ಕಲ್ಯಾಣದ ಚಿತ್ಕಳೆ ಅಕ್ಕ ಮಹಾದೇವಿ ಕದಳಿ ಕರ್ಪುರದತ್ತ

 

ಕಲ್ಯಾಣದ ಚಿತ್ಕಳೆ ಅಕ್ಕ ಮಹಾದೇವಿ ಕದಳಿ ಕರ್ಪುರದತ್ತ

ಹನ್ನೆರಡನೆಯ ಶತಮಾನವು ಭಾರತದ ಇತಿಹಾಸದಲ್ಲಿ ಸುವರ್ಣ ಯುಗವೆಂದೇ ಕರೆಯಬಹುದು . ವರ್ಗ ವರ್ಣ ಲಿಂಗ ಭೇದ ಆಶ್ರಮ ಭೇದ ಸಾಂಸ್ಥಿಕರಣವಲ್ಲದ ಜಗತ್ತಿನ ಏಕೈಕ ಮತ್ತು ಒಂದೇ ಧರ್ಮವೆಂದರೆ ಲಿಂಗಾಯತ ಧರ್ಮವಾಗಿದೆ. ಬಸವ ಚಳುವಳಿಯಲ್ಲಿ ದೇಶದ ನಾನಾ ಭಾಗಗಳಿಂದ ಜನರು ಸಾಧಕರು ಬೀದರ ಜಿಲ್ಲೆಯ ಕಲ್ಯಾಣಕ್ಕೆ( ನಂತರ ಇದನ್ನು ಬಸವ ಕಲ್ಯಾಣವೆಂದು ಕರೆಯಲ್ಪಟ್ಟಿತ್ತು ) ಆಗಮಿಸ ಹತ್ತಿದರು. ಅಕ್ಕ ಮಹಾದೇವಿ ಅಂತಃಶರಣ ಸಂಕುಲದಲ್ಲಿ ಅಗ್ರ ಗಣ್ಯಳು .

ಅಕ್ಕ ಹುಟ್ಟಿದ್ದು ಇಂದಿನ ಶಿವಮೊಗ್ಗೆ ಜಿಲ್ಲೆಯ ಉಡತಡಿ ಗ್ರಾಮದಲ್ಲಿ ವ್ಯಾಪಾರಸ್ಥ ಬಣಜಿಗ ಕುಟುಂಬದ ನಿರ್ಮಲಶೆಟ್ಟಿ ಹಾಗೂ ಸುಮತಿಯರ ಗರ್ಭದಲ್ಲಿ ಜನಿಸಿದಳು . ಬಾಲ್ಯದಿಂದಲೂ ವೈರಾಗ್ಯದ ಪ್ರೀತಿಯ ಖನಿಜವಾದ ಅಕ್ಕ ತಾನು ಆರಾಧಿಸುವ ಚೆನ್ನ ಮಲ್ಲಿಕಾರ್ಜುನ ದೇವನೆ ತನ್ನ ಪತಿ ಎಂದು ನಂಬಿದ್ದಳು .ಮುಂದೆ ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟ ಈ ರೂಪವತಿ ತಾನು ತನ್ನ ಅಧ್ಯಯನ ಆಧ್ಯಾತ್ಮದ ಹಸಿವು ಸಾಧನೆಗೆ ತೊಡಗಿಸಿಕೊಂಡಳು. . ಉಡತಡಿ ಇದನ್ನು ಕೌಶಿಕನೆಂಬ ಜೈನ ಸಾಮಂತನು ಆಳುತ್ತಿದ್ದನು .
ಯಾವುದೋ ಸಂದರ್ಭದಲ್ಲಿ ಒಮ್ಮೆ ಅಕ್ಕ ಮಹಾದೇವಿಯನ್ನು ನೋಡಿದನು ,ಅವಳನ್ನೇ ಮದುವೆ ಆಗಲು ನಿರ್ಧರಿಸಿದನು.
ಅದೇ ರೀತಿ ಅಕ್ಕ ಮಹಾದೇವಿಯ ತಂದೆ ನಿರ್ಮಲ ಶೆಟ್ಟಿ ಮತ್ತು ತಾಯಿ ಸುಮತಿಯರಿಗೆ ಈ ವಿಷಯ ಹೇಳಿ ಕಳಿಸಿದನು. ಇಲ್ಲದಿದ್ದದರೆ ಇವರ ತಂದೆ ತಾಯಿಯವರಿಗೆ ಗಲ್ಲು ಶಿಕ್ಷೆ ವಿಧಿಸುವದಾಗಿ ದೊರೆ ಬೆದರಿಕೆ ಹಾಕಿದನು,ತಂದೆ ತಾಯಿಗಳ ಒತ್ತಾಯ ,ಮಾತು ಸಂದರ್ಭದ ಒತ್ತಡಕ್ಕೆ ಸಿಲುಕಿದ ಅಕ್ಕ ತಾನು ೩ ಷರತ್ತು ರಾಜನಿಗೆ ವಿಧಿಸಿದಳು ಅವುಗಳಲ್ಲಿ ಯಾವುದೇ ಯಾವುದಾದರು ಷರತ್ತು ರಾಜನು ಮೀರಿದರೆ ತನು ರಾಜನನ್ನು ಒಪ್ಪುವದಿಲ್ಲ ಅಂತ ಹೇಳಿದಾಗ . ರಾಜ ಕೌಶಿಕ ಆಗಲಿ ಎಂದು ಹೇಳಿದನು, ಆದರೆ ಮಧುವೆಯಗಳು ಅಕ್ಕ ಸಮಯ ಕೇಳಿದಳು.,ಮಹಾದೇವಿ ಮದುವೆ ಆಗಿದ್ದಳು ಎಂದು ಕೇವಲ ಮೂರು ಪ್ರಾಚಿನ ಗ್ರಂಥಗಳು ಹೇಳುತ್ತವೆ.

