ಕತ್ತೆಯ ಕೂಗು

ಆತ್ಮೀಯ e-ಸುದ್ದಿ ಓದುಗರಲ್ಲಿ ನಮಸ್ಕಾರಗಳು

ಶ್ರೀ  ಗುಂಡುರಾವ್ ದೇಸಾಯಿ ಮಸ್ಕಿ ನನ್ನ ಆತ್ಮೀಯ ಶಿಕ್ಷಕ ಮಿತ್ರರು. ವೃತ್ತಿಯಲ್ಲಿ ಶಿಕ್ಷಕರು, ಪ್ರವೃತ್ತಿಯಲ್ಲಿ ಸಾಹಿತಿಗಳು. ಹಾಸ್ಯ ಬರಹಗಳ ಸಂಕಲನ, ಕವಿತೆಗಳು, ಮಕ್ಕಳ ಕತೆಗಳ ಬರೆದು ರಾಯಚೂರು ಜಿಲ್ಲೆಯ ಸಾಹಿತಿಗಳಲ್ಲಿ ಸಾಲಿನಲ್ಲಿ ಗುರತಿಸಿಕೊಂಡಿದ್ದಾರೆ. ಸದಾ ಪ್ರಯೋಗ ಶೀಲರು. ಮಕ್ಕಳಿಗೆ ಬರೆಯುವ ಹುಚ್ಚು ಹಿಡಿಸಿದವರು. ಇವರ ಅನೇಕ ಶಿಷ್ಯರನ್ನು (ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು) ಕತೆ ಕವನ ಬರೆಯುವಂತೆ ಪ್ರೇರೇಪಿಸಿದ್ದಾರೆ.‌ ಮಕ್ಕಳಲ್ಲಿರುವ ಬರವಣಿಗೆಯ ಕೌಶಲ್ಯಕ್ಕೆ ಸಾಣೆ ಹಿಡಿದಿದ್ದಾರೆ.

ಶ್ರೀ ಗುಂಡೂರಾವ್ ದೇಸಾಯಿ ಅವರು ಇಂದಿನಿಂದ ಮಕ್ಕಳಿಗಾಗಿ ಬರೆದ 7 ಕತೆಗಳನ್ನು ಪ್ರತಿದಿನ ಒಂದು ವಾರ ಪ್ರಕಟಿಸಲಾಗುವುದು. ಈ ಕತೆಗಳನ್ನು ಓದುವದು, ಮಕ್ಕಳಿಗೆ ಹೇಳಿದರೆ ಮಕ್ಕಳು ಆಸಕ್ತಿಯಿಂದ ಕೇಳುತ್ತವೆ. ಕತೆ ಹೇಳುವ ಸಂಸ್ಕೃತಿ ಹೆಚ್ಚಾಗಲಿ ಎಂಬುದು e-ಸುದ್ದಿ ಆಶಯದಿಂದ ಪ್ರಕಟಿಸುತ್ತಿದ್ದೇವೆ.

