ಬಸವ ಸಮಿತಿ ಎಂಬ ಅನುಭವ ಮಂಟಪ
ಮೊನ್ನೆ ಅಂದರೆ ದಿನಾಂಕ ೧೧-೧೦-೨೦೨೨ ರಂದು ಶ್ರೀ ಶಂಕರ ಬಿದರಿಯವರಿಗೆ ಫೋನ್ ಮೂಲಕ ಸಂಪರ್ಕಿಸಿ ದಿನಾಂಕ ೫-೧೦-೨೦೨೨ ರಂದು ಲೋಕಾರ್ಪಣೆಗೊಂಡ ನಿಮ್ಮ ಆತ್ಮಕಥನ ಸತ್ಯಮೇವ ಜಯತೆ ಗ್ರಂಥ ಸ್ವಪ್ನ ಬುಕ್ ಸ್ಟಾಲ್ ನಲ್ಲಿ ಸಿಗುತ್ತಾ ಸರ್ ಅಂತ ಕೇಳಿದಾಗ ಶ್ರೀ ಶಂಕರ ಬಿದರಿಯವರು ನೀವು ಎಲ್ಲಿದ್ದೀರಿ ಅಂತ ಕೇಳಿದರು.ನಾನು ಬೆಂಗಳೂರಿನಲ್ಲಿ ಇದ್ದೇನೆ ಸರ್ ಅಂತ ಹೇಳಿದಾಗ ಸ್ವಪ್ನ ಬುಕ್ ಸ್ಟಾಲ್ ನಲ್ಲೂ ಸಿಗುತ್ತೆ ಆದರೆ ಬಸವ ಸಮಿತಿಯಲ್ಲಿ ಐದಾರು ಪ್ರತಿಗಳು ಉಳಿದಿವೆ ಅಲ್ಲಿ ಹೋದರೆ ನಿಮಗೆ ಕಡಿಮೆ ದರದಲ್ಲಿ ಸಿಗುತ್ತೆ ತೆಗೆದುಕೊಳ್ಳಿ ಅಂತ ತಿಳಿಸಿದರು.
ನಾನು ಕಾಲೇಜು ಓದುತ್ತಿದ್ದ ದಿನಗಳಲ್ಲಿ ಆಂಧ್ರಪ್ರದೇಶದ ಉದ್ದಕ್ಕೂ ಚಾಚಿಕೊಂಡಿರುವ ಬಳ್ಳಾರಿ ಜಿಲ್ಲೆಯ ಹಿರೇಹಾಳ ಹಾಗೂ ಹಗರಿ ತೀರದ ಕುಖ್ಯಾತ ರೌಡಿ ಹಾಗೂ ಪೊಲೀಸ್ ಇಲಾಖೆಗೆ ದುಸ್ವಪ್ನವಾಗಿದ್ದ ಬೀಮ್ಲಾನಾಯಕನನ್ನು ಅಂದು ಎಸ್.ಪಿ ಯಾಗಿದ್ದ ಶ್ರೀ ಶಂಕರ ಬಿದರಿಯವರು ಅತ್ಯಂತ ಸಾಹಸದಿಂದ ಬೀಮ್ಲಾ ನಾಯಕನನ್ನು ಎನ್ ಕೌಂಟರ್ ನಲ್ಲಿ ಮುಗಿಸಿ ಬಳ್ಳಾರಿ ಜಿಲ್ಲೆಯ ಹಗರಿ ತೀರದ ಉದ್ದಕ್ಕೂ ಇರುವ ಜನಸಾಮಾನ್ಯರಿಗೆ ನೆಮ್ಮದಿಯನ್ನು ತಂದುಕೊಟ್ಟಿದ್ದರು.ಇವರು ಎನ್ ಕೌಂಟರ್ ಮಾಡಿದ ಸಾಹಸವನ್ನು ಅಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಓದಿ ರೋಮಾಂಚಿತನಾಗಿದ್ದೆ. ಈ ಘಟನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆಂದರೆ ಕುಂ. ವೀರಭದ್ರಪ್ಪನವರು ಬರೆದ *ಎನ್ ಕೌಂಟರ್* ಕಾದಂಬರಿಯನ್ನು ಓದಿ ತಿಳಿದುಕೊಳ್ಳಬಹುದು.ಇಂಥಹ ಹಲವಾರು ಸಾಹಸಗಳನ್ನು ತಮ್ಮ ವೃತ್ತಿಯುದ್ಧಕ್ಕೂ ಮೆರೆದಿದ್ದ ಶಂಕರ ಬಿದರಿಯವರ ಆತ್ಮ ಚರಿತ್ರೆಯನ್ನು ಓದಬೇಕೆಂಬ ಕುತೂಹಲದಿಂದ ಪುಸ್ತಕವನ್ನು ತರಲು ಬಸವ ಸಮಿತಿಯ ಕಡೆಗೆ ಹೊರಟೆ.
