ಆಧ್ಯಾತ್ಮ ಪಥದಲ್ಲಿ ಸಾಧನೆಯ ಮಾರ್ಗ

ಅಕ್ಕನೆಡೆಗೆ…ವಚನ – 7

 

ಆಧ್ಯಾತ್ಮ ಪಥದಲ್ಲಿ ಸಾಧನೆಯ ಮಾರ್ಗ

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೆ ಸುತ್ತಿ ಸುತ್ತಿ ಸಾವ ತೆರನಂತೆ
ಮನಬಂದುದನು ಬಯಸಿ ಬೇವುತ್ತಿದ್ದೆನಯ್ಯಾ
ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ.

ಅಕ್ಕನ ಈ ವಚನವು ಎಲ್ಲಾ ವಚನಗಳಂತೆಯೇ ಅರ್ಥಪೂರ್ಣವಾದುದು. ಅವಳು ತನ್ನ ಆಧ್ಯಾತ್ಮ ‌ಸಾಧನೆಯ ಪಥವನ್ನು ಬಯಸಿ, ಆ ದಾರಿಯಲ್ಲಿ ಬರುವ ವಿಘ್ನಗಳಿಂದ ಪಾರಾಗುವ ಮಾರ್ಗ ಕಂಡುಕೊಳ್ಳುವ ಪ್ರಯತ್ನವನ್ನು ಇಲ್ಲಿ ಗ್ರಹಿಸುತ್ತೇವೆ. ಇದು ಅಕ್ಕನ ಆತ್ಮ ವಿದ್ಯೆಯ ದಾರಿಯಾದರೂ, ನಮ್ಮಂತಹ ಜನಸಾಮಾನ್ಯರ ವೈಯಕ್ತಿಕ ಬದುಕಿಗೆ ಹೊಸ ಹೊಳಹನ್ನು ತೋರಿಸುವಲ್ಲಿ ಸಫಲವಾಗುತ್ತದೆ.

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೆ ಸುತ್ತಿ ಸುತ್ತಿ ಸಾವ ತೆರನಂತೆ

ಈ ವಚನದ ಆಳಕ್ಕೆ ಇಳಿಯಲು ತೆರಣಿಯ ಹುಳುವಿನ ಬದುಕನ್ನು ಅವಲೋಕಿಸಲೇ ಬೇಕು. ತೆರಣಿಯ ಹುಳು ಎಂದರೆ ರೇಶ್ಮೆ ಹುಳು. ಇದರ ಬದುಕು ಮತ್ತು ಸಾವು ತಿಳಿದುಕೊಂಡರೆ, ಅಕ್ಕನ ವಚನದ ಆಶಯವನ್ನು ತಿಳಿಯಬಹುದು.

ಹನ್ನೆರಡನೇ ಶತಮಾನದಲ್ಲಿ ರೇಶ್ಮೆ ಹುಳುವಿನ ಬಗ್ಗೆ ಇರುವ ಪರಿಕಲ್ಪನೆ ಎಷ್ಟೆಂದು ತಿಳಿಯದು. ಇಂದು ಮಾತ್ರ ಅವುಗಳ ಸಾಕಣೆಯು Sericulture ಆಗಿ ಅಭಿವೃದ್ಧಿ ಹೊಂದಿ, ರೇಶ್ಮೆ ಬಟ್ಟೆಗಳ ವ್ಯಾಪಾರ ಜೋರಾಗಿ, ಮದುವೆ ಮತ್ತು ವಿಶೇಷ ಸಂದರ್ಭಗಳಲ್ಲಿ ಜನಪ್ರಿಯ ಬಟ್ಟೆಯೂ ಆಯಿತು. ನಂತರದ ದಿನಗಳಲ್ಲಿ ಮನೇಕಾ ಗಾಂಧಿ ಎತ್ತಿದ ಕೂಗಿನಿಂದಾಗಿ ರೇಶ್ಮೆ ಸಾಕಾಣಿಕೆಯು ಪ್ರಾಣಿ ಹಿಂಸೆಯಾಯಿತು. ರೇಶ್ಮೆ ಬಟ್ಟೆ ಎಂದರೆ ಹೆಣಗಳ ರಾಶಿಯನ್ನು ಹೊತ್ತಂತೆ ಎಂದು ನಂಬಲಾಯಿತಾದರೂ ರೇಶ್ಮೆ ಬಟ್ಟೆಗಳ ಮಾರಾಟವು ಹಾಗೇ ಮುಂದುವರಿದಿದೆ.

