ಶರಣರು ಕಂಡ ಮುಕ್ತ ಸಮಾಜ ಮತ್ತು ಲಿಂಗ ತತ್ವ

ಹನ್ನೆರಡನೆಯ ಶತಮಾನವು ಹಿಂದೆಂದೂ ಕಂಡರಿಯದ ಸಮ ಸಮಾಜದ ಪರಿಕಲ್ಪನೆಯನ್ನು ಹುಟ್ಟು ಹಾಕಿ ಮುಂದಿನ ಎಲ್ಲಾ ಶತಮಾನಕ್ಕೂ ಸಾರ್ವಕಾಲಿಕ ಸಮಾನತೆ ಸಮತೆ ಶಾಂತಿ ಸಹ ಬಾಳ್ವೆ ವಿಶ್ವ ಬಂಧುತ್ವವನ್ನು ಪ್ರತಿಪಾದಿಸಿದ ಸರ್ವ ಶ್ರೇಷ್ಠ ವೈಚಾರಿಕ ಸಿದ್ಧಾಂತವಾಗಿದೆ . ಎಲ್ಲಾ ತಾರತಮ್ಯ ಶ್ರೇಣೀಕೃತ ಏರು ಪೇರುಗಳನ್ನು ಕಿತ್ತೊಗೆದು ಎಲ್ಲ ವರ್ಗದವರಿಗೆ ವಿಶೇಷವಾಗಿ ದಲಿತರಿಗೆ ಅಸ್ಪ್ರಶ್ಯರಿಗೆ ಕಾರ್ಮಿಕರಿಗೆ ದಮನಿತರಿಗೆ ಶೋಷಿತರಿಗೆ ಮಹಿಳೆಯರಿಗೆ ಶ್ರಮಜೀವಿಗಳಿಗೆ ಧ್ವನಿಯಾದನು ಬಸವಣ್ಣ . ಕಾಯಕ ಮತ್ತು ದಾಸೋಹ ಎಂಬ ಅತ್ಯಂತ ಸುಂದರ ಯೋಜನೆ ಸಿದ್ಧಾಂತವನ್ನು ಜಾರಿಗೊಳಿಸಿ ಆತ್ಮಾಭಿಮಾನದಿಂದ ಎಲ್ಲರೂ ಬಾಳಬಹುದು ಎಂದು ನಿರೂಪಿಸಿದರು.
ಬಸವಣ್ಣ ಅಲ್ಲಮ ಚೆನ್ನಬಸವಣ್ಣ ಮಡಿವಾಳ ಮಾಚಿದೇವ ಸಿದ್ಧರಾಮ ಅಂಬಿಗರ ಚೌಡಯ್ಯ ಅಕ್ಕಮ್ಮ ಸತ್ಯಕ್ಕ ಲಕ್ಕಮ್ಮ ಮುಂತಾದ ನೂರಾರು ಜನ ಶರಣ ಶರಣೆಯರು ಈ ಕ್ರಾಂತಿಯಲ್ಲಿ ಪಾಲ್ಗೊಂಡು ಜಗತ್ತಿಗೆ ಒಂದು ಅತ್ಯಂತ ಸರಳ ಮುಕ್ತ ಸಮಾಜವನ್ನು ಕೊಟ್ಟರು .

ಇಂದು ಬಸವಣ್ಣ ಮತ್ತು ಆತನ ಸಿದ್ಧಾಂತಗಳು ಕೇವಲ ಪ್ರವಚನ ಭಾಷಣ ಲೇಖನಕ್ಕೆ ಮಾತ್ರ ಸೀಮಿತವಾಗಿದ್ದು ಉನ್ಮಾದ ಉತ್ಸಾಹ ಭ್ರಮೆ ಭ್ರಾಂತಿಯಲ್ಲಿ ಬಸವ ತತ್ವಗಳನ್ನು ಆಚರಣೆಯಲ್ಲಿ ತರುತ್ತಿರುವುದು ಅಥವಾ ಇದುವೆ ಬಸವ ತತ್ವ ಎಂಬ ಇನ್ನೊಂದು ಹೊಸ ಸಂಸ್ಕೃತಿಯನ್ನು ನಮ್ಮ ಸಮಾಜದಲ್ಲಿ ಹುಟ್ಟು ಹಾಕುತ್ತಿರುವುದು ನೋಡುತ್ತಿದ್ದರೆ ಮನಸ್ಸಿಗೆ ಕಳವಳ ನೋವು ಆತಂಕ ಉಂಟಾಗುವದು ಸಹಜ .

