ತನ್ನನರಿಯದ ಯುಕ್ತಿ ಬೋಧೆಗೆ ಯೋಗ್ಯವೇ
ಅರಿದೆಹೆನೆಂದು ಕುರುಹಿಟ್ಟು ಇದಿರಿಂಗೆ ಹೇಳುವಾಗ,
ಆ ಗುಣ ಅರಿವೋ, ಮರವೆಯೋ ?
ಹೋಗಲಂಜಿ, ಹಗೆಯ ಕೈಯಲ್ಲಿ
ಹಾದಿಯ ತೋರಿಸಿಕೊಂಬಂತೆ,
ತನ್ನನರಿಯದ ಯುಕ್ತಿ, ಇದಿರಿಂಗೆ ಅನ್ಯಬೋಧೆಯುಂಟೆ ?
ಈ ಅನ್ಯಬ್ಥಿನ್ನಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
ಮನಸಂದ ಮಾರಿತಂದೆ
ಸಮಗ್ರ ವಚನ ಸಂಪುಟ: 8 ವಚನದ ಸಂಖ್ಯೆ: 901 .
ಮನಸಂದ ಮಾರಿತಂದೆ ಬಸವಾದಿಪ್ರಮಥರಲ್ಲಿ ಅರಿವಿನ ಕಾಯಕ ಮಾಡುವ ಬಹು ದೊಡ್ಡ ಅನುಭಾವಿ ವಚನಕಾರ. ಇವರ ವಚನದಲ್ಲಿ ಆತ್ಮ ವಿಮರ್ಶೆ ಒಳಗಿನ ನೋಟ ,ಹೊರಗೆ ಒಳಗೆ ಇರಬೇಕಾದ ಏಕೋಭಾವ ಅಧ್ಯಾತ್ಮದ ಹರಿವನ್ನು ಇನ್ನಷ್ಟು ಗಟ್ಟಿಗೊಳಿಸುವ ವೈಚಾರಿಕ ಚಿಂತನೆಗಳು ಅದ್ಭುತವಾಗಿವೆ.
ವಚನದ ಸರಳತೆ ಸ್ಪಷ್ಟತೆ ನೇರವಾಗಿ ಹೇಳುವ ಎದೆಗಾರಿಕೆ ಅವರ ವಚನಗಳಲ್ಲಿ ಕಾಣುತ್ತೇವೆ.
ಅರಿದೆಹೆನೆಂದು ಕುರುಹಿಟ್ಟು ಇದಿರಿಂಗೆ ಹೇಳುವಾಗ,ಆ ಗುಣ ಅರಿವೋ, ಮರವೆಯೋ ?
ಒಬ್ಬ ವ್ಯಕ್ತಿ ಲಿಂಗ ತತ್ವವನ್ನುಸಂಪೂರ್ಣ ಅರಿದೆನೆಂದು ಬಂದ ಭಕ್ತನಿಗೆ ಕುರುಹ ಕೊಟ್ಟು ತನ್ನ ಅನುಭಾವವನ್ನು ಹೇಳುವ ಗುಣವು ಆ ಸಾಧಕನ ಅರಿವೋ ಅಥವಾ
ಮರೆವೋ ಎನ್ನುತ್ತಾರೆ ಮನಸಂದ ಮಾರಿತಂದೆ .ಕಾರಣ ಲಿಂಗಜ್ಞಾನವೆನ್ನುವುದು ವ್ಯಕ್ತಿ ತಾನು ಅನುಭವಿಸಿ ಸಾಧಿಸಬೇಕು .ಇಂತಹ ಸುಂದರ ಅನುಭವವು
ಶಿಶು ಕಂಡ ಕನಸು ,ಮೂಗನು ಹೇಳುವ ಕಾವ್ಯ ,ನೀರೊಳಗಿದ್ದ ಪ್ರತಿಬಿಂಬ ಅತ್ಯಂತ ಉದಾತ್ತ ಭಾವವನ್ನು ಕೇವಲ ಕುರುಹುಗಳ ಮೂಲಕ ಅರಿವನ್ನು ಹಂಚಿಕೊಳ್ಳಲು ಸಾಧ್ಯವೇ ಅದು ಅರಿವಲ್ಲ ತಾನು ಕಂಡ ಸತ್ಯದ ಮರೆವು.
