ಮೌನ ಗೌರಿ

ಮೌನ ಗೌರಿ

ಎಳೆ ನಿಂಬೆಯಂತೆ ಥಳಥಳಿಸಿ ಹೊಳೆವವಳೆ
ಹಸಿರೆಲೆಯ ಮಧ್ಯೆ ಹೂವಂತೆ ಅರಳಿದವಳೆ
ಮೃದು ಮಧುರ ಕೋಮಲೆ ನೀನಾರು ಹೇಳೆ
ಘಮಲಿನಾ ಅಮಲಲಿ ತೇಲುತ್ತ ನಿಂದವಳೆ||

ಅರಳಿದಾ ಹೂವಂತೆ ಮನಸೆಳೆವ ಮೊಗದವಳೆ
ಹೊರಳಿ ನೋಡುವಾ ಚೆಲುವಿನಾ ರಾಶಿಯವಳೆ
ಕೇಶರಾಶಿಯೂ ಕೂಡ ಮೌನದಲೆ ಉಲಿವದು
ಸುಂದರಿಯ ಜೊತೆಗಾತಿ ನಾನೆಂದು ಬೀಗುವದು||

ಮಂದಹಾಸವು ಕೂಡ ಮರೆಯಾಗಿ ನಿಂದಿಹುದು
ಮೌನವೂ ಕೂಡ ಮನದಿಂಗಿತವ ನುಡಿದಿಹುದು
ಚೆಲುವಿನಾ ಒಲವೆಲ್ಲ ನವಿಲಂತೆ ಕುಣಿದಿಹುದು
ಕಲೆಯ ಬಲೆಯೆಲ್ಲ ನಿನ್ನಲ್ಲೆ ತುಂಬಿಹುದು ||

ಮೌನದಾ ಮುದ್ದು ಗೌರಿ ಒಲವಿನಾ ಪೋರಿ
ಹೃನ್ಮನವ ಗೆದ್ದ ಕುವರಿ ನಲಿವಿನಾ ಚೋರಿ
ನಾಜೂಕಿನ ನಾರಿ ನಯನಮನೋಹರಿ
ಮಲೆನಾಡ ಮುದ್ದು ಬಂಗಾರಿ ಚಂದ್ರಚಕೋರಿ||

ಶ್ವೇತ ಪುಷ್ಪವೂ ಕೂಡ ಸುಮ್ಮನಾಗಿಹುದು
ಹಸಿರೆಲೆಗಳು ಕೂಡ ಉಸಿರ್ಹಿಡಿದು ನಿಂದಿಹವು
ನಿನ್ನಂದದ ಮಕರಂದವು ಘಮಘಮಿಸುತಿಹುದು
ವನವೆಲ್ಲ ನಿನ್ನುಸಿರ ಝೇಂಕಾರ ತುಂಬಿಹುದು||

ಸವಿತಾ ಮಾಟೂರು ಇಲಕಲ್ಲ

Don`t copy text!