ಕಿತ್ತೂರು ಇತಿಹಾಸ ಭಾಗ 3
ಕಿತ್ತೂರು ಸಂಸ್ಥಾನಿಕರ ಮೂಲ ಸ್ಥಳ ಯಾವುದು ?
ಹಲವಾರು ಸಂಶೋಧಕರು ಸಾಹಿತಿಗಳು ಇತಿಹಾಸಕಾರರು ಕಿತ್ತೂರಿನ ಚರಿತ್ರೆಯ ಸಂದರ್ಭದಲ್ಲಿ ಕಿತ್ತೂರು ಅರಸೊತ್ತಿಗೆ ಅರಸರ ಮೂಲ ಸ್ಥಳವು ಇಂದಿನ ಶಿವಮೊಗ್ಗ ಜಿಲ್ಲೆಯ ಸಾಗರ ಪ್ರಾಂತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ ಹಾಗೂ ದಾಖಲಿಸಿದ್ದಾರೆ .ಆದರೆ ಇತ್ತೀಚಿನ ಅಧ್ಯಯನಗಳಲ್ಲಿ ಅದು ಶಿವಮೊಗ್ಗದ ಸಾಗರವಾಗಿರದೆ ಅದು ಇಂದಿನ ಕಲಬುರ್ಗಿ ಯಾದಗಿರಿ ಜಿಲ್ಲೆಯ ಸುರಪುರ ಜೇವರ್ಗಿ ಶಹಾಪುರ ಮತ್ತು ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೆಲ ಹಳ್ಳಿಗಳನ್ನು ಒಳಗೊಂಡ ಸಗರ ನಾಡು ಅಥವಾ ಸಗರ ಪ್ರಾಂತವೆಂದು ಈಗಲೂ ಕರೆಯುತ್ತಾರೆ .ಸಗರ ನಾಡಿನಲ್ಲಿ ಶರಣ ಐಕ್ಯಸ್ಥಲಗಳನ್ನು ಕಾಣುತ್ತೇವೆ . ಕಿತ್ತೂರಿನ ಅರಸೊತ್ತಿಗೆಯ ಹಿರೇ ಮಲ್ಲಶೆಟ್ಟಿ ಮತ್ತು ಚಿಕ್ಕ ಮಲ್ಲಶೆಟ್ಟಿ ಇವರು ಈ ಸಗರ ನಾಡಿನವರೆಂದು ತಿಳಿದು ಬರುತ್ತದೆ .
ಇಂತಹ ಮಹತ್ತರ ಅಭಿಪ್ರಾಯಕ್ಕೆ ಬರಲು ಬಲು ಮುಖ್ಯ ಕಿತ್ತೂರ ಇತಿಹಾಸದ ಬಗ್ಗೆ ಬರೆಯುತ್ತ ಶ್ರೀ ಕಲ್ಮೇಶ್ವರ ಚೆನ್ನಮಲ್ಲಪ್ಪ ಶ್ರೇಷ್ಠಿ ಇವರು ಹಿರೇ ಮಲ್ಲಶೆಟ್ಟಿ ಮತ್ತು ಚಿಕ್ಕ ಮಲ್ಲಶೆಟ್ಟಿ ಇವರು ಕಲ್ಬುರ್ಗಿ ಸೀಮೆಯಿಂದ ಬಂದು ವಿಜಯಪುರದ ಆದಿಲಶಾಹಿ ಬಾದಶರ ಜೊತೆಗೂಡಿ ದಂಡಿನ ಚಿನಿವಾಲರಾಗಿದ್ದರು ಎಂಬ ಅಂಶವು ಹೆಚ್ಚು ವಾಸ್ತವಿಕ ಎಂದೆನಿಸುತ್ತದೆ ಇನ್ನೊಂದು ಕಾರಣವೆಂದರೆ ಪ್ರೊ ಜ್ಯೋತಿ ಹೊಸೂರು ಅವರು ರಾಯಭಾಗ ಸಾಹಿತ್ಯ ಸಮ್ಮೇಳನದಲ್ಲಿ ಬರೆದ ಸಂಗೊಳ್ಳಿ ರಾಯಣ್ಣ ಚರಿತ್ರೆ ಸಂಶೋಧನೆ ಗ್ರಂಥದ ಕೆಲ ಭಾಗಗಳು ನನ್ನ ಊಹೆ ಮತ್ತು ಅಭಿಮತಕ್ಕೆ ಪುಷ್ಟಿ ನೀಡುತ್ತವೆ.
