ಅಕ್ಕನೆಡೆಗೆ…ವಚನ 4
ಕಾಯ – ಆತ್ಮ – ಸೌಂದರ್ಯದಲ್ಲಿ ಅಕ್ಕ
ಕಾಯ ಕರ‍್ರನೆ ಕಂದಿದಡೇನು?
ಕಾಯ ಮಿರ‍್ರನೆ ಮಿಂಚಿದಡೇನು?
ಅಂತರಂಗ ಶುದ್ಧವಾದ ಬಳಿಕ
ಚೆನ್ನಮಲ್ಲಿಕಾರ್ಜುನಯ್ಯಾ
ನೀನೊಲಿದ ಕಾಯವು ಹೇಗಿದ್ದಡೇನಯ್ಯಾ?
ಹನ್ನೆರಡನೇ ಶತಮಾನದ ಸಾಮಾಜಿಕ ಚಳುವಳಿಯ ಬಹು ದೊಡ್ಡ ಭಾಗ ಅಕ್ಕನ ವೈರಾಗ್ಯದ ಪಥ. ಅವಳಿಗೆ ಚೆನ್ನಮಲ್ಲಿಕಾರ್ಜುನನಲ್ಲಿ ಅದಮ್ಯ ಪ್ರೀತಿ. ಆಗಾಧ ಭಕ್ತಿ. ತನ್ನನ್ನು ತಾನು ಸಮರ್ಪಿಸಿಕೊಳ್ಳುವ ಪರಿಯಂತೂ ಅವಳ ಬದುಕಿನ ಚರಮ ಸೀಮೆ.
‘ಎನ್ನ ಕಾಯದ ಕತ್ತಲೆಯ ಕಳೆಯಯ್ಯ, ಎನ್ನ ಮಾಯದ ಮದವ ಮುರಿಯಯ್ಯ, ಎನ್ನ ಜೀವದ ಜಂಜಡವ ಮಾಣಿಸಯ್ಯ, ಎನ್ನ ಸುತ್ತಿದ ಮಾಯಾಪ್ರಪಂಚವ ಬಿಡಿಸಾ
ನಿಮ್ಮ ಧರ್ಮ ಚೆನ್ನಮಲ್ಲಿಕಾರ್ಜುನದೇವಾ.’ ಹೀಗೆ ಹೇಳುತ್ತ ಲೌಕಿಕದ ಎಲ್ಲಾ ಸಂಬಂಧಗಳಿಂದ ಕಳಚಿಕೊಳ್ಳುವಳು. ಅವ್ವ, ಅಪ್ಪ, ಸಂಬಂಧಿಕರನ್ನೆಲ್ಲಾ ತೊರೆದು, ಮಹಾರಾಜ, ಅರಮನೆ, ವೈಭವಗಳನ್ನೆಲ್ಲ ಧಿಕ್ಕರಿಸಿ ಕಲ್ಯಾಣದ ಕಡೆಗೆ ದಿಟ್ಟ ಹೆಜ್ಜೆಯನ್ನಿಡುತ್ತಾಳೆ.
ಅನೇಕ ಕಡೆಯಿಂದ ಕಲ್ಯಾಣಕ್ಕೆ ಬಂದು ಸೇರಿದ ಅಸಂಖ್ಯಾತ ಶರಣ ಶರಣೆಯರು. ಅವರಲ್ಲಿ ಅಕ್ಕನೂ ಒಬ್ಬಳು. ‘ಎನ್ನ ಹೆತ್ತ ತಾಯಿ ಮಹಾದೇವಿ ಅಕ್ಕಗಳ ನಿಲುವ ನೋಡಾ ಪ್ರಭುವೇ’ ಅಣ್ಣ ಬಸವಣ್ಣ ಅನುಭವ ಮಂಟಪದಲ್ಲಿ ಪರಿಚಯಿಸುವ ಪರಿಗೆ ಮೈ ರೋಮಾಂಚನಗೊಳ್ಳುತ್ತದೆ.
ಅನುಭವ ಮಂಟಪದ ಶೂನ್ಯ ಪೀಠದ ಅಲ್ಲಮಪ್ರಭುಗಳು, ಉಡುತಡಿಯಿಂದ ಒಂಟಿಯಾಗಿ ಬಂದ ಮಹಾದೇವಿಯನ್ನು ನೇರವಾಗಿ ಸ್ವೀಕರಿಸುವುದಿಲ್ಲ. ಅವರು ಅನೇಕ ಪ್ರಶ್ನೆಗಳಿಂದ ಪರೀಕ್ಷೆಗೆ ಒಡ್ಡುತ್ತಾರೆ. ಶೂನ್ಯ ಸಂಪಾದನೆಯಲ್ಲಿ ಇವರಿಬ್ಬರ ಸಂವಾದವು ಪ್ರಮುಖ. ಅಲ್ಲಮ ಅಕ್ಕನ ಸಂವಾದದಲ್ಲಿ ಈ ವಚನ ಬರುತ್ತದೆ.