ಬೆಂಗಳೂರಿನ ಬಸವ ಸಮಿತಿಯ ಕಡೆಗೆ ಸುಮಾರು ಎರಡು ದಶಕಗಳ ಹಿಂದೆ ಅಂದರೆ ೨೦೦೨ ರಲ್ಲಿ ಹೋಗಿದ್ದೆ. ಆ ನಂತರ ಬೆಂಗಳೂರಿಗೆ ಕಾರ್ಯನಿಮಿತ್ತ ನೂರಾರು ಸಲ ಬಂದರೂ ಬಸವ ಸಮಿತಿಯ ಕಡೆಗೆ ಹೋಗುವುದು ಆಗಿರಲಿಲ್ಲ. ಆದರೆ ಇಂದು ಸತ್ಯಮೇವ ಜಯತೆ ಆತ್ಮಚರಿತ್ರೆ ಗ್ರಂಥವನ್ನು ತರಲು ಬಸವ ಸಮಿತಿಗೆ ಹೋದಾಗ ಇದು ಬಸವ ಸಮಿತಿಯಾ ? ಎಂದು ಅನುಮಾನ ಕಾಡತೊಡಗಿತು. ಏಕೆಂದರೆ ಎರಡು ದಶಕಗಳ ಹಿಂದೆ ನಾನು ನೋಡಿದ ಬಸವ ಸಮಿತಿಯ ಪರಿಸರವೇ ಬೇರೆ.ಆದರೆ ಇಂದು ತನ್ನ ಸ್ವರೂಪವನ್ನು ಬದಲಾಯಿಸಿಕೊಂಡು ಸಾಕ್ಷಾತ ಅನುಭವ ಮಂಟಪದಂತಿರುವ ಬಸವ ಭವನವನ್ನು ನೋಡಲು ಎರಡು ಕಣ್ಣುಗಳು ಸಾಲದೆನಿಸಿತು.