ಹೀಗಾಗಿ ಇಲ್ಲಿಯವರೆಗೆ ದಾಖಲೆಗೊಂಡ ಕೀತುರಿನ ಅರಸರ ಮೂಲಸ್ಥಳವು ಈಗ ಇಂದಿನ ಕಲಬುರ್ಗಿ ಯಾದಗಿರಿ ಜಿಲ್ಲೆಯ ಸುರಪುರ ಜೇವರ್ಗಿ ಶಹಾಪುರ ಮತ್ತು ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೆಲ ಹಳ್ಳಿಗಳನ್ನು ಒಳಗೊಂಡ ಸಗರ ನಾಡು ಅಥವಾ ಸಗರ ಪ್ರಾಂತವೆಂದು ನಿರ್ಧರಿಸಬಹುದು .
ಇನ್ನು ಕಾಲಕ್ಕೆ ಸಂಬಂಧಿಸಿದ ಹಾಗೆ ಹಲವು ಬೇರೆ ಬೇರೆ ದಾಖಲಾತಿಗಳು ಕಿತ್ತೂರಿನ ರಾಜ್ಯಾಡಳಿತದ ಬಗ್ಗೆ ಸಿಗುತ್ತವೆ .ಸಧ್ಯಕ್ಕೆ ಉಪಲಬ್ಧವಿರುವ ಕನ್ನಡದಲ್ಲಿರುವದಾಖಲೆಗಳ ಪ್ರಕಾರ 1585 ರಿಂದ ಕಿತ್ತೂರು ಆಡಳಿತವು ಸಂಪಗಾವದಲ್ಲಿ ಆರಂಭಗೊಂಡಿತು ಎಂಬ ಉಲ್ಲೇಖವಿದೆ .ಆದರೆ ಮರಾಠಿ “ಕಿತ್ತೂರ ರಾಜಾಚೆ ದೇಸಾಯಿ ವಂಶ” ಎಂಬ ಗ್ರಂಥದಲ್ಲಿ ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕ ಮಲ್ಲಶೆಟ್ಟಿ ಇವರು 1545 ರಿಂದ 1591 ರವರೆಗೆ ಸಂಪಗಾವದಲ್ಲಿ ರಾಜ್ಯಭಾರ ಮಾಡಿದರೆಂದು ಉಲ್ಲೇಖಿಸಿದ್ದಾರೆ . ಪ್ರೊ ಜ್ಯೋತಿ ಹೊಸುರ ಅವರ ಮತ್ತು ಇತರರ ಲೇಖನಗಳಲ್ಲಿ 1585 ರಿಂದ 1591 ವರೆಗೆ ಹಿರೇ ಮಲ್ಲಶೆಟ್ಟಿ ರಾಜ್ಯವಾಳಿದನು ಎಂದು ದಾಖಲೆಗೊಂಡಿದೆ .ನನ್ನ ಪ್ರಕಾರ ಯುವಕ ಅಣ್ಣ ತಮ್ಮಂದಿರರು 1545 ರಿಂದ 1591 ವರೆಗೆ ಅಂದರೆ ಸುಮಾರು 46 ವರುಷಗಳ ಕಾಲ ರಾಜ್ಯವಾಳಿರಬಹುದೆಂದು ಅಭಿಮತಕ್ಕೆ ಬರುತ್ತೇನೆ.ಕಾರಣ ಸಂಪಿಗವಕ್ಕೆ ಬರುವ ಮುನ್ನ ದೇಶಮುಖಿ ಪಹಣಿ ಪಡೆದ ಅವರು ಹುಬ್ಬಳ್ಳಿ ಅಥವಾ ಮುಗಟಖಾನ ಹುಬ್ಬಳ್ಳಿಯಲ್ಲಿದ್ದಾರೆಂದು ತಿಳಿದು ಬರುತ್ತದೆ.
ಅದಕ್ಕೆ ಬೇಕಾದ ತಾಮ್ರ ಪತ್ರಗಳು ದಾಖಲೆಗಳು ಸಿಗುತ್ತವೆ . ಪ್ರೊ ವಿ ಜಿ ಮಾರಿಹಾಳರು ಕಿತ್ತೂರಿನವರೇ ಆಗಿದ್ದು ಶ್ರೇಷ್ಠ ಶಿಕ್ಷಣ ತಜ್ಞರು. ಅವರ ಪ್ರಕಾರ ಕಿತ್ತೂರಿನ ರಾಜಮನೆತನದವರು ಸಂಪಗಾವದಲ್ಲಿ ರಾಜ್ಯ ಸ್ಥಾಪನೆ ಮಾಡುವ ಮೊದಲು ಹುಬ್ಬಳ್ಳಿಯಲ್ಲಿ ಇದ್ದರು ಎಂದು ತಿಳಿಸುತ್ತಾರೆ .ಅದು ಮುಗಟಖಾನ ಹುಬ್ಬಳ್ಳಿ ಇರಬಹುದೆಂದು ಪ್ರೊ ಜ್ಯೋತಿ ಹೊಸುರ ಅವರು ಅಭಿಪ್ರಾಯ ಪಟ್ಟರೂ ಸಹಿತ ಅದು ಇಂದಿನ ಹುಬ್ಬಳಿಯೇ ಆಗಿರಬಹುದು . ಇದಕ್ಕೆ ನಾನು ಕೊಡುವ ಕಾರಣವೆಂದರೆ ಇಂದಿನ ಹುಬ್ಬಳ್ಳಿಯ ಮೂರುಸಾವಿರ ಸಂಸ್ಥಾನಮಠ .