ಹೋಗಲಂಜಿ, ಹಗೆಯ ಕೈಯಲ್ಲಿ ಹಾದಿಯ ತೋರಿಸಿಕೊಂಬಂತೆ,
ಇಂತಹ ಒಳಪಯಣಕ್ಕೆ ಮಾನಸಿಕವಾಗಿ ಸಿದ್ಧಗೊಳ್ಳದೆ ಅರಿವನ್ನು ಆರಿಸಿ ಬರುವ ಭಕ್ತನು ಅಧ್ಯಾತ್ಮದ ಪರಮಸುಖ ಕಾಣುವ ದಾರಿ ಹುಡುಕುವ ನೆಪದಲ್ಲಿ ಸಾಧಕನ ಮುಂದೆ ಕುಳಿತು ಅಂಜಿ ದ್ವೇಷ ಹಗೆ ವಿಷಯಾದಿ ಗುಣಗಳ ಮಾರ್ಗದಲ್ಲಿ ಅವಗುಣಗಳ ಕೈಯಲ್ಲಿ ತಾನು ಹೋಗುವ ಹಾದಿಯ ವಿವರವನ್ನು ಕೇಳಿದಂತೆ. ಅಧ್ಯಾತ್ಮ ಅನುಭವ ಇದು ಧರ್ಮ ಜಾತಿ ಸಂಪ್ರದಾಯವನ್ನು ಮೀರಿ ನಿಲ್ಲುವಂತದ್ದು . ಗುರು ಭಕ್ತಿ ಕೇವಲ ಲಾಂಛನ ಕುರುಹುಗಳನ್ನು ಹಿಡಿದು ಬಡೆದಾಡಿದರೆ ಅಥವಾ ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುತ್ತಿದ್ದರೆ ಅದು ಹಗೆ ಮತ್ತು ಅನುಭಾವದ ಕೇಡು .ವ್ಯಾವಹಾರಿಕವಾಗಿ ಇಂದು ನಾವು ಕೈಯಲ್ಲಿ ಕುರುಹು ಹಿಡಿದುಕೊಂಡು ಸಹಜ ಶಿವಯೋಗ ಅಂತ ಸಾವಿರಾರು ಜನರ ಸಮೂಹದ ಮಧ್ಯೆ ಅನುಭವದ ಅಸ್ಮಿತೆ ಹುಡುಕಾಟ ಎಷ್ಟು ಸಮಂಜಸ.
ಶರಣರು ಧ್ಯಾನ ಮೂಲದ ಯೋಗವನ್ನು ಕಲ್ಪಿಸಿದರು ಅದು ಅತ್ಯಂತ ವ್ಯಕ್ತಿಗತ ಮತ್ತು ಖಾಸಗಿ ಅನುಭವಕ್ಕೆ ಸೀಮಿತವಾದದ್ದು. ಅದನ್ನು ಬಹಿರಂಗವಾಗಿ ತೋರಿಸುವ ಭಂಡತನ ಲಿಂಗತತ್ವಕ್ಕೆ ಸಲ್ಲದು. ಅದಕ್ಕೆ ಅರಿದೆನೆಂದು ಎದುರು ಕುಳಿತ ಭಕ್ತನಿಗೆ ತತ್ವ ಉಪದೇಶ ಮಾಡುವುದು ಮಾತಿನ ಶಬ್ದಗಳ ಲಜ್ಜೆ ಎನ್ನುತ್ತಾರೆ ಮನಸಂದ ಮಾರಿತಂದೆ ಶರಣರು.
