ಕಿತ್ತೂರು ಅರಸೊತ್ತಿಗೆ ಲಿಂಗಾಯತ ಬಣಜಿಗರು

ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು -ಭಾಗ- 2

 

ಕಿತ್ತೂರು ಅರಸೊತ್ತಿಗೆ ಲಿಂಗಾಯತ ಬಣಜಿಗರು

ಕರ್ನಾಟಕ ಮತ್ತು ಭಾರತದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಸೃಷ್ಟಿಸಿದ ಕಿತ್ತೂರು ಅರಸೊತ್ತಿಗೆಯ ಚರಿತ್ರೆಯು ಹಲವಾರು ಸತ್ಯ ಸಂಗತಿಗಳನ್ನು ತನ್ನ ಒಡಲೊಳಗೆ ತುಂಬಿಕೊಂಡು ಸತ್ಯದ ಅನಾವರಣಕ್ಕೆ ಸಮಯ ಕಾಯುತ್ತಿತ್ತು .ಅನೇಕರ ಒತ್ತಾಯ ಪ್ರೀತಿ ಕುತೂಹಲ ನನ್ನನ್ನು ಕಿತ್ತೂರಿನ ಚರಿತ್ರೆಯ ಬಗ್ಗೆ ಅಧ್ಯಯನವನ್ನು ಮತ್ತೆ ಮತ್ತೆ ಆಳವಾಗಿ ಓದಿಕೊಂಡು ಅನೇಕ ಸತ್ಯ ಸಂಗತಿಗಳನ್ನು ಹೊರ ಹಾಕಲು ಮನಸ್ಸು ಹಾತೊರೆಯುತ್ತಿತ್ತು. ಮೊದಲಿನ ಸಂಚಿಕೆ ಪ್ರಕಟಗೊಂಡ ಮೇಲೆ ನೂರಾರು ಜನ ಫೋನ್ ಮಾಡಿ ತಮ್ಮ ಅನಿಸಿಕೆ ಅಭಿಮಾನವನ್ನು ತೋಡಿಕೊಂಡರು .ಈ ಮಧ್ಯೆ ತಮ್ಮ ಕುಟುಂಬವನ್ನು ಸೇರಲು ಅಮೆರಿಕೆಗೆ ಹೋಗುವ ಅವಸರದಲ್ಲಿ ಸಂಪಾದಕ ಶ್ರೀ ರುದ್ರಣ್ಣ ಹೊಸಕೇರಿ ಒಂದೇ ಸವನೆ ಮುಂದಿನ ಸಂಚಿಕೆಯ ಲೇಖನಕ್ಕಾಗಿ ಪೀಡಿಸಹತ್ತಿದರು .ಡಾ ಮೃತ್ಯುಂಜಯ ಶೆಟ್ಟರ ಹಾಗೂ ಡಾ ಲತಾ ಶಿವಬಸಪ್ಪ ಹೆಸರೂರು ಇವರು ಮುಂದಿನ ಸಂಚಿಕೆಗೆ ಕೂತುಹಲದಿಂದ ಕಾಯುವ ಹಾಗೆ ಮಾಡಿದ್ರಿ ಅಣ್ಣಾ ಎಂದು ಹೇಳಿದರು .