ರೇಶ್ಮೆ ಹುಳುವಿನ ಕತೆಗೆ ಬಂದರೆ, ಅವುಗಳಿಗೆ ಸದಾ ಕಾಲ ಹಸಿರು ಸೊಪ್ಪನ್ನು ತಿನ್ನುತ್ತಲೇ ಇರುವ ಅಭ್ಯಾಸ. ಅದಕ್ಕೆ ಎಲೆಗಳನ್ನು ತಿನ್ನುವುದನ್ನು ಬಿಟ್ಟರೆ ಬೇರೇನೂ ಗೊತ್ತಿರುವುದಿಲ್ಲ. ಒಂದಷ್ಟು ದಿನಗಳ ಕಾಲ ತಿಂದು ತಿಂದು ಸೊಕ್ಕಿದಂತಾಗಿ ಬಲಿತುಕೊಳ್ಳುತ್ತವೆ. ಆಗ ಆ ಹುಳುಗಳು ತಮ್ಮ ದೇಹಾಕಾರದ ಸುತ್ತಲೂ ಇರುವ ಹೊರ ಚರ್ಮವನ್ನು ಗಟ್ಟಿಗೊಳಿಸಿಕೊಳ್ಳುತ್ತವೆ. ಹಾಗೆಯೇ ಆ ಚರ್ಮದ ಬಣ್ಣವೂ ಹಳದಿಯಾಗುತ್ತದೆ.

ಹೀಗೆ ಹಳದಿ ಬಣ್ಣಕ್ಕೆ ತಿರುಗಿದ ರೇಶ್ಮೆ ಹುಳುಗಳ ಮೇಲೆ ಬೆಳದಿಂಗಳ ಬೆಳಕು ಬಿದ್ದರೆ, ಅದರ ಬಾಯಿಂದ ಜೊಲ್ಲು ಸ್ರವಿಸುತ್ತದೆ. ರಸದ ರೂಪದಲ್ಲಿರುವ ಆ ಜೊಲ್ಲಿನಿಂದ, ಹುಳುವು ತನ್ನ ಸುತ್ತಲೂ ಕೋಶ ಕಟ್ಟಿಕೊಳ್ಳಲು ಆರಂಭಿಸುತ್ತದೆ. ತೆರಣಿ ಹುಳುವಿನ ಸುತ್ತ ತನಗರಿವಿಲ್ಲದಂತೆಯೇ, ತನ್ನಿಂದಲೇ, ಎಳೆಗಳು ಬೆಸೆದುಕೊಂಡು ಗಟ್ಟಿಯಾಗಿ ಸುತ್ತಿಕೊಳ್ಳುತ್ತದೆ.

ಹಾಗೆ ನಿರ್ಮಿತಗೊಂಡ ಕೋಶ ಅದೆಷ್ಟು ಗಟ್ಟಿಮುಟ್ಟಾಗಿರುತ್ತದೆ ಎಂದರೆ ಮನುಷ್ಯ ತನ್ನ ಕೈಯಿಂದ ಒಡೆಯಲು ಸಾಧ್ಯವಾಗುವುದಿಲ್ಲ. ಅದನ್ನು ಸಂಸ್ಕರಿಸಿ ರೇಶಿಮೆಯ ಎಳೆಯನ್ನು ತೆಗೆದುಕೊಳ್ಳಲಾಗುತ್ತದೆ. ಅಲ್ಲಿಗೆ ಆ ಹುಳುವಿನ ಅಂತ್ಯವಾದಂತೆಯೇ ಸರಿ. ಹೀಗೆ ತೆರಣಿ ಹುಳು ತನ್ನ ಸಾವಿಗೆ ತಾನೇ ಕಾರಣವಾಗುತ್ತದೆ. ಇಲ್ಲಿ ಸಾವು ಸಂಭವಿಸಲು ಬೇರೆ ಯಾರೂ ಕಾರಣೀಭೂತರಲ್ಲ.

