ಅಕ್ಕನ ನಡೆ ಸಮಾಜದೆಡೆಗೆ

ಅಕ್ಕನಡೆಗೆ ಅಂಕಣ ವಚನ – ೩

 

 

ಅಕ್ಕನ ನಡೆ ಸಮಾಜದೆಡೆಗೆ

ಹೆದರದಿರು ಮನವೆ ಬೆದರದಿರು ತನುವೆ

ನಿಜವನರಿತು ನಿಶ್ಚಿಂತನಾಗಿರು

ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ
ಎಲವದ ಮರನ ಇಡುವರೊಬ್ಬರ ಕಾಣೆ
ಭಕ್ತಿಯುಳ್ಳವರ ಬಯ್ವರೊಂದು ಕೋಟಿ
ಭಕ್ತಿಯಿಲ್ಲದವರ ಬಯ್ವರೊಬ್ಬರ ಕಾಣೆ
ನಿಮ್ಮ ಶರಣರ ನುಡಿಯೆ ಎನಗೆ ಗತಿ ಸೋಪಾನ
ಚೆನ್ನಮಲ್ಲಿಕಾರ್ಜುನಾ.

ಹನ್ನೆರಡನೇ ಶತಮಾನದಲ್ಲಿ ಕಾವ್ಯಾತ್ಮಕವಾಗಿ ವಚನಗಳನ್ನು ರಚಿಸಿದ ಅಕ್ಕಮಹಾದೇವಿ ತನ್ನ ವೈರಾಗ್ಯ ಸಾಧನೆಯೊಂದಿಗೆ, ಮುಂದಿನ ಪೀಳಿಗೆಯ ವೈಯಕ್ತಿಕವಾದ ವ್ಯಕ್ತಿತ್ವ ವಿಕಸನದ ಸಂದೇಶಗಳನ್ನು ನೀಡಿದ್ದಾಳೆ. ಅವಳು ತನ್ನ ಜೀವನಾನುಭವದ ಸಾರವನ್ನು ವಚನಗಳಲ್ಲಿ ಉಲ್ಲೇಖಿಸಿದ ಪರಿ ಮಹತ್ವದ್ದು. ಅವಳ ವೈಯಕ್ತಿಕ ನೆಲೆಯ ಅನುಭವದ ಖಜಾನೆಯನ್ನು ಸಾರ್ವತ್ರಿಕವಾದ ಉನ್ನತಿಗೆ ಬಳಸಬಹುದು. ಮೊದಲು ವ್ಯಕ್ತಿಯೊಬ್ಬನನ್ನೇ ಪರಿಗಣಿಸಿ, ನಂತರ ಕುಟುಂಬ, ಜಿಲ್ಲೆ, ರಾಜ್ಯ, ದೇಶ, ವಿಶ್ವವನ್ನು ಗಮನಿಸುವುದು ಸೂಕ್ತ. ವೈಯಕ್ತಿಕ ನೆಲೆಯ ವಿಕಾಸ ಕೊಂಡಿಯಾಗಿ ಇಡೀ ಜಗತ್ತಿನ ಶ್ರೇಯಸ್ಸಿಗೆ ಕಾರಣವಾಗುತ್ತದೆ.

ಅಕ್ಕನ ವಚನಗಳಲ್ಲಿ ಮೂಲವಾಗಿ ಆಧ್ಯಾತ್ಮಿಕ ನೆಲೆ ಕಂಡು ಬರುವುದು ಸಹಜ. ಅಕ್ಕನ ಬದುಕಿನ ರೀತಿಯೇ ಹಾಗಿತ್ತು. ಆಳವಾಗಿ ಅಧ್ಯಯನ ಮಾಡಿದಾಗ ಅವುಗಳಲ್ಲಿರುವ ಭಿನ್ನಬಿನ್ನ ಮಜಲುಗಳನ್ನು ಗುರುತಿಸುತ್ತ ಹೋಗಬಹುದು. ವ್ಯಷ್ಟಿಯಿಂದ ಸಮಷ್ಟಿ ಪ್ರಜ್ಞೆ ಜಾಗ್ರತವಾಗಿರುವುದನ್ನು ಗುರುತಿಸಬಹುದು. ಅಕ್ಕನಲ್ಲಿರುವ ಸಾಮಾಜಿಕ ಕಳಕಳಿಯನ್ನು ಮೇಲಿನ ಈ ವಚನದಲ್ಲಿ ಕಾಣಬಹುದು.

