ಮಕ್ಕಳ ಕತೆ-೪
ಮೊಲದ ಜಗಳ
ಲೇಖಕರು-ಗುಂಡುರಾವ್ ದೇಸಾಯಿ
ಆಮೆ ಬಿಸಿಲಲ್ಲಿ ಮೈ ಕಾಸಿಕೊಳ್ಳುತ್ತಿತ್ತು…ಅಲ್ಲಿಗೆ ಬಂದ ಮೊಲ “ಏನು ಆಮೆ ಆರಾಮ ಇದ್ದೀಯಾ?””
ಎಂದಿತು.
“ಎಸ್, ಐ ಆಮ್ ಫೈನ್” ಅಂತು.
“ನೀನೇನು ಬಿಡಪ ಫೈನ್ ಇರತಿಯಾ..ಅತಿ ಹೆಚ್ಚು ಆಯಸ್ಸು ಪಡದವ ನೀನು”
“ನಾನೇನು ಪಡೆದಿಲ್ಲ ಅಣ್ಣ…ನನಗಾರು ಕೊಟ್ಟಿಲ್ಲ. ನನ್ನ ಉಸಿರಾಟ ಕ್ರಿಯೆ ಅದಕ್ಕೆ ಕಾರಣ…ಉಸಿರನ್ನು ಸರಿಯಾಗಿ ರೂಢಿಸಿಕೊಂಡವರು ಯಾರಾದರೂ ಹೆಚ್ಚು ಬದುಕಬಲ್ಲರು”
“ಇರಲಿ ಬಿಡಪ, ಉಪದೇಶ ಬ್ಯಾಡ….ನಡಿ, ಓಟದ ಸ್ಪರ್ಧೆ ರೆಡಿಯಾಗು”
“ಬೇಡಪ….ನಾನು ಸಣ್ಣವ ..ನಿಧಾನದ ಮನುಷ್ಯ..ನನಗ ಓಡೋದು ಆಗಲ್ಲ”
“ಧಿಮಾಕು ಬಡಿಬ್ಯಾಡ….ಹೀಂಗ ಅಂದು, ಹಿಂದ ನಮ್ಮ ಪೂರ್ವಜರಿಗೆ ಡೌಲು ಬಡೆದು; ಫಸ್ಟ್ ಬಂದು ನಮ್ಮ ಕುಲಕ್ಕ ಮರ್ಯಾದೆ ಇಲ್ಲದಂಗ ಮಾಡಿರಿ…. ಎಲ್ಲಾ ಪ್ರಾಣಿಗಳ ಮುಂದ ತಲಿ ತಗ್ಗಿಸುವ ಹಾಗೆ ಮಾಡಿರಿ. ಈ ಸಾರಿ, ನೋ ಚಾನ್ಸ್…ಆ ಅಪಕೀರ್ತಿಯನ್ನು ಅಳಸೋಣ ಅಂತಾನ ಪ್ಲಾನು ಮಾಡಿಕೊಂಡು ಬಂದಿನಿ…”
“ನೋಡು…ನಮ್ಮ ಹಿರಿಯರು ಆ ದೃಷ್ಟಿಯಿಂದ ಸ್ಪರ್ಧೆಗೆ ಹೋಗಿದ್ದಲ್ಲ… ನಿಮ್ಮ ಪೂರ್ವಜರು ಬಿಡದೆ ಒತ್ತಾಯಿಸಿದರಂತೆ…ಅವರು ಅವರ ಪಾಡಿಗೆ ನಡೆದರು..ರೆಸ್ಟ ಮಾಡಕ ಹೋಗಿ ಮಲಗಿ ಹಿಂದೆ ಬಿದ್ದರೆ, ಹೇಗೆ ಕಾರಣ ಆಗತಾರೆ?”
“ಹೌದಪ, ನಿಮ್ಮವರು ಎಬ್ಬಿಸಬಹುದುದಿತ್ತಲ್ಲೋ…..? ಯಾಕ ಮಲಕೊಂಡಿದ್ದೀರಾ? ಅಂತ”
“ಎಬ್ಬಿಸಿದ್ರಂತೆ. ಇದು ನಿಮ್ಮ ಆಟ..ನೀವ ಗೆಲ್ಲಬೇಕು ಅಂತ. ‘ಸ್ವಲ್ಪ ರೆಸ್ಟ ಮಾಡಿ ಬರತೀನಿ ಹೋಗೊ’ ಎಂದು ನಿಮ್ಮ ಪೂರ್ವಜರು ಉಡಾಫೆ ಮಾಡಿದ್ದಕ್ಕಾಗಿ ಹೀಗಾಯಿತು”
“ಇಲ್ಲ ಸುಳ್ಳು…ಈ ವಿಷಯ ಎಲ್ಲೂ ದಾಖಲಾಗಿಲ್ಲ…”
“ಇಬ್ಬರಲ್ಲಿ ನಡೆದದ್ದು ಅವರೆ ಹೇಳಬೇಕಿತ್ತು…”
“ಅದೆಲ್ಲ ಬೇಡ…ಈಗ ನೀನು ಸಿದ್ಧನಾಗು..ನಾನು ಇವತ್ತು ಗೆದ್ದು….ಫಸ್ಟ ಬಂದು ಆ ಕೆಟ್ಟ ಕಳಂಕನ್ನ ಅಳಿಸಿ ಅವರ ಆತ್ಮಕ್ಕ ಶಾಂತಿ ಸಿಗುವ ಹಾಗೆ ಮಾಡ್ತಿನಿ”
“ನಾನು ಸೋತೆಪ…ನನಗೆ ಓಡೋದು ಆಗಲ್ಲ…ಆಯ್ತಾ?”