ಶರಣರು ನಮ್ಮನ್ನು ಮುಕ್ತ ಮತ್ತು ಸ್ವತಂತ್ರರನ್ನಾಗಿ ಮಾಡಿದರೇ ಈ ಮಠಾಧೀಶರು ಗುರುಗಳು ನಮ್ಮನ್ನು ಮತ್ತೆ ದಾಸ್ಯತ್ವಕ್ಕೆ ತಳ್ಳುವ ಗುಲಾಮರನ್ನಾಗಿ ಮಾಡಿದ್ದಾರೆ. ಬಸವಣ್ಣನನ್ನು ಆ ಥಳುಕುಬೆಳಕಿನ, ತಾರತಮ್ಯದ, ಅಂಧಾಚರಣೆಗಳ ಸೆರೆಯಿಂದ ಬಿಡಿಸಲೇಬೇಕು.

ಬಸವ ಪೂರ್ವಯುಗದ ಗುರು ಲಿಂಗ ಆಚರಣೆಗೆ ಕಲ್ಪನೆಗೆ ಸಂಪೂರ್ಣ ವಿಭಿನ್ನ ಮತ್ತು ಹೊಸ ವ್ಯಾಖ್ಯಾನ ಬರೆದರು ಬಸವಣ್ಣನವರು. ಆದರೆ ಇಂದು ನಾವು ಮತ್ತೆ ಮಠೀಯ ಸಂಸ್ಕೃತಿಗೆ ಜೋತು ಬಿದ್ದಿದ್ದೇವೆ ಮಾರು ಹೋಗಿದ್ದೇವೆ. ಆಶ್ರಮ ಮಾತೆ ಅಕ್ಕ ಅಣ್ಣ ಮತ್ತು ಶರಣ ಎಂಬ ನವ ಪೌರೋಹಿತ್ಯವನ್ನು ಅವಲಂಬಿಸಿದ್ದು ಎಲ್ಲೋ ಬಸವ ತತ್ವಕ್ಕೆ ಮಾರಕ ಎಂದಾಗಬಹುದು ಎಂಬುದು ನನ್ನ ಸ್ಪಷ್ಟ ಅಭಿಮತ. ಇಲ್ಲಿ ಮಠಗಳ ಬಗ್ಗೆ ಅಥವಾ ಮಠಾಧೀಶರ ಬಗ್ಗೆ ಅಗೌರವ ಅಂತಲ್ಲ ಅವುಗಳು ಮತ್ತು ಅಂತಹ ವ್ಯವಸ್ಥೆಯ ವಾರಸುದಾರರು ಬಸವ ತತ್ವ ಆಶಯಕ್ಕೆ ಪೂರಕವಾಗಿ ಕಾರ್ಯ ಮಾಡುತ್ತಿಲ್ಲ ಎಂಬ ನೋವು ಕೊರಗು ಬಹುತೇಕ ಭಕ್ತರಲ್ಲಿ ಕಾಡುತ್ತಿದೆ .
ಅಷ್ಟಾವರಣಗಳು -ತತ್ವಕ್ಕೆ ಸೀಮಿತವಾದ ಸಂಕೇತಗಳು.ಗುರು ಲಿಂಗ ಜಂಗಮ ರುದ್ರಾಕ್ಷಿ ವಿಭೂತಿ ಮಂತ್ರ ಪಾದೋದಕ ಪ್ರಸಾದ ಎಂಬ ಎಂಟು ಅವತರಣಿಕೆಗಳು ಭೌತಿಕ ವಸ್ತುಗಳಲ್ಲ . ಪಂಚ ಮಹಾಭೂತಗಳ ಒಂದೊಂದು ತತ್ವ ಮಾತ್ರ .
ಇದನ್ನು ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ

ಕಾಯದೊಳು ಗುರು ಲಿಂಗ ಜಂಗಮ
ದಾಯತವನರಿಯಲ್ಕೆ ಸುಲಭೋ
ಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |
ದಾಯದೋರಿ ಸಮಸ್ತ ಭಕ್ತ ನಿ
ಕಾಯವನು ಪಾವನವ ಮಾಡಿದ
ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ|| ಚಾಮರಸ ( ಪ್ರಭು ಲಿಂಗ ಲೀಲೆ ).

ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.
ಸನಾತನದಲ್ಲಿ ಗುರು ಸರ್ವ ಶ್ರೇಷ್ಠ ಅವನಿಂದಲೇ ಮುಕ್ತಿ ದಾರಿ ತೋರುವ ನಿಜ ಗುರು ಹರನಿಗಿಂತಲೂ ಶ್ರೇಷ್ಠ ಇಂತಹ ಅನೇಕ ಕಲ್ಪನೆಗಳು ಬಸವಣ್ಣನವರು ಕಿತ್ತೊಗೆದು ,ದೀಪದಿಂದ ದೀಪ ಹಚ್ಚುವ ಪರಿಕಲ್ಪನೆ ಅಥವಾ ಗುರು ತನ್ನ ಕಾರ್ಯ ನಿರ್ವಹಿಸಿ ತಾನು ಶಿಷ್ಯನಲ್ಲಿ ಒಂದಾಗಿ ತಾನು ಗುರು ಆತ ಶಿಷ್ಯ ಎಂಬ ಬೇರೆ ಭಾವವನ್ನು ಸಂಪೂರ್ಣ ಕಳೆದು ಕೊಳ್ಳುತ್ತಾನೆ
ಶರಣರು ತಾನು ಮತ್ತು ಶಿವ ಒಂದು ಎಂದು ಸಾಧಿಸಿದ ಮೊದಲ ಪುರುಷರು.ಉಭಯ ಭಾವವನ್ನು ಎಲ್ಲಿಯೂ ಪ್ರತಿಪಾದಿಸದೆ ಅಂತಹ ಸಂದೇಹ ಗೊಂದಲಗಳನ್ನು ಕಿತ್ತು ಹಾಕಿದರು. ಮನುಷ್ಯ ತಾನು ತನ್ನ ಸುತ್ತಲಿನ ಜೀವ ಜಾಲದ ಚೈತನ್ಯವನ್ನು ಚಿತ್ಕಳೆಯನ್ನು ನಿರಾಕಾರದ ಶಿವನ ಪರಿಕಲ್ಪನೆಯನ್ನು ಸಾಕಾರ ಗೊಳಿಸಿ ,ಮತ್ತೆ ನಿರಾಕಾರದ ನಿರುಪಾಧಿಕ ತತ್ವದ ಆಧ್ಯಾತ್ಮಿಕ ಪಯಣಕ್ಕೆ ಕರೆದೊಯ್ಯುವುದೇ ಶರಣ ಮಾರ್ಗ.

