ಅಂತಾರಾಷ್ಟ್ರೀಯ ಅನುವಾದ ದಿನ

ಅಂತಾರಾಷ್ಟ್ರೀಯ ಅನುವಾದ ದಿನ

ಸೆಪ್ಟಂಬರ್‌ ೩೦ನೇ ತಾರೀಖಿನಂದು ಅಂತಾರಾಷ್ಟ್ರೀಯ ಅನುವಾದ ದಿನವನ್ನಾಗಿ ಆಚರಿಸಬೇಕೆಂಬ ನಿರ್ಣಯವನ್ನು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಮೇ ೨೪, ೨೦೧೭ರಂದು ತೆಗೆದುಕೊಂಡಿತು. ಅಂತಾರಾಷ್ಟ್ರೀಯ ಅನುವಾದ ಒಕ್ಕೂಟವು ೧೯೫೩ರಲ್ಲಿ ಸ್ಥಾಪಿತವಾಗಿತ್ತು. ೧೯೯೧ರಿಂದ ವಿದ್ಯುಕ್ತವಾಗಿ ಅನುವಾದ ದಿನದ ಆಚರಣೆಯನ್ನು ಆಚರಿಸಲಾಗುತ್ತಿತ್ತು.

ಅನುವಾದ ಎಂದರೆ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಮೂಲ ಭಾಷೆಯ ಅರ್ಥ ಮತ್ತು ಭಾವವು ವ್ಯತ್ಯಾಸವಾಗದಂತೆ ತಿಳಿಸುವುದಾಗಿದೆ. ಅಂತಾರಾಷ್ಟ್ರೀಯ ಸಮುದಾಯದಲ್ಲಿ ಅನುವಾದದ ಅಗತ್ಯತೆ ಬಹಳಷ್ಟು ಇದೆ. ಏಕೆಂದರೆ ದೇಶದ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ದೇಶದ ಜೊತೆಗೆ ಸಂಪರ್ಕ ವ್ಯವಹಾರವು ನಡೆಯುತ್ತಿರುವತ್ತದೆಯೋ ಭಾಷೆಯ ಜ್ಞಾನವನ್ನು ತಿಳಿದವರು ಬೇಕಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಅನುವಾದಕರ ಅವಶ್ಯಕತೆ ಎಲ್ಲ ಕ್ಷೇತ್ರಗಳಲ್ಲೂ ಅತ್ಯವಶ್ಯಕವಾಗಿದೆ. ಮುಖ್ಯವಾಗಿ ಬರವಣಿಗೆ , ಪತ್ರಿಕಾ ರಂಗ, ಸರಕಾರಿ ಕಾರ್ಯಲಯಗಳು ಇಂತಹ ಸ್ಥಳಗಳಲ್ಲಿ ಅನುವಾದಕರ ಅವಶ್ಯಕತೆ ಇದ್ದೇ ಇದೆ. ಈಗಂತೂ ಮಾನ್ಯ ಪ್ರಧಾನ ಮಂತಿಯವರು ಶಿಕ್ಷಣದಲ್ಲಿ ಕ್ರಾಂತಿಯನ್ನು ಮಾಡಿ ಎಲ್ಲ ಭಾಷೆಯ ಜನರಿಗೂ ಉನ್ನತ ಶಿಕ್ಷಣದ ಪಠ್ಯಗಳೂ ಕೂಡ ಅವರ ಮಾತೃ ಭಾಷೆಯಲ್ಲಿಯೇ ದೊರೆಯುವಂತೆ ಮಾಡುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲು ಹೇಳಿರುತ್ತಾರೆ.

ಯಾವುದೇ ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸುವ ಸಾಧನವೇ ಪುಸ್ತಕಗಳು, ಎಲ್ ಬುದ್ಧಿ ಜೀವಿಗಳ ಸಾಹಿತಿಗಳ ವಿಚಾರಗಳು ಆಂಗ್ಲ ಭಾಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಮಾತೃ ಭಾಷೆಯಲ್ಲಿಯೇ ವ್ಯಕ್ತ ಪಡಿಸಿರುತ್ತಾರೆ. ಆದ್ದರಿಂದ ಉತ್ತಮವಾದ ಜ್ಞಾನವನ್ನು ಜ್ಞಾನಿಗಳು ದೊಡ್ಡವರಿಂದ ಪಡೆಯಲು ಅವರ ಭಾಷೆಯನ್ನು ನಾವು ಸ್ವತಃ ಕಲಿಯಲು ಆಗದೇ ಹೋದರೂ ಕೂಡ ಅನುವಾದದ ಮೂಲಕ ಇಂತಹ ಒಂದು ಪ್ರಯತ್ನವನ್ನು ಮಾಡಿ ಎಲ್ಲ ಭಾಷೆಗಳ ಉತ್ತಮ ಕೃತಿಗಳನ್ನು ಅನುವಾದ ಮಾಡಿರುವವರ ಕೃತಿಗಳಿಂದ ತಿಳಿಯಬಹುದಾಗಿದೆ.