ಮೂರುಸಾವಿರ ಸಂಸ್ಥಾನ ಮಠವು ಇದೆ ಕಾಲಘಟ್ಟದಲ್ಲಿ ಹುಬ್ಬಳ್ಳಿಯಲ್ಲಿ ಸ್ಥಾಪನೆಗೊಂಡಿದ್ದು ಇದರ ಮೂಲ ಪುರುಷರು ಸಹಿತ ಲಿಂಗಾಯತ ಬಣಜಿಗ ಸಮಾಜಕ್ಕೆ ಸೇರಿದ ಗುರುಸಿದ್ದಪ್ಪ ಶೆಟ್ಟರೆಂದು ತಿಳಿದು ಬರುತ್ತದೆ ಅಲ್ಲದೆ ಕಿತ್ತುರು ಸಂಸ್ಥಾನವು ಹಾಳುಗೊಂಡ ಮೇಲೆ 1824 ರಿಂದ 1829 ವರೆಗೆ ಕಿತ್ತೂರು ವಾಡೆಯ ಕಟ್ಟಿಗೆಯನ್ನು ತಂದು ಹುಬ್ಬಳ್ಳಿಯ ಮೂರುಸಾವಿರಮಠ ಮತ್ತು ಅಂಕಲಗಿಯ ಅಡವಿ ಸಿದ್ದೇಶ್ವರ ಮಠಕ್ಕೆ ಕೊಟ್ಟು ಮತವನ್ನು ನವೀಕರಿಸಲಾಯಿತು ಎಂದು ತಿಳಿದು ಬರುತ್ತದೆ .
ಐತಿಹಾಸಿಕ ಚರಿತ್ರೆಯನ್ನು ನೋಡುವಾಗ ಅವಲೋಕನ ಮಾಡುವಾಗ ಅಧ್ಯಯನ ಮಾಡುವಾಗ ಸಂಶೋಧಕ ಯಾವುದೇ ಪೂರ್ವಗ್ರಹ ಪೀಡೆಗೆ ಒಳಪಡದೆ ವಿಶೇಷ ಕಾಳಜಿ ಜವಾಬ್ದಾರಿಯಿಂದ ವ್ಯಕ್ತಿಯ ಸ್ವಂತ ವಿವೇಚನೆಯಿಂದ ಸಮಕಾಲೀನ ಘಟನೆಗಳನ್ನು ದಾಖಲೆಗಳನ್ನು ಮತ್ತು ಜಾನಪದ ಮೌಖಿಕ ಹೇಳಿಕೆಗಳನ್ನು ಸಂಗ್ರಹಿಸಿ ತೌಲನಿಕ ಅಧ್ಯಯನ ಮಾಡಿ ವಾಸ್ತವಿಕ ಸತ್ಯಗಳನ್ನು ಸಾದರಪಡಿಸಬೇಕು .ಕಿತ್ತೂರಿನ ಇತಿಹಾಸವು ಇಂತಹ ಅನೇಕ ಸಂಗತಿಗಳನ್ನು ವಾಸ್ತವಿಕ ಆಧಾರದ ಮೇಲೆ ದಾಖಲಿಸದೆ ಕೃತಿಗಳ ಪುನರ್ ಅವಲೋಕನದ ಮೇಲೆ ಮೂಲ ವಿಷಯಕ್ಕೆ ಸಂಪೂರ್ಣ ಭಿನ್ನವಾಗಿ ಚಿತ್ರಿಸಿದ್ದು ಹಲವು ಸಲ ಮುಜಗರ ಮತ್ತು ತದ್ವಿರುದ್ಧವೆನಿಸುತ್ತದೆ . ಡಾ ಎಂ ಎಂ ಕಲಬುರ್ಗಿ ಗುರುಗಳು ತಮ್ಮ ಜೀವಿತದ ಕೊನೆಯ ಗಳಿಗೆಯಲ್ಲಿ ಕಿತ್ತೂರಿನ ಇತಿಹಾಸ ಮರು ಪರಿಶೀಲನೆ ವಿಮರ್ಶೆಗೆ ಮುಂದಾಗಿ ಹಲವು ಹೊಸ ಹೊಸ ವಿಷಯಗಳನ್ನು ಪ್ರಕಟಗೊಳಿಸಿದ್ದಾರೆ . ಕಾರಣ ಬಹುತೇಕರು ಕಿತ್ತೂರಿನ ಮೂಲ ಪುರಷರನ್ನು ಮೈಸೂರು ಪ್ರಾಂತದ ಶಿವಮೊಗ್ಗ ಜಿಲ್ಲೆಯ ಸಾಗರ ಊರಿನವರೇ ಎಂದು ದಾಖಲಿಸಿದ್ದಾರೆ . ವೆಂಕಟರಂಗೋ ಕಟ್ಟಿ ಮತ್ತು ಗ್ಯಾಝೆಟ್ಟಿಯಾರಗಳಲ್ಲಿ ಕಿತ್ತೂರಿನ ಮೂಲ ಪುರುಷರು ಕಲಬುರ್ಗಿ ಸೀಮೆಗೆ ಸೇರಿದ ಸಗರ ನಾಡಿನವರೆಂದು ಸ್ಪಷ್ಟವಾಗಿ ಹೇಳಲಿಲ್ಲ .ಹೀಗಾಗಿ ಒಬ್ಬರು ಸ್ಥಳ ನಿರ್ಧಾರ ಮಾಡಿದ ಮೇಲೆ ಅದನ್ನು ಮತ್ತೊಮ್ಮೆ ಪರಿಶೀಲಿಸುವ ಗೋಜಿಗೆ ನಮ್ಮ ಹಿರಿಯ ಸಂಶೋಧಕರು ಹೋಗದಿರುವುದು ಇಂತಹ ಒಂದು ದೊಡ್ಡ ಪ್ರಮಾದಕ್ಕೆ ಮತ್ತು ತಪ್ಪು ಗ್ರಹಿಕೆಗೆ ಕಾರಣವಾಗಿ ಮತ್ತೆ ಮತ್ತೆ ಇಂತಹ ತಪ್ಪು ಗ್ರಹಿಕೆಯು ಇತಿಹಾಸ ಪುಟದಲ್ಲಿ ಸೇರಿ ದಾಖಲಾಗಿದ್ದು ದುರಂತದ ಸಂಗತಿಯೆಂದು ಹೇಳಬಹುದು . ಸಧ್ಯವಂತೂ ಕಿತ್ತೂರು ಸಂಸ್ಥಾನದ ಮೂಲ ಪುರುಷರು ಕಲಬುರ್ಗಿ ಯಾದಗಿರಿ ಮುದ್ದೇಬಿಹಾಳ ಭಾಗಕ್ಕೆ ಸೇರಿದ ಸಗರ ಪ್ರಾಂತ್ಯಕ್ಕೆ ಸೇರಿದ ಬಣಜಿಗರೆಂದು ಪುರಾವೆ ಸಹಿತ ಪ್ರಮಾಣೀಕರಿಸಬಹುದು.
ದೇಶಗತಿಯನ್ನಾಳಿದ ಅರಸರ ಕಾಲ ನಿರ್ಣಯವು
ದೇಶಗತಿಯನ್ನಾಳಿದ ಅರಸರ ಕಾಲ ನಿರ್ಣಯವು ಅಷ್ಟೇ ಮುಖ್ಯವಾದ ಸಂಗತಿಯಾಗಿದೆ.ಕಾರಣ ಬೇರೆ ಬೇರೆ ಸಂಶೋಧಕರು ಬೇರೆ ಬೇರೆ ಅಭಿಮತವನ್ನು ವ್ಯಕ್ತಪಡಿಸಿ ಗೊಂದಲವನ್ನು ಸೃಷ್ಟಿಸಿದ್ದಾರೆ .ಕಾರಣ ಕಾಲ ನಿರ್ಣಯದ ಸಮಯದಲ್ಲಿ ವ್ಯಕ್ತಿಯ ಅಂದಾಜು ಆಯುಷ್ಯ ವಯಸ್ಸು ನಿರ್ಧರಿಸಬೇಕು . ಇದು ಖಚಿತತೆಯನ್ನು ಹೊಂದಲಾರದೆ ಇರುವದರಿಂದ ಅರಸರು ಆಳಿದ ಕಾಲಾವಧಿಯನ್ನು ಮತ್ತು ಅವರು ಆಳಿದ ಪ್ರದೇಶಗಳನ್ನು ಸ್ಪಷ್ಟವಾಗಿ ಗುರುತಿಸಬೇಕು .
