆದರೆ ಅಕ್ಷರ, ಉದ್ಯೋಗ, ಬದುಕುವ ಕಲೆಯನ್ನು ಕಲಿಸಿದ ಯಾವುದೇ ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ.

ಶಿಕ್ಷಣ
ಸರ್ವಜ್ಞನೆಂಬುವನು ಗರ್ವದಿಂದಾದವನೆ ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವವೆ ಆದ ಸರ್ವಜ್ಞ

ನಮ್ಮ ಶಿಕ್ಷಣ ಪದ್ಧತಿಯಲ್ಲಿ ಪ್ರಮುಖವಾಗಿ ಔಪಚಾರಿಕ ಶಿಕ್ಷಣ ಅನೌಪಚಾರಿಕ ಶಿಕ್ಷಣ ಕಂಡುಬರುತ್ತವೆ. *ಔಪಚಾರಿಕ* ಶಿಕ್ಷಣಕ್ಕೆ ನಿರ್ದಿಷ್ಟ ಪಠ್ಯಕ್ರಮ, ನಿರ್ದಿಷ್ಟ ವೇಳೆ, ಬೋಧಕ ಬೋಧಕೇ ತರ ಸಿಬ್ಬಂದಿ, ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಗಳಿರುತ್ತವೆ. ಆದರೆ *ಅನೌಪಚಾರಿಕ* ಶಿಕ್ಷಣವು ಹುಟ್ಟಿನಿಂದ ಚಟ್ಟದವರೆಗೆ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಅನೌಪಚಾರಿಕ ಶಿಕ್ಷಣಕ್ಕೆ ಯಾವುದೇ ನಿರ್ದಿಷ್ಟವಾದ ಸಮಯ ಪರೀಕ್ಷೆ ಫಲಿತಾಂಶ ಪಠ್ಯಕ್ರಮ ಇರುವುದಿಲ್ಲ. ಆದರೂ ಅಲ್ಲಿಯ ತರಬೇತುದಾರ, ಕುಶಲಕರ್ಮಿ,ಪಾಲಕರು ಒಬ್ಬ ಗುರು ಆಗಿ ನಮಗೆ ಕಂಡು ಬರುತ್ತಾರೆ. ಒಬ್ಬ ವ್ಯಕ್ತಿ ತನ್ನಲ್ಲಿರುವ ಜ್ಞಾನವನ್ನು ಪರಿಪೂರ್ಣವಾಗಿ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸುವುದೇ ಶಿಕ್ಷಣವಾಗಿರುತ್ತದೆ ಅಥವಾ ಒಂದು ಮಗುವಿನ ಸರ್ವಾಂಗೀಣ ಅಭ್ಯುದಯವೆ ಶಿಕ್ಷಣವಾಗಿರುತ್ತದೆ

ನಾನು *ನಾನು–ಗುರು* ಎಂಬ ಶಿರ್ಷಿಕೆಯನ್ನು ಕೊಡಲು ಪ್ರಮುಖವಾದ ಕಾರಣವೇನೆಂದರೆ ನಾನು ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದೇನೆ ಆದರೆ ಪರಿಪೂರ್ಣ ಶಿಕ್ಷಕನಾಗಿಲ್ಲ ಅಥವಾ ಶಿಕ್ಷಕ ಅಥವಾ ಗುರು ಎಂಬ ಸ್ಥಾನವನ್ನು ಮುಟ್ಟಲು ನನ್ನಿಂದ ಸಾಧ್ಯವೇ ಇಲ್ಲ. ಜಗತ್ತಿನ ಎಲ್ಲ ವೃತ್ತಿಗಳಲ್ಲಿ ಅತ್ಯಂತ ಪವಿತ್ರ ಹಾಗೂ ಪ್ರಮುಖವಾದ ವೃತ್ತಿ ಎಂದರೆ ಅದುವೇ ಶಿಕ್ಷಕ ವೃತ್ತಿ.
*ಗುರುವಿನ ವಿಸ್ತರದ ಪರಿಯ ನಾನೇನೆಂಬೆ ಮೆರೆವ ಬ್ರಹ್ಮಾಂಡದೊಳ ಹೊರಗಿನವ ಬೆಳಗಿ ಪರಿಪೂರ್ಣನಿಪ್ಪ ಸರ್ವಜ್ಞ*

