ಕಿತ್ತೂರು ಸಮರ ಭಾವೈಕ್ಯದ ಪ್ರತೀಕ

ಕಿತ್ತೂರಿನ ಇತಿಹಾಸ ಭಾಗ 6

ಕಿತ್ತೂರು ಸಮರ ಭಾವೈಕ್ಯದ ಪ್ರತೀಕ

ಭಾರತದ ಜನಾಂಗೀಯ ಸಂಸ್ಕೃತಿಯಲ್ಲಿ ಕಂಡು ಬರುವ ಪರಧರ್ಮ ಸಹಿಷ್ಣುತೆ ವಿಶ್ವ ಬಂಧುತ್ವ ಅಹಿಂಸಾ ಪಾಲನೆ ಉದಾರ ಗುಣ ನಂಬಿಗೆ ವಿಶ್ವಾಸ ಪ್ರೀತಿಯಿಂದ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳಸಿಕೊಂಡ ಬಂದ ಶ್ರೇಷ್ಠ ಸಂಸ್ಕೃತಿ ಭಾರತೀಯರಿಗೆ ಸಲ್ಲಬೇಕು ,ಅದರಲ್ಲೂ ಕರ್ನಾಟಕದ ಹನ್ನೆರಡನೆಯ ಶತಮಾನದ ಶರಣರ ಮತ್ತು ಬಸವಣ್ಣನವರ ಸಮಗ್ರ ಕ್ರಾಂತಿ ಸಾರ್ವಕಾಲಿಕ ಸಮಾನತೆ ಸಮತೆ ಕಾಯಕ ತತ್ವಗಳನ್ನು ಸಾರಿದ ಶ್ರೇಷ್ಠ ನಾಗರೀಕ ಸಂಸ್ಕೃತಿಯೆಂದೇ ಹೇಳಬಹುದು .ಇಂತಹ ದಿವ್ಯ ಪರಂಪರೆಯಲ್ಲಿ ಕಿತ್ತೂರು ಸಂಸ್ಥಾನ ತನ್ನ ಅರ್ಥಪೂರ್ಣ ಆಡಳಿತ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಬಂದ ಚರಿತ್ರಾರ್ಹ ಸಂಸ್ಥಾನವಾಗಿದೆ .

ಭಾರತವನ್ನು ಬ್ರಿಟಿಷರು ಸುಮಾರು ಇನ್ನೂರು ವರುಷಗಳ ಕಾಲ ಆಳಿದ್ದಾರೆ .ಸಿರಾಜ್ ಉದ್ ದೌಲ ಇವನಿಂದ ಹಿಡಿದು ಮಹಾತ್ಮಾ ಗಾಂಧಿಯ ವರೆಗೆ ಯುದ್ಧದ ಕಹಳೆ ನಿಂತಿಲ್ಲ. ಆದರೆ ಸಂಪೂರ್ಣ ಯುದ್ಧವನ್ನು ಸಾರಿ ಬ್ರಿಟಿಷರನ್ನು ಮೆಟ್ಟಿ ನಿಂತ ಹೆಮ್ಮೆ ಕನ್ನಡಿಗರಿಗೆ ಅದೂ ಲಿಂಗಾಯತ ಸಂಸ್ಥಾನವಾದ ಕಿತ್ತೂರಿಗೆ ಸಲ್ಲಬೇಕು .ಭಾರತದ ಭೂಪಟದಲ್ಲಿ ಕಿತ್ತೂರು ಒಂದು ಸಣ್ಣ ಸಂಸ್ಥಾನವು. ದೊಡ್ಡ ಅರಸರು ರಾಜರು ಬ್ರಿಟಿಷರಿಗೆ ಸೋತು ಸುಣ್ಣವಾಗಿದ್ದರು ಹೈದರ ಅಲಿ ಟಿಪ್ಪು ಯುದ್ಧದಲ್ಲಿ ಸೋತು ವೀರ ಮರಣ ಅಪ್ಪಿದರು .ಚಾರಿತ್ರಿಕವಾಗಿ ದಾಖಲಾಗಬೇಕಾದ ಕಿತ್ತೂರಿನ ಧೈರ್ಯ ಶೌರ್ಯವನ್ನು ಇತಿಹಾಸ ತಜ್ಞರು ಮರೆತಿರುವುದು ದುರಂತವೇ ಸರಿ

ಸಿಫಾಯಿ ದಂಗೆಗಿಂತ 33 ವರ್ಷ ಮೊದಲು ಬ್ರಿಟಿಷರ ವಿರುದ್ಧ ಸಮರ ಸರಿ ಸಂಪೂರ್ಣ ಯಶವನು ಕಂಡದ್ದು ಕಿತ್ತೂರು ರಾಣಿ ಚೆನ್ನಮ್ಮಳ ಯುದ್ಧ ಕೌಶಲ್ಯ ಮತ್ತು ರಣ ನೀತಿ.ದಾಸ್ಯದ ಸಂಕೋಲೆಯನ್ನು ಕಿತ್ತೊಗೆದು ಬಂಡಾಯ ಹೋರಾಟದ ಜೀವಂತಿಕೆಯನ್ನು ಉಳಿಸಿದ ಕಿತ್ತೂರಿನ ವೀರ ಯೋಧರ ಯಶೋಗಾಥೆ ದೊಡ್ಡದು .