ಅಂತಹ ಪರಿವರ್ತನೆ ಬಸವ ಸಮಿತಿಯಲ್ಲಿ ಏನಾಗಿದೆ ? ಎಂದು ನೀವು ಕೇಳಬಹುದು.ಅಂದು ನಾನು ನೋಡಿದ ಬಸವ ಸಮಿತಿಯ ಕಟ್ಟಡದಲ್ಲಿ ಉಪಾಧ್ಯಕ್ಷರಾಗಿದ್ದ ಲಿಂಗೈಕ್ಯ ವಿಶ್ವನಾಥರೆಡ್ಡಿ ಮುದ್ನಾಳರವರು ಖಾಯಂ ಆಗಿ ವಾಸವಾಗಿದ್ದ ಒಂದು ಕೊಠಡಿ,ಅಧ್ಯಕ್ಷರ ಕೊಠಡಿ, ಬಸವ ಸಮಿತಿಯ ಕಾರ್ಯಾಲಯ, ಸದಾ ವಾಣಿಜ್ಯ ವಸ್ತು ಪ್ರದರ್ಶನಗಳಿಗೆ ಬಾಡಿಗೆಗೆ ಕೊಡುತ್ತಿದ್ದ ಸಭಾಭವನ ಹಾಗೂ ಅದೇ ಆಗ ನಿರ್ಮಾಣವಾಗಿದ್ದ ಸುಮಾರು ೩೦-೪೦ ಜನ ಕೂಡಬಹುದಾಗಿದ್ದ *ಅರಿವಿನ ಮನೆ* ಒಂದಿತ್ತು. ಇದು ಬಸವ ಸಮಿತಿಯ ಭೌತಿಕ ದೃಶ್ಯವಾದರೆ, ಬೌದ್ಧಿಕವಾಗಿ ವಚನ ಸಾಹಿತ್ಯದ ಪ್ರಚಾರಕ್ಕೆ ಮೀಸಲಾಗಿದ್ದ *ಬಸವಪಥ* ಪತ್ರಿಕೆ ಹಾಗೂ ವಚನ ಸಾಹಿತ್ಯದ ಸಂಶೋಧನೆಗೆ ಸಂಬಂಧಪಟ್ಟ ಪ್ರಕಟಣೆಗಳು ಹೊರಬರುತ್ತಿದ್ದವು. ಇವೆಲ್ಲವನ್ನು ಅಂದು ಹಿರಿಯ ತಲೆಗಳಾಗಿದ್ದ ವಿಶ್ವನಾಥರೆಡ್ಡಿ ಮುದ್ನಾಳರಂತಹ ಹಿರಿಯರ ಮಾರ್ಗದರ್ಶನದಲ್ಲಿ ಬಸವ ಸಮಿತಿಯ ಅಧ್ಯಕ್ಷರಾಗಿ ಶ್ರೀ ಅರವಿಂದ ಜತ್ತಿಯವರು ಕಾರ್ಯನಿರ್ವಹಿಸುತ್ತಿದ್ದರು.
ಅಂದಿನ ದಿನಗಳಲ್ಲಿ ನಮ್ಮ ಜೊತೆಗಿದ್ದ *ಕೆಲವು ಸಿನಿಕರು ಅರವಿಂದ ಜತ್ತಿಯವರು ಅಧ್ಯಕ್ಷರಾಗಿ ಬಸವ ಸಮಿತಿಯ ಸುತ್ತ ಕೋಟೆ ಗೋಡೆಯನ್ನು ಕಟ್ಟಿಕೊಂಡಿದ್ದಾರೆ ಒಳಗೆ ಯಾರನ್ನು ಬಿಟ್ಟುಕೊಳ್ಳುವುದಿಲ್ಲ ಒನ್ ಮ್ಯಾನ್ ಶೋ ಮಾಡುತ್ತಿದ್ದಾರೆ ಎಂದು ಆಪಾದನೆ ಮಾಡುತ್ತಿದ್ದರು*. ಅಂದು ಅರವಿಂದ ಜತ್ತಿಯವರ ಬಗ್ಗೆ ನನಗೆ ಏನೂ ಗೊತ್ತಿಲ್ಲದಿರುವುದರಿಂದ ಅವರು ಹೇಳುವ ಮಾತು ಇದ್ದರೂ ಇರಬಹುದು ಎನಿಸುತ್ತಿತ್ತು.