ಗುರುವಿನ ಮಹಿಮೆಯನ್ನು ಏನೆಂದು ಹೇಳಲಿ ಈ ಜಗತ್ತಿನಲ್ಲಿ ನಮಗೆ ಕಾಣುವ ಬ್ರಹ್ಮಾಂಡದ ಒಳಗಿನ ಹಾಗೂ ಹೊರಗಿನ ವಿಷಯಗಳನ್ನು ಗುರು ತೋರಿಸಿ ಪರಿಪೂರ್ಣನೆನಿಸಿದ್ದಾನೆ.
ವಿದ್ಯೆ ಕಲಿತಡೆ ಇಲ್ಲ, ಬುದ್ಧಿ ಕಲಿತಡೆ ಇಲ್ಲ, ಉದ್ಯೋಗ ಮಾಡಿದಡೆ ಇಲ್ಲ, ಗುರು ಮುಖವು ಇದ್ದಲ್ಲದಿಲ್ಲ ಸರ್ವಜ್ಞ
ವ್ಯಕ್ತಿ ತನ್ನಷ್ಟಕ್ಕೆ ತಾನೇ ವಿದ್ಯೆ ಕಲಿತರೆ, ಬುದ್ಧಿ ಕಲಿತರೆ, ಉದ್ಯೋಗ ಮಾಡಿದರೆ ಅದು ಯಶಸ್ಸು ಪಡೆಯುವುದಿಲ್ಲ ಆದರೆ ಅವೆಲ್ಲವೂ ಗುರುವಿನಿಂದ ಕಲಿತು ಬಂದಾಗ ಮಾತ್ರ ಸಫಲವಾಗುವವು. ಒಬ್ಬ ಶಿಷ್ಯನಿಗೆ ಒಬ್ಬ ಒಳ್ಳೆಯ ಗುರು ಸಿಗುವುದು ಬಲು ಕಷ್ಟ ಸಾಧ್ಯ ಹಾಗಯೇ ಒಬ್ಬ ಒಳ್ಳೆಯ ಗುರುವಿಗೆ ಒಬ್ಬ ಒಳ್ಳೆಯ ಸಿಗುವುದು ಕೂಡ ಅಷ್ಟೇ ಕಷ್ಟ. ಶಿಕ್ಷಕ ನೆನ್ಸಿಕೊಂಡವನು ಕಾಯಾ, ವಾಚಾ, ಮನಸಾ ಪ್ರಾಮಾಣಿಕವಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು.

ಅರುವುನರಿಯದ ಗುರುವು ವರವನರಿಯದ ಶಿಷ್ಯ ನೆರೆಯರಿಯದೊಂದು ಇವು ಮೂರು ಅಂಧಕರು ತಿರುಗಾಡಿದಂತೆ ಸರ್ವಜ್ಞ

ಜ್ಞಾನವಿಲ್ಲದ ಗುರು ಕೇಳಲು ತಿಳಿಯದ ಶಿಷ್ಯ ಹಾಗೂ ತಿಳುವಳಿಕೆ ಇಲ್ಲದ ನೆರೆಹೊರೆಯವರು ಈ ಮೂರು ಕುರುಡರು ತಿರುಗಾಡಿದಂತೆ ಗುರಿ ಸಾಧಿಸಲು ಆಗುವುದಿಲ್ಲ.

ಗುರುವಾದವನು ಮಕ್ಕಳನ್ನು ತಾಯಿಯಂತೆ, ತಂದೆಯಂತೆ ಪ್ರೀತಿಯಿಂದ ವಿದ್ಯೆ ಬುದ್ಧಿಯನ್ನು ನೀಡಬೇಕು. ಮಗು ತಂದೆ ತಾಯಿಗಳಿಗಿಂತ ಹೆಚ್ಚಿನ ಗೌರವ ವಿಶ್ವಾಸವನ್ನು ಗುರುವಿನ ಮೇಲಿಟ್ಟಿರುತ್ತದೆ. ಆ ಮಗುವಿನ ನಂಬಿಕೆ, ವಿಶ್ವಾಸಕ್ಕೆ ಎಂದೂ ದ್ರೋಹವಾಗಬಾರದು.
ಜೀಯ ಸದ್ಗುರುನಾಥ ಕಾಯ ಪುಸಿಯನೆ ತೋರಿ ಮಾಯ ಪಾಶವನು ಹರಿಸುತ್ತಾ ಶಿಷ್ಯಂಗೆ ತಾಯಿಯಂತಾದ ಸರ್ವಜ್ಞ

ಬಂಧುಗಳು ಆದವರು ಬಂದುಂಡು ಹೋಗುವರು ಬಂಧನವ ಕಳೆಯಲರಿಯರು ಗುರುವಿಂದ ಬಂಧುಗಳು ಉಂಟೆ? ಸರ್ವಜ್ಞ

ಈ ಭೂಮಿಯ ಮೇಲೆ ಎಂದು *ಕಲಿಕೆ* ಎಂಬುದು ಪ್ರಾರಂಭವಾಯಿತೊ ಅಂದಿನಿಂದ ಇಂದಿನವರೆಗೂ ಗುರುವಿಗೆ ವಿಶೇಷ ಸ್ಥಾನವಿದೆ ಹರ ಮುನಿದರೂ ಗುರು ಕಾಯುವನು

ಶಿವ ಪಥವನರಿವೊಡೆ ಗುರು ಪಥವೇ ಮೊದಲು

ರವೀಂದ್ರ ಪಟ್ಟಣ

 

Don`t copy text!