-ಸಂಪಾದಕ

————————————————————————–

ಕತೆ-1

ಕತ್ತೆಯ ಕೂಗು

ಲೇಖಕರು- ಗುಂಡುರಾವ್ ದೇಸಾಯಿ

“ಅಲ್ಲ ಕತ್ತೆ, ನೀನು ಕೂಗಿದ ಕೂಡಲೆ ಮಕ್ಕಳೆಲ್ಲ ಕೂದಲನ್ನು ಗಟ್ಟಿಯಾಗಿ ಹಿಡಿಯುತ್ತಾರಲ್ಲ.. ಯಾಕೆ?”ಎಂದು ಕೇಳಿತು ಕುದುರೆ.
ಕತ್ತೆ ಜೋರಾಗಿ ನಗುತ್ತಾ “ಅದಾ….. ಅದಕ್ಕೊಂದು ದೊಡ್ಡ ಕತೆ ಇದೆ” ಎಂದಿತು
“ಕತ್ತೆಗೂ ಕತೆ ಇದೆಯಾ?” ಎಂದು ಛೇಡಿಸಿತು ಕುದುರೆ
“ಇದೆ ….ಇದೆ ಅಲ್ಲಾ ಅನ್ನೊದು. ನಿಮಗೆಲ್ಲಾ ನಾನು ಹ್ಯಾಂಗ ಕಾಣ್ತೀನಿ? ಹಿಂದ ಹಿಂಗ ಅಂದವರಿಗೆ ಆ ಶಾಸ್ತಿ ಮಾಡಿನಿ ನಿನಗೂ ಮಾಡಲಾ?”
“ಬೇಡಪಾ ಹಾಂಗ ಮಾಡಿದಿ. ನನಗ ಒಂದು ಲೇವಲ್ ಇದೆ.. ನಿನ್ನಂಗ ಸಿಕ್ಕಿದ್ದು ಹೋರಿಸಿಬಿಡುತಾರೆ?”
“ಮತ್ತೆ ಕೊಂಕು ನುಡಿತಿ…ಮಾಡತಿನಿ ತಡಿ”
“ಹೇ ದೋಸ್ತ ತಮಾಷೆ ಮಾಡಿದೆ..ಇರಲಿ ಹೇಳು ಆ ಕಥೆ”
“ಹಲವು ಸಹಸ್ರಮಾನಗಳ ಹಿಂದಿನ ಕಥಿ. ಒಮ್ಮೆ ಕಾಡಿನ್ಯಾಗ ಎಲ್ಲಾರೂ ಸೇರಿದ್ದರು. ನಾನು ಹೋಗಿದ್ದೆ. ಗಾಯನ ಕಾರ್ಯಕ್ರಮ ನಡೆದಿತ್ತು.. ಅನೇಕ ಪಕ್ಷಿಗಳು ಹಾಡು ಹಾಡಿದವು…ಪ್ರಾಣಿಗಳು ಹಾಡಿದವು…”
“ನಂತರ ನೀನು ಹಾಡಬೇಕೆಂದು ಬಯಸಿದೆ”
“ಅಯ್ಯಿ ! ನಿನಗೆ ಹ್ಯಾಂಗ ಗೊತ್ತಾಯಿತೋ.?ನೀನು ಇರಲಿಲ್ಲ!”
“ಎಲ್ಲರೂ ಹಾಡಿದ ಮೇಲೆ ನಮಗೂ ಹಾಡಬೇಕಂತ ಮನಸ್ಸಾಗಲ್ಲೇನೋ…ಸಿಂಪಲ್ ಲಾಜಿಕ್ ಅಪ್ಪಾ..ಅದಕ್ಕ ನಿನಗ ಮೂರ್ಖ ಅಂತಾರ”
“ಮತ್ತೇ…….?”
“ಸ್ವಾರಿಪಾ..ಹೇಳೊ ಮುಂದೆ”
“ನಾನು ಹಾಡತಿನಿ ಅಂದೆ….ಆದರೆ ಮನುಷ್ಯ ಬೇಡ ಅಂದೆ”
“”ಹೌದು ಸಿಕ್ಕಾಪಟ್ಟೆ ಕಿರುಚುತಿಯಾ, ಅದಕೆ ಬೇಡ ಅಂದಿರಬೇಕು..”