ಈ ವಚನದ ಮೊದಲೆರಡು ಸಾಲಿನಲ್ಲಿ ಬರುವ ಹೋಲಿಕೆ ಕೇವಲ ಒಂದೇ ಒಂದು ಇದ್ದರೂ, ಅದು ಇಡೀ ವಚನದ ಜೀವಾಳ. ತೆರಣಿಯ ಹುಳು ತನ್ನ ಸ್ನೇಹದಿಂದ ತನ್ನ ಮನೆಯ ಮಾಡಿ ತನ್ನ ನೂಲಿನಿಂದ ತಾನೇ ಬಂಧಿಯಾಗುವ ವಿಪರ್ಯಾಸ. ಈ ಉಪಮೆ ಅಕ್ಕನೊಳಗಿರುವ ಕಾವ್ಯ ಶಕ್ತಿ.

ತೆರಣಿಯ ಹುಳುವಿನ ಕುರಿತಾದ ವಿವರಣೆಯನ್ನು ಅಕ್ಕ ತನ್ನ ಬದುಕಿಗೆ ಹೋಲಿಸಿಕೊಂಡು ವಿವೇಚನೆಯ ದಾರಿಯಲ್ಲಿ ಸಾಗುತ್ತಾಳೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬದುಕಿಗೆ ಈ ವಚನ ಹೋಲಿಸಿಕೊಂಡಾಗ ಅಕ್ಕನ ವಚನ ಸಾರ್ಥಕವಾಗುತ್ತದೆ.

ಮನಬಂದುದನು ಬಯಸಿ ಬೇವುತ್ತಿದ್ದೆನಯ್ಯಾ

ಎಲ್ಲವನ್ನೂ ಬಯಸುವುದು ಮನುಷ್ಯ ಸಹಜ ಗುಣ. ಅದನ್ನು ನಿಯಂತ್ರಿಸಲು ಬುದ್ಧಿ ಮತ್ತು ಭಾವಗಳ ಸಮ್ಮಿಶ್ರ ಚಿಂತನೆಯಾದಾಗ ಗಟ್ಟಿಗೊಳ್ಳಲು ಸಾಧ್ಯ. ಇದನ್ನು ಹೇಳುವುದು ಎಷ್ಟು ಸುಲಭವೊ, ರೂಢಿಸಿಕೊಳ್ಳುವುದು ಅಷ್ಟೇ ಕಷ್ಟ. ಇಲ್ಲಿ ಅಕ್ಕ ದುರ್ಬಲವಾದ ಮನಸು ಏನೇನೊ ಬಯಸಿ, ಆ ಬಯಕೆಗಳಲ್ಲೇ ಒದ್ದಾಡುವ ಚಿತ್ರಣ ನೀಡಿದ್ದಾಳೆ.

ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ.

ನನ್ನ ಮನದ ದುರಾಸೆಯನ್ನು ಬಿಡಿಸಿ, ಆ ದೇವ ಚೆನ್ನಮಲ್ಲಿಕಾರ್ಜುನನನು ತನ್ನೆಡೆಗೆ ಒಲಿಸಿಕೊಳ್ಳಲೆಂದು ಬಿನ್ನವಿಸುತ್ತಾಳೆ. ಅಕ್ಕ ತನ್ನ ವೈಯಕ್ತಿಕ ನೆಲೆಯಲ್ಲಿ ಹೇಳಿದ್ದರೂ, ಅಲ್ಲಿ ಅಡಗಿರುವ ಸಾರ್ವತ್ರಿಕ ಸತ್ಯವನ್ನು ನಾವು ಗ್ರಹಿಸಬಹುದು.