1)ಹರಿಹರ ದೇವನ ಉಡತಡಿ ಮಹಾದೇವಿಯಕ್ಕನ ರಗಳೆಗಳು
2) ಚೆನ್ನಬಸವಾ೦ಕನ ಮಹಾದೇವಿಯಕ್ಕನ ಪುರಾಣ
3 ) ಕೆಂಚ ವೀರನ್ನೋಡೆಯರ ಶೂನ್ಯ ಸಂಪಾದನೆ

ಅವಳು ವಿವಾಹವಾಗಿಲ್ಲ ಅಂತ ಹೇಳಲು ಅನೇಕ ಪ್ರಾಚಿನ ಮತ್ತು ಇತ್ತೀಚಿನ ಮಾತಜಿಯವರ ಹೆಪ್ಪಟ್ಟ ಹಾಲು , ತರಂಗಿಣಿ ಮುಂತಾದ ಕೃತಿಗಳಲ್ಲಿಯೂ ಕಂಡು ಬರುತ್ತದೆ .

ಅವುಗಳಲ್ಲಿ

1 ) ಚಾಮರಸನ ಪ್ರಭುಲಿಂಗಲೀಲೆ
2) ವಿರುಪಾಕ್ಷ ಪಂಡಿತ ಕೃತ ಚೆನ್ನಬಸವ ಪುರಾಣ
3) ಎಳ೦ದೂರು ಹರಿಶ್ವರ ಕೃತ ಪ್ರಭುದೇವರ ಪುರಾಣ
4 ) ಪಾಲ್ಗುರಿಕೆ ಸೋಮನಾಥ ಪುರಾಣ
5 )ಸಂಸ್ಕೃತ ಪ್ರಭುಲಿಂಗಲೀಲೆ
6 ) ತೆಲಗು ಮತ್ತು ತಮಿಳು ಪ್ರಭುಲಿಂಗಲೀಲೆ
7 ) ಹಲಗೆಯ ದೇವರ ಶೂನ್ಯ ಸಂಪಾದನೆ
8 ) ಗಣ ಭಾಷಿತ ರತ್ನ ಮಾಲೆ
9) ಗೂಳೂರು ಸಿದ್ದಣ್ಣ ವೀರಣ್ಣ ಒಡೆಯರ -ಶೂನ್ಯ ಸಂಪಾದನೆ.

ಅಲ್ಲದೆ ಅತ್ಯಂತ ಸುಂದರವಾಗಿ ರಚಿಸಿದ ಮಾತಾಜಿಯ ಹೆಪ್ಪಟ್ಟ ಹಾಲು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ . ಈ ಎಲ್ಲ ಕೃತಿಗಳು ಮಹಾದೇವಿ ಕೇವಲ ಮದುವೆಗೆ ಸಮ್ಮತಿಸಿ ತನ್ನ ಷರತ್ತನ್ನು ಇಟ್ಟಿದ್ದಳು ಎಂದು ಹೇಳುತ್ತವೆ.
ಹಾಗಿದ್ದರೆ ಆ ಷರತ್ತು ಯಾವವು

1 ) ಎನ್ನಿಚ್ಚೆಯೋಳು ಶಿವಲಿಂಗಲಿಂಗಪೂಜೆಯೊಳಿಪ್ಪೆ
2) ಎನ್ನಿಚ್ಚೆಯೋಳು ಮಾಹೇಶ್ವರ ಗೊಷ್ಟಿಯೊಳಿಪ್ಪೆ .
3 ) ಎನ್ನಿಚ್ಚೆಯೋಳು ಗುರು ಸೇವೆಯೊಳಿಪ್ಪೆ

ಒಮ್ಮೆ ಅಕ್ಕನು ಶಿವಲಿಂಗ ಪೂಜೆ ನೀರತ ಳಾದಾಗ ಕೌಶಿಕನು ಅಕ್ಕನನ್ನು ವರಿಸಲು ಬಂದಾಗ ,ಇಲ್ಲಿ ಅಪ್ಪುಗೆಯೂ ಇಲ್ಲ ಆಲಿಂಗನವೂ ಇಲ್ಲ.ಇದೊಂದು ಕಾಲ್ಪನಿಕ ಸೃಷ್ಟಿ .

