ಅಪ್ಪುರವರ ಸಾವು ನಮಗೆಲ್ಲಾ ಒಂದು ಪಾಠವೇ ಸರಿ!!!
ಅಪ್ಪು ಸರ್‌ರವರ ಸಾವು, ಆ ದಿನ ಅದ್ಯಾಕೋ ತುಂಬಾ ಹತ್ತಿರ ಅನ್ನಿಸಿಬಿಟ್ಟಿತು. ಕೆಲ ತಿಂಗಳುಗಳ ಹಿಂದೆಯೇ ಅಪ್ಪ ಅಮ್ಮರ ಸಾವೂ ಆಗಿತ್ತು. ಮೊದಲಿಗೆ ಸಾವಿನತ್ತ ಪಯಣ ಕೈಗೊಂಡ ಅಪ್ಪನವರ ಅಂತ್ಯಸಂಸ್ಕಾರ, ವಿಧಿವಿಧಾನ ನೆರವೇರಿಸುವುದನ್ನು, ಕೊರೊನಾದಿಂದಾಗಿ ನೋಡಲೂ ಆಗಲಿಲ್ಲ, ಆ ಸಂದರ್ಭದಲ್ಲಿ ಮನೆಯಲ್ಲಿದ್ದು ಅಮ್ಮರನ್ನು ನೋಡಿಕೊಳ್ಳುವುದೇ ನನ್ನ ಪಾಲಿನ ತುರ್ತು ಕರ್ತವ್ಯವಾಗಿತ್ತು. ಅಪ್ಪನ ಎಲ್ಲಾ ಕಾರ್ಯಗಳನ್ನು ಮಾಡಿ ಮುಗಿಸುವುದರಲ್ಲಿ ನಿರತರಾಗಿದ್ದ ಅಣ್ಣಂದಿರು ಮನೆ ಹೊರಗಡೆಯೇ ಉಳಿದಿದ್ದರು. ಅಪ್ಪನ ಸಾವಿನ ವಿಷಯ ಕೇಳಿ ಅಕ್ಕ ಸ್ತಭ್ಧವಾಗಿಬಿಟ್ಟಿದ್ದರು. ಇಂಥ ಪರಿಸ್ಥಿತಿಯ ನಡುವೆ ನಾನೂ ಅಳುತ್ತಾ ಕುಳಿತರೆ ಅಮ್ಮರವರಿಗೆ ಧೈರ್ಯ ತುಂಬುವವರ್ಯಾರು ಎಂದು ಯೋಚಿಸಿ, ನಾನು ಕಲ್ಲಾಗಿಬಿಟ್ಟಿದ್ದೆ. ಅಪ್ಪ ಹೋಗಿಬಿಟ್ಟಿರುವ ವಿಚಾರವನ್ನೂ ಅಮ್ಮನ ಮುಂದಿಡುವ ದೊಡ್ಡ ಜವಾಬ್ದಾರಿ ನನ್ನ ಪುಟ್ಟ ಹೆಗಲ ಮೇಲೇರಿಸಿ ಅಣ್ಣಂದಿರು ಮನೆ ಹೊರಗೆ ಹೋಗಿದ್ದರು. ಅದಕ್ಕಾಗಿ ಮನದುಂಬಿ ಅಳುವ ಭಾಗ್ಯವೂ ಆ ಸಂದರ್ಭದಲ್ಲಿ ನನಗೆ ಸಿಕ್ಕಿರಲಿಲ್ಲ…
ಅದಾದ ಬಳಿಕ ನಾವೆಲ್ಲಾ ಕೊರೊನಾ ಪಾಸಿಟಿವ್ ಆಗಿ ನಮ್ಮ ಇಡೀ ಕುಟುಂಬವೇ ತತ್ತರಿಸಿಹೋಗಿತ್ತು. ನಂತರ ಅದೇನೇನೋ ಹರಸಾಹಸ ಮಾಡಿ 18 ದಿನ ಐ.ಸಿ.ಯು ನಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಅದ್ಹೇಗೋ ನಾನು ಉಳಿದು ಬಂದೆ. ಅಮ್ಮನವರೂ ಅಪ್ಪನಲ್ಲಿಗೆ ಹೋಗಿ ಬಿಟ್ಟಿರುವ ವಿಚಾರ ಸುಮಾರು ಮೂರ್ನಾಲ್ಕು ತಿಂಗಳ ನಂತರ ತಿಳಿದ ನನಗೆ ಆ ದಿನವೂ ಅಳುವ ಭಾಗ್ಯ ದೊರೆಯಲಿಲ್ಲ. ಏಕೆಂದರೆ ಅಮ್ಮನ ಸಾವಿನ ವಿಚಾರ ನನಗೆ ತಿಳಿದಿದ್ದು, ನಾನು ಯಾರದೋ ಮನೆಯಲ್ಲಿದ್ದಾಗ. “ನಮ್ಮೊಟ್ಟಿಗೆ ಇರುವವರು ಸಾಂತ್ವನವಾದರೂ ನೀಡುವ ಅರ್ಹತೆಯುಳ್ಳವರಿದ್ದರೆ ಮಾತ್ರ ಅಂಥವರ ಮುಂದೆ ಕುಗ್ಗಬೇಕು ನಮ್ಮ ತೊಂದರೆಗಳನ್ನು ಹೇಳಿಕೊಳ್ಳಬೇಕು, ಇಲ್ಲ ಎಂದರೆ ನೂರು ಮುಳ್ಳುಗಳು ಚುಚ್ಚಿದರೂ ಎದೆಗುಂದದೇ ಎದ್ದು ನಿಲ್ಲಬೇಕು” ಎಂದು ಹೇಳುತ್ತಿದ್ದ ಅಪ್ಪನ ಮಾತು ನೆನೆದು ಧೈರ್ಯ ತುಂಬಿಕೊಂಡು ಅಂದೂ ಕಲ್ಲಾಗಿಬಿಟ್ಟಿದ್ದೆ. ಅದರ ಮಧ್ಯೆಯೂ ಮನಸ್ಸು ಹಿಡಿದುಕೊಂಡೇ ಬದುಕುತ್ತಿದ್ದೆ.
ನಾನು ಮೂರು ತಿಂಗಳು ಆಕ್ಸಿಜನ್ ಮೇಲಿದ್ದು ನಂತರ ಗುಣಮುಖಳಾದರೂ ನಡೆದಾಡಲು ಗೋಡೆ ಹಿಡಿದುಕೊಂಡು ಹೋಗುವ ಪರಿಸ್ಥಿತಿಯಲ್ಲೇ ಕೆಲಸಕ್ಕೆ ಸೇರಿಕೊಂಡು ಮೈಕ್ ಬಳಸುವ ಮೂಲಕ ಪಾಠ ಪ್ರವಚನಗಳಲ್ಲಿ ತಲ್ಲೀನಳಾಗಿದ್ದೆ. ಕೆಲ ದಿನಗಳಾದವು, ಪ್ರತಿದಿನದಂತೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದೆ. ಆ ದಿನ ಯಾಕೋ, ಕಾಲೇಜಿನಲ್ಲಿ ಏಕಾಏಕಿ ವಿದ್ಯಾರ್ಥಿಗಳಲ್ಲಿ ತಳಮಳ, ಪಿಸುಮಾತು ಹೆಚ್ಚಾಗ ತೊಡಗಿತು. ಅದೇಕೆ ಮಕ್ಕಳು ಇವತ್ತು ಹಿಂಗೆಲ್ಲಾ ಮಾಡುತ್ತಿದ್ದಾರೆ ಎಂದು ವಿಚಾರಿಸಿದರೆ “ ಮೇಡಂ ಪುನಿತ್ ಸರ್ ಆಸ್ಪತ್ರೆ ಸೇರಿದ್ದಾರಂತೆ” ಎಂದು ಒಬ್ಬ ವಿದ್ಯಾರ್ಥಿ ಎದ್ದು ನಿಂತು ಹೇಳಿದ. ನಮ್ಮ ಮನೆಯವರೇ ಎಂಬಂತೆ ಎದೆಯಲ್ಲೇಕೋ ಡವಡವ ಬಡಿತ ಹೆಚ್ಚಾಗತೊಡಗಿತು. ಕೋನೆ ತರಗತಿಯನ್ನು ಮುಗಿಸಿಕೊಂಡು ಅಧ್ಯಾಪಕರೆಲ್ಲಾ ಮೀಟಿಂಗ್ ಸಮಯಕ್ಕೆ ಸಿಬ್ಬಂದಿ ಕೊಠಡಿಯಲ್ಲಿ ಸೇರಿಕೊಂಡು ಕಾಲೇಜಿನ ಆಗುಹೋಗುಗಳ ಬಗ್ಗೆ ಚರ್ಚಿಸುತ್ತಿದ್ದೇವು, ಅಷ್ಟರಲ್ಲಿ ಯಾರೋ ಹೇಳಿಯೇ ಬಿಟ್ಟರು “ಅಪ್ಪು ಹೋಗ್ಬಿಟ್ರು” ಅಂತ. ನಿಜಕ್ಕೂ ಒಂಥರಾ ಬೇಜಾರು ಆಗಲಾರಮಭಿಸಿತು. ಕಾಲೇಜು ಮುಗಿಸಿಕೊಂಡು ಮನೆಗೆ ಬಂದು ಟಿ.