ಏಕಾಂತ, ಭಕ್ತಿ, ಧ್ಯಾನ, ಚಿಂತನೆ, ಕಲಿಯುವಿಕೆ, ವಿನಯಶೀಲ ಗುಣ, ಕ್ರಿಯಾಶೀಲತೆ, ಸಾತ್ವಿಕತೆ, ಸಮರ್ಪಣೆ, ಈ ಎಲ್ಲಾ ಗುಣಗಳನ್ನು ಅಕ್ಕನ ವಚನಗಳಲ್ಲಿ ಕಂಡುಬರುವುದು. ಇವುಗಳು ಮನುಷ್ಯನಿಗೆ ಯಾಕೆ ಬೇಕು? ಹೇಗೆ ಅಳವಡಿಸಿಕೊಳ್ಳಬೇಕು? ಅದರಲ್ಲೇ ಮುಂದುವರಿಯುವ ದಾರಿ ಹೇಗೆ ನಿಚ್ಚಳವಾಗುತ್ತದೆ? ಅಕ್ಕನ ನಡೆ ಸಮಾಜದೆಡೆಗೆ ಹೇಗೆ? ಎನ್ನುವ ಅಂಶಗಳನ್ನು ಅಕ್ಕನ ವಚನಗಳಿಂದಲೇ ಅರಿಯಬಹುದು.

ಅಂದಿನ ಗುರು, ಲಿಂಗ, ಜಂಗಮ, ಕಾಯಕ, ದಾಸೋಹ ತತ್ವಗಳಿಗೆ ಪರ್ಯಾಯ ಶಬ್ದಗಳೂ ಇಲ್ಲ, ಪರ್ಯಾಯ ಆಚರಣೆಯೂ ಇಲ್ಲ. ಬಸವಣ್ಣನ ನವಸಮಾಜ ನಿರ್ಮಾಣದ ಪರಿಕಲ್ಪನೆಯಡಿಯಲ್ಲಿ ಪಳಗಿದ ಅನೇಕ ಶರಣ ಶರಣೆಯರ ಕೂಗು ಒಂದೇ ಆಗಿತ್ತು. ‘Feathers of own kind gather together’ ಎನ್ನುವಂತೆ ದೇಶಾಂತರದಿಂದ ಜನ ವರ್ಗ, ಜಾತಿ, ಅಂತಸ್ತು ಮೀರಿ ಬಂದು ಒಂದು ಕಡೆ ಕಲ್ಯಾಣದಲ್ಲಿ ಸೇರಿಕೊಂಡರು. ಕಾಶ್ಮೀರದಿಂದ ಬಂದ ಮಹಾರಾಜ ಮೋಳಿಗೆ ಮಾರಯ್ಯ ದಂಪತಿಗಳು, ಸೊನ್ನಲಿಗೆಯ ಸಿದ್ಧರಾಮ, ಶಿವಮೊಗ್ಗದ ಬಳ್ಳಿಗಾವೆಯ ಅಲ್ಲಮಪ್ರಭುಗಳು, ಹಾಗೆ ಉಡುತಡಿಯ ಅಕ್ಕನಲ್ಲದೆ ಅನೇಕರು ಶರಣ ಶರಣೆಯರಾದರು.

ಅವರೆಲ್ಲರಿಂದ ಪ್ರಭಾವಿತಳಾದ ಅಕ್ಕ ಅವರ ಮಧ್ಯದಲ್ಲಿ ಕೆಲ ಸಮಯ ಕಳೆದು ಮುಂದೆ ಶ್ರೀಶೈಲದತ್ತ ಸಾಗುವಳು. ಅವಳ ಬದುಕಿನ ಹಾದಿಯಲ್ಲಿ ಜಗತ್ತು ಜನರೊಂದಿಗೆ ವ್ಯವಹರಿಸುವ ರೀತಿಯಿಂದಾಗಿ ಮನ ನೊಂದು ಈ ವಚನ ಹೊರಬಂದಿರಬಹುದು ಎಂದು ಊಹೆ ಮಾಡಲು ಸಾಧ್ಯ.