ಅದಕ್ಕೆ ಮದುವೆಗೆ ಒಲ್ಲದ ಮನಸ್ಸಿನಿ೦ದ ಒಪ್ಪಿಗೆ ಸೂಚಿಸಿದ ಅಕ್ಕ ಇದನ್ನು ಒಪ್ಪದೇ ತಂದೆ ತಾಯಿಗೂ ನೋಯಿಸದೆ ಮನೆಯನ್ನು ಬಿಟ್ಟು ನಡೆದಳು .

ಅದನ್ನು ಅಕ್ಕ ಈ ರೀತಿ ಹೇಳಿದ್ದಾಳೆ.

ಎಮ್ಮೆಗೊಂದು ಚಿಂತೆ ,ಸಂಮಗಾರಗೊಂದು ಚಿಂತೆ
ಧರ್ಮಿಗೊಂದು ಚಿಂತೆ ,ಕರ್ಮಿಗೊಂದು ಚಿಂತೆ
ಎನಗೆ ಎನ್ನ ಚಿಂತೆ ತನಗೆ ತನ್ನ ಕಾಮದ ಚಿಂತೆ
ಒಲ್ಲೆ ಹೋಗು ಸೆರಗು ಬೀಡು ಮರುಳೆ
ಎನಗೆ ಚೆನ್ನ ಮಲ್ಲಿಕಾರ್ಜುನ ದೇವರು ಒಲಿವರು ಒಲಿಯರೋ ಎಂಬ ಚಿಂತೆ ?

ಪ್ರಾಪಂಚಿಕ ಬದುಕಿಗೆ ವಿದ್ದಾಯ ಹೇಳಿದ ಅಕ್ಕ ತನ್ನ ವೈರಾಗ್ಯದ ಸಾಧನೆಗೆ ಹೆಜ್ಜೆ ಹಾಕಿದಳು .

ಅಮೆಧ್ಯದ ಮಡಿಕೆ ಮೂತ್ರದ ಕುಡಿಕೆ
ಎಲುವಿನ ತಡಿಕೆ ಕೀವಿನ ಹದಿಕೆ
ಸುಡಲೀ ದೇಹವ ,ಒಡಲುವಿಡಿದು ಕೆಡದಿರು
ಚೆನ್ನಮಲ್ಲಿಕಾರ್ಜುನನರಿಯದ ಮರುಳೆ .

ತನ್ನ ಶರೀರ ಹೊಲಸು ತುಂಬಿದ ಮಡಿಕೆ ಮತ್ತು ತಾನು ವ್ಯಕ್ತಿಯಾಗಿ ಬರಿ ಎಲವು ತಡಿಕೆ ಇಂತಹ ಬಾಹ್ಯ ಶರೀರಕ್ಕೆ ಆಕರ್ಷಿತನಾಗದೆ ದೇವನನ್ನು ಅರಿಯುವ ಮಾರ್ಗ ಕಂಡು ಕೊಳ್ಳಲು ಮಹಾದೇವಿ ಸಲಹೆ ಸೂಚನೆ ನೀಡಿ ,ತನ್ನ ದೇಹದ ಮೋಹವ ಕಡಿದು ಕೊಂಡು ಮನ ಬೆತ್ತಲೆಯಾಗಿ ತನ್ನ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಅಕ್ಕ ಕಲ್ಯಾಣದತ್ತ ಹೆಜ್ಜೆ ಹಾಕುವಳು .
ದಟ್ಟವಾದ ಅರಣ್ಯ ಯೌವನದ ಬಾಲೆ ತಂದೆ ತಾಯಿಯರಿಗೆ ಸಖಿಯರಿಗೆ ನೋವು .ಇವರೆಲ್ಲರಿಗೂ ತಾನು ಚೆನ್ನಮಲ್ಲಿಕರ್ಜುನನ್ನು ಕಾಣುವೆನೆಂದು ಹೋಗುವಳು .

ಅಳಿಸಂಕುಲವೆ ಮಾಮರವೆ ಬೆಳುದಿಂಗಳೇ ,ಕೋಗಿಲೆಯೇ
ನಿಮ್ಮೆಲ್ಲರನೂ ಒಂದು ಬೇಡುವೆನು .
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವ ಕಂಡರೆ ಕರೆದು ತೋರಿರೆ.
ಅಳಿಲು ಕೋಗಿಲೆ ಮರ ಪಕ್ಷಿ ಬೆಳುದಿಂಗಳು ಎಲ್ಲ ಚರಾ ಚರ ಜೀವೆಗಳನ್ನು ಕೈ ಮುಗಿದು ಅಕ್ಕ ಚೆನ್ನ ಮಲ್ಲಿಕಾರ್ಜುನನ ಕಾಣುವ ತವಕದಿ೦ದ ನಡೆಯುತ್ತಾಳೆ.
ಅಲ್ಲದೆ ಇಂದೆನ್ನ ಮನೆಗೆ ಗಂಡ ಬಂದಹನೆಲೆಗವ್ವಾ
ನಿಮ ನಿಮಗೆಲ್ಲ ಶೃಂಗಾರ ಮಾಡಿಕೊಳ್ಳಿ
ಚೆನ್ನ ಮಲ್ಲಿಕರ್ಜುನನಿಗಳೇ ಬಂದಿಹನು
ಇದಿರುಗೊಳ್ಳಿ ಬನ್ನಿರವ್ವಗಳಿರಾ .