ಕಿತ್ತೂರಿನ ಇತಿಹಾಸದ ಬಗ್ಗೆ ಬಣಜಿಗ ಬಂಧು ಮೇ ಸಂಚಿಕೆಯಲ್ಲಿ ಕಿತ್ತೂರು ಅರಸರು ಬಣಜಿಗರು ಎಂಬ ಸ್ಪಷ್ಟ ನಿರ್ಣಯ ನಿರ್ಧಾರಕ್ಕೆ ಬರಲು ಅನೇಕ ಕಾರಣಗಳು ,ಸಾಕ್ಷಿಗಳು ,ಸಂಶೋಧನೆ,ದಾಖಲೆ ,ಮೌಖಿಕ ಹೇಳಿಕೆಗಳು, ಜಾನಪದ ಸಂಗ್ರಹಗಳು, ಹೀಗೆ ಎಲ್ಲವನ್ನೂ ಹಂತಹಂತವಾಗಿ ಬಿಚ್ಚಿಡುತ್ತಾ ಕಿತ್ತೂರು ಅರಸರ ಕಾಲ ಸ್ಥಳ ಮೂಲ ಪುರುಷರ ಊರು ಅರಸರಾಳಿದ ಮನೆತನಗಳ ವಿವರ. ಮನೆತನದ ಮೂಲ ವೃತ್ತಿಗಳನ್ನೂ ದಾಖಲಿಸುವ ಕಾರ್ಯವು ನಿಜಕ್ಕೂ ಶ್ರಮದಾಯಕವಾಗಿದೆ.ಅನೇಕ ದಾಖಲೆಗಳು ಕೇವಲ ಮೌಖಿಕ ಹೇಳಿಕೆಗೆ ಸೀಮಿತವಾದರೆ ಇನ್ನೂ ಅನೇಕ ಸಾಕ್ಷಿಗಳು ತರ್ಕಕ್ಕೆ ವಿಚಾರಕ್ಕೆ ಸಂಶೋಧನೆಗೆ ಆಹಾರವನ್ನು ನೀಡುತ್ತವೆ .ಪ್ರಾಸಂಗಿಕವಾಗಿ ಪ್ರಕಟಗೊಂಡ ಕಿತ್ತೂರು ಸಂಸ್ಥಾನದ ಲೇಖನಗಳು ಸಂಪೂರ್ಣ ಚರಿತ್ರೆಯನ್ನು ಒಟ್ಟಾರೆ ಬಿಂಬಿಸುವಲ್ಲಿ ಸಾಧ್ಯವಾಗಿಲ್ಲ .

ಬೆಳಗಾವಿ ಜಿಲ್ಲೆಯ ಹಳೆಯ ಗ್ಯಾಝೆಟಿಯರ್ ಮೌಖಿಕ ಹೇಳಿಕೆ ಮತ್ತು ಜಾನಪದ ಉಲ್ಲೇಖಗಳು ಕಿತ್ತೂರಿನ ಇತಿಹಾಸವನ್ನು ವ್ಯವಸ್ಥಿತವಾಗಿ ಸಾದರಪಡಿಸಲು ಸಾಧ್ಯವಾಗುತ್ತವೆ .ನಾವು ತಿಳಿದುಕೊಂಡ ಐತಿಹಾಸಿಕ ಸಂಗತಿಗಳಿಗೂ ಮತ್ತು ಅರಿಯಬೇಕಾದ ಸತ್ಯ ಚರಿತ್ರೆಯು ಒಮ್ಮೊಮ್ಮೆ ತದ್ವಿರುದ್ಧವಾಗಿ ಕಂಡು ಬಂದು ನನ್ನಂತಹ ಅನೇಕರನ್ನು ಗೊಂದಲಕ್ಕೆ ಈಡು ಮಾಡುತ್ತವೆ .ಇವುಗಳನ್ನು ತಿಳಿದುಕೊಳ್ಳುವ ನಿರಂತರ ಹಠ ಮತ್ತು ಛಲ ನನ್ನನ್ನು ಅನೇಕ ಸವಾಲುಗಳಿಗೆ ಒಡ್ಡಿಕೊಳ್ಳಬೇಕಾಯಿತು .ಹೀಗೆ ಹಲವು ವಿಷಯಗಳನ್ನು ಸಾದರ ಪಡಿಸುವುದು ಒಂದು ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂದು ನಂಬಿದ್ದೇನೆ .

ಪ್ರಸಕ್ತ ಲೇಖನದಲ್ಲಿ ಕಿತ್ತೂರು ಸಂಸ್ಥಾನದ ಅರಸರು ಲಿಂಗಾಯತ ಬಣಜಿಗ ಸಮಾಜಕ್ಕೆ ಸೇರಿದವರೆಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ . ಕಿತ್ತೂರಿನ ಕಲ್ಮಠದಲ್ಲಿಯೂ ಕೂಡ ಕಿತ್ತೂರಿನ ಅರಸರ ವಂಶಾವಳಿಯನ್ನು ದಾಖಲಿಸುತ್ತ ಅವರು ಪಟ್ಟಣಶೆಟ್ಟಿ ಮನೆತನದವರು ಎಂಬ ಸುಳಿಹು ನೀಡಿದ್ದಾರೆ .

