ಕಿರಕ್ ಕೋತಿ

ಕತೆ -೩

ಕಿರಕ್ ಕೋತಿ


ಕೋತಿಯೊಂದು ಗಿಡದ ಕೆಳಗೆ ಏನು ಮಾಡುತ್ತ ಕುಳಿತಿತ್ತು. ಹಿಂದಿನಿಂದ ಬಂದ ಹುಲಿಯೊಂದು ಅದನ್ನು ಗಟ್ಟಿಯಾಗಿ ಹಿಡಿದು “ಬೇಟೆಯಾಡದೆ ದಣಿಯದೆ ಅನಾಯಾಸ ಊಟ ಸಿಕ್ಕಿತು” ಎಂದು ಕೋತಿಗೆ ಹೇಳಿತು
ಕೋತಿ ಅಂಜದೆ “ಅಯ್ಯೋ ಹುಲಿಯಣ್ಣ ನೀನಾ? ನನ್ನ ತಿಂತಿಯಾ?” ಎಂದಿತು
“ಹಾಂ. ನಿನ್ನ ಮೆದುಳು ಬಾಳ ಚುರುಕು ಅಂತ ಕೇಳಿನಿ. ಅದನ್ನು ತಿಂದ್ರೆ ನನ್ನ ಮೈಂಡ್ ಶಾರ್ಪ ಆಗುತ್ತಂತೆ. ನನ್ನ ಧೈರ್ಯ, ನಿನ್ನ ಮೆದುಳು ಕೂಡಿದರೆ ಹಿಡಿಯೋರೆ ಇಲ್ಲ”
“ಹೌದಾ. ಬಾಪ ತಿನ್ನು ಬಾ. ಆದರೆ ನಿನಗೆ ಯಾವುದೆ ಉಪಯೋಗ ಆಗಲ್ಲ”
“ಯಾಕೆ?”
“ಈಗ ಮೆದುಳು ನನ್ನ ಬಳಿ ಇಲ್ಲ”
“ಹೌದಾ! ಹಾಂ….ಇಲ್ಲ ಯು ಆರ್ ಚೀಟಿಂಗ್. ಮೊಸುಳೆಗೆ ಮೋಸ ಮಾಡಿದ ಹಾಗೆ ನನಗ ಚೀಟ್ ಮಾಡಕ ಬರತಿದ್ದೀಯಾ. ಸಿಕ್ಕಿರುವೆ ಬಿಡಲಾರೆ”
“ಆಯ್ತೊ..ತಿನ್ನು ಬಾ. ಬೇಗ ತಿನ್ನು ನನಗೂ ಜನ್ಮ ಬೇಸರ ಬಂದಿದೆ” ಎಂದು ಕೋತಿ ಮುಂದೆ ಬಂದಿತು.
ಹುಲಿಗೆ ಸಿಕ್ಕಾಪಟ್ಟೆ ಕನ್ ಫ್ಯೂಜನ್ ಸ್ಟಾರ್ಟ ಆಯ್ತು. ಕೋತಿ ಹೇಳೊದು ಸುಳ್ಳಾ ಅಥವಾ ನಿಜನಾ ಅಂತ ಅನುಮಾನ ಬಂತು
ಕೋತಿ ಹುಲಿಯ ಬಾಯಲ್ಲಿ ಕೈ ಹಾಕಿ “ತಿನ್ನು ಬಾರಪ್ಪ ತಿನ್ನು, ಮೆದುಳಿಲ್ಲದ ದೇಹ ತಿನ್ನು” ಎಂದಿತು
“ಹೌದು…!ನಿಜ ಹೇಳು, ಮೆದುಳೆಲ್ಲಿದೆ?”