*ತನ್ನನರಿಯದ ಯುಕ್ತಿ, ಇದಿರಿಂಗೆ ಅನ್ಯಬೋಧೆಯುಂಟೆ ?*
——————————————————-
ಅನ್ಯರಿಗೆ ಬೋಧೆ ಮಾಡುವ ಮುನ್ನ ವ್ಯಕ್ತಿ ಸಾಧಕ ಮೊದಲು ತಾನಾರೆಂದು ತಿಳಿದಿರಬೇಕು. . ತನ್ನನ್ನು ತಾನರಿವ ಯುಕ್ತಿ ಹೊಂದದೆ ಇನ್ನೊಬ್ಬರಿಗೆ ಧರ್ಮ ಬೋಧೆ ಮಾಡುವುದು ಶೋಭೆಯೇ ? ಗುರುಗಳನೆನ್ನುವವರು ಮೊದಲು ತಾವಾರೆಂದು ತಮ್ಮ ಆಧ್ಯಾತ್ಮಿಕ ಚೈತನ್ಯದ ನೆಲೆಸೆಲೆಗಳನ್ನು ಗುರುತಿಸಿ ಪ್ರಚುರ ಪಡಿಸಿ
ಜ ಸುಖದ ಪರಮ ಸಂತಸದ ಅಲೌಕಿಕ ಪಾರಮಾರ್ಥಿಕ ಚಿಂತನೆಯ ಪಥಕ್ಕೆ ಸಾಗುವವನು ತನ್ನ ಕುರುಹು ಶ್ರೇಷ್ಠತೆ ಜೇಷ್ಠತೆ ಉಳಿಸಿಕೊಂಡು ಮಾಡುವ ಬೋಧೆಯು ಶ್ರೇಣೀಕೃತ ವರ್ಗವನ್ನು ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ಅಪರಾಧ ಮತ್ತು ಲಿಂಗತತ್ವ ದ್ರೋಹ.
ಮಡಿದ ಬೋಧೆಗೆ ಪರ್ಯಾಯವಾಗಿ ಧನ ಕನಕ ಕಾಣಿಕೆ ಪಡೆಯುವದಂತು ಅಸಹ್ಯ ನೀಚತನದ ಪರಮಾವಧಿ.
ತನ್ನ ತಾನರಿದೊಡೆ ತಾನೇ ದೇವಾ ಎಂದು ಅಲ್ಲಮರು ಹೇಳುವ ಹಾಗೆ ಸಾಧಕನಿಗೆ ತಾನು ಚಲಿಸಬೇಕಾದ ಮಾರ್ಗದ ಆಯ್ಕೆ ಕ್ರಮಿಸಬೇಕಾದ ಒಳಪಯಣದ ಗಟ್ಟಿತನಕ್ಕೆ ಬೇಕಾದ ಸುಗುಣಗಳ ಅಳವಡಿಕೆ ಬದ್ಧತೆ ಇರಬೇಕು. ಅನುಭಾವ ಲಿಂಗ ತತ್ವವನ್ನು ಹೇಳುವವ ತಾನು ಗುರುವೆಂಬ ಅಹಂ ಭಾವ ಬಿಟ್ಟು ತಾನು ತಿಳಿದ
ಅವಿರಳ ಲಿಂಗ ಜ್ಞಾನವನ್ನು ಸಾಧಕಿನಿಗೆ ಹೇಳುವಾಗ ತಾನು ದೊಡ್ಡವ ಅರಿತವ ಜ್ಞಾನಿ ಎಂಬ ಅಹಂಕಾರ ಬಂದಲ್ಲಿ ಅದು ಅರಿವಿನ ನಷ್ಟ ಹಾಗು ಬೋಧೆಯ ನೆಪದಲ್ಲಿ ನಡೆಯುವ ಡಾಂಭಿಕ ಆಚರಣೆ ವ್ಯವಹಾರ ಮಾತ್ರ .