ಕಿತ್ತೂರಿನ ಸಂಸ್ಥಾನಿಕರು ಲಿಂಗಾಯತ ಧರ್ಮಕ್ಕೆ ಸೇರಿದ ಬಣಜಿಗರು

ಕಿತ್ತೂರಿನ ಸಂಸ್ಥಾನದ ಮೂಲ ಸ್ಥಾಪಕ ಪುರುಷರಾದ ಹಿರೇ ಮಲ್ಲಶೆಟ್ಟಿ ಮತ್ತು ಚಿಕ್ಕ ಮಲ್ಲಶೆಟ್ಟಿ ಇವರು ತಮ್ಮ ವೃತ್ತಿಯಾದ ಆಭರಣ ಸರಕುಗಳ ಮತ್ತು ಬೆಳ್ಳಿ ಬಂಗಾರ ಲೇವಾದೇವಿ ವ್ಯಾಪಾರವನ್ನು ಮಾಡುತ್ತ ಜೊತೆಗೆ ತಮ್ಮ ಜಟ್ಟಿತನವನ್ನು ಪ್ರದರ್ಶಿಸುವ ಯುವಕರು .ಕಿತ್ತೂರಿನ ಇತಿಹಾಸದ ಬಗ್ಗೆ ಬರೆಯುತ್ತ ವೆಂಕಟ ರಂಗೋ ಕಟ್ಟಿಯವರು ಇಂಗ್ಲಿಷ್ ಗ್ಯಾಝೆಟಿಯರನ್ನು ಕನ್ನಡಕ್ಕೆ ಅನುವಾದ ಮಾಡುವ ಸಂದರ್ಭದಲ್ಲಿ ಮತ್ತು ಶ್ರೀ ಶ್ರೇಷ್ಠಿಯವರ ಕಿತ್ತೂರ ದೇಶಗತಿಯ ಅನುವಾದದಲ್ಲಿ ಸಾಮ್ಯತೆ ಕಂಡು ಬಂದಿದ್ದು ಅವರಿಬ್ಬರ ಪ್ರಕಾರ ಹಿರೇ ಮಲ್ಲಶೆಟ್ಟಿ ಮತ್ತು ಚಿಕ್ಕ ಮಲ್ಲಶೆಟ್ಟಿ ಇವರು ಕಿತ್ತೂರಿನ ಸಂಸ್ಥಾಪಕರು ಮತ್ತು ಮೂಲತಃ ವ್ಯಾಪಾರೀ ಶೆಟ್ಟಿಗಳಾಗಿದ್ದರು ಎಂದು ಉಲ್ಲೇಖಿಸಿದ್ದಾರೆ .

ತಮ್ಮ ವ್ಯಾಪಾರ ವೃತ್ತಿಯ ಜೊತೆಗೆ ಸಾಹಸದ ಜಟ್ಟಿತನವನ್ನು ಮಾಡುತ್ತಾ ವಿಜಯಪುರದ ಆದಿಲ್ಶಾಹಿ ಬಾದಷಹರ ಚಿನಿವಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು .ಹಿರಿಯ ಮಲ್ಲಶೆಟ್ಟಿಯು ತನ್ನ ವ್ಯಾಪಾರದ ಜೊತೆಗೆ ವಿಜಯಪುರದ ಆದಿಲಶಾಹಿ ಸೈನ್ಯಕ್ಕೆ ಆಹಾರ ಸಾಮಗ್ರಿಗಳನ್ನು ಒದಗಿಸುವ ಕಾರ್ಯವನ್ನು ಕೈಕೊಂಡಿದ್ದರು . ವಿಜಯಪುರದ ಆದಿಲಶಾಹಿಯ ಕಿಲ್ಲೇದಾರ ಆಸಾಧಖಾನ ಈತನಿಗೆ ಅಣ್ಣ ಮತ್ತು ತಮ್ಮರಿಬ್ಬರು ಆತ್ಮೀಯರಾಗುತ್ತಾರೆ . ಬೆಳಗಾವಿ ಹತ್ತಿರದ ಸಂಪಗಾವಿಯಿಂದ ವಿಜಯಪುರದ ಬಾದಶಾಹನ ಸೈನ್ಯಕ್ಕೆ ಆಹಾರ ಸಾಮಗ್ರಿಗಳನ್ನು ಪೂರೈಸಲು ಅನುಕೂಲವಾಗುವುದೆಂದು .ಪ್ರಾಸಂಗಿಕವಾಗಿ ಹಿರೇಮಲ್ಲಶೆಟ್ಟಿಯು ಸೈನ್ಯವನ್ನು ಸೇರಿ ವೈರಿಗಳೊಂದಿಗೆ ಯುದ್ಧ ಮಾಡಿ ಪರಾಕ್ರಮವನ್ನು ಪ್ರದರ್ಶಿಸಿದ್ದಕ್ಕೆ ಅವನನ್ನು ವಿಜಯಪುರದ ಬಾದಶಹ ಆದಿಲಶಾಹಿಯು ” ಶಮಶೇರ ಜಂಗ ಬಹದ್ದೂರ ” ಎಂಬ ಬಿರುದನ್ನೂ ನೀಡಿ ಇವರ ಶೌರ್ಯ ಸಾಹಸ ನೋಡಿ ಇಂದಿನ ಮುಗುಟಖಾನ ಹುಬ್ಬಳ್ಳಿ ಪರಗಣೆಯ ಸರದೇಶಮುಖಿಯನ್ನು ಕೊಟ್ಟನೆಂದು ಹೇಳಲಾಗುತ್ತದೆ .ಹೀಗೆ ವ್ಯಾಪಾರ ಮಾಡಲು ಬಂದ ಬಣಜಿಗ ಯುವಕರು ಸಂಪಗಾವ ,ಮುಗಟಖಾನ ಹುಬ್ಬಳ್ಳಿ ಯಲ್ಲಿ ನಿಂತು ತಮ್ಮ ಸಂಸ್ಥಾನದ ಸ್ಥಾಪನೆಯ ಕನಸನ್ನು ಕಟ್ಟ ಹತ್ತಿದರು.

