ದೇಶಗತಿ ಆಡಳಿತವು ಸಂಪಗಾವದಿಂದ ಕಿತ್ತೂರಿಗೆ ಸ್ಥಳಾಂತರ

ಕಿತ್ತೂರು ಇತಿಹಾಸ ಭಾಗ 4

ದೇಶಗತಿ ಆಡಳಿತವು ಸಂಪಗಾವದಿಂದ ಕಿತ್ತೂರಿಗೆ ಸ್ಥಳಾಂತರ

ಈ ಹಿಂದಿನ ಸಂಚಿಕೆಯಲ್ಲಿ ಕಿತ್ತೂರು ದೇಶಗತಿ ಆಡಳಿತ ಕಾಲಾವಧಿ ಮತ್ತು ಅರಸರ ವಂಶಾವಳಿಯನ್ನು ವಿವರವಾಗಿ ಹಾಗು ಆಧಾರಸಹಿತ ಅಧಿಕೃತವಾಗಿ ಸಾಧಾರ ಪಡಿಸಲಾಗಿದೆ . ಕಿತ್ತೂರಿನ ಇತಿಹಾಸ ಮತ್ತು ಚರಿತ್ರೆಯನ್ನು ಅಧ್ಯಯನ ಮಾಡುತ್ತಾ ಹೋದಂತಲೆಲ್ಲ ಬಗೆ ಬಗೆಯ ಹೊಸ ಹೊಸ ವಿಚಾರಗಳು ಹೊಸ ಸಂಶೋಧನೆಗೆ ಸುಳುಹು ನೀಡುತ್ತವೆ .

ಪ್ರಸಕ್ತ ಲೇಖನವು ಕಿತ್ತೂರು ಸಂಸ್ಥಾನದ ಆಳರಸರು ಪಟ್ಟಣಶೆಟ್ಟಿ ಮನೆತನದಿಂದ ಸರ್ ದೇಸಾಯಿ ಎಂದಾದದ್ದು ಹೇಗೆ ? ಮತ್ತು ಕಿತ್ತೂರಿನ ಸಂಸ್ಥಾನವು ತನ್ನ ಆಡಳಿತ ಕೇಂದ್ರವಾದ ಸಂಪಗಾವಿ ಮತ್ತು ಮುಗುಟಖಾನ ಹುಬ್ಬಳ್ಳಿ ಮತ್ತು ಆರಂಭದ ಹಂತದಲ್ಲಿ ಇಂದಿನ ಹುಬ್ಬಳ್ಳಿಯಲ್ಲಿ ದೇಶಮುಖಿ ಮಾಡುತ್ತಿದ್ದಾರೆಂದು ಬೇರೆ ಬೇರೆ ಸಂಶೋಧಕರ ಅಭಿಪ್ರಾಯಗಳ ಆಧಾರದ ಮೇಲೆ ನಿರ್ಣಯಕ್ಕೆ ಬರಲಾಗಿದೆ .ಇದಕ್ಕೆ ಪೂರಕವಾದ ದಾಖಲೆ ಮತ್ತು ಪುರಾವೆಗಳನ್ನು ಒದಗಿಸುವುದು . ಕೊನೆಯದಾಗಿ ಆಡಳಿತ ಕೇಂದ್ರವಾದ ಸಂಪಗಾವಿಯಿಂದ ಕಿತ್ತೂರು ( ಗೀಜಗನಹಳ್ಳಿಗೆ ) ಸ್ಥಳಾಂತರವಾದ ರೋಚಕ ಸಂಗಾತಿಯ ವಿಷಯವನ್ನು ತಿಳಿಯೋಣ .

ಕಿತ್ತೂರಿನ ಇತಿಹಾಸದ ಪುನರ್ ಅವಲೋಕನ ಪರಿಶೀಲನೆ ಒಂದು ಕಷ್ಟಕರವಾದ ಸವಾಲಾಗಿದೆ .ಕಾರಣ ಕಿತ್ತೂರಿನ ದೇಶಗತಿ ಅನೇಕ ದಾಖಲೆಗಳು ನಾಶವಾದ ಹಿನ್ನೆಲೆಯಲ್ಲಿ ನೈಜ ಮತ್ತು ಸತ್ಯಕ್ಕೆ ಹತ್ತಿರವಾದ ಸಂಗತಿಗಳು ಚರಿತ್ರೆ ಇತಿಹಾಸದಲ್ಲಿ ಬಿಂಬಿಸಲಾಗಲಿಲ್ಲ. ನಾನು ವೃತ್ತಿಯಲ್ಲಿ ವೈದ್ಯಕೀಯ ಔಷಧ ವಿಜ್ಞಾನದ ಸಂಶೋಧಕನಾದರೂ ಸಹಿತ ಪ್ರವೃತ್ತಿಯಲ್ಲಿ ಸಾಹಿತ್ಯ ವಚನ ಚಳುವಳಿ ಇತಿಹಾಸದ ಬಗ್ಗೆ ಆಳವಾಗಲಿ ಓದಿಕೊಂಡು ಓದುವಿನ ಅಧ್ಯಯನವನ್ನು ನನ್ನಷ್ಟಕ್ಕೆ ಸೀಮಿತಗೊಳಿಸಿದವನು . ಸಾಹಿತ್ಯ ಚಿಂತನೆ ಮತ್ತು ಇತಿಹಾಸ ಸಂವಾದದಲ್ಲಿ ಅನೇಕ ಬಾರಿ ಕೆಲ ತಪ್ಪು ಗ್ರಹಿಕೆಗಳು ಸಂಶೋಧಕರಿಂದ ಸಾಹಿತಿಗಳಿಂದ ಉಂಟಾದಾಗ ಅವರೊಂದಿಗೆ ಶಾಂತಯುತವಾಗಿ ಚರ್ಚಿಸಿ ಸಲಹೆ ಸೂಚನೆ ನೀಡಿದ ಅನುಭವ ಮತ್ತು ಪ್ರಾಮಾಣಿಕತೆ ನನ್ನಲ್ಲಿ ಇತ್ತು.