ಕಿತ್ತೂರಿನ ಸಮರದ ಹಿನ್ನೆಲೆ
ಕಿತ್ತೂರಿನ ಅರಸ ಮಲ್ಲಸರ್ಜನಿಗೂ ಪುಣೆಯ ಪೇಶ್ವೇಗಳಿಗೂ ಆರಂಭದಿಂದಲೂ ಇರುಸು ಮುರುಸು ಇತ್ತು .ವ್ಯಾಪಾರ ವಹಿವಾಟು ಇತ್ಯಾದಿ ವಿಷಯಗಳಲ್ಲಿ ತಗಾದೆಯನ್ನು ಪೇಶ್ವೇಗಳು ತೆಗೆಯುತ್ತಿದ್ದರು . ಕಿತ್ತೂರಿನ ಆದಾಯದ ಮೇಲೆ ಇವರಿಗೆ ಕಣ್ಣಿತ್ತು. ವ್ಯವಹಾರ ಮತ್ತು ಸಂಧಾನಕ್ಕೆಂದು ದೊರೆ ಮಲ್ಲಸರ್ಜನನ್ನು ಯಡೂರಿಗೆ ಕರೆಸಿದರು ಮಿರಜ ಮೂಲಕ ಪೇಶ್ವೇಗಳು ತಮ್ಮ ಸೈನ್ಯದೊಂದಿಗೆ ಬಂದಿದ್ದರು . ಆದರೆ ಸಂಧಾನದ ನೆಪದಲ್ಲಿ ಮಲ್ಲಸರ್ಜನನ್ನು ಪೇಶ್ವೇಗಳು ಬಂಧಿಸಿ ತಮ್ಮ ಪುಣೆಯ ಕಾರಾಗೃಹದಲ್ಲಿ ಇರಿಸಿ ನಾನಾ ರೀತಿಯ ಕಿರುಕಳ ಮತ್ತು ಚಿತ್ರ ಹಿಂಸೆಯನ್ನು ಕೊಟ್ಟರು .ಆರೋಗ್ಯ ಹದಗೆಟ್ಟಿತು ಇನ್ನೇನೂ ಮಲ್ಲಸರ್ಜ ದೊರೆ ತೀರಿ ಹೋಗುವರೆಂಬ ಭೀತಿ ಎದುರಾದಾಗ ಅವರನ್ನು ಪುಣೆಯ ಜೈಲಿನಿಂದ ಬಿಡುಗಡೆಗೊಳಿಸಿದರು . ಮಲ್ಲಸರ್ಜರು ಅನಾರೋಗ್ಯದ ಮಧ್ಯೆ ದೂರದ ಪಯಣ ,ಇನ್ನಷ್ಟು ಉಲ್ಬಣಿಸಿತು ಅವರ ಆರೋಗ್ಯ ಹದಗೆಟ್ಟಿತು .ದಾರಿ ಮಧ್ಯದಲ್ಲಿ ಅರಭಾವಿಯ ಮಠದ ಎದುರು ಪತ್ರಿ ಗಿಡದ ಬುಡದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸುವಾಗ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು . ಅವರನ್ನು ಕಿತ್ತೂರು ಆಡಳಿತ ವ್ಯಾಪ್ತಿಯ ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದಲ್ಲಿ ಸಮಾಧಿ ಮತ್ತು ಅಂತ್ಯ ಕ್ರಿಯೆಯನ್ನು ಮಾಡಲಾಯಿತು .
ದಕ್ಷ ರಾಜನನ್ನು ಕಳೆದುಕೊಂಡ ಕಿತ್ತೂರು ಬಡವಾಯಿತು . ಹಿರಿಯ ಮಡದಿಯ ಮಗ ಶಿವಲಿಂಗ ರುದ್ರಸರ್ಜನು ಕಿತ್ತೂರಿನ ವಾರಸದಾರನಾದನು. ಆಡಳಿತದ ಆರಂಭದಲ್ಲಿಯೇ ತನ್ನ ತಂದೆಯ ಸಾವಿಗೆ ಕಾರಣನಾದ ಪೇಶ್ವೇಗಳನ್ನು ಬಗ್ಗು ಬಡಿಯಲು ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡು ರಾಣಿ ಚೆನ್ನಮ್ಮಳ ವಿರೋಧದ ಮಧ್ಯೆ ಪೇಶ್ವೇ ವಿರುದ್ಧ ಯುದ್ಧ ಸಾರಿ ಸೋಲಿಸಿದನು . ಮುಂದೆ ರಾಣಿ ಚೆನ್ನಮ್ಮಳಿಗೂ ಬಾಪೂಸಾಹೇಬನಿಗೂ ( ಶಿವಲಿಂಗ ಸರ್ಜನಿಗೆ ಅರಮನೆಯಲ್ಲಿ ಪ್ರೀತಿಯಿಂದ ಕರೆಯುವ ಹೆಸರು ) ಅಲ್ಪ ಸ್ವಲ್ಪ ಭಿನ್ನಮತ ವ್ಯಾವಹಾರಿಕ ವ್ಯತ್ಯಾಸಗಳು ಕಂಡು ಬಂದವು . ಶಿವಲಿಂಗ ರುದ್ರಸರ್ಜನ ವಿಪರೀತ ಕುಡಿತ ಮತ್ತು ಅದಕ್ಷತೆಯಿಂದಾಗಿ ಅವನು ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದು ಸಾವನ್ನಪ್ಪುತ್ತಾನೆ ,
ಕಾರಭಾರಿ ಹಾವೇರಿಯ ವೆಂಕೋಬರಾವ್ ಹಾಗು ಕೋನೂರಿ ಮಲ್ಲಪ್ಪಶೆಟ್ಟಿ ( ಕೆಲವರ ಪ್ರಕಾರ ಇದು ವೀರಣ್ಣ ಕೋಣೂರಿ ಎಂದು ದಾಖಲಾಗಿದೆ ) ಇವರ ಕಾರಸ್ಥಾನದಿಂದ ಬ್ರಿಟಿಷರಿಗೆ ಇಲ್ಲಿನ ಎಲ್ಲ ಒಳ ಸಂಗತಿಗಳನ್ನು ಇವರಿಬ್ಬರು ತಿಳಿಸ ಹತ್ತಿದರು . ಶಿವಲಿಂಗ ಸರ್ಜನ ಸಾವಿನ ನಂತರ ಸರದಾರ ಗುರುಸಿದ್ದಪ್ಪನವರ ಮತ್ತು ರಾಣಿ ಚೆನ್ನಮ್ಮಳ ಆಜ್ಞೆಯಂತೆ ಮಾಸ್ತಮರಡಿಯ ದೇಸಾಯಿಯವರ ಮಗ ಶಿವಲಿಂಗಪ್ಪನನ್ನು ಕಿತ್ತೂರು ಸಂಸ್ಥಾನಕ್ಕೆ ದತ್ತು ತೆಗೆದುಕೊಳ್ಳಲು ನಿರ್ಧರಿಸಿ ಅದರಂತೆ ನಡೆದುಕೊಳ್ಳಲಾಯಿತು .