ಕಿತ್ತೂರಿನ ಇತಿಹಾಸವನ್ನು ಅಧ್ಯಯನ ಮಾಡಿದವರಲ್ಲಿ ಅನೇಕರು ಸಂಸ್ಥಾಪಕರಾದ ಹಿರೇಮಲ್ಲಶೆಟ್ಟಿ ಮತ್ತು ಕಿರಿಯ ಮಲ್ಲಶೆಟ್ಟಿಯವರ ಮೂಲ ಸ್ಥಳಗಳ ಬಗ್ಗೆ ಗೊಂದಲ ಮೂಡಿಸಿರಬಹುದು, ಆದರೆ ಒಟ್ಟಾರೆ ಅವರ ಅಧ್ಯಯನದ ಪ್ರಕಾರ ಕಿತ್ತೂರು ಸಂಸ್ಥಾನದ ಸಂಸ್ಥಾಪಕರಾದ ಹಿರಿಯಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿಯವರು ವ್ಯಾಪಾರ ವೃತ್ತಿಯ ಲಿಂಗಾಯತ ಬಣಜಿಗ ಸಮುದಾಯಕ್ಕೆ ಸೇರಿದವರು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ .ಅವರುಗಳಲ್ಲಿ ಡಾ ಸಂತೋಷ ಹಾನಗಲ್ಲ ,ಡಾ ಚೆನ್ನಕ್ಕ ಪಾವಟೆ ,ಡಾ ರತ್ನಶೀಲ ಗುರಡ್ಡಿ ,ಪ್ರಿ ಸಿ ವಿ ಮಠದ ಪ್ರೊ ವಿ ಜಿ ಮಾರಿಹಾಳ ಶ್ರೀ ಸದಾಶಿವ ಒಡೆಯರ ಮುಂತಾದ ಇನ್ನೂ ಅನೇಕ ಸಂಶೋಧಕರು ಕಿತ್ತೂರಿನ ಅರಸೊತ್ತಿಗೆಯನ್ನು ಬಣಜಿಗ ಯುವಕರು ಸ್ಥಾಪಿಸಿದರೆಂದು ತಿಳಿದು ಬರುತ್ತದೆ . ಇದಕ್ಕೆ ಪೂರಕವಾಗಿ ಕಿತ್ತೂರು ಇತಿಹಾಸದ ಮನೆತನದವರ ಅಡ್ಡ ಹೆಸರು ಪಟ್ಟಣಶೆಟ್ಟಿ “ಎಂದಿದ್ದು ಕಿತ್ತೂರು ಸಂಸ್ಥಾನವನ್ನು 43 ವರುಷವಾಗಿ ಆಳಿದ ಎರಡನೆಯ ಅರಸು ಹಿರೇನಾಗನಗೌಡ ಪಟ್ಟಣಶೆಟ್ಟಿ (1591 ರಿಂದ 1633 )

ಕಿತ್ತೂರು ಸಂಸ್ಥಾನದ ಮೂಲ ನೆಲೆ ಸೆಲೆ ಯಾವುದು ?