ವಿ ಆನ್ ಮಾಡಿ ನ್ಯೂಸ್ ನೋಡುತ್ತಿದ್ದಂತೆ ಅಪ್ಪುರವರ ಇಡೀ ಕುಟುಂಬದ ರೋಧನೆ, ಅಭಿಮಾನಿಗಳ ಆಕ್ರಂದನ ನಿಜಕ್ಕೂ ಮನಸ್ಸಿಗೇನೋ ಘಾಸಿಯುಂಟು ಮಾಡಿತು. ಟಿ.ವಿ. ಮೂವಿ, ಸಿರಿಯಲ್ ನೋಡಿ ಇಂಥ ನೋವಿನ ಘಟನೆಗಳಿಗೆ ಧೈರ್ಯದಿಂದ ವರ್ತಿಸುತ್ತಿದ್ದ ನನಗೆ ಅಂದು ಕರುಳು ಕಿತ್ತುಬರುವಂತಹ ನೋವಾಯಿತು.
ನನ್ನ ತಂದೆ ತಾಯಿಯ ಸಾವಿನ ಗಾಯಗಳ್ಯಾಕೋ ಕೆಂಪು ಕೆಂಪಾಗಿ ಕಂಡುಬಂದವು. ಅಪ್ಪುರವರ ಪಾರ್ಥೀವ ಶರೀರದ ಮುಂದೆ ಅವರ ಕುಟುಂಬದ ಸದಸ್ಯರನ್ನು ನೋಡುತ್ತಿದ್ದಂತೆ ನಾನು ನನ್ನ ಜೀವನದಲ್ಲಿಯೇ ಅಳದಿರುವ ಹಾಗೆ ಅತ್ತು ಬಿಟ್ಟೆ. ಆ ಸಮಯದಲ್ಲಿ ದಿಢೀರನೇ ನಮ್ಮೊಟ್ಟಿಗಿರುವ ವ್ಯಕ್ತಿ ಅಗಲಿ ಹೋದರೆ ಆಗುವ ನೋವಿನ ತಾಜಾ ಅನುಭವ ನನ್ನಲ್ಲಿತ್ತು. ಅಪ್ಪ ಅಮ್ಮರ ಪಾಲಿನ ಕಣ್ಣೀರೊಂದಿಗೆ ಅಪ್ಪುರವರ ಸಾವಿನ ಘಳಿಗೆ ಒಗ್ಗೂಡಿ ನನ್ನ ಎದೆಯಾಳದಲ್ಲಿ ತಿಂಗಳುಗಳಿಂದ ಹೂತಿಟ್ಟ ನೋವು ಕಣ್ಣಿಂದ ಸುರಿಯಲಾರಂಭಿಸಿತು.
ಅದ್ಯಾಕೋ ಅಪ್ಪು ಸರ್ ರವರ ಸಾವು ನನ್ನ ವೈಯಕ್ತಿಕ ಜೀವನದ ಮೇಲೆ ದೊಡ್ಡ ಪರಿಣಾಮವೇ ಬೀರಿತು. ಅವರ ಪೋಟೋ ನೋಡಿದರೂ ಅಕ್ಷಿಪಟಲದಲ್ಲಿ ಅದು ನಿಶ್ಚಲವಾಗಿ ನಿಂತು ಬಿಡುತ್ತಿತ್ತು ಕಂಬನಿ ಧಾರೆಯೇ ಸುರಿಯುತ್ತಿತ್ತು. ಮನುಷ್ಯ ಹೇಗೆ ಬದುಕಬೇಕು? ಹೇಗೆ ಗಳಿಸಬೇಕು, ಹೇಗೆ ಯಶ ಸಾಧಿಸಬೇಕು? ಎಂಬ ಗುರಿಗಳ ನಡುವೆ, ಅಪ್ಪು ಸರ್ ರವರ ಸಾವು ಮನುಷ್ಯ ಹೇಗೆ ಸಾಯ ಬೇಕು? ಸಾಯುವ ಮುನ್ನ ಎಂಥ ಪರೋಪಕಾರಿ ಜೀವನ ಸಾಗಿಸಬೇಕು? ಸತ್ತ ನಂತರವೂ ಹೇಗೆ ಅಮರವಾಗಿರಬೇಕು? ಎಂದು ಸಾವಿಗೂ ಒಂದು ಗುರಿ ತೋರಿಸಿ ಹೋಗಿದೆ ಎಂದರೆ ತಪ್ಪಾಗಲಾರದು. ಅಂದಿನಿಂದ ಅಪ್ಪುರವರ ಸಾವು ನನ್ನಲ್ಲಿ ಒಂಥರಾ ಸ್ವಂತದ್ದಾಗಿ ಬಿಟ್ಟಿತು. ಅವರ ಪೋಟೋಗಳನ್ನು ನೋಡಿದಾಗೊಮ್ಮೆ ಅವರ ಬಗ್ಗೆ ಮಾತುಕತೆ ನಡೆದಾಗೊಮ್ಮೆ ಅದೆಷ್ಟು ಜೀವ ಗಟ್ಟಿಮಾಡಿಕೊಂಡರೂ ಮನಸ್ಸು ಭಾರವಾಗಿಯೇ ಬಿಡುತ್ತದೆ.