ರಾಜನು ಜೀವಿತ ಕಾಲದಲ್ಲಿ ದತ್ತು ತೆಗೆದುಕೊಂಡಿದ್ದರೆ ಅದಕ್ಕೆ ಬ್ರಿಟಿಷರು ಮಾನ್ಯತೆ ನೀಡುತ್ತಿದ್ದರು .ಆದರೆ ಸಾವಿನ ನಂತರದ ದತ್ತು ಕ್ರಿಯೆಗೆ ಬ್ರಿಟಿಷರು ದತ್ತು ಮಾನ್ಯತೆಗೆ ಒಪ್ಪಲಿಲ್ಲ ( Doctrine of Lapse ) ಎಂಬ ಕಾನೂನನ್ನು ಅಂದಿನ ಬ್ರಿಟಿಷ ಕಂಪನಿ ತಂದು ವಾರಸು ಇರದ ರಾಜ್ಯಗಳನ್ನು ಕಬಳಿಸಬೇಕೆಂಬ ಹಂಬಲದಿಂದ ಹೊಂಚು ಹಾಕುತ್ತಿದ್ದರು .
ಕಿತ್ತೂರಿನ ಕೆಲ ಕಾರಭಾರಿಗಳ ಕಾರಸ್ಥಾನ ಧಾರವಾಡದ ಕಲೆಕ್ಟರ್ ಥ್ಯಾಕರೆ ಸಾಹೇಬನು ಕೂಡಿಕೊಂಡು ಹೇಗಾದರೂ ಮಾಡಿ ಕಿತ್ತೂರನ್ನು ವಶಪಡಿಸಿಕೊಳಬೇಕೆಂಬ ದುರಾಸೆ ಬ್ರಿಟಿಷ್ ಕಂಪನಿಗೆ .ದತ್ತು ಒಪ್ಪದ ಕಂಪನಿ ಸರಕಾರವು ಕಿತ್ತೂರು ಸಂಸ್ಥಾನವನ್ನು ಬ್ರಿಟಿಷ್ ಆಡಳಿತಕ್ಕೆ ಒಪ್ಪಿಸಬೇಕು ಮತ್ತು ಮತ್ತು ಕಿತ್ತೂರು ಅರಸು ಮನೆತನದವರು ಪೂರ್ವ ಪರವಾನಿಗೆ ಇಲ್ಲದೆ ದತ್ತು ತೆಗೆದುಕೊಂಡಿದ್ದಕ್ಕೆ

ಕಂಪನಿ ಸರಕಾರಕ್ಕೆ ಕಪ್ಪು ಹಣ ಸಲ್ಲಿಸಬೇಕು ಎಂದು ಥ್ಯಾಕರೆ ಆದೇಶವನ್ನು ಹೊರಡಿಸುತ್ತಾನೆ . ಇದರಿಂದ ಕುಪಿತಗೊಂಡ ರಾಣಿ ಚೆನ್ನಮ್ಮಳು ತುಂಬಿದ ಸಭೆಯಲ್ಲಿ ಥ್ಯಾಕರೆ ಮತ್ತು ಅವನ ಪರವಾಗಿದ್ದ ಕಾರಭಾರಿ ವೆಂಕೋಬಾರಾವರನ್ನು ಅವಮಾನಿಸುತ್ತಾಳೆ ಅಷ್ಟೇ ಅಲ್ಲದೆ ಅವರ ಪರವಾಗಿದ್ದ ಕಾರಭಾರಿಗಳಿಗೆ ಎಚ್ಚರಿಕೆ ನೀಡುತ್ತಾಳೆ .
ಥ್ಯಾಕರೆಯು ಹಲವು ಸುತ್ತಿನ ಮಾತುಕತೆ ಮತ್ತು ಸಂಧಾನಗಳು ವಿಫಲಗೊಳ್ಳುತ್ತವೆ .

1824 ಅಕ್ಟೋಬರ್ 21 ಮತ್ತೆ ಥ್ಯಾಕರೆ ತನ್ನ ಸೈನಿಕರೊಂದಿಗೆ ಬಂದು ಕಿತ್ತೂರು ಕೋಟೆ ಹೊರಗಡೆ ಬಿಡಾರ ಹೂಡಿ ತಾನು ರಾಣಿ ಚೆನ್ನಮ್ಮಳನ್ನು ಭೇಟಿಯಾಗಿ ಸಂಧಾನ ಮಾಡಲು ಯತ್ನಿಸುತ್ತಾನೆ
ಅವರ ಬೆದರಿಕೆಗೆ ಬಗ್ಗದ ರಾಣಿ ಚೆನ್ನಮ್ಮಳು ಕಂಪನಿ ಸರಕಾರದ ಮನವಿಯನ್ನು ತಿರಸ್ಕರಿಸುತ್ತಾಳೆ .ಸಿಟ್ಟಿಗೆದ್ದ ಥ್ಯಾಕರೆ ಕಿತ್ತೂರು ಸಂಸ್ಥಾನಕ್ಕೆ ಬೆದರಿಕೆ ಒಡ್ಡಲು ತೋಪುಗಳನ್ನು ಕೋಟೆಯ ಸುತ್ತ ಜಮಾಯಿಸಿ ಯುದ್ಧದ ಭೀತಿ ಹುಟ್ಟಿಸುತ್ತಾನೆ ., ಸಂಸ್ಥಾನದ ಸರದಾರ ಗುರುಸಿದ್ದಪ್ಪನವರು ಅವರಡಿ ವೀರಪ್ಪನವರು ರಾಣಿ ಚೆನ್ನಮ್ಮಳ ಅಂಗರಕ್ಷಕ ಅಮಟೂರ ಬಾಳಾಸಾಹೇಬ ಮುಂತಾದ ಅನೇಕ ಅಧಿಕಾರಿಗಳು ಕೋಟೆಯ ಬಾಗಿಲನ್ನು ಮುಚ್ಚಿಸುತ್ತಾರೆ .ಅಕ್ಟೋಬರ್ 21 ಮತ್ತು 22 ಹೀಗೆ ತಲ್ಲಣವನ್ನು ಸೃಷ್ಟಿಸುತ್ತದೆ ಯುದ್ಧದ ಘೋರ ನೀತಿ . ಒಳಗೊಳಗೇ ಕುಂದಿದರೂ ಹೊರಗೆ ಕೋಟೆಯೊಳಗೆ ಅಧಿಕಾರಿ ವೀರಸೈನಿಕರ ಗುಪ್ತ ಸಭೆ ಕರೆದು ಅವರಿಗೆ ಧೈರ್ಯ ಸ್ಥೈರ್ಯವನ್ನು ತುಂಬುತ್ತಾಳೆ ಕಿತ್ತೂರು ರಾಣಿ ಚೆನ್ನಮ್ಮ . ಬೆದರಿಕೆ ಒಡ್ಡಿ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಬೇಕೆಂಬ ಥ್ಯಾಕರೆಯ ಯೋಜನೆಯು ಅಕ್ಟೋಬರ್ 23 ಕ್ಕೆ ವಿಫಲಗೊಳ್ಳುತ್ತದೆ .