“ಸಿAಹ ಚಿರತೆ, ತೋಳ..ಮೊದಲಾದವುಗಳ ಹಾಡು ಕೇಳಿದರು..ನಾನು ಬೇಡ ಆದೆನಾ? ಅದಕ್ಕ ಸಿಂಹರಾಜಗ ರಿಕ್ವೆಸ್ಟ್ ಮಾಡಿಕೊಂಡೆ…ಅವರು ಎಸ್ ಅಂದ್ರು ನಾನು ಗಂಟಲ ಸರಿಮಾಡಿಕೊಂಡು….ರಾಗವಾಗಿ ಹಾಡಿದೆ ಎಲ್ಲಾ ಶಕ್ತಿ ಹಾಕಿ”
“ಎಲ್ಲರೂ ಆಲಿಸಿದರು.. ವಾಹ್ ….ವಾಹ್…. ಎಂದರು..ಆದರೆ ಮನುಷ್ಯ ಮಾತ್ರ ‘ಅಮ್ಮಾ ತಾಳಲಾರೆ ಸಾಕು ಮಾಡೋ? ಏನು ಕರ್ಕಶ ಧ್ವನಿ’ ಅಂತ ಕೂಗಕತಿದಿÀ” ಎಂದ
“ಆಮೇಲೆ…”
“ಎಲ್ಲರೂ ಕೇಳಿದ್ದಾರೆ, ಖುಷಿ ಪಟ್ಟಿದ್ದಾರೆ ಆದರೆ ನೀನು ಮಾತ್ರ ಖುಷಿ ಪಟ್ಟಿಲ್ಲ ಇನ್ನೊಮ್ಮೆ ನಾನು ಹಾಡುವಾಗ ತಲೆದೂಗೊ ಹಾಗೆ ಮಾಡ್ತಿನಿ” ಅಂದೆ
“ಹೇಗೆ ಮಾಡ್ತಿ?” ಅಂತ ಅವ ಕೇಳಿದ
“ನಾನು ಕೂಗಿದಾಗ ‘ವಾಹ್, ವಾಹ್ ಅಂತ ಕೈ ಎತ್ತಿ ತಲೆ ಹಿಡುಕೊಂಡು ಶರಣಾಗ ಬೇಕು ಇಲ್ಲಂದ್ರ ನಿಮ್ಮ ತಲೆಕೂದಲು ಬೆಳ್ಳಗಾಗಲಿ” ಎಂದು ಸಿಟ್ಟಿನಿಂದ ಒದರಿದೆ
‘ಹುಚ್ಚ ಹಳೆ ಹುಚ್ಚ ವಯಸ್ಸಾದೋರು ನಾವು ಮೊದಲೆ ಬೆಳ್ಳಗಾಗವ.. ಒದರಿಕೆ ಹೋಗು ನಿನ್ನ ಮಾತು ಯಾವನು ಕೇಳತಾನ’ ಅಂದ್ರು
ನಾನು ಅಷ್ಟಕ್ಕೆ ಸುಮ್ಮನಾಗದೆ “ಹೌದಾ ನಿಮಗ ವಯಸ್ಸಾಗೆದ ಖರೆ ನಿಮ್ಮ ಮಕ್ಕಳವು….!ನಾನು ಕೂಗಿದಾಗ ಮೆಚ್ಚಿ ತಲೆಮೇಲೆ ಕೈ ಇಟ್ಟುಕೊಳ್ಳಲಿಕ್ಕಂದ್ರ ಅವರ ಕೂದಲನ್ನು ಬೆಳ್ಳಗ ಆಗೋ ಹಾಗೆ ಮಾಡ್ತಿನಿ” ಅಂದೆ. ಮನುಷ್ಯ ಸ್ಟನ್ ಆದ. ಹಿಂದು ಮುಂದ ನೋಡದ ಎಲ್ಲಾ ಪ್ರಾಣಿಗಳಿಗೆಲ್ಲ ಹೆದರಿಸಿ “ನನ್ನ ಅವಮಾನ ಮಾಡಕ ಕರಿದಿರಿ.. ಕತ್ತೆ ಮಾತನ್ನ ನೀವೆಲ್ಲ ಕೇಳಕತಿರಿ. ಕೇಳ್ರಿ ಇಡಿ ಪ್ರಾಣಿ-ಪಕ್ಷಿ ಕುಲನ ನನ್ನ ಹತೋಟಿಯಲ್ಲಿರೋ ಹಾಂಗ ಮಾಡ್ತಿನಿ” ಅಂತ ಎದ್ದು ಹೋದ