ಮನುಷ್ಯನ ಮನಸ್ಸು ಬಹಳ ದುರ್ಬಲವಾದುದು. ಸ್ಥಿತಪ್ರಜ್ಞೆ ರೂಢಿಸಿಕೊಳ್ಳದ ದೌರ್ಬಲ್ಯ ಆವರಿಸಿರುತ್ತದೆ. ‘ಮನಸ್ಸೊಂದು ಮರ್ಕಟವಯ್ಯ’ ಎಂದು ಹೇಳುವುದರ ಹಿಂದಿನ ಉದ್ದೇಶವೂ ಅದೇ ಆಗಿದೆ. ಅದರ ಚಂಚಲತೆಗೆ, ಅಸೆ-ಆಮಿಷಗಳಿಗೆ ಲೆಕ್ಕವೇ ಇಲ್ಲ. ಆಸೆಗಳು ದುರಾಸೆಗಳಾಗಿ, ಅದೆಷ್ಟೊ ಅನಾಹುತಗಳಿಗೆ ದಾರಿಯಾದ ಉದಾಹರಣೆಗಳನ್ನು ನೋಡುತ್ತೇವೆ, ಕೇಳುತ್ತೇವೆ, ಅನುಭವಿಸುತ್ತೇವೆ. ‘ಆಸೆಯೇ ದುಃಖಕ್ಕೆ ಮೂಲ’ ಬುದ್ಧ ಹೇಳಿದ ಮಾತನ್ನು ನೆನಪಿಸಿಕೊಳ್ಳಬೇಕು.

ಪ್ರಸ್ತುತದಲ್ಲಿ ಯುವಜನತೆ ಅಷ್ಟೇ ಅಲ್ಲ, ಎಲ್ಲಾ ವಯಸ್ಸಿನವರು ಸ್ಮಾರ್ಟ್ ಫೋನ್ ಹಾವಳಿಗೆ ಸಿಲುಕಿ ಸಮಾಜ ತಲ್ಲಣಗೊಂಡಿದೆ. ಒಳ್ಳೆಯ ಹವ್ಯಾಸಗಳು ಮನುಷ್ಯನಿಗೆ ತಿಳಿಯದಂತೆ ಮಾಯವಾಗುತ್ತಿವೆ. ಹಿಂದೆಲ್ಲಾ ಹೊತ್ತು ಕಳೆಯಲು ಓದುವ, ಆಡುವ, ಗೆಳೆಯರನ್ನು ಭೇಟಿಯಾಗುವ ಆರೋಗ್ಯಕರ ಅಭ್ಯಾಸಗಳಿದ್ದವು. ಆದರೆ ಪ್ರಸ್ತುತದಲ್ಲಿ ತಂತ್ರಜ್ಞಾನ ಮುಂದುವರಿದು, ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಹವ್ಯಾಸಗಳು ಕಳೆದು ಹೋಗುತ್ತಿವೆ. ಸಮಯ ಹಾಳು ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬರುತ್ತಿಲ್ಲ. ಸತ್ಸಂಗಗಳು ದಿನೇ ದಿನೇ ಮಾಯವಾಗುತ್ತಿವೆ. ಸ್ಮಾರ್ಟ್ ಫೋನ್ ಗದ್ದಲದಲ್ಲಿ ಸಮಯ ಸೋರಿ ಹೋಗುತ್ತಿರುವುದು ವಿಷಾದ.