ಆದರೆ ಕೆಲವೇ ವರ್ಷಗಳಲ್ಲಿ ಸಿನಿಕರು ಹೇಳುತ್ತಿದ್ದ ಮಾತಿನಲ್ಲಿ ಅರ್ಥವಿಲ್ಲವೆಂಬ ಸತ್ಯ ನನಗೆ ಅರಿವಾಗತೊಡಗಿತು. ಯಾವುದೇ ಆರ್ಥಿಕ ಅಪೇಕ್ಷೆ ಇಲ್ಲದೆ ಬಹುಶಃ ತಮ್ಮ ಸ್ವಂತ ಖರ್ಚಿನಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿರುವ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಮೂಲಕ ಬಸವ ಪ್ರಜ್ಞೆಯನ್ನು ತಮ್ಮ ಕಂಚಿನ ಕಂಠದ ಮೂಲಕ ಜಾಗೃತಗೊಳಿಸುತ್ತಾ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿರುವ ಪರಿಯನ್ನು ನೋಡುತ್ತಾ ನೋಡುತ್ತಾ ನನಗೆ ಅರಿವಿಲ್ಲದಂತೆ ಅರವಿಂದ ಜತ್ತಿಯವರ ಅನುಯಾಯಿಯಾಗಿ ಹೋದೆ. ಕೊಪ್ಪಳದ ಲಿಂಗೈಕ್ಯ ವೀರಬಸಪ್ಪ ಬಳ್ಳೊಳ್ಳಿ ಹಾಗೂ ಮಹೇಶ ಬೆಳವಣಕಿಯವರ ಆಶಯದಂತೆ ಅಂದಿನ ಕೇಂದ್ರ ಸರ್ಕಾರದ ಆರ್ಥಿಕ ಮಂತ್ರಿಗಳಾಗಿದ್ದ ಪಿ.ಚಿದಂಬರಂ ರವರಿಗೆ ಮಹಾತ್ಮ ಬಸವೇಶ್ವರರ ಕಾಯಕ ಸಿದ್ಧಾಂತವನ್ನು ತಿಳಿಸಿಕೊಟ್ಟು *ಬಸವ ನಾಣ್ಯ* ಹೊರತರಲು ಪ್ರೇರೇಪಣೆಯನ್ನು ನೀಡಿದ್ದಷ್ಟೇ ಅಲ್ಲ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲಿನಲ್ಲಿಯೋ ಅಥವಾ ಬೆಂಗಳೂರಿನ ಅರಮನೆಯ ಆವರಣದಲ್ಲಿಯೋ (ನನಗೆ ಸರಿಯಾಗಿ ನೆನಪಿಲ್ಲ)ನಡೆದ ಕಾರ್ಯಕ್ರಮದಲ್ಲಿ ಬಸವ ನಾಣ್ಯವನ್ನು ಬಿಡುಗಡೆಗೊಳಿಸುವವರೆಗೂ ವಿರಮಿಸಲಿಲ್ಲ.
ಕಾವೇರಿಯಲ್ಲಿ ನೀರು ಹರಿದು ಹೋದಂತೆ ಬಸವ ಸಮಿತಿಯಲ್ಲಿದ್ದ ಹಿರಿಯರು ಕಣ್ಮರೆಯಾಗುತ್ತ ಹೋದಂತಲ್ಲ ಅರವಿಂದ ಜತ್ತಿಯವರು ಬಸವ ಸಮಿತಿಯ ಅಧ್ಯಕ್ಷರಾಗಿ ತಾವು ಕಂಡ ಕನಸಿನಂತೆ ವಚನ ಸಾಹಿತ್ಯವನ್ನು ಲಿಂಗೈಕ್ಯ ಎಂ.ಎಂ.ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ದೇಶದಾದ್ಯಂತ ಪ್ರಚಾರಗೊಳಿಸಲು ಹೆಚ್ಚು ಸ್ವಾತಂತ್ರ್ಯ ಸಿಕ್ಕಿತು ಎನಿಸುತ್ತದೆ. ಇದರ ಪರಿಣಾಮವಾಗಿ ವಚನ ಸಂಪುಟಗಳು ದೇಶ ಹಾಗೂ ವಿದೇಶಗಳ ೨೯ ಭಾಷೆಗಳಲ್ಲಿ ಅನುವಾದಗೊಂಡು ಬಸವಣ್ಣ ಹಾಗೂ ಶರಣರು ರಾಜ್ಯ,ದೇಶದ ಗಡಿಗಳನ್ನು ಮೀರಿ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿಕೊಳ್ಳುವಲ್ಲಿ ಅರವಿಂದ ಜತ್ತಿಯವರ ಹಠ ಮತ್ತು ಛಲವನ್ನು ಮೆಚ್ಚಲೇಬೇಕು.