ಎಂತಹ ದೃಢ ನಿರ್ಧಾರ ಅಕ್ಕನದು .ಊರಿನ ಜನರೆಲ್ಲಾ ಅಕ್ಕ ಮಹಾದೇವಿಯನ್ನು ಬೀಳ್ಕೊಡುವಾಗ ಭೀತಿಯಿಂದ ಅವಳ ಮುಂದಿನ ನಡೆ ಹೇಗೆ ಎಂದು ಚಿಂತಿಸಿರುವಾಗ

ಹಸಿವಾದೊಡೆ ಭಿಕ್ಷಾನ್ನ ಉಂಟು
ತೃಷೆಯಾದೊಡೆ ಕೆರೆ ತೊರೆ ಭಾವಿಗಳು
ತೊಡಿಗೆಗೆ ಬಿಸುಟಿದ ಬಟ್ಟೆ ಉಂಟು
ಶಯನಕ್ಕೆ ಹಾಲು ದೇಗುಲ ಉಂಟು ಎಂದೆನ್ನುತ್ತಾ ತನ್ನ ಸಂಗಾತಿ ಚೆನ್ನ ಮಲ್ಲಿಕಾರ್ಜುನ ಉಂಟು .

ಎಂದಿದ್ದಾಳೆ.ಹೀಗಿರುವಾಗ ಚರಿತ್ರೆಯಲ್ಲಿ ಅವಳನ್ನು ಬೆತ್ತಲೆಯಾಗಿ ಚಿತ್ರಿಸುವುದು ಹೆಣ್ಣು ಕುಲಕ್ಕೆ ಮಾಡುವ ಅಪಮಾನವಲ್ಲವೆ ?

ಅಕ್ಕ ತನ್ನ ಮದುವೆಯನ್ನು ಯಾವ ರೀತಿಯಲ್ಲಿ ಹೇಳಿದ್ದಾಳೆ ಎನ್ನುವದನ್ನು ಇಲ್ಲಿ ಸ್ವಲ್ಪ ನೋಡೋಣ

ಕಾಮನ ತೆಲೆಯ ಕೊರೆದು ,ಕಾಲನಕಣ್ಣ ಕಳೆದು
ಸೋಮ ಸೂರ್ಯರ ಹುರಿದು ಹುಡಿ ಮಾಡಿ
ನಾಮವನಿಡಬಲ್ಲವರಾರು ಹೇಳಿರೆ
ನೀ ಮದುವಲಿಗನಾಗೆ ನಾ ಮದುವಳಗಿತ್ತಿಯಾಗೆ
ಶ್ರೀ ಗಿರಿ ಚೆನ್ನಮಲ್ಲಿಕಾರ್ಜುನ

ಇಂತಹ ದಿಟ್ಟ ನಿರ್ಮಲ ಮನಸ್ಸಿನ ಅಕ್ಕನ ಬಗ್ಗೆ ಅರ್ಥವಿಲ್ಲದ ವಿಷಯಗಳನ್ನು ದಾಖಲಿಸಿ ಅವಳನ್ನು ಬೆತ್ತಲೆಗೊಳಿಸಿದ್ದು ಇತಿಹಾಸಕ್ಕೆ ಮಾಡಿದ ಅಪಚಾರ .
ಅಕ್ಕ ದೇವನನ್ನು ಶೋಧಿಸುತ್ತ ಅರಸುತ್ತ ಕಲ್ಯಾಣಕ್ಕೆ ಬರುವಳು .ಅಲ್ಲಿಯೂ ಕಿನ್ನರಿ ಬ್ರಹ್ಮಯ್ಯ ಪರೀಕ್ಷೆ ಮಾಡುತ್ತಾನೆ .ಆದರೆ ಅದು ಕೇವಲ ಮೌಕಿಕ ಮತ್ತು ತಾತ್ವಿಕ ವಾಗ್ವಾದ ಚರ್ಚೆ . ಇದನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಏನೇನೋ ಕಲ್ಪಿಸಿ ಅಕ್ಕನ ಮಾನ ಹರಣಕ್ಕೆ ಮುಂದಾಗಿದ್ದಾರೆ .

ಕಲ್ಯಾಣದಲ್ಲಿ ಬಂದ ಅಕ್ಕ-

ಗುರುವ ಕಂಡೆ ಲಿಂಗವ ಕಂಡೆ ಜಂಗಮ ಕಂಡೆ ಪ್ರಸಾದವ ಕಂಡೆ ಎಂದು
ಹೇಳುತ್ತಾ ಬಸವಣ್ಣನೆ ಗುರು ಪ್ರಭುದೆವರೆ ಲಿಂಗ ಸಿದ್ದರಾಮನೆ ಜಂಗಮ
ಮಡಿವಾಳನೆ ಜಂಗಮ ,ಚೆನ್ನ ಬಸವನ್ನೆನ್ನ ಆರಾಧ್ಯರು .
ಇನ್ನು ಸುಖಿಯದೆನು ಕಾಣಾ
ಚೆನ್ನಮಲ್ಲಿಕರ್ಜುನಯ್ಯ

