ವಚನಾಂಜಲಿ’

ವಚನಾಂಜಲಿ’

ವಚನಗಳಿಂದ ದಿವ್ಯ ಆದರ್ಶ ಬಿಂಬಿಸುವ ‘ವಚನಾಂಜಲಿ’
ಸಾಹಿತ್ಯದ ಪ್ರಕಾರಗಳಲ್ಲಿ ವಚನವೂ ಕೂಡ ತನ್ನ ಸ್ಥಾನ ಭದ್ರಗೊಳಿಸಿದೆ.ವಚನ ಸಾಹಿತ್ಯ, ಕಾವ್ಯ ರಚನೆ, ಚುಟುಕು, ಹನಿಗವನದಂತೆ ಎಲ್ಲರ ಮನಕ್ಕೂ ಸಮೀಪಿಸಿದೆ.ವಚನಗಳು ಚಿಕ್ಕದಾಗಿಯೂ,ವಿವರವಾಗಿಯೂ ಇರಬಹುದು.ಅವುಗಳ ಒಳಾರ್ಥ ಅಮೋಘವಾಗಿರುತ್ತದೆ.ವಚನಗಳಿಂದ ಭಕ್ತಿಯ ಭಾವ ಹೊರ ಹೊಮ್ಮುವುದು.ಕಾವ್ಯಲೋಕದಲ್ಲಿ ವಚನ ಸಾಹಿತ್ಯ ತನ್ನದೇ ಛಾಪನ್ನು ಮೂಡಿಸಿದೆ.
ಹಿರಿಯ ಸಹೋದರಿ ಶ್ರೀಮತಿ ಹಮೀದಾ ಬೇಗಂ ದೇಸಾಯಿಯವರು ಅದ್ಭುತ ಬರಹಗಾರರು.ಸಂಕೇಶ್ವರದ ನಿವಾಸಿಯಾಗಿರುವ ಇವರು ಈ ಮೊದಲು’ಮನೋಗೀತೆ’ ಎಂಬ ಕುಸುಮವನ್ನು ಸಾರಸ್ವತ ಪ್ರಪಂಚದಲ್ಲಿ ಅರಳಿಸಿ ಈಗ ‘ವಚನಾಂಜಲಿ’ಎಂಬ ವಚನ ಸಂಕಲನವನ್ನು ಬೆಳಗಿಸಿದ್ದಾರೆ.ಅನೇಕ ದಶಕಗಳಿಂದ ಸಾಹಿತ್ಯದ ಗೀಳನ್ನು ಹಚ್ಚಿಕೊಂಡಿರುವ ಇವರು,ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಸಿದ್ಧಹಸ್ತವನ್ನು ತೋರಿಸಿದ್ದಾರೆ.ತಾತ್ವಿಕ ನೆಲೆಗಟ್ಟಿನ‌ ಮೇಲೆ ಬರೆದಿರುವ ‘ವಚನಾಂಜಲಿ’ ಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಕೃತಿಯನ್ನು ಕನ್ನಡತಿ ಪ್ರಕಾಶನ ಸಂಕೇಶ್ವರದಿಂದ ಪ್ರಕಟಗೊಂಡಿದ್ದು,ಈ ಕೃತಿಯನ್ನು ಶ್ರೀ ವಿಜಯಲಕ್ಷ್ಮೀ ಆಫ್ ಸೆಟ್ ಪ್ರಿಂಟಸ್೯ ವಿಜಯಪುರ ಇವರು ಮುದ್ರಿಸಿ, ಸುಂದರ ಮುಖಪುಟ ವಿನ್ಯಾಸವನ್ನು ಸಂತೋಷ ಗ್ರಾಫಿಕ್ಸ್ ವಿಜಯಪುರ ಇವರು ಮಾಡಿದ್ದಾರೆ. ಕೃತಿಗೆ ಶುಭ ಹಾರೈಕೆಗಳನ್ನು ಡಾ.ಶ್ರಧ್ದಾನಂದ ಸ್ವಾಮಿ ಗುರುದೇವಾಶ್ರಮ ಕಾಗವಾಡ ಸದಲಗಾರವರು ಮಾಡಿದರೆ,ಹಿರಿಯ ಸಾಹಿತಿಗಳಾದ ಡಾ.ಗುರುಲಿಂಗ ಕಾಪಸೆರವರು ಬೆನ್ನುಡಿ ಬರೆದು ಲೇಖಕಿಯರಿಗೆ ಬೆನ್ನು ತಟ್ಟಿದ್ದಾರೆ.