1824 ಅಕ್ಟೋಬರ್ 23 ವೀರ ವನಿತೆ ರಾಣಿ ಚೆನ್ನಮಾಜಿಯ ಆದೇಶದಂತೆ ಕಿತ್ತೂರಿನ ವೀರ ಯೋಧರು ಮುಂಜಾವಿನ ನಸುಕಿನಲ್ಲಿ ಕೋಟೆಯ ಬಾಗಿಲನ್ನು ತೆರೆದು ಬ್ರಿಟಿಷ್ ಸೇನೆಯ ಮೇಲೆ ಹಸಿದ ಹುಲಿಗಳಂತೆ ಮುಗಿ ಬಿದ್ದರು . ಯುದ್ಧದ ತಯಾರಿ ಇಲ್ಲದೆ ನಿದ್ದೆ ಮಂಪರಿನಲ್ಲಿದ್ದ ಬ್ರಿಟಿಷ ಸೇನೆ ತತ್ತರಿಸಿ ಹೋಯಿತು .ಕೋಟೆಯ ಹೊರಗಿದ್ದ ಬೃಹದ್ದಾಕಾರದ ಬ್ರಿಟಿಷ್ ಸೇನೆಯನ್ನು ಸೆದೆ ಬಡಿಯುತ್ತ ಹಿಮ್ಮೆಟ್ಟಿಸ ಹತ್ತಿದರು . ಸ್ವತಃ ಕಿತ್ತೂರು ರಾಣಿ ಚೆನ್ನಮ್ಮ ಕುದುರೆಯನ್ನು ಏರಿ ಕಿತ್ತೂರಿನ ವೀರ ಬಂಟರನ್ನು ಹುರಿದುಂಬಿಸುತ್ತಾ ಗೆದ್ದರೆ ಕಿತ್ತೂರು ಸಂಸ್ಥಾನ ಸತ್ತರೆ ವೀರ ಸ್ವರ್ಗವೆಂದು ಹೇಳುತ್ತಾ ಎಲ್ಲ ಸೈನಿಕರಿಗೂ ಹರ ಹರ ಮಹಾದೇವ ಎಂಬ ರಣಘೋಷಣೆ ಕೂಗುತ್ತ ರಣಚಂಡಿಯಂತೆ ಯುದ್ಧದಲ್ಲಿ ನುಗ್ಗ ಹತ್ತಿದಳು . ರಾಣಿ ಚೆನ್ನಮ್ಮನಿಂದ ಪ್ರೇರಿತಗೊಂಡ ಯೋಧರು ಯುದ್ಧದಲ್ಲಿ ವೈರಿಗಳನ್ನು ಸೋಲಿಸುವಲ್ಲಿ ಸಫಲವಾಗ ಹತ್ತಿದರು . ಕಿತ್ತೂರಿನ ಯೋಧರ ಯುದ್ಧ ಧೈರ್ಯ ಸ್ಥೈರ್ಯವನ್ನು ಕಂಡು ಕುಪಿತಗೊಂಡ ಕಲೆಕ್ಟರ್ ಥ್ಯಾಕರೆ ಸಾಹೇಬನು ಕಿತ್ತೂರಿನ ಹುಲಿ ರಾಣಿ ಚೆನ್ನಮ್ಮಳನ್ನು ಕೊಲ್ಲಲು ಮುಂದಾದಾಗ ರಾಣಿ ಚೆನ್ನಮ್ಮಳ ಅಂಗ ರಕ್ಷಕ ಅಮಟೂರಿನ ಮುಸ್ಲಿಂ ಯುವಕ ಬಾಳಾಸಾಹೇಬ ಥ್ಯಾಕರೆ ಅವನನ್ನು ಗುಂಡಿಕ್ಕಿ ಕೊಂದನು.
ಇಂಗ್ಲಿಷ್ ಸೈನ್ಯ ಥ್ಯಾಕರೆ ಸಾವಿನಿಂದ ಕಂಗೆಟ್ಟು ದಿಕ್ಕಾಪಾಲಾದರು. ಇಲಿಯಟ್ ಹಾಗೂ ಸ್ಟೀವನ್ಸನ್ ಎಂಬ ಬ್ರಿಟಿಷ್ ಅಧಿಕಾರಿಗಳು ಸೆರೆಯಾಗುತ್ತಾರೆ . ಇಂಗ್ಲಿಷ್ ಅಧಿಕಾರಿಗಳು ಅವರ ಮಕ್ಕಳು ಕಿತ್ತೂರು ಕೋಟೆಯಲ್ಲಿ ಸೆರೆ ಆಗುತ್ತಾರೆ . ಕಿತ್ತೂರು ರಾಣಿ ಚೆನ್ನಮಾಜಿಯವರು ಸೆರೆಗೊಂಡ ಬ್ರಿಟಿಷ ಅಧಿಕಾರಿ ಮಹಿಳೆಯರನ್ನು ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡರು..