ಗೂಗಲ್‌ನಲ್ಲಿ ಒಂದು ವಿಷಯ ಹಿಡಿದುಕೊಂಡು ಹುಡುಕಲು ಹೊರಟರೆ, ಅದಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಸಿಗುತ್ತವೆ. ಒಂದು ಸಿನಿಮಾ ಹಿರೊಯಿನ್ ಹೆಸರೊ ಅಥವಾ ಆಟದ ಹೆಸರೊ, ಆಟಗಾರರ ಹೆಸರೊ, ಹಾಕಿದರೆ ಸಾಕು ಅವರ ಕುರಿತು ಎಲ್ಲಾ‌ ಮಾಹಿತಿಗಳು ದೊರೆಯುತ್ತವೆ. ಮಂಗನಂತ ಮನಸು ಕುತೂಹಲದಿಂದ ಮುಂದುವರಿದು, ಸಮಯ ವ್ಯರ್ಥವಾಗಿರುತ್ತದೆ. ಅನಾವಶ್ಯಕವಾಗಿ ಹಾಳಾದ ಸಮಯವನ್ನು ಮತ್ತೆ ಹಿಂದಿರುಗಿ ಪಡೆಯಲು ‌ಸಾಧ್ಯವೇ ಇಲ್ಲ. ಆ ಪ್ರಜ್ಞೆಯನ್ನು ಸದಾ ಮನುಷ್ಯ ತನ್ನೊಳಗೆ ಇರಿಸಿಕೊಂಡಿರೆ, ಸಮಯದ ಸದ್ವಿನಿಯೋಗವಾಗುತ್ತದೆ.

ಮನಸನ್ನು ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ’ ಎಂದು ಅಕ್ಕ ಪ್ರಾರ್ಥಿಸುವಲ್ಲಿ ಇರುವ ಕಾಳಜಿ, ಕಳಕಳಿಯನ್ನು ಗುರುತಿಸಬಹುದು. ಇಲ್ಲಿ ಅವಳದು ತನ್ನ ಆಧ್ಯಾತ್ಮ ಸಾಧನೆಗಾಗಿ, ಮನದ ಬಯಕೆಗಳಿಗೆ ಕಡಿವಾಣ ಹಾಕುವ ಯತ್ನ. ನಾವು ಸಹ ನಮ್ಮ ಬದುಕಿನಲ್ಲಿರುವ ಏನಾದರೊಂದು ಗುರಿ ಇಟ್ಟುಕೊಂಡೇ ಮುಂದುವರಿಯುತ್ತಿರುತ್ತೇವೆ. ಆ ಸಾಧನೆಗಾಗಿ ಬದ್ಧರಾಗಿರುವ ಪ್ರಯತ್ನದಲ್ಲಿ ತೊಡಗುವುದೆಂದೇ ಅರ್ಥ.

ಮನುಷ್ಯ ಅಲೌಕಿಕವನ್ನು ಮರೆತು ಲೌಕಿಕದ ಬದುಕಿನಲ್ಲಿ ಕಳೆದು ಹೋಗುವುದೆಂದರೆ, ತೆರಣಿಯ ಹುಳುವಿನಂತೆ ಪ್ರಾಣ ಕಳೆದುಕೊಂಡ ಹಾಗೆ.