ಬಹುಶಃ ಭಾರತದ ಸೂಫಿ ಸಂತರಗಳ ಯಾವುದೇ ತತ್ವ ಹಾಗೂ ಸಾಹಿತ್ಯ ಇಷ್ಟೊಂದು ಭಾಷೆಗಳಿಗೆ ಅನುವಾದವಾಗಿರಲಿಕ್ಕಿಲ್ಲ. ನಿಮ್ಮ ಶ್ರಮದಿಂದ ವಚನ ಸಂಪುಟಗಳು ೨೯ ಭಾಷೆಗಳಿಗೆ ಅನುವಾದಗೊಂಡು ಬಸವಣ್ಣ ವಿಶ್ವವ್ಯಾಪಿ ಬೆಳೆದು ಪ್ರಚಾರವಾಗಲು ನೀವು ಕಾರಣವಾದಿರಲ್ಲ ಎಂದಾಗ ಅರವಿಂದ ಜತ್ತಿಯವರು ಬಸವಣ್ಣನವರನ್ನು ಬೆಳೆಸಲು ನಾನ್ಯಾರು ? ಬಸವಣ್ಣನವರನ್ನು ಯಾರು ಬೆಳೆಸಲು ಸಾಧ್ಯವಿಲ್ಲ. ಬಸವಣ್ಣನವರು ತಮ್ಮಿಂದ ತಾನೇ ವಿಶ್ವ ವ್ಯಾಪಿಯಾಗಿ ಬೆಳೆದು ಪ್ರಚಾರವಾಗುತ್ತಿದ್ದಾರೆ ಈ ಕಾರ್ಯದಲ್ಲಿ ನಾನು ಅಣು ಮಾತ್ರ ಎಂದು ವಿನಯದಿಂದ ಹೇಳುತ್ತಾರೆ. ಜೊತೆಗೆ ಬಸವ ಸಮಿತಿ ಆವರಣವನ್ನು ಕಲ್ಯಾಣದ ಅನುಭವ ಮಂಟಪದಂತೆ ನಿರ್ಮಿಸಿ ಯಶಸ್ವಿಯಾಗಿದ್ದಾರೆ.
ಇಂದು ಬಸವ ಸಮಿತಿಯ ಆವರಣವನ್ನು ಯಾರಾದರೂ ನೋಡಿರದಿದ್ದರೆ ನೋಡಲೇಬೇಕು. ಏಕೆಂದರೆ ಬಸವಣ್ಣನವರು ನನಗಿಲ್ಲದ ಭಾಗ್ಯ ನಮ್ಮಕ್ಕನಿಗೆಕಿಲ್ಲ ಎಂದು ಜನಿವಾರವನ್ನು ತೊರೆದು ಹೊರಟ ದೃಶ್ಯಗಳಿಂದ ಹಿಡಿದು ಅನುಭವ ಮಂಟಪದ ದೃಶ್ಯಗಳು, ಹರಳಯ್ಯ ಮತ್ತು ಮದುವರಸರ ಎಳೆ ಹೂಟೆಯ ಶಿಕ್ಷೆಯ ದೃಶ್ಯಗಳನ್ನೊಳಗೊಂಡು ಕಲ್ಯಾಣ ಕ್ರಾಂತಿಯ ನಂತರ ವಚನ ಕಟ್ಟುಗಳನ್ನು ಹೊತ್ತುಕೊಂಡು ಬಸವಕಲ್ಯಾಣದಿಂದ ಚದುರಿ ಹೋಗುತ್ತಿರುವ ಶರಣರ ದೃಶ್ಯಗಳ ಮನ ಕಲಕುವ ಉಬ್ಬು ಚಿತ್ರಗಳನ್ನು ಚಿತ್ರಗಳನ್ನು ನೋಡುತ್ತಾ ನೋಡುತ್ತಾ ಕಲ್ಯಾಣ ಕ್ರಾಂತಿಯ ದಿನಗಳಲ್ಲಿ ನಾನು ಕಳೆದು ಹೋಗಿದ್ದು ಅರಿವಿಗೆ ಬರಲೇ ಇಲ್ಲ. ಹಾಗೆಯೇ ಸಭಾಭವನದ ಹೊರಗಿನ ಉದ್ಯಾನದಲ್ಲಿ ಕಲ್ಯಾಣದ ಶರಣರು ಚರ್ಚಿಸುತ್ತಿದ್ದ *ಪರುಷ ಕಟ್ಟೆಯ* ಪ್ರತಿರೂಪ ನಿರ್ಮಾಣ ಮಾಡಿರುವ ಅರವಿಂದ ಜತ್ತಿಯವರ ದೂರ ದೃಷ್ಟಿಗೆ ನನ್ನದೊಂದು ಸಲಾಂ.