ಸೂರ್ಯನು ಮುಳುಗುದ ಸಾಮ್ರಾಜ್ಯವೆಂಬ ಮಾತು ಹುಸಿಯಾಯಿತು

ಕಿತ್ತೂರು ಆಸ್ಥಾನದಲ್ಲಿ ಅವರಡಿ ವೀರಪ್ಪನವರು ,ರುದ್ರಪ್ಪನಾಯಕ ,ಗುರುಸಿದ್ದಪ್ಪನವರು ಚೆನ್ನಬಸಪ್ಪ ಬಿಚ್ಚುಗತ್ತಿ ,ಕ್ಷಬಲ ರಾಮಪ್ಪ ಬಾಬು ಜಮಾದಾರ ಗಜವೀರ (ನಿಗ್ರೋ ಮೂಲದ ಸಿದ್ಧಿ ಹಬಸ್ಯಾ ಎಂಬ ಬಳಕೆಯಲ್ಲಿದ್ದ ಹೆಸರು )ಮುಂತಾದವರ ಶೌರ್ಯ ಸಾಹಸದಿಂದಾಗಿ ಕಿತ್ತೂರು ರಾಜ್ಯವು ಬ್ರಿಟಿಷರ ಆಡಳಿತಕ್ಕೆ ಎಚ್ಚರಿಕೆ ಕರೆಘಂಟೆ ನೀಡಿದರು .ಅಕ್ಟೋಬರ್ 23 ಕಿತ್ತೂರಿನ ವಿಜಯೋತ್ಸವ ದಾಸ್ಯದಿಂದ ನಲುಗಿದ ಭಾರತ ಸ್ವಾತಂತ್ರ್ಯ ಸಂಭ್ರಮದಲ್ಲಿ ವೈರಿಗಳ ಹೆಡಮುರಿ ಕಟ್ಟಿ ಗೆದ್ದು ಕೇಕೆ ಹಾಕಿದರು .ಮೊಟ್ಟ ಮೊದಲ ಬಾರಿಗೆ ಸೂರ್ಯನು ಮುಳುಗುದ ಸಾಮ್ರಾಜ್ಯವೆಂಬ ಮಾತು ಹುಸಿಯಾಯಿತು. ಕಿತ್ತೂರು ಗಂಡುಗಲಿಗಳು ಬ್ರಿಟಿಷ್ ಸೈನ್ಯದ ಮೇಲೆ ಮುಗಿಬಿದ್ದು ಅವರನ್ನು ಕೊಂದು ಅವರ ತೋಪುಗಳನ್ನು ವಶಪಡಿಸಿಕೊಂಡರು .
ಇಂತಹ ಕಿತ್ತೂರ ಸಮರಕ್ಕೆ ಸಾವಂತವಾಡಿಯಿಂದ ಅರಬರು 200 ಕುದುರೆ ಸಮೇತ ಯುದ್ಧ ಶಸ್ತ್ರಸಜ್ಜಾಗಿ ಬಂದರು.ಮರಾಠರು ಪೇಶ್ವೇಗಳು ತಮ್ಮ ಎಲ್ಲ ಭಿನ್ನಮತ ಬದಿಗೊತ್ತಿ ಕಿತ್ತೂರು ಅರಸೊತ್ತಿಗೆ ಉಳಿಸಲು ಮತ್ತು ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಲು ರಾಣಿ ಚೆನ್ನಮ್ಮಳ ಸಂಧಾನದಂತೆ ಸಹಾಯಕ್ಕೆ ಬಂದರು .ಕುರುಬರು ಬೇಡರು ಬುಡಕಟ್ಟು ಸಿದ್ಧಿ ಜನಾಂಗದವರು ಕಿತ್ತೂರು ಅರಸೊತ್ತಿಗೆ ಉಳಿಸಲು ಮುಂದಾದರು .
ಭಾರತದ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಶೋಭಿಸುವ ಕಿತ್ತೂರು ಇತಿಹಾಸ ಒಂದು ಅಪೂರ್ವ ಚಾರಿತ್ರಿಕ ಸಂಗತಿ ಮತ್ತು ದಾಖಲೆ ಎಂದು ಹೇಳಬಹುದು . ಅತ್ಯಂತ ಶಿಸ್ತುಬದ್ಧ ಯೋಜನೆಗಳಿಂದ ಕೂಡಿದ ಕಿತ್ತೂರು ರಾಣಿ ಚೆನ್ನಮ್ಮಳ ಯುದ್ಧ ನೀತಿಯಿಂದಾಗಿ ಕಿತ್ತೂರು ರಾಣಿ ಚೆನ್ನಮ್ಮಳು ದೇಶದ ಸ್ವಾಭಿಮಾನಕ್ಕಾಗಿ ನಾಡ ನೆಲ ಜಲ ಸಂಸ್ಕೃತಿಯ ಉಳಿವಿಗಾಗಿ ಸೆಣೆಸಿದಳು..

ಮೋಸ ಕುತಂತ್ರಕ್ಕೆ ಬಲಿಯಾಯಿತೇ ಕಿತ್ತೂರು ಸಂಸ್ಥಾನವು ?
ಕಿತ್ತೂರಿನ ಘೋರ ಯುದ್ಧದಲ್ಲಿ ಥ್ಯಾಕರೆ ಸತ್ತು ಹೋದನು ಅವನ ಸಮಾಧಿಯನ್ನು ಧಾರಾವಾಡದಲ್ಲಿಯೇ ಮಾಡಲಾಯಿತು. ಸ್ಟೀವನ್ಸನ್ ಮತ್ತು ಇಲಿಯಟ್ ಎಂಬ ಆಂಗ್ಲ ಅಧಿಕಾರಿಗಳನ್ನು ಬಂಧಿಸಿ ಕಿತ್ತೂರು ಕೋಟೆಯಲ್ಲಿ ಸೆರೆ ಇಡಲಾಯಿತು .ಇವರಿಬ್ಬರನ್ನು ರಾಣಿ ಚೆನ್ನಮ್ಮ ಕೊಲ್ಲುವಳೆಂಬ ಭೀತಿ ಬ್ರಿಟಿಷರಿಗೆ ಕಾಡ ಹತ್ತಿತು. ಕಿತ್ತೂರಿನ ಸಮರದ ನಂತರದ ಮದ್ರಾಸಿನ ಹಿರಿಯ ಅಧಿಕಾರಿ ಚಾಪ್ಲಿನ್ ಎಂಬುವವನು ಧಾರವಾಡ ಕಲೆಕ್ಟರ್ ಆಗಿ ನೇಮಕಗೊಳ್ಳುತ್ತಾನೆ . ಮೊದಲು ಬ್ರಿಟಿಷ ಅಧಿಕಾರಿಗಳನ್ನು ಬಿಡುಗಡೆ ಗೊಳಿಸಲು ರಾಣಿ ಚೆನ್ನಮ್ಮಳ ಜೊತೆ ಹಲವು ಸುತ್ತಿನ ಮಾತುಕತೆ ಸಂಧಾನ ಮಾಡುತ್ತಾನೆ .ರಾಣಿ ಚೆನ್ನಮ್ಮ ಶೂರಳು ಅಷ್ಟೇ ಮೃದು ಉದಾರ ಮನಸ್ಸಿನವಳು ಕರುಣೆ ವಾತ್ಸಲ್ಯದ ಕರುಣಾಮೂರ್ತಿ ಬಂಧಿಸಿದ ಬ್ರಿಟಿಷ ಅಧಿಕಾರಿಗಳನ್ನು ಬಿಡುಗಡೆಗೊಳಿಸುತ್ತಾಳೆ .

ಅಧಿಕಾರಿ ಚಾಪ್ಲಿನ್ ಸಂಧಾನದ ಸಮಯದಲ್ಲಿ ಮತ್ತೆ ಕಿತ್ತೂರಿನ ವಿಷಯದಲ್ಲಿ ತಲೆ ಹಾಕುವದಿಲ್ಲ ಎಂದು ವಾಗ್ದಾನ ಮಾಡಿದವನು , ಬ್ರಿಟಿಷ ಅಧಿಕಾರಿಗಳ ಬಿಡುಗಡೆ ಆದ ಮೇಲೆ ತನ್ನ ವರಸೆ ಬದಲಾಯಿಸದ ,ಜಗತ್ತಿನಲ್ಲಿ ಬ್ರಿಟಿಷರನ್ನು ಮೊಟ್ಟ ಮೊದಲಿಗೆ ಸೋಲಿಸಿ ಬ್ರಿಟಿಷ್ ಅಧಿಕಾರಿ ಥ್ಯಾಕರೆಯನ್ನು ಕೊಂದ ಕಿತ್ತೂರನ್ನು ಹೇಗಾದರೂ ಮಾಡಿ ವಶಪಡಿಸಿಕೊಂಡು ಬ್ರಿಟಿಷ್ ರಾಜ್ಯಕ್ಕೆ ಒಪ್ಪಿಸಬೇಕೆಂಬ ನಿರ್ಧಾರಕ್ಕೆ ಚಾಪ್ಲಿನ್ ಬರುತ್ತಾನೆ ಆದರೆ ಕಿತ್ತೂರಿನ ಸೈನ್ಯ ಸಾಮರ್ಥ್ಯ ಮತ್ತು ಮರಾಠರು ಪೇಶ್ವೇಗಳು ಅರಬರ ಸಹಾಯ ಸಂಘಟನೆಯನ್ನು ಅರಿತ ಚಾಪ್ಲಿನ್ ಈ ಸಲ ವಾಮ ಮಾರ್ಗ ಹಿಡಿಯುತ್ತಾನೆ . ಮೋಸ ಕುತಂತ್ರಕ್ಕೆ ಕಿತ್ತೂರನ್ನು ವಶಪಡಿಸಕೊಳ್ಳಬೇಕೆಂಬ ಹುನ್ನಾರದಿಂದ ಹಾವೇರಿಯ ವೆಂಕೋಬರವರನ್ನು ಸಂಪರ್ಕಿಸಿ ಅವರಿಗೆ ಹಣದ ಬಹುಮಾನದ ಆಮಿಷವನ್ನು ಒಡ್ಡಿ ಕಿತ್ತೂರನ್ನು ಸೋಲಿಸಲು ರಣ ತಂತ್ರವನ್ನು ಹೆಣೆಯುತ್ತಾನೆ ಚಾಪ್ಲಿನ್ .