ಕೊರೊನಾ ದಿಂದಾಗಿ ನಾನು ಐ.ಸಿ.ಯು ನಲ್ಲಿದ್ದಾಗ, ನನ್ನ ಸ್ಯಾಚುರೇಷನ್ ಪಾತಾಳಕ್ಕಿಳಿದು, ಶ್ವಾಸಕೋಶಗಳು ಅತ್ಯಧೀಕ ಹಾನಿಯಾಗಿ ವಾರಗಳಗಟ್ಟಲೆ ಕಾದುಕುಳಿತರೂ ಸಹಜ ಸ್ಥಿತಿಗೆ ಬಾರದಿದ್ದಾಗ, ಉಸಿರುಗಟ್ಟಿದಾಗ ಎದೆನೋವಲ್ಲೇ ನಾನೂ ಸಾವನ್ನು ಸಮೀಪದಿಂದ ನೋಡಿ, ಇಷ್ಟು ಬೇಗ ಹೀಗೆಲ್ಲಾ ಸತ್ತರೆ ಹೇಗೆ? ಎಂದು ಚಿಂತೆಗೀಡಾಗಿದ್ದೆ, ಆದರೂ, ಬದುಕುಳಿಯುವ ಭರವಸೆಯೇ ಬಿಟ್ಟಿದ್ದ ಡಾಕ್ಟರ್‌ಗಳ ಮಾತುಗಳ ಮಧ್ಯೆ ಮತ್ತೇ ಬದುಕುಳಿದು ಬಂದಿರುವುದು ನನ್ನ ಪಾಲಿಗೆ ಪುನರ್ಜನ್ಮವೇ ಸರಿ. ಆದ್ದರಿಂದ ಇಂಥ ಮಹಾನ್ ವ್ಯಕ್ತಿಯ ಸಾವು ನನಗೆ ನೀಡುವ ಪಾಠಗಳೇ ವಿಭಿನ್ನ!!! ಅಪ್ಪುರವರ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ!! ಸಾವಿನ ಅನಿಶ್ಚಿತತೆಯಲ್ಲಿ, ನಿಂತುನಿಂತಲ್ಲೇ ಕೂತುಕೂತಲ್ಲೇ ನಮ್ಮವರನ್ನು ಕಳೆದುಕೊಳ್ಳುವ ಆತಂಕಗಳ ನಡುವೆ ಇರುವಷ್ಟು ದಿನ ಬದುಕುವ ‘ಯೋಗ’ ದೊಂದಿಗೆ ಯೋಗ್ಯತೆಯೂ ಇರುವಂತೆ, ಸಾವನ್ನೂ ಸಾರ್ಥಕಗೊಳಿಸಿಕೊಳ್ಳುವ ಮಹಾನ್ ವೈಚಾರಿಕತೆಯ ಅಪ್ಪು ಸರ್ ರವರ ಸಾವು ನಮ್ಮೆಲ್ಲರಿಗೂ ಒಂದೊಂದು ಪಾಠ ಕಲಿಸಿಬಿಟ್ಟಿದೆ ಎಂದರೆ ತಪ್ಪಾಗಲಾರದು!!!!!….
–ಪ್ರೊ. ಫರ್ಹಾನಾಜ್. ಮಸ್ಕಿ
ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರು
ಸ.ಪ್ರ.ದ.ಕಾಲೇಜು, ನೆಲಮಂಗಲ