ಕಿತ್ತೂರಿನ ಇತಿಹಾಸದ ಸತ್ಯ ಸಂಗತಿಗಳ ಬಗ್ಗೆ ನಿರಂತರವಾಗಿ ಧಾರಾವಾಹಿ ಸಂಚಿಕೆ ರೂಪದಲ್ಲಿ ಪ್ರಕಟಿಸಬೇಕೆಂಬ ಹಂಬಲ ಹಠ ಮತ್ತು ಛಲ ಶ್ರೀ ರುದ್ರಣ್ಣ ಹೊಸಕೇರಿ ಬಣಜಿಗ ಬಂಧು ಸಂಪಾದಕರದ್ದಾಗಿತ್ತು . ಅನೇಕ ಮಿತ್ರರ ಒತ್ತಾಯ ಲಿಂಗಾಯತ ಅನೇಕ ಸಮಾಜ ಬಂಧುಗಳ ಪ್ರೇರಣೆ, ಅನೇಕ ಸಂಶೋಧಕರ ಪ್ರೋತ್ಸಾಹ ಮತ್ತು ಪ್ರೀತಿಯಿಂದಾಗಿ ಕಿತ್ತೂರಿನ ಇತಿಹಾಸದ ಸತ್ಯ ಸಂಗತಿಗಳ ಅನಾವರಣ ಮತ್ತು ಪರಿಚಯಿಸುವ ಪ್ರಾಮಾಣಿಕ ಕೆಲಸಕ್ಕೆ ನಾನು ಒಪ್ಪಿಕೊಂಡೆನು.

ನಾನು ಹೇಳಿದ ಅನೇಕ ವಿಷಯಗಳನ್ನು ಪ್ರೀತಿಯಿಂದ ಸ್ವಾಗತಿಸಿದ ಒಬ್ಬರೋ ಇಬ್ಬರೋ ಕೆಲ ಸಂದೇಹಗಳನ್ನು ನಿವಾರಿಸಿಕೊಳ್ಳಲು ಫೋನಾಯಿಸಿ ತಮ್ಮ ಗ್ರಹಿಕೆಗಳನ್ನು ಸರಿಪಡಿಸಿಕೊಂಡರು. ಸಂಶೋಧನೆ ತುಂಬಾ ಕಷ್ಟದ ಕೆಲಸ ಸತ್ಯದ ಪರಿಚಯವಾದಂತೆ ಸಂಪ್ರದಾಯ ಮನಸುಗಳು ಸಂಶೋಧಕನನ್ನು ಒಂಟಿ ಮಾಡುತ್ತವೆ ಶಿಲುಬೆಗೆ ಏರಿಸುತ್ತವೆ ಅಂತಹ ಘಟನೆಗಳು ನನ್ನ ಪ್ರೀತಿಯ ಗುರುಗಳು ಶ್ರೇಷ್ಠ ಸಂಶೋಧಕರಾದ ಡಾ ಎಂ ಎಂ ಕಲಬುರ್ಗಿ ಅವರ ಜೀವನದಲ್ಲಿ ನಡೆದಿವೆ ಅಷ್ಟೇ ಅಲ್ಲ ಅವರ ನೇರ ನಡೆ ನುಡಿಗಳನಿಂದಾಗಿ ಅವರು ಹುತಾತ್ಮರಾದರು.

ಇಂತಹ ಒಂದು ಭಯದ ವಾತಾವರಣದಲ್ಲಿ ಕನ್ನಡ ಮತ್ತು ಇತಿಹಾಸದ ಸಂಶೋಧಕನಲ್ಲದ ನನ್ನ ವಿಚಾರಗಳನ್ನು ನಮ್ಮವರು ಹೇಗೆ ಒಪ್ಪಿಕೊಳ್ಳುವರು ಎಂಬ ಅಳಕು ಮತ್ತು ಆತಂಕ ಸ್ವಲ್ಪ ಮಟ್ಟಿಗೆ ನನ್ನಲ್ಲಿ ಮನೆ ಮಾಡಿತ್ತು . ಆದರೆ ಕಿತ್ತೂರಿನ ಇತಿಹಾಸದ ಹೊಸಬೆಳಕು ಮೂರನೆಯ ಸಂಚಿಕೆ ಬಣಜಿಗ ಬಂಧುವಿನಲ್ಲಿ ಪ್ರಕಟವಾದ ಮೇಲೆ ಜನರ ಹರ್ಷ ಪ್ರೀತಿ ಅಭಿಮಾನಗಳು ಎಲ್ಲೇ ಮೀರುವಂತಾಗಿತ್ತು . ನನಗೂ ಹಾಗೂ ಸಂಪಾದಕ ಶ್ರೀ ರುದ್ರಣ್ಣ ಹೊಸಕೇರಿ ಅವರಿಗೆ ಫೋನ್ ಕರೆಗಳ ಸುರಿಮಳೆ ಆರಂಭವಾಗಿತ್ತು . ಇದನ್ನು ಮರು ಮುದ್ರಣಕ್ಕೆ ಮುಂದಾದ ಶ್ರೀ ವೀರೇಶ್ ಸೌದ್ರಿ ಸಂಪಾದಕರು ಈ ಸುದ್ಧಿ ಅವರು ಕೂಡಾ ಸತ್ಯದ ಅನ್ವೇಷಣೆಯಾಗಬೇಕು, ನೀವು ಬರೆಯಿರಿ ಎಂದು ಹುರುದುಂಬಿಸಿದರು. ಗೋಕಾಕದ ಗಿರೀಶ್ ಉದೋಷಿ ಮುಗುಟ ಖಾನ ಹುಬ್ಬಳ್ಳಿಯ ಸಂತೋಷ ಸಂಬಣ್ಣವರ ಹುಬ್ಬಳ್ಳಿಯ ಶಿವಬಸಪ್ಪ ಕೋರಿ ಮತ್ತು ಡಾ ಶಿವಬಸಪ್ಪ ಹೆಸರೂರು ಮುಂತಾದ ಅನೇಕ ಮಹಿನಿಯರ ನಿರಂತರ ಒತ್ತಾಯ ಮತ್ತು ಕುತೂಹಲ ಜೊತೆಗೆ ಸತ್ಯದ ಅನಾವರಣ ಗೊಳಿಸುವ ಒಂದು ಪ್ರಾಮಾಣಿಕ ಪ್ರಯತ್ನವು ಇದಾಗಿದೆ.