ಬ್ರಿಟಿಷ್ ಮತ್ತು ಕಿತ್ತೂರಿನ ಸಂಸ್ಥಾನದ ಮಧ್ಯೆ ಮತ್ತೆ ಮತ್ತೆ ಯುದ್ಧಗಳು ಕಡತಗಳು ಆರಂಭವಾದವು . ಒಮ್ಮೆ ಕಿತ್ತೂರು ಒಮ್ಮೆ ಬ್ರಿಟಿಷ್ ಸೈನ್ಯದ ಮೇಲುಗೈಯಾಗುತ್ತಿತ್ತು .ಆದರೆ ಸಮಬಲದ ಯುದ್ಧವನ್ನು ಮುಗಿಸಿ ಗೆಲ್ಲಬೇಕೆಂದು ಚಾಪ್ಲಿನ್ ವೆಂಕೋಬರಾಯರ ಸಹಾಯದಿಂದ ಕೋಟೆಯ ಕೊತ್ವಾಲ ಮತ್ತು ರಹಸ್ಯ ಅಧಿಕಾರಿಗಳ ಸಂಪರ್ಕಕ್ಕೆ ಬರುತ್ತಾನೆ .ಕೋಟೆಯ ಕೊತ್ವಾಲ ಶಿವಲಿಂಗನೆಂಬ ಸಹಾಯಕನಿಗೆ ಕರೆದು ಹೇರಳ ಪ್ರಮಾಣದ ದುಡ್ಡು ನೀಡಿ 1824 ಡಿಸೆಂಬರ್ 4 ರಂದು ರಾತ್ರಿ ಕೋಟೆಯೊಳಗಿನ ಮದ್ದು ಗುಂಡಿಗೆ ಸೆಗಣಿ ಮತ್ತು ರಾಡಿಯನ್ನು ಬೆರೆಸಲು ಹೇಳಿ ಅವು ಸ್ಪೋಟಕವಾಗದಂತೆ ಕುತಂತ್ರವನ್ನು ಹೆಣೆಯುತ್ತಾನೆ ಚಾಪ್ಲಿನ್ . ಮರುದಿನ ಮುಂಜಾನೆ ಡಿಸೆಂಬರ್ 5 ರಂದು ಯುದ್ಧ ಆರಂಭವಾಯಿತು ಕಿತ್ತೂರಿನ ಕಲಿಗಳು ಅತ್ಯಂತ ಶೌರ್ಯದಿಂದ ಹೋರಾಡ ಹತ್ತಿದರು .ಆದರೆ ತೋಪುಗಳಲ್ಲಿನ ಮದ್ದು ಗುಂಡು ಹುಸಿಯಾದವು ಸ್ಪೋಟವಾಗದೆ ಏಕಮುಖಿಯಾದ ಯುದ್ಧದಲ್ಲಿ ರಾಣಿ ಚೆನ್ನಮ್ಮಳು ದೃತಿಗೆಡದೆ ಹೋರಾಟನಡೆಸಿದಳು.
ಬ್ರಿಟಿಷರ ಸೈನ್ಯದ ಮೇಲುಗೈಯಾಗಹತ್ತಿತು .ಕಿತ್ತೂರು ಕೋಟೆ ಸಂಪೂರ್ಣ ಬ್ರಿಟಿಷರ ವಶವಾಯಿತು .

ಅಂದು ರಾಣಿ ಚೆನ್ನಮ್ಮ ವೀರಾವೇಶದಿಂದ ಯುದ್ಧ ಮಾಡಿದ ವಿವರವನ್ನು ಕನ್ನಡ ಕಾವ್ಯ ಈ ರೀತಿಯಾಗಿ ಸೆರೆ ಹಿಡಿದಿದೆ

*ಚಂಡಿಯೋ ಚೌಡಿಯೋ*
ಮಾರಿಯೋ ಮಸಣಿಯೋ ?
ಖಂಡಿತ ಮಾನವಳಿವಳಲ್ಲ
ಗಂಡುಗಲಿಗಳ ಮೀರಿ
ರುಂಡವ ತರಿವಳು
ಮಹಾಮಾರಿಯಲ್ಲದೆ
ಮತ್ತೆ ಬ್ಯಾರಲ್ಲ
ಪುಂಡಾಟ ರಕ್ಕಸರ ಹಿಂಡು
ಮುರಿದ ಚಾಮುಂಡಿಯೇ
ಈಕೆಯು ಸುಳ್ಳಲ್ಲ