ಎಂದು ಹೇಳಿ ಅಕ್ಕ ಕಲ್ಯಾಣದ ಆದರದ ಗೌರವದ ಪ್ರತೀಕವಾಗುತ್ತಾಳೆ .ಅಕ್ಕನ ಆಗಮನ ಕಲ್ಯಾಣ ಕ್ರಾಂತಿಯ ಅರಿವಿಗೆ ಆಚಾರಕ್ಕೆ ಶಕ್ತಿ ಕಾಯವಾದಳು .
ಅಕ್ಕ ಮಹಾದೇವಿ ತನ್ನ ಲಿಂಗಾಂಗ ಸಾಮರಸ್ಯ ಜಂಗಮತತ್ವ ಅರಿತು ಕದಳಿಯ ಕತ್ತಲೆಯೊಳಗೆ ಬೆಳಕಾಗಲು ಮುಂದಾಗುತ್ತಾಳೆ .

ಆಗ ಅಕ್ಕ ಈ ರೀತಿ ಹೇಳಿದ್ದಾಳೆ.

ಲಿಂಗವೆನ್ನೇ ಲಿಂಗೈಕ್ಯವೆನ್ನೆ,ಸಂಗವೆನ್ನೇ ಸಮರಸವೆನ್ನೇ
ಆಯಿತೆನ್ನೇ ,ಆಗದೆನ್ನೇ ,ನೀನೆನ್ನೆ ,ನಾನೆನ್ನೇ
ಚೆನ್ನಮಲ್ಲಿಕಾರ್ಜುನಯ್ಯ.
ಲಿಂಗೈಕ್ಯವಾದ ಬಳಿಕ ಏನೂ ಎನ್ನೆ.

ಮಲ್ಲಿಕಾರ್ಜುನನನ್ನು ಹುಡುಕುತ್ತ ಹೊರಟ ಅಕ್ಕ ಮಹಾದೇವಿ ಕೊನೆಗೆ ತಾನೇ ಚೆನ್ನ ಮಲ್ಲಿಮಲ್ಲಿಕಾರ್ಜುನನಾಗುತ್ತಳೆ. ಶರಣರ ಉದಾತ್ತಿಕರಣದ ಕಲ್ಪನೆ ಶ್ರೇಷ್ಟ ಮಟ್ಟದ್ದು ಅಕ್ಕ ಆ ಉದಾತ್ತಿಕರಣದ ಸಾರ ಅಂದ್ರೆ ತಪ್ಪಾಗಲಾರದು.

ಅಕ್ಕ ಮಹಾದೇವಿ ಮದುವೆಯಾಗಿರಲಿಲ್ಲ

ಅಕ್ಕ ಮಹಾದೇವಿ ಮದುವೆಯಾಗಿಲ್ಲವೆಂದು ಅಭಿಪ್ರಾಯ ಪಟ್ಟವರಲ್ಲಿ ಪ್ರೊ ಕೆ ಜಿ ಕುಂದಣಗಾರ ಇವರು ಮೊದಲಿಗರು ನಂತರ ಡಾ ಅರ ಸಿ ಹಿರೇಮಠರು ತಮ್ಮ ಸಂದೇಹವನ್ನು ವ್ಯಕ್ತ ಪಡಿಸಿದರು, ಮಾತಾಜಿ ಮದುವೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದರು .ಪ್ರೊ ಎಸ ಎಸ ಭೂಸುನೂರಮಠರು ಅಕ್ಕನ ವ್ಯಕ್ತಿತ್ವವನ್ನುಇಡಿ ಜಗತ್ತಿಗೆ ಭವ್ಯ ಮಾನವ ಮೂಲಕ ಸಾರಿದರು .
ಎಲ್ಲ ಪುರಾಣ ಗ್ರಂಥಗಳಲ್ಲಿ ಅವಳು ಮದುವೆಗೆ ಸಮ್ಮತಿಸಿದಳು ಹೊರತು ಮದುವೆಯಾಗಿಲ್ಲ ,ಅವಳು ಚೆನ್ನಮಲ್ಲಿಕಾರ್ಜುನನಿಗೆ ಒಲಿದವಳು. ತನ್ನಿಚೆಗೆ ಅನುಗುಣವಾಗಿ ಬದುಕುವ ಹಕ್ಕನ್ನು ಜಗತ್ತಿಗೆ ಮೊದಲು ತೋರಿಸಿದ ವಿರಾಗಿಣಿ ಅಕ್ಕ ಮಹಾದೇವಿ. ಬದುಕನ್ನು ಅತಿಯಾಗಿ ಪ್ರೀತಿಸಿ ತನ್ನ ವಚನಗಳಲ್ಲಿ ಕಾವ್ಯ ಶೃಂಗಾರ ಸಾಂಗತ್ಯದ ಸೊಗಡನ್ನು ಪರಿಚಯಿಸಿದವಳು ಅಕ್ಕ ಮಹಾದೇವಿ

ಸಸ್ಯ ಜೀವದ ವಂಶವಾಹಿನಿ ಹುಡುಕಿದ ಅಕ್ಕ ಮಾಹಾದೇವಿ.
ಈಳೆ-ನಿಂಬೆ-ಮಾವು-ಮಾದಲಕ್ಕೆ ಹುಳಿನೀರೆರೆದವರಾರಯ್ಯ?
ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ?
ಕಳವೆ-ಶಾಲಿಗೆ ಓಗರದ ಉದಕವನೆರೆದವರಾರಯ್ಯ?
ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ!
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಂಗೆ ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ!