ಕಿತ್ತೂರು ಸಂಸ್ಥಾನದ ಮೂಲ ನೆಲೆ ಸೆಲೆಗಳ ಬಗ್ಗೆ ಭಿನ್ನ ಭಿನ್ನವಾದ ಸಂಶೋಧನೆಗಳು ಹುಟ್ಟಿಕೊಂಡಿವೆ ,ಅವುಗಳಲ್ಲಿ ಬಹುತೇಕ ಸಂಶೋಧನೆಗಳು ತಪ್ಪು ಗ್ರಹಿಕೆಗೆ ಒಳಗಾದ ಮತ್ತು ಗ್ರಂಥ ಪರಾಮರ್ಶೆಯಿಂದ ಮಾತ್ರ ನಡೆದ ಸಂಶೋಧನೆಗಳಾಗಿವೆ. ಕಾರಣ ಕಿತ್ತೂರಿನ ಚರಿತ್ರೆ ಇತಿಹಾಸವನ್ನು ಅಧ್ಯಯನ ಮತ್ತು ಸಂಶೋಧನಾ ಕೈಗೊಂಡ ಬಹುತೇಕರು ಕಿತ್ತೂರು ನಾಡಿನ ಮೂಲ ಪುರುಷರು ಮೈಸೂರು ಪ್ರಾಂತದ ಶಿವಮೊಗ್ಗ ಜಿಲ್ಲೆಯ ಸಾಗರದವರು ಎಂಬ ಸ್ಪಷ್ಟ ಮತ್ತು ನಿಚ್ಚಳ ಅಭಿಪ್ರಾಯಕ್ಕೆ ಬಂದಿದ್ದಾರೆ .

ಕೆಲವರ ಅಭಿಪ್ರಾಯಗಳನ್ನು ಇಲ್ಲಿ ಉಲ್ಲೇಖಿಸಿ ತಾಳೆ ಹಾಕಿ ಒಂದು ನಿರ್ಧಿಷ್ಟ ನಿರ್ಣಯಕ್ಕೆ ಬರುವುದು ನಮ್ಮ ಜವಾಬ್ದಾರಿಯಾಗಿದೆ .

1 ) ಪ್ರೊ ವಿ ಜಿ ಮಾರಿಹಾಳ ಅವರು
ವಿಜಯಪುರದ ಕೋಟೆಗೆ ಸಾಮಗ್ರಿಗಳನ್ನು ಪ್ರಾಮಾಣಿಕವಾಗಿ ಪೂರೈಸುವ ಕಾರ್ಯಕ್ಕೆ ಆದಿಲಶಾಹಿ ಬಾದಶಾಹನು ಸಾಗರ ಪ್ರಾಂತದ ಸಹೋದರರಿಗೆ ಬಳುವಳಿಯಾಗಿ ಬಂತು ಕಿತ್ತೂರು ನಾಡು ಎಂದು ದಾಖಲಿಸಿದ್ದಾರೆ .ಇಲ್ಲಿ ಸಾಗರ ಪ್ರಾಂತವೆಂಬುದು ಶಿವಮೊಗ್ಗ ಜಿಲ್ಲೆಗೆ ಸೇರಿದ ನಾಡು .

2 ) ಡಾ ಸಂತೋಷ ಹಾನಗಲ್
ಸಾಗರ ಪ್ರಾಂತದ ಹಿರಿಯ ಮಲ್ಲಪ್ಪಶೆಟ್ಟಿ ಮತ್ತು ಕಿರಿಯ ಮಲ್ಲಪ್ಪಶೆಟ್ಟಿ ಎಂಬ ಬಣಜಿಗ ಸಹೋದರರು ಅವರಿಂದ ಕಿತ್ತೂರು ಸಂಸ್ಥಾನಕ್ಕೆ ಅಡಿಗಲ್ಲಾಯಿತು .1585 ರಿಂದ 1669 ವರೆಗೆ ಸಂಪಗಾವಿಯನ್ನು ಕೇಂದ್ರಸ್ಥಳವಾಗಿ ಮಾಡಿಕೊಂಡು ಆಳಿದ ದೇಸಗತಿ ಮನೆತನವು . ಇಲ್ಲಿಯೂ ಕೂಡ ಸಾಗರವೆಂಬುವುದು ಶಿವಮೊಗ್ಗ ಜಿಲ್ಲೆಯ ಸಾಗರವೆಂದೆ ಪರಿಗಣಿಸುತ್ತಾರೆ .