“ಹೇ…ನಾನು ಇದಕ್ಕ ಒಪ್ಪಲ್ಲ…ಸ್ಪರ್ಧೆ ಮಾಡಲೇಬೇಕು…ನಾಲ್ಕು ಜನ ಸೇರಿಸಲೇಬೇಕು…ನೀನು ಸೋಲಲೇಬೇಕು…ಮೇಲಿರುವ ನನ್ನ ಪೂರ್ವಜರು ಸಂಭ್ರಮಿಸಲೇಬೇಕು…”
ಈವರಿಬ್ಬರ ಮಾತನ್ನು ಕೇಳಿ ಗಿಡದಲ್ಲಿದ್ದ ಮಂಗಣ್ಣ…”ಆಮೆ…ಸೋತಿನಂತಿದೆ…ಯಾಕೆ ಒತ್ತಾಯ ಮಾಡತಿದಿ ಬಿಟ್ಟು ಬಿಡು…”ಎಂದಿತು.
“ಮಂಗಣ್ಣ, ಒಳ್ಳೆಯ ಟೈಮಿಗೆ ಬಂದಿರುವೆ….ನೀನೆ ಈಗ ರೆಫಿರಿ….ಸರಿ…ಸ್ಟಾರ್ಟ ಮಾಡೋಣನಾ…?”ಎಂದಿತು ಮೊಲ.
“ಏನಂತಿ…ನೀನು ರೆಡಿನಾ” ಎಂದು ಆಮೆಗೆ ಕೇಳಿತು.
“ಇಷ್ಟವಿಲ್ಲದ ಆಟ…. ಹೇಗೆ ಎಸ್ ಎನ್ನಲಿ…ಮುಕ್ತಿ ಕೊಡು ಮಂಗಣ್ಣ”
“ಮಂಗಣ್ಣ, ಸಾಧ್ಯನ ಇಲ್ಲ. ನೀನೆ ಜಡ್ಜ..ಆರಂಭಿಸು”
“ನೀನು ಹೇಳಿದ್ದಕ್ಕೆ ಒಪ್ಪೊಕಾಗಲ್ಲ…ನಾನು ಬೇರೆ ಸ್ಪರ್ಧೆ ಮಾಡತೀನಿ..ಇಬ್ಬರೂ ರೆಡಿನಾ” ಎಂದಿತು ಮಂಗಣ್ಣ.
“ಬೇಡ ಅಣ್ಣ..ನನಗೆ ಆಗಲ್ಲ..ಬಿಟ್ಟು ಬಿಡು ಅಂತ ಹೇಳಿಬಿಡು….”ಎಂದಿತು ಆಮೆ.
“ನಾನು ರೆಡಿ…ಏನು ಹೇಳತೀಯಾ ಹೇಳು?”
“ನಾನು ನೀರು ಬಿಟ್ಟು ಹೊರಗ ಬಂದದ್ದೆ ತಪ್ಪಾಗಿದೆ…ನಾನು ಸೋಲನ್ನು ಒಪ್ಪಿಕೊಂಡಿರುವೆ…ಬಿಟ್ಟುಬಿಡಿ”
“ಅದು ಹೇಗೆ ಸಾಧ್ಯ…ಮಂಗಣ್ಣ ನೀನೆ ಹೇಳು ಯಾವ ಸ್ಪರ್ಧೆ ಇರಲಿ”
“ಅವತ್ತು ಓಟದ ಸ್ಪರ್ಧೆ ಆಗಿತ್ತು , ಈ ಸಾರಿ ನಿಧಾನವಾಗಿ ನಡೆಯುವ ಸ್ಪರ್ಧೆ. ನಿರಂತರವಾಗಿ ನಿಧಾನವಾಗಿ ನಡಿಬೇಕು..ಎಲ್ಲಿ ಓಡುವ ಹಾಗಿಲ್ಲ..ನಿಲ್ಲುವ ಹಾಗಿಲ್ಲ ..ಒಪ್ಪಿಗೆನಾ?” ಎಂದಿತು ಮಂಗಣ್ಣ
“ನಾನು ರೆಡಿ” ಅಂತು ಮೊಲ.
“ದಯವಿಟ್ಟು ಬಿಟ್ಟುಬಿಡಿ..ನನಗೆ ಆಗಲ್ಲ….”ಎಂದಿತು ಆಮೆ..