ಸತ್ಯಮೇವ ಜಯತೆ ಪುಸ್ತಕವನ್ನು ಕೊಂಡುಕೊಂಡು ಹೊರಟಿದ್ದ ನನಗೆ ಪುಸ್ತಕ ಮಾರಾಟದ ಉಸ್ತುವಾರಿಯನ್ನು ಹೊತ್ತಿರುವ ಮಲ್ಲಿಕಾರ್ಜುನರವರು ಸಭಾಭವನದ ಸುತ್ತಲೂ ನೂತನವಾಗಿ ನಿರ್ಮಾಣವಾಗಿರುವ ಅನುಭವ ಮಂಟಪವನ್ನು ನೋಡಿದ್ದೀರಾ ? ನೋಡಿರದಿದ್ದರೆ ಬನ್ನಿ ನಾನು ತೋರಿಸುತ್ತೇನೆ ಎಂದು ಸುಮಾರು 300 ಆಸನಗಳನ್ನು ಹೊಂದಿರುವ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಸಭಾಭವನ ಹಾಗೂ ಅದರ ಸುತ್ತಲೂ ನಿರ್ಮಾಣವಾಗಿರುವ ಶರಣರ ಪುತ್ತಳಿಗಳು, ಅನುಭವ ಮಂಟಪದ ಕಲಾ ಕೃತಿಗಳನ್ನು ತೋರಿಸಿದ ಅವರ ಸೌಜನ್ಯಕ್ಕೆ ನಾನು ಮಾರುಹೋಗದೆ ಇರಲು ಸಾಧ್ಯವಾಗಲಿಲ್ಲ. ಅರವಿಂದ ಜತ್ತಿಯವರು ಕಾರ್ಯಾಲಯದಲ್ಲಿದ್ದಾರ ಅವರನ್ನು ಭೇಟ್ಟಿ ಆಗಬಹುದೇ ? ಎಂದು ಕೇಳಿದಾಗ ಇಲ್ಲ ಸರ್ ಅವರು ಕಾಶ್ಮೀರದ ಶ್ರೀನಗರದಲ್ಲಿ ಕಾಶ್ಮೀರಿ ಭಾಷೆಯಲ್ಲಿ ವಚನಗಳ ನಿರ್ವಚನದ ಅನುವಾದ ಶಿಬಿರ ಏರ್ಪಡಿಸುವುದರಿಂದ ಪ್ರವಾಸದಲ್ಲಿದ್ದಾರೆ ಎಂದು ಹೇಳಿದಾಗ ಅವರನ್ನು ಬೇಟ್ಟಿಯಾಗಿ ನನ್ನ ಅಭಿನಂದನೆಗಳನ್ನು ತಿಳಿಸಲು ಸಾಧ್ಯವಾಗಲಿಲ್ಲವಲ್ಲ ಎಂದು ನಿರಾಶೆ ಆಯಿತು.
