ಅಕ್ಕನೆಡೆಗೆ
ವಚನ – 1
ದೈಹಿಕ ಮಾನಸಿಕ ಸ್ವಾಸ್ಥ್ಯದೆಡೆಗೆ ಅಕ್ಕ
ಆಹಾರವ ಕಿರಿದು ಮಾಡಿರಣ್ಣಾ
ಆಹಾರವ ಕಿರಿದು ಮಾಡಿ
ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ
ಆಹಾರದಿಂ ನಿದ್ರೆ
ನಿದ್ರೆಯಿಂ ತಾಮಸ ಅಜ್ಞಾನ ಮೈಮರಹು
ಅಜ್ಞಾನದಿಂ ಕಾಮವಿಕಾರ ಹೆಚ್ಚಿ
ಕಾಯವಿಕಾರ ಮನೋವಿಕಾರ
ಇಂದ್ರಿಯವಿಕಾರ ಭಾವವಿಕಾರ
ವಾಯುವಿಕಾರವನುಂಟುಮಾಡಿ
ಸೃಷ್ಟಿಗೆ ತಹುದಾದ ಕಾರಣ ಕಾಯದ ಅತಿಪೋಷಣ ಬೇಡ
ಅತಿ ಪೋಷಣೆ ಮೃತ್ಯುವೆಂದುದು
ಜಪ ತಪ ಧ್ಯಾನ ಧಾರಣ ಪೂಜೆಗೆ ಸೂಕ್ಷ್ಮದಿಂ
ತನು ಮಾತ್ರವಿದ್ದರೆ ಸಾಲದೆ?
ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂದುದು
ತನು ಪೋಷಣೆಯಿಂದ ತಾಮಸ ಹೆಚ್ಚಿ
ಅಜ್ಞಾನದಿಂ ವಿರಕ್ತಿ ಹಾನಿ ಅರಿವು ನಷ್ಟ
ಪರವು ದೂರ ನಿರಕೆ ನಿಲವಿಲ್ಲದ ಕಾರಣ
ಚೆನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯವ
ಕೆಡಿಸದೆ ಉಳಿಸಿಕೊಳ್ಳಿರಯ್ಯಾ.
ಹನ್ನೆರಡನೇ ಶತಮಾನದಲ್ಲಿ ಅಕ್ಕ ಅನೇಕ ವಿಷಯಗಳ ಕುರಿತು, ವಚನ ರಚಿಸಿ ತನ್ನ ಜೀವನಾನುಭವವನ್ನು ಹಂಚಿಕೊಂಡಿರುವುದೊಂದು ಹರಿಯುವ ಕಾವ್ಯಧಾರೆಗೆ ದ್ಯೋತಕ. ಈ ಮೇಲಿನ ಸಾಲುಗಳು ಮನುಷ್ಯನ ಆಹಾರ ಪದ್ಧತಿ ಮತ್ತು ಆರೋಗ್ಯದ ಮೇಲೆ ಬೆಳಕು ಚೆಲ್ಲುತ್ತವೆ. ಆಹಾರದಿಂದಾಗುವ ದೈಹಿಕ ಮತ್ತು ಮಾನಸಿಕ ಪ್ರಭಾವ, ಅದರಿಂದಾಗುವ ವ್ಯತಿರಿಕ್ತ ಪರಿಣಾಮವನ್ನು ಮನನವಾಗುವಂತೆ ಹೇಳುವ ಕೌಶಲ್ಯ ಇದರಲ್ಲಡಗಿದೆ.
ಇಡೀ ವಚನವನ್ನು ಎರಡು ಭಾಗವಾಗಿ ವಿಂಗಡಿಸಿಕೊಂಡರೆ ಗ್ರಹಿಸಲು ಅನುಕೂಲ. ಒಂದು ಭಾಗ ಲೌಕಿಕವಾದರೆ ಇನ್ನೊಂದು ಅಲೌಕಿಕ. ಅಕ್ಕ ತನ್ನ ವೈರಾಗ್ಯದ ನೆಲೆಯಲ್ಲಿ ನಿಂತು ಆಲೋಚಿಸಿರುವುದನ್ನು ನಾವು ಲೌಕಿಕರು ನೇರವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗದೆ ಇರಬಹುದು. ಆದರೆ ಧ್ಯಾನಸ್ಥರಾಗಿ ಮಾಡುವ ಕೆಲಸಕ್ಕೆ ಪ್ರೇರಣದಾಯಕ ಆಗುವುದರಲ್ಲಿ ಸಂದೇಹವಿಲ್ಲ.