ಹಿರೇಮಲ್ಲ ಶೆಟ್ಟಿ ಮತ್ತು ಚಿಕ್ಕ ಮಲ್ಲಶೆಟ್ಟಿ ಇವರು ಸಗರ ನಾಡಿನ ಯುವಕರು ವ್ಯಾಪಾರಕ್ಕೆಂದು ವಿಜಯಪುರದ ಆದಿಲಶಾಹಿ ಬಾದಶಹನ ಕಡೆಗೆ ಮುಂದೆ ಸೈನ್ಯದಲ್ಲಿ ತಮ್ಮ ಪರಾಕ್ರಮ ತೋರಿದ್ದಕ್ಕಾಗಿ ಇವರ ಶೌರ್ಯವನ್ನು ಮೆಚ್ಚಿ ಬಾದಶಹ ಈ ಯುವಕರಿಗೆ ಶಮಶೇರ ಜಂಗ ಬಹದ್ದೂರ ಎಂಬ ಬಿರುದು ನೀಡಿರುವುದನ್ನು ನೋಡಿದರೆ ಅವರ ಆವಾಗಿನ ವಯಸ್ಸು ಅಂದಾಜು ಮೂವತ್ತೈದು ( 35 ) ಅವರ ತಮ್ಮ ಚಿಕ್ಕಮಲ್ಲಶೆಟ್ಟಿ 32 ಇರಬಹುದು ಎಂದು ಒಂದು ಗ್ರಹಿಕೆಗೆ ಬರುವುದುಅ ಅಗತ್ಯ ಮತ್ತು ಅನಿವಾರ್ಯವಾದ ಸಂಗತಿ . 1585 -1591 ರ ವರೆಗೆ ಇವರಿಬ್ಬರು ಸಂಪಗಾವದಲ್ಲಿ ಅಳಿದರೆಂದು ಹೇಳಿದರೆ , ಇವರು ಜೀವಿತದ ಆಯುಸ್ಸು ಕೇವಲ 41 -45 ಎಂದಾಗುವುದು . ಹೀಗಾಗಿ ಪ್ರೊ ವಿ ಜಿ ಮಾರಿಹಾಳರು ತಮ್ಮ ಸಂಶೋಧನೆಯಲ್ಲಿ ದಾಖಲಿಸಿದಂತೆ ಸಂಪಗಾವಕ್ಕೆ ಬರುವ ಮೊದಲು ಅವರು ಹುಬ್ಬಳ್ಳಿಯಲ್ಲಿ ತಮ್ಮ ಸಂಸ್ಥಾನವನ್ನು ಆರಂಭಿಸಿ ಮುಂದೆ ಮುಗಟಖಾನ ಹುಬ್ಬಳ್ಳಿ ಆನಂತರ ಸಂಪಗಾವಕ್ಕೆ ಬಂದು ನೆಲೆಸಿದರು ಎಂದು ಹೇಳಿರುವದನ್ನು ನಾನು ಒಪ್ಪುತ್ತೇನೆ ಮತ್ತು ಅನುಮೋದಿಸತ್ತೇನೆ . ಕಾರಣ ಬಹುತೇಕ ಇತಿಹಾಸಕಾರರು ಮತ್ತು ಸಂಶೋಧಕರು ಸಂಪಗಾವದಲ್ಲಿನ ಕಾಲವನ್ನು ಮಾತ್ರ ನಿರ್ಧರಿಸಿ ಹಿರೇ ಮಲ್ಲಪ್ಪಶೆಟ್ಟಿ ಮತ್ತು ಚಿಕ್ಕ ಮಲ್ಲಪ್ಪಶೆಟ್ಟಿ ಇವರಿಬ್ಬರ ಉಳಿದ ಪರಗಣಿ ದೇಶಮುಖಿ ಕಾರ್ಯದ ಕಾಲವನ್ನು ಗಣನೆಗೆ ತೆಗೆದುಕೊಳ್ಳುವದಿಲ್ಲ . ಒಂದು ಅರ್ಥದಲ್ಲಿ ಇವರು ಆದಿಲಶಾಹಿ ಆಳುವ ಕೆಲ ಪ್ರದೇಶಗಳ ಸ್ವತಂತ್ರವಾದ ಉಸ್ತುವಾರಿ ವಹಿಸಿದ್ದರೆಂದು ಗಣನೆಗೆ ತಗೆದುಕೊಂಡರೆ ಅವರು 1545 ಕ್ಕೇನೆ ತಮ್ಮ ಸಣ್ಣ ಸಾಮ್ರಾಜ್ಯವನ್ನು ಸ್ಥಾಪಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ಆಳುತ್ತಾ ಸಂಪಗಾವಿ ಮತ್ತು ಕಿತ್ತೂರಿಗೆ ಬಂದು ನೆಲೆಸಿದರು ಎನ್ನುವುದು ಹೆಚ್ಚು ಸೂಕ್ತವೆನಿಸುತ್ತದೆ .ಇದಕ್ಕೆ ಪುರಾವೆ ಎನ್ನುವಂತೆ ಮರಾಠಿಯ ” ಕಿತ್ತೂರ ರಾಜಾಂಚೆ ದೇಸಾಯಿ ವಂಶ ” (कित्तूर राजांचे देसाई वंश )ಎಂಬ ಗ್ರಂಥದಲ್ಲಿ ಕಿತ್ತೂರು ರಾಜರ ವಂಶಾವಳಿಯನ್ನು ಉಲ್ಲೇಖಿಸಿದ್ದಾರೆ . ಕಿತ್ತೂರಿನ ಇತಿಹಾಸವು ಪೇಶ್ವೇಗಳ ಕಾಲದಲ್ಲಿ ಅಧಿಕೃತವಾಗಿ ದಾಖಲೆಗೊಂಡಿದ್ದರಿಂದ ಅದನ್ನು ನಾನು ಆಧಾರವಾಗಿ ತೆಗೆದುಕೊಂಡಿದ್ದೇನೆ .
