ಕಿತ್ತೂರು ಸಂಸ್ಥಾನಕ್ಕೆ ಕಿಚ್ಚು ಹಚ್ಚಿದರು ಸ್ವಜನ ಬಂಧುಗಳು

ಕಿತ್ತೂರು ಇತಿಹಾಸ ಭಾಗ 5

ಕಿತ್ತೂರು ಸಂಸ್ಥಾನಕ್ಕೆ ಕಿಚ್ಚು ಹಚ್ಚಿದರು ಸ್ವಜನ ಬಂಧುಗಳು.

ಕಿತ್ತೂರಿನ ಇತಿಹಾಸದ ಶೌರ್ಯ ಧೈರ್ಯ ಯುದ್ಧ ನೀತಿ ಬ್ರಿಟಿಷರ ಸ್ಥೈರ್ಯವನ್ನೇ ಮಣ್ಣು ಪಾಲು ಮಾಡಿತ್ತು .1824 ಅಕ್ಟೋಬರ್ 23 ರ ನಂತರ ಕಿತ್ತೂರನ್ನು ಹೇಗಾದರೂ ಮಾಡಿ
ತಮ್ಮ ಕೈವಶಕ್ಕೆ ಪಡೆದುಕೊಳ್ಳಬೇಕೆಂಬ ಕುಟಿಲತನದಿಂದ ,ಹಲವು ತಂತ್ರಗಳನ್ನು ಕಂಪನಿ ಸರಕಾರ ಮಾಡುತ್ತಲೇ ಬಂದಿತ್ತು .
ಮಲ್ಲಸರ್ಜನ ನಂತರ ಶಿವಲಿಂಗ ಸರ್ಜ ನಂತರ ಶಿವಲಿಂಗರುದ್ರಸರ್ಜ ಆಮೇಲೆ ಮಕ್ಕಳಿಲ್ಲದ ಕಾರಣ ಮಾಸ್ತಮರಡಿ ದೇಸಾಯಿಯವರ ಮಗನಾದ ಶಿವಲಿಂಗಪ್ಪನನ್ನು ದತ್ತು ಸ್ವೀಕರಿಸಲಾಯಿತು.
ಒಂದು ರೀತಿಯಿಂದ ಈ ದತ್ತು ಸ್ವೀಕಾರಕ್ಕೆ ಕಿತ್ತೂರಿನ ರಕ್ತ ಸಂಬಂಧಿಗಳಲ್ಲೇ ಒಂದು ರೀತಿಯ ಅಸಮಾಧಾನ ಮಾತ್ಸರ್ಯದ ಹೊಗೆ ಸಣ್ಣಗೆ ಹರಡಲಾರಂಭಿಸಿತು .ಮಾಕಲಮರಡಿ, ಮಾಸ್ತಮರಡಿ ವಣ್ಣೂರು ತಲ್ಲೂರು ಮುಂತಾದ ದೇಸಗತಿ ಸಂಬಂಧಿಕರಲ್ಲಿ ಕಿತ್ತೂರಿನ ನೆಂಟರಲ್ಲಿ ಕಿತ್ತೂರಿನ ಸಂಸ್ಥಾನದ ಗಾದಿಗೆ ಒಂದು ರೀತಿಯ ಪೈಪೋಟಿ ಏರ್ಪಟ್ಟಿತ್ತು.

1824 ಅಕ್ಟೋಬರ್ 23 ರ ಘನ ಘೋರ ಯುದ್ಧ ಹಾಗೂ ವಿಜಯೋತ್ಸವವನ್ನು ಕಂಡು ಬ್ರಿಟಿಷರು ಕಂಗಾಲಾಗಿದ್ದಾರೆ ಕಿತ್ತೂರಿನ ನೆಂಟರಿಗೆ ಹೇಗಾದರೂ ಮಾಡಿ ಕಿತ್ತೂರಿನ ಆಸ್ತಿಯನ್ನು ಕಬಳಿಸಬೇಕೆಂಬ ಹೊಂಚು ನಡೆದಿತ್ತು. ಕಿತ್ತೂರಿನ ಕಾರಭಾರಿ ಹಾವೇರಿಯ ವೆಂಕೋಬರಾವ ಬ್ರಿಟಿಷರ ಜೊತೆಗೆ ಶಾಮೀಲಾಗಿ ಕಿತ್ತೂರಿನ ಆಡಳಿತದ ಎಲ್ಲ ಗುಪ್ತ ರಹಸ್ಯ ಸಂಗತಿಗಳನ್ನು ಅವರಿಗೆ ತಿಳಿಸಹತ್ತಿದನು. ಸ್ವಜನರ ಸಂಚು ನೆಂಟರ ಅಸಮಾಧಾನ ಒಟ್ಟಾರೆ ಕೊತ್ವಾಲ ಶಿವಲಿಂಗನ ಸಹಾಯ ಮದ್ದು ಗುಂಡಿನಲ್ಲಿ ಶೆಗಣಿ ರಾಡಿ ಕಲಿಸಲಾಯಿತು . 4 ಡಿಸೆಂಬರ್ 1824 ರಾತ್ರಿ ನಡೆದ ಈ ಕರಾಳ ಕೃತ್ಯ ಕಿತ್ತೂರಿನ ವೀರಭಂಟರಿಗೆ ತಿಳಿಯಲೇ ಇಲ್ಲ. ಹಿಂದಿನ ಹುಮ್ಮಸ್ಸಿನಲ್ಲಿ ಬೀಗುತ್ತಿದ್ದ ಸೈನಿಕರಿಗೆ ಮುಂಜಾನೆ ಮದ್ದು ಗುಂಡು ಹಾರದೇ ಹುಸಿಯಾದಾಗ ಅಧೈರ್ಯಗೊಂಡರು . ಆದರೂ
ವೀರಾವೇಶದಿಂದ ಹೋರಾಡಿದರು ಯುದ್ಧದಲ್ಲಿ ಸೋಲು ವಂಚನೆಗೆ ಕಿತ್ತೂರು ಆಹುತಿಯಾಯಿತು .