ಈ ವಚನದಲ್ಲಿ ಅಕ್ಕ ಹೇಳುವಳು, ಅಹಾರ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸೇವಿಸಿ. ಏಕೆಂದರೆ ನಾವು ಹೆಚ್ಚು ಊಟೋಪಚಾರದಲ್ಲೇ ಮಗ್ನರಾದರೆ ದೇಹದಲ್ಲಿ ರೋಗ ರುಜಿನಗಳು ಹೊಕ್ಕು ಅನಾರೋಗ್ಯ ಪೀಡಿತರಾಗಬೇಕಾದೀತು. ಹೆಚ್ಚು ಹೆಚ್ಚು ಆಹಾರ ಸೇವನೆಯಿಂದ ಮನುಷ್ಯ ನಿದ್ರೆಗೆ ದಾಸನಾಗುವನು. ತಾಮಸ ಅಂದರೆ ಕತ್ತಲು. ನಿದ್ರೆ ಮಾಡಿದಾಗ ಬದುಕು ಕತ್ತಲಾಗುವುದು. ಕತ್ತಲೆಯು ಅಜ್ಞಾನಕ್ಕೆ ಎಡೆ ಮಾಡಿ ಕೊಡುವುದು. ಅಜ್ಞಾನಕ್ಕೆ ಬಲಿಯಾದ ವ್ಯಕ್ತಿಗೆ ಜವಾಬ್ದಾರಿ ಕಡಿಮೆಯಾಗಿ ಮೈ ಮರೆಯುವನು.
ಹಾಗೆಯೇ ಅಜ್ಞಾನದಿಂದ ಮನಸು ವಿಕಾರಗೊಳ್ಳುವುದು. ಮನಸು ವಿಕಾರವಾದಾಗ ನೇರ ಪ್ರಭಾವ ಪಂಚೇಂದ್ರಿಯಗಳ ಮೇಲೆ ಬೀರುವುದು. ಕಣ್ಣು, ಕಿವಿ, ಮೂಗು, ಬಾಯಿ, ಚರ್ಮಗಳಿಂದಾಗಿ ನೋಟ, ಆಲಿಸುವ, ಅಘ್ರಾಣಿಸುವ, ಮಾತು, ಸ್ಪರ್ಶ, ಎಲ್ಲವೂ ತನ್ನತನವನ್ನು ಕಳೆದುಕೊಳ್ಳುವುದು.
ಮನಸು ಪೋಷಿಸ ಬೇಕಾಗಿರುವುದು ಒಳ್ಳೆಯ ಭಾವನೆಗಳನ್ನು ಅಲ್ಲವೆ? ಅದಕ್ಕೆ ಆಹಾರವೇ ಮೂಲ ಆದಾಗ ಸಾತ್ವಿಕ ಮತ್ತು ಮಿತ ಆಹಾರದ ಪ್ರಾಶಸ್ತ್ಯ ಉತ್ತಮ. ಮನಸು ವಿಕಾರವಾದ ವ್ಯಕ್ತಿಯ ಭಾವನೆಗಳೂ ವಿಕಾರವಾಗುತ್ತವೆ. ವಿಕಾರ ಭಾವನೆಯವರೇ ತುಂಬಿ ಹೋದಾಗ ಅಲ್ಲಿಯ ಪರಿಸರವು ಖಂಡಿತಾ ಕಲುಷಿತಗೊಳ್ಳುವುದು. ಪರಿಣಾಮವಾಗಿ ಸಮಾಜದ ಸ್ವಾಸ್ಥ್ಯ ಕದಡುವುದು. ಈ ಸೃಷ್ಟಿಯ ನೈರ್ಮಲ್ಯಕ್ಕೆ ಪ್ರಕೃತಿಯೊಂದಿಗೆ ಸಂಧಾನ ಮಾಡಿಕೊಂಡು ಈ ದೇಹದ ಅತೀ ಆರೈಕೆ ಮಾಡುವುದು ಬೇಡವೆಂಬುದು ಅಕ್ಕನ ಸಂದೇಶ.