ಅಕ್ಕ ಮಹಾದೇವಿ ಶರಣ ಸಂಕುಲ ಕಂಡರಿಯದ ಶ್ರೇಷ್ಠ ಅನುಭಾವಿ ಶರಣೆ ..ಅಕ್ಕ ಮಹಾದೇವಿಯ ವೀಕ್ಷಣೆ ಅದ್ಭುತವಾದದ್ದು . ಸಸ್ಯ ಪ್ರಾಣಿ ಮನುಷ್ಯ ಕೀಟ ಪಕ್ಷಿ ಜೀವ ಜಾಲಗಳ ಹುಟ್ಟು ವಿಕಾಸ ಅಭಿವೃದ್ಧಿ ಹೀಗೆ ಸೃಷ್ಟಿಯ ಅನೇಕ ಗೋಚರಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾಳೆ. ಅಲ್ಲದೆ ಜೈವಿಕ ವಿಕಾಸದಲ್ಲಿನ ವಿಪರ್ಯಾಸಗಳನ್ನು ಅತ್ಯಂತ ಸುಂದರ ಸರಳವಾಗಿ ನಿರೂಪಿಸಿದ್ದಾಳೆ.

ಈಳೆ-ನಿಂಬೆ-ಮಾವು-ಮಾದಲಕ್ಕೆ ಹುಳಿನೀರೆರೆದವರಾರಯ್ಯ?

ಈಳೆ ಹಣ್ಣು ನಿಂಬೆ ಹಣ್ಣು ಮಾವು ಮತ್ತು ಮಾಡಲಾ ಹಣ್ಣು ರುಚಿಯಲ್ಲಿ ಹುಳಿಯಾಗಿರುತ್ತವೆ. ಹಾಗಿದ್ದರೆ ಸೃಷ್ಟಿಕರ್ತನು ಇಂತಹ ಗಿಡಗಳಿಗೆ ಮರಗಳಿಗೆ ಹುಲಿ ನೀರನ್ನು ಎರೆದಿರುವನೆ ? ಎಂದು ಪ್ರಶ್ನೆ ಮಾಡುತ್ತಾಳೆ ಅಕ್ಕ ಮಹಾದೇವಿ. ಕಾರಣ ಸಸ್ಯಗಳು ಶುದ್ಧ ನೀರು ಗಾಳಿ ಬೆಳಕಿನಲ್ಲಿ ಭೂಮಿಯ ಕಸುವಿನಿಂದ ಬೆಳೆಯಬಲ್ಲವು .
ಹಣ್ಣಿನೊಳಗಣ ಹುಲಿಯ ರುಚಿ ತನ್ನ ವಂಶವಾಹಿನಿಗೆ ಸಂಬಂಧ ಪಟ್ಟ ವಿಷಯ.
.
ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ?
ಕಬ್ಬು ಬಾಳೆ ನಾರಿವಾಳ ಅಂದರೆ ತೆಂಗು ,ಇವುಗಳಿಗೆ ಸಿಹಿ ನೀರನ್ನು ಯಾರಾದರೂ ಎರೆಯಲು ಸಾಧ್ಯವೇ ? ಎಂದು ಪ್ರಶ್ನಿಸುತ್ತಾಳೆ.ಸೃಷ್ಟಿಯಲ್ಲಿನ ಅನೇಕ ಗೂಢ ಬೆಳವಣಿಗೆಗಳ ಲೆಕ್ಕವನ್ನು ಅಕ್ಕ ಬಿಚ್ಚಿಡುತ್ತಾಳೇ. ಕಬ್ಬು ಬಾಳೆ ಹಣ್ಣು ಹಾಗು ತೆಂಗಿನ ಕಾಯಿಯೊಳಗಿನ ಸಿಹಿ ನೀರಕೆ ಯಾರಾದರೂ ಬಾಹ್ಯವಾಗಿ ಅವುಗಳಿಗೆ ಸಿಹಿ ನೀರು ಎರೆಯಲು ಸಾಧ್ಯವೇ ? ಅದು ಸೃಷ್ಟಿಯ ನಿಯಮ ಮತ್ತು ಸಸ್ಯದೊಳಗಿನ ಆಂತರಿಕ ಗುಣವೆಂದಿದ್ದಾಳೆ.

ಕಳವೆ-ಶಾಲಿಗೆ ಓಗರದ ಉದಕವನೆರೆದವರಾರಯ್ಯ?