1824 ಡಿಸೆಂಬರ್ 5 ರಂದು ಕಿತ್ತೂರು ಸಂಸ್ಥಾನ ಸಂಪೂರ್ಣ ಪತನಗೊಂಡಿತು.ಕಿತ್ತೂರಿನ ಮಹಾರಾಣಿ ಚೆನ್ನಮ್ಮ ಮತ್ತು ಆಕೆಯ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿ ಮುಂತಾದವರಿಂದ ಕಿತ್ತೂರ ಸಂಸ್ಥಾನವನ್ನು ಕಂಪನಿ ಸರಕಾರಕ್ಕೆ ಅಧಿಕೃತವಾಗಿ ಒಪ್ಪಿಸಿದ ಬಗ್ಗೆ ಅವರೆಲ್ಲರ ರುಜು ಪಡೆದು ಆಮೇಲೆ ಅವರೆಲ್ಲರನ್ನೂ ಬೈಲುಹೊಂಗಲದ ಜೈಲಿಗೆ ಸ್ಥಳಾಂತರಿಸಿದರು..
ಬೈಲಹೊಂಗಲದ ಕೋಟೆಯ ಗೃಹಬಂಧನದಲ್ಲಿರಿಸಿ ಅವರಿಗೆ ಮಾಶಾಸನ ನೀಡುತ್ತದೆ ಕಂಪನಿ ಸರಕಾರ .ಕಿತ್ತೂರಿನ ವೈಭವ ಅರಮನೆಯ ವೈಖರಿ ಕೋಟೆ ಗೋಪುರಗಳ ಸುಂದರ ಕಟ್ಟಡಗಳು ಜನರನ್ನು ಮತ್ತೆ ಕಿತ್ತೂರು ಕ್ರಾಂತಿಗೆ ಆಕರ್ಷಿಸಬಲ್ಲವೆಂದು ಅವುಗಳನ್ನು ಕೆಡುವಲು ಚಾಪ್ಲಿನ್ ಎಂಬ ಅಧಿಕಾರಿ ಆದೇಶ ನೀಡುತ್ತಾನೆ .ಕೋಟೆಯ ಮುಖ್ಯ ಭಾಗ ಅರಮನೆಯ ಗೋಪುರ ಪ್ರಜೆಗಳ ಮನಸ್ಸಿನಿಂದ ದೂರವಾಗಬೇಕೆಂಬ ಮತ್ತು ಭಾರತೀಯ ಭಾವೈಕ್ಯತೆ ಶಾಶ್ವತವಾಗಿ ಜನರ ಮನಸ್ಸಿನಿಂದ ನುಚ್ಚು ನೂರಾಗಬೇಕೆಂಬ ದುರುದ್ದೇಶದಿಂದ ಕೋಟೆ ಅರಮನೆಯ ತೇಗಿನ ಕಂಬಗಳನ್ನು ಅಗ್ಗದ ಬೆಲೆಗೆ ಮಾರಲಾಯಿತು . ಸ್ಥಾನಿಕ ಮತ್ತು ಜನರ ಮೌಖಿಕ ಹೇಳಿಕೆಗಳಿಂದ ತಿಳಿದು ಬರುವ ಮುಖ್ಯ ಅಂಶವೆಂದರೆ ಅರಮನೆಯಲ್ಲಿ ಕೊಳ್ಳೆ ಹೊಡೆದ ಅನೇಕ ಸಾಮಗ್ರಿಗಳನ್ನು ಅಂಕಲಗಿಯ ಅಡವಿ ಸಿದ್ದೇಶ್ವರ ಮಠಕ್ಕೆ ಮತ್ತು ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಕೆಲ ಭಕ್ತರು ಒಯ್ದರೆಂದು ತಿಳಿದು ಬರುತ್ತದೆ ಅಷ್ಟೇ ಅಲ್ಲ ,ಅಂಕಲಗಿಯ ಮತ್ತು ಹುಬ್ಬಳ್ಳಿಯ ಮೂರುಸಾವಿರ ಮಠದ ಮುಖ್ಯ ಪಡಸಾಲೆಯ ಆವರಣಗಳು ಸಾಮ್ಯತೆಯನ್ನು ಹೊಂದಿವೆ. ಡಿಸೆಂಬರ್ 6 ರಿಂದ ಕಿತ್ತೂರು ಕೋಟೆಯನ್ನು ಕೆಡುವಲು ಆರಂಭಿಸಿದ್ದು 1825ಜನೆವರಿ 25 ರವೆರೆಗೆ ಹಗಲು ರಾತ್ರಿ ಮಣ್ಣುಪಾಲು ಮಾಡಿದರು. ಸಣ್ಣಪುಟ್ಟ ರಾಜರು ಬ್ರಿಟಿಷ್ ದೊರೆಗಳನ್ನು ಎದುರಿಸಿದ ಪರಿಣಾಮ ಏನಾಗಬಹುದೆಂಬ ದೃಶ್ಯವನ್ನು ಕಿತ್ತೂರು ಕೋಟೆಯನ್ನು ಸಂಪೂರ್ಣ ದ್ವಂಸ ಮಾಡುವುದರ ಮೂಲಕ ಭಾರತೀಯ ಅರಸರಿಗೆ ಎಚ್ಚರಿಕೆ ನೀಡಿದರು .ಕಿತ್ತೂರು ಆಳರಸರ ಸುವರ್ಣ ಯುಗದಲ್ಲಿ ಅನೇಕ ಇನಾಮು ಪಡೆದು ಆಸ್ತಿ ಮಾಡಿದ ಕಿತ್ತೂರಿನ ಅನೇಕ ಪ್ರತಿಷ್ಠಿತ ಮಠಗಳು ಮನೆತನದವರು ಕಂಪನಿಯವರ ಕ್ರೂರತನಾದ ವಿರುದ್ಧ ಚಕಾರ ಶಬ್ದವೆತ್ತಲಿಲ್ಲ . ಸಂಸ್ಥಾನಿಕರಿಂದ ಉಂಬಳಿ ಪಡೆದ ಅವರ ಹತ್ತಿರದ ಸಂಬಂಧಿಗಳು ಕಿತ್ತೂರನ್ನು ನೆಲೆ ಸಮ ಮಾಡುವದರ ವಿರುದ್ಧ ಪ್ರತಿಭಟಿಸಿದ ದಾಖಲೆ ಇತಿಹಾಸದಲ್ಲಿ ಕಂಡು ಬರುವದಿಲ್ಲ. ಹೀಗಾಗಿ ಕಿತ್ತೂರು ಬಿಟ್ಟು ಹೋಗುವಾಗ ರಾಣಿ ಚೆನ್ನಮ್ಮಳು ಅಲ್ಲಿನ ಜನರ ನಿಷ್ಕ್ರಿಯತೆ ಕುತಂತ್ರ ಸ್ವಾರ್ಥ ಸಾಧಕರ ಕಾರ್ಯವನ್ನು ಕಂಡು ಶಪಿಸಿದರಂತೆ .