ಹೆದರದಿರು ಮನವೆ ಬೆದರದಿರು ತನುವೆ

ಸಂಸಾರದಲ್ಲಿ ಮತ್ತು ಸಮಾಜದಲ್ಲಿ ಸತ್ಕಾರ್ಯ ಮಾಡಲು ಮುಂದಾದವರಿಗೆ ವಿಘ್ನಗಳು ಹೆಚ್ಚು. ಹೆಜ್ಜೆ ಹೆಜ್ಜೆಗೂ ತೊಡಕುಗಳನ್ನು ಅನುಭವಿಸಬೇಕಾಗುತ್ತದೆ. ಪರರ ನಿಂದೆಗೊಳಗಾಗಿ, ಸಂಶಯಕ್ಕೂ ಗುರಿಯಾಗುವರು. ಆಗ ವ್ಯಕ್ತಿಯ ಮನಸು ಹೆದರುತ್ತದೆ. ದೇಹ ಬೆದರುತ್ತದೆ. ಮುಂದಡಿ ಇಡಲು ಲೆಕ್ಕ ಹಾಕುತ್ತದೆ. ಅಂಥ ಸಮಯದಲ್ಲಿ ನಮಗೆ ನಾವೇ ಸಂತೈಸಿಕೊಳ್ಳಬೇಕು. ದೇಹ ಮತ್ತು ಮನಸ್ಸನ್ನು ಹತೋಟಿಗೆ ತಂದುಕೊಳ್ಳುವ ಮಾರ್ಗವನ್ನು ಸೂಚಿಸುವ ವಚನದ ಸಾಲು. ಅಕ್ಕ ಎಂಥ ಸಂದರ್ಭದಲ್ಲೂ ಶಾಂತವಾಗಿ ತನಗೆ ತಾನೇ ಹೆದರದಿರು ಬೆದರದಿರು ಎಂದು ತನು ಮನಕ್ಕೆ ಹೇಳಿಕೊಳ್ಳುವ ಪರಿ ಅನುಕರಣೀಯ.

ನಿಜವನರಿತು ನಿಶ್ಚಿಂತನಾಗಿರು

ಪ್ರತಿಯೊಬ್ಬರಿಗೂ ತಾವು ಮಾಡಲಿರುವ ಸತ್ಕಾರ್ಯದ ಕುರಿತು ಪೂರ್ವ ಸಿದ್ಧತೆ ಇದ್ದೇ ಇರುತ್ತದೆ. ಅಂದ ಮೇಲೆ ಮುಂದಡಿ ಇಡುವಾಗ, ಯಾರೊ ಏನೊ ಹೇಳಿದರೆಂದು ಅಂಜುವ ಪ್ರಮೇಯವಿಲ್ಲ. ನಾವು ಸತ್ಯದ ಮಾರ್ಗದಲ್ಲಿ ನಡೆಯುತ್ತ, ನಿಸ್ವಾರ್ಥವಾಗಿದ್ದರೆ, ನಿಶ್ಚಿಂತವಾಗಿರಬಹುದು.

ಅಕ್ಕನಲ್ಲಿ ಕಂಡು ಬರುವ ಮೂರು ವಿಶೇಷ ಗುಣಗಳು. ನೈತಿಕತೆ, ಕ್ರಿಯಾಶೀಲತೆ ಮತ್ತು ಆತ್ಮವಿಶ್ವಾಸ. ಆ ಮೂರು ಗುಣಗಳಿಂದಾಗಿ ಅವಳ ಸಾಧನೆಯ ಹಾದಿ ಕಷ್ಟಕರವಾಗಿದ್ದರೂ, ಹೂವಿನ ಹಾಸಿಗೆಯಾಗಿಸಲು ಸಾಧ್ಯವಾಯಿತು. ಸತ್ಯದ ಮಾರ್ಗದಲ್ಲಿ ನಡೆಯುತಿದ್ದು ಮುಂದಿನ ದಾರಿ ನಿಚ್ಚಳವಾಗಿದ್ದರೆ, ಆ ನಿಜವನ್ನು ತಿಳಿದು, ನಿರಾತಂಕವಾಗಿ ಇರಬೇಕೆನ್ನುವ ಮಾತನ್ನು ಈ ಸಾಲು ಹೇಳುತ್ತದೆ.

ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ

ಮರವು ಹೂ, ಕಾಯಿ, ಹಣ್ಣುಗಳಿಂದ ಸಮೃದ್ಧವಾಗಿದ್ದಾಗ ಜನರನ್ನು ಆಕರ್ಷಿಸುತ್ತದೆ. ಸರ್ವಜ್ಞ ಹೇಳುವನು, ‘ಹೆಣ್ಣುಳ್ಳ ಮನೆಗಳನ್ನು ಹಣ್ಣುಳ್ಳ ಮರಗಳನ್ನು ಕಣ್ಣಲ್ಲಿ ನೋಡಿ ಬಾಯಲ್ಲಿ ಸವಿಯದ ಅಣ್ಣಗಳು ಯಾರುಂಟು ಸರ್ವಜ್ಞ.’ ಅದೇ ಭಾವನ್ನು ಬಿಂಬಿಸುವ ಈ ಸಾಲು. ಫಲವತ್ತಾದ ಮರವನ್ನು ಹಣ್ಣಿನ ಆಸೆಗಾಗಿ ಕಲ್ಲನ್ನು ಹೊಡೆಯುವವರು ಕೋಟಿ ಜನ.

ಅಂದರೆ ಈ ವಚನದಲ್ಲಿ ಫಲವತ್ತಾದ ಮರವನ್ನು ರೂಪಕವಾಗಿ ಬಳಸಲಾಗಿದೆ. ಫಲವತ್ತಾದ ಮರ, ಕಲ್ಲು ಹೊಡೆಯುವುದು, ಕೋಟಿ ಜನ, ಎಲ್ಲವನ್ನೂ ವಿರೋಧಿಸುವ ಜನರ ಕುರಿತು ಹೇಳಲಾಗಿದೆ. ಸತ್ಕಾರ್ಯಕ್ಕೆ ಮುಂದಾದವರು ಫಲವತ್ತಾದ ಮರವಿದ್ದಂತೆ. ಆ ಮರಕ್ಕೆ ಕಲ್ಲು ಹೊಡೆಯುವುದು ಸಹಜ ಎನ್ನುವ ಮಾತು ಇದರಲ್ಲಡಗಿದೆ. ಪರೋಪಕಾರಕ್ಕೆ ಕೈಹಾಕಿದವರನ್ನು ಜನ ಕಿತ್ತು ತಿನ್ನುತ್ತಾರೆ. ಅವನಲ್ಲಿರುವ ಹಣ, ಆಸ್ತಿ, ಸಂಪತ್ತನ್ನೆಲ್ಲಾ ಕಿತ್ತುಕೊಳ್ಳುವರು. ಮರದಲ್ಲಿ ಬಿಟ್ಟಿರುವ ಹಣ್ಣುಗಳನ್ನು ಕಲ್ಲು ಹೊಡೆದು, ಕಿತ್ತು ತಿಂದಂತೆ. ಬೋಳು ಮರ ಮಾಡಿ ಎಲ್ಲಾ ಸೆಳೆದುಕೊಂಡು ದೂರ ಸರಿಯುತ್ತಾರೆ. ಸಮಾಜಕ್ಕಾಗಿ ದುಡಿಯುವ ವ್ಯಕ್ತಿ ತನ್ನ ಬಳಿ ಇರುವುದನ್ನೆಲ್ಲಾ ಕಳೆದುಕೊಂಡು ಬೋಳು ಮರದಂತಾಗುವನು. ಆಗ ಎಲ್ಲರ ವಿರೋಧ ಕಟ್ಟಿಕೊಂಡೇ ಮುಂದಡಿ ಇಡಬೇಕಾಗುವುದು.

ಎಲವದ ಮರನ ಇಡುವರೊಬ್ಬರ ಕಾಣೆ

ಎಲವದ ಮರವನ್ನು ಬೂರಗ, ಬೂರಲ, ದೂದಿ ಮರವೆಂದೂ ಕರೆಯುತ್ತಾರೆ. ಇದರಲ್ಲಿ ಬಿಡುವ ಹಣ್ಣಿನೊಳಗೆ ಯಾವುದೇ ಬಗೆಯ ರಸವಾಗಲಿ, ರುಚಿಯಾಗಲಿ ಇರುವುದಿಲ್ಲ. ಕೇವಲ ಅರಳಿ ಅಥವಾ ಹತ್ತಿಯಂತಹ ನೂಲಿನ ಎಳೆಗಳಿರುತ್ತವೆ. ನೋಡಲು ಫಲವತ್ತಾದ ಮರದಂತೆ ಕಂಡರೂ ಆಕರ್ಷಿಸುವುದಿಲ್ಲ. ಹಾಗಾಗಿ ಎಲವದ ಮರಕ್ಕೆ ಯಾರೊಬ್ಬರೂ ಕಲ್ಲು ಹೊಡೆಯುವುದನ್ನು ಕಾಣಲಾಗುವುದಿಲ್ಲ.

