ಕಿತ್ತೂರ ಸಿರಿ
ಈ ಭೂಮಂಡಲದ
ಭೂಪರುಗಳೆಲ್ಲಾ
ಸಾರ್ವಭೌಮತ್ವವ ಮರೆತು
ಸರಕಾರದ ನೆತ್ತಿಗೆ
ಬೆಳ್ಗೊಡೆಯನಿಟ್ಟು
ಬಿಸಿಲನೇ ನೆರಳೆಂಬ
ಹುಚ್ಚಾಟದಲಿದ್ದಾಗ
ನೀನೊಬ್ಬಳು ಮಾತ್ರ
ಬೆಳ್ಗೊಡೆಯಡಿಯಲಿ
ಕುಳಿತ ಧೀರ ರಾಣಿ……
ಕಳೆಗೆಟ್ಟ ಭಾರತಿಯ
ಸ್ವಾಭಿಮಾನದ ಎದೆಗೆ
ನಿನ್ನ ಕತ್ತಿಯ ಹೊಳಪೇ ಬೆಳಕು
ರಣಭೂಮಿಯನೇ ಹಾಳಾಗಿಸಿ
ಮುಕುಟವಿರಿಸುವ
ಮುಡಿಯನುಮರೆತು
ಹುಡಿಯಾಳಾದ
ಈ ಕಿರೀಟಿಗಳಿಗೆಲ್ಲ
ಗುಲಾಮತನದ ಗುಂಗು
ಬಿಡಿಸಿದ
ಗಂಡೆದೆಯ ಸಿಡಿಗುಂಡು….
ಸೆಟ್ಟಿ ಮಲ್ಲಪ್ಪನ ಆಟವನು
ಕಡೆಗಣಿಸಿ,ಧೀರ ರಾಯಣ್ಣನ
ವೀರತನವನು ಸ್ಮರಿಸಿ
ಸೊಕ್ಕು-ದರ್ಪಗಳ ಗಣಿ
ಅಂಗ್ರೇಜಿಗರ ಥ್ಯಾಕರೆಯನು
ಕೆಕ್ಕರಿಸಿ ದಿಟ್ಟಿಸಿ
ಕತ್ತನು ಕತ್ತರಿಸಿದ
ಗಂಡುಗಚ್ಚೆಯ ನೀರೆ……
ಬಾ,ಬಾರೆ ತಾಯೆ….
ಕಿತ್ತೂರ ಸಿರಿ ಧಾರೆ
ಹಗೆಯ ಹರಿದ
ಹಯವನೇರಿದ
ಕರುನಾಡ ಧೀರೆ
-ಕೆ.ಶಶಿಕಾಂತ
ಲಿಂಗಸೂಗೂರ.