ಇಂತಹ ಸುಂದರ ಪರಿಕಲ್ಪನೆಯು ಚಾಮರಸಾದಿಯಾಗಿ ಎಲ್ಲ ಅನುಭಾವಿಗಳು ತಮ್ಮ ಕೃತಿಗಳಲ್ಲಿ ಸಾದರಗೊಳಿಸಿದ್ದಾರೆ . ಕಾಣಬಾರದ ಗುರು ಕಾಣಬಾರದ ಲಿಂಗ ಚಲನಶೀಲ ಜಂಗಮ ತತ್ವಗಳು ನಮ್ಮವರಿಗೆ ಅರ್ಥಪೂರ್ಣವಾಗಿ ತಿಳಿಯಬೇಕಾದರೆ ಇನ್ನೊಬ್ಬ ಬಸವಣ್ಣ ಬರಬೇಕೇನೋ ?
ಏಕೆಂದರೆ ಈಗ ಆಧುನಿಕ ಬಸವಣ್ಣ ಮತ್ತು ಅಭಿನವ ಬಸವಣ್ಣ ಎಂಬ ಶೀರ್ಷಿಕೆ ನಾಮಧೇಯ ಹೊತ್ತ ಮಠಾಧೀಶರು ತಮ್ಮ ಮಠಗಳ.
ಸಂಸ್ಕೃತಿ ಜಾತ್ರೆಯಲ್ಲಿ ಬಣ್ಣ ಬಣ್ಣದ ಬೆಳಕಿನಲ್ಲಿ ನಡೆಯುವ ರಂಗ ತಾಲೀಮು ಯಾವುದೇ ನಾಟಕ ಸಿನೆಮಾ ರಂಜನೀಯ ಕಾರ್ಯಕ್ರಮಕ್ಕೂ ಕಡಿಮೆ ಇರೋದಿಲ್ಲ. ಗುರು ಲಿಂಗ ಜಂಗಮದ ಸ್ಪಷ್ಟ ಪರಿ ಕಲ್ಪನೆ ಇರುವದಿಲ್ಲ ಇವರಿಗೆ.ಅರಿವೇ ಗುರು ಆಚಾರವೇ ಲಿಂಗ ಅನುಭವವೇ ಜಂಗಮ ಎಂಬ ಸುಂದರ ಸ್ಪಷ್ಟ ಅರಿವಿನ ಅನುಸಂಧಾನ ನಮಗೆ ಗೋಚರದೆ ಹೋಗಿರುವುದು ಹೋಗುತ್ತಿರುವುದು ನೋವಿನ ದುರಂತವೆಂದೇ ಹೇಳಬಹುದು.

ಈ ಗುಲಾಮಗಿರಿಯಿಂದ ಮುಕ್ತವಾಗುವ ಪರಿ ಶರಣ ಧಮ೯.

1 ಜಗಜ್ಯೋತಿ ಬಸವೇಶ್ವರರು ಧಮ೯ ಗುರು.
2 ಅನುಭವ ಧಮ೯ಗ್ರಂಥ.
3 ಶರೀರ ಇಷ್ಠಲಿಂಗ.
4 ಜೀವ ಪ್ರಾಣಲಿಂಗ.
5 ಮನ ಭಾವಲಿಂಗ.
6 ಈ ಮೂರರ ಶುಧ್ಧೀಕರಣ ಪೂಜೆ ಅರ್ಚನೆ ಸಾಧನೆ
7 ಶರೀರ ಜೀವ ಮನದ ಬೇಡಿಕೆ ತಿಳಿಯುವುದು (ಗುರು).
8 ಶರೀರ ಜೀವ ಮನದ ಬೇಡಿಕೆ ಪೂರೈಸುವುದು (ಲಿಂಗ).
9 ಆರೋಗ್ಯಯುಕ್ತ ಸಮಾಜಮುಖಿ ಜೀವನ (ಜಂಗಮ)

ಅರಿವಿನ ಅನುಸಂಧಾನಕ್ಕೆ ಬಳಸುವ ಕುರುಹು ಇಷ್ಟಲಿಂಗ, ತನ್ನ ತಾನರಿದೊಡೆ ತಾನೇ ದೇವಾ ನೋಡಾ ಎಂಬ ಶರಣರ ವಾಣಿಯನ್ನು ಅರ್ಥಪೂರ್ಣವಾಗಿ ಆಚರಿಸಿ ಅನುಭವಿಸಿ ಮಹಾಮಾನವನಾಗುವ ಸಿದ್ಧಿಯನ್ನು ಪಡೆದರು ನಮ್ಮ ಶರಣರು,ಗುಲಾಮಗಿರಿಯಿಂದ ಮುಕ್ತನಾಗಿ ಸತ್ಯ ಶುದ್ಧ ಕಾಯಕ ದಾಸೋಹ ಮಾಡುವವನೇ ಭಕ್ತ ಶರಣ . ಇಂತಹ ಎಲ್ಲ ಮೌಲ್ಯಗಳ ನಿಜ ಸ್ವರೂಪ ಅರಿಯುವ ಅವಶ್ಯಕತೆ ನಮ್ಮ ಮುಂದಿದೆ.ಶರಣಾರ್ಥಿ

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!