ಸಂಸಾರ ಮತ್ತು ಸಮಾಜದಲ್ಲಿ ಯಾರ ತಂಟೆಗೂ ಹೋಗದೆ, ಸ್ವಾರ್ಥಿಯಾಗಿ, ತನ್ನ ಪಾಡಿಗೆ ತಾನು ಬದುಕುವ ವ್ಯಕ್ತಿ ಎಲವದ ಮರವಿದ್ದಂತೆ. ಯಾರೂ ಆ ವ್ಯಕ್ತಿಯ ತಂಟೆಗೆ ಹೋಗುವುದಿಲ್ಲ. ಯಾವುದೇ ತರಹದ ಕಾಟಕ್ಕೊಳಗಾಗದೆ, ಹಿಂಸೆಯ ಮಾತೇ ಇಲ್ಲದಂತೆ ಕ್ರಮಿ, ಕೀಟ, ಹುಳ, ಹುಪ್ಪಡಿಯಂತೆ ಬದುಕುತ್ತಾನೆ ಸಾಯುತ್ತಾನೆ.

ಭಕ್ತಿಯುಳ್ಳವರ ಬಯ್ವರೊಂದು ಕೋಟಿ

ಭಕ್ತ ಮತ್ತು ಭವಿ ಈ ಎರಡು ಶಬ್ದಗಳಲ್ಲಿರುವ ವ್ಯತ್ಯಾಸವನ್ನು ಮೊದಲು ಅರಿಯಬೇಕು. ಶರಣರು ಬದುಕಿದ್ದ ಕಾಲ, ಸ್ಥಳ, ಕ್ರಿಯೆಯನ್ನು ಪರಿಗಣಿಸಬೇಕು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣ, ಅಲ್ಲಮ, ಸಿದ್ಧರಾಮ, ಚನ್ನಬಸವಣ್ಣ, ಅಕ್ಕನಾಗಮ್ಮ, ಮುಂತಾದ ಏಳುನೂರಾ ಎಪ್ಪತ್ತು ಶರಣ ಶರಣೆಯರೆಲ್ಲರ ದಾಖಲೆಗಳು ಲಭಿಸಿವೆ. ಅವರ ವಚನಗಳೇ ಅಂದಿನ ಅವರ ಬದುಕಿನ ರೀತಿ ನೀತಿಯನ್ನು ಬಿಂಬಿಸುತ್ತದೆ.

ಬಸವಣ್ಣ ತೋರಿಸಿದ ದಾರಿ ಅಂದರೆ ಶರಣ ಸಂಸ್ಕೃತಿಯ ಮಾರ್ಗದಲ್ಲಿ ಮುನ್ನಡೆದವರೆಲ್ಲ ಭಕ್ತರು. ಶರಣರ ನಡೆಯನ್ನು ಧಿಕ್ಕರಿಸಿ ಹೋದವರೆಲ್ಲ ಭವಿಗಳು. ಬದುಕಿಗೆ ಕಾಯಕ ದಾಸೋಹ ಮತ್ತು ವ್ಯಕ್ಕಿತ್ವಕ್ಕೆ *’ಅರವೇ ಗುರು’* ಎಂದು ಸಾರಿದವರು ಬಸವಣ್ಣ. ಕಲ್ಯಾಣದ ನೆಲೆಯಲ್ಲಿ, ಹನ್ನೆರಡನೇ ಶತಮಾನದ ಕಾಲದಲ್ಲಿ, ಶರಣ ಸಂಸ್ಕೃತಿ ಹುಟ್ಟು ಹಾಕಿದಾಗ ಈ ಭಕ್ತ ಮತ್ತು ಭವಿಯ ವ್ಯಾಖ್ಯಾನ ಹೀಗಿತ್ತು.

ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಸತ್ಪಾತ್ರ ವ್ಯಕ್ತಿಗಳು, ಶರಣರ ನಡೆನುಡಿಯುಳ್ಳವರನ್ನು ಭಕ್ತ ಜನರೆಂದು ಕರೆದು, ಅಂತಹ ಭಕ್ತರನ್ನು ಬೈಯುವವರು ಕೋಟಿ ಜನ ಇರುವರೆಂದು ಅಕ್ಕ ಈ ಸಾಲಿನಲ್ಲಿ ಹೇಳುತ್ತಾಳೆ.