ಕೌಶಿಕನ ಅರಮನೆಯಿಂದ ಉಟ್ಟ ಉಡುಗೆ ತೊಟ್ಟ ತೊಡುಗೆಯನ್ನು ತೊರೆದು ಹೊರಟ ಮಹಾದೇವಿ, ಕಲ್ಯಾಣದ ಅನುಭವ ಮಂಟಪದಲ್ಲಿ ಕೆಲಕಾಲ ಇದ್ದು, ನಂತರ ಶ್ರೀಶೈಲಕ್ಕೆ ಹೋಗುತ್ತಾಳೆ. ಅಲ್ಲಿ ಅಲ್ಲಮಪ್ರಭು, ಚೆನ್ನಬಸವಣ್ಣ, ಬಸವಣ್ಣನವರನ್ನು ಸಂದರ್ಶಿಸಿದ ಪ್ರಸಂಗದ ಉಲ್ಲೇಖಿತವಿದೆ. ವಚನಗಳ ಆಧಾರವೂ ಇರುವುದರಿಂದ ಇದು ಸತ್ಯಕ್ಕೆ ಹತ್ತಿರವಾಗಿದೆ.
ಹಾಗೆ ಕಲ್ಯಾಣಕ್ಕೆ ಬಂದ ಅಕ್ಕನನ್ನು ಅಲ್ಲಮಪ್ರಭುಗಳು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಇಲ್ಲಿಗೆ ಬಂದ ಕಾರಣವೇನು? ಒಂಟಿಯಾಗಿ ಬಂದ ಅಕ್ಕ ತನ್ನ ಗಂಡನ ಗುರುತು ಹೇಳಿದರೆ ಮಾತ್ರ ಅನುಭವ ಮಂಟಪದಲ್ಲಿ ಕುಳಿತುಕೊಳ್ಳಬೇಕು. ಇಲ್ಲವಾದರೆ ಹೋಗೆಂದು ಕಠೋರವಾಗಿ ಹೇಳುತ್ತಾರೆ. ಚೆನ್ನಮಲ್ಲಿಕಾರ್ಜುನನೆ ತನ್ನ ಗಂಡ ಈ ಲೋಕದ ಲೌಕಿಕದ ಗಂಡನೊಡನೆ ತನಗೆ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸುತ್ತಾಳೆ.
ವೈರಾಗ್ಯದ ದಾರಿ ಹಡಿದು ವಿರಕ್ತಳಾಗಿದ್ದರೂ ದೇಹದ ಮೇಲಿನ ಮೋಹ ಮರೆತಂತೆ ತೋರುವುದಿಲ್ಲವೆಂದು ವ್ಯಂಗ್ಯ ನುಡಿದು, ಕೆಣಕಿ ಪ್ರಶ್ನಿಸುತ್ತಾರೆ. ಆಗ ಅಕ್ಕ ನೀಡುವ ಉತ್ತರವೇ ಈ ಮೇಲಿನ ವಚನ.
ಕಾಯ ಅಂದರೆ ದೇಹ. ಈ ದೇಹದ ವರ್ಣ ಕಪ್ಪಾಗಿರಲಿ, ಬೆಳುಪಾಗಿರಲಿ ಏನೂ ವ್ಯತ್ಯಾಸವಾಗುವುದಿಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವನ್ನೆಲ್ಲಾ ಬಿಟ್ಟ ದೇಹವು ಆಂತರ್ಯದಿಂದ ಶುದ್ಧೀಕರಣಗೊಂಡಂತೆ. ಹಾಗೆ ಶುಭ್ರವಾದ ಶರೀರವು ಚೆನ್ನಮಲ್ಲಿಕಾರ್ಜುನನಿಗೆ ಅರ್ಪಿತ. ಆ ದೇವನಿಗೆ ಒಲಿದ ದೇಹ ಹೇಗಿದ್ದರೇನೆಂದು ಅಕ್ಕನ ಅಭಿಪ್ರಾಯ.