ಸ್ನೇಹಿತ ಶ್ರೀ ಮಹೇಶ ಚೆನ್ನಂಗಿಯವರು ಕೂಡಾ ಫೋನ್ ಮಾಡಿ ವೀರಮ್ಮನ ತವರು ಮನೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದರು.ಸಂಶೋಧನೆಯು ಒಂದು ನಿರಂತರ ಪ್ರಕ್ರಿಯೆ ಕೇವಲ ಎರಡುನೂರು ವರುಷಗಳ ಹಿಂದೆ ನಡೆದ ಬ್ರಿಟಿಷರ ವಿರುದ್ಧ ಅಭೂತಪೂರ್ವ ಯಶವನ್ನು ಕೇವಲ ಒಂದು ಉಪಪಂಗಡಕ್ಕೆ ಕಟ್ಟಿ ಅದನ್ನು ವೈಭವೀಕರಿಸುವ ಉದ್ದೇಶವಲ್ಲ .ಅಕ್ಕ ಮಹಾದೇವಿ ರಾಣಿ ಚೆನ್ನಮ್ಮ ಕೆಳದಿ ಚೆನ್ನಮ್ಮ ಬೆಳವಾಡಿ ಮಲ್ಲಮ್ಮ ಇವರನ್ನು ಒಂದು ಪಂಗಡಕ್ಕೆ ಸೇರಿಸಿ ಅವರ ದೊಡ್ಡ ತ್ಯಾಗ ಬಲಿದಾನ ನಾವೇ ಕುಳಿತು ಚಿಕ್ಕದಾಗಿ ಮಾಡಬಾರದು.

ಇಂದಿನ ವಿಷಮ ಪರಿಸ್ಥಿತಿಯಲ್ಲಿ ಕಿತ್ತೂರು ಹೋರಾಟ ಭಾರತದ ನೆಲದಲ್ಲಿ ಗುಲಾಮಗಿರಿಯ ವಿರುದ್ಧ ನಡೆದ ಅಭೂತಪೂರ್ವ ಸಂಘರ್ಷ ಮತ್ತು ಯಶವು ಎಂದು ಮಾತ್ರ ನಾವು ಪರಗಣಿಸಬೇಕು.

ಕಿತ್ತೂರಿನ ಅರಸರ ವಂಶಾವಳಿ ,ಆಳರಸರ ಕಾಲಾವಧಿ ಮತ್ತು ಅವರ ಪರಸ್ಪರ ಸಂಬಂಧಗಳು ವಿವರವಾಗಿ ಕೊಟ್ಟಿದ್ದೇನೆ . ಇದರಿಂದ ನಾನು ಕೈಕೊಂಡ ಅಧ್ಯಯನ ಮತ್ತು ಸಂಶೋಧನೆಯ ಅನೇಕ ಹೊಸ ವಿಷಯಗಳನ್ನು ದಾಖಲಿಸುವಲ್ಲಿ ನನ್ನ ಮನೋ ಸ್ಥೈರ್ಯವನ್ನು ಹೆಚ್ಚಿಸಿತು. ಆದರೂ ಓದುಗರ ಕೆಲ ಕುತೂಹಲಕಾರಿ ಪ್ರಶ್ನೆಗಳು ನನ್ನನ್ನು ಸಂಶೋಧನೆಯ ವಿಸ್ತಾರಕ್ಕೆ ಮತ್ತೆ ತೊಡಗಿಸುವಂತೆ ಮಾಡಿತ್ತು . ಅಂತಹ ಪ್ರಮುಖ ಪ್ರಶ್ನೆಗಳೆಂದರೆ “ಕಿತ್ತೂರು ಸಂಸ್ಥಾನದ ಆಳರಸರು ಪಟ್ಟಣಶೆಟ್ಟಿ ಮನೆತನದಿಂದ ಸರ್ ದೇಸಾಯಿ ಎಂದಾದದ್ದು ಹೇಗೆ ?”

“ಕಿತ್ತೂರು ಸಂಸ್ಥಾನದ ಆಳರಸರು ಪಟ್ಟಣಶೆಟ್ಟಿ ಮನೆತನದಿಂದ ದೇಸಾಯಿ ಮತ್ತು ಸರ್ ದೇಸಾಯಿ ಆದದ್ದು ಹೇಗೆ “?