 

(ಹಮೀದಾ ಬೇಗಂ ಸಂಕೇಶ್ವರ)
ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿರುವ ಪ್ರಸ್ತುತ ಸನ್ನಿವೇಶಕ್ಕೆ ,ಮೌಲ್ಯಗಳನ್ನುವೃದ್ದಿಗೊಳಿಸುವುದು ಅವಶ್ಯಕವಾಗಿದೆ.ಜಾತಿ ಬೇಧ,ಮೇಲು – ಕೀಳು ಎಂಬ ಭಾವದಿಂದ ಜಗತ್ತು ಅಂಧ ಪತನಕ್ಕೆ ನೂಕಲ್ಪಡುತ್ತಿದೆ.ಬೇಧ ಭಾವ ಮರೆತು ನಾವೆಲ್ಲರೂ ಒಂದೇ ಎಂಬ ಭಾವ ಮೂಡಿಸಿಕೊಂಡು ಬದುಕಿದರೆ ದೇಶದ ಪ್ರಗತಿ ಅವಶ್ಯವಾಗಿ ಆಗುವುದು. ಸಹೋದರಿ ತಮ್ಮ ವಚನಗಳ ಮೂಲಕ ಸಮಾಜಕ್ಕೆ ಕಿವಿಮಾತು ನೀಡಿದ್ದಾರೆ.
ಕಾರಿರುಳ ಮುಸುಕಿರುವ
ಕಾವಳವ ಕರಗಿಸಲು
ನೇಸರನ ಹೊಂಗದಿರ ಒಂದು ಸಾಕು;
ಮನವನಾವರಿಸಿರುವ
ವಿಷಯಂಗಳ ಕಳೆಯಲು
ನಿನ್ನ ದರುಶನ ಸಾಕು,ಸಿದ್ಧಗುರುವೆ!
ಮನುಷ್ಯ ಮನುಷ್ಯನನ್ನೇ ದ್ವೇಷಿಸಿ,ಹಿಂಸಿಸಿ ಕೊಲೆ ಮಾಡುವ ಪ್ರಸ್ತುತ ಪರಿಸ್ಥಿತಿ ನಿಜಕ್ಕೂ ಘೋರವಾಗಿದೆ.ಮಾನವೀಯತೆಯ ಭಾವ ಮಾಯವಾಗಿದೆ.ಹೆಣ್ಣಿಗೆ ರಕ್ಷಣೆ ಇಲ್ಲವಾಗಿದೆ.ಹೆತ್ತ ತಂದೆ, ಸಹೋದರರಿಂದಲೇ ರಕ್ಷಣೆ ಇಲ್ಲದ ಹೆಣ್ಣು ಬದುಕುವುದು ಹೇಗೇ?ಎಂಬ ಪ್ರಶ್ನೆ ಒಡಮೂಡುತ್ತಿದೆ.ಗಾಂಧೀಜಿ ಕಂಡ ಕನಸು ನನಸಾಗುತ್ತಿಲ್ಲ‌.ಜಗತ್ತಿಗೆ ಆವರಿಸಿದ ಕತ್ತಲನ್ನು ತೊಲಗಿಸಲು ನೇಸರನ ಒಂದು ಕಿರಣ ಇದ್ದರೆ ಸಾಕು ಜಗ ಬೆಳಗುವದು.ಮಾನವರ ಮನದಲ್ಲಿ ಬೆಳೆಯುತ್ತಿರುವ ವಿಷವನ್ನು ಹೊರತೆಗೆಯಲು ನಿನ್ನ ದರುಶನದ ಅವಶ್ಯಕತೆ ಇದೆ ಎಂದು ಗುರುವನ್ನು ಬೇಡಿಕೊಳ್ಳುತ್ತಿದ್ದಾರೆ.ಗುರುಕರುಣೆ ಇಲ್ಲದಿರೆ ಯಾವ ಕಾರ್ಯವೂ ಸಿದ್ದಿಸಲಾರವು.ಗುರು ಕರುಣೆಯಿಂದ ಜಗತ್ತಿನ ಮನಗಳಿಗೆ ಬೀರಿದ ಕತ್ತಲು ಮಾಯವಾಗಲಿ,ಜಗತ್ತು ಬೆಳದಿಂಗಳ ಬೆಳಕಲ್ಲಿ ಬೆಳಗಲಿ,ಮಾನವರ ಮನಗಳು ತಿಳಿಗೊಳ್ಳಲಿ ಎಂದು ತಮ್ಮ ವಚನದ ಮೂಲಕ ಗುರುವಲ್ಲಿ ಬೇಡಿಕೊಂಡಿದ್ದಾರೆ.