ಪ್ರಜೆಗಳಿಂದ ಕಿತ್ತೂರು ಸಂಸ್ಥಾನಕ್ಕೆ ಹೋರಾಟ
ಕಿತ್ತೂರು ಅರಮನೆಯ ವೈಭೋಗವನ್ನು ಮಣ್ಣು ಪಾಲು ಮಾಡಿದ ಕಂಪನಿ ಸರಕಾರವು ಸಮಗ್ರ ಕ್ರಾಂತಿಯನು ಹತ್ತಿಕ್ಕಲು ಅನೇಕ ಯೋಧರನು ಬಂಧಿಸಿ ಸೆರೆಮನೆಗೆ ಕಳುಹಿಸಿದರು.ಕೆಲವು ತಿಂಗಳ ನಂತರ ಗುರುಸಿದ್ದಪ್ಪನವರನ್ನು ಹೊರತು ಪಡಿಸಿ ಉಳಿದ ಸೈನಿಕರನ್ನು ಯೋಧರನ್ನು ಬಂಧನದಿಂದ ಮುಕ್ತಗೊಳಿಸಲಾಯಿತು.ಕಿತ್ತೂರಿಗೆ ಸೇನಾಧಿಪತ್ಯವಿಲ್ಲದಂತಾಯಿತು .ಕಿತ್ತೂರು ವಿಮೋಚಿನೆಗೆ ಪರ್ಯಾಯ ಯುದ್ಧ ಹೋರಾಟ ಅನಿವಾರ್ಯವೆನಿಸ ಹತ್ತಿತು .ಕಿತ್ತೂರು ಸ್ವಾತಂತ್ರ್ಯ ಹೋರಾಟದ ತೀವ್ರತೆ ಕಡಿಮೆಯಾಯಿತೇ ? ಅಥವಾ ಸಮರ್ಥ ನಾಯಕತ್ವ ಇಲ್ಲದಾಯಿತೇ .ಇದೆ ಸಂದರ್ಭದಲ್ಲಿ ಸಂಗೊಳ್ಳಿ ಊರಿನ ಹಳಬ ರೋಗಣ್ಣವರ ಮನೆತನದ ರಾಯಣ್ಣ ಕಿತ್ತೂರಿನ ಬಂಟನಾಗುತ್ತಾನೆ . ಸಂಗೊಳ್ಳಿಯ ಬಾಳಪ್ಪ ಕುಲಕರ್ಣಿ ಬ್ರಿಟಿಷ್ ಸರಕಾರದಿಂದ ಕರಭಾರಿ ಅಮಲೇದಾರನಾಗಿ ಅವರ ಬೆಂಬಲದಿಂದ ಊರಿನಲ್ಲಿ ದರ್ಪ ಮತ್ತು ದಬ್ಬಾಳಿಕೆ ನಡೆಸಿ ಜನರನ್ನು ತುಂಬಾ ಗೋಳಿಟ್ಟುಕೊಂಡಿರುತ್ತಾನೆ .ಇದರ ವಿರುದ್ಧ ಧ್ವನಿ ಎಬ್ಬಿಸಿ ಬಾಳಪ್ಪ ಕುಲಕರ್ಣಿಯ ಜೊತೆಗೆ ದಂಗೆ ಎದ್ದು ಅಡಗುತಾಣಗಳನ್ನು ಆಶ್ರಯಿಸಿ ಗುಡ್ಡ ಬೆಟ್ಟ ಚಾರಣ ಪ್ರಿಯತೆಯ ಜೊತೆಗೆ ಅಪ್ಪಟ ರಾಷ್ಟ್ರಪ್ರೇಮದ ಕ್ರಾಂತಿ ಹೋರಾಟ ಗೌಪ್ಯತೆಯ ವ್ಯವಸ್ಥೆಯನ್ನು ಹುಟ್ಟು ಹಾಕಿದನು ಸಂಗೊಳ್ಳಿ ರಾಯಣ್ಣ . ಸಂಗೊಳ್ಳಿ ರಾಯಣ್ಣ ಮಲ್ಲಸರ್ಜನ ಮೊದಲನೆಯ ಪತ್ನಿ ರುದ್ರಮ್ಮನ ಅಕ್ಕರೆಯ ಬಾಲಕ ಬಂಟ . ರುದ್ರಮ್ಮನವರ ಸಮಾಧಿಯು ಕೂಡ ಸಂಗೊಳ್ಳಿಯಲ್ಲಿದೆ ಎಂಬುದನ್ನು ನಾವು ಮರೆತಿದ್ದೇವೆ . ಅತ್ಯಂತ ದುಸ್ಥಿತಿಯಲ್ಲಿರುವ ರುದ್ರಮ್ಮನವರ ಸಮಾಧಿ ಇನ್ನೂ ಊರ್ಜಿತಗೊಂಡಿಲ್ಲ ಯಾವುದೇ ಸರಕಾರ ಇತ್ತ ಕಣ್ಣು ಹಾಯಿಸಿಲ್ಲ.