ಕವಳಿ( ಕಳವೆ) ಮತ್ತು ಶಾಲಿಗೆ ಎಂಬ ಒಗರಿನ ರುಚಿ ಹೊಂದಿರುವ ಹಣ್ಣಿಗೆ ಯಾರು ಹೊರಗಿನಿಂದ ಓಗರದ ನೀರು ಹಾಕಲು ಸಾಧ್ಯ ಎಂದು ಕೇಳುತ್ತಾಳೆ.
ಓಗರವು ಆಯಾ ಹಣ್ಣುಗಳ ನೈಜ ಗುಣ ಬೀಜದೊಳಗಡಗಿದ ವಂಶವಾಹಿನಿ. ಸೃಷ್ಟಿಯಲ್ಲಿ ಬೇರೆ ಬೇರೆ ಸಸ್ಯಗಳಿಗೆ ಬೇರೆ ಬೇರೆಯ ರುಚಿ ಹೊಂದಿರುವುದು ಅವುಗಳ ಸಹಜ ಗುಣ ಧರ್ಮವಾಗಿದೆ. ಅಂತಃಶಕ್ತಿಯ ತೇಜದ ಮುಂದೆ ಬಾಹ್ಯ ಭೌತಿಕ ನೆರವಿನಿಂದ ಮೂಲ ಬೀಜ ಸಸ್ಯಗಳ ಗುಣಗಳಲ್ಲಿ ವ್ಯತ್ಯಾಸಗಳನ್ನು ಕಾಣಲು ಸಾಧ್ಯವಿಲ್ಲ.

ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ?
ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ ಪರಿಮಳದ ಉದಕವನ್ನುಎರೆದವರಾರು ? ಒಂದು ವೇಳೆ ಹಾಗೆ ಎರೆದರೂ ಸಸ್ಯಗಳು ತನ್ನ ಗುಣ ಧರ್ಮವನ್ನು ಬದಲಿಸಬಹುದೇ.? ಮಲ್ಲಿಗೆ ಜಾಜಿ ಸಂಪಿಗೆ ಹೂಗಳು ಅತ್ಯಂತ ಪರಿಮಳದಾಯಕವಾದ ಹೂಗಳು. ಅವುಗಳ ಪರಿಮಳ ಗುಣವನ್ನು ಹೆಚ್ಚಿಸಲು ವರ್ಧಿಸಲು ಯಾರಾದರೂ ಹೊರಗಿನಿಂದ ಪರಿಮಳದ ಉದಕವನ್ನು ಎರೆಯಲು ಸಾಧ್ಯವೇ ?

ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ!
ಒಂದೇ ಜಲ ಒಂದೇ ನೆಲ ಮತ್ತು ಆಕಾಶವು ಒಂದೇ ಇದ್ದು ತನ್ನ ಹುಟ್ಟಿನಲ್ಲಿ ಪ್ರತಿಯೊಂದು ಸಸ್ಯಗಳು ತಮ್ಮ ತಮ್ಮ ಪರಿಯನ್ನು ಬೇರೆ ಬೇರೆಯಾಗಿ ಕಾಣುತ್ತವೆ.

ಭೂಮಿಯಲ್ಲಿ ಜಲ ನೆಲ ಪ್ರಕಾಶ ಗಾಳಿ ಪಂಚ ಮಹಾಭೂತಗಳು ಸೃಷ್ಟಿಯೊಳಗಿನ ಜೀವ ಜಾಲಗಳು ಬೆಳೆಯುತ್ತಿದ್ದರು ಸಸ್ಯಗಳ ರುಚಿ ಪರಿಮಳ ಬೇರೆಬೇರೆಯಾಗಿ
ರೂಪಗೊಳ್ಳುತ್ತವೆ.

ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಂಗೆ ,ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ!

ಒಂದು ಜಲವು ಹಲವು ದ್ರವ್ಯಂಗಳ ಕೂಡಿಕೊಂಡಿದ್ದರು ತನ್ನ ಗುಣ ಧರ್ಮವನ್ನು ಹೇಗೆ ಬೇರೆ ಬೇರೆಯಾಗಿ ಇಟ್ಟುಕೊಳ್ಳುತ್ತವೆಯೋ ಹಾಗೆ ಸೃಷ್ಟಿಕರ್ತ
ಹಲವು ಜಗತ್ತಿನಲ್ಲಿ ಕೂಡಿಕೊಂಡಿದ್ದರೂ ಸಹಿತ ತನ್ನ ಪರಿಯಯನ್ನು ಬೇರೆಯಾಗಿ ಇಟ್ಟುಕೊಳ್ಳುವನು.ಪ್ರತಿಯೊಂದು ಜೀವಜಾಲದಲ್ಲಿ ದೈವತ್ವವನ್ನು ಕಾಣುವ ಸೃಷ್ಟಿ ಸ್ಥಿತಿ ಲಯಗಳ ಭಾವವನ್ನು ಕಾಣುವ ಒಂದು ಶಕ್ತಿಯ ಹಲವು ದ್ರವ್ಯಂಗಳು . ಪಂಚ ಮಹಾಭೂತಗಳಲ್ಲಿ ಸೃಷ್ಟಿಗೊಂಡು ಪಂಚೇಂದ್ರಿಯ ಮೂಲಕ ನಮ್ಮ ಅರಿವಿಗೆ ಬರುವ ಬಗೆ ಬಗೆಯ ಹಣ್ಣು ಹೂವು ಕಾಯಿಗಳು ಒಂದೇ ಜಲದಿಂದ ನೆಲದಿಂದ ಆಕಾಶದ ಗಾಳಿ ಪ್ರಕಾಶದಿಂದ ರೂಪಗೊಂಡಿದ್ದರು ತಮ್ಮ ತಮ್ಮ ಪರಿಭೇರೆ ಎಂದು ಹೇಳುತ್ತಾ ವಂಶವಾಹಿನಿಯ (GENOMIC ) ಅನುವಂಶತೆ ಮಹತ್ವವನ್ನು ಅಕ್ಕ ಮಹಾದೇವಿಯ್ಯು ಚೆನ್ನಾಗಿ ವರ್ಣಿಸಿದ್ದಾಳೆ.