ಕಷ್ಟಗಳು ಜೀವನದಿ
ಮುಳ್ಳಾಗಿ ಚುಚ್ಚಿದರೂ
ನೆನೆಯುತಲೆ ನಾ ನಿನ್ನ ನೋವ ಮರೆತೆ;
ಮನುಜ ಜೀವನವೊಂದು
ಚಲಿಸುತಿಹ ಮೋಡವದು
ಇಷ್ಟದೇವನು ನೀನು,ಸಿದ್ಧಗುರುವೆ!
ಮನುಷ್ಯನಿಗೆ ಕಷ್ಟಗಳು ಬರುವುದು ಸಹಜ.ಕಷ್ಟ ಬಂದಾಗ ಕುಗ್ಗದೇ,ಸುಖ ಬಂದಾಗ ಹಿಗ್ಗಬಾರದು.ಕಷ್ಟ-ಸುಖ ಒಂದೇ ನಾಣ್ಯದ ಎರಡು ಮುಖಗಳಂತೆ ಸ್ವೀಕರಿಸಬೇಕು.ಏಳು-ಬೀಳುಗಳು ಬದುಕಿನಲ್ಲಿದ್ದಾಗಲೇ ನಾವು ಗುರಿ ತಲುಪಲು ಸಾಧ್ಯ. ಕಷ್ಟದ ಫಲವೇ ಸುಖ. ಸುಖ ಪಡದವನಿಗೆ ಸುಖವೂ ಕಷ್ಟ. ಸುಖ ಪಡೆದ ನಂತರ ಕಷ್ಟ ಮರೆಯಬಾರದು.ಸುಖ ಮುಗಿಯಬಾರದೆಂದರೆ ಕಷ್ಟ ಪಡುವುದು ಕಾಯಕವಾಗಬೇಕು.ಕಷ್ಟಗಳು ಮುಳ್ಳಾಗಿ ಚುಚ್ಚಿದರೂ ಗುರುವನ್ನು ನೆನೆಯುತ ನೋವ ಮರೆತು ಜೀವನವನ್ನು ಇಷ್ಟದಿಂದ ಸಾಗಿಸಿ,ಎಂದಿಗೂ ಜೀವನದಲ್ಲಿ ಕಷ್ಟ-ಸುಖ ಸಮನಾಗಿ ಸ್ವೀಕರಿಸಿ ಎಂದು ಮಾನವ ಕುಲಕೆ ಮಾರ್ಮಿಕವಾಗಿ ತಮ್ಮ ವಚನದ ಮೂಲಕ ತಿಳಿ ಹೇಳಿದ್ದಾರೆ.
ಹುಟ್ಟು ಆಕಸ್ಮಿಕವು
ಮರಣ ಶಾಶ್ವತ ತಾನು
ಹುಟ್ಟು-ಮರಣದ ಮಧ್ಯೆ ಇಹುದು ಬಾಳು;
ನಿಸ್ವಾರ್ಥ ಭಾವದಲಿ
ಪರಹಿತಕೆ ದುಡಿಯುವುದೆ
ಬದುಕಿನಾ ಸಾರ್ಥಕತೆ,ಸಿದ್ಧಗುರುವೆ!