ಕಿತ್ತೂರು ಮೂಲಪುರುಷರು ಇಂದಿನ ಯಾದಗಿರಿ ಜಿಲ್ಲೆಯ ಸಗರ ನಾಡಿನ ಬಣಜಿಗ ಲಿಂಗಾಯತ ವ್ಯಾಪಾರಸ್ಥರು ಎಂದು ಈಗಾಗಲೇ ತಿಳಿದು ಬಂದಿದೆ . ಸಂಸ್ಥಾನದ ಸ್ಥಾಪಕರಾದ ಹಿರೇಮಲ್ಲಪ್ಪಶೆಟ್ಟಿ ಮತ್ತು ಚಿಕ್ಕ ಮಲ್ಲಪ್ಪಶೆಟ್ಟಿ ಎಂಬ ಯುವಕರು ವೀರ ಯೋಧರು ವ್ಯಾಪಾರಿಗಳು ಆದಿಲಶಾಹಿ ದೊರೆಗಳ ಪ್ರೀತಿಗೆ ಪಾತ್ರರಾಗಿ ದೇಶಮುಖಿ ಪಹರೆ ಪಡೆದು ಕೆಲ ಕಂದಾಯ ಹಳ್ಳಿಗಳನ್ನು ಉಸ್ತುವಾರಿ ಮಾಡುತ್ತಿದ್ದರು. ಮೂಲತಃ ಇವರು ವ್ಯಾಪಾರಿಗಳು ಇವರ ಮನೆಯ ಅಡ್ಡ ಹೆಸರು ಅಥವಾ ಮನೆತನದ ಹೆಸರು ಪಟ್ಟಣಶೆಟ್ಟಿ. , ಸಂಪಗಾವ ಆಡಳಿತ ಕೇಂದ್ರ ಆದಾಗ
ಪಟ್ಟಣಶೆಟ್ಟಿ ಎಂಬ ಹೆಸರೇ ರಾಜರ ಮುಂದೆ ದಾಖಲಾಗಿದೆ . ದೇಶದ ಆಡಳಿತವನ್ನು ನೋಡಿಕೊಳ್ಳುವವರಿಗೆ ದೇಶಮುಖ ಮತ್ತು ಸ್ವಲ್ಪ ಹೆಚ್ಚಿನ ಜವಾಬ್ದಾರಿ ಆಗಿ ಕಾರ್ಯ ನಿರ್ವಹಿಸುವ ಸಾಮಂತರಿಗೆ ಮತ್ತು ರಾಜರಿಗೆ ದೇಸಾಯಿ ಎಂದು ಕರೆಯುತ್ತಾರೆ .
1634 ರಿಂದ 1656 ರ ವರೆಗೆ 22 ವರುಷ ಸಂಪಗಾವಿಯಲ್ಲಿ ಆಡಳಿತ ನಡೆಸಿದ ಸಂಸ್ಥಾನದ ಮೊದಲನೆಯ ದೊರೆ ಹಿರೇಮಲ್ಲಪ್ಪಶೆಟ್ಟಿಯ ಕಿರಿಯ ಮಗನಾದ ಮತ್ತು ಸಂಸ್ಥಾನದ ನಾಲ್ಕನೆಯ ರಾಜನಾದ ಚಿಕ್ಕನಾಗನಗೌಡ ಪಟ್ಟಣಶೆಟ್ಟಿ ಅವರಿಗೆ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ದೇಸಾಯಿ ಅಂತ ಕರೆಯ ಹತ್ತಿದರು. ದೇಶವನ್ನಾಳುವವರು ದೇಸಾಯಿ ಅಂತ ಅರ್ಥ .ಇವರ ಮಗನಾದ ಚೆನ್ನಪ್ಪನು ಬಿಚ್ಚಗತ್ತಿ ಹಿರೇಮಲ್ಲಪ್ಪ ಶೆಟ್ಟಿಯ ಮೊಮ್ಮಗ ( ಕವಚವಿಲ್ಲದೆ ಖಡ್ಗವನ್ನು ಕತ್ತಿಯನ್ನು ಟೊಂಕಕ್ಕೆ ಕಟ್ಟುತ್ತಿರುವದರಿಂದ ) ಬಿಚ್ಚಗತ್ತಿ ಎಂಬ ರೂಢಿಯೊಳಗೆ ಕರೆಯಲಾರಂಭಿಸಿದರು ,ಈತನ ಅವಧಿ ತುಂಬಾ ಕಡಿಮೆ ಕೇವಲ ನಾಲ್ಕು ವರುಷ ,ಇವನಿಗೂ ಜನರು ದೇಸಾಯಿ ಅಂತ ಕರೆಯ ಹತ್ತಿದರು. ಈತನು ಬೆತ್ತಲೆಯ ಕುದುರೆಯನ್ನು
ಥಡಿ ಇಲ್ಲದೆ ಲಗಾಮು ಇಲ್ಲದೆ ಕುದುರೆ ಸವಾರಿ ಮಾಡುವ ಶೂರನಾಗಿದ್ದನು ಎಂದು ಲಾವಣಿ ಮತ್ತು ಜನಪದಿಗರು ಹೇಳುತ್ತಾರೆ .
ಇವರ ಮಗನಾದ ಅಲ್ಲಪ್ಪಗೌಡ ಸರ್ ದೇಸಾಯಿ ಕಿತ್ತೂರಿನ ಇತಿಹಾಸದಲ್ಲಿಯೇ ಶ್ರೇಷ್ಠ ಯೋಧ ಗಟ್ಟಿ ಮುಟ್ಟಾದ ಎಂಟೆದೆಯ ಬಂಟ ಸಂಸ್ಥಾನವನ್ನು ಸಂಪಗಾವಿಯಿಂದ ಕಿತ್ತೂರಿಗೆ ಅಂದರೆ ಗೀಜಗನಹಳ್ಳಿಗೆ ಸ್ಥಳಾಂತರಿಸಿ ಕಿತ್ತೂರಿನಲ್ಲಿ ಅತ್ಯಂತ ಭದ್ರ ಕೋಟೆಯನ್ನು ಕಟ್ಟಿಸಿದನು . ಇವನ ಪರಾಕ್ರಮ ಶೌರ್ಯ ಚಾಣಾಕ್ಷತನ ಆಡಳಿತದಲ್ಲಿನ ಗಾಂಭೀರ್ಯ ರಾಜಕೀಯ ಚತುರತೆ ವ್ಯವಹಾರ ಮುಂತಾದ ಅನೇಕ ಗುಣಗಳನ್ನು ಕಂಡು ಇವನಿಗೆ ಅಂದಿನ ಬ್ರಿಟಿಷ್ ಸರಕಾರವು ಮೊಟ್ಟ ಮೊದಲಿಗೆ ಸರ್ ಪದವಿಯನ್ನು ನೀಡಿ ಇವರ ದೇಸಾಯಿ ಎಂಬ ಅಡ್ಡ ಹೆಸರಿನ ಮುಂದೆ ಸರ್ ನಾಮ ವಿಶೇಷಣ ಸೇರಿಕೊಂಡು ಇವರನ್ನು ಸರ್ ದೇಸಾಯಿ ಎಂದು ಕರೆಯಲಾಯಿತು . ಅಂದಿನಿಂದ ಕಿತ್ತೂರಿನ ರಾಜಮನೆತನದವರನ್ನು ಪಟ್ಟಣಶೆಟ್ಟಿ ಎಂಬ ಅಡ್ಡ ಹೆಸರ ಬದಲಾಗಿ ಸರ್ ದೇಸಾಯಿ ಎಂದು ಕರೆಯಲಾಯಿತು.

