ಕನ್ನಡಾಂಬೆಗೆ ನಮನ
ತೊದಲು ನುಡಿಯಿಂ ನುಡಿಯೆ ಕನ್ನಡ
ಹೊನ್ನುಡಿ ಚಿನ್ನುಡಿ ಕನ್ನಡವೇ ತಾಯ್ನುಡಿ
ಬಿಂದುವೆ ಸಿಂಧುವಾಗಿ ಶ್ರೀಗಂಧ ಸೂಸಲು
ಚೆಂದದಾ ಚೆಲುವಿನಾ ಇಂಪಿನಾ ಘಮಲು.
ಅಕ್ಕರೆಯ ಅಕ್ಕರವು ಸಕ್ಕರೆಯ ನುಡಿಯಿದು
ಚೊಕ್ಕಾಗಿ ನುಡಿಯಲು ಸವಿಜೇನ ಹೊನಲು
ಸಾಹಿತ್ಯ ಸಂಪದವು ಕಾವ್ಯದಲಿ ಕುಸುಮವು
ಲಾಲಿತ್ಯ ನಾಟ್ಯವದು ನವಿರಾದ ಸೋಗಸು.
ಘನತೆಯಲಿ ಗಾಂಭಿರ್ಯ ಕನ್ನಡದ ಖದರು
ಮಮತೆಯಲಿ ಮಾಧುರ್ಯ ಕೊಳಲಿನಾ ಬಿದಿರು
ಕ್ಷಮತೆಯಲಿ ಔದಾರ್ಯ ಕೋಗಿಲೆಯ ಇಂಪು
ಕರುನಾಡ ಸೌಂದರ್ಯ ತನುಮನಕೆ ತಂಪು
ಗಡಿನಾಡು ಮಲೆನಾಡು ಬಯಲುಸೀಮೆಯ ನೋಡು
ಹಸಿರುಟ್ಟ ಕಾಡಿನಲಿ ಹಕ್ಕಿಗಳ ಹಾಡು
ನದಿಹಳ್ಳ ಹರಿದಿರಲು ಖಗಮೃಗವು ನಲಿದಿರಲು
ಎನಚೆಂದ ನನ್ನವ್ವೆ ನನ್ನೊಲವಿನಾ ಹೂವೆ.
ಶರಣರಾ ಸಂತರಾ ಸಾಹಿತ್ಯ ಕಲೆ ನೋಡು
ಕಲ್ಲಲ್ಲಿ ಅರಳಿದಾ ಚೆಲುವಿನಾ ಬಲೆ ನೋಡು
ಸತ್ಯವಾ ನುಡಿಯುತಾ ಧರ್ಮದಿ ನಡೆಯುತಾ
ಕನ್ನಡಾಂಬೆಯ ಪಾದಕರ್ಪಿತವು ಮನವು.
–ಸವಿತಾ ಮಾಟೂರು ಇಲಕಲ್ಲ