27 -10 – 1824 ರಂದು ಮಾಸ್ತ ಮರಡಿಯ ದೇಸಾಯಿಯವರ ಮಗ ಶಿವಲಿಂಗನನ್ನು ಕಿತ್ತೂರಿನ ಒಡೆತನಕ್ಕೆ ಪಟ್ಟಾಭಿಷೇಕ ಮಾಡಿದ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣನು ಒಬ್ಬಸಾಮಾನ್ಯ ಸೈನಿಕ ಶಿಪಾಯಿಯಾಗಿ ಸಲಾಮಿ ತೆಗೆದುಕೊಂಡಿದ್ದರ ನೆನಪು ಮರುಕಳಿಸುತ್ತದೆ . ಈ ಶಿವಲಿಂಗನೆಂಬ ಅರಸ ಬಾಲಕನನ್ನ ಮುಂದೆ ಇಟ್ಟುಕೊಂಡು ಮುಂದೆ ಹೋರಾಟ ಮಾಡಬೇಕೆಂಬ ಉತ್ಕಟ ಬಯಕೆ ಕಾಡ್ಗಿಚ್ಚಿನಂತೆ ಒಳಗೊಳಗೇ ಕೊರೆಯ ಹತ್ತಿತು .ಹೌದು 1828 ರ ಮಧ್ಯ ಭಾಗದಲ್ಲಿ ಕಿತ್ತೂರಿನ ಪರ್ಯಾಯ ಹೋರಾಟದ ರೂವಾರಿ ಬಿಚ್ಚುಗತ್ತಿ ಚೆನ್ನಬಸಪ್ಪ ಸಂಗೊಳ್ಳಿ ರಾಯಣ್ಣ ಗಂಗಾಧರ ವೀರಪ್ಪ ಗಜವೀರ ಮುಂತಾದವರು ಸಂಪಗಾವಿ ಮಾಮಲೇದಾರರ ಕಚೇರಿ ಮೇಲೆ ದಾಳಿ ನಡೆಸಿ ಕಾಗದ ಪತ್ರಗಳನ್ನು ಸುಟ್ಟು ಕಂದಾಯದ ಹಣವನ್ನು ಲೂಟಿ ಮಾಡಿ ಬ್ರಿಟಿಷ್ ಸರಕಾರಕ್ಕೆ ಕ್ಷಿಪ್ರ ಕ್ರಾಂತಿಯ ಮುನ್ಸೂಚನೆ ನೀಡಿದರು .ಮೊದಲು ದರೋಡೆಕಾರನಾಗಿದ್ದ ಗಜವೀರ ಹಬಸ್ಯಾ ಎಂಬ ನಿಗ್ರೋ ಮೂಲದ ಸಿದ್ಧಿ ಯುವಕನೊಬ್ಬನು ತನ್ನ ತಂಡದೊಂದಿಗೆ ಸಂಗೊಳ್ಳಿ ರಾಯಣ್ಣನ ಬಲಗೈ ಬಂಟನಾಗಿ ಆಪ್ತ ಅಂಗ ರಕ್ಷಕನಾಗಿ ಮುಂದೆ ಅಪ್ಪಟ ರಾಷ್ಟ್ರ ಪ್ರೇಮಿಯಾಗಿ ಕಿತ್ತೂರಿನ ಹೋರಾಟದಲ್ಲಿ ತನ್ನ ಜೀವವನ್ನೇ ಮುಡುಪಾಗಿಟ್ಟುಕೊಂಡನು .<<,ಬಿಚ್ಚುಗತ್ತಿ ಚೆನ್ನಬಸಪ್ಪ ಮತ್ತು ಸಂಗೊಳ್ಳಿ ರಾಯಣ್ಣ ಎಷ್ಟೊಂದು ಆಪ್ತರಾಗಿದ್ದರೆಂದರೆ ನಿತ್ಯವೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು.ಹಂದಿ ಬಂಡಿಗನಾಥ ನಾಥ ಪರಂಪರೆಯ ಶಿವಾಲಯದ ಗುರುಗಳು ಸಂಗೊಳ್ಳಿ ರಾಯಣ್ಣನಿಗೆ ಆಶಿರ್ವಾದಿಸಿ ಹೋರಾಟ ಯಶವಾಗಲಿ ಎಂದು ಹರಸಿದರು .