ಇಲ್ಲಿಯವರೆಗೂ ಅರವಿಂದ ಜತ್ತಿಯವರು ವೈಯಕ್ತಿಕವಾಗಿ ನನಗೆ ಪರಿಚಯವಿಲ್ಲ.ಕಳೆದೆರಡು ದಶಕಗಳಿಂದ ಈಚೆಗೆ ನಾಲ್ಕೈದು ಸಲ ಗೆಳೆಯ ಹಾಗೂ ಕೊಪ್ಪಳದ ಬಸವ ಸಮಿತಿ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿಯವರ ಜೊತೆಗೆ ಅವರನ್ನು ಬೇಟ್ಟಿಯಾಗಿ ಕೆಲ ನಿಮಿಷಗಳ ಕಾಲ ನಾನು ಸಮಯೋಚಿತವಾಗಿ ಮಾತನಾಡಿರಬಹುದು. ಆದರೆ ಅರವಿಂದ ಜತ್ತಿಯವರು ಪ್ರತಿನಿತ್ಯ ನೂರಾರು ಜನರನ್ನು ಭೇಟಿಯಾಗುತ್ತಿರುತ್ತಾರೆ ಅದರಲ್ಲಿ ನಾನು ಒಬ್ಬ ಅಷ್ಟೇ. ಅವರಿಗೆ ತಾನೇ ಎಷ್ಟು ಜನರನ್ನು ನೆನಪಿಟ್ಟುಕೊಳ್ಳಲು ಸಾಧ್ಯ ? ರಾಜ್ಯದ ಮುಖ್ಯಮಂತ್ರಿ, ದೇಶದ ರಾಷ್ಟ್ರಪತಿಗಳ ಚಿರಂಜೀವಿಯಾಗಿ ರಾಜಕಾರಣದಲ್ಲಿ ಕೈ ಆಡಿಸಲು ಹಾಗೂ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವ ಎಲ್ಲಾ ಅವಕಾಶಗಳಿದ್ದರೂ ಸಹ ರಾಜಕಾರಣದ ಅಂಗಳದ ಆಕರ್ಷಣೆಗೆ ಒಳಗಾಗದೆ ಬಸವ ತತ್ವ ಹಾಗೂ ಶರಣರ ಸಂದೇಶಗಳ ಪ್ರಚಾರಕ್ಕಾಗಿ ತನ್ನನೇ ತಾನು ಅರ್ಪಿಸಿಕೊಂಡು ಶರಣ ಮಾರ್ಗದಲ್ಲಿ ಮುನ್ನುಗ್ಗುತ್ತಿರುವ ಅರವಿಂದ ಜತ್ತಿಯವರಿಗೆ ಮಹಾತ್ಮ ಬಸವೇಶ್ವರ ಆಯುಷ್ಯ ಆರೋಗ್ಯವನ್ನು ಕರುಣಿಸಲಿ.ನಿಮ್ಮ ಸಮಕಾಲೀನರಾಗಿ ಬಸವ ಪ್ರಜ್ಞೆಯನ್ನು ನಾಡಿನಾದ್ಯಂತ ಜಾಗೃತಗೊಳಿಸಲು ಹೋರಾಡುತ್ತಿರುವ ನಿಮ್ಮನ್ನು ನೋಡುತ್ತಾ ನೋಡುತ್ತಾ ಬದುಕುತ್ತಿದ್ದೇನಲ್ಲ ಅದೇ ನನ್ನ ಬದುಕಿನ ಅಮೂಲ್ಯವಾದ ಸಾರ್ಥಕತೆ. ಬಿದರಿಯವರ ಸತ್ಯಮೇವ ಜಯತೆ ಆತ್ಮ ಚರಿತ್ರೆಯನ್ನು ಓದಿ ಮುಗಿಸಿದ ಮೇಲೆ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ನನ್ನದು…
–ಗವಿಸಿದ್ದಪ್ಪ ಕೊಪ್ಪಳ