ಸ್ವಲ್ಪ ಎತ್ತರದ ಪೊದೆಯಲ್ಲಿ ಜೇನು ಗೂಡಿನಿಂದ ಜೇನುತುಪ್ಪ ಹನಿ ಹನಿ ಬೀಳುತ್ತಿತ್ತು. ಅದನ್ನು ಹುಲಿಗೆ ತಿನ್ನಲು ಕೊಟ್ಟು “ತೊಗೊ ತಿನ್ನು ಎಷ್ಟು ಟೇಸ್ಟ ಇದೆ ನೋಡು?”ಎಂದಿತು
ಜೇನು ತುಪ್ಪವನ್ನು ತಿಂದ ಹುಲಿ ‘ವಾವ್!ಮಾರವಲೆಸ್. ಮೆದುಳಿನ ರಸವೇ ಹೀಗಿದೆ. ಇನ್ನು ಮೆದುಳು ಹೇಗಿರಬೇಡಾ?’ ಅಂದುಕೊಂಡು “ನಿಜನಾ?” ಅಂದಿತು
“ನಿನ್ನಿಷ್ಟ. ಇದ್ದ ವಿಷಯ ಹೇಳಿನಿ. ನಿನಗ್ಯಾಕೆ? ಮೊದಲು ನನ್ನ ತಿಂದುಬಿಡು” ಅಂದಿತು
ಮತ್ತೆ ಹುಲಿ ಸಿಕ್ಕಾಪಟ್ಟೆ ಕನ್ ಫ್ಯೂಜನ್. ಕೋತಿ ಸರಿ ಹೇಳತಿರಬಹುದೇನೊ ಅಂತ ನಂಬಿತು. ‘ಇನ್ನೊಂದು ಮನಸ್ಸು ನೋಡೊ ಯಾಮಾರ ಬ್ಯಾಡ ಅಂದಿತು. ‘ಇಲ್ಲಿಲ್ಲ ಸತ್ಯನ ಹೇಳತಿದೆ. ಇಲ್ಲವಾದರೆ ಅದು ಇಷ್ಟೋತನ ನನ್ನ ಮುಂದ ಧೈರ್ಯದಿಂದ ನಿಲ್ಲೋಕೆ ಸಾಧ್ಯನಾ? ಪರೀಕ್ಷೆ ಮಾಡೋದು ಏನದ. ಅದೆ ಬಂದು ತಿನ್ನು ಅಂತ ಕೈ ಹಾಕತಿದೆ. ಯಾರಿಗಾದ್ರೂ ಸಾಯಬೇಕೆನ್ನೊ ಹುಚ್ಚಿರುತ್ತಾ’ ಅನಕೊಂತು.
“ಹೌದು ಅಲ್ಲೇಕೆ ಇಟ್ಟಿ?” ಅಂತ ಪ್ರಶ್ನೆ ಮಾಡಿತು.
“ಸಿಕ್ಕಾಪಟ್ಟೆ ಬಿಸಲಪ, ಮೆದುಳನ್ನ ತಲ್ಯಾಗ ಇಟ್ಟುಕೊಂಡು ಅಡ್ಡಾಡಿದ್ರ ತ್ರಾಸ ಆಗಲ್ಲೇನು?
“ಹೌದು ಮೆದಳನ್ನ ಹ್ಯಾಂಗ ತೆಗೆಲಿಕ್ಕೆ ಬರುತ್ತಪ?”
“ನೋಡಣ್ಣ. ಹೃದಯ ತೆಗಿಯಾಕ ಬರಲ್ಲ. ತಗದ್ರ ಸತ್ತು ಹೋಗತಾರ. ಮೆದುಳ ಹಾಗಲ್ಲ”
“ನಮ್ಮದು ತೆಗಿಲಿಕ್ಕೆ ಬರತಾದ……?”