ಸಾಮಾಜಿಕವಾಗಿ, ರಾಜಕೀಯವಾಗಿ, ಸಾಹಿತ್ಯಿಕವಾಗಿ, ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮುಂದಾದವರು ಬಸವಣ್ಣ. ವರ್ಗ, ವರ್ಣ ವ್ಯವಸ್ಥೆ ತೊಡೆದು, ಏಕದೇವೋಪಾಸನೆ, ಸ್ತೀ ಸಮಾನತೆ, ವೃತ್ತಿಯೇ ಜಾತಿ ಮತ್ತು ಕಾಯಕ, ಮುಂತಾದ ಬದಲಾವಣೆ ತರಲು ಯತ್ನಿಸಿದ ಸಮಾಜ ಸುಧಾರಕ ಬಸವಣ್ಣನವರನ್ನೇ ಗಡಿಪಾರಿಗೆ ಗುರಿಯಾಗಿಸಿದರು. ಅಂತೆಯೇ ಶಿಲುಬೆಗೇರಿದ ಏಸುಕ್ರಿಸ್ತ, ವಿಷ ಕುಡಿಸಲ್ಪಟ್ಟ ಸಾಕ್ರೆಟಿಸ್ ಮುಂತಾದವರು ಅದೇ ಸಾಲಿನಲ್ಲಿ ನೆನಪಾಗುವರು.

ಭಕ್ತಿಯಿಲ್ಲದವರ ಬಯ್ವರೊಬ್ಬರ ಕಾಣೆ

ಸಮಾಜದಲ್ಲೇ ಬದುಕಿದ್ದರೂ ತಮ್ಮಷ್ಟಕ್ಕೆ ಇರುವ ವ್ಯಕ್ತಿಗಳು ಸ್ವಾರ್ಥದ ನಡೆಯವರು. ಯಾವಾಗಲೂ ತಮ್ಮ ಸ್ವಾರ್ಥ ಆಲೋಚನೆಯಲ್ಲೇ ಮುಳುಗಿರುವವರು. ಅಂಥವರಿಗೆ ಬೈಯುವವರು ಒಬ್ಬರೂ ಸಿಗುವುದಿಲ್ಲ. ಎಲವದ ಮರವಿದ್ದಂತೆ. ಒಂದೇ ಒಂದು ಕಲ್ಲು ಹೊಡೆಯುವ ಮನಸ್ಸು ಯಾರೂ ಮಾಡುವುದಿಲ್ಲ.

ಪ್ರಸ್ತುತದ ಉದಾಹರಣೆಯೊಂದಿದೆ. ಅದು ರಾಜುವಿನ ಕತೆ. ಮೂವತ್ತು ವರ್ಷದ ವಿದ್ಯಾವಂತ ರಾಜು ದೂಡುವ ಗಾಡಿಯಲ್ಲಿ ಹಣ್ಣು ಮಾರುತ್ತಿದ್ದ.

ಒಂದು ದಿನ ಪ್ರಯತ್ನಪಟ್ಟು ವೀಸಾ, ಪಾಸ್ ಪೋರ್ಟ್ ಮಾಡಿಸಿಕೊಂಡು ದುಡಿಯಲು ಹೆಂಡತಿ ಮಕ್ಕಳನ್ನು ಬಿಟ್ಟು ದೂರದ ದುಬೈಗೆ ಹೋದ. ಸಾಕಷ್ಟು ಹಣ ಗಳಿಸಿ ಮತ್ತೆ ಹಿಂದಿರುಗಿದ.

ಆಗ ಜನರೆಲ್ಲ ಅವನ ಶ್ರೀಮಂತಿಕೆ ಮತ್ತು ಸಾಧನೆ ಕೊಂಡಾಡಿ ಸಮಾಜಿಕ ಕಾರ್ಯಗಳಿಗೆ ದೇಣಿಗೆ ಕೊಡಿಸಿದರು. ಇದನ್ನು ತಿಳಿದ ಅನೇಕ ಸಂಘಟನೆಯವರು ಅವನಿಗೆ ದುಂಬಾಲು ಬಿದ್ದರು. ಬಿಡೆಗೆ ಬಿದ್ದ ಆ ವ್ಯಕ್ತಿ ದಾನ ಮಾಡುತ್ತಲೇ ಹೋದ. ಎಷ್ಟು ಸೇವೆ ಮಾಡಿದನೆಂದರೆ ಅವನು ಮತ್ತೆ ದೂಡುವ ಗಾಡಿಯ ಮೇಲೆ ಹಣ್ಣು ಮಾರಲು ಆರಂಭಿಸಿದ.