3 ) ಡಾ ಚೆನ್ನಕ್ಕ ಪಾವಟೆ ( ಎಲಿಗಾರ )
ಸಾಗರ ಪ್ರಾಂತದ ಹಿರಿಯ ಮಲ್ಲಪ್ಪಶೆಟ್ಟಿ ಮತ್ತು ಕಿರಿಯ ಮಲ್ಲಪ್ಪಶೆಟ್ಟಿ ಎಂಬ ಸಹೋದರರು ವಿಜಾಪುರಕ್ಕೆ ಬಂದು ಬಾದಶಾಹ ಇಬ್ರಾಹಿಂ ಶಾಹನಿಂದ ವ್ಯಾಪಾರಕ್ಕೆಂದು ಪರವಾನಿಗೆ ಪಡೆದು ವ್ಯಾಪಾರ ಆರಂಭಿಸಿದರು . ಇವರು ಹಿರಿಯ ಮಲ್ಲಪ್ಪಶೆಟ್ಟಿ ಮತ್ತು ಕಿರಿಯ ಮಲ್ಲಪ್ಪಶೆಟ್ಟಿ ಎಂಬ ಸಹೋದರರು ಇಂದಿನ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಸೇರಿದವರೆಂದು ಅಭಿಪ್ರಾಯಪಟ್ಟಿದ್ದಾರೆ .

4 ) ಡಾ ರತ್ನಶಿಲಾ ಗುರಡ್ಡಿ
ದೇಶಗತಿಯ ಈ ವರೆಗಿನ ಸಂಶೋಧನೆಯ ಪ್ರಕಾರ ಸಾಗರ ಪ್ರಾಂತದ ಇಬ್ಬರು ಬಣಜಿಗರು ಕಿತ್ತೂರು ಭಾಗಕ್ಕೆ ಬಂದರು ಎನ್ನುವಲ್ಲಿಯೂ ಸಹಿತ ಅವರು ಇವರಿಬ್ಬರನ್ನು ಸಾಗರ ಪ್ರಾಂತಕ್ಕೆ ಸೇರಿದವರೆಂಬ ನಿರ್ಣಯಕ್ಕೆ ಬರುತ್ತಾರೆ .

5 ) ಪ್ರಿ ಸಿ ವಿ ಮಠದ
ಅನೇಕ ಆಕರಗಳಿಂದ ತಿಳಿದು ಬಂದಂತೆ ಮೊದಲ ಕಿತ್ತೂರು ಸಂಸ್ಥಾನದ ಮೂಲಪುರಷರು ಶಿವಮೊಗ್ಗ ಜಿಲ್ಲೆಯ ಸಾಗರ ಪ್ರಾಂತದ ಬಣಜಿಗರು ,ಶೆಟ್ಟರು ಎಂದು ತಿಳಿದು ಬರುತ್ತದೆ . ಕಿತ್ತೂರಿನ ಇತಿಹಾಸದ ಬಗ್ಗೆ ಆಳವಾಗಿ ಸಂಶೋಧನೆ ನಡೆಸಿದವರಲ್ಲಿ ಪ್ರಿ ಸಿ ವಿ ಮಠದ ಒಬ್ಬ ಗಣ್ಯರು.ಅವರೂ ಸಹಿತ ಕಿತ್ತೂರು ಸಂಸ್ಥಾನದ ಮೂಲಪುರಷರು ಸಾಗರ ಪ್ರಾಂತಕ್ಕೆ ಸೇರಿದವರೆಂಬ ನಿರ್ಧಾರಕ್ಕೆ ಬಂದಿದ್ದಾರೆ .

6 ) ಡಾ .ಗ ಸ ಹಾಲಪ್ಪ
-ಕಿತ್ತೂರಿನ ಮೂಲ ಪುರುಷರು ಮೂಲತಃ ಈ ಉಭಯ ಸಹೋದರರು ಮಲೆನಾಡು ಗೌಡ ಮನೆತನದಿಂದ ಬಂದವರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ . ಅಂದರೆ ಇವರೂ ಸಹಿತ ಮೈಸೂರು ಪ್ರಾಂತ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ಎಂಬ ಪ್ರದೇಶಕ್ಕೆ ಸೇರಿದವರೆಂಬ ಅಭಿಪ್ರಾಯಕ್ಕೆ ಬಂದವರು.