“ಹಾಡಿದ್ದೆ ಹಾಡೊ ಕಿಸುಬಾಯಿ ದಾಸನಂಗೆ…ಯಾಕೆ ಕಿರುಚುತಿಯಾ..? ಇಲ್ಲ ನಿರ್ಧಾರ ಮಾಡಿಯಾಗಿದೆ…ಒಂದು ದಿನ ಟೈಮು ತೊಗೊ. ನಾಳೆ ನೀನು ಬರಲೆಬೇಕು…” ಎಂದು ಮೊಲ ಅಪ್ಪಣೆ ಮಾಡಿತು.
ಮರುದಿನ ಎಲ್ಲಾ ಪ್ರಾಣಿಗಳು ಸೇರಿದ್ದವು…ದೊಡ್ಡ ಮೈದಾನ. ಮೊಲ ಒಳ್ಳೆಯ ಹುಮ್ಮಸ್ಸಿನಲ್ಲಿ ರೆಡಿಯಾಗಿ ನಿಂತಿತ್ತು. ಆಮೆ ಒಲ್ಲದ ಮನಸ್ಸಿನಿಂದ. ಅಲ್ಲಿಗೆ ಬಂದು ನಿಂತಿತು. ಎಲ್ಲ ಪ್ರಾಣಿಗಳು ಮೊಲಕ್ಕೆ ಸಪೊರ್ಟ ಮಾಡತಿದ್ವು…
“ಆನ್ ಯುವರ್..ಮಾರ್ಕ..ಲೆಟ್..ಸೆಟ್..ಗೋ…” ಎಂದು ಮಂಗಣ್ಣ ಹಲಗೆ ಬಾರಿಸಿತು.
ಎರಡು ನಡೆಯಲು ಆರಂಭಿಸಿದವು….ಮೊಲ ನಡೆಯಬೇಕು ಅನ್ನುತ್ತದೆ…ಆಗುತ್ತಿಲ್ಲ…ಸರಸರ ಓಡುತ್ತಿತ್ತು….ಅಯ್ಯೊ ತಪ್ಪು ಮಾಡುತ್ತಿದ್ದೇನೆ ಎಂದು ನಿಲ್ಲುತ್ತಿತ್ತು…ಮತ್ತೆ ನಡೆಯಬೇಕೆನ್ನುವಷ್ಟರಲ್ಲಿ ಮತ್ತೆ ಓಡೋದು..ನಿಲ್ಲೋದು.
ಆದರೆ ಆಮೆ ಒಂದೆ ನಡುಗೆಯಲ್ಲಿ….ಮುಂದೆ ಸಾಗಿತ್ತು… ಸ್ಪರ್ಧೆ ನಿಯಮ ಎಲ್ಲರಿಗೂ ಗೊತ್ತಿದ್ದರಿಂದ….ಮೊದಲು ಮೊಲಕ್ಕೆ ಸಪೋರ್ಟ ಕೊಟ್ಟ ಎಲ್ಲಾ ಪ್ರಾಣಿಗಳು ಮೊಲ ತಪ್ಪು ಮಾಡುತ್ತಿರುವುದನ್ನು ಗಮನಿಸಿ “ಆಮೆ..ಆಮೆ…ಆಮೆ…ಕಮಾನ್ ಆಮೆ..ಟಾರ್ಟಯಿಸ್.. ಟಾರ್ಟಯಿಸ್.. ಕಮಾನ್ ಟಾರ್ಟಯಿಸ್..ಕಚುವಾ.. ಕಚುವಾ.. ಕಮಾನ್ ಕಚುವಾ.. ಕಮ್ ಕಮ್ ಫಸ್ಟ…ಕೀಪ್ ಗೋಯಿಂಗ್” ಅಂತ ಕೂಗಾಕತಿದ್ವು.
ಇದುವರೆಗೂ ತನ್ನ ಸಪೋರ್ಟಗೆ ಇದ್ದು ಪ್ರಾಣಿಗಳು ಆ ಕಡೆ ಶಿಫ್ಟಾಗಿದ್ದು ಗಮನಿಸಿದ ಮೊಲ “ಅಲ್ಲಲ್ಲಲ….ಮತ್ತೆ ನಾನು ಗದ್ದಲಕ್ಕೆ ಬಿದ್ದೆ…ಏನ ಮಾಡಲಿಕ್ಕೆ ಹೋಗಿ ಏನೋ ಆಗತಿದೆ. ಮತ್ತೊಂದು ಅಪವಾದಕ್ಕ ಗುರಿಯಾಗೊ ಪರಸ್ಥಿತಿ ಬರತಿದೆ. ಇಲ್ಲಿ ಇರೋದು ಸರಿಯಲ್ಲ..ಬೇಗ ಜಾಗ ಖಾಲಿ ಮಾಡಬೇಕು ” ಎಂದ ಮೆಲ್ಲಗೆ ಓಟ ಕಿತ್ತಿತು………
“ಹೇ…! ಚೀಟಿಂಗ್…ಚೀಟಿಂಗ್” ಎಂದು ಎಲ್ಲರೂ ಕೂಗುತ್ತಿದ್ದರೂ….ಲಕ್ಷ ಕೊಡದೆ.