ಫಲವತ್ತಾದ ಮರ ಬೋಳಾಗುವುದೆಂದರೆ ಹೀಗೆಯೇ ರಾಜುವಿನಂತೆ.‌ ಎಲವದ ಮರದ ತಂಟೆಗೆ ಯಾರೂ ಹೋಗಿವುದಿಲ್ಲ. ಭಕ್ತಿ ಇಲ್ಲದವರನ್ನು ಯಾರೂ ಕಾಡುವುದಿಲ್ಲ.

ನಿಮ್ಮ ಶರಣರ ನುಡಿಯೆ ಎನಗೆ ಗತಿ ಸೋಪಾನ
ಚೆನ್ನಮಲ್ಲಿಕಾರ್ಜುನಾ.

ಅಕ್ಕ ತನ್ನ ಮನದ ಮಾತನ್ನು ಹೇಳುತ್ತಾಳೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಉಡುತಡಿಯಲ್ಲಿದ್ದು ಶರಣರ ವಚನಗಳಿಂದ ಪ್ರೇರಣೆ ಪಡೆದು, ಉಟ್ಟ ಬಟ್ಟೆ ತೊಟ್ಟ ತೊಡುಗೆಯ ಧಿಕ್ಕರಿಸಿ, ‘ಕೇಶಾಂಬರೆವೇ ದಿವ್ಯಾಂಬರವೆನಗೆ’ ಎಂದು ಹೇಳುತ್ತ ಶರಣರ ಸನ್ನಿಧಿಗೆ ಹಾತೊರೆದು ಬಂದವಳು ಅಕ್ಕ. ‘ಶರಣರು ಆಡುವ ನುಡಿಗಳೇ ಮುಂದಿನ ಮಾರ್ಗವನ್ನು ತೋರುತ್ತದೆ ಎಂದು ನಂಬಿದವಳು.

ಅಯ್ಯಾ ನಿಮ್ಮ ಮಹಾನುಭಾವಿಗಳು ಎನ್ನ
ಒರೆದೊರೆದು ಆಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನ ನಿಮಗಾನು ತೊಡಿಗೆಯಾದೆನು.

ಅಕ್ಕನ ಅಭಿಪ್ರಾಯ. ಶರಣರ‌ ಸಂಗದಲ್ಲಿ ಮಹಾದೇವಿ ಪುಟಕ್ಕಿಟ್ಟ ಚಿನ್ನವಾಗಿ ಜಗದ ಅಕ್ಕನಾದಳು. ‘ಅಕ್ಕಮಹಾದೇವಿ’ ಎನಿಸಿಕೊಂಡಳು.

ಮಾನವ ಜನ್ಮ ಸಾರ್ಥಕವಾಗಲು ಶರಣರ ನುಡಿಗಳು ಅವಶ್ಯವಾಗಿ ಬೇಕೇ ಬೇಕು. ಅವರು ಸಾರಿದ ಸಂದೇಶ ಸದಾ ಕಾಲ ಮಾನ್ಯವಾದುದು. ಅದನ್ನೆಲ್ಲ ಜೀವನದಲ್ಲಿ ಅಳವಡಿಸಿಕೊಂಡು ಹಸನಾದ ದಿನಗಳನ್ನು ಕಳೆಯುವುದು ಸುಲಭ. ಬದುಕಿನಲ್ಲಿ ಮುಂದಡಿಯಿಡುವ ಪ್ರತಿ ಹೆಜ್ಜೆಗೂ ಮೆಟ್ಟಿಲುಗಳಂತೆ ಔನತ್ಯದೆಡೆಗೆ ಕೊಂಡೊಯ್ಯುತ್ತದೆ. ಅದು ಪ್ರತಿಯೊಬ್ಬರಿಗೂ ಅಗತ್ಯ ಕೂಡ ಹೌದೆಂದು ಅಕ್ಕ ಭಾವಿಸುತ್ತಾಳೆ.

ಸಿಕಾ ಕಲಬುರ್ಗಿ

Don`t copy text!