ಇನ್ನು ರಾಜಕೀಯವಾಗಿ ಅನೇಕ ಅಂತಾರಾಷ್ಟ್ರೀಯ ಭಾಷೆಗಳನ್ನು ಕಲಿತವರಿಂದ ನಮ್ಮ ದೇಶದ ನಿಯೋಗಗಳು ಬೇರೆ ದೇಶಗಳಿಗೆ ಹೋಗುವಾಗ ಮತ್ತು ವ್ಯವಹರಿಸುವಾಗ ಈ ಅನುವಾದಕರ ಮಹತ್ವವು ಬಹಳವಾಗುತ್ತದೆ. ಮೊದಲಿಗಿಂತಲೂ ಅನುವಾದದ ಅಗತ್ಯ ಮತ್ತು ಅನುವಾದಕರ ಅವಶ್ಯಕತೆ ಇಂದು ಬಹಳವಾಗಿದೆ.
೨೦೧೪ರಿಂದ ಪ್ರತಿ ವರ್ಷವೂ ಒಂದೊಂದು ಥೀಮ್‌ನೊಂದಿಗೆ ಆಚರಿಸಲಾಗುತ್ತದೆ. ೨೦೧೪ರಲ್ಲಿ ಮಾನವ ಹಕ್ಕುಗಳಂತೆ ಭಾಷೆಯ ಹಕ್ಕು ಎಂಬುದು ಥೀಮ್‌ ಆಗಿತ್ತು. ೨೦೧೫ರಲ್ಲಿ ಬದಲಾಗುತ್ತಿರುವ ಅನುವಾದಕರ ಚಿತ್ರ ಮತ್ತು ವ್ಯಾಖ್ಯಾನ ಎಂಬುದಾಗಿತ್ತು. ಇನ್ನು ೨೦೧೬ರಲ್ಲಿ ಅನುವಾದ ಮತ್ತು ವ್ಯಾಖ್ಯಾನಗಳು : ಪ್ರಪಂಚವನ್ನು ಒಗ್ಗೂಡಿಸುತ್ತಿದೆ ಎಂಬುದಾಗಿತ್ತು. ೨೦೧೭ರಲ್ಲಿ ಅನುವಾದ ಮತ್ತು ವೈವಿಧ್ಯತೆ ಎಂದಾಗಿತ್ತು. ೨೦೧೮ರಲ್ಲಿ ಬದಲಾಗುತ್ತಿರುವ ಸಮಯದಲ್ಲಿ ಅನುವಾದ ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಯನ್ನು ಪ್ರೋತ್ಸಾಹಿಸುತ್ತದೆ ಎಂಬುದಾಗಿದ್ದರೆ, ೨೦೧೯ರಲ್ಲಿ ಅನುವಾದ ಮತ್ತು ಸ್ವದೇಶಿ ಭಾಷೆಗಳ ಥೀಮ್‌ ಇದ್ದಿತು, ಅಂತಾರಾಷ್ಟ್ರೀಯವಾಗಿ ಸ್ವದೇಶಿ ಭಾಷೆಗಳ ಪ್ರಾಮುಖ್ಯತೆಯನ್ನು ತಿಳಿಯುವುದಾಗಿತ್ತು, ಇನ್ನು ೨೦೨೦ರಲ್ಲಿ ವಿಶ್ವದ ಸಂಕಷ್ಟಕ್ಕೆ ಪದಾವನ್ನು ಹುಡುವುದು ಥೀಮ್‌ ಆಗಿದ್ದಿತು, ಈ ಬಾರಿ ೨೦೨೧ರಲ್ಲಿ ಅನುವಾದದಲ್ಲಿ ಒಗ್ಗೂಡಿವಿಕೆ ಥೀಮ್‌ ಆಗಿತ್ತು. 2022ರ ಥೀಮ್ “ತಡೆಗೋಡೆಗಳಿಲ್ಲದ ವಿಶ್ವ ” ಎಂಬುದಾಗಿದೆ. ಅನುವಾದ ಕ್ಷೇತ್ರದಲ್ಲಿ ಬರಲು ಯಾರಿಗೆ ಆಗಲಿ ತಡೆಗೋಡೆ ಇಲ್ಲ. ಅವರ ವೃತ್ತಿ ವಿದ್ಯಾರ್ಹತೆ ಏನೇ ಇರಲಿ ಅನುವಾದ ಮಾಡಬಹುದು ಎಂಬುದೇ ಈ ಬಾರಿಯ ಥೀಮ್ ಆಗಿದೆ.