1828 ರಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ಬಿಚ್ಚುಗತ್ತಿ ಚೆನ್ನಬಸಪ್ಪ ಮುಂತಾದವರು ಜಂಗಮರ ವೇಷದಲ್ಲಿ ಬೈಲಹೊಂಗಲ ಜೈಲಿಗೆ ರಾಣಿ ಚೆನ್ನಮ್ಮಳನ್ನು ಭೇಟಿ ಕೊಟ್ಟು ತಮ್ಮ ಹೋರಾಟದ ಇಂಗಿತ ಮತ್ತು ಆಶಯವನ್ನು ವ್ಯಕ್ತ ಪಡಿಸುತ್ತಾರೆ . *”ಗೆದ್ದು ಕಿತ್ತೂರ ತಂದು ಉದ್ದ ಬೀಳುವೆ ತಾಯಿ ಕದ್ದ ಮಾತಲ್ಲ ಇಲದಿರಕ ಬಿದ್ದು ಹೋಗುವೆ ನಾಡಾಗ*”ಎಂಬ ಬಿಚ್ಚುಗತ್ತಿ ರಾಯಣ್ಣಾ ಆದಿಯಾಗಿ ರಾಣಿ ಚೆನ್ನಮ್ಮಳ ಮುಂದೆ ಪ್ರತಿಜ್ಞೆ ಮಾಡುತ್ತಾರೆ.
ಸಂಗೊಳ್ಳಿರಾಯಣ್ಣನು 1828 ರ ನಂತರ ತನ್ನ ಅಧಿಕೃತ ಹೋರಾಟವನ್ನು ಆರಂಭಿಸದನು ಎಂದು ದಾಖಲೆಗಳ ಮೂಲಕ ತಿಳಿದು ಬರುತ್ತದೆ .
ಒಟ್ಟಾರೆ ಕಿತ್ತೂರಿನ ಅರಮನೆಯನ್ನು ಕೆಡುವ ಸಂದಭದಲ್ಲಿ ಅನೇಕ ಕಾಗದ ಪತ್ರಗಳು ಗ್ಯಾಜೆಟ್ಟಗಳು ಸುಟ್ಟು ಹೋಗಿವೆ ಹೀಗಾಗಿ ಹಲವು ಬಾರಿ ಕಿತ್ತೂರಿನ ಇತಿಹಾಸವನ್ನು ತಿರುಚಿದ ಅನುಭವ ದಟ್ಟವಾಗಿ ಕಾಡಿದರೆ ಕೆಲವು ಬಾರಿ ಕೆಲವರ ಬಗ್ಗೆ ಅತ್ಯಂತ ವೈಭವಯುತವಾಗಿ ಕೃತ್ರಿಮ ಇತಿಹಾಸವನ್ನು ಸೃಷ್ಟಿಸಿದ್ದಾರೆ ಎಂದೆನಿಸುತ್ತದೆ . ಇದರ ಜೊತೆಗೆ ಅನೇಕಾನೇಕ ಸತ್ಯ ಸಂಗತಿಗಳನ್ನು ಮುಚ್ಚಿಡಲಾಗಿದೆ.