ರಾಜಮನೆತನದವರು ಅಥವಾ ಅವರಿಗೆ ಆಡಳಿತದಲ್ಲಿ ಸಹಾಯ ಮಾಡುವ ಪಹರೇದಾರ ಕಂದಾಯ ನಿರೀಕ್ಷಕರು ಅವರಿಗೆ ದೇಶಮುಖ,ದೇಸಾಯಿ ದೇಶಪಾಂಡೆ ದೇಶಮಾನೆ ದೇಶ ಕುಲಕರ್ಣಿ ಮಾಮಲೇ ದೇಸಾಯಿ ಮಾಮಲೇ ಪಟ್ಟಣಶೆಟ್ಟರ ಎಂದು ಕರೆಯುವದು ವಾಡಿಕೆಯಾಗಿತ್ತು ,ಮುಂದೆ ಬ್ರಿಟಿಷರ ಆಡಳಿತದಲ್ಲಿ ಇಂತಹವರನ್ನು ಗುರುತಿಸಿ ಅವರ ಕಾರ್ಯ ಕ್ಷಮತೆ ದಕ್ಷತೆ ಬದ್ಧತೆ ಮುಂತಾದ ಸರ್ ಎಂಬ ಪದವಿಯನ್ನು ಗೌರವಪೂರ್ವಕ ನೀಡಲಾಗಿ ಇಂತಹ ಕುಟುಂಬದ ಮನೆತನದವರ ಅಡ್ಡ ಹೆಸರಿನ ಮುಂದೆ ಸರ್ ಸೇರಿಸಲಾಗಿ ಸರ್ ದೇಸಾಯಿ ,ಸರ್ ದೇಶಪಾಂಡೆ ,ಸರ್ ಮಾಮಲೆಪಟ್ಟಣಶೆಟ್ಟರ ,ಸರ್ ಮುಲ್ಲಾ ಸರ್ ಖಾಜಿ ,ಸರ್ ಮಾನೆ ,ಸರ್ ಗಣಾಚಾರಿ, ಸರ್ ನಾಯಕ ಹೀಗೆ ನಾಮ ವಿಶೇಷಣಗಳು ಸೇರಿದ್ದು ಕಿತ್ತೂರು ಆಳಿದ ಪಟ್ಟಣಶೆಟ್ಟಿ ಮನೆತನವು ಮುಂದೆ ಕಾಲಾಂತರದಲ್ಲಿ ದೇಸಾಯಿ ಆಗಿ ಮತ್ತೆ ಬ್ರಿಟಿಷ್ ಆಡಳಿತದಲ್ಲಿ ಅವರಿಗೆ ಸರ್ ದೇಸಾಯಿ ಎಂದು ಬಂದಿರುವುದನ್ನು ಬಿಟ್ಟರೆ ಅದಕ್ಕೆ ಬೇರೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ನನ್ನ ಅನಿಸಿಕೆ ಹಾಗು ಸತ್ಯವೂ ಕೂಡಾ .

ತಾಲೂಕ ಕೇಂದ್ರವಾದ ಸಂಪಗಾವದಿಂದ ಕಿತ್ತೂರಿಗೆ ಸ್ಥಳಾಂತರ 
ಇಂದಿನ ಕಿತ್ತೂರು ಅಂದು ಗೀಜಗನಹಳ್ಳಿ ಎಂದು ಕರೆಯಲ್ಪಟ್ಟಿತ್ತು . ಗೀಜಗ ಅಂದರೆ ಒಂದು ಹದ್ದಿನ ಜಾತಿಗೆ ಸೇರಿದ ಬೃಹತ್ ಪಕ್ಷಿ . ಇವುಗಳು ಹೆಚ್ಚು ವಾಸಿಸುವ ಕಂಡು ಬರುವ ಈ ಹಳ್ಳಿಗೆ ಗೀಜಗನಹಳ್ಳಿ ಎಂದು ಕರೆಯುತ್ತಿದ್ದರು. ಸಂಪಗಾವದಿಂದ ಕಿತ್ತೂರಿಗೆ ಆಡಳಿತ ಕೇಂದ್ರ ಕಚೇರಿ ಸ್ಥಳಾಂತರಗೊಂಡಿದ್ದರ ಹಿಂದೆ ಒಂದು ರೋಚಕ ಕಥೆ ಇದೆ . ಪ್ರಿ ಸಿ ವಿ ಮಠದ ಅವರ ಪ್ರಕಾರ ಅಲ್ಲಪ್ಪಗೌಡ ದೇಸಾಯಿ ಇವನು ಕಿತ್ತೂರು ದೇಶಗತಿ ಸಂಸ್ಥಾಪಕ ಹಿರೇ ಮಲ್ಲಪ್ಪ ಶೆಟ್ಟಿ ಮತ್ತು ಹಿರೇನಾಗನಗೌಡ ಪಟ್ಟಣಶೆಟ್ಟಿ ( ಹಿರೇಮಲ್ಲಪ್ಪಶೆಟ್ಟಿ ಹಿರಿಯ ಮಗ ) ಇವರ ನಂತರ ಸುದೀರ್ಘವಾಗಿ ರಾಜ್ಯವನ್ನಾಳಿದ ದಿಟ್ಟ ರಾಜನಾಗಿದ್ದನು ಎಂದು ತಿಳಿದುಬರುತ್ತದೆ . ಒಮ್ಮೆ ಇವರ ಕನಸಿನಲ್ಲಿ ಇವರ ಮಂಡೆತನದ ಗುರುಗಳು ಕನಸಿನಲ್ಲಿ ಬಂದು ದೇಶಗತಿಯ ಸಾಮ್ರಾಜ್ಯವನ್ನು ಸಂಪಗಾವದಿಂದ ಗೀಜಗನಹಳ್ಳಿಗೆ ( ಕಿತ್ತೂರಿಗೆ )ಸ್ಥಳಾಂತರಿಸಲು ಸಲಹೆ ನೀಡದರಂತೆ .

ಗುರುಗಳ ಪ್ರೇರಣೆ ಸ್ಫೂರ್ತಿ ಆಶೀರ್ವಾದದಿಂದ ಅಲ್ಲಪ್ಪಗೌಡ ದೇಸಾಯಿಯು ಸಂಪಗಾವದಿಂದ ಕಿತ್ತೂರಿಗೆ ತನ್ನ ಆಡಳಿತ ಕೇಂದ್ರವನ್ನು ಸ್ಥಳಾಂತರಿಸಿದನು .ಪ್ರಿ ಸಿ ವಿ ಮಠದ ಇವರು ಇತಿಹಾಸದ ಸಂಶೋಧಕರಾಗಿದ್ದು ಇಂತಹ ಕೆಲ ಜನಪದಿಗರ ಮೌಖಿಕ ಹೇಳಿಕೆಗಳನ್ನು ಕಥೆಗಳನ್ನು ದಾಖಲಿಸಿದ್ದಾರೆ ,ಇವು ಚರಿತ್ರೆ ಇತಿಹಾಸದಲ್ಲಿ ಪುಷ್ಟಿ ಪಡೆಯದಿದ್ದರೂ ಸ್ಥಳಾಂತರಕ್ಕೆ ಅವರು ಕೊಟ್ಟ ಕಾರಣವನ್ನು ನಾವು ಗಣನೆಗೆ ತೆಗೆದುಕೊಂಡರೆ ತಪ್ಪಾಗಲಾರದು.