ಅನುವಾದವು ದಿನ ನಿತ್ಯದಲ್ಲಿ ಸಾಮಾನ್ಯರಿಗೂ ಕೂಡ ಅತೀ ಅಗತ್ಯದ ವಿಷಯವಾಗಿದೆ, ಕೋರ್ಟು ಕಛೇರಿಗಳಲ್ಲಿ, ಎಲ್ಲ ಕಾರ್ಖಾನೆಗಳು ಮತ್ತು ಕಾರ್ಯಾಲಯಗಳಲ್ಲಿ ಬೇರೆ ಬೇರೆ ರಾಜ್ಯಗಳ ಜನರು ಬಂದು ಕೆಲಸಕ್ಕೆಂದು ಸೇರಿದಾಗ ಸ್ಥಳೀಯ ಜನರ ಭಾಷೆ ಕಲಿಯವುದು ಕಷ್ಟವೇ ಆಗಿರುವ ಕಾರಣ ಎಲ್ಲ ದೊಡ್ಡ ದೊಡ್ಡ ಸಂಸ್ಥೆಗಳು ಅನ್ಯ ಭಾಷೆಯರಿಗೆ ಸ್ಥಳೀಯ ಭಾಷೆಗಳನ್ನು ಕಲಿಸುವ ಸಲುವಾಗಿ ನೇಮಕಗೊಂಡವರಿಗೆ ಸ್ಥಳೀಯ ಭಾಷೆ, ಆಂಗ್ಲ ಮತ್ತು ರಾಷ್ಟ್ರ ಭಾಷೆಯ ಜ್ಞಾನವು ಇರುತ್ತದೆ ಮತ್ತು ಅವರು ಕಲಿಸುತ್ತಾರೆ. ಇನ್ನು ಕಾರ್ಯಾಲಯಗಳಿಗೆ ಬರುವ ಅನ್ಯ ಭಾಷೆಯ ಪತ್ರಗಳನ್ನು ಅನುವಾದಿಸಿ ಕೊಡಲು ಸರಕಾರಿ ಕಛೇರಿಗಳಲ್ಲಿ ಅನುವಾದಕರು ಇರುತ್ತಾರೆ. ನ್ಯಾಯಾಲಯಗಳಲ್ಲಿಯೂ ಇರುತ್ತಾರೆ.

ಇಂದಿನ ಶಿಕ್ಷಣ ಪದ್ಧತಿಯಲ್ಲಿ ತ್ರಿ ಭಾಷಾ ಸೂತ್ರ ಅನುಸರಣೆ ಆಗುತ್ತಲೇ ಇರುತ್ತದೆ. ಕಡ್ಡಾಯವಾಗಿ ಏಳನೇ ತರಗತಿಯವರೆಗೆ ಸ್ಥಾನೀಯ ಭಾಷೆ, ಆಂಗ್ಲ ಭಾಷೆ ಮತ್ತು ರಾಷ್ಟ್ರ ಭಾಷೆಯನ್ನು ಭೋದಿಸಿ ವಿದದ್ಯಾರ್ಥಿಗಳಿಗೆ ಭಾಷೆಗಳತ್ತ ಒಲವು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಏನೇ ಅಂದರೂ ಇಂದಿನ ದಿನಮಾನದಲ್ಲಿ ಅನುವಾದಕರ ವೃತ್ತಿಗೆ ಮಹತ್ವ ಮತ್ತು ಪ್ರೋತ್ಸಾಹ ದೊರೆಯುತ್ತಿದೆ. ಅನುವಾದವು ಎಲ್ಲ ಕ್ಷೇತ್ರಗಳ ಅಗತ್ಯತೆ ಆಗಿದೆ.

ಮಾಧುರಿ ಬೆಂಗಳೂರು

One thought on “ಅಂತಾರಾಷ್ಟ್ರೀಯ ಅನುವಾದ ದಿನ

Comments are closed.

Don`t copy text!