ತೆರಣಿಯ ಹುಳಕ್ಕೆ ಹಾಗೆ ಬದುಕುವುದು ಅನಿವಾರ್ಯ. ಏಕೆಂದರೆ ಅದೇ ಅದರ ಜೀವನ. ಅಲ್ಲಿ ಬೇರೆ ಆಯ್ಕೆ ಇಲ್ಲದೆ ಇರುವುದು ಸೃಷ್ಟಿಯ ನಿಯಮ. ಆದರೆ ಮನುಷ್ಯನ ಬದುಕು ಹಾಗಿಲ್ಲ. ಅವನ ಜೀವನ‌ಕ್ರಮಕ್ಕೆ ಆಯ್ಕೆ ಇದೆ. ಔನತ್ಯದೆಡೆಗೆ ಸಾಗುವ ಸಾಧ್ಯತೆಗಳಿವೆ. ಸಂಸಾರದವನ್ನು ಜಗಕ್ಕಿಕಿದ ವಿಧಿ ಎಂದು ಅಲ್ಲೇ ಒದ್ದಾಡುವುದಕ್ಕಿಂತ, ಕೊಡವಿಕೊಂಡು ಮೇಲೇಳುವ ಸಾರ್ಥಕ ಪರ್ಯಾಯ ಮಾರ್ಗವನ್ನು ಅಕ್ಕ ಸೂಚಿಸುತ್ತಾಳೆ. ಪಾರಮಾರ್ಥದ ಕಡೆಗೆ ಸ್ವಲ್ಪ ಸಮಯವನ್ನಾದರೂ ವ್ಯಯಿಸಿದರೆ ಬದುಕು ಪರಿಪೂರ್ಣತೆಯ ಕಡೆಗೆ ಮುಖ ಮಾಡುತ್ತದೆ. ಅಕ್ಕ ತನ್ನನ್ನು ತಾನು ಸ್ವಯಂ ವಿಮರ್ಶೆಗೆ ಗುರಿಪಡಿಸಿಕೊಂಡವಳು. ಈ ಲೌಕಿಕದ ಸೆಳೆತಕ್ಕೆ ಇರುವ ಮೋಹ, ವಾಂಛೆ ಬಿಡಿಸೆಂದು ಚೆನ್ನಮಲ್ಲಿಕಾರ್ಜುನನನ್ನೇ ಬೇಡಿಕೊಳ್ಳುತ್ತಾಳೆ. ಅದಕ್ಕಾಗಿಯೇ ಅವನಲ್ಲಿ ಮೊರೆ ಹೋಗುವ ಚಿತ್ರಣ ಈ ವಚನದಲ್ಲಿ ಅಡಗಿದೆ. ದುರ್ಬಲ ಮನಸನ್ನು ಹೊಡೆದೋಡಿಸಿ ಗಟ್ಟಿಗೊಳಿಸುವ ಮನಸ್ಥತಿ ನಿರ್ಮಾಣ ಮಾಡಿಕೊಳ್ಳವ ಸಂದೇಶ ಈ ವಚನದಲ್ಲಿದೆ. ಇದನ್ನು ನಾವು ನಮ್ಮ ಬದ್ಧತೆಗಾಗಿ ಎಚ್ಚರಿಕೆ ಎಂದೂ ಸ್ವೀಕರಿಸಬಹುದು.

ಅಲ್ಲಮ, ಚೆನ್ನವಸವಣ್ಣ, ಅಕ್ಕಮಹಾದೇವಿಯದು ಭಕ್ತಿ ಮಾರ್ಗ. ಆಧ್ಯಾತ್ಮವೇ ಅವರ ಗುರಿ. ಲೌಕಿಕದ ಎಲ್ಲಾ ವಿಷಯಗಳಲ್ಲಿ ವಿರಕ್ತಭಾವ ಹೊಂದಿದವರು. ಅಕ್ಕ ವೈರಾಗ್ಯ ಮಾರ್ಗವನ್ನೇ ತನ್ನ ಜೀವನದ ಪ್ರಮುಖ ಗುರಿಯಾಗಿಸಿಕೊಂಡು, ತನ್ನ ರೂಪ, ಯೌವನಗಳ ಮಾಯಾಜಾಲದಲ್ಲಿ ಸಿಲುಕದೆ ಹೊರ ಬಂದವಳು. ಚೆನ್ನಮಲ್ಲಿಕಾರ್ಜುನನನ್ನು ಸೇರುವ ತೀವ್ರ ಹುಡುಕಾಟದಲಿ ಮುಂದುವರಿಯುತ್ತಾಳೆ. ನಾವು ನಮ್ಮ ಜೀವನದ ಒಂದಿಷ್ಟೇ ಇಷ್ಟು ಸಮಯವನ್ನು ಧ್ಯಾನ, ಯೋಗದಲ್ಲಿ ಕಳೆದರೆ, ಜೀವನಶೈಲಿಯ ಮಟ್ಟ ಕೊಂಚ ಎತ್ತರಕ್ಕೆ ಏರುವುದರಲ್ಲಿ ಸಂಶಯವಿಲ್ಲ.

ಸಿಕಾ ಕಲಬುರ್ಗಿ

Don`t copy text!