ಡಾ ಸೂರ್ಯನಾಥ ಕಾಮತ ಅವರು ಇನ್ನೂ ಸ್ವಲ್ಪ ಮುಂದೆ ಹೋಗಿ ತಾಲೂಕ ಕೇಂದ್ರವಾದ ಸಂಪಗಾವದಿಂದ ಕಿತ್ತೂರಿಗೆ ಸ್ಥಳಾಂತರವಾದ ಸಂಗಾತಿಯ ಬಗ್ಗೆ ಹೆಚ್ಚಿನ ವಿವರ ನೀಡುತ್ತಾರೆ .ದೇಶಗತಿಯ ಮೇಲೆ ಪರಕೀಯರ ದಾಳಿ ಆಕ್ರಮಣದ ಭೀತಿ ನಿರಂತರವಾದ ದಾಳಿಯನ್ನು ಎದುರಿಸಲು ಸುಭದ್ರವಾದ ಸ್ಥಳ ಮತ್ತು ಭದ್ರತೆಯ ದೃಷ್ಟಿಯಿಂದ ಸಂಪಗಾವದಿಂದ ಕಿತ್ತೂರಿಗೆ ಅಲ್ಲಪ್ಪಗೌಡ ಸರ್ ದೇಸಾಯಿ ಸ್ಥಳಾಂತರಗೊಂಡನು ಎಂಬುದು ವೆಂಕಟರಂಗೋ ಕಟ್ಟಿ ಅವರು ದಾಖಲಿಸಿದ ಈ ಸಂಗತಿ ಹೆಚ್ಚು ಪೂರಕವೆನಿಸುತ್ತದೆ . ಅದೇನೆಂದರೆ ಔರಂಗಜೇಬನ ಮಗ 1682 ಮತ್ತು 1683 ರಲ್ಲಿ ಸಂಪಗಾವ ಮೇಲೆ ಆಕ್ರಮಣ ನಡೆಸಿದನೆಂದು ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಲು ಅಲ್ಲಪ್ಪಗೌಡ ಸರ್ ದೇಸಾಯಿ ಅವರ ಮುಂಧೋರಣೆ ಮತ್ತು ಭದ್ರತೆಯ ಯೋಜನೆಯ ಪರಿಣಾಮವಾಗಿ ಆಡಳಿತ ಕೇಂದ್ರವನ್ನು ಸಂಪಗಾವದಿಂದ ಕಿತ್ತೂರಿಗೆ ಸ್ಥಳಾಂತರಿಸಿದನೆಂದು ತಿಳಿಯುವದು ಕೂಡ ಅಷ್ಟೇ ಪ್ರಮುಖವೆನಿಸಿಯುತ್ತದೆ.

ಇನ್ನೊಂದು ಕುತೂಹಲಕರ ಸಂಗತಿ ಎಂದರೆ ಆಡಳಿತ ಕೇಂದ್ರವನ್ನು ಸ್ಥಳಾಂತರಿಸುವ ಮತ್ತು ಹೊಸ ಪ್ರದೇಶವನ್ನು ಶೋಧಿಸುವ ಸಂದರ್ಭದಲ್ಲಿ ರಾಜ ಅಲ್ಲಪ್ಪಗೌಡ ಸರ್ ದೇಸಾಯಿಯು ತನ್ನ ಕುದುರೆಯನ್ನು ಏರಿ ಸುತ್ತಲಿನ ಪ್ರದೇಶಗಲ್ಲಿ ಸಮೀಕ್ಷೆ ನಡೆಸಿದಾಗ . ಕಿತ್ತೂರಿನ ಮುಂಬಾಗದ ಎತ್ತರದ ಗುಡ್ಡ, ನಗರ ಮಧ್ಯ ಗಟ್ಟಿ ಮುಟ್ಟಾದ ಕೋಟೆ ಕಟ್ಟುವ ಸ್ಥಳವನ್ನು ಶೋಧಿಸಿ ಮರಳಿ ಸಂಪಗಾವಕ್ಕೆ ತೆರಳುವಾಗ ಗೀಜಗ ಪಕ್ಷಿಯು ರಾಜನನ್ನು ಬೆನ್ನಟ್ಟಿತಂತೆ ,ಇದನ್ನು ಕಂಡು ಖುಷಿಯಾದ ಅಲ್ಲಪ್ಪಗೌಡ ತನ್ನ ರಾಜ್ಯಧಾನಿಯನ್ನು ಇಂತಹ ಶೌರ್ಯವುಳ್ಳ ನಾಡಿನಲ್ಲಿ ಸ್ಥಾಪಿಸಬೇಕೆಂದು ಸಂಕಲ್ಪಿಸಿದನಂತೆ . ಇವು ಚರಿತ್ರೆಯಲ್ಲಿ ಬರುವ ಕೆಲ ಸ್ವಾರಸ್ಯಕರ ಸಂಗಾತಿಗಳಾದರೂ ಸಹಿತ ಬೇರೆಯವರ ಆಕ್ರಮಣ ದಾಳಿಯಿಂದ ವ್ಯಾಕುಲಗೊಂಡ ಚಿಂತಿತ ಅಲ್ಲಪ್ಪಗೌಡನಿಗೆ ತಮ್ಮ ಗುರುಗಳ ಆಶೀರ್ವಾದ ಮತ್ತು ಗೀಜಗ ಪಕ್ಷಿ ರಾಜನಿಗೆ ಬೆನ್ನಟ್ಟಿ ಬರುವ ರೋಚಕ ಸಂಗತಿಗಳು ಅಲ್ಲಪ್ಪಗೌಡನಿಗೆ ಮಾನಸಿಕ ನೆಮ್ಮದಿ ನೀಡಿ ಕಿತ್ತೂರನ್ನೇ ರಾಜಧಾನಿಯನ್ನಾಗಿ ಮಾಡಲು ಪ್ರೇರಿಪಿಸಿತು .
ಕಿತ್ತೂರು – ಇದು ಕಿತ್ತು ಬಂದ ಊರು – ಸಂಪಗಾವದಿಂದ ಗೀಜಗನಹಳ್ಳಿಗೆ ಸ್ಥಳಾಂತರಗೊಂಡ ಕಿತ್ತು ಬಂದ ಊರಾದ ಕಾರಣ ಇದನ್ನು ಕಿತ್ತೂರು ಎಂದು ಕರೆದರೂ ಎಂದು ಪ್ರಿ ಸಿ ವಿ ಮಠದ ಅವರ ಅಭಿಮತವಾಗಿದೆ.