7 ) ಶ್ರೀ ಸದಾಶಿವ ಒಡೆಯರ
ಕಿತ್ತೂರು ಸಂಸ್ಥಾನದ ಸಂಸ್ಥಾಪಕರಾದ ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿ ಎಂಬ ಶೂರ ಸೇನಾನಿಗಳು ಮೊದಲಿಗೆ ಮೈಸೂರು ಸಂಸ್ಥಾನದ ಸಾಗರಕ್ಕೆ ಸೇರಿದವರು ಎಂಬ ಅಭಿಮತಕ್ಕೆ ಬರುತ್ತಾರೆ . ಶ್ರೀ ಸದಾಶಿವ ಒಡೆಯರ ಅವರೂ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಕಿತ್ತೂರು ಸಂಸ್ಥಾನದ ಬಗ್ಗೆ ಸುದೀರ್ಘವಾದ ಸಂಶೋಧನೆ ಕೈಕೊಂಡವರಲ್ಲಿ ಅಗ್ರಗಣ್ಯರು .

ಇವರಲ್ಲದೆ ಇನ್ನೂ ಅನೇಕ ಸಾಹಿತಿಗಳು ಸಂಶೋಧಕರು ಕಿತ್ತೂರು ಸಂಸ್ಥಾನದ ಮೂಲಪುರುಷರನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಎಂದು ತಪ್ಪು ಗ್ರಹಿಕೆಗೆ ಒಳಪಟ್ಟು ತಮ್ಮ ಸಂಶೋಧನೆಯಲ್ಲಿ ಬೇರೆ ಬೇರೆ ಗ್ರಂಥಗಳಲ್ಲಿ ಇದುವೆ ಮತ್ತೆ ಮತ್ತೆ ಪುನರಾವರ್ತನೆಯಾಗಿ ಹಾಗೆ ಮುಂದುವರೆದುಕೊಂಡು ಬಂದಿದೆ .

ಜಾನಪದ ಸಾಹಿತ್ಯ ,ಮೌಖಿಕ ಹೇಳಿಕೆ ಕಿತ್ತೂರು ಸಂಸ್ಥಾನದ ಬಗೆಗಿನ ಗ್ರಂಥಗಳು ಹಿರಿಯ ಮಲ್ಲಣ್ಣಶೆಟ್ಟಿ ಅಥವಾ ಹಿರಿಯ ಮಲ್ಲಪ್ಪಶೆಟ್ಟಿ ಮತ್ತು ಕಿರಿಯ ಮಲ್ಲಣ್ಣ ಶೆಟ್ಟಿ ಅಥವಾ ಕಿರಿಯ ಮಲ್ಲಪ್ಪಶೆಟ್ಟಿ ಎಂಬ ಶೂರ ಸಹೋದರರು ವ್ಯಾಪಾರಕ್ಕೆಂದು ಸಾಗರಪ್ರಾಂತದ ಬಣಜಿಗರು
ಇಬ್ರಾಹಿಮ್ ಆದಿಲಶಾಹಿ ರಾಜನ ಅರಸೊತ್ತಿಗೆಗೆ ಬಂಗಾರ ಬೆಳ್ಳಿಯ ಸಲಕರಣೆಗಳನ್ನು ಆಭರಣಗಳನ್ನು ಪೂರೈಸುತ್ತಿದ್ದರು ಎಂದು ದಾಖಲಾಗಿದೆ . *ಕಿತ್ತೂರಿನ ಇತಿಹಾಸವನ್ನು ಅಧ್ಯಯನ ಮಾಡಿದವರಲ್ಲಿ ಅನೇಕರು ಸಂಸ್ಥಾಪಕರಾದ ಹಿರೇಮಲ್ಲಶೆಟ್ಟಿ ಮತ್ತು ಕಿರಿಯ ಮಲ್ಲಶೆಟ್ಟಿಯವರು ಆದಿಲಶಾಹಿ ವಿಜಯಪುರಕ್ಕೆ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಿದ್ದ ಬಣಜಿಗ ಯುವಕರು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ*