“ಮುಂದೆನಾಯ್ತೋ..?”
“ಪ್ರಾಣಿಗಳು ಮೌನವಾಗಿದ್ದವು…..ನನ್ನ ಬೆಂಬಲಕ್ಕಿದ್ದವು ಅಂತ ನಾನು ಸಂಭ್ರಮಿಸಿದೆ….ಆದರೆ……”
“ಆದರೆ ಏನೋ……”
“ನಾನು ಖುಷಿಯಿಂದ ಅವರ ಮುಂದ ಹೋಗಿ ಹಾಡಕ ಸುರು ಮಾಡಿದೆ… ಅವರೆಲ್ಲ ನನ್ನ ಕರ್ಕಶ ಧ್ವನಿ ತಾಳಲಾಗದ…ದರಿದ್ರದವನೆ ನೀನು ಕಾಡಿನ್ಯಾಗ ಇರಬೇಡ. ನಿನ್ನಿಂದಾಗಿ ಆ ಮನುಷ್ಯನ ಎದುರಾಕಿಕೊಂಡಿವಿ. ಅವನಿಂದ ಏನೆಲ್ಲ ಅನುಭವಿಸಬೇಕಾಗಿದೆಯೋ..ಗೊತ್ತಿಲ್ಲ.. ನಡಿ ಅವನಲ್ಲೆ ಸಾಯಿ. ನೀನು ಇದ್ರೆ ನಮಗ ನೆಮ್ಮದಿ ಇಲ್ಲ” ಅಂತ ಕಾಡಿನಿಂದ ಹೊರ ದೂಡಿದವು”
“ಅಯ್ಯೋ ಮುಂದೇನಾಯಿತು…?”
“ಮುAದೆ ನಾನು ಹಾಗೆ ಅಂದಿದ್ದೆ ತಪ್ಪಾಯಿತೇನೋ..ಮನುಷ್ಯ ನನ್ನ ಕರಕೊಂಡು ಬಂದು ಸಿಕ್ಕಂಗ ದುಡಿಸಿಕೊಳ್ಳಕತಾನ…”
“ನೀನು ಕೂಗಿದಾಗ ಮಕ್ಕಳೆಲ್ಲ ಕೂದಲ ಹಿಡಿತಾವ?”
“ನನ್ನ ಮೂರ್ಖ ಅನ್ನೋ ಮನುಷ್ಯ ಅವನು ಮೂರ್ಖನ… ಎಷ್ಟೆ ಶ್ಯಾಣೆ ಆದ್ರೂ ಒಂದು ವಿಕನೆಸ್ ಇರುತ್ತಲ್ಲ ಹಾಗೆ ಅವನದ್ದು ಮಕ್ಕಳ ವಿಕನೆಸ್. ಏನಾದ್ರೂ ಆಗುತ್ತೆ, ಆಯ್ತು ಅಂದ್ರೆ ಏನೆಲ್ಲ ನಂಬತಾನೆ ಅನ್ನೋಕೆ ನನ್ನ ಮಾತೆ ಸಾಕ್ಷಿ”
“ಹೌದು… ನೀನು ಕೂಗಿದಾಗ ಹಾಗೆ ಮಾಡಲಿಕ್ರ ಬಿಳಿಕೂದಲಾಗತಾವನಾ!”
“ಯಾವನಿಗೆ ಗೊತ್ತು..? ನನಗ ಬಂದ ಸಿಟ್ಟಿನ್ಯಾಗ ಕೂಗಿಕೊಂಡಿದ್ದು… ಅವ ನಂಬಿದ.. ನನ್ನ ಸಿಕ್ಕಂಗ ದುಡಿಸಿಕೊಳ್ಳುವ ಅವನಿಗೆ ಇಷ್ಟು ಬ್ಯಾಡವಾ ಭಯ…ಈ ವಿಷಯದಾಗ ಮೂರ್ಖ ಯಾರೋ?” ಎಂದು ಕತ್ತೆ ನಗೆ ಚೆಲ್ಲಿತು

Don`t copy text!