ಇದರ ಗಂಭೀರ ಅಧ್ಯಯನ ಅಗತ್ಯವಾಗಿದ್ದು ಶಾಸನ ದಾಖಲೆಗಳು 1682 ಪೂರ್ವದಲ್ಲಿ ಕಿತ್ತೂರಿನ ಹೆಸರು ಮುಂತಾದವಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಕನ್ನಡ ಸಂಧಿ ಅರ್ಥದಲ್ಲಿ ಕಿತ್ತು ಬಂದ ಊರು ಕಿತ್ತೂರು ಎಂದು ನಾವಿಲ್ಲಿ ತಿಳಿದುಕೊಳ್ಳುವುದು ಅಗತ್ಯವಾಗಿದೆ .

ಕಿತ್ತೂರಿನ ಆಡಳಿತದ ಬಗ್ಗೆ ಪ್ರಿ ಸಿ ವಿ ಮಠದವರು ಹೇಳುತ್ತಾ ಅಲ್ಲಪ್ಪಗೌಡ ದೇಸಾಯಿ ಮೊದಲು 22 ವರುಷ ಸಂಪಗಾವದಲ್ಲಿ ಮುಂದೆ 9 ವರುಷ ಇಂದಿನ ಕಿತ್ತೂರಿನಲ್ಲಿ ರಾಜ್ಯಭಾರ ಮಾಡಿದನೆಂದು ತಿಳಿದುಬರುತ್ತದೆ.ಇದಕ್ಕೆ ಪೂರಕವಾಗಿ ಡಾ ಸಂತೋಷ ಹಾನಗಲ್ ಅವರ ಕಿತ್ತೂರು ಕೋಟೆಯ ಕಟ್ಟಡದ ಕಾಲಾವಧಿ ನಿರ್ಮಾಣದ ವಿವರ ಮುಂತಾದವುಗಳು ಲೆಕ್ಕಾಚಾರಕ್ಕೆ ಸರಿ ಹೋಗುತ್ತವೆ . ಎಸ ಎಸ ಒಡೆಯರ ಅವರೂ ಸಹಿತ ಅಲ್ಲಪ್ಪಗೌಡ ಸರ್ ದೇಸಾಯಿ ಕಿತ್ತೂರು ಕೋಟೆಯನ್ನು ಕಟ್ಟಿದನೆಂದು ದಾಖಲಿಸಿದ್ದಾರೆ .ಆದರೆ ಕಿತ್ತೂರು ದೇಶಗತಿಯ ಸ್ಥಾಪಕ ಹಿರೇ ಮಲ್ಲಪ್ಪಶೆಟ್ಟಿ ಅವರೂ ಸಂಪಗಾವಕ್ಕೆ ಬರುವ ಮೊದಲು ಹುಬ್ಬಳ್ಳಿಯ ಪ್ರಾಂತದ ಸರ್ ದೇಶಮುಖಿಯಾಗಿದ್ದರು ಎಂದು ಅಭಿಪ್ರಾಯಕ್ಕೆ ಬರುತ್ತಿರುವುದು ಸಂಶೋಧಕರನ್ನು ಇನ್ನಷ್ಟು ಅಧ್ಯಯನಕ್ಕೆ ಹಚ್ಚುತ್ತದೆ .ಇನ್ನೊಂದು ಪ್ರಬಲ ಪುರಾವೆ ಎಂದರೆ ಶ್ರೀ ಶ್ರೀಧರ ತೇಲ್ಕರ ಅವರು ತಮ್ಮ ಇಂಗ್ಲಿಷ್ ” KITTUR CHANNAMMA RANI (1957 ) ಕೃತಿಯಲ್ಲಿ ” The Fifth ruler of KITTUR first established in kittur as SIRDEASAI in 1682 .He built this Fort ……ಎಂದು ನಮೂದಿಸಿದ್ದಾರೆ. ಪ್ರೊ ಜ್ಯೋತಿ ಹೊಸೂರ ಅವರು ಅಲ್ಲಪ್ಪಗೌಡ ಸರ್ ದೇಸಾಯಿ ಕಾಲದಲ್ಲಿ ಸಂಪಗಾವದಿಂದ ಕಿತ್ತೂರಿಗೆ ಸ್ಥಳಾಂತರವಾದ ಸಂಗತಿಗಳನ್ನು ಮತ್ತು ಅಲ್ಲಪ್ಪಗೌಡ ಸರ್ ದೇಸಾಯಿ ಕಿತ್ತೂರಿನ ಕೋಟೆಯನ್ನು ಕಟ್ಟಿದನೆಂಬ ಸಾದರ ಪಡಿಸಿದ ವಾದವು ಹೆಚ್ಚು ವಿಶ್ಲೇಷಕ ತಾರ್ಕಿಕವಾಗಿದೆ .

ಒಟ್ಟಾರೆ ಎಲ್ಲಾ ಸಂಶೋಧಕರು ಕಿತ್ತೂರಿಗೆ ಸ್ಥಳಾಂತರಗೊಂಡಿದ್ದು ಮತ್ತು ರಾಜ ಅಲ್ಲಪ್ಪಗೌಡ ಸರ್ ದೇಸಾಯಿ ಕಿತ್ತೂರಿನ ಕೋಟೆಯನ್ನು ಕಟ್ಟಿದನೆಂದು ಸ್ಪಷ್ಟವಾದ ಅಭಿಮತಕ್ಕೆ ಬರುತ್ತಾರೆ . ಇಂತಹ ಸಂಗತಿಗಳು ಇತಿಹಾಸದಲ್ಲಿ ಮರೆಯಾಗಿ ಹೋದ ಕಾರಣ ಭಾರತದ ಇತಿಹಾಸದ ಚರಿತ್ರೆಯ ಪುಟಗಳಲ್ಲಿ ಕಿತ್ತೂರಿನ ಇತಿಹಾಸವು ಅರ್ಥಪೂರ್ಣವಾಗಿ ದಾಖಲೆ ಕಾಣದೆ ಹೋಗಿದ್ದು ಲಿಂಗಾಯತರ ದುರಂತವಾಗಿದೆ.