ಶರೀರವನ್ನು ಅಗತ್ಯಕ್ಕಿಂತ ಹೆಚ್ಚು ಪೋಷಣೆ ಮಾಡುವುದೆಂದರೆ ಮೃತ್ಯುವಿಗೆ ಸಮಾನ ಎನ್ನುವುದು ಅಕ್ಕನ ಅಭಿಪ್ರಾಯ.
ವಚನದ ಮೊದಲರ್ಧ ಲೌಕಿಕ ನೆಲೆಯ ಚಿಂತನೆಯಾದರೆ, ಅಲೌಕಿಕವಾಗಿ ಉಳಿದರ್ಧದಲ್ಲಿ ಚರ್ಚಿಸಲಾಗಿದೆ.
ವೈರಾಗ್ಯದ ಪಥವನ್ನು ಆಯ್ಕೆ ಮಾಡಿಕೊಂಡ ಅಕ್ಕನಿಗೆ ಅನಿಸುವುದು, ಆ ದೇವನನ್ನು ಜಪಿಸಲು, ತಪಸ್ಸು ಮಾಡಲು, ಧ್ಯಾನಕ್ಕೆ ಕೂರಲು ಕೇವಲ ದೇಹವಿದ್ದರೆ ಮಾತ್ರ ಸಾಕಲ್ಲವೆ? ಎಂದು. ಯತಿತ್ವ ಎಂದರೆ ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಂಡ ತಪಸ್ವಿ. ಅಂತಹ ಯತಿತ್ವ ಪಾಲನೆಗೆ ಅಡ್ಡಿಯುಂಟಾಗುವುದು. ದೇಹ ಸಂರಕ್ಷಣೆಯಿಂದ ಅಂಧಕಾರ ಹೆಚ್ಚುವುದು. ಅದರಿಂದ ಅಜ್ಞಾನ ಮಡುಗಟ್ಟುವುದು. ಜ್ಞಾನದ ಅಭಾವದಿಂದ ವೈರಾಗ್ಯದ ದಾರಿ ಮುಚ್ಚಿಕೊಳ್ಳುವುದು. ಮನುಷ್ಯ ಅರಿವಿಲ್ಲದವನಾಗಿ ಅಲೌಕಿಕದಿಂದ ದೂರಾಗುವನು. ಇಲ್ಲದ ದುಃಖವನ್ನು ಆಹ್ವಾನಿಸುವುದು ಬೇಡ. ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ ಆ ದೇವ ಚೆನ್ನಮಲ್ಲಿಕಾರ್ಜುನನನ್ನು ಒಲಿಸಲು ಬಂದ ಈ ದೇಹವನ್ನು ಹಾಳು ಮಾಡಿಕೊಳ್ಳದೆ ಚೆನ್ನಾಗಿ ಇಟ್ಟುಕೊಳ್ಳುವುದೇ ಲೇಸು.
ಸರ್ವಜ್ಞನು ತನ್ನ ತ್ರಿಪದಿಯಲ್ಲಿ ಇದೇ ಭಾವದಿಂದ ಅಹಾರ ಮತ್ತು ಅದರ ಸೇವನೆಯ ಪದ್ಧತಿಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾನೆ.
’ಹಸಿವಿಲ್ಲದುಣಬೇಡ ಹಸಿದುಮತ್ತಿರಬೇಡ
ಬಿಸಿಗೂಡಸಿ ತಂಗಳುಣಬೇಡ
ವೈದ್ಯನ ಸಂಗವೇ ಬೇಡ ಸರ್ವಜ್ಞ.’