ಹೀಗೆ ಭಕ್ತಿ, ಜ್ಞಾನ, ವೈರಾಗ್ಯಗಳ ವಿಚಾರದಲ್ಲಿ, ಗಂಭೀರವಾಗಿ ನಡೆದ ಚರ್ಚೆಯಲ್ಲಿ, ಅಕ್ಕ ಬಹಳ ಸೂಕ್ತ ಉತ್ತರಗಳನ್ನಿಟ್ಟು ಎಲ್ಲರ ಮನ ಗೆಲ್ಲುತ್ತಾಳೆ. ಅಲ್ಲಮ ಪ್ರಭುಗಳು ಶರಣೆಂಬೆ ತಾಯೆ ಎಂದು ಒಪ್ಪಿಕೊಂಡು ಜಗದ ಅಕ್ಕ ನೀನೇ ಎಂದು ಸಾರುವರು. ‘ಶೂನ್ಯ ಸಂಪಾದನೆ’ ಗ್ರಂಥದಲ್ಲಿ ನಿರೂಪಿತವಾದ ಈ ಅಧ್ಯಾಯ ಬಹಳ ರೋಚಕವಾದುದು. ಲೌಕಿಕ – ಅಲೌಕಿಕ, ಜ್ಞಾನ – ವೈರಾಗ್ಯ, ಭಕ್ತಿ – ಪ್ರೀತಿ ಎಲ್ಲಾ ಆಯಾಮಗಳನ್ನು ಒರೆಗೆ ಹಚ್ಚಿ ನೋಡಿ, ಅಕ್ಕಮಹಾದೇವಿ ಅಪ್ಪಟ ಚಿನ್ನವಾಗಿ ಹೊರಹೊಮ್ಮುತ್ತಾಳೆ.
ಬಸವಾದಿ ಶರಣರಿದ್ದ ಅನುಭವ ಮಂಟಪದಲ್ಲಿ ಅಕ್ಕ ಭಾಗವಹಿಸಿದ ಚರ್ಚೆಯು ಅವಳ ಬದುಕಿನ ಬಹು ಮಹತ್ವದ ಪ್ರಸಂಗ. ಅಕ್ಕ ತನ್ನ ಆಧ್ಯಾತ್ಮಿಕ ಜ್ಞಾನದಿಂದ ಶರಣ ಸಮೂಹದ ಮನ ಗೆಲ್ಲುತ್ತಾಳೆ. ಅಲ್ಲಮಪ್ರಭುಗಳು, ಅಣ್ಣ ಬಸವಣ್ಣ, ಚೆನ್ನಬಸವಣ್ಣ, ಸೊನ್ನಲಿಗೆಯ ಸಿದ್ದರಾಮ, ಗಂಗಾಂಬಿಕೆ, ನೀಲಾಂಬಿಕೆ, ಅಕ್ಕನಾಗಮ್ಮ, ಮುಕ್ತಾಯಕ್ಕ ಮೊದಲಾದ ಶರಣರ ಸಹವಾಸದಲ್ಲಿ ಕೆಲ ಕಾಲ ಅಲ್ಲೇ ತಂಗಿದ್ದು, ತೃಪ್ತಿ ಎನಿಸಿದ ನಂತರ, ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಶ್ರೀಶೈದತ್ತ ಹೊರಡುವಳು.
ಈ ಮೇಲಿನ ವಿವರಣೆಯೆಲ್ಲಾ ಹನ್ನೆರಡನೇ ಶತಮಾನದ ಅಂದಿನ ಸಂದರ್ಭದಲ್ಲಿ ನಿಂತು ಆಲೋಚಿಸುವಾಗ ತಿಳಿದು ಬರುವಂಥದ್ದು. ಈಗಿನ ಪ್ರಸ್ತುತ ಇಪ್ಪತ್ತೊಂದನೇ ಶತಮಾನದಲ್ಲಿದ್ದುಕೊಂಡು ಗಮನಿಸಿದಾಗ, ವಿಚಾರಗಳ ದಿಕ್ಕು ಬದಲಿಸುವುದು ಸಹಜ. ಆಧುನಿಕತೆಯಿಂದಾಗಿ ನಿತ್ಯದ ಜನಜೀವನವು ಭಿನ್ನವಾಗಿದೆ. ಹಿಂದಿನದಕ್ಕೆ ಹೋಲಿಸಿದರೆ ಅಜಗಜಾಂತರ. ಈಗ ಗಲ್ಲಿಗೊಂದು ಬ್ಯೂಟಿ ಪಾರ್ಲರ್ ಹುಟ್ಟಿಕೊಂಡಿವೆ. ಆತ್ಮ ಸೌಂದರ್ಯಕ್ಕಿಂತ ಹೆಚ್ಚು ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ.