ಈ ಅನ್ಯಬ್ಥಿನ್ನಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
ಕಾರಣ ಬೋಧೆ ಎಂಬ ಅನುಭವ ಹಂಚಿಕೆ ವ್ಯವಹಾರವಾಗಬಾರದು ಬಾಹ್ಯ ಆಚರಣೆಗೆ ಅಣುವಾಗಬಾರದು. ದೀಕ್ಷೆ ಬೋಧೆ ಗುರು ಕಾರುಣ್ಯ ಎಂಬ ಪರ್ಯಾಯ ಪದಗಳ ಬಳಕೆಯಿಂದ ದಾಸ್ಯತ್ವಕ್ಕೆ ತಳ್ಳುವ ಹುನ್ನಾರವಾಗಬಾರದು. ನಮ್ಮಲ್ಲಿ ಕಾವಿ ಲಾಂಛನಗಳ ಶ್ರೇಷ್ಠತೆ ಜೇಷ್ಠತೆ ಅವುಗಳನ್ನು ಉನ್ಮಾದದಲ್ಲಿ ಹೊತ್ತು ತಿರುಗುವ
ಮುಗ್ಧತೆಯೋ ಮೂರ್ಖತನವೋ ಭಕ್ತರು ಗುಲಾಮರಾಗುತ್ತಾರೆ. ಈ ಕಾರಣದಿಂದ ವಚನಕಾರ ಮನಸಂದ ಮಾರಿ ತಂದೆಯವರು . ಅನ್ಯರಿಗೆ ಬೋಧೆ ಮಾಡುವ ಮೊದಲು ತಾನು ಲಿಂಗ ತತ್ವವನ್ನು ಅರಿಯಬೇಕು.ಅನ್ಯರಿಗೆ ಉಪದೇಶ ಮಾಡುವ ಮೊದಲು ತಾನು ಅಂತರಂಗಗಳ ಶುಚಿತ್ವಕ್ಕೆ ಮುಂದಾಗಬೇಕು.
ಹೊರಗಿನ ಜಗತ್ತಿಗೆ ಅನುಭವವನ್ನು ಸಮತೆಯ ನೆಲದ ಮೇಲೆ ಹೇಳಬೇಕೇ ಹೊರತು , ಅರಿತೆನೆಂದು ಉಪ್ಪರಿಗೆಯ ಮೇಲೆ ಕುಳಿತು ಹೇಳುವ ನುಡಿಗಳು
ಅರ್ಥರಹಿತವಾಗಿರುತ್ತವೆ ಎನ್ನುತ್ತಾರೆ. ಅಂತೆಯೇ ಅಭ್ಯರಿಗೆ ಬೋಧೆ ಮಾಡುವ ಮೊದಲು ಬೋಧಕ ತನ್ನನ್ನು ಮೊದಲು ಆತ್ಮ ವಿಮರ್ಶೆಗೆ ಒಳಪಡಿಸಬೇಕು .
ಎಂತಹ ಸುಂದರ ಪರಿಕಲ್ಪನೆಯನ್ನು ಶರಣರು ಹೊಂದಿದ್ದರು. ತಾನು ಲಿಂಗ ತತ್ವವನ್ನು ಅರಿತು ಆ ಲಿಂಗದಲ್ಲಿ ಅಂಗ ಲಿಂಗ ಸಂಬಂಧಗಳನ್ನು ಪರಾಮರ್ಶಿಸಿ
ತಾನು ಲಿಂಗ ಒಂದೇ ತಾನು ಜಂಗಮದ ಅವಿಭಾಜ್ಯ ಅಂಗ .ಛಲಬೇಕು ಶರಣಂಗೆ ಲಿಂಗ ಜಂಗಮ ಒಂದೆ ಎಂಬ ಅರಿವಿರಬೇಕು.
ಇಂತಹ ವಚನಗಳ ವಿಶ್ಲೇಷಣೆಯಲ್ಲಿ ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ. ಗುರು ವ್ಯಕ್ತಿಯಲ್ಲ ಲಿಂಗ ವಸ್ತು ಅಲ್ಲ ಜಂಗಮ ಜಾತಿಯಲ್ಲ.
ತನ್ನ ಬಿಟ್ಟು ದೇವರಲ್ಲಿ ಮಣ್ಣು ಬಿಟ್ಟು ಮಡಿಕೆಯಲ್ಲ .ಮಡಿಕೆ ಭಾವಿಯ ಶರೀರ ಭಕ್ತನು ದೇವನಾಗುವ ಪರಿಯನ್ನು ಶರಣರು ಹೇಳಿದ್ದಾರೆ.ಶರಣಾರ್ಥಿ.
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