ಸಂಗೊಳ್ಳಿ ರಾಯಣ್ಣ
ಸಂಗೊಳ್ಳಿ ರಾಯಣ್ಣನ ಬಗ್ಗೆ ಅತ್ಯಂತ ವರ್ಣ ರಂಜಿತ ಕಥೆ ಕಾದಂಬರಿ ಚಲನಚಿತ್ರ ನಾಟಕಗಳು ಹುಟ್ಟಿಕೊಂಡಿವೆ . ಇತಿಹಾಸವಲ್ಲದ ಕ್ಷೇತ್ರ ಕಾರ್ಯ ಮಾಡದ ಲಾವಣಿ ಜಾನಪದ ಲಾವಣಿ ಗೀತೆಗಳ ಆಶಯವನ್ನೇ ನಂಬಿ ಒಣ ವೈಭವೀಕರಣಕ್ಕೆ ಜೋತು ಬಿದ್ದು ನೈಜತೆಯನ್ನು ದೂರಮಾಡಿ ಕೃತ್ರಿಮ ನಾಟಕೀಯ ಸಂಗತಿಗಳು ದಾಖಲಾಗಿವೆ .
ಸಂಗೊಳ್ಳಿ ಇಂದು ನವಿಲುತೀರ್ಥದ ಆಣೆಕಟ್ಟಿನಲ್ಲಿ ಮುಳುಗಿ ಹೋದ ಒಂದು ಪುಟ್ಟ ಗ್ರಾಮ . ಸಾಮಾನ್ಯ ಕುರುಬ ಮನೆತನದಲ್ಲಿ ಹುಟ್ಟಿದ ಚುರುಕು ಬುದ್ಧಿಯ ಧೈರ್ಯದ ಹುಡುಗ .
ಇವರ ಅಜ್ಜ ರಾಗಪ್ಪನು ಕಿತ್ತೂರ ದೇಸಾಯಿ ವೀರಪ್ಪ ದೇಸಾಯಿಯ ಕಾಲದಲ್ಲಿ ಅಂದರೆ 1742 ರಿಂದ 1782 ವರೆಗೆ ಆಡಳಿತ ನಡೆಸಿದ ಸಂದರ್ಭದಲ್ಲಿ ವೀರಪ್ಪ ದೇಸಾಯಿಯವರ ಪ್ರೀತಿಗೆ ಪಾತ್ರನಾಗಿ ಸಂಗೊಳ್ಳಿ ರಾಯಣ್ಣ ಅಜ್ಜನಾದ ರಾಗಪ್ಪನು ಕಿತ್ತೂರು ಸಂಸ್ಥಾನದ ಬಂಟನಾಗಿದ್ದನು ಅವನು ಚೀನಾಗಿ ಕೋವಾಡದ ಕಾಳಗದಲ್ಲಿ ತನ್ನ ಪರಾಕ್ರಮ ಮೆರೆದು ರಾಜರ ಮೆಚ್ಚುಗೆಯನ್ನು ಪಡೆದು ವೀರಪ್ಪ ದೇಸಾಯಿಯವರಿಂದ ” ಸಾವಿರ ಒಂಟೆಯ ಸರದಾರ “ಎಂಬ ಬಿರುದನ್ನೂ ಗಳಿಸಿರುತ್ತಾನೆ ಎಂದು ದೊಡ್ಡ ಭಾವೆಪ್ಪ ಮೂಗಿ ತಮ್ಮ ಕಿತ್ತೂರಿನ ಕಾಳಗದಲ್ಲಿ ದಾಖಲಿಸಿದ್ದಾರೆ. ಕುಲದಿಂದ ಕುರುಬನಾಗಿದ್ದರೂ ಸಹಿತ ಅಂದಿನ ರೋಗೋಪಚಾರಕ್ಕೆ ಔಷಧ ನೀಡುವ ವೃತ್ತಿಯನ್ನು ಕೈಕೊಂಡಿದ್ದನು. ಸದೃಢ ಕಾಯ ಜಟ್ಟಿಯಂತಹ ಮೈಕಟ್ಟು ರೋಗಿಗಳನ್ನು ಉಪಚರಿಸುವದರಿಂದ ,ರಂಗಪ್ಪನ ಬಳಿ ಚಿಕಿತ್ಸೆಗೆ ಹೋದರೆ ರೋಗಗಳು ಓಡಿ ಹೋಗುತ್ತವೆ ಎಂದು ಗ್ರಾಮೀಣ ಪ್ರದೇಶದಲ್ಲಿ ಜನಜನಿತವಾಗಿದ್ದ ಮನೆತನಕ್ಕೆ ಮುಂದೆ ರೋಗಣ್ಣವರ ಎಂಬ ಮನೆತನದ ಅಡ್ಡ ಹೆಸರು ಬರಲು ಕಾರಣವಾಯಿತು.

ತಂದೆ ದೊಡ್ಡಭರಮಪ್ಪ ತಾಯಿ ಕೆಂಚವ್ವ .ತಾಯಿಯ ತವರೂರು ನೇಗಿನಹಾಳ . ಸಂಪಗಾವಿ ಅಮಲೇದಾರನಾದ ಕೃಷ್ಣರಾವ್ ಬ್ರಿಟಿಷರಿಗೆ ಸಹಾಯ ಮಾಡಿ ಆತನ ಮತ್ತು ಆತನ ಸಂಗಡಿಗರ ಮಾಹಿತಿ ನೀಡಿ ಧಾರವಾಡದ ಪೊಲಿಟಿಕಲ್ ಏಜೆಂಟ್ ಆಗಿದ್ದ ಜೆ ನಿಸಬೆತ್ ಈತನ ಕುತಂತ್ರದಿಂದಾಗಿ ನೇಗಿನಾಳ ವೆಂಕನಗೌಡರು ಖುದಾನಪುರದ ಲಿಂಗನಗೌಡರು ಇವರ ಸಹಾಯದಿಂದ ಖುದಾನಪುರದ ಲಿಂಗನಗೌಡರ ಹಳಬನಾ ಮೋಸದಿಂದ ಸಂಗೊಳ್ಳಿ ರಾಯಣ್ಣನ ಬಂಧನವಾಯಿತೆಂದು ಖ್ಯಾತ ಸಂಶೋಧಕ ಪ್ರೊ ಜ್ಯೋತಿ ಹೊಸೂರ್ ಅವರು ದಾಖಲೆ ಸಮೇತ ಸಾಬೀತು ಪಡಿಸಿದ್ದಾರೆ . ಈ ಮುಂಚೆ ಸಂಗೊಳ್ಳಿ ರಾಯಣ್ಣನ ತಾಯಿತ ಸ್ವಂತ ತಮ್ಮ ಲಕ್ಕಪ್ಪ ( ಲಕ್ಷ್ಯಾ ) ಬ್ರಿಟಿಷರಿಗೆ ಮತ್ತು ನೇಗಿನಾಳ ಮತ್ತು ಖುದಾನಪುರದ ಗೌಡರಿಗೆ ಸಹಾಯ ಮಾಡಿದನೆಂಬುದು ದಾಖಲಾಗಿದ್ದು ಶುದ್ಧ ಸುಳ್ಳು.ಸಂಗತಿಯಾಗಿದೆ.