ಇಲ್ಲಿ ಬೇರೆ ಬೇರೆ ರಾಜರ ಆಡಳಿತ ಅವರ ಸಂಬಂಧಗಳು ಮತ್ತು ಕಾಲಾವಧಿಯನ್ನು ಸ್ಪಷ್ಟವಾಗಿ ದಾಖಲಿಸಿರುವದರಿಂದ ನನಗೆ ಮರಾಠಿಯ ಗ್ರಂಥವು ಹೆಚ್ಚು ಸಹಕಾರಿಯಾಗಿದೆ ಎಂದು ಹೇಳಬಲ್ಲೆ . ಹೀಗಾಗಿ 1545 ರಿಂದ 1585 ರ ವರೆಗೆ ಅಂದರೆ ಸುಮಾರು ನಲವತ್ತು ವರುಷಗಳ ಕಾಲ ಹಿರೇ ಮಲ್ಲಪ್ಪಶೆಟ್ಟಿ ನಂತರ 1585 ರಿಂದ 1591 ರ ವರೆಗೆ ಚಿಕ್ಕಮಲ್ಲಪ್ಪಶೆಟ್ಟಿಯು ಸಂಪಗಾವನ್ನೊಳಗೊಂಡ ಬೇರೆ ಬೇರೆ ಪ್ರದೇಶಗಳಲ್ಲಿ ಆಡಳಿತ ನಡೆಸಿದರೆಂದು ತಿಳಿಯುತ್ತದೆ .
ಅರಸರು ಹೆಸರು ಆಳ್ವಿಕೆಯ ಕಾಲ ಆಳ್ವಿಕೆಯ ಅವಧಿ ಕೇಂದ್ರಸ್ಥಳ
1 ) ಹಿರೇಮಲ್ಲಪ್ಪಶೆಟ್ಟಿ 1545 ರಿಂದ 1585 40 ವರುಷಗಳು ಹುಬ್ಬಳ್ಳಿ ಮುಗಟಖಾನ ಹುಬ್ಬಳಿ
ಕೊನೆಗೆ ಸಂಪಗಾವಿ ( ತಾಲೂಕಾಗಿತ್ತು )
2 ) ಚಿಕ್ಕಮಲ್ಲಪಶೆಟ್ಟಿ 1585 ರಿಂದ 1591 6 ವರುಷಗಳು ಸಂಪಗಾವಿ
3 ) ಹಿರೇನಾಗನಗೌಡ ಪಟ್ಟಣಶೆಟ್ಟಿ 1591 ರಿಂದ 1633 43 ವರುಷ ಸಂಪಗಾವಿ
ಹಿರೇಮಲ್ಲಪ್ಪಶೆಟ್ಟಿಯ
ಹಿರಿಯ ಮಗ
4 ) ಚಿಕ್ಕನಾಗನಗೌಡ ಪಟ್ಟಣಶೆಟ್ಟಿ 1634 ರಿಂದ 1656 22 ವರುಷ ಸಂಪಗಾವಿ
ಹಿರೇಮಲ್ಲಪ್ಪಶೆಟ್ಟಿಯ
ಕಿರಿಯ ಮಗ
5 ) ಚನ್ನಪ್ಪ ಬಿಚ್ಚಗತ್ತಿ ದೇಸಾಯಿ 1656 ರಿಂದ 1660 04 ವರುಷ ಸಂಪಗಾವಿ
ಹಿರೇಮಲ್ಲಪ್ಪಶೆಟ್ಟಿಯ
ಮೊಮ್ಮಗ
6 ) ಅಲ್ಲಪ್ಪಗೌಡ ಸರದೇಸಾಯಿ 1660 ರಿಂದ 1682 22 ವರುಷ ಸಂಪಗಾವಿ
ಮುಂದೆ ಅಲ್ಲಪ್ಪಗೌಡ ಸರದೇಸಾಯಿಯು ತನ್ನ ರಾಜ್ಯವನ್ನು ಕಿತ್ತೂರಿಗೆ ಸ್ಥಳಾಂತರಿಸಿದನೆಂದು ಮತ್ತು ಕಿತ್ತೂರಿನಲಿ ಭದ್ರವಾದ ಕೋಟೆಯನ್ನು ಕಟ್ಟಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ .
7 ) ಅಲ್ಲಪ್ಪಗೌಡ ಸರದೇಸಾಯಿ 1682 ರಿಂದ 1691 09 ವರುಷ ಕಿತ್ತೂರು
8 ) ಮುದಿಮಲ್ಲಪ್ಪಗೌಡ 1691 ರಿಂದ 1696 05 ವರುಷ ಕಿತ್ತೂರು
ಸರದೇಸಾಯಿ
( ಮೂರು ಜನ ಮಕ್ಕಳು )
9 ) ಚಿಕ್ಕಮಲ್ಲಪ್ಪ ದೇಸಾಯಿ 1696 ರಿಂದ 1717 21 ವರುಷ ಕಿತ್ತೂರು
ಅಲ್ಲಪ್ಪಗೌಡ ಸರದೇಸಾಯಿ
ಇವರ ಮೊಮ್ಮಗ
10 ) ಶಿವನಗೌಡ ಸರದೇಸಾಯಿ 1717 ರಿಂದ 1734 17 ವರುಷ ಕಿತ್ತೂರು
ಮುದಿಮಲ್ಲಪ್ಪಗೌಡ
ಇವರ ಮೊಮ್ಮಗ
11 ) ಮಲರುದ್ರಗೌಡ ದೇಸಾಯಿ 1734 ರಿಂದ 1749 15 ವರುಷ ಕಿತ್ತೂರು
ಅಲಿಯಾಸ (ಫಕೀರರುದ್ರಸರ್ಜ ದೇಸಾಯಿ )
12 ) ವೀರಪ್ಪಗೌಡ ಸರದೇಸಾಯಿ 1749 -1782 33 ವರುಷ ಕಿತ್ತೂರು
13 ) ಮಲ್ಲಸರ್ಜ ಪ್ರತಾಪರಾವ್ 1782 ರಿಂದ 1816 34 ವರುಷ ಕಿತ್ತೂರು
ಸರದೇಸಾಯಿ
14 ) ಶಿವಲಿಂಗ ರುದ್ರ ಸರ್ಜ 1816 ರಿಂದ 1824 08 ವರುಷ ಕಿತ್ತೂರು
15 ) ರಾಣಿ ಚೆನ್ನಮ್ಮ 1824 -1824 01 ವರುಷ ಕಿತ್ತೂರು
ಕಿತ್ತೂರಿನ ಯುದ್ಧದ ನಂತರ ನಡೆದ ಕೋಟೆಯ ಮೇಲಿನ ಅತಿಕ್ರಮಣ ಮತ್ತು ನಿರಂತರವಾಗಿ ಐದು ತಿಂಗಳುವರೆಗೆ ಕಿತ್ತೂರು ಕೋಟೆಯ ಅನೇಕ ಪ್ರಮುಖ ದಾಖಲೆಗಳು ಬ್ರಿಟಿಷರ ಕೋಪದ ಬೆಂಕಿಗೆ ಸುತ್ತು ಕರಕಲಾದವು .
ಮೇಲೆ ದಾಖಲಿಸಿದ ಅರಸ ಅರಸಿಯರು ಕಿತ್ತೂರು ಸಮಗ್ರ ಅಭಿವೃದ್ಧಿ ರಾಜ್ಯ ಭಾರ ಮಾಡುತ್ತಾ ಒಂದು ಕಡೆಗೆ ಪೇಶ್ವಗಳು ಮರಾಠರು ಇನ್ನೊಂದು ಕಡೆಗೆ ಬ್ರಿಟಿಷರ ಆಕ್ರಮಣದ ಎದುರು ಸೆಟೆದು ನಿಂತು ಅವುಗಳನ್ನು ಬಗ್ಗು ಬಡೆಯುವಲ್ಲಿ ಯಶವನ್ನು ಕಂಡರು. ಕಿತ್ತೂರು ಕೊನೆಯ ಯುದ್ಧದಲ್ಲಿ ರಾಣಿ ಚೆನ್ನಮ್ಮಳ ಕೌಶಲ್ಯ ಯುದ್ಧ ನೀತಿ ಅದ್ಭುತವಾಗಿತ್ತು . ಅರಬರ ಮರಾಠರ ಪೇಶ್ವೇಗಳ ಸಹಾಯವನ್ನು ಪಡೆದು ಬ್ರಿಟಿಷರ ವಿರುದ್ಧ ರಣಚಂಡಿಯಾಗಿ ಯುದ್ಧ ಮಾಡಿದಳು ರಾಣಿ ಚೆನ್ನಮ್ಮ .
