ಕಾಣದ ಭಾವನೆಯ ಬಣ್ಣ

 

ಕಾಣದ ಭಾವನೆಯ ಬಣ್ಣ

ಕುಸುಮದ ಮೊಗದಲಿ ಮಸಕಾಗಿದೆ ಕಂಗಳು
ಬಿಸಿಯುಸಿರ ತಡೆಹಿಡಿದ ಕಣ್ಣಿರ ಕಣ್ಣುಗಳು
ಬೇಸರದ ಮನಸಿನಲಿ ಘಾಸಿಗೊಂಡ ಕನಸುಗಳು
ಕಾಸಗಲ ಕುಂಕುಮದಿ ಬೇಸರದ ಬೆಳದಿಂಗಳು

ನಸುನಗುವ ಮೊಗವೇಕೆ ಬಾಡಿಬಸವಳಿದಿದೆ?
ಕುಸಿದು ಹೋಯಿತೆ ನಿನ್ನ ನಿರೀಕ್ಷೆಯ ಪ್ರೇಮಸೌದ?
ದ್ವೇಷ ಅಸೂಯೆಯಲಿ ಮನ ಬಂಧಿಯಾಗಿಹುದೆ?
ಶೇಷಶಯನನ ನಂಬಿ ಖುಷಿಯಾಗು ಮನವೆ

ಹೂವ ಮನಸಿಗೆ ನೋವ ಈ ಜಗವು ನೀಡುವುದು
ನೋವಲೂ ನಗುವ ಮುಖವಾಡದಿ ಹೆಣ್ಣ ಬದುಕದು
ಭಾವನೆಗೆ ಬೆಲೆಕೊಡುವ ಜನ ವಿರಳವಿಹುದು
ಬೇವನುಂಡು ಬೆಲ್ಲವನುಣಿಸುವ ಜನ್ಮವಿ ಮಹಿಳೆಯದು

ಧುಮುಕುತಿಹ ಕಣ್ಣೀರ ತಡೆದು ಬದುಕಲೇಬೇಕು
ಸುಮದಂಥ ಮನಕೆ ದೃಡ ನಿರ್ಧಾರದ ನಗುಬೇಕು
ಪ್ರೇಮದ ಕಣ್ಣಕನ್ನಡಿಯ ಮಂಜನೊರೆಸಬೇಕು
ಕಾಮನೆಯ ಹೃದಯದ ಭಾವನೆಗೆ ಬಣ್ಣ ಬಳಿಯಬೇಕು.

✍️ಅಂಜಲಿ ತೊರವಿ

Don`t copy text!