ನನ್ನ ಕಿತ್ತೂರಿನ ಇತಿಹಾಸದ ಕ್ರಮಬದ್ಧ ಗಂಭೀರ ಅಧ್ಯಯನಕ್ಕೆ ಮುಖ್ಯ ಕಾರಣವೆಂದರೆ ಲಿಂಗಾಯತರು ರಾಷ್ಟ್ರ ಭಕ್ತರು ದೇಶಕ್ಕಾಗಿ ತನು ಮನ ಧನವನ್ನು ಅರ್ಪಿಸಿ ಜನಪರ ಕಾರ್ಯ ಮಾಡಿದ ಹೆಗ್ಗಳಿಕೆಯನ್ನು ಪಡೆದವರು ಎಂದು ದಾಖಲಿಸುವುದೇ ಹೊರತು ಲಿಂಗಾಯತ ಧರ್ಮದ ಉಪಪಂಗಡವನ್ನು ವೈಭವೀಕರಿಸುವದಲ್ಲ. ಕಿತ್ತೂರು ಆಳರಸರು ಲಿಂಗಾಯತರು ಎಲ್ಲಾ ಒಳಪಂಗಡದ ಲಿಂಗಾಯತರು ಇಂದು ಹೆಮ್ಮೆಯಿಂದ ಮುಂದೆ ಬಂದು ಕಿತ್ತೂರಿನ ನಿಜವಾದ ಚರಿತ್ರೆಯನ್ನು ಅಧ್ಯಯನ ಮಾಡಿ ಭಾರತ ದೇಶವು ಮರೆತ ಇತಿಹಾಸ ಪುಟಗಳಲ್ಲಿ ನಾವು ಕಿತ್ತೂರಿನ ಶೌರ್ಯ ಧೈರ್ಯ ಸಾಹಸ ಪರಾಕ್ರಮವನ್ನು ದಾಖಲಿಸದೆ ಹೋದರೆ ಅದು ನಮ್ಮ ದೌರ್ಭಗ್ಯವೆಂದು ಹೇಳಬೇಕಾಗುತ್ತದೆ .ಕಿತ್ತೂರು ರಾಣಿ ಚನ್ನಮ್ಮ ಮತ್ತು ಕಿತ್ತೂರಿನ ಅರಸರು ನಮ್ಮವರು ತಮ್ಮವರು ಎಂದು ಲಿಂಗಾಯತರು ಬೀಗುವದು ಕಚ್ಚಾಡುವುದು ಸರಿಯಲ್ಲ. ಕಿತ್ತೂರು ಸಂಘರ್ಷ ಭಾರತ ದೇಶದ ಮೊಟ್ಟ ಮೊದಲ ಸ್ವಾತಂತ್ರ್ಯ ಸಂಗ್ರಾಮವಾಗಿದೆ ಇದನ್ನು ದಾಖಲಿಸುವ ಕಾರ್ಯ ನಮ್ಮದಾಗಬೇಕು . ದೇಶದಲ್ಲಿಯೇ ಮಾದರಿಯಾದ ಕಿತ್ತೂರು ಸಂಸ್ಥಾನದ ವಾರಸದಾರರು ಬಸವ ತತ್ವದಲ್ಲಿ ನಂಬಿಕೆ ಇಟ್ಟ ಅಪ್ಪಟ ಬಸವ ಭಕ್ತರು ಮತ್ತು ಲಿಂಗಾಯತರು ಕಿತ್ತೂರಿನ ಇತಿಹಾಸದ ಸಮಗ್ರ ಅಧ್ಯಯನ ಮತ್ತು ಸಂಶೋಧನೆಗೆ ಮುಂದಾಗಬೇಕು. ವಿಶ್ವ ವಿದ್ಯಾಲಯಗಳು ಸರಕಾರದ ಐತಿಹಾಸಿಕ ಪ್ರಾಚ್ಯ ವಸ್ತು ಇಲಾಖೆ ಇಂತಹ ಯೋಜನೆಗೆ ಕಾರ್ಯಾಗಾರ ಸಂವಾದಕ್ಕೆ ಮುಂದಾಗಬೇಕು .

ಮುಂದಿನ ಸಂಚಿಕೆಯಲ್ಲಿ ಹುಬ್ಬಳ್ಳಿ ಸರ್ ದೇಶಮುಖಿ ಇತ್ಯರ್ಥ ಮತ್ತು ಇನ್ನಷ್ಟು ಮಾಹಿತಿಯನ್ನೊಳಗೊಂಡ ವಿವರಗಳು ಬರಲಿವೆ. ,

ಡಾ.ಶಶಿಕಾಂತ ರುದ್ರಪ್ಪ ಪಟ್ಟಣ ರಾಮದುರ್ಗ -9552002338


ಮಾನ್ಯ ಓದುಗರಲ್ಲಿ ವಿನಂತಿ,
ಪುಣೆಯ ಡಾ.ಶಶಿಕಾಂತ ಪಟ್ಟಣ ಅವರು *ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು*
ಎಂಬ ಸರಣಿ ಲೇಖನ ಪ್ರಕಟವಾಗಲಿದೆ..
ಓದುಗರು ಪ್ರಾಂಜ್ವಲ ಮನಸ್ಸಿನಿಂದ ಓದಿ, ಈ ಲೇಖನ ಸರಣಿ‌ ಮುಗಿದ ಮೇಲೆ ಓದುಗರಿಗೆ ಸಂಶಯ, ಅನುಮಾನ, ಹೆಚ್ಚಿನ ಚಿಂತನೆಯ ಚರ್ಚೆಯ ವಿಷಯಗಳಿದ್ದರೆ ಲೇಖಕರೊಂದಿಗೆ ಚರ್ಚಿಸಿ. 9552002338

-ಸಂಪಾದಕ


ವಿಶೇಷ ಸೂಚನೆ
copy rights resrved(ಇಲ್ಲಿನ ಎಲ್ಲ ಬರಹಗಳೂ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ.) ಈಬರಹಗಳ ಎಲ್ಲಾ ಅಭಿಪ್ರಾಯಗಳೂ ಲೇಖಕರ ವೈಯುಕ್ತಿಕ ಅಭಿಪ್ರಾಯಗಳಾಗಿದ್ದು,e-ಸುದ್ದಿ ಬ್ಲಾಗ್ ಅದಕ್ಕೆ ಹೊಣೆಯಾಗಿರುವುದಿಲ್ಲ
-ಸಂಪಾದಕ

Don`t copy text!