ಜನಪದಿಗರ ಲಾವಣಿ ಗೀಗಿ ಪದ ಡೊಳ್ಳಿನ ಪದಗಳಲ್ಲಿ ಕಿತ್ತೂರು ದೊರೆಗಳು ಮೆಣಸು ಲವಂಗ ಮುಂತಾದ ಮಸಾಲೆ ಸಾಮಗ್ರಿಗಳನ್ನು ವ್ಯಾಪಾರ ಮಾಡುತ್ತ ರಾಜರಿಗೆ ಇವುಗಳನ್ನು ಪೂರೈಸುತ್ತಿದ್ದರೆಂದು ದಾಖಲಿಸಿದ್ದಾರೆ . ಒಟ್ಟಾರೆ *ಕಿತ್ತೂರಿನ ಸಂಸ್ಥಾನದ ಮೂಲ ಪುರುಷರು ಸಂಸ್ಥಾಪಕರಾದ ಹಿರೇಮಲ್ಲಶೆಟ್ಟಿ ಮತ್ತು ಕಿರಿಯ ಮಲ್ಲಶೆಟ್ಟಿಯವರು ಲಿಂಗಾಯತ ಬಣಜಿಗರು ಶೆಟ್ಟರು ಎಂಬ ಅಂಶವನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಿದ್ದಾರೆ . ಹೀಗಾಗಿ ಲಿಂಗಾಯತ ಬಣಜಿಗ ಸಂಸ್ಥಾನವು ಮುಂದೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಹಳೆಯನ್ನೂದಿ ಜೀವ ಬಲಿದಾನ ಮಾಡಿದ ಶ್ರೇಷ್ಠರು .ಕಿತ್ತೂರಿನ ಅರಸು ಮನೆತನದವರ ವೃತ್ತಿ ವ್ಯಾಪಾರ ಮತ್ತು ಧರ್ಮ ಲಿಂಗಾಯತ ( ಬಣಜಿಗರು ) ಹಾಗಿದ್ದರೆ ಕಿತ್ತೂರ ಸಂಸ್ಥಾನಿಕರ ಮೂಲ ಸ್ಥಳ ಯಾವುದು ಶಿವಮೊಗ್ಗ ಜಿಲ್ಲೆಯ ಸಾಗರವೋ ಅಥವಾ ಬೇರೆ ಯಾವುದು ? ನೋಡೋಣ ಮುಂದಿನ ಸಂಚಿಕೆಯಲ್ಲಿ

ಡಾ ಶಶಿಕಾಂತ ರುದ್ರಪ್ಪ ಪಟ್ಟಣ ಪುಣೆ

9552002338

————————————+——————

ಮಾನ್ಯ ಓದುಗರಲ್ಲಿ ವಿನಂತಿ,
ಪುಣೆಯ ಡಾ.ಶಶಿಕಾಂತ ಪಟ್ಟಣ ಅವರು *ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು*
ಎಂಬ ಸರಣಿ ಲೇಖನ ಪ್ರಕಟವಾಗಲಿದೆ..
ಓದುಗರು ಪ್ರಾಂಜ್ವಲ ಮನಸ್ಸಿನಿಂದ ಓದಿ, ಈ ಲೇಖನ ಸರಣಿ‌ ಮುಗಿದ ಮೇಲೆ ಓದುಗರಿಗೆ ಸಂಶಯ, ಅನುಮಾನ, ಹೆಚ್ಚಿನ ಚಿಂತನೆಯ ಚರ್ಚೆಯ ವಿಷಯಗಳಿದ್ದರೆ ಲೇಖಕರೊಂದಿಗೆ ಚರ್ಚಿಸಿ. 

ಸಂಪಾದಕ

ವಿಶೇಷ ಸೂಚನೆ
copy rights resrved(ಇಲ್ಲಿನ ಎಲ್ಲ ಬರಹಗಳೂ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ.) ಈಬರಹಗಳ ಎಲ್ಲಾ ಅಭಿಪ್ರಾಯಗಳೂ ಲೇಖಕರ ವೈಯುಕ್ತಿಕ ಅಭಿಪ್ರಾಯಗಳಾಗಿದ್ದು,e-ಸುದ್ದಿ ಬ್ಲಾಗ್ ಅದಕ್ಕೆ ಹೊಣೆಯಾಗಿರುವುದಿಲ್ಲ
-ಸಂಪಾದಕ

Don`t copy text!