“ನೋಡು ಮನುಷ್ಯರು ಎಷ್ಟೆಲ್ಲ ಮುಂದುವರದಾರ. ಅವರು ತಮ್ಮ ಮೆದುಳನ್ನೆಲ್ಲ ಕಂಪೂಟರ್‌ನ್ಯಾಗ, ಮೊಬೈಲನಾಗ ಇಟ್ಟು ಕೆಲಸ ಮಾಡತಿರೋದನ್ನ ನೀನು ನೋಡಿಲ್ಲ! ಆಕಾಶದಾಗ ಹ್ಯಾಂಗ ವಿಮಾನ ಹೆಲಿಕಾಫ್ಟರ್ ನಮ್ಮ ಕಾಡಿನ ಮ್ಯಾಲೆ ಹೋಗತಿರತಾವ. ಅದು ಅವರ ಮೆದುಳಿನ ಕರಾಮತ್ತು. ನಾನು ಅವರ ಸೆಕೆಂಡ್ ಜನರೆಷನ್ನು. ನಾನು ಅವರಂಗ ಪ್ರಯತ್ನ ಮಾಡಿ ಮನುಷ್ಯರಂಗ ಆಗಬೇಕಂತ ಸಣ್ಣ ಪ್ರಯೋಗ ಮಾಡಕತಿನಿ” ಅಂತು
ಇಷ್ಟೆಲ್ಲ ಹೇಳಿದ ಮೇಲೆ ಹುಲಿ ಮಟಾಶ್ ಆಯ್ತು. ಇರಬಹುದು! ಮನುಷ್ಯರು ಇಡಿ ಪ್ರಾಣಿ ಸಂಕುಲ ಮೇಲಾಗಿ ನಮ್ಮ ಹುಲಿ ಸಂತತಿನ ನಾಶ ಮಾಡಕತ್ಯಾರ. ಕೋತಿನು ಮನುಷ್ಯನ ತರ ಯೋಚನೆ ಸುರು ಮಾಡಕ ಮುಂಚೆನೆ ಮುಗಿಸಬೇಕು ಇಲ್ಲಂದ್ರ ಇದು ಏನೆಲ್ಲ ಕಿತಾಪತಿ ಮಾಡಬಹುದು ಎಂದು ಆ ಪೊದೆಯ ಮೇಲಿದ್ದ ಜೇನಿನ ಕಡೆ ಜಂಪ್ ಮಾಡಿತು.
ಹೆಜ್ಜೇನಿನ ನೊಣಗಳು ಹುಲಿಯ ನಾಲಿಗೆ, ಕಣ್ಣಿಗೆ ಕಚ್ಚಿದವು. ಒಮ್ಮೆಲೆ ಆರ್ಭಟಿಸಿ ಹುಲಿಯ ದೇಹದ ಮೇಲೆ ದಾಳಿ ಮಾಡಿ ಕಚ್ಚಲಾರಂಭಿಸಿದವು. ಹುಲಿ ಕಕ್ಕಾಬಿಕ್ಕಿ ಆಯಿತು. ಅವುಗಳ ಕಡಿತದ ಬಾಧೆ ಆಕ್ರಮಣ ತಾಳಲಾರದೆ ದಿಕ್ಕೆಟ್ಟು ಓಡಿತು. ಹೆಜ್ಜೇನು ಹುಲಿಯನ್ನು ಬೆನ್ನಟ್ಟಿದವು.
ಕೋತಿ ಆ ಜೇನು ತಿನ್ನೋಕೆ ಉಪಾಯ ಹೂಡಿ ಕುಳಿತಿತ್ತು. ಅನಾಯಸವಾಗಿ ಚೆಲ್ಲುತ್ತಿದ್ದ ಜೇನನ್ನು ಹೀರಿ ಆನಂದಿAದ ಕುಣಿದು ಕುಪ್ಪಳಿಸಿ ಮತ್ತೆಲ್ಲಿ ಹುಲಿ ಬರುವುದೆಂಬ ಭಯದಿಂದ ಗಿಡದ ಮೇಲೆರಿತು.

ಗುಂಡೂರಾವ್ ದೇಸಾಯಿ, ಮಸ್ಕಿ

Don`t copy text!