1824 ಅಕ್ಟೋಬರ್ 23 ರಂದು ಘನ ಘೋರ ಯುದ್ಧದಲ್ಲಿ ಸಂಗೊಳ್ಳಿ ರಾಯಣ್ಣ ಪಾಲ್ಗೊಂಡ ಬಗ್ಗೆ ದಾಖಲೆಗಳಿಲ್ಲ ,ಆದರೆ 1824 ನವೆಂಬರ್ ಹಿಡಿದು ಡಿಸೆಂಬರ್ 5 ರ್ ವರೆಗೆ ನಡೆದ ಯುದ್ಧದಲ್ಲಿ ಸಂಗೊಳ್ಳಿ ರಾಯಣ್ಣ ಪಾಲ್ಗೊಂಡಿದ್ದು ,ನಂತರದಲ್ಲಿ ಸೆರೆವಾಸವಾಗಿ ಜನೆವರಿ 23 1825 ರಂದು ಇದ್ದು ಜನ ಕೈದಿಗಳೊಂದಿಗೆ ಬಿಡುಗಡೆಗೊಳ್ಳುತ್ತಾನೆ .ಚಾಪ್ಲಿನ್ ಎಂಬ ಬ್ರಿಟಿಷ್ ಅಧಿಕಾರಿ ಸಂಗೊಳ್ಳಿ ರಾಯಣ್ಣನಿಗೆ ಮತ್ತು ಇತರರಿಗೆ ಮುಂದೆ ಕಾಳಗ ಕದನ ಸಂಘರ್ಷಕ್ಕೆ ಇಳಿಯದಂತೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ಪಾತ್ರ ನೀಡಿ ಬಿಡುಗಡೆ ಗೊಳಿಸುತ್ತಾನೆ .ಐವರಲ್ಲಿ ನಲಕನೆಯ ಹೆಸರೇ ಸಂಗೊಳ್ಳಿ ರಾಯಣ್ಣ ದೊಡ್ಡಭರಮಪ್ಪ ರೋಗಣ್ಣವರ ,ಒಳಗೊಳಗೇ ಕುದಿದ ಸಂಗೊಳ್ಳಿ ರಾಯಣ್ಣ ಮುಂದಿನ ಯುದ್ಧದ ಸಿದ್ಧತೆಗಾಗಿ ಬದನ ಅಂಕಲಿ ಅಥಣಿ ತಾಲೂಕಿನ ಕೌಲಗುಡ್ಡ ಉದಗಟ್ಟಿ ಮುಂತಾದ ಪ್ರದೇಶಗಳಿಂದ ಸೈನ್ಯದ ಸಜ್ಜನು ಮಾಡಿಕೊಳುತ್ತಾನೆ .

1827 – 1828 ರ ಸುಮಾರಿಗೆ ಬೈಲುಹೊಂಗಲದ ಜೈಲಿನಲ್ಲಿರುವ ರಾಣಿ ಚೆನ್ನಮ್ಮಳನ್ನು ಜಂಗಮರ ಮಾರುವೇಷದಲ್ಲಿ ಭೇಟಿ ಆಗಿ ತನ್ನ ಮುಂದಿನ ಯುದ್ಧ ನೀತಿಯನ್ನು ತಂತ್ರಗಾರಿಕೆಯನ್ನು ಕಿತ್ತೂರಿನ ತಾಯಿಗೆ ತಿಳಿಸುತ್ತಾನೆ .ಕಿತ್ತೂರಿನ ವಿಮೋಚನೆಗೆ ಇನ್ನೊಂದು ಭರವಸೆ ಮೂಡಿತು ಎಂಬ ಹೆಮ್ಮೆಯಲ್ಲಿರುವಾಗಲೇ ಕಿತ್ತೂರಿನ ರಾಣಿ ಚೆನ್ನಮ್ಮ 2-2-1829 ಕ್ಕೆ ಲಿಂಗೈಕ್ಯವಾದಳು .
ಸ್ಪೂರ್ತಿಯ ಚಿಲುಮೆಯಾದ ಕಿತ್ತೂರ ರಾಣಿ ಚೆನ್ನಮ್ಮಳ ಸಾವು ಸಂಗೊಳ್ಳಿ ರಾಯಣ್ಣನಿಗೆ ಬರ ಸಿಡಿಲನಂತೆ ಬಡಿಯಿತು. ಮುಂದೆ ಕುತಂತ್ರಕ್ಕೆ ಬಲಿಯಾಗಿ 1830 ರಲ್ಲಿ ಸಂಗೊಳ್ಳಿ ರಾಯಣ್ಣ ಬಂಧಿಯಾಗುತ್ತಾನೆ.ಕಿತ್ತೂರಿನ ಕೆಲ ಬಂಟರಿಗೆ ಸಣ್ಣಪ್ರಮಾಣದ ಶಿಕ್ಷೆ ನೀಡಿದರೆ ಇನ್ನು ಕೆಲವರಿಗೆ ಸಂಗೊಳ್ಳಿ ರಾಯಣ್ಣನ ಬಂಟರಿಗೆ ಉಗ್ರ ಶಿಕ್ಷೆ ನೀಡಿದರು, ರಾಯಣ್ಣನಿಗೆ ಸುಲಿಗೆ ಬ್ರಿಟಿಷ್ ಅಧಿಕಾರಿಗಳ ಸೈನಿಕರ ಕೊಲೆ ಸಾರ್ವಜನಿಕರ ಆಸ್ತಿ ನಾಶದ ಆಪಾದನೆಯ ಮೇರೆಗೆ ಗಲ್ಲು ಶಿಕ್ಷೆ ವಿಧಿಸುತ್ತಾರೆ .ಸಂಗೊಳ್ಳಿ ರಾಯಣ್ಣನನ್ನು ಸೇರಿ ಏಳು ಜನರಿಗೆ ಇಂದಿನ ಖಾನಾಪುರ ತಾಲೂಕಿನ ನಂದಗಡದಲ್ಲಿ 26-1-1831 ರಂದು ಅಲ್ಲೊಂದು ಸಾರ್ವಜನಿಕವಾಗಿ ಗಲ್ಲಿಗೇರಿಸುತ್ತಾರೆ . ಮಾರುವೇಷದಿಂದ ಬಂದಿದ್ದ ಸಂಗೊಳ್ಳಿ ರಾಯಣ್ಣನ ಆಪ್ತ ಸ್ನೇಹಿತ ಬಿಚ್ಚುಗತ್ತಿ ಚೆನ್ನಬಸಪ್ಪನು ಕಣ್ಣೀರು ಸುರಿಸಿ ಆತನ ಸಮಾಧಿ ಮಾಡಿ ಅರಳೆಯ ಸಸಿಯನ್ನು ನೆಟ್ಟು ಹೋದನು. ಅಲ್ಲಿ ಇಂದಿಗೂ ದೊಡ್ಡ ಅರಳೆಯ ಮರವಿದೆ .ಕೊಂಬೆ ರೆಂಬೆಗೆ ಮಕ್ಕಳಾದರೆ ಸಂಗೊಳ್ಳಿ ರಾಯಣ್ಣನಂತಹ ಮಕ್ಕಳು ಹುಟ್ಟಲಿ ಎಂದು ಈಗಲೂ ತೊಟ್ಟಿಲು ಕಟ್ಟಿ ಬರುವ ರೂಡಿ ಆಚರಣೆ ಇದೆ.