ಇವಳ ಸುಧೀರ್ಘ ಹೋರಾಟ ಸಾಹಸ ಅಂತ್ಯವಾಯಿತು ಕಿತ್ತೂರಿಗೆ ಕಿತ್ತೂರೆ ಗೊಳೋ ಎಂದು ಕಣ್ಣೀರಿಟ್ಟಿತ್ತು . ರಾಣಿ ಚೆನ್ನಮ್ಮ ಸೊಸೆ ವೀರಮ್ಮ ಜಾನಕೀ ಬಾಯಿಯನ್ನು ಬಯಲುಹೊಂಗಲದ ಜೈಲಿನಲ್ಲಿ ಇಡಲಾಯಿತು . ಮುಂದೆ ವೀರಮ್ಮ ಅನಾರೊಗ್ಯದ ನಿಮಿತ್ತ ಇಂದಿನ ಯಾಲಕ್ಕಿ ಶೇಟ್ಟರ ತೋಟದಲ್ಲಿ ಯಾಲಕ್ಕಿ ಶಟ್ಟರ ಮನೆಯ ಎದುರಿನ ಹಪ್ಪಳ ಶಟ್ಟರ ಮನೆಯಲ್ಲಿ ಐಕ್ಯವಾಗುತ್ತಾಳೆ ಅಲ್ಲಿಯೆ ಅವಳ ಸಮಾಧಿ ಇದೆ. ಇನ್ನು ದತ್ತಕ ಮಗ ಶಿವಲಿಂಗಪ್ಪನನ್ನು ಬಂಕಾಪುರದ ಜೈಲಿನಲ್ಲಿಡಲಾಯಿತು . ಬಂಕಾಪುರದ ನವಾಬರಿಗೆ ಕಿತ್ತೂರಿನ ಉಸ್ತುವಾರಿ ನೋಡಿಕೊಳ್ಳಲು ಹೇಳಿದರೂ ಸಹಿತ ಕಿತ್ತೂರಿನ ಸಮಸ್ತ ಆಸ್ತಿಯನ್ನು ಬ್ರಿಟಿಷ್ ಅಧಿಕಾರಿಗಳು ತಮ್ಮ ಹತೋಟಿಯಲ್ಲಿಟ್ಟುಕೊಂಡರು .
ರಾಜಸತ್ತೆಗೆ ಜನರಿಗಾಗಿ ಅರಸುಮನೆತನದವರು ಯುದ್ಧದಲ್ಲಿ ಪಾಲ್ಗೊಂಡು ವಿಜಯಹೊಂದಿ ಮತ್ತೆ ಕುತಂತ್ರಕ್ಕೆ ಬಲಿಯಾದ ಕರಾಳ ಇತಿಹಾಸವನ್ನು ನೆನೆಪಿಸಲಾದಷ್ಟು ನೋವು ಕಾಡುತ್ತದೆ .
ಮುಂದಿನ ತಿಂಗಳು ಕಿತ್ತೂರು ಬಂಟರಿಂದ ಅರಸೊತ್ತಿಗೆ ಉಳಿಸುವ ಹೋರಾಟದ ವಿವರವನ್ನು ನೀಡುತ್ತೇನೆ .
ಮುಗಿಸುವ ಮುನ್ನ ಒಂದು ಮಾತು ,ಮತ್ತೆ ಮತ್ತೆ ಹೇಳಲು ಇಚ್ಛೆ ಪಡುತ್ತೇನೆ .ಇತಿಹಾಸದ ಕಾಲಗರ್ಭದಲ್ಲಿ ಹುದುಗಿಹೋಗಿದ್ದ ಕೆಲ ಸತ್ಯಗಳನ್ನು ಸಂಶೋಧಿಸಿ ಲಿಂಗಾಯತ ಸಮಾಜದ ಘನತೆ ಗೌರವ ಹೆಚ್ಚಿಸುವ ಉದ್ಧೇಶವನ್ನು ನಾನು ಮತ್ತು ಸಂಪಾದಕರಾದ ಶ್ರೀ ವೀರೇಶ್ ಸೌದ್ರಿ ಹೊಂದಿದ್ದೇವೆ ಹೊರತು ಕೇವಲ ಬಣಜಿಗರನ್ನು ವೈಭವಿಸುವ ಅಥವಾ ಅನ್ಯ ಲಿಂಗಾಯತ ಉಪಪಂಗಡಗಳನ್ನು ಕಡೆಗಣಿಸುವ ಸಣ್ಣಮಟ್ಟದ ವಿಚಾರ ನಮಗಿಲ್ಲ .ಜಗತ್ತಿನ ಇತಿಹಾಸದಲ್ಲಿ ಕಿತ್ತೂರಿನ ಚರಿತ್ರೆ ಸೇರಬೇಕು ಎಂಬುದೇ ನಮ್ಮ ಸ್ಪಷ್ಟವಾದ ಆಶಯವಾಗಿದೆ . ಬಾಗಲಕೋಟೆಯ ಮತ್ತು ಇತರ ಕಡೆಯ ಕೆಲ ಬಣಜಿಗ ಸಮಾಜದವರೇ ಕಿತ್ತೂರಿನ ಇತಿಹಾಸದ ಬಗ್ಗೆ ಬರೆಯುವಾಗ ಅಪಸ್ವರ ಎಬ್ಬಿಸಿದ್ದರು . ಕಿತ್ತೂರಿನ ಇತಿಹಾಸದ ಮೇಲಿನ ಇದು ನನ್ನ ಆರನೆಯ ಲೇಖನವಾಗಿದೆ.
ಬಣಜಿಗರಲ್ಲದ ಲಿಂಗಾಯತರು ಮತ್ತು ಅನ್ಯ ಸಮಾಜಕ್ಕೆ ಸೇರಿದ ಇತಿಹಾಸ ತಜ್ಞರು ಪ್ರೊ ಜ್ಯೋತಿ ಹೊಸುರ ಅವರು ನಾನು ಸಂಗ್ರಹಿಸಿದ ಕಿತ್ತೂರಿನ ಇತಿಹಾಸದ ಅನೇಕ ಹೊಸ ವಿಷಯಗಳ ಬಗ್ಗೆ ತುಂಬು ಹೃದಯದ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ .ಮುಂದಿನ ಸಂಚಿಕೆಯಲ್ಲಿ ಇನ್ನು ಹಲವು ಕುತೂಹಲಕಾರಿ ಸಂಗತಿಗಳು ಮೂಡಿ ಬರಲಿವೆ
ಶರಣಾರ್ಥಿ


ಡಾ.ಶಶಿಕಾಂತ.ಪಟ್ಟಣ ರಾಮದುರ್ಗ, ಪುಣೆ

9552002338


ಮಾನ್ಯ ಓದುಗರಲ್ಲಿ ವಿನಂತಿ,
ಪುಣೆಯ ಡಾ.ಶಶಿಕಾಂತ ಪಟ್ಟಣ ಅವರು *ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು*
ಎಂಬ ಸರಣಿ ಲೇಖನ ಪ್ರಕಟವಾಗಲಿದೆ..
ಓದುಗರು ಪ್ರಾಂಜ್ವಲ ಮನಸ್ಸಿನಿಂದ ಓದಿ, ಈ ಲೇಖನ ಸರಣಿ‌ ಮುಗಿದ ಮೇಲೆ ಓದುಗರಿಗೆ ಸಂಶಯ, ಅನುಮಾನ, ಹೆಚ್ಚಿನ ಚಿಂತನೆಯ ಚರ್ಚೆಯ ವಿಷಯಗಳಿದ್ದರೆ ಲೇಖಕರೊಂದಿಗೆ ಚರ್ಚಿಸಿ. 9552002338

ಸಂಪಾದಕ

*********

ವಿಶೇಷ ಸೂಚನೆ
copy rights resrved(ಇಲ್ಲಿನ ಎಲ್ಲ ಬರಹಗಳೂ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ.) ಈಬರಹಗಳ ಎಲ್ಲಾ ಅಭಿಪ್ರಾಯಗಳೂ ಲೇಖಕರ ವೈಯುಕ್ತಿಕ ಅಭಿಪ್ರಾಯಗಳಾಗಿದ್ದು,e-ಸುದ್ದಿ ಬ್ಲಾಗ್ ಅದಕ್ಕೆ ಹೊಣೆಯಾಗಿರುವುದಿಲ್ಲ
-ಸಂಪಾದಕ

Don`t copy text!