ಆಹಾರ ಮತ್ತು ಆರೋಗ್ಯದ ನಂಟು ಒಂದಕ್ಕೊಂದು ಪೂರಕವಾದುದು ಎನ್ನುವ ಸತ್ಯವನ್ನು ಮೇಲಿನ ಎರಡೂ ವಚನಗಳು ಸಾರುತ್ತವೆ.
ಬಾಲ್ಯದಲ್ಲಿ ಕೇಳಿದ ಒಂದು ಕತೆ ಇದೆ. ಒಬ್ಬ ರಾಜ. ಅವನಿಗೆ ಆಹಾರದ ಮೇಲೆ ಬಹಳ ಪ್ರೀತಿ. ಎಷ್ಟು ತಿಂದರೂ ತಣಿಯದ ಅವನ ಮನಸು ಪದೇ ಪದೇ ತಿನ್ನಲು ಹಾತೊರೆಯುತ್ತಿರುತ್ತದೆ. ಕುತ್ತಿಗೆಯವರೆಗೂ ತಿಂದೂ ತಿಂದೂ ಕೊನೆಗೆ ವಾಂತಿ ಮಾಡುತ್ತಿದ್ದ. ಸ್ವಲ್ಪ ಸುಧಾರಿಸಿಕೊಂಡು ಮತ್ತೆ ತಿನ್ನಲು ಶುರು. ತಿನ್ನುವ ಚಪಲಕ್ಕಾಗಿ ರೋಗಗಳಿಗೆ ತುತ್ತಾಗುತ್ತಾನೆ. ಕೊನೆಗೊಂದು ದಿನ ನರಳಿ ನರಳಿ ಹಾಸಿಗೆ ಹಿಡಿದು, ಅತೀ ಬೇಗ ಸತ್ತು ಹೋಗುತ್ತಾನೆ.
ಈ ಕತೆಯ ತಾತ್ಪರ್ಯ ಹೆಚ್ಚು ತಿನ್ನುವವರು ಅನಾರೋಗ್ಯಕ್ಕೆ ಈಡಾಗುವುದರಿಂದ ಆಯಸ್ಸು ಕ್ಷೀಣ.
ಇನ್ನೊಂದು ಕತೆ. ಒಂದು ಹೋಟೆಲಿನಲ್ಲಿ ಮಾಡಿದ ಅಡಿಗೆ ರುಚಿ ನೋಡುವ ಕೆಲಸ. ಆ ಕೆಲಸಕ್ಕೆ ಒಬ್ಬ ನಿರುದ್ಯೋಗಿ ಅನಿವಾರ್ಯವಾಗಿ ಬಂದು ಸೇರಿಕೊಳ್ಳುತ್ತಾನೆ. ದಿನಾ ಬೆಳಗಾದರೆ ತಿಂಡಿಯ ರುಚಿ ನೋಡಬೇಕು. ಮಧ್ಯಾನದ ಅಡಿಗೆ ರುಚಿ ನೋಡಬೇಕು. ಸಂಜೆಯ ಸ್ನ್ಯಾಕ್ಸ್ ರುಚಿ ನೋಡಬೇಕು. ಮತ್ತೆ ರಾತ್ರಿ ಉತ್ತರ ಭಾರತದ ಊಟದ ರುಚಿ ನೋಡಬೇಕು. ಸ್ವಲ್ಪ ಸ್ವಲ್ಪ ದಿನವಿಡೀ ನಿರಂತರ ತಿಂದು ತಿಂದು, ಸದೃಢವಾಗಿದ್ದ ಯುವಕ ರೋಗಿಷ್ಟನಾದ. ಕರುಳು ಬೇನೆಗೆ ತುತ್ತಾಗಿ ನರಳಿದ.
“ಈ ಕತೆಯ ಸಾರಾಂಶ ಅನಿಯಮಿತ ಆಹಾರ ಸೇವನೆಯಿಂದ ವ್ಯಾಧಿ.”