ಮಿಸ್ ವರ್ಲ್ಡ್, ಮಿಸ್ ಯುನಿವರ್ಸ್ ಸ್ಪರ್ಧೆಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿವೆ. ಹೆಣ್ಣಿನ ಸೌಂದರ್ಯ ಮತ್ತು ಬೌದ್ಧಿಕ ಸಾಮರ್ಥ್ಯ ಪ್ರದರ್ಶನಕ್ಕಿಟ್ಟು ಅಳೆಯುತ್ತಿದ್ದಾರೆ. ಎಲ್ಲ ಆಯಾಮಗಳ ಮೌಲ್ಯಮಾಪನವಾದ ನಂತರ ದ್ವಿತೀಯ, ತೃತೀಯ ರನ್ನರಪ್ಸ್ ಗಳ ಆಯ್ಕೆ, ಪ್ರಥಮ ಸ್ಥಾನದ ಘೋಷಣೆ. ಇಡೀ ಜಗತ್ತೇ ಕುಳಿತು ವೀಕ್ಷಿಸುತ್ತದೆ. ಆ ಸಂದರ್ಭವು ಸ್ತ್ರೀ ಕುಲಕ್ಕೆ ಖಂಡಿತಾ ಹೆಮ್ಮೆಯ ಮಾತಲ್ಲ.
ಇಂದಿನ ಸಮಾಜದಲ್ಲಿ ಮಾರುಕಟ್ಟೆಯು ಜಾಹಿರಾತಿನ ಮೇಲೆಯೇ ಅವಲಂಬಿತ. ಹೆಣ್ಣನ್ನು ಜಾಹಿರಾತುಗಳಿಗಾಗಿ ಬಳಸಲಾಗುವ ರೀತಿ ಸ್ತ್ರೀ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ. ಹೆಣ್ಣಿಗೆ ಸಂಬಂಧವೇ ಇಲ್ಲದ್ದು ಟೈಯರ್! ಅದರ ಜಾಹಿರಾತಿನಲ್ಲೂ ಅರೆ ನಗ್ನಾವಸ್ಥೆಯ ಭಾವ ಚಿತ್ರ ಮತ್ತು ವಿಡಿಯೋಗಳು. ಪರಿಣಾಮ ಹೆಣ್ಣು ಮತ್ತು ಸೌಂದರ್ಯ ಮಾರಾಟದ ಸರಕಾಗಿರುವುದು ವಿಷಾದ. ಹೆಣ್ಣಿಗೆ ಸೌಂದರ್ಯವೇ ಬಂಡವಾಳವಾಗಬಾರದು ಎನ್ನುವ ಜಾಗೃತಿ ಮೂಡಬೇಕಾದ ತುರ್ತಿದೆ.
ಈ ಪ್ರಪಂಚದಲ್ಲಿ ಎಲ್ಲರೂ ಅಕ್ಕನಂತಾಗಲು ಸಾಧ್ಯವೇ ಇಲ್ಲ. ಲೌಕಿಕದಿಂದ ವೈರಾಗ್ಯದ ಕಡೆ ಮುಖ ಮಾಡುವುದು ಕಷ್ಟಸಾಧ್ಯ. ಪ್ರೀತಿ ಮತ್ತು ಭಕ್ತಿಗೆ ಹೆಸರಾದವರು ಅಕ್ಕ ಮಹಾದೇವಿ ಮತ್ತು ಭಕ್ತ ಮೀರಾ. ದೇಹ ಮತ್ತು ಮನಸಿನ ಬಹು ದೊಡ್ಡ ಸಂರ್ಘಷವನ್ನು ನಿಭಾಯಿಸಿದ ಜಾಣೆಯರು. ಅವರೊಳಗಿನ ಆಂತರಿಕ ಶಕ್ತಿಗೆ ಸಾಟಿಯೇ ಇಲ್ಲ. ಅವರಿಗೆ ಅವರೇ ಸಾಟಿ.
ಸಾಮಾನ್ಯ ಮನುಷ್ಯರಾದ ನಾವು ಪ್ರಕೃತಿದತ್ತವಾಗಿ ಬಂದೊದಗಿದ ನರಜನ್ಮವನ್ನು ಪ್ರತಿಕ್ಷಣವೂ ಅನುಭವಿಸುವುದರಲ್ಲಿ ಮಗ್ನರಾಗುತ್ತೇವೆ. ಆದರೂ ಬದುಕಿನಲ್ಲಿ ಸರಳತೆ ಅಳವಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಎನ್ನುವ ಮಾತನ್ನು ಮರೆಯುವಂತಿಲ್ಲ. ಸೌಂದರ್ಯ ಪ್ರಜ್ಞೆಗಿಂತ ಆರೋಗ್ಯ ಪ್ರಜ್ಞೆ ಮುಖ್ಯವಾದುದು. ಈ ಮಾತನ್ನು ಅರ್ಥ ಮಾಡಿಕೊಂಡು ನಿಸ್ವಾರ್ಥವಾಗಿ, ಸರಳವಾಗಿ ಬದುಕಿ ಜನ್ಮ ಸಾರ್ಥಕವಾಗಿಸಿಕೊಂಡು ಅರ್ಥಪೂರ್ಣ ಮಾಡಿಕೊಳ್ಳುವುದರ ಕಡೆ ಗಮನ ಹರಿಸೋಣ.
–ಸಿಕಾ, ಕಲಬುರ್ಗಿ