ಕಿತ್ತೂರು ಸಂಸ್ಥಾನಿಕರು ಹುಬ್ಬಳ್ಳಿಯಿಂದ ಮುಗುಟಖಾನ ಹುಬ್ಬಳ್ಳಿ ಮುಂದೆ ಸಂಪಗಾವ ಕೊನೆಗೆ ಕಿತ್ತೂರ ಕಡೆಗೆ ಪಯಣ ಬೆಳೆಸಿ ಕಿತ್ತೂರು ಭದ್ರ ಕೋಟೆ ಕಟ್ಟಿ ಸುದೀರ್ಘ ಆಡಳಿತ ನೀಡಿದ ರಾಜಮನೆತನದ ಶೌರ್ಯ ಭಾರತೀಯ ಇತಿಹಾಸದಲ್ಲಿ ಅಗ್ರವಾಗಿ ದಾಖಲಾಗಬೇಕಿತ್ತು . ಆದರೆ ಇತಿಹಾಸದ ಪುರಾವೆಗಳು ದಾಖಲೆಗಳ ನಾಶವಾದ ಮೇಲೆ ಕಿತ್ತೂರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಮರೆತ ಅಧ್ಯಾಯವಾಗಿದ್ದು ದುರಂತದ ಸಂಗತಿಯಾಗಿದೆ.
ಮುಂದಿನ ಸಂಚಿಕೆಯಲ್ಲಿ ಸಂಪಗಾವಿಯಿಂದ ಕಿತ್ತೂರಿಗೆ ಬಂದ ಬಗೆ ಹಾಗೂ ಕಿತ್ತೂರು ಸಂಸ್ಥಾನದ ಅರಸರ ವಿವಿಧ ಕೊಡುಗೆ ವೈಶಿಷ್ಟ್ಯಗಳ ಬಗ್ಗೆ ಚರ್ಚಿಸೋಣ .ಕಿತ್ತೂರು ಇತಿಹಾಸದ ಮೇಲೆ ಹೊಸಬೆಳಕು ಎಂಬ ಲೇಖನವು ಯಾವುದೇ ಲಿಂಗಾಯತ ಉಪಪಂಗಡದವರ ಮನವನು ನೋಯಿಸುವ ಪ್ರಯತ್ನವಾಗಿರದೆ .ಒಟ್ಟು ಲಿಂಗಾಯತರ ಸಾಧನ ಹಾಗೂ ಎಲ್ಲ ಲಿಂಗಾಯತ ಉಪಪಂಗಡದವರು ಸಹ ಬಾಳ್ವೆ ಸಹಕಾರದಿಂದ ಬದುಕಲಿ ಎಂಬ ಆಶಯವನ್ನು ಲೇಖಕರು ಪ್ರಕಾಶಕರು ಮತ್ತು ಸಂಪಾದಕರು ಹೊಂದಿದ್ದಾರೆ. ಇತಿಹಾಸವನ್ನು ಮತ್ತೊಮ್ಮೆ ಪರಿಶೀಲಿಸುವ ಕಾರ್ಯವು ನಮ್ಮ ನಿಮ್ಮೆಲ್ಲರದಾಗಲಿ
–ಡಾ.ಶಶಿಕಾಂತ ಪಟ್ಟಣ ರಾಮದುರ್ಗ, ಪುಣೆ
9552002338
_————————————————————————-ಮಾನ್ಯ ಓದುಗರಲ್ಲಿ ವಿನಂತಿ,
ಪುಣೆಯ ಡಾ.ಶಶಿಕಾಂತ ಪಟ್ಟಣ ಅವರು *ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು*
ಎಂಬ ಸರಣಿ ಲೇಖನ ಪ್ರಕಟವಾಗಲಿದೆ..
ಓದುಗರು ಪ್ರಾಂಜ್ವಲ ಮನಸ್ಸಿನಿಂದ ಓದಿ, ಈ ಲೇಖನ ಸರಣಿ ಮುಗಿದ ಮೇಲೆ ಓದುಗರಿಗೆ ಸಂಶಯ, ಅನುಮಾನ, ಹೆಚ್ಚಿನ ಚಿಂತನೆಯ ಚರ್ಚೆಯ ವಿಷಯಗಳಿದ್ದರೆ ಲೇಖಕರೊಂದಿಗೆ ಚರ್ಚಿಸಿ. ಲೇಖಕರ ದೂರವಾಣಿ ನಂ-9552002338
-ಸಂಪಾದಕ
ವಿಶೇಷ ಸೂಚನೆ
copy rights resrved(ಇಲ್ಲಿನ ಎಲ್ಲ ಬರಹಗಳೂ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ.) ಈಬರಹಗಳ ಎಲ್ಲಾ ಅಭಿಪ್ರಾಯಗಳೂ ಲೇಖಕರ ವೈಯುಕ್ತಿಕ ಅಭಿಪ್ರಾಯಗಳಾಗಿದ್ದು,e-ಸುದ್ದಿ ಬ್ಲಾಗ್ ಅದಕ್ಕೆ ಹೊಣೆಯಾಗಿರುವುದಿಲ್ಲ
-ಸಂಪಾದಕ