ಕಿತ್ತೂರಿನ ಇತಿಹಾಸದ ಮೇಲೆ ಹೊಸಬೆಳಕು ನಿಜಕೂ ಕಷ್ಟದ ಕೆಲಸ. ಕಿತ್ತೂರಿನ ಇತಿಹಾಸ ಅನೇಕರ ಜ್ಞಾನ ಪಾಂಡಿತ್ಯಕ್ಕೆ ಸವಾಲಾಗಿದ್ದರೂ ಸಹಿತ ಯಾವುದೇ ಇತ್ಯರ್ಥಕ್ಕೆ ಬರದೇ ಇರದಿರುವುದು ನೋವಿನ ಮತ್ತು ಅಚ್ಚರಿಯ ಸಂಗತಿಯಾಗಿದೆ . ಇದಕ್ಕೆ ಮೂಲ ಕಾರಣ ಕಿತ್ತೂರಿನ ಬಗ್ಗೆ ವಸ್ತು ನಿಷ್ಠ ತಾರ್ಕಿಕ ಸಂಶೋಧನೆಯಾಗಿಲ್ಲ. ಹಲವು ಸಂಗತಿ ವಿಷಯಗಳು ಒಂದೊಕೊಂಡು ಪೂರಕವಾಗಿಲ್ಲ.

ಮುಂದಿನ ಭಾಗಗಲ್ಲಿ ಕಿತ್ತೂರಿನ ಪರ್ಯಾಯ ನಾಯಕರ ನಿಜ ಚರಿತ್ರೆ ಬಗ್ಗೆ ವಿಸ್ತಾರ ಮತ್ತು ಸಾಕ್ಷಿ ಸಮೇತ ವಿವರಿಸುವಲಾಗುವುದು.

*ಡಾ.ಶಶಿಕಾಂತ.ಪಟ್ಟಣ ರಾಮದುರ್ಗ, ಪುಣೆ, 9552002338

—————————

ಮಾನ್ಯ ಓದುಗರಲ್ಲಿ ವಿನಂತಿ,

ಪುಣೆಯ ಡಾ.ಶಶಿಕಾಂತ ಪಟ್ಟಣ ಅವರು *ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು*
ಎಂಬ ಸರಣಿ ಲೇಖನ ಪ್ರಕಟವಾಗಲಿದೆ..
ಓದುಗರು ಪ್ರಾಂಜ್ವಲ ಮನಸ್ಸಿನಿಂದ ಓದಿ, ಈ ಲೇಖನ ಸರಣಿ‌ ಮುಗಿದ ಮೇಲೆ ಓದುಗರಿಗೆ ಸಂಶಯ, ಅನುಮಾನ, ಹೆಚ್ಚಿನ ಚಿಂತನೆಯ ಚರ್ಚೆಯ ವಿಷಯಗಳಿದ್ದರೆ ಲೇಖಕರೊಂದಿಗೆ ಚರ್ಚಿಸಿ. 9552002338

ಸಂಪಾದಕ

********

ವಿಶೇಷ ಸೂಚನೆ
copy rights resrved(ಇಲ್ಲಿನ ಎಲ್ಲ ಬರಹಗಳೂ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ.) ಈಬರಹಗಳ ಎಲ್ಲಾ ಅಭಿಪ್ರಾಯಗಳೂ ಲೇಖಕರ ವೈಯುಕ್ತಿಕ ಅಭಿಪ್ರಾಯಗಳಾಗಿದ್ದು,e-ಸುದ್ದಿ ಬ್ಲಾಗ್ ಅದಕ್ಕೆ ಹೊಣೆಯಾಗಿರುವುದಿಲ್ಲ
-ಸಂಪಾದಕ

Don`t copy text!