ಪ್ರತಿಯೊಂದು ಜೀವಿಗೂ ಸಾವು ಖಚಿತ. ಹುಟ್ಟಿದ ಜೀವಿ ಸಾಯಲೇ ಬೇಕು.ಬದುಕೆಂಬುದು ಹುಟ್ಟು-ಸಾವಿನ ಮಧ್ಯದ ಸಂತೆ.ಮೂರು ದಿನದ ಸಂತೆಯನ್ನು ನಗು ನಗುತ ಸಾಗಿಸಬೇಕು.ಕೇವಲ ಬದುಕು ನಮಗಾಗಿ ಅಲ್ಲದೇ ಪರಹಿತಕೆ ದುಡಿಯುವ ಭಾವ ಹೊಂದಬೇಕು.ನಾನು,ನನಗಾಗಿ,ನನ್ನಿಂದಲೇ ಎಂಬ ಭಾವ ತೊರೆದು ನಾವು,ನಮಗಾಗಿ,ನಮಗೆಲ್ಲರಿಗಾಗಿ ಎಂಬ ಭಾವ ಒಡಮೂಡಿಸಿಕೊಂಡಾಗಲೇ ಬದುಕಿಗೆ ಸಾರ್ಥಕತೆ ದೊರೆಯುತ್ತದೆ.ತನಗಾಗಿಯೇ ಎಲ್ಲವೂ ಎಂದು ಬದುಕುತ್ತಿರುವ ಜನರಿಗೆ ತಮ್ಮ ವಚನದ ಮೂಲಕ ಲೇಖಕಿ ಛಾಟಿ ಏಟು ಬೀಸಿದ್ದಾರೆ.
ಕಿರುಯರನು ಓಲಯಿಸಿ
ಹಿರಿಯರನು ಗೌರವಿಸು
ಓರಗೆಯ ಗೆಳೆತನದಿ ಒಲವ ಬೆಳೆಸು;
ಅವಿಚಾರಿ,ಡಾಂಭಿಕರು
ಅವಿವೇಕಿಗಳ ನಡುವೆ
ಮೌನ ಮುದ್ರೆಯ ಧರಿಸು,ಸಿದ್ಧಗುರುವೆ!
ಇಂದಿನ ಪ್ರಸ್ತುತ ಯಾಂತ್ರಿಕ ಬದುಕಿನಲ್ಲಿ ಹಿರಿಯರು,ಕಿರಿಯರು,ಆತ್ಮೀಯತೆ,ಒಲುಮೆ,ಸ್ನೇಹ,ಪ್ರೀತಿ, ಗೌರವಗಳು ಮಾಯವಾಗಿವೆ.ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲದ ಪರಿಸ್ಥಿತಿ ಬಂದೊದಗಿದೆ. ಇದರಿಂದಾಗಿ ಸಮಾಜದ ಪರಿಸ್ಥಿತಿ ಹದಗೆಡುತ್ತಿದೆ.ಮನಃ ಶಾಂತಿ ಇಲ್ಲದಂತಾಗಿದೆ.ಕಿರಿಯರನ್ನು ಪ್ರೀತಿಯಿಂದ ಕಾಣಬೇಕು, ಹಿರಿಯರಿಗೆ ಗೌರವ ಆದರಗಳನ್ನು ನೀಡಬೇಕು. ಒರಗೆಯ ಗೆಳೆಯರೊಂದಿಗೆ ಸ್ನೇಹ ಬೆಳೆಸಬೇಕು.ಸಮಾಜಕ್ಕೆ ಕಪ್ಪು ಚುಕ್ಕೆಯಂತಿರುವ ಸಮಾಜ ಘಾತುಕರಿಂದ ದೂರವಿರಬೇಕೆಂದು ಯುವಕರಿಗೆ ತಮ್ಮ ವಚನದ ಮೂಲಕ ಕಿವಿಮಾತುಗಳನ್ನು ಹೇಳಿದ್ದಾರೆ.
ಶ್ರೀಮತಿ ಹಮೀದಾ ಬೇಗಂ ದೇಸಾಯಿಯವರ ವಚನಾಂಜಲಿ ಕೃತಿಯ ಒಂದೊಂದು ವಚನಗಳೂ ಒಂದೊಂದು ಸಂದೇಶವನ್ನು ನೀಡುತ್ತವೆ.ಪ್ರಸ್ತುತ ದಿನಮಾನಗಳಲ್ಲಿ ಇಂತಹ ಕೃತಿಗಳ ಅವಶ್ಯಕತೆ ಇದೆ. ಇವರಿಂದ ಇನ್ನೂ ಹೆಚ್ಚೆಚ್ಚು ಕೃತಿಗಳು ಮೂಡಿಬರಲಿ ಎಂದು ಶುಭ ಹಾರೈಸುವೆ.

-ಶಬಾನಾ ಅಣ್ಣಿಗೇರಿ
ಖಾನಾಪುರ
೮೯೦೪೫೦೪೦೪೪

Don`t copy text!