*ಕಲ್ಯಾಣದ ಚಿತ್ಕಳೆ ಅಕ್ಕ ಮಹಾದೇವಿ ಕದಳಿ ಕರ್ಪುರದತ್ತ
ಅಕ್ಕ ಉಡುತಡಿ ಬಿಟ್ಟು ಸತ್ಯ ಶೋಧನೆಗೆ ಮುಕ್ತಿ ಮಾರ್ಗಕ್ಕೆ ಹಪಹಪಿಸಿ ಮನೆಯ ಬಿಡುತ್ತಾಳೆ ಇದು ಅವಳ ಶೋಧನಾ ಪ್ರವೃತ್ತಿಗೆ ( PURGATION ) ಕಾರಣವಾಗಬಹುದು .
ಕಲ್ಯಾಣಕ್ಕೆ ಆಗಮಿಸಿದ ಅಕ್ಕ ಮಹಾದೇವಿ ಬಸವಣ್ಣ ಅಲ್ಲಮ ಮಡಿವಾಳ ಮಾಚಿ ತಂದೆ ಚೆನ್ನ ಬಸವಣ್ಣ ಹೀಗೆ ಮುಂತಾದವರಲ್ಲಿ ಗುರು ಲಿಂಗ ಜಂಗಮ ಮೌಲ್ಯಗಳನ್ನು ಕಂಡುಕೊಳ್ಳುತ್ತಾಳೆ.ಇದು ಅವಳ ಆಧ್ಯಾತ್ಮಿಕ ಬದುಕಿನ ದರ್ಶನ ( ILLUMINATION ) ಕೊನೆಗೆ ತಾನೇ ಲಿಂಗ ಸ್ವರೂಪಿಯಾಗಿ ತನ್ನೊಳಗೆ ಚೆನ್ನ ಮಲ್ಲಿಕಾರ್ಜುನನನ್ನು ಕಂಡುಕೊಳ್ಳುತ್ತಾಳೆ ಇದು ಅವಳ ಉತ್ಕಟ ಬಯಕೆಯ ದೈವತ್ವದ ಜೊತೆಗಿನ ಸಂಗಮ ( UNIFICATION ) ಹೀಗೆ ಹಲವು ರೀತಿಯಲ್ಲಿ ತನ್ನನ್ನು ಪ್ರಯೋಗಿಸಿಕೊಂಡು ತನ್ನ ಬದುಕಿನ ಆಯ್ಕೆಯ ಹಕ್ಕನ್ನು ಸಾಧಿಸಿ ತೋರಿದ ದಿಟ್ಟ ಮಹಿಳೆ
ಕೊನೆಗೆ ನಡೆದದ್ದು ಕದಳಿಯ ಕರ್ಪುರದ ಬೆಳಕಿನಡೆಗೆ .ಕಲ್ಯಾಣ ಕ್ಷಿಪ್ರ ಕ್ರಾಂತಿಯ ಮೂನ್ಸೂಚನೆ ಮನವರಿಕೆ ಮಾಡಿಕೊಂಡ ಅಕ್ಕ ಮಹಾದೇವಿ ತಾನು ಬಂದ ಕಾರ್ಯವು ಮುಗಿಯಿತು ಎಂದು ಹೇಳಿ ಕಲ್ಯಾಣದ ಶರಣ ಸಂಕುಲಕ್ಕೆ ಹೂವ ತರುವುದಲ್ಲದೆ ಹುಲ್ಲು ತಾರೆನು ಎಂದು ಹೇಳುತ್ತಾಳೆ .
ಅಕ್ಕ ಮಹಾದೇವಿ ಉದಾತ್ತೀಕರಣದ ಮೇರು ಪರ್ವತ .ತನ್ನ ಆಧ್ಯಾತ್ಮಿಕ ಹಸಿವು ಶಿಶು ಕಂಡ ಕನಸಿನಂತಿರಬೇಕೆಂದು ಅಭಿಪ್ರಾಯ ಪಟ್ಟಿದ್ದಾಳೆ.ಕದಳಿಯ ಕರ್ಪುರದೊಳಗೆ ಒಂದಾದಳು ಅಕ್ಕ ಮಹಾದೇವಿ .

-ಡಾ ಶಶಿಕಾಂತ ಪಟ್ಟಣ ರಾಮದುರ್ಗ
9552002338

Don`t copy text!