ಪ್ರಸ್ತುತ ಕಾಲಮಾನಕ್ಕೆ ತಳಕು ಹಾಕಿ ನೋಡಿದರೆ, ಹುಬ್ಬೇರಿಸುವಂತಾಗುವುದು. ಇಂದು ಫಿಟ್ನೆಸ್ ಒಂದು ಮಂತ್ರವಾಗಿದೆ. ಡಯೆಟಿಂಗ್ ಅದಕ್ಕೆ ಪೂರಕ. ಜಿಮ್ ಗಳು ತೆರೆದುಕೊಂಡಿವೆ. ಟ್ರೇನರ್ಸ್, ಡಯಟಿಶಿಯನ್ಸ್ ಪ್ರಾಮುಖ್ಯತೆ ಹೆಚ್ಚಾಗಿ, ಅದೇ ವೃತ್ತಿಪರವಾಗಿದೆ. ಯೋಗಾ, ಧ್ಯಾನ, ಪ್ರಾಣಾಯಾಮ, ವರ್ಕ್ಔಟ್, ನಿತ್ಯದ ಪರಿಪಾಠವಾಗಿದೆ. ಇರುವಷ್ಟು ದಿನ ಚೆನ್ನಾಗಿ ಬದುಕ ಬೇಕೆಂಬ ತುಡಿತದಿಂದ ಕಾಲ್ನಡಿಗೆ ರೂಢಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಆರೋಗ್ಯದ ಕುರಿತು ಜಾಗೃತರಾಗಿರುವುದು ಸಮಾಜದ ಆರೋಗ್ಯಕರ ಬೆಳವಣಿಗೆ. ಈ ಎಲ್ಲಾ ವಿಷಯಗಳ ವೈಜ್ಞಾನಿಕ ಪರಿಕಲ್ಪನೆ ಶರಣರಲ್ಲಿದ್ದುದು ಆಶ್ಚರ್ಯ.
ಅಂದರೆ ಆಲೋಚನಾ ಕ್ರಮ ಸರಿಯಾದ ದಿಕ್ಕಿನಲ್ಲಿದ್ದರೆ, ಅದು ವೈಜ್ಞಾನಿಕವಾಗಿಯೇ ಇರುತ್ತದೆ. ಅಕ್ಕನ ಈ ವಚನ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದೆಡೆಗೆ ಕರೆದೊಯ್ಯುವಲ್ಲಿ ಯಶಸ್ಸು ಸಾಧಿಸಿದೆ. ಎಲ್ಲಾ ಶರಣರಲ್ಲಿದ್ದ ಚಿಂತನೆಯು ಅನುಕರಣೀಯವಾಗಿರುವುದರಿಂದ ಅದೇ ನಿಟ್ಟಿನಲ್ಲಿ ನಡೆಯುವುದು ನಮ್ಮ ಆದ್ಯತೆಯಾಗಬೇಕಿದೆ.
-ಸಿಕಾ, ಕಲಬುರ್ಗಿ
————————————————————————–ಆತ್ಮೀಯರೇ,
ಕಲಬುರ್ಗಿಯ ಸಿಕಾ ಕಾವ್ಯನಾಮದ ಕಾವ್ಯಶ್ರೀ ಮಹಾಗಾಂವಕರ್ ಅವರು ಕವಯತ್ರಿ, ಕಾದಂಬರಿಗಾರ್ತಿ, ಕತೆಗಾರ್ತಿ, ವಿಶೇಷವಾಗಿ ವಚನಗಳ ಅಧ್ಯಯನದಲ್ಲಿ ತೊಡಗಿರುವ ಇವರಿಂದ ಇನ್ನೂಮುಂದೆ ಪ್ರತಿ ಭಾನುವಾರ ಅಕ್ಕನೆಡೆಗೆ ವಚನಗಳ ಕುರಿತು ಅಂಕಣ ಪ್ರಕಟವಾಗಲಿದೆ.
-ಸಂಪಾದಕ
ವೀರೇಶ ಸೌದ್ರಿ, ಮಸ್ಕಿ